ಜಯರಾಮಚಾರಿ ಹೊಸ ಕಥೆ- ಕಾಪುಚೀನೋ…

ಜಯರಾಮಚಾರಿ

ಮನೆಯ ಬಾಗಿಲಿಗೆ ಬೆನ್ನು ಮಾಡಿ ಹೊರಟ ಹತ್ತು ನಿಮಿಷಕ್ಕೆ ಅವನ ವಾಟ್ಸಾಪು ಠಣ್ ಅನ್ತು. ತೆಗೆದರೆ “ಹಾಯ್” ಎಂಬ ಪ್ರಿಯಾಳ ರಿಪ್ಲೆ.ಹಳೆ ಗೆಳತಿ ,ಕೈ ಕೊಟ್ಟ ಪ್ರೇಯಸಿ ಸದ್ಯ ವಿವಾಹಿತೆ,ಸಾಮಾನ್ಯವಾಗಿ ಯಾವಾಗಲೋ ರಿಪ್ಲೆ ಮಾಡುವವಳು ನೆನ್ನೆ ರಾತ್ರಿ ಹಾಯ್ ಎಂದು ಹಾಕಿದ್ದ ಬೆಳಗ್ಗೆ ಹಾಯ್ ಎಂದಳು. ಇನ್ನೆನೂ ಟೈಪಿಸುವುದು ಎಂದು ಅಂದುಕೊಳ್ಳುತ್ತಿದ್ದ ಎರಡೇ ನಿಮಿಷಕ್ಕೆ “ಸಿಗ್ತೀಯ” ಎಂದು ಅವಳ ಮೆಸೇಜು, ಸಂಜಯ ಒಂದತ್ತು ಸೆಕೆಂಡ್ ಯೋಚಿಸಿ ಅವನ ಟೀಮ್ ಲೀಡರ್ ಹೆಬ್ರಾಯನಿಗೆ ಕಾಲ್ ಮಾಡಿದ ಮಧ್ಯಾನ್ನ ಬರ್ತೀನಿ ಸ್ವಲ್ಪ ಕೆಲಸವಿದೆ ಎಂದ ಅತ್ತಲಿಂದ ಅವನದು ಆರ್ಭಟ ಹೇ ಹಂಗೆಲ್ಲ ಮಾಡ್ಬೇಡಿ ಒಂದ್ ಸಲ ಬಾಸ್ ಜೊತೆ ಮಾತಾಡಿ ಎಂದು ಸಿಟ್ಟು ಬರಿಸಿದ, ಸಂಜಯನಿಗೆ ತಿಕ್ಕಲತ್ತಿ ಕಾಲ್ ಕಟ್ ಮಾಡಿದ.

ಈ ಮೂರು ಕಾಸಿಗೂ ಕೆಲಸಕ್ಕೆ ಬಾರದ ಈ ಜೆರಾಕ್ಸು ಪ್ರಿಂಟ್ ಔಟ್ ಎಂದು ಆಫೀಸ್ ಬಾಯ್ ತರ ಇರುವ ಬಾಸುಗಳ ಅಂಡು ಸವರುವ ಈ ಬೋಳಿಮಕ್ಕಳನೆಲ್ಲ ಸೇರಿಸಿ ಹಜಾಮತ್ ವಿಭಾಗ ಅಂತ ಮಾಡಿ ಹಜಾಮತ್ ಮಾಡಕ್ಕೆ ಇಟ್ಕೋಬೇಕು ಇವರನ್ನೆಲ್ಲ; ಕಟ್ಟಿಂಗ್ ಮಾಡ್ಸುವ ದುಡ್ಡು ಉಳಿಯುತ್ತೆ ಎಂದು ಬಯ್ಕೊಂಡು “ಆರೋಗ್ಯ ಸರಿಯಿಲ್ಲ ಆಫೀಸಿಗೆ ಬರಲಾಗದು ರಜೆ ನೀಡೀ” ಎಂದು ಟೈಪ್ ಮಾಡಿ ಕರಿ ಇಡ್ಲಿ ಬಾಸ್ ಕುಮಾರನ್ ಗೆ ಮೆಸೇಜು ಹಾಕಿ ಸುಮ್ಮನೆ ನಿಂತ. ಅಷ್ಟರೊಳಗೆ ಪ್ರಿಯಳ ಮೆಸೇಜುಗಳು “ಸಿಗೊಲ್ವ?”, “ಸರಿ ಬಿಡು” ,”ಸಾರಿ” “ಟೇಕ್ ಕೇರ್” ಈ ತಿಕ್ಕಲು ಈಗೋಗಳಿಗೇನು ಕಮ್ಮಿಯಿಲ್ಲ ಎಂದು ಬೈಕೊಂಡು “ಸಿಗ್ತೀನಿ, ಆಫೀಸಲ್ಲಿ ಈ ಬೋಳಿಮಕ್ಳು ಬಕೇಟುಗಳ ಕಾಟ,ನೀನೆ ಹೇಳು ಎಲ್ಲಿ ಸಿಗೋಣ ” ಕಳಿಸಿದ, ಎರಡು ನಿಮಿಷಕ್ಕೆ “ವಿಜಯನಗರ ಕಾಫಿ ಡೇ , ಇನ್ನೊಂದು ಗಂಟೆಲಿ” ಎಂದು ರಿಪ್ಲೆ,ಅಷ್ಟೊತ್ತಿಗೆ ಅವನು ಅರ್ಧ ಸಿಗರೇಟು ಸುಟ್ಟಿದ್ದ.

ಇದೇ ವಿಜಯನಗರದಲ್ಲಿ ಅವಳು ಮೊದಲು ಸಿಕ್ಕಿದ್ದಳು ಯಾವುದೋ ದಿವ್ಯಗಳಿಗೇಲಿ ಫೇಸ್ ಬುಕ್ ಜಾಲಾಡುತ್ತಿದ್ದವನಿಗೆ ಯೂ ಮೇ ನೋ ಲಿ ಇವಳು ಇದ್ದಳು ಗದ್ದಕ್ಕೆ ಕೈ ಒತ್ತಿಕೊಂಡು ಒಸಿ ಸೊಂಟ ಕಾಣುವಂತೆ ಅರ್ಧ ಬಗ್ಗಿ ನಿಂತ ಪ್ರೊಫೈಲ್ ಫಿಕ್ ಇತ್ತು ರೊಚ್ಚಿಗೆದ್ದು ಅವಳ ಹಿಸ್ಟರಿಯನ್ನೇ ಜಾಲಾಡಿದ ಅವಳ ಹುಟ್ಟಿದ ದಿನ ಗೊತ್ತಿರುವ ಸ್ನೇಹಿತರು ಸ್ಕೂಲು ಕಾಲೇಜು ಕೆಲಸ ಅವಳಿಗೆ ಯಾವ ತಿಂಡಿ ಇಷ್ಟ ಹೀರೋ ಇಷ್ಟ ಅಗ್ನಿಸಾಕ್ಷಿಯ ಅಶ್ವಿನಿ ನಕ್ಷತ್ರನಾ? ಶಾರೂಕ್ಕಾ? ಹೃತ್ತಿಕ್ಕಾ? ಬರೋ ಬರಿ ಜಾಲಾಡಿದ ಅದಕ್ಕೂ ಮುಂಚೇನೆ ಅವಳಿಗೆ ಫ್ರೆಂಡ್ ರಿಕ್ವೆಸ್ಟ ಕಳಿಸಿ ಆಗಿತ್ತು ಅವಳು ಒಪ್ಪಿಯೂ ಆಗಿತ್ತು, ಅವನ ಅದೄಷ್ಟಕ್ಕೆ ಅವನದೇ ಏರಿಯ.

ಪ್ರಿಯ ಮಗುವನ್ನು ವ್ಯಾನಿಗತ್ತಿಸಿ ಬಚ್ಚಲು ಮನೆಗೆ ಬಂದಾಗ ಅವನು “ಸರಿ ಸಿಗುವ, ಕಾಫಿ ಡೇ ಲಿ ಇರ್ತಿನಿ ಬಾ” ಎಂದು ರಿಪ್ಲೆ ಮಾಡಿದ್ದ,ರಾತ್ರಿ ಉಂಡ ಪಾತ್ರೆಗಳು ಹಾಗೇ ಬಿದ್ದಿದ್ದವು, ಇನ್ನೂ ನೆಲವು ಒರೆಸಿಲ್ಲ,ಮಧ್ಯಾನ್ಹಕ್ಕೆ ಅವರು ಬಂದರೂ ಬಂದರು ಅನ್ನ ಇದೆ ರಾತ್ರಿ ಸಾರು ಬಿಸಿ ಮಾಡಿದ್ದೇನೆ ನಾಷ್ಟದ ಅವಲಕ್ಕಿ ಸ್ವಲ್ಪ ಇದೆ ಸಾಕು ಎಂದುಕೊಂಡು ಕಾಟಚಾರಕ್ಕೆ ಕಸ ಗುಡಿಸಿದಳು ಅವನ ರೂಂ ಅಂತೂ ಮಾರ್ಕೆಟಿಗಿಂತ ಕಡೆ ಎಷ್ಟು ಹೇಳಿದರೂ ಕೇಳೋಲ್ಲ ಎಂದು ಬೈದು ಎಲ್ಲ ಗುಡಿಸಿ ಜೋಡಿಸಿ ಬಚ್ಚಲಿಗೆ ನಡೆದಳು, ಅವನನ್ನು ಭೇಟಿ ಆಗಿ ಏನು ಮಾತಾಡುವುದು ? ನಾನ್ಯಾಕೆ ಸಿಗ್ತೀಯ ಎಂದೆ ? ಎಂಬ ಗೊಂದಲದಲ್ಲೇ ಬ್ರಶ್ ಮಾಡಿ ಸ್ನಾನಕ್ಕಿಳಿದಳು. ಹೀಗೆ ಸ್ನಾನ ಮಾಡಿಕೊಂಡ ಈಚೆ ಬಂದಾಗ ಅಲ್ಲವೇ ಅವತ್ತು ಅವನು ರಿಕ್ವೆಷ್ಟ್ ಕಳಿಸಿದ್ದು, ಸಂಜಯ, ಹಲ್ಲು ಬಿಟ್ಕೊಂಡು ಡ್ಯೂಕ್ ಗಾಡಿಯೆದುರು ನಿಂತ ಸೆಲ್ಫಿ ಹಾಕಿಕೊಂಡಿದ್ದ ಇಲ್ಲೆ ಎಲ್ಲೋ ನೋಡಿದ್ದಿನಿ ಅನಿಸಿತು ಗೊತ್ತಿರೋ ಮುಖವೇ ಮೂಲೆ ಅಂಗಡಿಯ ಹತ್ತಿರ ಸಿಗರೇಟು ಸೇದುವ ಹುಡುಗರ ಸಾಲಿನಲ್ಲೋ, ಗಣೇಶನ ಕೂರಿಸಿ ಬರುವ ಹುಡುಗಿಯರಿಗೆಲ್ಲ ಪ್ರಸಾದ ಕೊಡುವವನೋ, ಸ್ವಲ್ಪ ಭಾಗದ ತಲೆಗೆ ಬ್ರೌನ್ ಕಲರ್ ಹಚ್ಚಿಕೊಂಡು ಪಕ್ಕ ಲೋಫರ್ ಅಂತೆ ಕಾಣುವ ಹುಡುಗನೋ ಗೊತ್ತಿಲ್ಲ ಒಟ್ಟಿನಲ್ಲಿ ಇಲ್ಲೇ ಎಲ್ಲೋ ನೋಡಿದ್ದೀನಿ ನಮ್ಮ ಏರಿಯಾದ ರೋಡೆ ಅದು ಅವನ ಗಾಡಿನಿಂತ ಹಿಂದೆ ಕಂಬದಲ್ಲಿ ಮಹಾತ್ಮ ಕಂಪ್ಯೂಟರ್ ಕೋಚಿಂಗ್ ಕ್ಲಾಸ್ ಬೋರ್ಡ್ ಇತ್ತು.

ಒಂದು ಗಂಟೆಯಾದರೂ ಸುಳಿವಿಲ್ಲ: ಅಲ್ಲೇ ಅಲೆದಾಡುತ್ತಿದ್ದ ಹುಡುಗನ ಕರೆದು ಸ್ಮೋಕ್ ಮಾಡಬಹುದಲ್ವ ಎಂದ, ಅವನು ಸುಮ್ಮನೆ ಕತ್ತು ಅಲ್ಲಾಡಿಸಿದ ಸರಿ ಒಂದು ಯಾವುದಾದರೂ ಮೊಜೆಟೋ ತಗೊಂಡ್ ಬಾ ಎಂದೇಳಿ ಸಿಗರೇಟು ಹಚ್ಚಿದ ಅವಳು ಫ್ರೆಂಡ್ ರಿಕ್ವೆಸ್ಟ್ ಮಾಡಿದ ಮೇಲೆ ನಾನು ಸುಮ್ಮನೆ ಯಾಕೆ ಅವಳ ಫೋಟೊಗಳನ್ನೆಲ್ಲ ಲೈಕ್ ಮಾಡುತ್ತಾ ಹೋದೆ ಕೆಲವೊಂದು ಪಿಕ್ ಗಳಲ್ಲಿ ಅದ್ಭುತ ಸುಂದರಿ ಕಮೆಂಟ್ ಮಾಡಬೇಕೆನಿಸುತ್ತಿತ್ತು ಆದರೆ ಎಲ್ಲ ಫೋಟೋಗಳಿಗೂ ವಾವ್ ಸೂಪರ್ ಆವ್ ಸಮ್ ಬ್ಯೂಟಿಫುಲ್ ಲವ್ಲಿ ಇಂತ ಎಲ್ಲ ಕಮೆಂಟ್ಸುಗಳಿದ್ದವು ಅದನ್ನೂ ಮೀರಿ ಎಂತ ಬರೆಯುವುದು ಸುಮ್ಮನೆ ಲೈಕ್ ಮಾಡಿ ಸುಮ್ಮನಿದ್ದೆ ಹಾಯ್ ಊಟ ಆಯ್ತ ತಿಂಡಿ ಗುಡ್ ಮಾರ್ನಿಂಗ್ ಗುಡ್ ನೈಟ್ ಏನ್ ಮಾಡ್ತಾ ಇದ್ದೀರ? ಬ್ಯೂಸಿನಾ? ಸಾರಿ ಫಾರ್ ಡಿಸ್ಟರ್ಬ್ ಉಹೂ ಯಾವ ಮೆಸೇಜುಗೂ ರಿಪ್ಲೆ ಯಾಕೋ ಇದು ವರ್ಕ್ ಔಟ್ ಆಗೊಲ್ಲ ಅಷ್ಟು ಸುಂದರಿಗೆ ನನ್ ತರ ಎಷ್ಟು ಜನ ಬಿದ್ದುಸಾಯ್ತ ಇರ್ತಾರೋ ಬಿಡಪ್ಪ ಎಂದು ಮಲಗಿದ ರಾತ್ರಿಗೆ ಅವಳ ಮೆಸೇಜು ಬಂತು ಸಾರಿ ಊಟ ಆಯ್ತ ಅಲ್ಲಿಂದ ಶುರುವಾಯಿತು ಲವ್ವು.

ಬಾಗಿಲು ಹಾಕಿ ಈಚೆ ಬಂದ ಪ್ರಿಯ ಕ್ಯಾಬು ಕಾಯುತ್ತಾ ನಿಂತಳು ಮೊಬೈಲಿನ ಒಲಾ ಆಪಿನಲ್ಲಿ ಪುಣ್ಯಾತ್ಮ ಡ್ರೈವರ್ ಎಲ್ಲಿದ್ದಾನೆ ಎಂದು ಹುಡುಕಿದಳು ಕಾರು ಇನ್ನೆರಡು ನಿಮಿಷ ಬರುವುದರಲ್ಲಿತ್ತು.ಕೊನೆಗೂ ಬಂದ ಹತ್ತಿ ಕೂತವಳ ಕಂಡು ಓಟಿಪಿ ಮೇಡಮ್ ಎಂದ ಹೇಳಿದಳು ಮೇಡಮ್ ಡ್ರಾಪ್ ಎಲ್ಲಿಗೆ ಎಂದ ವಿಜಯನಗರ ಕಾಫಿ ಡೇ ಎಂದು ಹೇಳಿ ಸೀಟಿಗೆ ಒರಗಿಕೊಂಡಳು. ರಿಕ್ವೆಸ್ಟ್ ಒಪ್ಪ್ಕೊಂಡಿದ್ದೆ ತಡ ಮಾಮೂಲಿ ಹುಡುಗರ ಚಾಳಿ ಶುರು ಮಾಡಿದ ಥ್ಯಾಂಕ್ ಯೂ ಗುಡ್ ಮಾರ್ನಿಂಗ್ ಆಫ್ಟರ್ ನೂನ್ ನೈಟ್ ಊಟ ತಿಂಡಿ ಕಾಫಿ ಸಾರಿ ಬೇಜಾರ ಬ್ಯೂಸಿಯ ಈ ಹುಡುಗರಿಗೆ ಮಾಡಲಿಕ್ಕೆ ಕೆಲಸ ಇಲ್ಲ ಮೆಸೇಂಜರ್ ತೆಗೆದರೆ ಬರೋಬರಿ ನೂರೈವತ್ತು ಮೆಸೇಜುಗಳು ಇವನ ಊಟ ಆಯ್ತ ಮೆಸೇಜು ಎರಡೇ ದಿನಕ್ಕೆ ಕೆಳಗೆ ಹೋಗಿ ಮತ್ತಾವನೋ ’ಸೂಪರ್ ಡಿಪಿ ಡಿಯರ್’ ಎಂದು ಮೆಸೇಜು ಮಾಡಿರುತ್ತಿದ್ದ, ಅವತ್ತು ನನ್ನ ಗೆಳತಿಗೆ ಅವನ ಗಂಡ ನೀನು ದಪ್ಪ ಇದ್ದೀಯ ಸಣ್ಣ ಆಗು ಇಲ್ಲ ಡಿವೋರ್ಸ್ ಕೊಡು ಎಂದಿದ್ದನಂತೆ ಅವಳೋ ದಿನಗಟ್ಟಲೆ ಅಳುತ್ತಿದ್ದಳು ಅವಳನನ್ನು ಸಮಾಧಾನ ಮಾಡಿ ಏರೋಬಿಕ್ಸ್ ಮಾಡಿಯೋ ಇಲ್ಲ ಜಾಗ್ ಮಾಡಿಯೋ ಸಾಯಿ ಎಂದು ಬಂದೆ ಯಾಕೋ ಒಂತರ ಬೇಜಾರು ದಪ್ಪಕ್ಕಿದ್ದ ಮಾತ್ರ ಡಿವೋರ್ಸ್ ಹೇ? ಮಲಗಲು ಬಂದರೆ ಇವನು ಆಗಷ್ಟೇ ಸಾರಿ ನೀವು ಬ್ಯುಸಿ ಅನ್ಸುತ್ತೆ ಎಂದು ಸ್ಯಾಡ್ ಸ್ಮೈಲಿ ಬೇರೆ ಕಳಿಸಿದ್ದ ವಿಧಿಯಿಲ್ಲದೇ ಸಾರಿ ಊಟ ಅಯ್ತ ಎಂದು ಕಳಿಸಿದೆ .

ಕಾಫೀ ಡೇ ಎದುರು ಕ್ಯಾಬು ನಿಂತು ಅದರಿಂದ ಪ್ರಿಯ ಇಳಿದಳು ಸಂಜಯ ಸಿಗರೇಟು ಆರಿಸಿ ಚಾಕೋಲೇಟ್ ಬಾಯಿಗೆ ಹಾಕಿಕೊಂಡು ನೇರ ಕುಂತ, ಆಕೆ ಈಚಿನಿಂದಲೇ ಗ್ಲಾಸಿನತ್ತಿರ ಕೂತ ಇವನನ್ನು ಕಂಡು ಹಿಡಿದು ಕೈ ಬೀಸಿದಳು ಆತ ಸುಮ್ಮನೆ ನಕ್ಕ. ಎದುರು ಕುಂತಳು ಸಂಜಯ ಹುಡುಗನ ಕರೆದು ಪ್ರಿಯಳ ಮುಖ ಕಾಪುಚೀನೋ ಓಕೆ ನಾ ಎಂದ ಆಕೆ ಸರಿ ಎಂದು ಸುಮ್ಮನಾದಳು. ಮಾತು ಹೇಗೆ ಸುರು ಮಾಡುವುದು ಎಂದು ಗೊತ್ತಾಗದೇ ಆಕೆ ಮೆನುವಿನಲ್ಲಿ ಮುಖ ಹುದುಗಿಸಿಕೊಂಡಳು ಆತ ಆಕೆಯನ್ನೆ ನೋಡುತ್ತಿದ್ದ ” ಮತ್ತೆ ಹೇಗಿದ್ದಿಯ ?” ಮೆನು ಪಕ್ಕಕ್ಕಿಟ್ಟೂ ” ಪರ್ವಾಗಿಲ್ಲ ನೀನು” ಎಂದಳು “ಹೂ ಓಕೆ ಹಿಂಗಿದ್ದೀನಿ ನೋಡು” ಎಂದ.”ಮತ್ತೆ ಹೇಗೆ ನೋಡ್ಕೊತಾ ಇದ್ದಾರೆ ನಿಮ್ಮೊರು” ಎಂದ ” ಪರ್ವಾಗಿಲ್ಲ ಮೊದಲಿನ ತರ ಇಲ್ಲ ,ಮದ್ವೆ ಆದಾಗ ತುಂಬಾ ಚೆನ್ನಾಗಿ ನೋಡ್ಕೋತಿದ್ರು ಸಣ್ಣ ಪುಟ್ಟದು ಅಡ್ಜಸ್ಟ್ ಆಗ್ತಾ ಇದ್ರು ಇವಾಗ ಎಲ್ಲದಕ್ಕೂ ಅಷ್ಟಕಷ್ಟೇ, ಧಾರಾವಾಹಿ ಹಾಕಿ ಅಂದ್ರೆ ಕ್ರಿಕೆಟ್ ನೋಡ್ತಾರೆ ಯಾಕಾದರೂ ಮದ್ವೆ ಆದ್ನೋ ಅನ್ಸುತ್ತೆ ಮೊದಲೆಲ್ಲ ಎಷ್ಟು ಚೆನ್ನಾಗಿದ್ವಿ ಊರೂರ್ ಸುತ್ತೊದು ಮೂವಿ ನೋಡೋದ್ ಅವಾಗ ಚೆನ್ನಾಗಿತ್ತು ಇರ್ಲಿ ಅವೆಲ್ಲ ಯಾಕೆ ಬಿಡು , ಮತ್ತೆ ನೀನು ಹೆಂಗ್ ಇದ್ಯಾ ಹೆಂಡತಿ ಹೇಗೆ ಇದ್ದಾರೆ” ಎಂದವಳ ಕಣ್ಣ ತುದಿಯಲ್ಲಿ ಹನಿಗಳಿದ್ದವು “ಹ್ಮ್ ಪರ್ವಾಗಿಲ್ಲ ಹೆಚ್ಚು ಕಡಿಮೆ ನಿನ್ ತರನೇ ಲೈಫು ಒಂದೊಂದ್ ಸಲ ನಾನೆ ಅರ್ಥ ಮಾಡ್ಕೊಳಲ್ಲ ಅವಗಾವಗ ಈಗೋ ಕ್ಲಾಶ್ ಹೇಳ್ಕೊಳ್ಳೊ ಅಂತದ್ ಏನಿಲ್ಲ ” ಕಾಪುಚೀನೋ ಬಂತು ಇಬ್ಬರೂ ಕೈಗೆತ್ತಿಕೊಂಡರು.

ಸರಿ ಹೊರಡೋಣ ಥ್ಯಾಂಕ್ಯೂ ಸಿಕ್ಕಿದ್ದಕ್ಕೆ ಎಂದು ಪ್ರಿಯ ಕ್ಯಾಬ್ ಹತ್ತಿದಳು ಅವನು ಕೈ ಬೀಸಿದ. ಆಫೀಸಿಗೆ ಹೋದವನಿಗೆ ಪ್ರಿಯಳ ಮಾತು ಕೇಳಿ ಇನ್ಮೇಲೆ ನಾನು ನನ್ ಹೆಂಡ್ತಿನಾ ಚೆನ್ನಾಗಿ ನೋಡ್ಕೋಬೇಕು ಅನಿಸಿತು ಹೆಚ್ಚು ಕಡಿಮೆ ಎಲ್ಲ ಗಂಡ ಹೆಂಡರ ಬದುಕು ಅಷ್ಟೇ ಮೊನೊಟೊನಸ್ ಇವತ್ತು ಐ ಪಿ ಎಲ್ ನೋಡೋದ್ ಬೇಡ ಅಗ್ನಿಸಾಕ್ಷಿಯೋ ಪುಟ್ಟಗೌರಿಯೋ ನೋಡಿಕೊಳ್ಳಲಿ ಇನ್ಮೇಲೆ ಸಣ್ಣ ಪುಟ್ಟದಕ್ಕೇ ಜಗಳವಾಡಬಾರದೆಂಡುಕೊಳ್ಳುವ ಹೊತ್ತಿಗೆ ಪ್ರಿಯಳಿಗೂ ಸಹ ಹಾಗೆ ಅನಿಸತೊಡಗಿತು ಒಂದು ಕಾಲಕ್ಕೆ ಲವ್ವು ಬಗ್ಗೆ ದೊಡ್ಡ ದೊಡ್ಡದಾಗಿ ಮಾತಾಡುತ್ತಿದ್ದ ಸಂಜಯನ ಬದುಕು ನಾರ್ಮಲ್ ಆಗಿಯೇ ಇದೆ ಅವಳ ಹೆಂಡ್ತಿಯನ್ನು ಅಷ್ಟರಲ್ಲೇ ಪ್ರೀತಿಸುತ್ತ ಇರುವುದು ಭ್ರಮೆ ಬೇರೆ ಬದುಕೇ ಬೇರೆ ಇವತ್ತು ಅವರು ಐ ಪಿ ಎಲ್ ನೋಡಿಕೊಳ್ಳಲಿ ಅಗ್ನಿಸಾಕ್ಷಿ ಹೇಗಿದ್ರೂ ಬೆಳಗ್ಗೆ ಈ ಟೆಲಿಕಾಸ್ಟ್ ಆದಾಗಾ ನೋಡಿಕೊಂಡರೆ ಆಯ್ತು ಎಂದುಕೊಂಡಳು.

ಸಂಜಯ ಬಾಗಿಲು ತಟ್ಟಿದಾಗ ಹೆಂಡತಿ ಬಾಗಿಲು ತೆಗೆದಳು ಶೂ ಬಿಚ್ಚಿ ಮುಖ ತೊಳೆದು ಡಿನ್ನರ್ ಟೇಬಲ್ಲಿಗೆ ಬಂದ ವಿಜಯ್ ಊಟ ಮಾಡಿದ್ನ ಎಂದು ಮಗನ ಬಗ್ಗೆ ಕೇಳಿದ ಹೂ ಮಾಡಿದ ಹೋಂ ವರ್ಕ್ ಜಾಸ್ತಿ ಇತ್ತು ಕೈ ನೋವು ಎಂದು ಹೇಳಿ ಮಲ್ಕೊಂಡ ಅಂದಳು ತಟ್ಟೆಗೆ ಒಬ್ಬಟ್ಟು ಕಾಳು ಗೊಜ್ಜು ಇತ್ತಳು ಸಂಜಯ ಏನಿವತ್ತು ಸ್ಪೆಷಲ್ ಎಂದ ಏನಿಲ್ಲ ಸುಮ್ನೆ ಮಾಡಿದೆ ಅಂದು ಸುಮ್ಮನಾದಳು ಕೈ ತೊಳೆದು ಸ್ವಲ್ಪ ಸಮಯ ಕ್ರಿಕೆಟ್ ನೋಡುವ ಎಂದುಕೊಂಡ ಚಾನೆಲ್ ಚೇಂಜ್ ಮಾಡಿದರೆ ಆರ್ ಸಿ ಬಿ ಚೆನ್ನೈ ಇಂಡಿಯನ್ಸ್ ಮ್ಯಾಚು ರಿಮೋಟ್ ಸೈಡಿಗಿಟ್ಟು ನೋಡತೊಡಗಿದ ಸರಿ ನಾನು ಮಲ್ಕೋತ್ತೀನಿ ಬಾಗಿಲು ಹಾಕೊಂಡ್ ,ಪಾತ್ರೆ ಮೇಲೆ ಕ್ಲೀನ್ ಆಗಿ ಮುಚ್ಚಿಟ್ಟು ಮಲ್ಕೊಲ್ಲಿ ಎಂದು ಪಾಯಸ ತಂದಿಟ್ಟು ಒಳ ಹೋದಳು, ಮದ್ಯಾನ್ಹ ಪ್ರಿಯ ಹೇಳಿದ ಮಾತು ನೆನಪಾಯ್ತು ಟಿವಿ ಆಫ್ ಮಾಡಿ ರೂಮಿಗೆ ಹೋದ ಆಕೆ ಆಗಲೇ ಮಲಗಿದ್ದಳು ಅವನು ಹಿಂದಿನಿಂದ ತಬ್ಬಿಕೊಂಡು ಯಾಕೆ ಪುಟ್ಟ ಗೌರಿ ನೋಡೊಲ್ವ ಎಂದು ಉಸುರಿದ ಆಕೆ ಯಾಕೆ ಆರ್ ಸಿ ಬಿ ಸೋತೋಯ್ತ ಎಂದಳು ಇಬ್ಬರೂ ನಕ್ಕರು ಆಕೆ ಇವನೆಡೆಗೆ ತಿರುಗಿದಳು ಆತ ಅವಳನ್ನು ಇನ್ನಷ್ಟು ಬರಸೆಳೆದು ತುಟಿಗೆ ತುಟಿ ಕೊಟ್ಟು “ಐ ಲವ್ ಯೂ ಪ್ರಿಯ ” ಎಂದ ಆಕೆ “ಐ ಲವ್ ಯೂ ಮಿಸ್ಟರ್ ಸಂಜಯ್” ಎಂದಳು ಇಬ್ಬರೂ ಕಿಸಕ್ಕನೆ ನಕ್ಕು ಮತ್ತೆ ತುಟಿಗೆ ತುಟಿ ಕೊಟ್ಟರು.

ಹಿಂದಿನ ರಾತ್ರಿ:

ಹಾಳಾದ್ ಮ್ಯಾಚ್ ಹಾಕೊಂಡ್ ನೋಡ್ ಸಾಯ್ರಿ ಆ ಆರ್ಸಿಬಿ ಯವರು ಗೆಲ್ಲೊಲ್ಲ ನೀವು ನೋಡೊದ್ ಬಿಡೊಲ್ಲ ಎಂದು ಸಿಡುಕುತ್ತ ಸಂಜಯನ ಹೆಂಡತಿ ರೂಮಿನ ಬಾಗಿಲು ಹಾಕಿಕೊಳ್ಳುವುದಕ್ಕೂ ಇತ್ತ ಕೊಹ್ಲಿ ಡಕ್ ಔಟ್ ಆಗಲಿಕ್ಕೂ ಆಗಿ ಸಂಜಯನ ತಲೆ ಸಿಡಿದು ಬೋಳಿಮಕ್ಳೂ ಎಂದು ಬಯ್ಯುತ್ತ ರೂಮಿಗೆ ಹೋದ ಅವಳು ಅಳುತ್ತಿದ್ದಳು ಲೇ ಅಷ್ಟುಕ್ ಯಾಕ್ ಅಳ್ತೀಯ ಹೋಗಿ ನೋಡು ನಿನ್ನ ಗೌರಿ ಸೀರಿಯಲ್ ಅವಳಿಗೆ ಮಗು ಆಗೊಲ್ಲ ನೀನು ನೋಡೋದ್ ಬಿಡೊಲ್ಲ ಟ್ರೈ ಮಾಡಿದರೆ ನಿಂಗೆನೇ ಇನ್ನೊಂದ್ ಮಗು ಹುಟ್ತಿತ್ತು ಎಂದ ಅವಳಿಗೆ ನಗು ಬಂದು ಕಣ್ಣೊರೆಸಿಕೊಂಡು ಏನಾದ್ರು ಹಿಂಗೇಲಿ ನಗು ಬರ್ಸ್ತೀರಾ ಅಲ್ವ ಎಂದು ತಿರುಗಿಕೊಂಡಳು ನಾವು ಲವ್ ಮಾಡುವಾಗ ಚೆನ್ನಾಗಿತ್ತು ಅಲ್ವ ಹಾಳಾದ್ ಮದ್ವೆ ಆಗಿ ಅವಗಾವಗ ಕಿತ್ತು ಆಡೋದೆ ಆಯ್ತು ರೀ ಎಂದಳು ಸರಿ ಮತ್ತೆ ಲವ್ ಮಾಡುವ ಡಿವೋರ್ಸ್ ಕೊಡು ಎಂದ ಅವಳು ಏನು ಬೇಡ ಲವ್ ಕಳ್ಕೋಂಡಿರೋರ್ಗೆನೆ ಲವ್ ಬೆಲೆ ಗೊತ್ತಾಗೊದು ನಾಳೇ ನಮ್ಮ ಮೂರನೇ ವರ್ಷದ ಅನಿವರ್ಸರಿ ಸೋ ನಾಳೆ ನೀವು ಲವ್ ಫೇಲ್ಯೂರ್ ಆಗಿ ಬೇರೆ ಯಾರೋ ಕಟ್ಕೊಂಡಿರೋ ತರ ಇರ್ಬೆಕು ನಾನು ಹಾಗೇ ಇರ್ತಿನಿ ಆಯ್ತು ಎಂದಳು ಇವನು ಸರಿ ಎಂದು ಮೊಬೈಲ್ ತೆಗೆದು ಪ್ರಿಯಳಿಗೆ ” ಹಾಯ್ ” ಎಂದು ಮೆಸೇಜು ,ಪ್ರಿಯ ಮಗ್ಗಲು ಬದಲಿಸಿ ಇವಾಗ ರಿಪ್ಲೆ ಮಾಡೊಲ್ಲ ಬೆಳಗ್ಗೆ ಮಾಡ್ತೀನಿ ಎಂದು ಬೆನ್ನು ಮಾಡಿ ಮಲಗಿಕೊಂಡಳು .

‍ಲೇಖಕರು Admin

April 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: