ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯರಾಮಾಚಾರಿ ಕವಿತೆ- ನಕಲಿ ಮಚ್ಚೆಯ ಹಾಕಿಕೊಂಡವಳಿಗೆ…

ಜಯರಾಮಾಚಾರಿ

ನಕಲಿ ಮಚ್ಚೆಯ ಹಾಕಿಕೊಂಡವಳಿಗೆ –
ನೀನು ಸಲೀಸಾಗಿ ನಿಂತಿರುವೆ
ಅರೇ ನಿನ್ನ ಎಡಗೈ ತೋಳಲ್ಲಿ ಸಿಡಿದ ಬಾಂಡಲಿಯ
ನಕಲಿ ಮಚ್ಚೆ
ನನ್ನ ಪೋಲಿ ಮನಸ್ಸು
ಕಾಣದ ಮಚ್ಚೆಗಳ ಲೆಕ್ಕ ಹಾಕುತ್ತಿದೆ
ಕೊಡುವೆಯ?
ನಿನ್ನ ನಗುವಲ್ಲಿ ಹುಣ್ಣಿಮೆ ಚಂದ್ರ ಆತ್ಮಹತ್ಯೆ ಮಾಡಿಕೊಂಡು
ನಿನ್ನ ಮೂಗುತಿಯ ತುದಿಯಲ್ಲಿ
ಸೂರ್ಯ ಬೆಳಗುತ್ತಿದ್ದಾನೆ
ಅದೇ ಹೊಳೆಯುತ್ತಿದೆಯೋ
ನೀನೆ ಹೊಳೆಯುತ್ತಿದ್ದೆಯೋ
ನನ್ನ ಮೆದುಳಿಗೆ ಈಗ ಪ್ಯಾನಿಕ್ ಸ್ಟ್ರೋಕು!
ಸುಧಾರಿಸಲು ನೀನೆ ಬೇಕು
ನೀನು ಎಡಕ್ಕೇನೆ ಕೂದಲು ಬಿಟ್ಟಿದ್ದು ನೋಡಿ
ನೀನು ಎಡಪಂಥೀಯ ಅಂದುಕೊಂಡೆ
ನಾನ್ಯಾವ ಪಂಥೀಯ ಎಂದು ಕೇಳುತ್ತಿದ್ದೆಯಾ?
ನಾನು ‘ನಡು’ಪಂಥೀಯ
ನಿನ್ನ ಕೂದಲು ನಡುವರೆಗೂ ಇಳಿಯದೆ ಹೋಗಿದ್ದರೆ
ನಾನು ಸತ್ತೇ ಹೋಗುತ್ತಿದ್ದೆ

ಮರ ಸುತ್ತಿದ್ದ ಬಳ್ಳಿಯಂತೆ ನಿನ್ನ ದೇಹ ಸುತ್ತಿ
ಸೀರೆ ನಕ್ಕಿದೆ
ಜಾಕೆಟ್ ಕಣ್ಣು ಹೊಡೆದಿದೆ
ನಿನ್ನ ನಗುವಲ್ಲಿ ಅತಿ ಪೋಲಿತನ ಎದ್ದು ಕಾಣುತ್ತಿದೆ
ಆದರೆ ನೀನು ಅದನ್ನೆಲ್ಲ ಬಚ್ಚಿಟ್ಟುಕೊಂಡು
ನಿಧಿ ಆಗಿಬಿಟ್ಟೆ
ನಾನೀಗ ನಿಧಿ ಹುಡುಕುವ ಕಳ್ಳ
ತೆಳ್ಳಗಿದ್ದರಷ್ಟೇ ಚೆಂದ ಎಂದು ಯಾವ ಬೋಳಿಮಗ ಹೇಳಿದ್ದು
ನೀನು ನೋಡು ಕೆನ್ನೆಯಲ್ಲಿ ಆಪಲ್ ಇಟ್ಟುಕೊಂಡೆ
ಎಷ್ಟು ಸೆಳೆಯುತ್ತಿದ್ದೆಯ
ಅಳತೆ ಮೀರಿದ ನಡು
ಎದ್ದು ಕಾಣುವ ನಿತಂಬಕ್ಕೂ
ಅತಿಯಾಗಿ ಕಾಡುವ ಮೋಹದ ಲೇಪನ ಹಚ್ಚಿದ್ದೆಯ
ಏನು ಕತೆ?
ನಿನಗೆ ಭಾರವಾದ ಕಿವಿಯಿಂದ ಜಾರಿಬೀಳುತ್ತಿರುವ ಇಯರಿಂಗ್ಸ್
ಮೂಗುತಿ
ಕೆಂಪು ದಾರ
ಎಲ್ಲ ಕಿತ್ತೊಗೆ
ನಾನು ನಿನ್ನ ಕೆನ್ನೆಗಂಟಿದ ರಂಗು
ತುಟಿಯಲ್ಲಿನ ಕೆಂಪು
ನಾಚಿಕೊಂಡ ನಡು
ಬಾಚಿಕೊಳ್ಳುವ ತೋಳು
ಚಾಚಿಕೊಳ್ಳುವ ಕೊರಳು
ಬೆಚ್ಚಗೆ ಉಸಿರಾಡುತ್ತಿರುವ ಎದೆ
ಎಲ್ಲವನ್ನು ಕಿತ್ತೊಗೆಯುವೆ
ಪ್ರಣಯವೆಂದರೇನು ಧ್ಯಾನಾವಸ್ಥೆ
ನಿನ್ನ ನೀ ಮರೆತು ನನ್ನ ಹೆಸರು ಕೂಗು
ನನ್ನ ನಾ ಮರೆತು ನಿನ್ನ ಹೆಸರು ಕೂಗುವೆ
ನಮಗೇಕೆ ಜಗದ ಗೊಡವೆ

‍ಲೇಖಕರು avadhi

20 April, 2023

1 Comment

  1. ಈಶ್ವರ

    ಇನ್ನೂ ನಿನ್ನ ಕವಿತೆಗಳ ಆಳವನ್ನು ಜಗತ್ತಿಗೆ ಪರಿಚಯಿಸಿ, ಸಂತೃಪ್ತಿ ಪಡಿಸು ಕವಿತೆಗಳ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading