‘ಜಯನಗರದ ಹುಡುಗಿ’ in ಬಾರ್ಸಿಲೋನಾ..!

ಹೆಸರು ಮೇಘನಾ ಸುಧೀಂದ್ರ ಹುಟ್ಟಿದ್ದು ಕತ್ತರಿಗುಪ್ಪೆ ಗ್ರಾಮ, ಮೂಲತಃ ಜಯನಗರ , ಬೆಂಗಳೂರಿನವಳು.

ಓದಿದ್ದು Master of Science in Artificial Intelligence and Signal Processing

ದೂರದ ಬಾರ್ಸಿಲೋನಾದಲ್ಲಿ. ಅಲ್ಲಿದ್ದಾಗಲೇ ಒನ್ ಇಂಡಿಯಾದಲ್ಲಿ ಹಳೆ ಬೆಂಗಳೂರಿನ ಕಥೆಗಳು, ಪ್ರಸಂಗಗಳನ್ನ ಅಂಕಣ ರೂಪದಲ್ಲಿ “ಜಯನಗರದಹುಡುಗಿ” ಎಂಬ ಕಾಲಂ ಒನ್ ಇಂಡಿಯಾದಲ್ಲಿ ನಿರ್ವಹಣೆ.

ಬರೆಯೋದಕ್ಕೆ ಪ್ರೇರಣೆ ಕನ್ನಡ ಕಲಿಸಿದ, ದಿನ ಪತ್ರಿಕೆಗಳನ್ನ ಓದೋಕೆ ಹೇಳಿಕೊಟ್ಟ, ಡೆಡ್ ಲೈನ್ ಮೀರಬಾರದೆಂದು ಕಲಿಸಿದ, ೫೦ ಕ್ಕೂ ಹೆಚ್ಚು ಪುಸ್ತಕ ಬರೆದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಲೆ ಮರೆಯ ಕಾಯಿಯಂತಿದ್ದ ‘ಸಂಯುಕ್ತ ಕರ್ನಾಟಕ’ದ ಸುದ್ದಿ ಸಂಪಾದಕ ಹೆಚ್ ಆರ್ ನಾಗೇಶರಾವ್, ನನ್ನ ತಾತ.

ಸದ್ಯಕ್ಕೆ ಬೆಂಗಳೂರಿನ ಅವಾಮೋ ಟೆಕ್ನಾಲಜೀಸಿನಲ್ಲಿ Conversational AI Engineer, ಅಂದರೆ ಮೆಷೀನುಗಳಿಗೆ ಮನುಷ್ಯರ ಹಾಗೆ ಮಾತು ಕಲಿಸುವ ಕೆಲಸ, ಗೂಗಲ್ಲಿನ ಅಸಿಸ್ಟೆಂಟ್ ಮುಖ್ಯ ಪ್ರಾಜೆಕ್ಟ್.

ಆಸಕ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ, ಕತಲಾನ್ ಭಾಷೆ ಕಲಿಕೆ, ಕನ್ನಡ ಪುಸ್ತಕ ಓದುವುದು, ಅಲ್ಲಲ್ಲಿ ಸಿಗುವ ಬೆಟ್ಟ ಹತ್ತಿ ಸಣ್ಣ ಆಗುವ ಪ್ರಯತ್ನ ಮಾಡುವುದು, ಒಳ್ಳೆ ಊಟ ಮಾಡುವುದು.

ಸದ್ಯಕ್ಕೆ ಜಯನಗರದ ಹುಡುಗಿ ಎಂಬ ಪುಸ್ತಕ ಹೊರಬಂದಿದೆ. ಜಾಸ್ತಿ ಬರೆದ್ದದ್ದು ಅಂಕಣ ಮತ್ತು ‘ಪ್ರಜಾವಾಣಿ’ಯ ಭೂಮಿಕಾ ಪುರವಣಿಯಲ್ಲಿ ಹೆಣ್ಣು ಮಕ್ಕಳ ವಿಷಯಗಳ ಬಗ್ಗೆ, ಕಥೆಗಳು ಕತಲಾನ್ ಕಿಡಿ, 1 + 1 = 0, ಶಗುಫ್ತಾ , ವೃತ್ತ, ಅಮೃತ ಬುತ್ತಿ ಪ್ರಕಟಿತ ಕಥೆಗಳು.

ಎಲೆನಾ : ಫ್ರಾನ್ಸಿನಲ್ಲಿ ಮಾತಾಡುವ ಭಾಷೆ ಯಾವುದು ?

ಮೇಘನಾ : ಫ್ರೆಂಚ್

ಎಲೆನಾ : ಜರ್ಮನಿಯಲ್ಲಿ ಮಾತಾಡುವ ಭಾಷೆ ಯಾವುದು ?

ಮೇಘನಾ : ಜರ್ಮನ್

ಎಲೆನಾ : ಭಾರತದಲ್ಲಿ ಮಾತಾಡುವ ಭಾಷೆ ಯಾವುದು?

ಮೇಘನಾ : ಆ ಅದು… ಕನ್ನಡ, ತೆಲುಗು, ಹಿಂದಿ…

ಎಲೆನಾ : ಸ್ಪೇನಿನಲ್ಲಿ ಮಾತಾಡುವ ಭಾಷೆ ಯಾವುದು

ಮೇಘನಾ : ಸ್ಪಾನಿಷ್

ಎಲೆನಾ : ತಪ್ಪು ತಪ್ಪು…

ಎರಡು ವರ್ಷದ ಹಿಂದೆ ಬೆಂಗಳೂರೆಂಬ ದೊಡ್ಡ ಹಳ್ಳಿಯ ಜಯನಗರ ತಾಲೂಕಿನಲ್ಲಿಯೇ ೨೫ ವರ್ಷ ಮೊಳೆ ಹೊಡೆದುಕೊಂಡು ಕೂತಿದ್ದ ಹುಡುಗಿಗೆ ಏನೋ ಇಂಜಿನಿಯರಿಂಗ್ ಮಾಡಿದವರೆಲ್ಲರೂ ವಿದೇಶಕ್ಕೆ ಹೋಗುತ್ತಾರೆ ಎಂದು ಸುಮ್ಮನೆ ಸ್ನಾತಕೋತ್ತರ ಪದವಿಗೆ ಅಪ್ಲೈ ಮಾಡಿದ್ದವಳಿಗೆ ಬಾರ್ಸಿಲೋನಾ ಎಂಬ ಮಾಯಾನಗರಿಯಲ್ಲಿ ಓದೋದಕ್ಕೆ ಸೀಟು ಸಿಕ್ಕಿತ್ತು.

ಯಂತ್ರಗಳಿಗೆ ಭಾರತದ ಸಂಗೀತ ಪದ್ಧತಿಯನ್ನ ಕಲಿಸುವ ವಿಷಯದ ಮೇಲೆ. ಕಂಪ್ಯೂಟರಿಗೆ ಅರ್ಥವಾಗುವುದು ೧ ಅಥವಾ ೦, ಸಂಗೀತವನ್ನು ಮೊದಲು ಪೈಥಾನ್ ಕೋಡಿಗೆ ಬದಲಾಯಿಸಿ ಮತ್ತೆ ಅದನ್ನ ತರಂಗಕ್ಕೆ ತರ್ಜುಮೆ ಮಾಡಿ ಅವನ್ನ ೧ ಅಥವಾ ೦ ಗೆ ಇಳಿಸಿದರೆ ಯಂತ್ರಕ್ಕೆ ಅರ್ಥವಾಗುತ್ತದೆ. ಇದನ್ನ ಮಾಡೋದಕ್ಕೆ ಸಿಕ್ಕ ಸಮಯ ೨ ವರ್ಷ. ಅದರ ಜೊತೆ ಜೊತೆಗೆ ಸ್ನಾತಕೋತ್ತರ ಪದವಿ. ಯಮಹಾದಲ್ಲಿ ಕೆಲಸ.

ಪೂರ್ತಿ ಫೀಸ್ ಮಾಫಿ, ಓಡಾಡೋಕೆ ಪಾಸ್ ಉಚಿತ. ಇವಷ್ಟನ್ನು ಮಿಂಚಂಚೆಗೆ ಕಳಿಸಿ ೨ ತಿಂಗಳೊಳಗೆ ಬಂದು ಸೇರುವ ಸೂಚನೆ ಬಂದಿತ್ತು. ಬಾರ್ಸಿಲೋನವೆಂದರೆ ಸ್ಪೇನಿನಲ್ಲಿದೆ, ಅಲ್ಲಿ ಸ್ಪಾನಿಷ್ ಮಾತಾಡುತ್ತಾರೆ ಎಂಬ ಅರಿವಿದ್ದ ಹುಡುಗಿ ಹೊರಡುವ ತಯಾರಿಯಲ್ಲಿದ್ದಳು.

ಎಮೀಲಿಯಾ ಗೋಮೇಝ್  ಹುಡುಗಿಗೆ ಈಮೇಲ್ ಮಾಡಿ, ಹೆಣ್ಣುಮಕ್ಕಳು ನಮ್ಮಲ್ಲಿ ಸ್ನಾತಕೋತ್ತರ ಪದವಿ ಮಾಡೋದು ಬಹಳ ಕಡಿಮೆ, ಅದಕ್ಕೆ ನಿನಗೆಲ್ಲಾ ಸವಲತ್ತುಗಳನ್ನೂ ನೀಡಿದ್ದೇವೆ. ನಿನಗೆ ಬೇರೆ ಮಾಹಿತಿ ಬೇಕಾದರೆ ಎಲೆನಾಳನ್ನು ಸಂಪರ್ಕಿಸು, ಇದು ಇವಳ ಈಮೇಲ್ ಐಡಿ, ವೆಲ್ಕಮ್ ಟು ಬಾರ್ಸಾ ಎಂದು ಡಿಪಾರ್ಟ್ಮ್ಂಟ್ ಹೆಡ್ ಬಹಳ ಸೀರಿಯಸ್ಸಾಗಿ ಬರೆದಿದ್ದರು. ಹುಡುಗಿ ಆರಾಮಾಗಿ ಅರ್ಧಂಬರ್ಧ ಡುವೂಲಿಂಗೂವಿನಲ್ಲಿ ಕಲಿತ ಸ್ಪಾನಿಷಿನಲ್ಲಿ ಈಮೇಲ್ ಬರೆದಳು. ಆ ಈಮೇಲ್ ನ ಉತ್ತರ ಹುಡುಗಿಗೊಂದು ದೊಡ್ಡ ಚರಿತ್ರೆಯ ಪಾಠವನ್ನೇ ತೆರೆದಿಡುತ್ತದೆ ಎಂದು ಗೊತ್ತಿರಲ್ಲಿಲ್ಲ.

ಎಲೆನಾ ಬಹಳ ಒರಟಾಗಿ ಈಮೇಲ್ ಬರೆದಿದ್ದಳು, ಹುಡುಗಿ ನೀನು ನಿನಗೆ ಬರುವ ಇಂಗ್ಲೀಷಿನಲ್ಲಿಯೇ ಈಮೇಲ್ ಬರಿ, ನಾನು ಸ್ಪಾನಿಷ್ ಅಲ್ಲ, ನನ್ನ ಭಾಷೆ ಬೇರೆ. ನಾನು ನಿನಗೆ ಕೋರ್ಸಿನ ಮಾಹಿತಿ ಕೊಡುವ ಮೊದಲು, ನಮ್ಮ ನೆಲದ ಬಗ್ಗೆ ಹೇಳಬೇಕು, ಮತ್ತು ನಿನ್ನ ಈಮೇಲಿನ ಮೊದಲ ಪದದಲ್ಲಿ ಹೋಲಾ ಎಂದು ಬರೆದಿದ್ದೀಯಾ ಅದು ಹೋಲಾ ಅಲ್ಲಾ, ಓಲಾ, ಸಿಗೋಣ ಎಂದು ಬರೆದು ಕಳಿಸಿದ್ದಳು.

ಇದ್ಯಾವುದು ಕಟ್ಟರ್ ಜಾತಿಯದು ಎಂದು ಹುಡುಗಿ ಸುಮ್ಮನೆ ನಕ್ಕು ಏನೋ ಪಾಪ ಅಂತ ಅವರ ಭಾಷೇಲಿ ಬರೆದೆ, ನೋಡಿದ್ರೆ ಗಾಂಚಾಲಿ ಆಯ್ತು ಇನ್ನು ಇಂಗ್ಲೀಷಿನಲ್ಲಿಯೇ ಬರಿತೀನಿ ಎಂದು ನಕ್ಕು ಉದ್ದುದ್ದದ ಜಿ ಆರ್ ಈ ಪರೀಕ್ಷೆಗೆ ಕಲಿತಿದ್ದ ಎಲ್ಲ ಇಂಗ್ಲೀಷ್ ಪದಗಳನ್ನು ಉಪಯೋಗಿಸಿ ಈಮೇಲ್ ಬರೆದ ಹುಡುಗಿ ಅವಳ ಉತ್ತರಕ್ಕೆ ಕಾದಳು.

 

ಎಲೆನಾ ಅರ್ಥವಾಗದ ಭಾಷೆಯಲ್ಲಿ ಉತ್ತರ ಬರೆದಳು. ಹುಡುಗಿ ಅದನ್ನ ಗೂಗಲ್ಲಿನ ಟ್ರಾನ್ಸ್ ಲೇಟ್‍ಗೆ ಹಾಕಿದಾಗಲೇ ತಿಳಿದ್ದದ್ದು ಅದು ಕತಲಾನ್ ಭಾಷೆ ಎಂದು. ಗೂಗಲ್ ಸರ್ಚ್ ಅನ್ನ ಸರಿಯಾಗಿ ಉಪಯೋಗಿಸು ಎಂಬರ್ಥದಲ್ಲಿ ಮೈಲ್ ಬರೆದಿದ್ದಳು ಎಲೆನಾ. ಅವಳ ದೇಶಕ್ಕೆ ಹೋಗಬೇಕಾಗಿ ಬಂದದ್ದರಿಂದ ಇನ್ನು ಈ ಹಠ ಸಿಟ್ಟು ಕಡಿಮೆ ಮಾಡಿಕೊಂಡು ಏನ್ ಮಾಡಬೇಕು, ಈಗ ಕತಲಾನ್ ಕಲಿಯಬೇಕಾ ? ಎಂದು ಪ್ರಶ್ನೆ ಕಳಿಸಿದಾಗ ಇಲ್ಲ ನಮ್ಮ ಭಾಷೆಯೊಂದು ಇದೆ ಎಂದು ಗುರುತು ಹಿಡಿ ಅಷ್ಟೆ ನನಗೆ ಇಂಗ್ಲೀಷ್ ಚೆನ್ನಾಗಿಯೇ ಬರುತ್ತದೆ ಎಂದು ಬರೆದು ಹುಡುಗಿಗೆ ಕಳುಹಿಸಿ ಕತಲೂನ್ಯಾದ ಇತಿಹಾಸದ ಒಂದು ಸಣ್ಣ ಸ್ನಿಪೆಟ್ ಸಹ ಕಳಿಸಿದಳು.

ಇಲ್ಲಿಗೆ ಜಯನಗರದಲ್ಲಿ ಕೂತು ಬರೆಯುತ್ತಿದ್ದ ಹುಡುಗಿಗೆ ದೂರದ ಕತಲಾನಿನ ಕಷ್ಟಗಳ ಬಗ್ಗೆ ಅರಿವಾಗತೊಡಗಿತು. ನಮ್ಮ ಭಾಷೆಯೂ ಅದರ ನಂತರ ಬಂದ ಭಾಷೆಯ ದಾಳಿಗೆ ಒಳಗಾಗಿ ಹಂತ ಹಂತವಾಗಿ ನಾಶವಾಗುತ್ತಿದೆಯಲ್ಲ, ನಮ್ಮನ್ನೂ ನಮ್ಮ ಭಾಷೆಯಲ್ಲದವರು ಆಳುತ್ತಿದ್ದಾರಲ್ಲ, ನಮಗೂ ಅವರಷ್ಟು ಯಾಕೆ ಆತ್ಮ ಪ್ರೇಮವಿಲ್ಲ, ಯಾಕೆ ನಾವು ಸಾಂವಿಧಾನಿಕ ಹೋರಾಟ ಮಾಡುತ್ತಿಲ್ಲ, ಯಾಕೆ ಯಾಕೆ? ಎಂದು ಅಂದುಕೊಂಡೇ ಹುಡುಗಿ ಫ್ರಾಂಕ್ಫರ್ಟಿನ ವಿಮಾನ ಹತ್ತಿದ್ದಳು.

‍ಲೇಖಕರು avadhi

November 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. Anjali Ramanna

    ಚೆನ್ನಾಗಿ ಬರೀತೀಯಾ ಜಯನಗರದ ಹುಡುಗಿ
    ಹೀಗೇ ಬರೀತಿರು.
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ
  2. THANUJA DODDAMANI

    ಕಾಯ್ತಿದ್ದೆ ಮತ್ತೆ ಅಂಕಣಕ್ಕಾಗಿ ಚೆಂದದ ಬರಹ ಎಂದಿನಂತೆ …

    ಪ್ರತಿಕ್ರಿಯೆ
  3. ಕು.ಸ.ಮಧುಸೂದನ್ ರಂಗೇನಹಳ್ಳಿ

    ಮೊದಲ ಓದೇ ಕುತೂಹಲ ಮೂಡಿಸುವಂತೆ ಮಾಡಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: