ಜಂಗ್ಲಿ ಕುಲಪತಿಯ ಜಂಗೀಕಥೆ

ಮನೋಹರ ಗ್ರಂಥಮಾಲಾ ಹೊಸ ಕೃತಿಯನ್ನು ಪ್ರಕಟಿಸಿದೆ.

ಖ್ಯಾತ ಲೇಖಕ ತೇಜಸ್ವಿ ಕಟ್ಟೀಮನಿ ಅವರ ಆತ್ಮಕಥೆ ಇದು.

ದೇಶದ ಮೊಟ್ಟಮೊದಲ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟೀಮನಿ ಅವರು.

ಈ ಕೃತಿ ಕೊಳ್ಳಲು ಸಮೀರ್ ಜೋಶಿ ಅವರನ್ನು ಸಂಪರ್ಕಿಸಿ – 98454 47002

ಈ ಕೃತಿಗೆ ಹಿರಿಯ ಪತ್ರಕರ್ತ, ಲೇಖಕ ಸರಜೂ ಕಾಟ್ಕರ್ ಅವರು ಬರೆದ ಮುನ್ನುಡಿ ಇಲ್ಲಿದೆ-

ಡಾ ಸರಜೂ ಕಾಟ್ಕರ್

ನಾನು ಬರೆಯುವುದನ್ನು ಬಿಟ್ಟು ವರ್ಷಗಳಾಗಿದ್ದವು. ಆದರೆ ಓದು ನನ್ನನ್ನು ಬಿಟ್ಟಿಲ್ಲ. ಅಮರಕಂಟಕದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಕಟ್ಟುತ್ತ ನಾನು ಅನೇಕ ಹೊಸ ಕಲೆಗಳನ್ನು ಕಲಿತೆ. ಮರೆತು ಹೋಗಿದ್ದ ಹಳೇ ಕಲೆಗಳನ್ನು ಪ್ರಯತ್ನಪೂರ್ವಕ ನೆನಪಿಸಿಕೊಂಡು ಅವುಗಳನ್ನು ಹೊಸ ರೀತಿಯಲ್ಲಿ ಚಾಲ್ತಿಗೆ ತಂದೆ. ಮಳೆನೀರು ಕೊಯ್ಲು, ಮರ ನೆಟ್ಟು ಜೋಪಾನ ಮಾಡುವ ಕಲೆ, ಇವುಗಳಲ್ಲಿ ಕೆಲವು ಉದಾಹರಣೆ ಮಾತ್ರ.

ಅಮರಕಂಟಕ ನನಗೆ ಎಷ್ಟೊಂದು ಕಲಿಸಿತು? ಎಷ್ಟೊಂದು ನೀಡಿತು? ಎಷ್ಟು ಸಲ ನನ್ನ ತಲೆ ಮೇಲೆ ಕುಕ್ಕಿ ನನ್ನ ಅಹಂಕಾರವನ್ನು ಹದ್ದು ಬಸ್ತಿನಲ್ಲಿ ಇಟ್ಟಿತು? ನೆನೆದರೆ ರೋಮಾಂಚನವಾಗುತ್ತದೆ. ಹಿಂದೀ ಕ್ಷೇತ್ರದ ಜನರ ಪ್ರೀತಿ ನನಗೆ ದಕ್ಕಿದಷ್ಟು ಯಾರಿಗೂ ದಕ್ಕಿರಲಿಕ್ಕಿಲ್ಲ. ಕಾಶಿ, ಪಾಟ್ನಾ, ಅಲೀಗಢ, ದೆಹಲಿ, ಭೋಪಾಲ್ ಎಲ್ಲ ಕಡೆ ನನ್ನನ್ನು ಹಿಂದಿ ಭಾಷೆಯವನಂತೆ ಅಪ್ಪಿಕೊಂಡರು. ನಾನು ಇನ್ನೂ ಹುರುಪಿನಿಂದ ದುಡಿಯಲು ನನ್ನ ಹಿಂದೀ ಕ್ಷೇತ್ರದ ಗೆಳೆಯರ ಪ್ರೀತಿ ತುಂಬ ಸಹಾಯ ಮಾಡಿತು.

ಒಂದು ವಿಶ್ವವಿದ್ಯಾಲಯ ಕಟ್ಟುವ ಕೆಲಸ ಸಂಪೂರ್ಣ ಸೃಷ್ಟಿ ಕಾರ್ಯ. ಪ್ರತಿಯೊಂದು ಕೆಲಸವೂ ಪೂರ್ಣತೆಯನ್ನು ಪಡೆಯಬೇಕು. ಅಲ್ಪಸ್ವಲ್ಪ ಏರುಪೇರಾದರೂ ಮುಂದಿನ ನೂರಾರು ವರ್ಷ, ಸಾವಿರಾರು ಜನರ ಭವಿಷ್ಯಕ್ಕೆ ಧಕ್ಕೆಯಾಗಬಲ್ಲದು. ಮುಂದಿನ ಪೀಳಿಗೆಯನ್ನು ರೂಪಿಸುತ್ತಿದ್ದೇನೆ ಎಂಬ ಜವಾಬುದಾರಿ ನನ್ನನ್ನು ಸದಾ ಎಚ್ಚರ ಗೊಳಿಸುತ್ತಿರುತ್ತದೆ. ಅಮರಕಂಟಕ ವಿಶ್ವವಿದ್ಯಾಲಯ ಆಕಾಶ ಮೀರಿದ ಅನುಭವವನ್ನು ನನಗೆ ನೀಡಿದೆ. ಕಟ್ಟುವಾಗ ನಾನು ಸಹನೆಯಿಂದಿರಬೇಕೆಂದು ಅನುದಿನ ನನಗೆ ನಾನೆ ಹೇಳಿದೆ. ಶ್ರೀ ಎಚ್.ಕೆ. ಪಾಟೀಲ ನನಗೆ ಸಹನೆ ಕಲಿಸಿದ ಗುರುಗಳು. ನಂತರ ಅಮರಕಂಟಕ ಮತ್ತೊಮ್ಮೆ ಸಮಾಧಾನದ ದೀಕ್ಷೆ ನೀಡಿತು.

ಈ ನನ್ನ ಅನುಭವಗಳು ಪುಸ್ತಕರೂಪದಲ್ಲಿ ಬರುವಂತೆ ಒತ್ತಾಸೆ ನೀಡಿದವರು ಡಾ. ಬಸವರಾಜ ಡೋಣೂರ, ಪ್ರಕಟಿಸುತ್ತಿರುವ ಡಾ. ರಮಾಕಾಂತ ಜೋಶಿ, ಶ್ರೀ ಸಮೀರ ಜೋಶಿ ಸುದೀರ್ಘ ಮುನ್ನುಡಿ ಬರೆದ ಡಾ. ಸರಜೂ ಕಾಟ್ಕರ್ ಇವರಿಗೆಲ್ಲ ನನ್ನ ಧನ್ಯವಾದಗಳು.
ತೇಜಸ್ವಿ ಕಟ್ಟೀಮನಿ

ಇತ್ತೀಚೆಗೆ ಸಾಹಿತ್ಯದಲ್ಲಿ ಕಥೆಯಂತೆ, ಕಾವ್ಯದಂತೆ, ಕಾದಂಬರಿಯಂತೆ, ವಿಮರ್ಶೆಯಂತೆ ವ್ಯಕ್ತಿಯ ಆತ್ಮಕಥೆಯೂ ಒಂದು ಪ್ರತ್ಯೇಕ ಪ್ರಕಾರವಾಗಿ ಬೆಳೆದು ನಿಂತಿದೆ. ಈ ಪ್ರಕಾರಕ್ಕೆ ವ್ಯಾಪಕವಾಗಿ ಪ್ರಚಾರ ಕೊಟ್ಟಿರುವವರು ಮರಾಠಿ ಲೇಖಕರು. ಅದರಲ್ಲೂ ಅಲ್ಲಿದ್ದ ದಲಿತ ಲೇಖಕರು ತಾವು ಕಂಡುಂಡ, ಅನುಭವಿಸಿದ ಜೀವನವನ್ನೇ ಕಥೆಯನ್ನಾಗಿಸಿದರು; ಅದುವೇ ಅವರ ಆತ್ಮಕಥೆಯಾಯಿತು. ಅಲ್ಲಿಯವರೆಗೆ ಅವರ ಸಮಾಜದ ಒಳಹೊರಗನ್ನು ಅರಿಯದ ಹೊರಗಿನ ಸಭ್ಯಸಮಾಜ ಈ ಲೇಖಕರ ನರಕ ಸದೃಶ್ಯವಾದ, ದಾಹಕವಾದ ಅನುಭವಗಳನ್ನು ಓದಿ ದಂಗು ಬಡಿಯಿತು. ಅದಕ್ಕಿಂತ ಮೊದಲು ಸಾಹಿತ್ಯದಲ್ಲಿ ಆತ್ಮಕಥೆಗಳು ಬಂದಿರಲಿಲ್ಲವೆಂತಲ್ಲ; ಮಹಾತ್ಮಾ ಗಾಂಧೀಜಿಯವರೇ ತಮ್ಮ ಆತ್ಮಕಥೆಯನ್ನು ಬರೆದು ಸತ್ಯದ ಹುಡುಕಾಟಕ್ಕೆ ಚಾಲನೆ ನೀಡಿದ್ದರು. ಆದರೆ ಈ ಸೀದಾ ಸಾದಾ ಜನರ ಜೀವನಾನುಭವಗಳು ಬೇರೆಯೇ ಆಗಿದ್ದವು.

ಆಧುನಿಕ ಸಮಾಜದ ಜೊತೆಗಿದ್ದರೂ ಅವರು ಬೇರೆಯೇ ಆಗಿರುವ ಸಮಾಜದಲ್ಲಿ ಜೀವಿಸುತ್ತಿದ್ದರು. ಆಧುನಿಕ ಜನರೊಟ್ಟಿಗೆ ಅಡ್ಡಾಡುತ್ತಿದ್ದರೂ ಅವರ ಲೋಕ ಅಧೋಲೋಕವಾಗಿತ್ತು. ಸಹಜ ಬದುಕಿನ ಅರ್ಥವಂತಿಕೆಯನ್ನೇ ತಲೆಕೆಳಗು ಮಾಡುವ ಜೀವನ ಕ್ರಮ ಅವರದ್ದಾಗಿತ್ತು; ಅಲ್ಲಿಯ ಜಗತ್ತು ಸಭ್ಯ ಸಮಾಜವು ಕಲ್ಪಿಸಿಕೊಳ್ಳಲಾಗದಷ್ಟು ವಿಕೃತಿಯಿಂದ ಕೂಡಿತ್ತು. ಇಂತಹ ಆತ್ಮಕಥೆಗಳು ಓದುಗರ ಹೃದಯವನ್ನು ಹಿಂಡಿ, ಅವರ ಕಣ್ಣುಗಳು ತೇವವಾಗಿಸಿದರಲ್ಲಿ ಯಶಸ್ವಿಯೂ ಆಗಿದ್ದವು.

ಈ ಲೇಖಕರ ಜೀವನ ಕಥೆಗಳು ಬರೀ ಅವರ ವೈಯಕ್ತಿಕ ಜೀವನಕ್ಕೆ ಸೀಮಿತವಾಗದೇ ಇಡಿಯ ಸಮಾಜದ ಕಥೆಯಾಗಿ ಕಾಣ ಸಿಕೊಂಡಿದ್ದರಿಂದ ಅವುಗಳಿಗೆ ಇನ್ನಿಲ್ಲದ ಮಹತ್ವ ಬಂದು ಅವರ ಅನುಭವಗಳೇ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪಿಸುವಲ್ಲಿ ಯಶಸ್ವಿಯಾದವು.

ಕನ್ನಡ ಸಾಹಿತ್ಯದಲ್ಲೂ ಅನೇಕ ದಲಿತ ಲೇಖಕರು ತಮ್ಮ ಜೀವನದ ಕಥೆಯನ್ನು ಆತ್ಮಕಥೆಯನ್ನಾಗಿಸಿದರು. ಆದರೆ ಮರಾಠಿ ದಲಿತ ಆತ್ಮಕಥೆಗಳಲ್ಲಿರುವ ದಾಹಕತೆ, ಪ್ರಾಮಾಣ ಕತೆಗಳು ಕನ್ನಡದ ಈ ಆತ್ಮಕಥೆಗಳಲ್ಲಿ ಇಲ್ಲವೆಂಬ ಆಪಾದನೆಗಳಿಗೂ ಅವು ಈಡಾದವು. ಒಂದು ಲೇಖನದಲ್ಲಿ ಕನ್ನಡದ ಸುಪ್ರಸಿದ್ಧ ವಿಮರ್ಶಕರಾದ ಡಾ. ಗಿರಡ್ಡಿ ಗೋವಿಂದರಾಜ್‌ರವರು ಕನ್ನಡ ದಲಿತ ಆತ್ಮಕಥೆಗಾರರಿಗೆ ತಾವು ಕಂಡುಂಡ ನರಕ ಜೀವನವನ್ನು ಅಕ್ಷರರೂಪದಲ್ಲಿ ಬರೆಯುವಷ್ಟು ಧೈರ್ಯವಿಲ್ಲವೆಂದು ಈ ಆತ್ಮಕತೆಗಾರರನ್ನು ಮೂದಲಿಸಿದ್ದರು.

ಕನ್ನಡದ ದಲಿತ ಆತ್ಮಕಥೆ ಲೇಖಕರು ಸಮಸ್ಯೆಯ ಆಳಕ್ಕೆ ಹೋಗದೇ ಕೇವಲ ಸರ್‌ಫೇಸ್‌ನ್ನು ಮಾತ್ರ ಸ್ಪರ್ಶಿಸಿರುವುದು ಅವರ ಕೃತಿಗಳನ್ನು ಓದಿದವರಿಗೆ ಗೊತ್ತಾಗುತ್ತದೆ. ಒಂದು ಅಪರಿಚಿತ ಸಮಾಜದ ಕಥೆಯಾಗಬೇಕಾಗಿದ್ದ ಆತ್ಮಕಥೆ ಕೇವಲ ಲೇಖಕನೊಬ್ಬನ ಸ್ವಕುಚ ಮರ್ದನದ ಸಾಹಸಕ್ಕೆ ಉದಾಹರಣೆಯಾಗಿರುವುದು ಕಂಡು ಬರುತ್ತದೆ. ಹೀಗಾಗಿ ಕನ್ನಡದ ದಲಿತ ಆತ್ಮಕಥೆಗಳು ಎಲ್ಲಿಯೂ ವ್ಯಾಪಕ ಚರ್ಚೆಗೆ ಈಡಾಗಲಿಲ್ಲ. ಹತ್ತರ ಜೊತೆಗೆ ಹನ್ನೊಂದು ಎಂಬಂತೆ ಈ ಕೃತಿಗಳು ಯಾವ ಮಹತ್ವವನ್ನೂ ಪಡೆಯಲಿಲ್ಲ.

ಇಂಥ ಅಯೋಮಯ ಪರಿಸ್ಥಿತಿಯಲ್ಲಿ ತೇಜಸ್ವಿ ಕಟ್ಟೀಮನಿಯವರ ‘ಜಂಗ್ಲಿ ಕುಲಪತಿಯ ಜಂಗೀಕಥೆ’ ಪ್ರಕಟಗೊಂಡಿದೆ. ಕೊಪ್ಪಳ ಜಿಲ್ಲೆಯ ಅಳವಂಡಿಯೆಂಬ ಕುಗ್ರಾಮದ ತಳವಾರ ಯಂಕಪ್ಪನ ಮಗ ತೇಜಸ್ವಿಯೆಂಬ ಹುಡುಗ, ಯಾವನು ಗದಗದ ಎಸ್.ಸಿ/ಎಸ್.ಟಿ ಹಾಸ್ಟೆಲ್ಲಿನಲ್ಲಿ ಪ್ರವೇಶ ಸಿಗಲಾರದ್ದಕ್ಕೆ ಕಳ್ಳತನದಿಂದ ಒಂದು ವರ್ಷ ಹಾಸ್ಟೆಲ್ಲಿನಲ್ಲಿದ್ದನೋ, ಯಾವನು ಏಳನೆಯ ಇಯತ್ತೆ ಪಾಸ್ ಆಗುವವರೆಗೆ ಎಮ್ಮೆ ಕಾಯುತ್ತ, ಸಗಣ ಹಿಡಿಯುತ್ತ, ಶೇಂಗಾ, ಹತ್ತಿ ಕಳುವು ಮಾಡುತ್ತ ತಿರುಗುತ್ತಿದ್ದ ನೀಗ್ರೋ ಬಣ್ಣದ ಹುಡುಗನೋ ಅವನು ಒಂದು ವಿಶ್ವವಿದ್ಯಾಲಯದ ಕುಲಪತಿಯಾಗಿ ಆ ವಿಶ್ವವಿದ್ಯಾಲಯಕ್ಕೆ ಸಂಸ್ಕಾರ ನೀಡಿ ಅದನ್ನು ಅದ್ಭುತವಾಗಿ ಬೆಳೆಸಿ ಅದಕ್ಕೊಂದು ಅಂತರಾಷ್ಟ್ರೀಯ ಗೌರವವನ್ನು ತಂದುಕೊಟ್ಟ ಸಾಹಸದ ಕಥೆಯೇ ಈ ‘ಜಂಗ್ಲಿ ಕುಲಪತಿಯ ಜಂಗೀಕಥೆ’.

ಈ ಆತ್ಮಕಥೆ ಓದುವುದೆಂದರೆ ಒಂದು ಕನಸನ್ನು ಕಂಡಂತೆ ಭಾಸವಾಗುತ್ತದೆ. ‘ಹೌದೇ?’ ‘ಹೀಗೆ ನಡೆಯಿತೇ?’ ‘ಅಯ್ಯೋ, ಈ ನಮ್ಮ ಹುಡುಗನಿಗೆ ಅವನ ಜಾತಿಯ ಕಾರಣವಾಗಿ ಇಷ್ಟು ಕಷ್ಟ ಕೊಟ್ಟರೇ?’ ‘ ಇಷ್ಟು ಕಲಿತವರ ಪಾಡೇ ಇಷ್ಟಿರುವಾಗ ಇನ್ನು ಕಲಿಯದ ಬಡ ದಲಿತರ ಪಾಡು ಏನಾಗಿರಬೇಕು?’-ಎಂಬಿತ್ಯಾದಿ ಪ್ರಶ್ನೆಗಳು ಸಭ್ಯ ಸಮಾಜದೆದುರು ಬಂದು ನಿಲ್ಲುತ್ತವೆ; ಚಾತುರ್ವರ್ಣ್ಯದ ಕಾಯ್ದೆಗಳನ್ನು ರೂಪಿಸಿದ ಮನು ಬೆನ್ನ ಹಿಂದೆ ನಕ್ಕಂತೆ ಭಾಸವಾಗುತ್ತದೆ.

ತೇಜಸ್ವಿ ಕಟ್ಟೀಮನಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ಕವಿಯಾಗಿ, ಲೇಖಕರಾಗಿ, ಅನುವಾದಕರಾಗಿ ಈಗಾಗಲೇ ಅವರಿಗೆ ಸಾಹಿತ್ಯದಲ್ಲಿ ಗೌರವದ ಸ್ಥಾನವಿದೆ. ಹಿಂದಿಯನ್ನು ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡು ಅವರು ಸ್ನಾತಕೋತ್ತರ ಪದವಿಯನ್ನು, ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಕಾಲೇಜಿನ ಅಧ್ಯಾಪಕರಾಗಿ ನಂತರ ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ವಿದ್ಯಾರ್ಥಿಮಿತ್ರ ಶಿಕ್ಷಕರೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಇಡಿಯ ಜೀವನದಲ್ಲಿ ಯಾವುದೇ ಹಗರಣಗಳಿಗೆ ಕಾರಣರಾಗದೇ ಸ್ಪಾಟ್‌ಲೆಸ್ ಕರಿಯರ್ ಅವರದ್ದು. ಹಳ್ಳಿಯ ಮುಗ್ಧತನವನ್ನು ಇನ್ನೂ ಉಳಿಸಿಕೊಂಡಿರುವ ತೇಜಸ್ವಿ ಪ್ರಾಮಾಣ ಕತೆಯಿಂದ, ಹಾರ್ಡ್ವರ್ಕದಿಂದ ತಮ್ಮ ಜೀವನವನ್ನು ರೂಪಿಸಿಕೊಂಡಿರುವವರು.

ಯಾವ ಅನುಕೂಲತೆಗಳು ಇಲ್ಲದಿದ್ದರೂ ಪರಿಸ್ಥಿತಿಯನ್ನು ಮೆಟ್ಟಿನಿಂತು ವಿಷಯ ಪರಿಸ್ಥಿತಿಯನ್ನು ಕೇವಲ ತನ್ನ ಪ್ರತಿಭೆಯಿಂದ ಗೆದ್ದವರು. ಬಡತನದಿಂದ ನರಳುತ್ತಿದ್ದರೂ, ಸುತ್ತಲೂ ಸಾವಿರಾರು ಹಾವುಗಳು ಕಚ್ಚಲು ಫೂತ್ಕರಿಸುತ್ತಿದ್ದರೂ ಆ ಎಲ್ಲ ಕಷ್ಟಗಳನ್ನು ಎದುರಿಸಿ ನಂಜುಂಡೇಶ್ವರನಾದವರು. ಇವರ ಜೀವನವು ಬಡ, ನಿರ್ಗತಿಕ, ಏನೂ ಅನುಕೂಲತೆಗಳಿಲ್ಲದ ಯುವ ಜನರಿಗೆ ಒಂದು ಸ್ಫೂರ್ತಿಯ ಉದಾಹರಣೆಯಾಗಿದೆ, ಶೂನ್ಯದಿಂದ ಸಿಂಹಾಸನವನ್ನು ಅದ್ಹೇಗೆ ಸೃಷ್ಟಿಸಬಹುದೆನ್ನುವುದಕ್ಕೆ ತೇಜಸ್ವಿಯವರ ಜೀವನ ಕಥೆಯು ಒಂದು ರೂಪಕವಾಗಿ ನನಗೆ ಕಾಣ ಸುತ್ತದೆ.

ತೇಜಸ್ವಿ ಕಟ್ಟೀಮನಿಯವರನ್ನು ನಾನು ಬಲು ಸಮೀಪದಿಂದ ಬಲ್ಲೇ. ನಾವಿಬ್ಬರೂ ಏಕವಚನದ ಸಲುಗೆಯ ಗೆಳೆಯರು. ವಿದಾರ್ಥಿಯಾಗಿದ್ದಾಗಲೇ ಅವರು ತಮ್ಮ ಸಾಹಿತ್ಯಿಕ ಪ್ರತಿಭೆಯಿಂದಾಗಿ ಕಾಲೇಜಿನಲ್ಲಿ, ಧಾರವಾಡ ವಿದ್ವತ್- ವಲಯದಲ್ಲಿ ಪ್ರಸಿದ್ಧರಾಗಿದ್ದರು. ಸಾಮಾಜಿಕ ಕಾರಣಗಳಿಂದಾಗಿ ಅಥವಾ ಶ್ರೇಣೀಕೃತ ವ್ಯವಸ್ಥೆಯಿಂದಾಗಿ ಅವರು ಸಂಕೋಚ ಪ್ರವೃತಿಯನ್ನು ಬೆಳೆಸಿಕೊಂಡಿದ್ದರು. ಆದರೆ ಎಂತಹ ಕಾರ್ಮೋಡಗಳೂ ಅವರ ಪ್ರತಿಭೆಯನ್ನು ಮುಚ್ಚಿಡುವುದಾಗಲಿಲ್ಲ.

ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಸಂಸ್ಕೃತಿ ಇಲಾಖೆ ಇವುಗಳು ಆಯೋಜಿಸಿದ ಸಾಹಿತ್ಯದ ಅನೇಕ ಕಾರ್ಯಾಗಾರಗಳಲ್ಲಿ ನಾನು ಅವರು ಕೂಡಿಯೇ ಭಾಗವಹಿಸಿದ್ದೆವು. ಅನೇಕ ಸಲ ಇಬ್ಬರೂ ಒಂದೇ ರೂಮಿನಲ್ಲಿದ್ದೆವು. ಅವರ ಸರಳ ಸ್ವಭಾವ, ಮುಗ್ಧ ಭಾವನೆ ಈಗಲೂ ನನ್ನ ಕಣ್ಣುಮುಂದೆ ತೂಗುತ್ತಿರುತ್ತವೆ. ಯಾವುದೇ ವಿಷಯದ ಬಗ್ಗೆ ಬರೆಯುವಾಗ ಆ ಬಗ್ಗೆ ಅವರಿಗಿರುವ ಶ್ರದ್ಧೆ, ತಾಳ್ಮೆ, ಶಿಸ್ತು ಅನುಕರಣೀಯವಾದುದು.

ತಾನು ಏನೇ ಬರೆದರೂ ಅದಕ್ಕೊಂದು ಮೌಲ್ಯವಿರಬೇಕೆಂಬುದು ಅವರ ಆಶಯವಾಗಿರುತ್ತಿತ್ತು. ತನ್ನ ವೃತ್ತಿಯಲ್ಲಿಯೂ ಅವರು ದಕ್ಷ, ಶಿಸ್ತುಪ್ರಿಯ ಅಧ್ಯಾಪಕರೆಂದೇ ಹೆಸರು ಮಾಡಿದವರು. ಅವರು ಕಲಿಸಿದ ಅನೇಕ ವಿದ್ಯಾರ್ಥಿಗಳು ಇಂದು ಭಾರತಾದ್ಯಂತ ಪಸರಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ತಾವು ಕಟ್ಟೀಮನಿ ಸರ್‌ರವರ ವಿದ್ಯಾರ್ಥಿಗಳಾಗಿದ್ದೇವೆಂದು ಈಗಲೂ ಅವರು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.ಈ ರೀತಿಯ ಪ್ರೀತಿ ರಾಷ್ಟçಪತಿ ನೀಡುವ ಪ್ರಶಸ್ತಿಗಿಂತಲೂ ಮಿಗಿಲೆಂದು ನನ್ನ ಭಾವನೆ.

ಮಧ್ಯಪ್ರದೇಶದ ಅಮರಕಂಟಕ ಬುಡಕಟ್ಟು ವಿಶ್ವವಿದ್ಯಾಲಯದ ಎರಡನೆಯ ಕುಲಪತಿಯಾಗಿ ಅವರು ನೇಮಕಗೊಂಡಾಗ ಅದು ಅವರಿಗೇ ನಂಬಿಗೆಯಾಗಿರಲಿಲ್ಲ. ದನ ಕಾಯುವ, ಕುರಿ ಕಾಯುವ, ಎಂದೂ ಶಾಲೆಯ ಮುಖವನ್ನೇ ನೋಡಿರದಿದ್ದ ಅಪ್ಪನ ಮಗ ಒಂದು ವಿಶ್ವವಿದ್ಯಾಲಯದ ಕುಲಪತಿ ಆಗುವುದೆಂದರೇನು? ಅಕಲ್ಪಿತವಾದದ್ದು ಸಾಧ್ಯವಾಗಿ ಬಿಟ್ಟಿತ್ತು. ಯಾರೂ ಊಹಿಸಿರದ ಘಟನೆ ಸತ್ಯವಾಗಿತ್ತು. ಶ್ರಮಕ್ಕೆ, ಶ್ರದ್ಧೆಗೆ, ಪ್ರಾಮಾಣ ಕತೆಗೆ, ಪ್ರತಿಭೆಗೆ ಕೊನೆಗೂ ಜಯ ಲಭಿಸಿತ್ತು. ಕುಗ್ರಾಮದ ಒಬ್ಬ ತಳವಾರನ ಹುಡುಗ ವಿದ್ಯಾದೇವಿಯ ಅತ್ಯಚ್ಚ ಸಿಂಹಾಸನವಾಗಿರುವ ಕುಲಪತಿಯ ಖುರ್ಚಿಯನ್ನು ಅಲಂಕರಿಸಿದ್ದ.

ತೇಜಸ್ವಿ ಕಟ್ಟೀಮನಿ ಈ ಬುಡಕಟ್ಟು ವಿಶ್ವವಿದ್ಯಾಲಯದ ಎರಡನೆಯ ಕುಲಪತಿ. ಈ ಮೊದಲಿದ್ದ ಕುಲಪತಿಯವರು ಪ್ರಬಲ ಕೋಮಿಗೆ ಸೇರಿದವರು. ತಮ್ಮ ಅಧಿಕಾರಾವಧಿಯಲ್ಲಿ ಅವರು ತಮ್ಮ ಕೋಮಿನವರನ್ನೇ ಅಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ವಿಶ್ವವಿದ್ಯಾಲಯವು ಬುಡಕಟ್ಟು ಜನರ ಅಭಿವೃದ್ಧಿಗಾಗಿದ್ದರೂ ಅದರ ಫಲಾನುಭವಿಗಳೆಲ್ಲ ಬಲಿಷ್ಠ ಕೋಮಿನವರೇ ಆಗಿದ್ದರು. ಇದ್ಯಾವುದರ ಬಗ್ಗೆ ಅರಿವೇ ಇರದ ಬುಡಕಟ್ಟಿನ ವಿದ್ಯಾರ್ಥಿಗಳು, ಯುವಜನತೆ ತ್ರಾಹಿ ತ್ರಾಹಿಯೆಂದು ಅಂಡಲೆಯುತ್ತಿದ್ದರು.

ಬಲಿಷ್ಠ ಕೋಮಿನವರು ಈ ಬುಡಕಟ್ಟು ಜನರನ್ನು ಅವರಿಗಾಗಿಯೇ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ದೂರವಿರಿಸಿದ್ದರು. ಬುಡಕಟ್ಟಿನವರು ಅನಾಗರಿಕರೆಂದೂ, ಅವಿದ್ಯಾವಂತರೆಂದೂ, ಕುಡುಕರೆಂದೂ, ಅಸಭ್ಯರೆಂದೂ, ಮನುಷ್ಯ ರೂಪಿಯಾಗಿದ್ದರೂ ಪಶುಗಳೆಂದೂ ಅವರನ್ನು ಅವಮಾನಿಸುತ್ತಿದ್ದರು. ಶತಶತಮಾನಗಳಿಂದಲೂ ಶೋಷಣೆಗೆ ಒಳಗಾದ ಬುಡಕಟ್ಟು ಜನಾಂಗ ಬಲಿಷ್ಠ ಕೋಮಿನವರು ಹೇಳಿದ್ದು ಸತ್ಯವಾಗಿರಬೇಕೆಂದು ಮುಗ್ಧವಾಗಿ ನಂಬಿ ತಮಗಾಗಿಯೇ ಇರುವ ವಾಸ್ತುವಿನಿಂದ ದೂರವೇ ಉಳಿದಿದ್ದರು.

ತೇಜಸ್ವಿ ಕಟ್ಟಿಮನಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಾಗ ಮೊಟ್ಟಮೊದಲು ಈ ಬಲಿಷ್ಠ ಕೋಮಿನ ಕುತಂತ್ರದ ನಡೆಗೆ ಮರ್ಮಾಘಾತ ನೀಡಿದರು. ವಿಶ್ವವಿದ್ಯಾಲಯದ ರಚನೆಯ ನಡಾವಳಿಗಳನ್ನು ಅಭ್ಯಸಿಸಿದ ತೇಜಸ್ವಿಯವರಿಗೆ ಮೊಟ್ಟಮೊದಲು ಕಂಡಿದ್ದು ವಿಶ್ವವಿದ್ಯಾಲಯ ಸ್ಥಾಪನೆಯ ಮೂಲ ಉದ್ದೇಶವನ್ನೇ ಇಲ್ಲಿ ಉಲ್ಲಂಘಿಸಿ ತಮಗೆ ಬೇಕಾದಂತೆ ಆಡಳಿತ ನಡೆಸಿರುವುದು. ಇದನ್ನು ಬೇರು ಸಹಿತ ಕಿತ್ತೊಗೆದು ವಿಶ್ವವಿದ್ಯಾಲಯಕ್ಕೆ ಒಂದು ಶಿಸ್ತನ್ನು ರೂಢಿಸಬೇಕೆಂದು ನಿರ್ಧರಿಸಿದ ತೇಜಸ್ವಿ ಡೇ ಒನ್‌ದಿಂದಲೇ ತಮ್ಮ ಕೆಲಸ ಆರಂಭಿಸಿದರು.

ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರಕಾರವು ಕೋಟಿಗಟ್ಟಲೇ ಹಣವನ್ನು ನೀಡುತ್ತಿದ್ದರೂ ನಿಗದಿತ ಅವಧಿಯಲ್ಲಿ ನಿಗದಿತವಾದ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂಬ ಸತ್ಯ ಅವರಿಗೆ ಕಂಡು ಬಂದಿತು. ವಿಶ್ವವಿದ್ಯಾಲಯದ ಸಿಬ್ಬಂದಿಯು ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುತ್ತಿದ್ದರೂ ಅವರೆಂದು ವಿಶ್ವವಿದ್ಯಾಲಯದ ಪರಿಸರದಲ್ಲಿ ವಾಸಕ್ಕಿರಲಿಲ್ಲ. ವಿಶ್ವವಿದ್ಯಾಲಯದಿಂದ ೩೦-೪೦ ಕಿಲೋಮೀಟರು ದೂರದಲ್ಲಿ ಅವರೆಲ್ಲ ವಾಸಿಸುತ್ತಿದ್ದರು. ಅಲ್ಲಿ ಅಭ್ಯಾಸಕ್ಕಿದ್ದ ವಿದ್ಯಾರ್ಥಿಗಳು ಲಂಗುಲಗಾಮಿಲ್ಲದ ಕುದುರೆಗಳಂತಾಗಿದ್ದರು. ಎಲ್ಲೂ ಶಿಸ್ತು, ಸ್ವಚ್ಛತೆ, ಅಚ್ಚುಕಟ್ಟುತನ ಕಂಡು ಬರುತ್ತಿರಲಿಲ್ಲ. ಇವುಗಳಿಗೆಲ್ಲ ಒಂದು ಗತಿಕಾಣ ಸಲೇಬೇಕೆಂದು ನಿರ್ಧರಿಸಿದ ತೇಜಸ್ವಿ ಕಟ್ಟೀಮನಿ ಅಕೆಡೆಮಿಕ್ ಬೇಶಿಸ್ತಿನ ವಿರುದ್ಧ ಶಿವಧನುಷ್ಯವನ್ನೇ ಎತ್ತಿದರು.

ಅವರ ಈ ಕ್ರಮ ಸಹಜವಾಗಿ ಪಟ್ಟಭದ್ರರ ಹೊಟ್ಟೆಯಲ್ಲಿ ಕೆಂಪು ಮೆಣಸಿನಕಾಯಿಯನ್ನು ಇಟ್ಟಂತಾಯಿತು. ಕಟ್ಟೀಮನಿಯವರ ವಿರುದ್ಧ ಈ ಪಟ್ಟಭದ್ರರು ಅಪಪ್ರಚಾರದ ಯುದ್ಧವನ್ನೇ ಹೂಡಿದರು. ಅನಾಮಧೇಯ ಪತ್ರಗಳನ್ನು ಕೇಂದ್ರ ಸರಕಾರಕ್ಕೆ ಕಳಿಸಿ ಇವರನ್ನು ಬದನಾಮ್ ಮಾಡಲು ಯತ್ನಿಸಲಾಯಿತು. ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಇವರ ಮೇಲೆ ಛೂ ಬಿಡಲಾಯಿತು; ಪತ್ರಿಕೆಗಳಲ್ಲಿ ಇವರ ವಿರುದ್ಧ ಬರೆಸಲಾಯಿತು. ಒಂದೇ… ಎರಡೇ…ಸಾಲು ಸಾಲು ಅಪಪ್ರಚಾರದ ಹುನ್ನಾರಗಳು.

ಈ ಜಾಗದಲ್ಲಿ ತೇಜಸ್ವಿ ಕಟ್ಟೀಮನಿ ಇರದೇ ಬೇರೆಯವರು ಇದ್ದಿದ್ದರೆ ಒಂದೋ ಅವರು ಅಲ್ಲಿಂದ ಓಡಿ ಹೋಗುತ್ತಿದ್ದರು ಅಥವಾ ಅಪಪ್ರಚಾರಕರಿಗೆ ಶರಣಾಗಿ ತಾವೂ ಭ್ರಷ್ಟಾಚಾರದ ಭಾಗವಾಗುತ್ತಿದ್ದರು. ಒಂದು ಸಂದರ್ಭದಲ್ಲಿ ಇವರ ಶ್ರದ್ಧೆಯನ್ನು ಕಣ್ಣಾರೆ ಕಂಡ ಹಿರಿಯರೊಬ್ಬರು ಕಟ್ಟೀಮನಿಯವರಿಗೆ ‘ಸರ್ ಇದೆಲ್ಲ ಯಾಕೆ ಬೇಕು? ಯಾರಿಗಾಗಿ ನೀವು ಇದೆಲ್ಲ ಮಾಡ್ತಾ ಇದ್ದಿರೋ ಅರ‍್ಯಾರಿಗೂ ನಿಮ್ಮ ಈ ಪ್ರಾಮಾಣ ಕತೆಯ ಬೆಲೆ ಗೊತ್ತಿಲ್ಲ.

ಉಳಿದವರಂತೆ ನೀವೂ ಸುಮ್ಮನಿದ್ದರೆ, ಕೋಟಿ ಕೋಟಿ ಹಣವನ್ನು ಸಂಪಾದಿಸಬಹುದು’ ಎಂದರು. ಆದರೆ ಕಟ್ಟೀಮನಿ ಮೌಲ್ಯಗಳಿಗೆ ಮಹತ್ವ ನೀಡುವವರು. ತಾವು ಮಾಡುತ್ತಿರುವುದು ಸರಿಯಾಗಿದೆಯೆಂದು ಅವರಿಗೆ ಗೊತ್ತು. ತಾವು ಹೊರಟಿರುವದು ಸತ್ಯದ ಮಾರ್ಗದಲ್ಲಿ ಎಂಬುದು ಅವರಿಗೆ ಮನಸಟ್ಟಾಗಿರುವುದರಿಂದ ಮುಂದೆ ಇಟ್ಟ ಹೆಜ್ಜೆಯನ್ನು ಹಿಂತೆಗೆದುಕೊಳ್ಳಲಿಲ್ಲ. ಅವರ ಗಟ್ಟಿ ನಿರ್ಧಾರವನ್ನು ಕಂಡ ವಿರೋಧಿಗಳೇ ಹಿಂದೆ ಸರಿಯಬೇಕಾಯಿತು; ಇದು ಸತ್ಯದ ವಿಜಯವಾಗಿತ್ತು.

ವಿಶ್ವವಿದ್ಯಾಲಯದ ಆವರಣವು ಕಸದಿಂದ ತುಂಬಿ ತುಳುಕುತ್ತಿತ್ತು. ಕ್ಯಾಂಪಸ್ಸಿನಲ್ಲಿರುವ ಮನೆಗಳೂ ಕಸದ ತೊಟ್ಟಿಗಳಾಗಿದ್ದವು. ಕಟ್ಟೀಮನಿ ಕೆಲ ಯುವ ಪ್ರಾಧ್ಯಾಪಕರನ್ನು ಕೂಡಿಸಿ ತಾವೇ ಕಸಬರಿಗೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಇಳಿದರು. ಕುಲಪತಿಯೇ ಝಾಡೂ ಹಿಡಿದು ಕಸ ಹೊಡೆಯುತ್ತಿದ್ದಾನೆಂದು ನೋಡಿದ ಉಳಿದ ಪ್ರಾಧ್ಯಾಪಕರು ಕನಿಷ್ಟ ತಮ್ಮ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿದರು. ವಿಶ್ವವಿದ್ಯಾಲಯವೇ ಎಲ್ಲರ ಮನೆಗಳಿಗೆ ಹಸಿ ಕಸ ಹಾಗು ಒಣ ಕಸವನ್ನು ವಿಂಗಡಿಸಿಡಲು ಎರಡೆರೆಡು ಕಸದ ಬುಟ್ಟಿಗಳನ್ನು ನೀಡಿ ನೈರ್ಮಲ್ಯೀಕರಣಕ್ಕೆ ನಾಂದಿ ಹಾಡಿತು.

ಸ್ವತಃ ಕುಲಪತಿಯು ತನ್ನ ಹೆಂಡತಿಯೊಡಗೂಡಿ ಕಸಬರಿಗೆ ಹಿಡಿದು ಕ್ಯಾಂಪಸ್ಸು ಸ್ವಚ್ಛ ಮಾಡುತ್ತಿರುವ ದೃಶ್ಯ ಒಂದು ಹಿಂದಿ ಪತ್ರಿಕೆಯು ಪ್ರಕಟಿಸಿದಾಗ ಬೇರೆ ಬೇರೆ ವಿಶ್ವವಿದ್ಯಾಲಯಗಳ ಕುಲಪತಿಗಳು ಕಟ್ಟೀಮನಿಯವರಿಗೆ ದೂರವಾಣ ಕರೆ ಮಾಡಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಯವರು ಸ್ವತಃ ಕ್ಯಾಂಪಸ್ಸಿಗೆ ಬಂದು ಸ್ವಚ್ಛತಾ ಕಾರ್ಯದ ವಿಡಿಯೋ ಮಾಡಿ ಅದನ್ನು ಎಲ್ಲೆಡೆಗೆ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟರು. ಇದು ವೈರಲ್ ಆಯಿತು. ಇದರಿಂದ ಕೆಲವರ ಹೊಟ್ಟೆಯಲ್ಲಿ ಖಾರ ಕಲಿಸಿದಂತಾದರೂ ಬಹುಜನರು ಇದನ್ನು ಸ್ವಾಗತಿಸಿದರು. ವಿಶ್ವವಿದ್ಯಾಲಯದ ಪರಿಸರ ಈಗ ಕನ್ನಡಿಯಂತೆ ಫಳ ಫಳ ಹೊಳೆಯತೊಡಗಿತು. ಹಿಡಿದ ಒಂದು ಕಾರ್ಯವನ್ನು ಯಶಸ್ವಿಯಾಗಿದ್ದಕ್ಕೆ ಕಟ್ಟೀಮನಿಯವರಿಗೆ ಸಂತೋಷವೂ ಆಯಿತು.

ಅಮರಕಂಟಕದ ಈ ಬುಡಕಟ್ಟು ವಿಶ್ವವಿದ್ಯಾಲಯವು ದಟ್ಟವಾದ ಕಾಡಿನಲ್ಲಿ ಸ್ಥಾಪಿತವಾಗಿದೆ. ಇದು ನರ್ಮದಾ ನದಿಯ ಉಗಮವೂ ಹೌದು. ಕಾಡಿನಲ್ಲಿದ್ದರೂ ಬೇಸಿಗೆ ಕಾಲದಲ್ಲಿ ಇಲ್ಲಿ ನೀರಿಗೆ ತಾತ್ವಾರ. ಅದಕ್ಕೆ ಮುಖ್ಯ ಕಾರಣ ಮಳೆಗಾಲದ ಮಳೆ ನೀರನ್ನು ಹಿಡಿದಿಟ್ಟು ಮಳೆಕೊಯ್ಲು ಪದ್ಧತಿ ಇಲ್ಲಿಗೆ ಅಪರಿಚಿತ. ಕಟ್ಟೀಮನಿಯವರು ಕ್ಯಾಂಪಸ್ಸಿನಲ್ಲಿಯೇ ಒಂದು ಕೆರೆಯನ್ನು ನಿಮಿ೯ಸಿ ಅದರಲ್ಲಿ ಮಳೆ ನೀರು ಶೇಖರಿಸುವಲ್ಲಿ ಯಶಸ್ವಿಯಾದರು.

ಈ ಕೆಲಸಕ್ಕೂ ಆರಂಭದಲ್ಲಿ ಕೆಲವರ ವಿರೋಧ ವ್ಯಕ್ತವಾದರೂ ಕಟ್ಟೀಮನಿ ಡೋಂಟ್‌ಕೇರ್ ಹೇಳುತ್ತ ತಾವು ಹಿಡಿದ ಕೆಲಸವನ್ನು ನಿಗದಿತ ವೇಳೆಯಲ್ಲಿ ಮುಗಿಸಿದರು. ಇದರಿಂದ ವಿಶ್ವವಿದ್ಯಾಲಯದ ತೋಟ-ಗಾರಿಕೆಗೂ ಬಲ ಬಂದಿತು. ಬೇರೆ ಬೇರೆ ತಳಿಗಳ ಸಸಿಗಳನ್ನು ಅಭಿವೃದ್ಧಿ ಪಡಿಸಿ ಮೈಸೂರು ಬೃಂದಾವನ ಮಾದರಿಯ ಗಾರ್ಡನ್ ವಿಶ್ವವಿದ್ಯಾಲಯದಲ್ಲಿ ತಲೆ ಎತ್ತಿ ನಿಂತಿತು. ಅವರ ನಿರಂತರ ಶ್ರಮದ ಫಲವಾಗಿ ಈಗ ಕ್ಯಾಂಪಸ್ಸಿನಲ್ಲಿ ೩೫೦೦೦ ಗಿಡಮರಗಳಿವೆ; ಹಸಿರು, ಹೂವು, ಸುಗಂಧ ಎಲ್ಲೆಡೆಗೆ ಪಸರಿಸಿದೆ.

ಅಪರೂಪದ ಅನೇಕ ಪಕ್ಷಿಗಳು ಇಲ್ಲಿ ಚಿಲಿಪಿಲಿಗುಟ್ಟುತ್ತಿವೆ. ಅನೇಕಾನೇಕ ಔಷಧೀಯ ಸಸ್ಯಗಳನ್ನೂ ಈಗ ಅಲ್ಲಿ ಬೆಳಸಲಾಗಿದೆ. ಈ ಸಸ್ಯಗಳ ಕೃಷಿ ತಂತ್ರಜ್ಞಾನವನ್ನು ಅಲ್ಲಿರುವ ಬುಡಕ್ಟಟು ರೈತರಿಗೆ ಮತ್ತು ಸ್ಥಳೀಯರಿಗೆ ಕಟ್ಟೀಮನಿಯವರು ಅನೇಕಾನೇಕ ಕಾರ್ಯಗಾರಗಳನ್ನು ಮಾಡಿ ಕಲಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನಕೇಂದ್ರವನ್ನು ಆರಂಭಿಸಿ ಔಷಧೀಯ ಸಸ್ಯಗಳನ್ನು ಬೆಳೆಸಲು ರೈತರನ್ನು ಪ್ರೋತ್ಸಾಹಿಸಿದರು. ಕೃಷಿಯಲ್ಲಿ ಆಗಿರುವ ಟೆಕ್ನಾಲಜಿ ಕ್ರಾಂತಿಯನ್ನು ಬುಡಕಟ್ಟು ರೈತರಿಗೆ ಪರಿವಯಿಸಲು ಕಟ್ಟೀಮನಿ ಪಟ್ಟಿರುವ ಶ್ರಮ ಅಸಾಧ್ಯವಾದುದು.ತಾವು ಹಿಡಿದ ಈ ಮಿಶನ್ನು ಯಶಸ್ವಿಯಾದಾಗ ಅವರಿಗಾದ ಸಂತೋಷ ಹೇಳಲಸದಳ.

ಅಮರಕಂಟಕ ವಿಶ್ವವಿದ್ಯಾಲಯ ಇಡೀ ದೇಶದಲ್ಲಿರುವ ಒಂದೇ ಒಂದು ಬುಡಕಟ್ಟು ವಿಶ್ವವಿದ್ಯಾಲಯ. ದೇಶದಲ್ಲಿರುವ ಹತ್ತು ಕೋಟಿ ಬುಡಕಟ್ಟು ಆದಿವಾಸಿಗಳನ್ನು ಪ್ರತಿನಿಧಿಸುವ ಶಿಕ್ಷಣ ಸಂಸ್ಥೆ. ಇದರ ವ್ಯಾಪ್ತಿ ಇಡಿ ಭಾರತ ದೇಶ. ಆದರೆ ಕಟ್ಟೀಮನಿಯವರು ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಹೋಗುವುದಕ್ಕಿಂತ ಮುಂಚೆ ಇಲ್ಲಿ ಕೇವಲ ಅಮರಕಂಟಕದ ಸುತ್ತಮುತ್ತಲಿನ ಬುಡಕಟ್ಟು ವಿದ್ಯಾರ್ಥಿಗಳು ಮಾತ್ರ ಇದ್ದರು. ಕಟ್ಟೀಮನಿಯವರು ಅದಕ್ಕೊಂದು ವಿಶಾಲಾರ್ಥ ನೀಡಿ ದೇಶದ ವಿವಿಧ ಕಡೆಗಳಲ್ಲಿರುವ ಆದಿವಾಸಿ ವಿದ್ಯಾರ್ಥಿಗಳಿಗೂ ಇಲ್ಲಿ ಪ್ರವೇಶ ನೀಡಿ ಅದು ಬುಡಕಟ್ಟು ಜನರ ಪ್ರತಿನಿಧಿಯಾಗುವಂತೆ ಶ್ರಮಿಸಿದರು. ಅವರ ಈ ಕಾರ್ಯದಲ್ಲೂ ಹಲವರು ಅಡೆತಡೆಗಳನ್ನುಂಟು ಮಾಡಿದರೂ ಕಟ್ಟೀಮನಿ ಎದೆಗುಂದಲಿಲ್ಲ.

ಈ ರಾಷ್ಟ್ರೀಯ ವಿಶ್ವವಿದ್ಯಾಲಯವನ್ನು ನಿಜಾರ್ಥದಲ್ಲಿ ಕಟ್ಟೀಮನಿಯವರು ರಾಷ್ಟ್ರೀಕರಣ ಮಾಡಿದರು. ಈಗ ಕ್ಯಾಂಪಸ್ಸಿನಲ್ಲಿ ಭಾರತದ ಬೇರೆ ಬೇರೆ ಭಾಗಗಳ ಬುಡಕಟ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಕಾಣಬಹುದಾಗಿದೆ. ಸೀಮಿತ ವ್ಯಾಪ್ತಿಯ ವಿಶ್ವವಿದ್ಯಾಲಯ ಈಗ ತನ್ನ ಸೀಮೆಯನ್ನು ಭಾರತಾದ್ಯಂತ ವಿಸ್ತರಿಸಿಕೊಂಡಿದೆ. ಈ ರೀತಿಯ ಒಂದು ವಿಶ್ವವಿದ್ಯಾಲಯ ತಮಗಾಗಿ ಇದೆಯೆಂದು ಗೊತ್ತಿರದ ಸಾವಿರಾರು ಬುಡಕಟ್ಟು ವಿದ್ಯಾರ್ಥಿಗಳು ಈಗ ಅಲ್ಲಿಯ ವಿದ್ಯಾರ್ಥಿಗಳಾಗಿ ಅಭ್ಯಾಸ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಬಾಗಿಲನ್ನು ಭಾರತದ ಸಮಸ್ತ ಬುಡಕಟ್ಟು ವಿದ್ಯಾರ್ಥಿಗಳಿಗೆ ತೆರೆದ ಕೀರ್ತಿ ಅಳವಂಡಿ ಕುಗ್ರಾಮದ ತಳವಾರ ಯೆಂಕಪ್ಪನ ಮಗ ತೇಜಸ್ವಿಗೆ ಹೋಗುತ್ತದೆ!

ಪ್ರೊ. ಎಲ್.ಜಿ. ಹಾವನೂರ ಕರ್ನಾಟಕದ ಧೀಮಂತ ವಿಚಾರವಂತರಲ್ಲಿ ಒಬ್ಬರು. ಹಿಂದುಳಿದ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು. ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ ಅವರು ಹಾವನೂರರನ್ನು ತಮ್ಮ ಸಂಪುಟದಲ್ಲಿ ಸಚಿವರನ್ನಾಗಿ ನೇಮಿಸಿ ಹಿಂದುಳಿದವರ ಬೈಬಲ್‌ದಂತಿರುವ ಹಾವನೂರ ವರದಿಯನ್ನು ಅವರಿಂದ ಬರೆಸಿಕೊಂಡು ಹಿಂದುಳಿದ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆದರು.

ಅರಸು ಅವರನ್ನು ಈಗ ನಾವು ‘ಹಿಂದುಳಿದವರ ಚಾಂಪಿಯನ್’ನೆಂದು ಹೊಗಳುತ್ತೇವೆ. ಆದರೆ ಅವರ ಈ ಕಾರ್ಯದ ಹಿಂದೆ ಇದ್ದವರು ಹಿಂದುಳಿದ ಸಮಾಜದ ಹಾವನೂರರವರು. ಅವರ ಈ ಸೇವೆಯನ್ನು ಕರ್ನಾಟಕ ಮತ್ತು ಕನ್ನಡಿಗರು ಮರೆತಿದ್ದರೂ ಕಟ್ಟೀಮನಿಯವರು ದೂರದ ಅಮರಕಂಟಕ ವಿಶ್ವವಿದ್ಯಾಲಯದಲ್ಲಿ ಕಟ್ಟಿದ ಒಂದು ಅಡಿಟೋರಿಯಂಗೆ ಅವರ ಹೆಸರನ್ನಿಟ್ಟು ಹಾವನೂರರನ್ನು ಅಮರವಾಗಿಸಿದ್ದಾರೆ.

ವಿಶ್ವವಿದ್ಯಾಲಯದ ಈ ವಿಶಾಲ ಅಡಿಟೋರಿಯಂದಲ್ಲಿಯೇ ಈಗ ಅಲ್ಲಿಯ ಮುಖ್ಯ ಕಾರ್ಯಕ್ರಮಗಳು ನಡೆಯುತ್ತವೆ. ಹಾವನೂರರ ಜೊತೆಗೆ ಬೇರೆ ಬೇರೆ ಬುಡಕಟ್ಟು ಹೀರೋಗಳ ಹೆಸರುಗಳನ್ನು ಬೇರೆ ಬೇರೆ ಕಟ್ಟಡಗಳಿಗೆ ಇಡಲಾಗಿದೆ. ಆ ಮೂಲಕವಾಗಿ ಬುಡಕಟ್ಟು ಹೀರೋಗಳನ್ನು ಜೀವಂತವನ್ನಾಗಿಸಿದ್ದಾರೆ ಕಟ್ಟಿಮನಿಯವರು ತಮ್ಮ ಸಮಾಜಕ್ಕಾಗಿ ದುಡಿದ ಈ ಹಿರೋಗಳನ್ನು ಗನ ಯುವ ಜನಾಂಗಕ್ಕೆ ಪರಚಯಿಸಿದ ಕಟ್ಟೀಮನಿಯವರ ಈ ಕಾರ್ಯವೂ ಅಪಾರವಾಗಿ ಪ್ರಶಂಸಿಸಲ್ಪಟ್ಟಿತು. ಭಾರತದ ಎಲ್ಲ ಭಾಗದ ಬುಡಕಟ್ಟು ಹಿರೋಗಳು ಈಗ ಅಲ್ಲಿ ವಾಸ್ತವವಾಗಿರುವುದು ಒಂದು ಅಪರೂಪದ ಕಾರ್ಯ.

ಬುಡಕಟ್ಟು ಜನಾಂಗದವರಿಗೆ ಅವರದ್ದೇ ಆದ ಒಂದು ಸಂಸ್ಕೃತಿ ಇದೆ. ಅವರದ್ದೇ ಆದ ಕಲೆ, ಸಂಗೀತ, ನೃತ್ಯವಿದೆ. ಕಟ್ಟೀಮನಿಯವರು ಇವುಗಳಿಗೆಲ್ಲ ನೀರೆರೆದು ಪೋಷಿಸಿ ಅಲ್ಲಿಯ ಬುಡಕಟ್ಟು ಕಲಾವಿದರ ಕಲೆ ಭಾರತಾದ್ಯಂತ, ವಿಶ್ವಾದ್ಯಂತ ಪಸರಿಸುವಂತೆ ನೋಡಿಕೊಂಡರು. ಅನಕ್ಷರಸ್ತ ಈ ಕಲಾವಿದರ ಪೇಂಟಿಂಗ್ ಗಳು ವಿಶ್ವದ ಅನೇಕ ಕಡೆ ಪಸರಿಸಲು ಶ್ರಮಪಟ್ಟರು. ದೀಪಾವಳಿ, ಹೋಳಿ ಹಬ್ಬಗಳನ್ನು ಈ ಬುಡಕಟ್ಟು ಜನರ ಜೊತೆಗೇ ಆಚರಿಸಿದರು. ಅಲ್ಲಿಯ ವರೆಗೆ ವಿಶ್ವವಿದ್ಯಾಲಯದ ಕುಲಪತಿಯೆಂದರೆ ಇಂದ್ರನೋ, ಚಂದ್ರನೋ ಎಂದು ನಂಬಿದ್ದ ಬುಟಕಟ್ಟಿಗರು ಇವನೂ ನಮ್ಮಂತೆಯೇ, ನಮ್ಮ ನಡುವಿನವನೇ ಎಂಬ ಭಾವನೆ ಬರಿಸಲು ಕಾರಣರಾದರು.

ತೇಜಸ್ವಿ ಕಟ್ಟೀಮನಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರೊಡಗೂಡಿ ಅಮರಕಂಟಕ ವಿಶ್ವವಿದ್ಯಾಲಯದಲ್ಲಿ ಹೊರನಾಡ ಕನ್ನಡಿಗರ ಸಮಾವೇಶವನ್ನು ಆಯೋಜಿಸಿದ್ದುದನ್ನು ಕನ್ನಡಿಗರು ಮರೆಯಲಾರರು. ಐದು ದಿನಗಳ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ೪೫೦ ಜನರು ಭಾಗವಹಿಸಿ ಅಮರಕಂಟಕ ವಿಶ್ವವಿದ್ಯಾಲಯದಲ್ಲಿ ಹೊರನಾಡ ಕನ್ನಡಿಗರ ಹಲವು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ೪೫೦ ಜನರು ಭಾಗವಹಿಸಿ ಅಮರಕಂಟಕ ಪರಿಸರವನ್ನು ಅಕ್ಷರಶಃ ಕರ್ನಾಟಕವನ್ನಾಗಿ ಪರಿವರ್ತಿಸಿದ್ದರು.

ಈ ಹೊರನಾಡು ಉತ್ಸವದ ಯಶಸ್ಸಿನಿಂದ ಪ್ರೇರಿತಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಣ ಪುರದ ಇಂಫಾಲ ನಗರದಲ್ಲಿ ಹೊರನಾಡು ಉತ್ಸವವನ್ನು ಆಯೋಜಿಸಿತ್ತು. ಈ ಉತ್ಸವದ ಸಕಲ ಯಜಮಾನ್ಯವನ್ನು ಕಟ್ಟೀಮನಿಯವರಿಗೇ ನೀಡಲಾಗಿತ್ತು. ಈ ಕಾರ್ಯವನ್ನು ಅವರು ಯಶಸ್ವೀ ರೀತಿಯಲ್ಲಿ ಮಾಡಿತೋರಿಸಿದರು.

ಕಟ್ಟೀಮನಿಯವರ ನಿರಂತರ ಶ್ರಮದ ಫಲವಾಗಿ ಅಮರಕಂಟಕ ವಿಶ್ವವಿದ್ಯಾಲಯ ಜಗತ್ತಿನ ಅನೇಕ ದೇಶಗಳ ವಿಶ್ವವಿದ್ಯಾಲಯಗಳ ಜೊತೆಗೆ ಶೈಕ್ಷಣ ಕ ಒಡಂಬಡಿಕೆಗಳನ್ನು ಮಾಡಿಕೊಂಡಿದೆ. ಆ ದೇಶದ ವಿದ್ಯಾರ್ಥಿಗಳು ಅಮರಕಂಟಕಕ್ಕೆ ಬಂದು ಅಭ್ಯಸಿಸಿದರೆ ಇಲ್ಲಿಯ ವಿದ್ಯಾರ್ಥಿಗಳು ಆ ದೇಶಗಳಿಗೆ ಹೋಗಿ ಅಲ್ಲಿಯ ಬುಡಕಟ್ಟು ಸಂಸ್ಕೃತಿಯನ್ನು ಅಭ್ಯಸಿಸುತ್ತಿದ್ದಾರೆ. ಸಮೀಪದಲ್ಲಿರುವ ಶಹರಿನ ಮುಖವನ್ನು ನೋಡಿರದಿದ್ದ ಈ ಬುಡಕಟ್ಟು ವಿದ್ಯಾರ್ಥಿಗಳು ಇಂದು ವಿದೇಶದಲ್ಲಿ ಅಭ್ಯಸಿಸುತ್ತಿರುವುದು ಕಟ್ಟೀಮನಿಯವರು ಕಂಡ ಕನಸು ನನಸಾಗಿದೆ.

ಕಟ್ಟೀಮನಿಯವರ ಈ ಕ್ರಾಂತಿಕಾರಕ ಯೋಜನೆಗಳಿಗೆ ಬ್ರೇಕ್ ಹಾಕಲು ಅವರ ವಿರೋಧಿಗಳು ಅನೇಕಾನೇಕ ಅಸ್ತçಗಳನ್ನು ಬಳಸಿದರು. ಅವು ವಿಫಲಗೊಂಡಾಗ ಕಟ್ಟೀಮನಿಯವರು ಬುಡಕಟ್ಟು ಸಮಾಜದವರೇ ಅಲ್ಲ; ಅವರು ಕ್ರಿಶ್ಚಿಯನ್ನರು ಎಂಬ ಹುಯಿಲೆಬ್ಬಿಸಿದರು. ಈಗ ಎಲ್ಲ ಅಪಪ್ರಚಾರಗಳನ್ನು ಕಟ್ಟೀಮನಿ ಬಲು ಧೈರ್ಯದಿಂದ ಎದುರಿಸಿ ಈ ಎಲ್ಲ ಅಗ್ನಿದಿವ್ಯಗಳಿಂದ ಪಾರಾದರು.

ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ನಿಜಾರ್ಥದ ರಿಜರ್ವೇಶನ್ ಜಾರಿಗೊಳಿಸಿ ಅಲ್ಲಿಯ ವರೆಗೆ ಬರೀ ಕಾಗದದ ಮೇಲಿದ್ದ ಕಾಯ್ದೆಗಳನ್ನು ಅಕ್ಷರಶಃ ಜಾರಿಗೆ ತಂದರು. ತಮ್ಮವರನ್ನು ನೇಮಿಸಿಕೊಳ್ಳಬೇಕೆಂಬ ಒತ್ತಡ, ಆಮೀಷಗಳನ್ನು ದೂರ ಸರಿಸಿ ಶಿಕ್ಷಣ ಕ್ಷೇತ್ರದ ಮಾನವನ್ನು, ಗೌರವವನ್ನು ಕಾಪಾಡಿದರು. ವಿರೋಧಿಗಳು ಇವರನ್ನು ‘ಕಾಲೂ ಕಟ್ಟೀಮನಿ’ (ಕಪ್ಪಗಿರುವ ಕಟ್ಟೀಮನಿ) ಎಂದು ಮೂದಲಿಸಿದರೂ ‘ಬ್ಲಾಕ್ ಇಜ್ ಬ್ಯೂಟಿಫುಲ್’ ಎಂಬುದನ್ನು ಜಗತ್ತಿಗೆ ಸಾರಿದರು.

ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೇ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು. ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ. ಎಸ್.ಟಿ.ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದ ವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ.

ಕಟ್ಟೀಮನಿಯವರ ಒಂದು ವೈಶಿಷ್ಟö್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆ ಪಡುವಂತೆ ಮಾಡಿದರು. ತಮ್ಮ ಇಡಿಯ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆ ಕಟ್ಟುವವರು; ಕೆಡುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ನಾನು ಹಾರೈಸುತ್ತೇನೆ.

‍ಲೇಖಕರು Admin

June 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: