ಜಗ್ಗಿ ಇವತ್ತು ಅಕ್ಕೈ ಆಗಿದ್ದಾರೆ..

ಮಾದರಿ ‘ಮಹಿಳೆ’ ಅಕ್ಕೈ

ಬಸು ಮೇಗಲಕೇರಿ

ನೋಡಿದಾಕ್ಷಣ ನಗುವ ಕಪ್ಪುಸುಂದರಿ ಅಕ್ಕೈ ಪದ್ಮಶಾಲಿ ಮದುವೆಯಾಗಿದ್ದಾರೆ.

ಹುಟ್ಟಿನಿಂದ ಹುಡುಗನಾಗಿ, ಬೆಳೆಯುತ್ತ ಬೆಡಗಿಯಾಗಿ ಪರಿವರ್ತನೆಯಾದ ತೃತೀಯಲಿಂಗಿ ಅಕ್ಕೈ, ವಾಸುದೇವ್ ರನ್ನು ವರಿಸಿದ್ದಾರೆ. ನಮ್ಮದೂ ಒಂದು ಕುಟುಂಬವಾಗಬೇಕು, ನಾವೂ ಈ ಸಮಾಜದ ಭಾಗವಾಗಬೇಕು ಎಂದು ಬಯಸುವ ಈ ಅಪರೂಪದ ದಂಪತಿಗೆ ಮೊದಲು ಅಭಿನಂದಿಸೋಣ.

ಅಕ್ಕೈ- ವಾಸುದೇವ್ ಮದುವೆ ಜನವರಿ 20, 2017ರಂದು ಬೆಂಗಳೂರಿನಲ್ಲಿ ಜರುಗಿತು. ಎರಡೂ ಕುಟುಂಬದವರು, ಸ್ನೇಹಿತರು ಮತ್ತು ಹಿತೈಷಿಗಳ ಭಾಗವಹಿಸಿದ್ದರು. ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು ಮುಂದಾಗಿ, ಜಾಗತಿಕ ಶಾಂತಿಮಂತ್ರ ಬೋಧಿಸಿ, ಸರಳವಾಗಿ ಮದುವೆ ಮಾಡಿಸಿದ್ದರು.

ಜಾತಿ-ಧರ್ಮಗಳನ್ನು ಮೀರಿದ, ಐತಿಹಾಸಿಕ ಮದುವೆ. ಅದಾಗಿ ಒಂದು ವರ್ಷದ ನಂತರ, ಇದೇ ಜನವರಿ 23ರಂದು, ಕೆ.ಆರ್.ಪುರಂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಮದುವೆಯನ್ನು ಕಾನೂನುಬದ್ಧಗೊಳಿಸಲು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಲೈಂಗಿಕ ವಿಚಾರವನ್ನು ಬಹಿರಂಗವಾಗಿ ಮಾತನಾಡುವುದು ಮಡಿವಂತರಿಗೆ ಮುಜುಗರದ ವಿಷಯ. ಅಂಥದರಲ್ಲಿ ತೃತೀಯಲಿಂಗಿಗಳು ವಿವಾಹವಾಗುವುದುಂಟೆ?

ಸಲಿಂಗಿಗಳು ಸಂಬಂಧ ಹೊಂದುವುದನ್ನು ಅಪರಾಧ ಮತ್ತು ಅನೈಸರ್ಗಿಕವೆಂದು ಸೆಕ್ಷನ್ 377 ಕಾಯ್ದೆ ಹೇಳುತ್ತದೆ. ದೆಹಲಿ ಹೈಕೋರ್ಟ್ ಕೂಡ ಸಲಿಂಗ ಸಂಬಂಧವನ್ನು ಅಪರಾಧವೆಂದೇ ಪರಿಗಣಿಸಿ ತೀರ್ಪಿತ್ತಿದೆ. ಸಮಾಜವಂತೂ ತೃತೀಯಲಿಂಗಿಗಳನ್ನು ಪ್ರಾಣಿಗಳಿಗೂ ಕಡೆಯಾಗಿ ಕಂಡು ನಿರ್ಲಕ್ಷಿಸಿದೆ.

ಮನುಷ್ಯರನ್ನು ಮನುಷ್ಯರನ್ನಾಗಿ ನೋಡದ ಇಂತಹ ಕೊಳಕು ವ್ಯವಸ್ಥೆಯಲ್ಲಿ, ತೃತೀಯಲಿಂಗಿ ಅಕ್ಕೈ ಪದ್ಮಶಾಲಿಯನ್ನು ಮದುವೆಯಾದ ವಾಸುದೇವ್- ನಿಜಕ್ಕೂ ಅಸಲಿ ಹೀರೋ. ಇದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲಿ ಹೊಸ ಹುಟ್ಟಿಗೆ ನಾಂದಿಯಾಡಿದೆ. ನಾವೂ ಈ ಸಮಾಜದ ಒಂದು ಭಾಗ, ಎಲ್ಲರಂತೆ ಸಹಜವಾಗಿ ಸಮಾನವಾಗಿ ಘನತೆ ಗೌರವಗಳೊಂದಿಗೆ ಬದುಕಲಿಕ್ಕೆ ನಮಗೂ ಹಕ್ಕಿದೆ ಎಂಬುದನ್ನು ಈ ಮದುವೆ ಸಾಬೀತುಪಡಿಸಿದೆ. ಮತ್ತಷ್ಟು ಜನರನ್ನು ಪ್ರೇರೇಪಿಸಿದೆ.

ಹಾಗೆ ನೋಡಿದರೆ, 2012ರಲ್ಲಿಯೇ ಮನೆಯವರ ಒಪ್ಪಿಗೆ ಪಡೆದು ಕಾನೂನುಬದ್ಧವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾದ ಹಿರಿಮೆಗೆ ಅಕ್ಕೈ ಪಾತ್ರರಾಗಿದ್ದರು. ಆಶ್ಚರ್ಯಕರ ಸಂಗತಿ ಎಂದರೆ, ಅಕ್ಕೈ ಅವರ ಅಪ್ಪ-ಅಮ್ಮ ಮೇಲ್ಜಾತಿಯವರಲ್ಲ, ಶ್ರೀಮಂತರಲ್ಲ, ವಿದ್ಯಾವಂತರಲ್ಲ.

ಅಪ್ಪನದು ಮಿಲಿಟರಿಯಲ್ಲಿ ಪುಟ್ಟ ಕೆಲಸ. ತಾಯಿ ಸಂಸಾರ ಸರಿದೂಗಿಸಲು ಟೈಲರಿಂಗ್ ಮಾಡುತ್ತಿದ್ದರು. ಮೂವರು ಮಕ್ಕಳು. ಮೂವರಲ್ಲಿ ಅಕ್ಕ ಮತ್ತು ತಮ್ಮನ ನಡುವಿನ ಜಗದೀಶನೇ ಅಕ್ಕೈ. ಬಡ ದಲಿತ ಕುಟುಂಬ. ಒಂದಿದ್ದರೆ ಒಂದಿಲ್ಲ. ಅಪ್ಪನ ಶಿಸ್ತು, ಅಮ್ಮನ ಪ್ರೀತಿಯಲ್ಲಿ ಬೆಳೆದ ಜಗದೀಶ ಶಾಲೆಗೆ ಸೇರಿ, ಹತ್ತು ವರ್ಷದವನಾಗುತ್ತಿದ್ದಂತೆ, ‘ನಾನು ಹುಡುಗನಲ್ಲ ಹುಡುಗಿ’ ಎನಿಸತೊಡಗಿತು.

ಗುಪ್ತವಾಗಿ ಅಮ್ಮ- ಅಕ್ಕನ ಬಟ್ಟೆ ಧರಿಸಿ, ಬೊಟ್ಟು ಬಳೆ ತೊಟ್ಟು ಸಂಭ್ರಮಿಸಿದ. ಅಮ್ಮನಿಗೆ ಗೊತ್ತಾಗಿ ಬಡಿದರು. ಬುದ್ಧಿ ಹೇಳಿದರು. ಆದರೆ ಜಗದೀಶನಿಗೆ ತನ್ನೊಳಗಿನ ತುಡಿತವನ್ನು ಅದುಮಿಟ್ಟುಕೊಳ್ಳಲಾಗಲಿಲ್ಲ. ವರ್ತನೆಯಲ್ಲಿಯೇ ಹೆಣ್ತನ ಎದ್ದು ಕಾಣುತ್ತಿತ್ತು. ಸುತ್ತಲ ಸಮಾಜ ಮತ್ತು ಸ್ನೇಹಿತರು ಅಣಕಿಸುವುದು, ಕಿಚಾಯಿಸುವುದು ಅತಿಯಾಯಿತು. ಅಪ್ಪನಿಗೂ ವಿಷಯ ಗೊತ್ತಾಯಿತು. ಈತ ಮನೆ ಮರ್ಯಾದೆ ಕಳೆಯುತ್ತಿದ್ದಾನಲ್ಲ ಎಂದು ಸಿಟ್ಟು ನೆತ್ತಿಗೇರಿತು, ಮನೆಯಲ್ಲಿಯೇ ಮೂರು ತಿಂಗಳು ಕೂಡಿಹಾಕಿದರು.

ಈತನ್ಮಧ್ಯೆ, ಎಸ್ಸೆಸೆಲ್ಸಿ ಫೇಲಾಯಿತು. ನಾನು ಹುಡುಗಿ ಎನ್ನುವುದು ದೇಹ ಮತ್ತು ಸ್ವಭಾವಗಳಿಂದ ಹೆಚ್ಚಾಗತೊಡಗಿತು. ಅಕ್ಕೈ ಕುಟುಂಬ ಸಮಾಜದ ಬಾಯಿಗೆ ಬಿದ್ದು ಆಡುಂಬೊಲವಾಯಿತು. ಅಪ್ಪ ಖಿನ್ನರಾದರು. ಅಮ್ಮ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದರು.

‘ನನ್ನಿಂದಾಗಿ ನಮ್ಮ ಕುಟುಂಬ ಇಂತಹ ಸಂಕಷ್ಟಕ್ಕೆ ಸಿಲುಕಿತಲ್ಲ, ಯಾರಿಗೂ ಬೇಡವಾದೆನಲ್ಲ ಎಂಬ ಕೊರಗಿನಿಂದ, ಆತ್ಮಹತ್ಯೆಗೂ ಪ್ರಯತ್ನಿಸಿದೆ. ಒಂದಲ್ಲ ಎರಡು ಸಲ. ಸಾಯುವ ಮುಂಚೆ ನನಗಿಷ್ಟವಾದ ಲಕ್ಷ್ಮಿ ದೇವರಿಗೆ- ನಿನ್ನ ಹಾಗೆ ಸುಂದರವಾಗಿ ಡ್ರೆಸ್ ಮಾಡಿಕೊಳ್ಳಬೇಕೆಂದು ಆಸೆಪಟ್ಟೆ, ಅದು ತಪ್ಪಾ, ನಾನೇನು ಪಾಪ ಮಾಡಿದ್ದೇನೆ? ಎಂದು ಮನಸೋಯಿಚ್ಛೆ ಬಯ್ದೆ.

ಕೊನೆಗೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ನಾನೇಕೆ ಸಾಯಬೇಕು, ಇದ್ದು ಎಲ್ಲರನ್ನೂ ಗೆಲ್ಲಬೇಕು ಎಂಬ ನಿರ್ಧಾರಕ್ಕೆ ಬಂದೆ’ ಎನ್ನುವ ಅಕ್ಕೈ, ಇವತ್ತು ಕುಟುಂಬಕ್ಕೂ, ಸಮಾಜಕ್ಕೂ, ಸಮುದಾಯಕ್ಕೂ ಬೇಕಾದ ಮಹಿಳೆಯಾಗಿ ಮಾರ್ಪಾಡಾಗಿದ್ದಾರೆ.

ಹಾಗೆ ನೋಡಿದರೆ, ಅಕ್ಕೈ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.

‘ಒಂದು ಬಟ್ಟೆ ಗಂಟನ್ನು ಕಂಕುಳಲ್ಲಿ ಇರುಕಿಕೊಂಡು ಮನೆ ಬಿಟ್ಟೆ. ಕೆ.ಆರ್.ಮಾರ್ಕೆಟ್ಟಿನ ಫ್ಲೈ ಓವರ್ ಕೆಳಗಿನ ಶೌಚಾಲಯದ ಬಳಿ ನನ್ನದೇ ಬಟ್ಟೆಗಳನ್ನು ಹಾಸಿ ಹೊದ್ದು ಮಲಗುತ್ತಿದ್ದೆ. ಮಾರ್ಕೆಟ್ಟಿನ ಕೂಲಿ ಕಾರ್ಮಿಕರು, ಚಿಲ್ಲರೆ ರೌಡಿಗಳು, ಕುಡುಕರು ಬಂದು ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು. ಕೆಟ್ಟದಾಗಿ ಒರಟಾಗಿ ಬಳಸಿಕೊಳ್ಳುತ್ತಿದ್ದರು. ಮತ್ತೆ ಮನೆಯ ನೆನಪಾಯಿತು’ ಎನ್ನುವ ಅಕ್ಕೈ, ಮೊದಲು ತಮ್ಮನಿಗೆ ನಾನು ಹುಡುಗನಲ್ಲ ಹುಡುಗಿ ಎಂದು ಹೇಳಿ ನಂಬಿಸಿದರು.

ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಸಹೋದರ ಬೆಂಬಲಕ್ಕೆ ನಿಂತು, ಅಪ್ಪ-ಅಮ್ಮನಿಗೆ ಹೇಳಿದ. ಅದಕ್ಕಾಗಿ ಒದೆ ತಿಂದ. ಒಪ್ಪದ ಅಪ್ಪಎಲೆಕ್ಟ್ರಿಕಲ್ ಡಿಪ್ಲಮೋ ಕೋರ್ಸಿಗೆ ಸೇರಿಸಿ ಸರಿಯಾಗು ಎಂದರು. ಅಲ್ಲಿಯೂ ಸ್ನೇಹಿತರು ಪೀಡಿಸತೊಡಗಿದರು. ಒಂದು ದಿನ ಆರು ಜನ ಸೇರಿ ಬಾತ್ರೂಮಿಗೆ ಎಳೆದುಕೊಂಡು ಹೋದರು. ಬಟ್ಟೆ ಬಿಚ್ಚಿ ಮುಟ್ಟಬಾರದ ಜಾಗಗಳನ್ನೆಲ್ಲ ಮುಟ್ಟಿ ಘಾಸಿಗೊಳಿಸಿದರು. ನನ್ನ ದೇಹದ ಮೇಲೆ ದಾಳಿ ಮಾಡಿದರು. ಲೈಂಗಿಕವಾಗಿ ಬಳಸಿಕೊಂಡು ದೌರ್ಜನ್ಯವೆಸಗಿದರು.

ಮೈ ಮುಖಕ್ಕೆಲ್ಲ ವೀರ್ಯ ಚೆಲ್ಲಿ ಕೊನೆಗೆ ಕಸದಂತೆ ಎಸೆದುಹೋದರು. ಅದೇ ಸ್ಥಿತಿಯಲ್ಲಿ ಮನೆಗೆ ಹೋದೆ, ನಂತರ ಪ್ರಿನ್ಸಿಪಾಲರಿಗೆ ದೂರು ಕೊಟ್ಟೆ. ಅವರು ನನಗೇ ಬಯ್ದರು. ಅಲ್ಲಿಗೆ ಓದು ಮುಗಿಯಿತು’ ಎನ್ನುವ ಅಕ್ಕೈ ಮನೆಯ ಕಷ್ಟಕ್ಕೆ ನೆರವಾಗುವ ಸಲುವಾಗಿ ರಾಮ್ ಸೆರಾಮಿಕ್ಸ್ನಲ್ಲಿ 1200 ರೂ.ಗೆ ಕೆಲಸಕ್ಕೆ ಸೇರಿದರು.

ಹೀಗೆ ಕೆಲಸಕ್ಕೆ ಹೋಗಿ ಬರುವಾಗ, ತೃತೀಯಲಿಂಗಿಗಳು ಗುಂಪು ಗುಂಪಾಗಿ ಕಾರ್ಪೊರೇಷನ್ ಸರ್ಕಲ್ಲಿನಲ್ಲಿ ಭಿಕ್ಷೆ ಬೇಡುವುದನ್ನು, ಕಬ್ಬನ್ ಪಾರ್ಕಿನಲ್ಲಿ ಡ್ರೆಸ್ ಮಾಡಿಕೊಳ್ಳುವುದನ್ನು ಗಮನಿಸಿದರು. ಬಸ್ನಿಂದ ಜಿಗಿದು, ಅವರ ಬಳಿ ಹೋಗಿ, ‘ನಾನೂ ನಿಮ್ಮಂತಾಗಬೇಕು’ ಎಂದರು. ಅವರು, ‘ಇದು ಯಾರಿಗೂ ಬೇಡದ ಬದುಕು, ಕಷ್ಟದ ಕಸುಬು, ಬೇಡ’ ಎಂದು ಬುದ್ಧಿ ಹೇಳಿದರು.

ಆದರೆ ಅಕ್ಕೈ ಮನಸ್ಸಾಗಲೇ ‘ಇದು ನಮ್ಮ ಮನೆ’ ಎನ್ನುವ ನಿರ್ಧಾರಕ್ಕೆ ಬಂದಿತ್ತು. ಅವರಲ್ಲೊಬ್ಬರಾದರು. ಅದೇ ಅವರ ಮನೆಯಾಯಿತು. ಪ್ರತಿದಿನ ಬೆಳಗ್ಗೆ ಕೆಟ್ಟದಾಗಿ ಡ್ರೆಸ್ ಮಾಡಿಕೊಂಡು ಟ್ರಾಫಿಕ್ನಲ್ಲಿ ಭಿಕ್ಷೆ ಬೇಡುವುದು, ರಾತ್ರಿ ವೇಳೆ ಕಾಮುಕರ ಲೈಂಗಿಕ ತೃಷೆ ತೀರಿಸುವುದು… ಹೀಗೆ ನಾಲ್ಕೈದು ವರ್ಷ ನಡೆಯಿತು. ಅಕ್ಕೈರಿಂದಲೂ ಪೊಲೀಸರು ಕಾಸು ಕಿತ್ತರು. ಕೊಡದಿದ್ದಾಗ ಲೈಂಗಿಕವಾಗಿ ಹಿಂಸಿಸಿದರು. ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸಿದರು.

ಕೊನೆಗೊಂದು ದಿನ ನಮಗೇಕೆ ಇಂತಹ ಹೀನಾಯ ಬದುಕು, ಈ ಸಮಾಜ ನಮ್ಮನ್ನೇಕೆ ಹೀಗೆ ನೋಡುತ್ತದೆ, ನಡೆಸಿಕೊಳ್ಳುತ್ತದೆ. ನಾವೂ ಅವರಂತೆ ಮನುಷ್ಯರಲ್ಲವೇ? ಎಂದು ಯೋಚಿಸಿ, ಎಲ್ಲರಂತೆ ಬದುಕಬೇಕೆಂದು ಬಯಸಿದಾಗ ಅಕ್ಕೈ ಆಸರೆಗೆ ಬಂದದ್ದು ‘ಸಂಗಮ’ ಸಂಸ್ಥೆ. ಅಲ್ಲಿ ಕೆಲಸದ ಜೊತೆಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರ ಸಮಸ್ಯೆಗಳೇನು, ಸಂಘಟನೆ ಎಂದರೇನು, ಸಂಘಟನೆಯಿಂದಾಗುವ ಪ್ರಯೋಜನಗಳೇನು, ಸಂವಿಧಾನ ಕೊಡಮಾಡುವ ಹಕ್ಕುಬಾದ್ಯತೆಗಳೇನು ಎಂಬುದೆಲ್ಲವನ್ನು ಅರಿತು ಅರಗಿಸಿಕೊಂಡರು.

ಅಕ್ಕೈ ಮನೆಭಾಷೆ ತೆಲುಗು, ಬೀದಿಭಾಷೆ ಕನ್ನಡ, ‘ಸಂಗಮ’ಕ್ಕೆ ಬಂದು ಕಲಿತದ್ದು ಇಂಗ್ಲಿಷ್. ನಿಧಾನವಾಗಿ ಸಮಾಜದ ಗಣ್ಯರೊಂದಿಗೆ ಒಡನಾಟ ಶುರುವಾಯಿತು. ಜನಪರ ಸಂಘಟನೆ, ಪ್ರತಿಭಟನೆ, ಹೋರಾಟಗಳಲ್ಲಿ ಭಾಗಿಯಾದರು. ಸಾಮಾಜಿಕ ನ್ಯಾಯ, ಸಮಾನತೆ, ಸಹಬಾಳ್ವೆ, ಮೂಲಭೂತ ಹಕ್ಕುಗಳು, ನ್ಯಾಯಾಂಗದ ಪರಿಚಯವಾಯಿತು.

ಸಮಾಜ ನಿಕೃಷ್ಟವಾಗಿ ನೋಡುತ್ತಿದ್ದಾಗ ಹೈಕೋರ್ಟ್ ನ್ಯಾಯಾಧೀಶರಾದ ಮಂಜುಳಾ ಚೆಲ್ಲೂರು, ಕೋರ್ಟಿಗೆ ಆಹ್ವಾನಿಸಿ, ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಅಲ್ತಮಸ್ ಕಬೀರ್ ನೆರವಿಗೆ ನಿಂತರು. 2010ರಲ್ಲಿ ಮಂತ್ರಿ ಶೋಭಾ ಕರಂದ್ಲಾಜೆ ಕರೆದು ಮಾತನಾಡಿಸಿ, ‘ತೃತೀಯಲಿಂಗಿಗಳಿಗೆ ಸರಕಾರ ಏನು ಮಾಡಬಹುದು ಹೇಳಿ’ ಎಂದು ಸಲಹೆ ಕೇಳಿದರು. ಅಲ್ಲಿಗೆ ಅಕ್ಕೈಗೆ ನಾನೊಬ್ಬಳೇ ಅಲ್ಲ, ನನಗೆ ಬೆಂಬಲವಾಗಿ ಸಮಾನಮನಸ್ಕರ ದೊಡ್ಡ ಗುಂಪೇ ಇದೆ ಎಂಬ ಅರಿವಾಯಿತು.

ಮಂಜುಳಾ ಚೆಲ್ಲೂರ್ ಮತ್ತು ಅಲ್ತಮಸ್ ಕಬೀರ್ ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳುವಾಗ, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಅಕ್ಕೈರನ್ನು ಆಹ್ವಾನಿಸಲಾಗಿತ್ತು. ‘ಅದು ನನ್ನ ಬದುಕಿನ ಬಹಳ ಮುಖ್ಯವಾದ, ನೆನಪಿನಲ್ಲುಳಿಯುವ ಸಂದರ್ಭ. ಸಮಾಜ ತಿರಸ್ಕರಿಸಿದ ತೃತೀಯಲಿಂಗಿಗಳಿಗೆ ರಾಷ್ಟ್ರಪತಿ ಭವನ ರೆಡ್ ಕಾರ್ಪೆಟ್ ವೆಲ್ಕಮ್ ನೀಡಿತ್ತು. ಅದು ಸುದ್ದಿಮಾಧ್ಯಮಗಳಲ್ಲಿ ಪ್ರಚಾರ ಪಡೆಯಿತು. ಅದರ ಪರಿಣಾಮವಾಗಿ, ದೆಹಲಿ ಹೈಕೋರ್ಟ್ 377 ಕಾಯ್ದೆ ಪ್ರಕಾರ, ಸಲಿಂಗಿ ಸಂಬಂಧ ಅಪರಾಧ ಮತ್ತು ಅನೈಸರ್ಗಿಕ ಎಂದಿದ್ದನ್ನು, ಸುಪ್ರೀಂ ಕೋರ್ಟ್ ಮರು ಪರಿಶೀಲಿಸುವ ಅಗತ್ಯವಿದೆ ಎಂದಿತು. ಅದು ನಿಜಕ್ಕೂ ನಮ್ಮ ದೊಡ್ಡ ಗೆಲುವು’ ಎನ್ನುತ್ತಾರೆ ಅಕ್ಕೈ.

‘ಅವತ್ತು ಸರಕಾರ, ಕಾನೂನು, ಸಮಾಜ ಕೂಡ ನಮ್ಮದು ಅಂತನ್ನಿಸಿತು’ ಎನ್ನುವ ಅಕ್ಕೈ ಅವರ ಸಾಮಾಜಿಕ ಸೇವೆಯನ್ನು ಕರ್ನಾಟಕ ಸರಕಾರ ಗುರುತಿಸಿ 2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.

ಸ್ವಿಟ್ಜರ್ಲೆಂಡ್ ನ ‘ಇಂಡಿಯನ್ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್’ ಸಂಸ್ಥೆ ಅಕ್ಕೈಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತು. 2016ರಲ್ಲಿ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ, ಭಾರತದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರಿಸ್ಥಿತಿ ಕುರಿತು ವಿಶೇಷ ಉಪನ್ಯಾಸ ನೀಡಲು ಅಕ್ಕೈರನ್ನು ಅಮೆರಿಕಾಗೆ ಆಹ್ವಾನಿಸಿ ಅಭಿನಂದಿಸಿದರು.

ನಂತರ ಜಪಾನ್, ಥೈಲ್ಯಾಂಡ್, ಶ್ರೀಲಂಕಾ ದೇಶಗಳಿಗೂ ಅಕ್ಕೈ ಹೋಗಿ ಬಂದರು. ಕಳೆದ ಡಿಸೆಂಬರ್ ನಲ್ಲಿ ಒಬಾಮ ದೆಹಲಿಗೆ ಬಂದಾಗ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಕ್ಕೈ ಅವರ ದಿಟ್ಟ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ದಿನಬೆಳಗಾಗುವುದರೊಳಗೆ ಅಕ್ಕೈ ಸ್ಟಾರ್ ಆಗಿದ್ದರು.

ಈಗ ಅಕ್ಕೈ ಬಳಿ ಆಧಾರ್, ಪ್ಯಾನ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಅಕೌಂಟ್ ಎಲ್ಲವೂ ಇದೆ. ಸಮಾನಮನಸ್ಕರು ಸೇರಿ ‘ಒಂದೆಡೆ’, ‘ಸ್ವತಂತ್ರ’ ಮತ್ತು ‘ಆರೋಗ್ಯ ಸೇವಾ’ ಎಂಬ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ. ಆ ಸಂಘಟನೆಗಳ ಮೂಲಕ ತಾರತಮ್ಯ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸುತ್ತಿದ್ದಾರೆ.

‘ನಮಗಿಂತ ಶೋಷಿತ ಸಮುದಾಯ ಇನ್ನೊಂದಿಲ್ಲ’ ಎನ್ನುವ ಅಕ್ಕೈ ಪದ್ಮಶಾಲಿ, ‘ಕುರಾನ್, ಬೈಬಲ್, ಭಗವದ್ಗೀತೆಗಳು ನಮ್ಮ ವಿರುದ್ಧವಿಲ್ಲ. ಸಂವಿಧಾನವೂ ಸಾಮಾಜಿಕ ನ್ಯಾಯದ ಪರವಾಗಿದೆ. ಗಾಂಧಿ-ಅಂಬೇಡ್ಕರ್ ಕೂಡ ಕಾನೂನು ರಚನೆಯಾಗುವಾಗ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಳ್ಳಬೇಕು ಎಂದಿದ್ದಾರೆ. ನಾವು ಸರಿ ಇದ್ದೇವೆ, ಸಮಾಜದ ದೃಷ್ಟಿ ಬದಲಾಗಬೇಕಿದೆ’ ಎನ್ನುತ್ತಾರೆ.

ರಾಜ್ಯ ಸರಕಾರ ಕೂಡ ನಟಿ ಜಯಮಾಲಾರ ನೇತೃತ್ವದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ ರಚಿಸುವಲ್ಲಿ, ಅದಕ್ಕೆ ಸದಸ್ಯೆಯಾಗಿ ಅಕ್ಕೈರನ್ನು ನೇಮಿಸುವಲ್ಲಿ ಸ್ಪಂದಿಸಿದೆ. ಜೊತೆಗೆ ವಯಸ್ಸಾದ ಲೈಂಗಿಕ ಅಲ್ಪಸಂಖ್ಯಾತರಿಗೆ 500 ರೂ. ಮಾಸಾಶನ ನೀಡುವ ‘ಮೈತ್ರಿ’ ಯೋಜನೆಯನ್ನು ಜಾರಿಗೆ ತಂದಿದೆ. ಇಷ್ಟಕ್ಕೇ ಸುಮ್ಮನಾಗದ ಅಕ್ಕೈ, ರಾಜ್ಯದಲ್ಲಿ 2 ಲಕ್ಷ ತೃತೀಯಲಿಂಗಿಗಳಿದ್ದು, ಕೇವಲ 7 ಸಾವಿರ ಮಂದಿಗೆ ಮತದಾನದ ಹಕ್ಕು ನೀಡಲಾಗಿದೆ.

ಹಾಗಾಗಿ ನಮ್ಮ ಸಮುದಾಯದ ಜನಗಣತಿ ನಡೆಯಬೇಕು, ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ ಮತ್ತು ಪ್ರತ್ಯೇಕ ಆಯೋಗ ರಚನೆಯಾಗಬೇಕು, 20 ಕೋಟಿ ಅನುದಾನ ನೀಡಬೇಕು ಎಂಬ ಬೇಡಿಕೆಯನ್ನಿಟ್ಟು ಹೋರಾಟ ಮುಂದುವರೆಸಿದ್ದಾರೆ.

ಬಡ ದಲಿತ ಕುಟುಂಬದಲ್ಲಿ ಜನಿಸಿದ ಜಗ್ಗಿ ಇವತ್ತು ಅಕ್ಕೈ ಆಗಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಹಾಗೆಯೇ ಈ ಸಮಾಜದಲ್ಲಿ ತಮ್ಮದೂ ಒಂದು ಪಾತ್ರವಿದೆ ಎಂಬುದನ್ನು ತೋರಲು ಮದುವೆಯಾಗಿ, ಕಾನೂನುಬದ್ಧವಾಗಿ ನೋಂದಾಯಿಸಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ. ಸಾಧನೆಗೆ ಲಿಂಗ ತಾರತಮ್ಯವಿಲ್ಲ ಎಂದು ಸಾರುತ್ತಲೆ ನಮ್ಮ ನಡುವೆ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

ಅಸಹಾಯಕರ ಏಳಿಗೆಗೆ ದುಡಿಯುತ್ತ, ಸರಕಾರ, ಸಮಾಜ ಮತ್ತು ಸಮುದಾಯದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತ, ಅವಕಾಶ ಕಲ್ಪಿಸಿಕೊಟ್ಟರೆ ತೃತೀಯಲಿಂಗಿಗಳು ಘನತೆಯಿಂದ ಬದುಕಬಲ್ಲರು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಸಮಾಜ ಯೋಚಿಸಬೇಕಾಗಿದೆ.

‍ಲೇಖಕರು avadhi

January 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: