ಇದು ಆಕೆಯ ಕಥೆ : ಝಣ ಝಣ ಕಾಂಚಾಣ

ಪ್ರಸಾದ್ ನಾಯ್ಕ್

4

ಇಷ್ಟು ವರ್ಷಗಳ ನಂತರವೂ ಶೀಲಾರನ್ನು ಅಪರಾಧಿಯ ಕಟಕಟೆಯಲ್ಲಿ ನಿಲ್ಲಿಸುವುದು ಸರಿಯೇ ಎಂಬುದು ಬಹಳಷ್ಟು ಮಂದಿಯ ಪ್ರಶ್ನೆಯಾಗಿರಬಹುದು.

ಆದರೆ ಅಪವಾದವೆನ್ನಿಸುವಂಥಾ ಕೆಲವೊಂದು ಪ್ರಕರಣಗಳಲ್ಲಿ ಇತಿಹಾಸವನ್ನು ಕೆದಕುವುದು ಅನಿವಾರ್ಯವಾಗಿಬಿಡುತ್ತದೆ. ಕೆಲ ವರ್ಷಗಳ ಹಿಂದೆ ಕೆನಡಾದ ಕುಖ್ಯಾತ ಸರಣಿಹಂತಕನಾಗಿದ್ದ ಪೌಲ್ ಬರ್ನಾರ್ಡೋ ಮತ್ತು ಆತನ ಪ್ರೇಯಸಿ ಕಾರ್ಲಾ ಹೋಮೋಲ್ಕಾರ ಬಗ್ಗೆ ಮಿನಿ ಸರಣಿಯೊಂದರನ್ನು ಬರೆಯುತ್ತಿದ್ದ ಅವಧಿಯಲ್ಲಿ ಹಲವು ದಾಖಲೆಗಳನ್ನು ಸುತ್ತಲೂ ರಾಶಿ ಹಾಕಿ ಕುಳಿತಿದ್ದ ನಾನು ನಿಜಕ್ಕೂ ದಂಗಾಗಿದ್ದೆ.

ಪೌಲ್ ಬರ್ನಾರ್ಡೋ ತಾನು ಕಾಲಿಟ್ಟಲ್ಲೆಲ್ಲಾ ಅದೆಷ್ಟೋ ಅತ್ಯಾಚಾರಗಳನ್ನು ಮಾಡಿದ್ದ. ತನ್ನ ಪ್ರೇಯಸಿಯ ಅಪ್ರಾಪ್ತ ವಯಸ್ಸಿನ ತಂಗಿಯನ್ನು ಅತ್ಯಾಚಾರ ನಡೆಸಿ ಸಾಯಿಸಿದ್ದಲ್ಲದೆ, ಇದರ ಹೊರತಾಗಿ ಇಬ್ಬರು ಹರೆಯದ ಹೆಣ್ಣುಮಕ್ಕಳನ್ನು ಬರ್ಬರವಾಗಿ ಹತ್ಯೆಗೈದಿದ್ದ. ಹೀಗೆ ಪೌಲೋ ಎಂಬ ವಿಕ್ಷಿಪ್ತ ಮನಸ್ಸಿನ ಯುವಕನು ಈ ರಕ್ತಸಿಕ್ತ ಕಥೆಯಲ್ಲಿ ಖಳನಾಗುವುದು ಸಹಜ. ಹಾಗೆಂದು ಈ ಪ್ರಕರಣಗಳಲ್ಲಿ ಪೌಲೋನ ಪ್ರೇಯಸಿಯಾಗಿದ್ದ ಕಾರ್ಲಾಳ ಪಾತ್ರವನ್ನೂ ಇಲ್ಲಿ ತಳ್ಳಿಹಾಕುವುದು ಅಷ್ಟು ಸುಲಭವಲ್ಲ.

ಪೌಲೋನ ಪ್ರೇಯಸಿಯಾಗಿದ್ದ ಕಾರ್ಲಾ ಹೊಮೋಲ್ಕಾ ತನ್ನ ಅಪ್ರಾಪ್ತೆ ಸಹೋದರಿಯನ್ನು ಪೌಲೋನ ದೇಹಸುಖಕ್ಕಾಗಿ ಸ್ವಇಚ್ಛೆಯಿಂದ ನೀಡಿದ್ದಳು. ಆ ಕರಾಳ ಕ್ರಿಸ್ಮಸ್ ಈವ್ ದಿನದಂದು ಒಡಹುಟ್ಟಿದ ತಂಗಿಯ ಅತ್ಯಾಚಾರಕ್ಕೆ ಮುನ್ನುಡಿಯನ್ನು ಬರೆಯುವ ಕಾರ್ಲಾಳ ಹುಡುಗಾಟವು ಬಾಲಕಿಯ ಆಕಸ್ಮಿಕ ಸಾವಿನಲ್ಲಿ ಅಂತ್ಯವಾಗಿರುತ್ತದೆ.

ಇನ್ನು ನಂತರ ನಡೆದಿದ್ದ ಉಳಿದೆರಡು ಕೊಲೆಗಳಲ್ಲೂ ಪೌಲೋನಿಗೆ ಎಲ್ಲಾ ರೀತಿಯಲ್ಲೂ ಕಾರ್ಲಾ ನೆರವಾಗಿದ್ದಳು. ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ ತನ್ನ ವಠಾರದ ಬಾಲಕಿಯೋರ್ವಳನ್ನು ಹರಟೆಯ ನೆಪದಲ್ಲಿ ನಿತ್ಯವೂ ಮನೆಗೆ ಆಹ್ವಾನಿಸುತ್ತಾ, ಏನೇನೋ ಅಮಲು ಪದಾರ್ಥಗಳನ್ನು ಆ ಮಗುವಿಗೆ ತಿನ್ನಿಸುತ್ತಾ ಪೌಲೋನ ವಿಕ್ಷಿಪ್ತತೆಗೆ ನಿರಂತರವಾಗಿ ನೀರೆರೆದಿದ್ದು ಇದೇ ಕಾರ್ಲಾ ಹೊಮೋಲ್ಕಾ ಎಂಬ ಸ್ಫುರದ್ರೂಪಿ ಬೆಡಗಿ.

ಅಸಲಿಗೆ ಕಾರ್ಲಾ-ಪೌಲೋ ಜೋಡಿಯು ವ್ಯವಸ್ಥಿತವಾಗಿ ವೀಡಿಯೋ ಚಿತ್ರೀಕರಣ ಮಾಡಿ ಇರಿಸಿಕೊಂಡಿದ್ದ ಇಂಥಾ ಹಲವು ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯ ವೀಡಿಯೋಗಳು ಅದೆಷ್ಟು ಬರ್ಬರವಾಗಿದ್ದವೆಂದರೆ ಮುಂದೆ ನ್ಯಾಯಾಲಯವು ಅವೆಲ್ಲವನ್ನೂ ನಾಶಗೊಳಿಸುವಂತೆ ಆದೇಶ ನೀಡಿತ್ತು. ವಿಶ್ವದಾದ್ಯಂತ ಭಾರೀ ಕುಖ್ಯಾತಿಯನ್ನು ಪಡೆದಿದ್ದ ಈ ಪ್ರಕರಣದಲ್ಲಿ ಪೌಲೋನಷ್ಟೇ ಕಾರ್ಲಾ ಹೋಮೋಲ್ಕಾಳೂ ಅಪರಾಧಿ ಎಂಬುದು ಅಂಗೈ ಮೇಲಿರುವ ಹುಣ್ಣಿನಷ್ಟೇ ಸ್ಪಷ್ಟ.

ಆದರೆ ವಿಚಿತ್ರ ಸಂಗತಿಯೆಂದರೆ ಪ್ಲೀ ಬಾರ್ಗೈನ್ (Plea Bargain) ಮೂಲಕ ಕಾನೂನಿಗೆ ಶರಣಾಗುವ ಕಾರ್ಲಾ ಹೊಮೋಲ್ಕಾ ತನ್ನ ಅಪರಾಧಗಳಿಗೆ ಕೆಲ ವರ್ಷಗಳ ಶಿಕ್ಷೆಯನ್ನಷ್ಟೇ ಪಡೆದುಕೊಂಡು ಪಾರಾಗಿರುತ್ತಾಳೆ.

ಅಮೆರಿಕಾ ಸೇರಿದಂತೆ ಹಲವು ದೇಶಗಳ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಪ್ಲೀ ಬಾರ್ಗೈನ್ ಎಂಬುದು ಒಂದು ರೀತಿಯಲ್ಲಿ ಎರಡಲಗಿನ ಕತ್ತಿ. ವಿಚಾರಣೆ ಮತ್ತು ನ್ಯಾಯಾಲಯಗಳ ಪ್ರಕ್ರಿಯೆಗಳು ವಿನಾಕಾರಣ ದೀರ್ಘಾವಧಿಗೆ ಎಳೆಯುವುದನ್ನು ತಪ್ಪಿಸಲು ಅಪರಾಧಿ ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವೆ ನಡೆಯುವ ಬುದ್ಧಿವಂತಿಕೆಯ ಕಾನೂನುಬದ್ಧ ಚೌಕಾಶಿಯಿದು.

ಪ್ಲೀ ಬಾರ್ಗೈನ್ ಗಳಲ್ಲಿ ಹಲವು ವಿಧಗಳಿದ್ದರೂ ಸಾಮಾನ್ಯವಾಗಿ ಅಪರಾಧಿಯೊಬ್ಬ ತನ್ನೆಲ್ಲಾ ತಪ್ಪುಗಳನ್ನು ಸ್ವಇಚ್ಛೆಯಿಂದ ಒಪ್ಪಿಕೊಂಡು, ವಿಚಾರಣೆಗೆ ತಾನು ನೀಡುವ ಬೇಷರತ್ ಸಹಕಾರದ ಬದಲಾಗಿ ತನ್ನ ಶಿಕ್ಷೆಯ ಅವಧಿಯನ್ನು ಕಮ್ಮಿ ಮಾಡಿಕೊಳ್ಳುವ ಒಂದು ನಡೆ ಎಂದು ಸರಳವಾಗಿ ಹೇಳಬಹುದು. ಕಾರ್ಲಾ ಹೊಮೋಲ್ಕಾ ತನ್ನ ಇಂಥದ್ದೇ ಬುದ್ಧಿವಂತಿಕೆಯ ನಡೆಯಿಂದಾಗಿ ಕೆಲ ವರ್ಷಗಳ ಶಿಕ್ಷೆಯನ್ನಷ್ಟೇ ಪಡೆದುಕೊಂಡು ಪಾರಾಗಿದ್ದಳು. ಇದಕ್ಕೆ ಕೆನಡಿಯನ್ ಜನತೆಯಿಂದ ಭಾರೀ ವಿರೋಧಗಳೂ ಬಂದಿದ್ದವೆಂದು ಓದಿದ ನೆನಪು. ಪೌಲೋ ಬರ್ನಾರ್ಡೋ ಮಾತ್ರ ಇಂದಿಗೂ ಸೆರೆಮನೆಯಲ್ಲಿ ಕೊಳೆಯುತ್ತಿದ್ದಾನೆ.

ಇತ್ತ ರಜನೀಶಪುರಂ ಗಲಾಟೆಯಲ್ಲಿ ನಡೆದಿದ್ದ ಸರಣಿ ಅಪರಾಧಗಳಿಗೆ ಮತ್ತು ಇವೆಲ್ಲದರಲ್ಲೂ ನೇರ ಪಾತ್ರವಿದ್ದ ಓಶೋರ ಆಪ್ತ ಕಾರ್ಯದರ್ಶಿ ಆನಂದ್ ಶೀಲಾರ ವಿಚಾರದಲ್ಲೂ ಪ್ಲೀ ಬಾರ್ಗೈನ್ ಕಸರತ್ತುಗಳು ವರವಾಗಿ ಪರಿಣಮಿಸಿದ್ದವು. ಈ ಮೊದಲೇ ಹೆಸರಿಸಿರುವ ಅಪರಾಧಗಳನ್ನು ಸೇರಿದಂತೆ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಮತ್ತೊಂದು ಪ್ರಕರಣವೆಂದರೆ ಬ್ಯಾಕ್ಟೀರಿಯಾ ದಾಳಿ ಪ್ರಕರಣ.

ಶೀಲಾರ ತಂಡವು ಕೌಂಟಿಯ ಕೆಲ ರೆಸ್ಟೊರೆಂಟ್ ಗಳಿಗೆ ತೆರಳಿ ಸಲಾಡ್ ಬಾರ್ ಗಳ ಮೇಲೆ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳನ್ನು ಕೃತಕವಾಗಿ ಹಬ್ಬಿಸಿದ್ದ ಪರಿಣಾಮವಾಗಿ ಊರಿಗೂರೇ ಖಾಯಿಲೆ ಬಿದ್ದಿತ್ತು. ಇದರಿಂದಾಗಿ ಶಹರದ ಸುಮಾರು ಏಳುನೂರ ಐವತ್ತು ಮಂದಿ ಹಟಾತ್ತನೆ ವಿಚಿತ್ರ ಸೋಂಕಿಗೀಡಾಗಿ ಸ್ಥಳೀಯರಲ್ಲಿ ರಹಸ್ಯಮಯ, ಭಯಮಿಶ್ರಿತ ಗೊಂದಲವೊಂದು ಮನೆ ಮಾಡಿದ್ದು ಸತ್ಯ.

ತಮ್ಮ ಅಸ್ತಿತ್ವವನ್ನು ಸದೃಢಗೊಳಿಸುವ ಭರದಲ್ಲಿ ಸ್ಥಳೀಯ ಚುನಾವಣೆಯೊಂದನ್ನು ಗೆಲ್ಲುವ ಹುಕಿಗೆ ಬಿದ್ದಿದ್ದ ಕೆಲ ರಜನೀಶಪುರಂ ಅನುಯಾಯಿಗಳು ಊರಿಗೂರೇ ಖಾಯಿಲೆ ಬೀಳುವಂತೆ ಮಾಡುವಂತೆ ಸಂಚು ಹೂಡಿದ್ದು ಯಾವ ರೀತಿಯಲ್ಲೂ ಚಿಕ್ಕ ಅಪರಾಧವಾಗಿರಲಿಲ್ಲ. ಈ ನಿಟ್ಟಿನಲ್ಲಿ ಆನಂದ್ ಶೀಲಾರನ್ನೂ ಸೇರಿದಂತೆ ಅವರ ಆಪ್ತವಲಯದ ಹಲವರಿಗೆ ಕಠಿಣ ಶಿಕ್ಷೆಗಳಾಗುವುದು ನಿರೀಕ್ಷಿತವೇ ಆಗಿತ್ತು.

ಆದರೆ ರಜನೀಶಪುರಂಗೆ ವಿದಾಯ ಹೇಳಿದ ನಂತರ ಜೀವನೋಪಾಯದ ನೆಪದಲ್ಲಿ ಜರ್ಮನಿ, ಪೋರ್ಚುಗಲ್, ಸ್ವಿಟ್ಜರ್ ಲ್ಯಾಂಡ್ ಎನ್ನುತ್ತಾ ನಿರಂತರವಾಗಿ ವಲಸೆ ಹೋಗುತ್ತಿದ್ದ ಶೀಲಾ ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆಗಳನ್ನು ತನ್ನ ಲಾಭಕ್ಕೆ ಅನುಕೂಲವಾಗುವಂತೆ ತಿರುಚಲೂ ಪ್ರಯತ್ನಿಸಿದ್ದರು. ಇನ್ನು ಎದುರಿಸಲಾಗದ ಗಂಭೀರ ಪ್ರಕರಣಗಳನ್ನು ‘ಪ್ಲೀ ಬಾರ್ಗೈನ್’ ಮೂಲಕ ತಿಳಿಯಾಗಿಸುವಲ್ಲಿ ಶೀಲಾರ ಭಗೀರಥ ಪ್ರಯತ್ನಗಳು ಮುಂದುವರಿದಿತ್ತು.

ಅಂತಿಮವಾಗಿ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆಯು ತೀರ್ಪಾಗಿ ಘೋಷಣೆಯಾದರೂ ಮೂವತ್ತೊಂಭತ್ತು ತಿಂಗಳಲ್ಲೇ ಪರೋಲ್ ಮೂಲಕ ಬಿಡುಗಡೆಯಾಗಿ ಹೊರಬಂದಿದ್ದರು ಮಾ ಆನಂದ್ ಶೀಲಾ. ಫೆಡೆರಲ್ ಕಾರಾಗೃಹದಲ್ಲಿ ಇಪ್ಪತ್ತು ವರ್ಷಗಳ ಜೈಲುಶಿಕ್ಷೆಯೊಂದಿಗೆ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಡಾಲರ್ ಗಳ ಭಾರೀ ದಂಡವನ್ನೂ ನ್ಯಾಯಾಲಯವು ಶೀಲಾರ ಮೇಲೆ ಹೇರಿತ್ತು ಎಂಬುದು ಗಮನಾರ್ಹ ಅಂಶ.

ಒರೆಗಾನ್ ಉತ್ತುಂಗದ ದಿನಗಳಲ್ಲಿ ಓಶೋ ಕಮ್ಯೂನಿನ ನಾಯಕಿಯಾಗಿದ್ದ ಮಾ ಆನಂದ್ ಶೀಲಾ ಮತ್ತು ಅವರ ಖಾಸಾ ತಂಡವು ಇಂಥಾ ಹಲವು ಅಪರಾಧಗಳನ್ನು ಬೆನ್ನುಬೆನ್ನಿಗೆ ನಡೆಸಲು ಮತ್ತು ನಿರಂತರವಾಗಿ ಕಾನೂನು ಸಮರದಲ್ಲಿ ತೊಡಗಿಕೊಳ್ಳಲು ಅದೆಷ್ಟು ಹಣವನ್ನು ವ್ಯಯಿಸಿರಬಹುದು ಎಂಬುದನ್ನು ಯೋಚಿಸಿದರೇನೇ ಗಾಬರಿಯಾಗುತ್ತದೆ.

ಓಶೋ ಸಾಮ್ರಾಜ್ಯಕ್ಕೆ ಹಲವಾರು ಮೂಲಗಳಿಂದ ಸಂಪತ್ತು ಹರಿದು ಬರುತ್ತಿದ್ದಿದ್ದೇನೋ ಸರಿ. ಆದರೆ ಅನವಶ್ಯಕ ಖರ್ಚುಗಳೂ ಸಾಕಷ್ಟಿದ್ದವು ಎಂಬುದು ಶೀಲಾರ ಅಂಬೋಣ. ಇಂಥಾ ಖರ್ಚುಗಳ ವಿಚಾರಕ್ಕೆ ಬಂದರೆ ಶೀಲಾ ಮುಖ್ಯವಾಗಿ ನೆನೆಸಿಕೊಳ್ಳುವುದು ಓಶೋರಿಗಿದ್ದ ಶಾಪಿಂಗ್ ಮೋಹ. ಅದರಲ್ಲೂ ದುಬಾರಿ ಕೈಗಡಿಯಾರಗಳು ಮತ್ತು ರೋಲ್ಸ್-ರಾಯ್ಸ್ ಕಾರುಗಳ ಸಂಗ್ರಹದ ಬಗ್ಗೆ ಅವರಿಗಿದ್ದ ವಿಚಿತ್ರ ಖಯಾಲಿ.

ಓಶೋರ ದುಬಾರಿ ಕೈಗಡಿಯಾರಗಳ ಬಗ್ಗೆ ಹೇಳುತ್ತಾ ಕೈಗಡಿಯಾರವೊಂದಕ್ಕೆ ತಾನು ಯಾವತ್ತೂ ಇಪ್ಪತ್ತು ಸಾವಿರ ಡಾಲರ್ ಗಿಂತ ಕಮ್ಮಿ ವ್ಯಯಿಸಿದ್ದೇ ಇಲ್ಲ ಎಂದು ದಾಖಲಿಸಿದ್ದಾರೆ ಶೀಲಾ. ಹಾಗೆಂದು ಐಷಾರಾಮಿ ವಸ್ತುಗಳ ಬಗ್ಗೆ ಓಶೋರಿಗಿದ್ದ ಮೋಹವು ಕೇವಲ ತನ್ನ ತೃಪ್ತಿಗಷ್ಟೇ ಸೀಮಿತವಾಗಿರಲಿಲ್ಲ. ಆಗಾಗ ತಮ್ಮ ಆಪ್ತರಿಗೆ ಅವರು ದುಬಾರಿ ಉಡುಗೊರೆಗಳನ್ನು ಕೈಯೆತ್ತಿ ಕೊಡುವ ರೂಢಿಗಳೂ ಇದ್ದವಂತೆ.

ಆದರೆ ತಾನು ನೀಡಿರುವ ದುಬಾರಿ ಉಡುಗೊರೆಯ ಮಾರುಕಟ್ಟೆ ಮೌಲ್ಯವೇನು ಎಂಬುದನ್ನು ಹೇಳಿಯೇ ಅವರು ಉಡುಗೊರೆಗಳನ್ನು ನೀಡುತ್ತಿದ್ದರು. ತಾನು ಓಶೋರಿಗೆ ಅದೆಷ್ಟು ಪ್ರಿಯವಾದ ವ್ಯಕ್ತಿ ಎಂಬ ಭ್ರಮೆಯನ್ನು ಪಡೆದುಕೊಳ್ಳುವವರಲ್ಲಿ ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿರಬಹುದು. ನಿಸ್ಸಂದೇಹವಾಗಿ ಶೀಲಾ ಕೂಡ ಇಂಥಾ ಫಲಾನುಭವಿಗಳಲ್ಲೊಬ್ಬರು. ತನ್ನ ಉಪಯೋಗಕ್ಕಾಗುವ ವ್ಯಕ್ತಿಗಳ ಅಹಂ ಅನ್ನು ಕಾಲಕಾಲಕ್ಕೆ ನೇವರಿಸುತ್ತಾ, ಇಂಥಾ ಮಂದಿಗಳನ್ನು ಸಂತೃಪ್ತರಾಗಿಡುವ ಕಲೆಯು ಓಶೋರಿಗೆ ಕರಗತವಾಗಿತ್ತು.

ಇಷ್ಟೆಲ್ಲಾ ಇದ್ದರೂ ಲೋಕದ ಕಣ್ಣಿಗೆ ಮಾತ್ರ ತಾನು ಸಂಪತ್ತಿನ ಮೋಹದಿಂದ ದೂರವಿರುವಂತೆ ಓಶೋ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಕಾರಣದಿಂದಾಗಿಯೇ ತನ್ನ ರತ್ನಖಚಿತ ವಸ್ತುಗಳು ಮತ್ತು ವಿಲಾಸಿ ಕಾರುಗಳನ್ನು ಕ್ರಮವಾಗಿ ದ ರಜನೀಶ್ ಜ್ಯುವೆಲ್ಲರಿ ಮ್ಯಾನೇಜ್ಮೆಂಟ್ ಟ್ರಸ್ಟ್ ಮತ್ತು ರಜನೀಶ್ ಕಾರ್ ಕಲೆಕ್ಷನ್ ಟ್ರಸ್ಟ್ ಎಂಬ ಸಂಸ್ಥೆಗಳ ಹೆಸರಿನಡಿಯಲ್ಲಿಟ್ಟು ತನಗೂ, ಇವುಗಳಿಗೂ ಯಾವ ಸಂಬಂಧಗಳೂ ಇಲ್ಲವೆನ್ನುವಂತಹ ಭ್ರಮೆಯನ್ನು ಸೃಷ್ಟಿಸಿದ್ದರು ಓಶೋ ರಜನೀಶ್.

ಹೀಗಾಗಿ ಕಾನೂನು ನೆಲೆಯಲ್ಲಿ ನೋಡಿದರೆ ಈ ವಸ್ತುಗಳೆಲ್ಲಾ ಓಶೋರವರ ಟ್ರಸ್ಟಿನ ಆಸ್ತಿಗಳೇ ಹೊರತು ಅವರ ಸ್ವಂತದ್ದಲ್ಲ ಎಂದಾಗುತ್ತದೆ. ಇನ್ನು ಅಪರಾತ್ರಿಯ ಹೊತ್ತಿನಲ್ಲಿ ರಜನೀಶಪುರಂನಿಂದ ಬರ್ಮುಡಾಗೆ ತನ್ನ ಖಾಸಗಿ ವಿಮಾನವೊಂದರಲ್ಲಿ ರಹಸ್ಯವಾಗಿ ಪಲಾಯನಗೈಯುತ್ತಿದ್ದ ಓಶೋರನ್ನು ಅಮೆರಿಕನ್ ಪೊಲೀಸರು ಬಂಧನಕ್ಕೊಳಪಡಿಸಿ, ವಶಪಡಿಸಿಕೊಂಡಿದ್ದ ವಸ್ತುಗಳಲ್ಲಿ ಹಲವು ದುಬಾರಿ ಕೈಗಡಿಯಾರಗಳಿದ್ದ ಒಂದು ಪುಟ್ಟ ಡಬ್ಬವೂ ಇದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಆದರೆ ಇತ್ತ ಆಶ್ರಮದಲ್ಲಿ ದೀರ್ಘಾವಧಿ ನೆಲೆಯೂರಿದ್ದ ಓಶೋ ಅನುಯಾಯಿಗಳ ಆರ್ಥಿಕ ಸ್ಥಿತಿ ಹೇಗಿತ್ತು? ಹೇಳುತ್ತಾ ಹೋದರೆ ಅದುವೇ ಒಂದು ದುರಂತ ಕಥೆಯಾಗಿಬಿಡುತ್ತದೆ. ಅಸಲಿಗೆ ಓಶೋ ಸಾಮ್ರಾಜ್ಯದ ಮುಖ್ಯ ಆಡಳಿತಾತ್ಮಕ ಹುದ್ದೆಗಳನ್ನು ನಿಭಾಯಿಸುತ್ತಿದ್ದ ಶೀಲಾರಂಥಾ ಕೆಲ ಸನ್ಯಾಸಿನಿಯರು ಮತ್ತು ಓಶೋ ಆಪ್ತವಲಯದಲ್ಲಿದ್ದ ಪ್ರಭಾವಿ ಅನುಯಾಯಿಗಳು ತಮ್ಮದೇ ಆದ ವಿಲಾಸ ಮತ್ತು ಶೋಕಿಗಳನ್ನು ಹೊಂದಿದ್ದು ಸತ್ಯ.

ಆದರೆ ಉಳಿದ ಬಹುತೇಕರು ಆರ್ಥಿಕವಾಗಿಯೂ, ಭಾವನಾತ್ಮಕವಾಗಿಯೂ ಮೂರಾಬಟ್ಟೆಯಾಗಿದ್ದರು. ಒರೆಗಾನ್ ಪ್ರದೇಶದ ರಜನೀಶಪುರಂ ನಿರ್ಮಾಣದ ಅವಧಿಯಲ್ಲಿ ಅದೆಷ್ಟೋ ಮಂದಿ ಓಶೋ ಅನುಯಾಯಿಗಳು ತಮ್ಮ ಸ್ವಇಚ್ಛೆಯಿಂದ ಅಥವಾ ಸಮುದಾಯದ ಪ್ರಮುಖರ ಒತ್ತಡಕ್ಕೆ ಮಣಿದು ತಮ್ಮ ಆಸ್ತಿ, ಉಳಿತಾಯಗಳೆಲ್ಲವನ್ನೂ ಇಲ್ಲಿ ಸೇವೆಯ ರೂಪದಲ್ಲಿ ಧಾರೆಯೆರೆದಿದ್ದರು.

ಇನ್ನು ಸನ್ಯಾಸಿಯಾಗಿ ದೀಕ್ಷೆಯನ್ನು ಪಡೆದುಕೊಳ್ಳುವಾಗ ತಮ್ಮ ಅಸಲಿ ಹೆಸರನ್ನೂ ಸೇರಿದಂತೆ, ಹಿಂದಿನ ಲೌಕಿಕ ಸಂಬಂಧಗಳೆಲ್ಲವನ್ನೂ ಸಂಪೂರ್ಣವಾಗಿ ಕಳಚಿಕೊಂಡು ಬರಬೇಕಿರುವುದು ಕಡ್ಡಾಯವಾಗಿದ್ದರಿಂದ ರಜನೀಶಪುರಂ ಅಂತ್ಯವಾಗುತ್ತಿದ್ದಾಗ ಇವರಲ್ಲಿ ಬಹುತೇಕರು ಆರ್ಥಿಕ ಮತ್ತು ಭಾವನಾತ್ಮಕ ನೆಲೆಯಲ್ಲಿ ದಿವಾಳಿಯಾಗಿದ್ದು ಘೋರ ವಿಪರ್ಯಾಸ.

1981 ರಲ್ಲಿ ಓಶೋ ರಜನೀಶರು ಹಠಾತ್ತನೆ ಪುಣೆಯಿಂದ ಅಮೆರಿಕಾಗೆ ಮತ್ತು 1985 ರಲ್ಲಿ ಏಕಾಏಕಿ ಅಮೆರಿಕಾದಿಂದ ಬರ್ಮುಡಾಗೆ ವಲಸೆ ಹೋದಾಗ ಓಶೋ ಕಮ್ಯೂನಿನ ಅನುಯಾಯಿಗಳು ಅಕ್ಷರಶಃ ಅನಾಥರಾಗಿದ್ದು ಈ ಕಾರಣದಿಂದಲೇ. ಖಾಲಿ ಜೇಬು ಮತ್ತು ಹೊರಜಗತ್ತಿನೊಂದಿಗಿಲ್ಲದ ಭಾವನಾತ್ಮಕ ಸಂಬಂಧಗಳು ಇವರೆಲ್ಲರನ್ನೂ ಹತಾಶೆಯಲ್ಲಿ ದೂಡಿತ್ತು. ಸಹಜವಾಗಿಯೇ ಇಂಥಾ ಅನಿರೀಕ್ಷಿತ, ನಾಚಿಕೆಗೇಡು ಬೆಳವಣಿಗೆಗಳಿಂದಾಗಿ ಈ ಅಮಾಯಕರಿಗೆ ಬರಸಿಡಿಲು ಬಡಿದಂತಾಗಿತ್ತು.

ಜರ್ಮನಿಗೆ ತೆರಳಿದ ಶೀಲಾ ಮತ್ತು ಬರ್ಮುಡಾಗೆ ತೆರಳುತ್ತಿದ್ದ ಅವಧಿಯಲ್ಲಿ ಬಂಧನಕ್ಕೊಳಗಾಗಿದ್ದ ಓಶೋರ ನಾಯಕತ್ವದ ಅನುಪಸ್ಥಿತಿಯಲ್ಲಿ ರಜನೀಶಪುರಂ ಎಂಬ ಬದಲಿ ಜಗತ್ತಿಗೆ ಅರ್ಥವೇ ಇರಲಿಲ್ಲ. ಹೀಗೆ ಕನಸಿನ ಸಾಮ್ರಾಜ್ಯವೊಂದನ್ನು ಕಟ್ಟುವ ಇಂಥದ್ದೊಂದು ಮಹಾಪ್ರಯೋಗದಲ್ಲಿ ಎಲ್ಲಾ ರೀತಿಯಲ್ಲೂ ದಯನೀಯ ಸೋಲನ್ನುಂಡಿದ್ದು ಮಾತ್ರ ರಜನೀಶಪುರಂನಲ್ಲಿದ್ದ ಸಾಮಾನ್ಯ ಅನುಯಾಯಿಗಳು. ಬೇರ್ಯಾವ ಪರಿಹಾರಗಳೂ ಕಾಣದೆ ಅಂತಿಮವಾಗಿ ರಜನೀಶಪುರಂನಿಂದ ಗಂಟುಮೂಟೆ ಕಟ್ಟಿ ಹೊರಡಲು ಇವರೆಲ್ಲಾ ಹೊರಟುನಿಂತಿದ್ದು ಈ ಹಂತದಲ್ಲೇ.

ಓಶೋ ರಜನೀಶರ ಕನಸು ನವಮಾನವನ ನಿರ್ಮಾಣದ್ದಾಗಿತ್ತು. ಅದು ಖುಷಿ-ನಗು-ಸಂತಸಗಳಿಂದ ಸದಾ ಕಂಗೊಳಿಸುತ್ತಿದ್ದ, ಸ್ವಾತಂತ್ರ್ಯವನ್ನು ಇನ್ನಿಲ್ಲದಂತೆ ವಿಜೃಂಭಿಸುತ್ತಿದ್ದ ಹೊಸ ಬಗೆಯ ಮಾನವ. ಹೀಗಾಗಿಯೇ ಅವರು ತಮ್ಮ ಸನ್ಯಾಸಿನಿಯರನ್ನು ನಿಯೋ ಸನ್ಯಾಸಿನ್ ಗಳೆಂದು ಕರೆದಿದ್ದರು. ಹಾಗಿದ್ದರೆ ಓಶೋ ರಜನೀಶರ ಜ್ಞಾನ, ಆನಂದ್ ಶೀಲಾರ ಮಹಾತ್ವಾಕಾಂಕ್ಷೆ ಮತ್ತು ಸಾವಿರಾರು ಅನುಯಾಯಿಗಳ ನಿರಂತರ ಶ್ರಮಗಳೇಕೆ ವಿಫಲವಾದವು? ನವಮಾನವನ ನಿರ್ಮಾಣವು ಹಾಗಿರಲಿ. ನಾಲ್ಕೇ ನಾಲ್ಕು ವರ್ಷಗಳಲ್ಲಿ ರಜನೀಶಪುರಂ ಎಂಬ ಮಹಾತ್ವಾಕಾಂಕ್ಷಿ ಪ್ರಾಜೆಕ್ಟ್ ಅದೇಕೆ ಹಳಿತಪ್ಪಿ ಹೋಯಿತು?

ಉತ್ತರಿಸಲು ಓಶೋ ಇಂದು ಬದುಕಿಲ್ಲ. ಶೀಲಾರ ಬಳಿ ಸಮರ್ಥನೆಗಳಿಲ್ಲ. ಇನ್ನು ರಜನೀಶಪುರಂ ಎಂಬ ಗತವೈಭವವು ಅಪರಾಧ ಸಂಬಂಧಿ ಸರಕಾರಿ ಕಡತಗಳಲ್ಲಿರುವ ಒಂದು ಕರಾಳ ನೆನಪು ಮಾತ್ರ.

| ಇನ್ನುಳಿದದ್ದು ನಾಳೆಗೆ । 

‍ಲೇಖಕರು avadhi

November 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: