ಜಯರಾಮಚಾರಿ ಹೊಸ ಕಥೆ – ಅವಳ ಫ್ರೆಂಡ್ ರಿಕ್ವೆಸ್ಟ್…

ಜಯರಾಮಚಾರಿ

ಅವನನ್ನು ನೋಡಿದ್ದು, ಆ ಧ್ವನಿ ಕೇಳಿದ್ದು ಮುಂಬೈನ ಕಿಕ್ಕಿರಿದ ಅನಾಮಧೇಯ ರಸ್ತೆಯಲ್ಲಿ.

“ಹಾಡೊಂದು ಹಾಡಬೇಕು /ಹಾಡೊಂದು ಹಾಡಬೇಕು / ಎಲ್ಲರೊಂದೇ ಎಲ್ಲರೊಂದೇ ಎನ್ನುವ ಹಾಡೊಂದ ಹಾಡಬೇಕು” ಅರೆ ಇದ್ಯಾರಪ್ಪಾ ಬಂಗಾಳಿ ನಾಡಿನಲ್ಲಿ ಕನ್ನಡದ ಹಾಡು ಹಾಡ್ತಾ ಇರೋದು ಅದರಲ್ಲೂ ಪಡುವಾರಳ್ಳಿ ಪಾಂಡವರ ಹಾಡು ಈ ೨೦೨೨ ರಲ್ಲಿ ಎಂದು ಕಿವಿ ಅಗಲಿಸಿಕೊಂಡು ಹಾಡುತ್ತಿದ್ದ ಧ್ವನಿಯನ್ನು ಹುಡುಕುತ್ತ ಹೋದೆ, ಅಲ್ಲೊಂದು ರಸ್ತೆ, ರಸ್ತೆಯ ಆ ಬದಿ ನನಗೆ ಗೊತ್ತಿಲ್ಲದ ಗಿಡ್ಡ ಮರ, ಆ ಮರದ ಕೆಳಗೆ ಮರದ ಚೇರು, ಚೇರಿನ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ನ ಗ್ರಾಫಿಟಿ, ನಿಜಕ್ಕೂ ಅದೆಲ್ಲ ಹಾಗೆ ಇತ್ತ, ಇಲ್ಲ ಮುಂಬೈ ರಂಗ ಕಲಾವಿದರು ಮಾಡಿ ಹೋದ ಸೆಟ್ಟಾ ಗೊತ್ತಾಗಲಿಲ್ಲ, ಆ ಚೇರಿನ ಮೇಲೆ ಆತ ಕುಳಿತಿದ್ದ ನೆಟ್ಟಗೆ, ಅವನು ಹಾಕಿದ್ದ ಬನಿಯನ್ನು ಹರಿದಿತ್ತು, ಹಾಕಿದ್ದ ಪ್ಯಾಂಟು ಅದೇ ರಸ್ತೆಯ ಬಣ್ಣಕೆ ತಿರುಗಿತ್ತು, ಗಂಟು ಗಂಟು ಹೆಂಗೆಂಗೋ ಬೆಳೆದ ಕೂದಲು, ಗಡ್ಡ, ಪಕ್ಕದಲ್ಲಿ ಅದೆಂತದೋ ಗೋಣಿಸಿಎಲ್, ಹಾಡುತ್ತಲೇ ಇದ್ದ .ಎಲ್ಲ ಕನ್ನಡದ ಹಾಡುಗಳೇ, “ನಿಷೇಧ ಹೆರುವ ಸರಕಾರ ಒಳಗೆ ಕೊಡುವುದು ಸಹಕಾರ ” ಹಂಸಲೇಖ, ಇಳಯರಾಜ, ವೈದ್ಯನಾಥನ್, ಜಿ ಕೆ ವೆಂಕಟೇಶ್, ವಿ ಮನೋಹರ್, ರಾಜನ್ ನಾಗೇಂದ್ರ ಕೊನೆ ಕೊನೆಗೆ ಚರಣ್ ರಾಜ್ ಸಂಗೀತ ನೀಡಿರೋ “ನೆಲದ ಗಾಯ ಹೊಳೆಯುವಂತೆ ಸುರಿಯೆ ಮಳೆಯೇ” ಎಂದು ಹಾಡುತಿದ್ದ, ನಾನು ರಸ್ತೆ ದಾಟಿ ಅವನ ಪಕ್ಕ ನಿಂತೇ ಅವನು ನಾನು ನಿಂತೇ ಇಲ್ವಂತೆ ತನ್ನ ಪಾಡಿಗೆ ತಾನು ಹಾಡ್ತಾ ಇದ್ದ, ನಾನು ಸಭ್ಯ ನಾಗರೀಕನಂತೆ ಅವನು ಹಾಡಿದ ಕೊನೆಯ ಹಾಡು ಪೂರ್ತ ರೆಕಾರ್ಡು ಮಾಡಿಕೊಂಡು, ಮುಂಬೈ ನಾಡಿನಲ್ಲಿ ಕನ್ನಡ ಕೋಗಿಲೆ ಎಂದು ಫೇಸ್ ಬುಕ್ ಗೆ ಅಪ್ಲೋಡ್ ಮಾಡಿ, ಮುಂದೊಂದು ದಿನ ಆತ ರಾನು ಮಂಡಲ್ ತರವೋ ಇಲ್ಲ ಕಚ್ಚಾ ಬಾದಾಮಿನ ತಾತನ ತರವೋ ಫೇಮಸ್ ಆಗಿ ಅದರ ಸಂಪೂರ್ಣ ಕ್ರೆಡಿಟ್ ನನಗೆ ಸಿಕ್ಕಿದಾಗ ಛೆ ಛೆ ನಂದೇನಿಲ್ಲ ಎಲ್ಲ ಆ ದೇವರದ್ದು, ಆ ಧ್ವನಿಯಲ್ಲಿರುವ ಶಾರದೆಯದ್ದು ಎಂದು ಡವ್ ಮಾಡಿ ನಾನು ಕೂಡ ಫೇಮಸ್ ಆಗುವ ಕನಸನ್ನು ಅಲ್ಲೆಲ್ಲೋ ಮನದಲ್ಲಿ ಸಿಗಿಸಿಕೊಂಡು ಹೊರನಡೆದೆ, ಹೊರ ನಡೆಯುವ ಮುಂಚೆ ಅವನ ಮುಂದೆ ೫೦ ರೂಪಾಯಿ ನೋಟು ಚೆಲ್ಲಿ ಸಾಮಾಜಿಕ ಪ್ರಜ್ಞೆ ಮೆರೆಯುದನ್ನು ಮರೆಯಲಿಲ್ಲ.

ಅಲ್ಲಿಂದ ಬೆಂಗಳೂರಿಗೆ ಬಂದ ಮೇಲೆ ಸಮಯ ಸಿಕ್ಕಾಗಲೆಲ್ಲ ನಾನು ಸೆರೆ ಹಿಡಿದ ವಿಡಿಯೋ ಗೆ ಸಿಕ್ಕ ಲೈಕುಗಳು, ಬಂದ ಕಮೆಂಟುಗಳು, ಮಾಡಿದ ಷೇರುಗಳು ಎಲ್ಲದರ ಮೇಲು ಕಣ್ಣಿಟ್ಟಿದ್ದೆ, ಸಿಕ್ಕಾಪಟ್ಟೆ ವೈರಲ್ ಆಗಿಬಿಡುವುದೆಂದು ಅಂದುಕೊಂಡ ನನಗೆ ಭಾರಿ ನಿರಾಶೆಯಾಯ್ತು, ೨೦ ಲೈಕು ಒಂದೆರಡು ಕಿತ್ತೋದ ಕಮೆಂಟು ಬಿಟ್ರೆ ಮತ್ತೆಂತ ಪವಾಡ ಆಗ್ಲಿಲ್ಲ, ರಾತ್ರೋ ರಾತ್ರಿ ಎಂತೆಂತೋವರನ್ನು ಸ್ಟಾರ್ ಮಾಡಿದ ಈ ಬಿಕನಾಸಿ ದುನಿಯಾದಲ್ಲಿ “ಮುಂಬೈ ನೆಲದಲ್ಲಿ ಕನ್ನಡ ಕೋಗಿಲೆ” ಎಂದು ಪೋಸ್ಟ್ ಹಾಕಿದ ನನಗು , ಅಲ್ಲೆಲ್ಲೋ ಕೂತು ಕನ್ನಡದ ಹಾಡುಗಳನ್ನ ವದರುತ್ತಿದ್ದ ಅವನಿಗೂ ಮೂರು ಕಾಸು ನಯಾಪೈಸೆ ಮರ್ಯಾದೆ ಸಿಗಲಿಲ್ಲ 

ಸಿಕ್ಕಾಪಟ್ಟೆ ಕೆಲಸ ಮಾಡಿ ಮನೆಗೆ ಬಂದು ಸುಸ್ತಾಗಿ ದಬಾಕೊಂಡ ರಾತ್ರಿ ಅವಳ ಫ್ರೆಂಡ್ ರಿಕ್ವೆಸ್ಟ್ ಬಂತು, ಹೆಣ್ ಮಕ್ಳು ಸಾಮಾನ್ಯವಾಗಿ ಗೊತ್ತಿಲ್ಲದವರಿಗೆ ಏಕಾಏಕಿ ಈ ತರ ರಿಕ್ವೆಸ್ಟ್ ಕಳಿಸೋಲ್ಲ ಅಂತ ಗೊತ್ತು, ಒಂದೋ ಪರಿಚಯವಿರಬೇಕು, ಇಲ್ಲ ಹೆಸರೋ, ದುಡ್ಡೋ ಮಾಡಿರಬೇಕು, ಇತ್ತ ಪರಿಚಯವೂ ಇಲ್ಲ ಅತ್ತ ದುಡ್ಡು ,ಹೆಸರು ಎರಡು ಇಲ್ಲ ಆದರೂ ಹುಡುಗಿಯೇ ನನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದಾಗ ಗಾಬರಿಯಾಯ್ತು ಜೊತೆಗೆ ಒಂತರ ಖುಷಿ, ನಾನಾಗೆ ನಾನೇ ಹುಡುಕಿ ಕಳಿಸಿದ ಎಷ್ಟೋ ರಿಕ್ವೆಸ್ಟ್ ಗಳನ್ನೂ ಮೂಸು ನೋಡದೆ ರಿಕ್ವೆಸ್ಟ್ ಆಗೇ ಬಿದ್ದಿರಲು ಬಯಸದೆ ಬಂದ ಈ ರಿಕ್ವೆಸ್ಟ್ ಕಾಲವೇ ಸೆಕೆಂಡುಗಳಲ್ಲೇ ಅಕ್ಸೆಪ್ಟ್ ಕೂಡ ಮಾಡಿಬಿಟ್ಟೆ, ಮಾಡಿ ಬಂದವಳ ಹೆಸರು, ಅವಳ ಫೋಟೋಗಳನ್ನ ಜೂಮ್ ಮಾಡಿ ನೋಡುತ್ತಿದ್ದ ವೇಳೆ ಅವಳಿಂದ ಮೆಸೇಜ್ 

“ಹಾಯ್ “

ಇದೇನಾ ಕನಸ ನನಸಾ ಇಲ್ಲ ಯಾವುದೋ ಫೇಕು ಪ್ರೊಫೈಲ ಅಥವಾ ಸೆಂಡ್ ಮೇ ಯುವರ್ ವಾಟ್ಸಾಪ್ ನಂಬರ್ ಅಂತ ಕೇಳಿ ಯು ವಾಂಟ್ ನೇಕೆಡ್ ಫೋಟೋ, ಸೆಕ್ಸ್ ಚಾಟ್ ಅಂತ ಕೇಳಿ ದುಡ್ಡು ಹೊಡೆಯುವ ಹನಿಟ್ರಾಪ್ ಇರಬಹುದೆಂದು ಭಯವಾಯಿತು ಆದರೂ ವಯೋಸಹಜ ಕುತೂಹಲ ಆ ಭಯಕ್ಕೆ ಮಣ್ಣು ಮುಕ್ಕಿಸಿದ ಮರುಕ್ಷಣದಲ್ಲಿ 

“ಹಾಯ್ ” ಅಂತ ಕಳಿಸಿಬಿಟ್ಟೆ 

“ಹೇಗಿದ್ದೀರ?” ಆ ಕಡೆ ಯಿಂದ 

“ಸಕತ್, ನೀವು, ಊಟ ಆಯ್ತಾ ?”

“ಆಯ್ತು, ಏನಿಲ್ಲ ನೀವು ಶೇರ್ ಮಾಡಿದರಲ್ಲ ವಿಡಿಯೋ ಅದು ಎಲ್ಲಿ ಸಿಕ್ಕಿದ್ದು “?

“ಮುಂಬೈ ಯಾಕೆ ?”

“ಬೇಕಿತ್ತು, ನೀವು ಇರೋದು ಎಲ್ಲಿ ?”

“ವಿಜಯನಗರ”

“ಸಿಕ್ತೀರಾ ನಾಳೆ ಪ್ಲೀಸ್ ?”

ಅಂದವಳೇ ಅವಳ ನಂಬರ್ ಕಳಿಸಿ ವಿಜಯನಗ ಕೆಫೆ ಡೇ ಓಕೇ ಅಲ್ವ ಎಂದು ಹೇಳಿ ಸಮಯ ಕೂಡ ಅವಳೇ ಹೇಳಿ ಆಫ್ ಲೈನ್ ಹೋಗಿಬಿಟ್ಟಳು, ಒಂದು ಕಡೆ ಚೆಂದದ ಹೆಣ್ಣು ಜೀವವೊಂದು ತಾನಾಗೇ ತಾನೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ನಂಬರ್ ಕೂಡ ಶೇರ್ ಮಾಡಿ, ಎರಡು ನಿಮಿಷಕ್ಕೆ ಮೀಟಿಂಗ್ ಬೇರೆ ಫಿಕ್ಸ್ ಮಾಡಿರುವ ಖುಷಿ ಕುತೂಹಲ ಭವಿಷ್ಯದ ರೋಚಕ ಕ್ಷಣಗಳ ಜಿಗಿಚಿಕ್ಕ, ಒಂದು ಕಡೆ ಆದರೆ ಮತ್ತೊಂದು ಕಡೆ ಎಲ್ಲ ವಿಷಯ ಬದಿಗಿಟ್ಟು ಅಲ್ಲೆಲ್ಲೋ ಕನ್ನಡ ಹಾಡುಗಳ ಹಾಡುತ್ತಿದ್ದ ಹುಚ್ಚನನ್ನೇ ಯಾಕೆ ಕೇಳುತಿದ್ದಾಳೆ ಎಂಬ ಪ್ರಶ್ನೆ, ಆ ಹುಚ್ಚನಿಗಾಗೇ ಆಕೆ ನನಗೆ ರಿಕ್ವೆಸ್ಟ್ ಕಳಿಸಿ ನಂಬರ್ ಶೇರ್ ಮಾಡಿ ಮೀಟ್ ಕೂಡ ಆಗುತ್ತಿದ್ದಾಳೆ ಎಂಬುದೇ ಸತ್ಯವಾದರೆ ನನ್ನ ಐಡೆಂಟಿಟಿಗೆ ದೊಡ್ಡ ಪೆಟ್ಟು. ಹೋಗಲೋ  ಬೇಡವೋ ಅಂತ ತುಂಬಾ ಯೋಚಿಸಿ ಅವಳು ಕಳಿಸಿದ ನಂಬರ್ ಸೇವ್ ಮಾಡಿ ಅವಳ ವಾಟ್ಸಾಪ್ ಡಿಪಿ ನೋಡಿದಾಗ ಹೋಗಲೇಬೇಕು ಎಂದು ಅನಿಸಿ ಮಲಗಿಕೊಂಡೆ, ಆಫೀಸಿಗೆ ಹುಷಾರಿಲ್ಲದ ಕಾರಣ ರಜೆ

ಅವಳು ಬಂದ ಕಾರಣ ಅವನಿಗಾಗಿಯೇ.

ನಾವಿಬ್ಬರು ಕೆಫೆಯಲ್ಲಿ ಬೇಹಿತಿ ಆದೆವು, ಆಕೆ ನನ್ನ ನೋಡಿದ ಕೂಡಲೇ ಗುರುತಾಗಿ ನಗುತ್ತ ಕೈ ಬೀಸಿ ಹಾಯ್ ಎಂದಳು, ಕೈ ಕೊಡಲು ಹೋದರೆ ನಮಸ್ಕಾರ ಮಾಡಿ ಕೊರೊನ ಅಲ್ವ ಅಂತ ಕಿಚಾಯಿಸಿ ಕೂತಳು. ರಾತ್ರಿ ನಿದ್ದೆಯಿಲ್ಲದೆ ಏನೇನೋ ಕನಸು ಕಂಡ ನನಗೆ ಸ್ವಲ್ಪವೂ ಸೊಪ್ಪು ಹಾಕದೆ ನೇರ ವಿಷಯಕ್ಕೆ ಬಂದಳು.

“ಸಾರಿ ನಿಮಗೆ ತೊಂದ್ರೆ ಕೊಟ್ಟಿದ್ದಕ್ಕೆ, ಆ ವಿಡಿಯೋದಲ್ಲಿ ಇರೋದು ನನ್ನ ಕಸಿನ್ ಬ್ರದರ್, ತುಂಬಾ ಒಳ್ಳೆ ಸಿಂಗರ್, ಈ ಕಾರ್ನಾಟಿಕ್, ಹಿಂದೂಸ್ತಾನಿ ಅಂತಾರಲ್ಲ ಅದೆಲ್ಲ ಕಲಿತಿದ್ದ, ಸ್ಕೂಲು ಕಾಲೇಜು ಗಣಪತಿ ಉತ್ಸವ ಆ ಕಾಂಪಿಟೇಷನ್ ಈ ಕಾಂಪಿಟೇಷನ್ ಎಲ್ಲಿ ಹೋದ್ರು ಮೊದಲ ಪ್ರೈಜು ಹೊಡ್ಕೊಂಡ್ ಬರ್ತಿದ್ದ, ಒಂದ್ ದಿನ ಹೋಗಿದ್ ಕಡೆಯೆಲ್ಲ ಗೆಲ್ಲೋದೇ ಆಯ್ತು, ನನ್ನ ಹಾಡಿಗೆ ಒಂದು ಉದ್ದೇಶ ನೇ ಇಲ್ಲ ಅಂತ ಹಾಡೋದ್ ಬಿಟ್ಟ, ಆಮೇಲೆ ಒಂದ್ ದಿನ ನಾನು ಟಿ ಎಂ ಕೃಷ್ಣ ತರ ಆಗ್ಬೇಕು ನನ್ನ ಧ್ವನಿ ಕಲಾ ಸರಸ್ವತಿ ಧ್ವನಿ, ಶಾರದೆ ಧ್ವನಿ ,ನಾನು ಕ್ರಾಂತಿ ಮಾಡ್ಬೇಕು, ನನ್ನ ಧ್ವನಿಗೊಂದು ಶಕ್ತಿ ಇದೆ ಅಂತ ಹೇಳಿ ಕನ್ನಡಲ್ಲಿ ಇರೋ ಬರೋ ಕ್ರಾಂತಿ ಕಾರಿ ಹಾಡು ಹಾಡ್ತಿದ್ದ, ಜನಪ್ರಿಯ ಹಾಡುಗಳಿಗೆ ಇವನೇ ಏನೇನೋ ಲಿರಿಕ್ಸ್ ಬರ್ದು ಹಾಡ್ತಿದ್ದ, ಎಲ್ಲೆಲ್ಲಿ ಪ್ರೈಜ್ ಸಿಗ್ತಾ ಇತ್ತೋ ಅಲ್ಲೆಲ್ಲ ಓಡಿಸಿಬಿಟ್ರು, ಕೊನೆಗೆ ಅದೆಂತದೋ ದೊಡ್ಡ ರಿಯಾಲಿಟಿ ಷೋ ಅಂತ ಮುಂಬೈಗೆ ಹೋಗಿ ಮೊದಲ ದಿನವೇ ಫ್ಯೂಶನ್ ಅಂತ ಹೇಳಿ ಕಮರ್ಷಿಯಲ್ ಸಾಂಗಿಗೆ ಪೆರಿಯಾರ್ ಪದ ಸೇರಿಸಿ ಜೊತೆಗೆ ತಾನು ಬರೆದುಕೊಂಡ ಸಾಲು ಸೇರಿಸಿ ಹಾಡಿಬಿಟ್ಟ. ಅಲ್ಲಿದ್ದ ಜಡ್ಜುಗಳು ಕೇಳಿ ತಬ್ಬಿಬ್ಬು ಆಮೇಲೆ ಜೋರು ಚಪ್ಪಾಳೆ ತತ್ತಿ ತಬ್ಬಿಕೊಂಡು ಅವನನ್ನು ಹೊಗಳಿದರು, ಆದರೆ ಮುಂದಿನ ಸಂಚಿಕೆಯಿಂದ ಅವನು ಏನೆಲ್ಲಾ ಹಾಡಿದರು ಅದರಲ್ಲಿ ಇದಿಲ್ಲ ರಾಗ ಸರಿ ಇಲ್ಲ, ತಾಳ ಇಲ್ಲ, ಶ್ರುತಿ ಇಲ್ಲ, ಇನ್ನು ಬೇಕು, ಇದೇನಿದು ಇಂತ ಹಾಡು ಆಯ್ಕೆ ಹಿಂಗೇ ಹೇಳಿ ಅವನನ್ನ ತುಳಿಯಲು ಯತ್ನಿಸಿದರು, ಅದಾದ ಮೇಲೆ ಅವನು ಕಣ್ಣು ಮುಚ್ಚಿ ಹಾಡೋಕ್ಕೆ ಶುರು ಮಾಡಿದ ತನ್ನ ಹೆಸರು ಬಂದ ಕೂಡಲೇ ಸ್ಟೇಜ್ ಗೆ ಬಂದು ಕಣ್ಣು ಮುಚ್ಚಿ ಹಾಡ್ತಿದ್ದ ಹಾಗೆ ಹಾಡ್ತಾ ಇದ್ದಾಗ ಅವನ ಕಣ್ಣಿಂದ ನೀರು ಹರಿತಿತ್ತು, ಹಾಡಿದ ಮೇಲೆ ಜಡ್ಜುಗಳ ಮಾತು ಕೂಡ ಕೇಳದೆ ಹೊರಗೆ ಹೋಗಿಬಿಡ್ತಿದ್ದ, ಅವನನ್ನು ಎಲಿಮಿನೇಟ್ ಮಾಡಿದ ಮೇಲೆಯೋ ಸ್ಟೇಜ್ ಹಚ್ಚಿ ಹಾಡಲು ಹೋದಾಗ ದೊಡ್ಡ ಗಲಾಟೆ ಆಗಿ ಅವನನ್ನು ಅನಾಮತ್ತು ಎತ್ತಿ ಹೊರಗೆ ಎಸೆದು ಗೇಟು ಹಾಕಿಬಿಟ್ಟರು, ಆ ಸಂಚಿಕೆ ಟೆಲಿಕಾಸ್ಟ್ ಆಗಲೇ ಇಲ್ಲ, ಅವನಿಗೆ ಅರೋಗ್ಯ ಸರಿ ಇಲ್ಲ ಎಂದು ಕೈ ತೊಳೆದುಕೊಂಡರು, ಇವನು ಗೇಟಿನ ಹತ್ತಿರಾನೆ ಹಾಡೋಕ್ಕೆ ಸುರು ಹಚ್ಚಿಕೊಂಡ, ಪೊಲೀಸರು ಹಿಡಿದು ಜೈಲಿಗೆ ಹಾಕಿದರು, ಅಲ್ಲಿ ಕೂಡ ಬಿಡದೆ ಹಾಡುತ್ತಿದ್ದ ಅಂತೇ ರಾತ್ರೋ ರಾತ್ರಿ ಅವನನ್ನು ಎಲ್ಲಿ ಕಳಿಸಿದರೋ ಗೊತ್ತಿಲ್ಲ… ಅವನನ್ನು ಹುಡುಕಿ ಹುಡ್ಕಿ ಸಾಕಾಯ್ತು, ನಿಮ್ ವಿಡಿಯೋ ಲಿ ಅವನ ಧ್ವನಿ ಕೇಳಿ ಗೊತ್ತಾಯ್ತು ಅವನೇ ಅಂತ..ಪ್ಲೀಸ್ ಅವನು ಇರೋ ಜಾಗ ಹೇಳಿ ” ಅಂದಳು 

ಅವನ ಕತೆ ಕೇಳಿ ಒಂದು ಟಾರ್ ನೋವು ಆದರೂ, ಅವಳು ಬಂದದು ಅವನಿಗಾಗಿ ಅಂತ ಗೊತ್ತಾಗಿ ಏನೋ ಒಂದು ಅಸಡ್ಡೆ ಮೂಡಿತು, ಜೊತೆಗೆ ಇನ್ನೊಂದು ಪೀಕಲಾಟ ಅವನನ್ನು ನೋಡಿದ ದಿನ ನಾನು ಹೊರಟ ಮೆಟ್ರೋ ಟ್ರೈನ್ ಲಿ ಸಕತ್ ನಿದ್ದೆ ಬಂದು ಎಲ್ಲೋ ಎದ್ದು, ಇಳಿದು, ಅಪರಿಚಿತ ಊರಿನಲ್ಲಿ ರೋಡಿನಲ್ಲಿ ಅಲೆಯುತ್ತಿದ್ದಾಗ ನೋಡಿದ್ದು ಅವನನ್ನು, ಅವನ ನೋಡಿ ಅವನಿಗೆ ಐವತ್ತು ಎಸೆದು ಮತ್ತೆ ನಾನು ಉಳಿದುಕೊಂಡ ಹೋಟೆಲಿಗೆ ಬರಲು ಸಾಕು ಸಾಕಾಗಿತ್ತು, ಹಾಗಾಗಿ ಮತ್ತೆ ಎಲ್ಲಿ ಆ ಜಾಗ ಎಂದು ನೆನಪಿಸಿಕೊಳ್ಳುವುದು, ಅದರ ವಿಳಾಸ ಹೇಳುವುದು ಕಷ್ಟವಾಯ್ತು. ಇರೋದು ಹೇಳಿ, ಆದಷ್ಟು ಈ ಗೊಂದಲದ ಗೂಡಲ್ಲಿ ಸಿಲುಕದೆ  ಹೋಗುವುದೇ ಸೂಕ್ತ ಎನಿಸಿ. ನನಗೆ ತಿಳಿದ ಮಟ್ಟಿಗೆ ವಿಳಾಸ ಹುಡುಕಲು ಒಂದಷ್ಟು ವಿವರ ಹೇಳಿದೆ, ನಾನು ಬರ್ತಾ ಇದ್ದೆ ಬಟ್ ಮುಂದಿನವಾರ ನಾನು ಬೇರೆ ಊರಿಗೆ ಹೋಗಬೇಕು ಪ್ರಾಜೆಕ್ಟ್ ಮೇಲೆ ಎಂದು ಸುಳ್ಳು ಹೇಳಿದೆ, ಅವಳ ಮುಖ ಒಂದು ತರ ಆಯ್ತು, ಎಲ್ಲ ಸರಿ ಆದ್ಮೇಲೆ ಸಿಗುವ ಎಂದು ಹೇಳಿ ಎದ್ದೆ, ಅವಳು ನಗಲು ಪ್ರಯತ್ನಿಸಿದಳು.

ನಾನು ಅಲ್ಲಿಂದ ಹೊರಟು ಹಿಂದೆ ತಿರುಗಿ ನೋಡಿದಾಗ ಆಕೆ ಹಾಗೆಯೇ ಕೂತಿದ್ದಳು.

‍ಲೇಖಕರು Admin

March 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. prathibha nandakumar

    ಜಯರಾಮಚಾರಿ ಅವರೇ, ನನಗೆ ನಿಮ್ಮ ಕಥೆ ಹೇಳುವ ಕೌಶಲ್ಯ ತುಂಬಾ ಇಷ್ಟ. ಸುಮ್ನೆ ಏನೇನೋ ಪೀಠಿಕೆಯಲ್ಲಿ ವೇಸ್ಟ್ ಮಾಡದೇ ಠಕ್ಕಂತ ನೇರ ಕಥೆಯೊಳಗೆ ಓದುಗರನ್ನು ಎಳೆದುಕೊಂಡು ಉಸಿರಾಡಲೂ ಪುರುಸೊತ್ತು ಕೊಡದೇ ನಿಮ್ಮ ಜೊತೆ ಓದಿ(ಡಿ)ಸಿಕೊಂಡು ಹೋಗುತ್ತೀರಾ. ನನಗೆ ಇಂಥ ಶೈಲಿ ಇಷ್ಟ. ನೀವು ಆಧುನಿಕ ನಗರ ಬದುಕಿನ ಸಂಗತಿ ಭಾಷೆಗಳನ್ನು ಹೊಸ ಈಡಿಯಂ ಗಳನ್ನು ಬಳಸುತ್ತೀರಿ ಅಂತ ಮಾತ್ರ ಅಲ್ಲ… ಒಟ್ ಮೇ ಬಹುತ್ ಅಚ್ಚಾ ಲಗತಾ .. ಇನ್ನಷ್ಟು ಬರೆಯಿರಿ

    ಪ್ರತಿಭಾ ನಂದಕುಮಾರ್

    ಪ್ರತಿಕ್ರಿಯೆ
    • ಜಯರಾಮ ಚಾರಿ

      ಅಯ್ಯೋ ! ನಾನು ಇವಾಗ ನೋಡ್ತಾ ಇದ್ದೀನಿ ನಿಮ್ಮ ಪ್ರತಿಕ್ರಿಯೆಯನ್ನ. ತುಂಬಾ ಖುಷಿ ಆಯ್ತು ಮೇಡಮ್ . ಲೇಟ್ ರಿಪ್ಲೆ ಗೆ ಕ್ಷಮೆ ಇರಲಿ. ನಾನು ನಿಮ್ಮ ಬರಹಗಳ ಫ್ಯಾನು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: