ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛಾಯಾ ಭಗವತಿ ಕವಿತೆ: ಒಂಟಿ ಚಪ್ಪಲಿಯ ವಿರಹಗೀತೆ

-ಛಾಯಾ ಭಗವತಿ

ಅದೆಷ್ಟು ಕಾಲದಿಂದ ನಾನಿಲ್ಲಿ ಒಬ್ಬನೇ ಸಿಕ್ಕಿಬಿದ್ದು ಒದ್ದಾಡುತ್ತಿದ್ದೇನೆ!

 

 

 

ಕೊಂಡವನೇನೋ, ಕೊಂಡಹಾಗೆಯೇ ನಮ್ಮನ್ನು

ಮನದಣಿಯೆ ರುಬ್ಬಿ, ಮೂರು ತಿಂಗಳಿಗೆ ಮಬ್ಬಾಗಿಸಿಬಿಟ್ಟ!

ಪುಣ್ಯಾತ್ಮರಾರೋ ನಮ್ಮ ಮದುವೆ ಮಾಡಿಸಿ, ಮಜವಾಗಿರಿ ಅಂತ

ಪುಟ್ಟದಾದರೂ ನೆಮ್ಮದಿ ತುಂಬಿದ್ದ ಡಬ್ಬಿಯ ಮನೆಯೊಳಗೆ,

ಬಂಧಿಸಿ, ನಾವು ಸಲಸಲಕ್ಕೂ ಸಂಧಿಸಿ,

ತುಟಿಗೆ ತುಟಿ, ಮುಖಕ್ಕೆ ಮುಖವೊತ್ತಿ-

ಕೊಂಡೇ ಅನುರಾಗದಿಂದ ಇರುವುದಕೆ ಅನುವಾಗಿದ್ದರು!

 

 

 

ಇವನೆಲ್ಲಿಂದ ಬಂದನೋ, ‘ಮೇಡ್ ಫéಾರ್ ಮೈ ಫéೀಟ್’ ಅಂತ

ನಾವರಿಯದ ಭಾಷೆಯಲಿ ನಮ್ಮ-

ನೊಲಿಸಿಕೊಂಡವ, ನಮ್ಮಿಬ್ಬರನಗಲಿಸಿಬಿಟ್ಟ!

ನಾನು ಮುಂದೆ ಇದ್ದರೆ ಈಕೆ ಸದಾ ಹಿಂದೆ!

ಒಮ್ಮೆ ಅವಳು ಮೇಲೆ, ನಾನೆಲ್ಲೋ ಕೆಳಗೆ!

ಯಾವಾಗಲೋ ಒಮ್ಮೆ ಕಾಲು ಜೋಡಿಸಿದನೆಂದರೆ,

ಈಕೆಯ ಸೊಂಟ ಸವರುವ ಸೌಭಾಗ್ಯ!

ದೂರವಿದ್ದರೆ ದೂರವಲ್ಲ, ಹತ್ತಿರವಿದ್ದರೆ ಹತ್ತಿರವಲ್ಲ

ಎಂಬಂತಹ ವೈರಾಗ್ಯದ ಬದುಕು!

 

 

 

ಇವನು ಪ್ರಾರ್ಥನೆಗೆಂದು ಹೊರಟನೋ, ನಮ್ಮಿಬ್ಬರಿಗೆ ತುಸುಹೊತ್ತಾದರೂ

ಜೊತೆಗೂಡಿ ಉಗಾದಿ ಹಬ್ಬವ ಮಾಡುವ ಬಯಕೆ!

ಅಲ್ಲೂ, ನಮ್ಮನ್ನು ಜೋಡಿಸಿಡುವವನ ಮೂಡು

ಸರಿಯಿದ್ದರೆ, ಅಷ್ಟಿಷ್ಟಾದರೂ ಸ್ಪರ್ಶ ಸುಖ ಹಂಚಿ

ಕೊಂಡೇವು, ನೋವಿನ ನಿಟ್ಟುಸಿರ ಬಿಟ್ಟೇವು.

ಆಕಸ್ಮಾತ್, ಆತನ ತಲೆಕೆಟ್ಟು ಎಸೆದುಬಿಟ್ಟನೋ,

ಮುಗಿದೇ ಹೋಯಿತು!

ಪರನಾರೀ ಸಹೋದರ ನಾನು, ಯಾರುಯಾರದೋ

ಮೈಯ್ಯೊತ್ತಿ ಮಲಗಬೇಕು!

 

 

 

ಆಕೆ ಕಟ್ಟಿಕೊಂಡವ ಕೈತಾಕುವಷ್ಟು ದೂರದಲ್ಲಿದ್ದೇ

ಮತ್ತೊಬ್ಬನ ಅಂಡಿಗಾತುಕೊಂಡು ಅನುಭವಿಸುವ ಯಾತನೆಯೋ?

ಯಾಕೆ ಬೇಕಾಗಿತ್ತಪ್ಪ ಈ ಪ್ರಲಾಪ!

ಅವತ್ತು, ಈತ ಅದೆಲ್ಲಿಗೋ ಅವಸರಕ್ಕೆ ಆ ಮುದಿ

ಶೂದಂಪತಿಗಳ ಕರಕೊಂಡು ಹೋದನಲ್ಲ, ಗಡಿಬಿಡಿಯಲ್ಲಿ

ನಮ್ಮಿಬ್ಬರನ್ನೂ ಪೆಟ್ಟಿಗೆಯ ಮಗ್ಗುಲಿನ ಮಕಮಲ್ಲು ಕಾಲೊರೆಸಿನ

ಮೇಲೆ ಬೀಳಿಸಿಬಿಟ್ಟ!

ತಗಳಪ್ಪ, ಅವನು ಬರುವತನಕ ಏನು ಕೇಳುತ್ತೀರಿ?

ನೀವು ಕೇಳಬಾರದು, ನಾನು ಹೇಳಬಾರದು!

ಹೂಂ! ಬಿಡಿ, ಈಗೆಲ್ಲ ನೆನೆದರೆ ಸಂಕಟವಾಗುತ್ತದೆ!

ಮೊದಮೊದಲು ಆತ ನಡೆವಾಗ ಆಕೆಯ ಮೇಲೇ

ಭಾರಹಾಕಿ ಹಾಕಿ, ಪಾಪ ಸೊರಗಿಬಿಟ್ಟಿದ್ದಳು!

ಎಂದೋ ಒಮ್ಮೆ ಝಾಡಿಸಿ, ಝಳಝಳ ಮಾಡಿದನೆಂದರೆ,

ನಮಗೆ ಎಂಥದೋ ಪುಳಕ!

ಮಾರಾಯ! ಮಳೆಗಾಲದಲ್ಲೂ ನಮ್ಮ ತಿರುತಿರುಗಿಸಿ ಮೆತ್ತಗೆ

ಮಾಡಿಬಿಟ್ಟ! ಕಳೆದ ತಿಂಗಳು ಈಕೆಯ ಕಿವಿ ಕಿತ್ತು,

ರಿಪೇರಿಯವನ ಹತ್ತಿರ ಹೊಲಿಗೆ ಹಾಕಿಸುವಾಗ

ಪ್ರಳಯಾಂತಕ ಚೀರಿದ್ದಳು!

ಆ ನೋವೋ ಯಾವ ಹೆಣ್ಣಿನ ಹೆರಿಗೆ ನೋವಿಗಿಂತಲೂ

ಭಯಾನಕ!

ಎದೆಗೊತ್ತಿಹಿಡಿದು ಸಮಾಧಾನಿಸೋಣವೆಂದರೆ, ಪಾಲೀಶು, ಹೊಲಿಗೆ

ಅಂತೆಲ್ಲ ಅಲ್ಲೆಲ್ಲೋ ನರಳುತ್ತ ಬಿದ್ದಿದ್ದಳು, ಕೈಗೆ ಸಿಗದೇ!

ಎರಡುದಿನ ಕಳೆದು ಮನೆಗೆ ಮರಳಿದವಳು ಮೈಸೋಕಿ

ಮಲಗಿದಾಗಲೇ ನೆಮ್ಮದಿಯಾಗಿತ್ತು!

ಅಷ್ಟಿಷ್ಟು ದೂರದಲ್ಲಿದ್ದರೂ, ದಾಂಪತ್ಯ ಮುರಿದುಕೊಳ್ಳದೇ

ಜೋಡಿಹಕ್ಕಿಯ ಹಾಗಿದ್ದ,

ಒಂದು ಕನ್ನಡ ಸಿನಿಮಾ ಮಾಡಬಹುದಾದಷ್ಟು

ಅಪರೂಪದ ಪ್ರೇಮಕ್ಕೆ ಸಾಕ್ಷಿಯಾಗಿದ್ದ

ನಮ್ಮನ್ನು ಈತ ಒಮ್ಮೆ ನಿಧಾನಸೌಧದ ಹತ್ತಿರ

ಹರತಾಳ ಅಂತ ಹಾಕಿಕೊಂಡು ಹೋದ

ನಮ್ಮ ಕರ್ಮ, ಅಗಲಬೇಕೆಂದು ಪಾದರಕ್ಷಾಬ್ರಹ್ಮ ಬರೆದಿದ್ದನೇನೋ?

ಯಾರೋ, ಯಾರಿಗೋ ಸಲ್ಲದ್ದು ಅಂದರು ಅಂತ

ನನ್ನನ್ನೆತ್ತಿಕೊಂಡವನೇ ಯಾವುದೋ ದಿಕ್ಕಿಗೆ

ತನ್ನ ಅಷ್ಟೂ ಶಕ್ತಿ ಸೇರಿಸಿ, ಬೀಸಿದ್ದೇ ಬಂತು

ಯಾರದೋ ಮುಖಕ್ಕೆ ರಾಚಿ, ಮಾರಣಾಂತಿಕ ಹಲ್ಲೆಯಿಂದ

ಕುಗ್ಗಿ ಗಾಯಗೊಂಡ ಕರಾಳ ನೆನಪಷ್ಟೇ ನನ್ನದು!

ಮರುಕ್ಷಣ ನಾನೆಲ್ಲೋ? ಅವಳೆಲ್ಲೋ?

ನಮಗರಿವಿಲ್ಲದೇ ಪರಮಪಾಪಿ ನಮ್ಮನಗಲಿಸಿಬಿಟ್ಟಿದ್ದ!

‘ಇದರಿಂದಲೇ, ಅವರಿಗೆ ಏಟಾದದ್ದು!’ ಅಂತ ನನ್ನ ಫೋಟೋ

ಕೂಡ ಪೇಪರಲ್ಲಿ ಬಂದು, ಸಾಕಷ್ಟು ಪ್ರಚಾರವೇನೋ ಗಿಟ್ಟಿತು,

ಆದರೇನು ನನ್ನ ಹೃದಯವನ್ನೇ ನಾನು ಕಳೆದುಕೊಂಡಿದ್ದೆ!

ನನ್ನನ್ನವಳಿಂದ ದೂರ ಮಾಡಿದ ಆ ಪರಮಪಾಪಿ

ಅವಳೊಬ್ಬಳನ್ನೇ ಎಳೆದುಕೊಂಡು ಹೋದಾನಾದರೂ

ಯಾವ ಸುಡುಗಾಡಿಗೆ?!!!

ಎಲ್ಲಿ ಬಿದ್ದು ಒದ್ದಾಡುತ್ತಿರುವಳೋ ನನ್ನವಳು?

ಅವನ ಕಾಲು ಮುರಿದು ಮೂಲೆಗಿಕ್ಕ! ಅಂತ

ಪರಿಪರಿಯಾಗಿ ಹಲುಬಿದೆ!

ಪೇಪರಿನಲ್ಲಿ, ನನ್ನ ಫೋಟೋ ನೋಡಿಯಾದರೂ

ಆಕೆ ನನ್ನ ಬಳಿ ಬಂದಾಳೆಂಬ,

ಆಕೆಯನ್ನು ನೋಡಿದ ಯಾರಾದರೂ ನನ್ನ ಬಳಿ ಕರೆತಂದು ಬಿಟ್ಟಾರೆಂಬ

ಕ್ಷೀಣಭರವಸೆಯೊಂದಿಗೆ,

ನಿಧಾನಸೌಧ ವ್ಯಾಪ್ತಿಯ ಸ್ಟೇಷನ್ನಿನಲ್ಲಿ, ಹರಿದ ಪೇಪರೊಂದರ

ಗುಡಿಸಲಿನಲ್ಲಿ, ಒಂಟಿಯಾಗಿ ಕಾಯುತ್ತಿದ್ದೇನೆ!

ಕಾಯುತ್ತಲೇ ಇರುತ್ತೇನೆ!

 

 

‍ಲೇಖಕರು G

26 March, 2011

6 Comments

  1. esha kumar h n

    onti chappaliya viraha vedane…apaara!

  2. dr.veerendrakumar cm

    excellent imagination,written too cutely, my hearty congrats to chaya BHAGAVATHI

    May we expect many more such poems from her….

  3. smp

    ಈ ಕವನ ಓದಿದ ನಂತರ ನಮ್ಮ ಮನೆಯಿಂದ ಹೊರಹೋಗುವ ಮುನ್ನ ನಮ್ಮ ಚಪ್ಪಲಿಯ ಕಡೆಗೆ ನೋಡಿ ಮುಖದ ಮೇಲೊಂದು ಮುಗುಳುನಗೆ ಹಾಕಿಕೊಳ್ಳದೆ ಹೋಗದಿರಲಾಗುತ್ತದೆಯೇ? ಪ್ರೇಮ ವಿರಹದ ಬಗ್ಗೆ ವಿಭಿನ್ನವಾದ ಕವನ ಮನಸೂರೆಗೊಂಡಿದೆ. ಛಾಯಾಭಗವತಿಯವರಿಗೆ ಧನ್ಯವಾದಗಳು.

  4. ತಿರು ಶ್ರೀಧರ

    ಚಪ್ಪಲಿಯ ಭಾವ ತೀವ್ರ ಅಂತರ್ಗತವಾಗಿದೆ. ಉತ್ತಮ ಕವಿಗಾರ್ತಿಯ ಕೈ ಚಳಕ ಇಲ್ಲಿದೆ.

  5. veda

    ಯಾವಾಗಲೋ ಒಮ್ಮೆ ಕಾಲು ಜೋಡಿಸಿದನೆಂದರೆ,

    ಈಕೆಯ ಸೊಂಟ ಸವರುವ ಸೌಭಾಗ್ಯ!

    ನಿಮ್ಮ ಸೊಗಸಾದ ಕವನ ಓದಿ ಸದಾ ಕಾಲು ಜೋಡಿಸಿಕೊಂಡೆ ಇರಬೇಕೆಂದೆನಿಸುತ್ತದೆ. ಎಂಥಾ ಶಿಕ್ಷೆ ಕೊಟ್ಬಿಟ್ರಿ ಛಾಯ ಹ ಹ ಹಾ

  6. Bindumadhav Desai

    Its too good! Fantastic imagination.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading