ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೌಕಾಭಾರ ಅಂದರೆ ಅಮ್ಮನೇ..

ಚೌಕಾಭಾರ..

shanthakumari censor

ಶಾಂತಾಕುಮಾರಿ

ಇವತ್ತು ಅಮ್ಮ ತುಂಬಾ ನೆನಪಾದಳು. ಕೆಲಸದ ಹುಡುಗಿ ಕೇಳಿದಳು, ಆಂಟಿ ಯುಗಾದಿ ಹಬ್ಬಕ್ಕೆ ನಮ್ಮೂರಲ್ಲಿ ಎಲ್ಲಾ ಚೌಕಾಭಾರಾ ಆಡ್ತಾರೆ. ನಿಮಗೆ ಗೊತ್ತಾ ಆಂಟಿ ಆಟ? ಅಂತ. ಚೌಕಾಭಾರ ಅಂದರೆ ಅಮ್ಮನೇ. ಅದೆಷ್ಟು ಸಾವಿರ ಬಾರಿ ಆಡಿರಬಹುದು ಅವಳ ಜೊತೆ. ಅಂತಹ ಕಡು ಕಷ್ಟದ ದಿನಗಳಲ್ಲೂ ಚೌಕಾಭಾರ ಅಂದಕೂಡಲೇ ಎಂಥಾ ಹುರುಪು ಅವಳ ಮೊಗದಲ್ಲಿ. ರಾತ್ರಿ ಧೋ….ಎಂದು ಸುರಿವ ಮಲೆನಾಡ ಮಳೆ. ಫಳಾರ್ ಮಿಂಚು. ಛಿಟಿಲ್ ಛಿಟಿಲ್ ಎನ್ನುತ್ತಾ ಢಾಂ ಎಂದು ಇಡೀ ಭೂಮಂಡಲವನ್ನೇ ನಡುಗಿಸುವ ಸಿಡಿಲು. ಅಲ್ಲಲ್ಲಿ ಸೋರುವ ಮನೆಯಲ್ಲಿಟ್ಟ ಪಾತ್ರೆಗಳಲ್ಲಿ ಹನಿಯುವ ತಟಾತಟಾ ಸದ್ದು. ಕಾಲಲ್ಲಿ ಸೆಳೆತ ಉಕ್ಕಿಸುವ ಥಂಡಿ ಒಸರುವ ನೆಲ. ಅದಕ್ಕೆ ಹಾಸಿದ ಗೋಣಿಚೀಲ. ಹೆಂಚಿನ ಸಂಧಿಯಿಂದ ಬೀಸಿ ಬರುವ ಗಾಳಿಗೆ ಅದುರುವ ಚಿಮಣಿದೀಪ. ಓಹ್ ಚೌಕಾಭಾರದ ಹಿಂದೆ ಎಂತೆಂಥಾ ನೆನಪುಗಳಿವೆ !

ammana nenapu book2ರಾತ್ರಿ ಊಟವಾದ ಕೂಡಲೇ ಅಮ್ಮ ಕಸಮುಸುರೆ ಮುಗಿಸಿ ಬರುವ ಹೊತ್ತಿಗೆ ಇಲ್ಲಿ ಚೌಕಾಭಾರದ ಸಿದ್ಧತೆ ನಡೆಯುತ್ತಿತ್ತು. ಅಣ್ಣಂದಿರು ಅಮ್ಮಾ ಆಯ್ತಾ ಅನ್ನುತ್ತಿದ್ದರೆ ಅಮ್ಮ ಸೆರಗಿಗೆ ಕೈ ಒರೆಸುತ್ತಾ ಬೆಚ್ಚಗೆ ಕುಳಿತುಕೊಳ್ರೋ ಥಂಡಿಯಾಗುತ್ತೆ ಅಂತ ಗೋಣಿಚೀಲ ಹಾಸುತ್ತಿದ್ದಳು. ಅಷ್ಟರಲ್ಲಿ ಆಯಿತು 6 ಕಾಗದದ ಉಂಡೆ-ಪೊರಕೆ ಕಡ್ದಿ-ಹುಣಿಸೆ ಬೀಜ-ಬೆಂಕಿ ಕಡ್ಡಿ. ಚಿಕ್ಕವಳಾದ ನಾನು ಆಟದಿಂದ ಹೊರಗೆ ತೂಕಡಿಸುತ್ತಾ ಅವಳ ಹತ್ತಿ ಸೀರೆಯ ಮೆತ್ತನೆ ಮಡಿಲಲ್ಲಿ. ಈಗ ನೋಡು ಭಾರಾ (ಹನ್ನೆರಡು) ಎನ್ನುತ್ತಾ ಹಾಕಿಯೇ ಬಿಡುತ್ತಿದ್ದಳು ಭಾರಾ. ಕಾಯಿ ಹೊಡೆಯುವುದರಲ್ಲಿ ಎತ್ತಿದ ಕೈ.

ಜೂಗ ಕಟ್ಟಲು ಮೂಲೆಯಲ್ಲಿ ವಕ್ಕ(ಒಂದು)ಕ್ಕೆ ಕಾದು ಕುಳಿತುಕೊಳ್ಳಬೇಕು. 1-2-3-4 ಈಗ ಹಾಕ್ತೀನಿ ನೋಡಿ ನಾಲ್ಕು ಚಣ..ಚಣ ಬಿತ್ತು ದಾಳ. ನೋಡಿದರೆ ನಾಲ್ಕು. ಹೀಗೆ ಪ್ರತಿ ಆಟವೂ ಉತ್ಸಾಹ. ಸದಾ ಗೆಲುವಿನ ಜಾಡು. ಬದುಕಂತೂ ಸೋಲಿನ ಹಾಡಾಗಿತ್ತು. ಅಪ್ಪಿತಪ್ಪಿ ಸೋತರೆ ಮತ್ತೆ ಗೆಲ್ಲುವವರೆಗೂ ಅಮ್ಮೀ ಎಂಥಾ ಜೂಗ ಇನ್ನೇನು ನಾಲ್ಕು ಬಿದ್ದರೆ ಹಣ್ಣಾಗ್ತಿತ್ತು ಹೊಡೆದ್ಬಿಟ್ಟ ಅಂತಾ ಹೇಳ್ತಾನೆ ಇರೋಳು.

ನಾನು ಆಡಲು ಶುರುಮಾಡಿದೆ. ಅವರೆಲ್ಲರ ಜೊತೆ ಸೋಲು ನನಗೆ ಕಟ್ಟಿಟ್ಟ ಬುತ್ತಿ ಚಿಕ್ಕವಳಿರುವಾಗ. ಆಟದ ನಂತರ ತುಪ್ಪ ಕಾಯಿಸುವುದು-ನನ್ನ ಕೈ ಕೆಂಪಾಗುವವರೆಗೂ ಬೀಳುತ್ತಿತ್ತು ರಪ ರಪ ಏಟು. ನನ್ನ ಮಧ್ಯದ ಅಣ್ಣನೊಬ್ಬನಿಗೆ ಭಾರಿ ಖುಶಿ, ತುಪ್ಪ ಕಾಸಿ ಹೊಡೆಯಲು. ನಾನೋ ಪೆದ್ದು, ತಪ್ಪಿಸಿಕೊಳ್ಳೋಕೆ ಬರ್ತಿರಲಿಲ್ಲ. ಆದರೆ ಚಿಕ್ಕಣ್ಣ ಸದಾ ನನ್ನ ಪರ. ಎಷ್ಟೋ ಸಾರಿ ನನ್ನ ಪರವಾಗಿ ಅವನೇ ಏಟು ತಿನ್ನುತ್ತಿದ್ದ.

ಹೀಗೆ ಚೌಕಾಭಾರ ನೋಡುತ್ತಾ ಆಡುತ್ತಾ ಬೆಳೆದೆ. ಮುಂದೆ ಅವಳು ಹಾಸಿಗೆ ಹಿಡಿದಳು. ಹದಿಮೂರರ ವಯಸ್ಸು ನನಗಾಗ. ಬಿಡುವಿಲ್ಲದ ಕೆಲಸ. ಅಡಿಗೆ ಕಸಮುಸುರೆ ಕೊಟ್ಟಿಗೆ-ಹಿತ್ತಲು ಬಾವಿಯಿಂದೆಳೆದು ನೀರು ಹಾಯಿಸಬೇಕು ನನ್ನ ಗಿಡಗಳಿಗೆ. ಬಿಟ್ಟರೆ ಒಂದಷ್ಟು ಬೆಂಡೆ ಅಲಸಂದೆ, ಅಮ್ಮನ ಔಷಧಿಯ ಖರ್ಚು ತೂಗಿಸಬಹುದು. ಸಿಕ್ಕರೆ ಮಡಿಲಲ್ಲಿ ಗೊರಟೆ ಅಬ್ಬಲಿಗೆ ಅಮ್ಮನಿಗೆ ಕಾಫಿಪುಡಿ ಬೆಲ್ಲ ತರಬೇಕು. ಕಾಫಿ ಇಲ್ಲದಿದ್ದರೆ ತಲೆನೋವು ಬರುತ್ತೆ ಅವಳಿಗೆ. ಅವಳಿಗೆ ತಲೆನೋವು ಬಂದರೆ ಇಡೀ ಮನೆಗೆ ತಲೆನೋವು ಬರಿಸಿಬಿಡುತ್ತಾಳೆ. ಇವೆಲ್ಲ ಮುಗಿದ ನಂತರ ನನ್ನ ಹೋಂವರ್ಕ್ ಹರಡಿಕೊಂಡರೆ ಅಮ್ಮ ಕರೆಯುತ್ತಾಳೆ, ಅಮ್ಮಿ ಒಂದಾಟ ಆಡಾಣ. ಇಲ್ಲಮ್ಮ ಹೋಂವರ್ಕ್ ಮುಗಿಸಬೇಕು. ದೈನ್ಯಳಾಗಿ ಕೇಳುತ್ತಾಳೆ-ಒಂದೇ ಒಂದಾಟ ಅಮ್ಮಿ….. ಇಡೀ ದಿನ ನಾಲ್ಕು ಗೋಡೆಯ ನಡುವೆ ತೆವಳಿಕೊಂಡು ಇರುವ ಅವಳನ್ನು ನೋಡಿ ಪಾಪ ಎನಿಸುತ್ತದೆ. ಸರಿ ಒಂದೇ ಒಂದಾಟ… ಕಂಡೀಷನ್ ಹಾಕಿ ಕುಳಿತರೆ 1-2-3 ಗೆಲ್ಲುವವರೆಗೂ. ಅಷ್ಟೊತ್ತಿಗೆ ಚಿಮಣಿಯ ಎಣ್ಣೆ ಖಾಲಿ.

ಬೆಳಿಗ್ಗೆ ಎದ್ದು ಬರೆದು-ಮನೆಕೆಲಸ ಮುಗಿಸಿ ಓಡಿದರೆ ಸ್ಕೂಲಿಗೆ ಲೇಟು. ಮೊದಲ ಪೀರಿಯಡ್ ಮ್ಯಾಥ್ಸ್ ಇದ್ದರೆ ಬಾಗಿಲು ಮುಚ್ಚಿ ಪಾಠ ಮಾಡುತ್ತಾರೆ ಎಂ.ಎಸ್.ಎನ್. ಡವಡವದೊಂದಿಗೆ ಬಾಗಿಲು ತಟ್ಟಿದೆ ಒಮ್ಮೆ. ಅವರಿಗೋ ಕೋಪ ಮೂಗಿನ ಮೇಲೆ. ಬಾಗಿಲು ತೆಗೆದವರೆ, ‘ಲೇಟಾಗಿ ಬಂದಿದ್ದೂ ಅಲ್ಲದೆ ಬಾಗಿಲು ತಟ್ತೀಯಾ, ಯಾಕ್ ಲೇಟು?’ ಕೂಗಿದರು. ಹೆದರುತ್ತಾ, ‘ಮನೆಯಲ್ಲಿ ತುಂಬಾ ಕೆಲಸ ಇತ್ತು ಸರ್…’. ‘ಓಹೋಹೋ…ಕೆಲಸ ಇತ್ತಾ, ಏನು ಗಂಡ ಮಕ್ಕಳು ಸಂಸಾರ ಭಾರಿ ಕೆಲಸ ಅಲ್ವಾ…’ ವ್ಯಂಗ್ಯವಾಗಿ ನಕ್ಕಾಗ ಹುಡುಗರ ಗುಂಪು ಓಹೋಹೋ.. ಕೇಕೆ ಹಾಕಿದರು. ಅಳು ತಡೆಯದೆ ತಲೆ ತಗ್ಗಿಸಿ ಓಡಿದೆ ಆಟದ ಬಯಲಿಗೆ. ಗೆಳತಿಯರು ಕೂಗೋದು ಕೇಳುತ್ತಿತ್ತು. ಅವರಮ್ಮಂಗೆ ಹುಷಾರಿಲ್ಲ ಸರ್, ಅವಳೇ ಮನೆ ನೋಡಿಕೊಳ್ಳೋದು, ಅವರಮ್ಮನ್ನ ನೋಡಿಕೊಳ್ಳೋದು. ಮತ್ತೆ ಗೆಳತಿಯರೊಂದಿಗೆ ಸರ್ ಹಾಜರ್. ಬಯಲಿನಲ್ಲಿ ಅಳುತ್ತಾ ಕುಳಿತ ನನ್ನ ಮುಂದೆ ತಪ್ಪಾಯ್ತಮ್ಮಾ ಶಾಂತಾ ನಂಗೊತ್ತಿರಲಿಲ್ಲ ಬಾ ಕ್ಲಾಸಿಗೆ. ಇನ್ನು ಮೇಲೆ ನಿಂಗೇನು ಕೇಳಲ್ಲ. ಅಂದಿನಿಂದ ನನಗೆ ರಿಯಾಯಿತಿ. ಎಷ್ಟು ಒಳ್ಳೆಯ ಗುರುಗಳು ಆಗ. ಮುಂದೆ ಅದೇ ಸ್ಕೂಲಿನಲ್ಲಿ ಸನ್ಮಾನ ಮಾಡುವಾಗ ಅವರೆಲ್ಲರ ಕಣ್ಣಲ್ಲೂ ನೀರು.

ಮುಂದೆ ಚಿಕ್ಕಣ್ಣನೊಡನೆ ಶಿವಮೊಗ್ಗೆಗೆ ನೆಲೆಸಲು ಹೊರಟಾಗ ಅವಳ ಚೌಕಾಭಾರದ ಪಟ ದಾಳವನ್ನೂ ಜೋಪಾನವಾಗಿ ಟ್ರಂಕಿನಲ್ಲಿರಿಸಿ ತಂದಳು. ಯಥಾಪ್ರಕಾರ ನನಗೆ ಕಾಲೇಜು ಟೈಪಿಂಗ್ ಕ್ಲಾಸು ಮನೆಗೆಲಸದ ನಡುವೆ ಅವಳ ಚೌಕಾಭಾರ. ಈಗ ಅವಳಿಗೆ ನಾನು ಅಮ್ಮ. ಕಾಲಿಗೆ ತರತರದ ಎಣ್ಣೆ ಹಚ್ಚಿ ನೀವಿ ಬಿಸಿನೀರು ಹಾಕಬೇಕು. ಗೋಡೆಗೊರಗಿಸಿ ನಿಲ್ಲಿಸಿ ಒಂದೇ ಹೆಜ್ಜೆ ಮುಂದೆ ಇಡು ಬಾ ಹೆದರಬೇಡ ನಾನಿದ್ದೇನೆ ಎನ್ನಬೇಕು. ಮಕ್ಕಳ ಹಾಗೆ ಹಠ ಹಿಡಿದು ಇಲ್ಲ ಆಗಲ್ಲ ಬೀಳ್ತೀನಿ ನನ್ನ ಗೋಳು ಹೊಯ್ಕೊಬೇಡಾ ಅಂತ ಅವಳು ಬಯ್ಯಬೇಕು. ನೀ ಎರಡು ಹೆಜ್ಜೆ ನಡೆದರೆ ಪಗಡೆ ಆಟ ಇಲ್ಲದಿದ್ದರೆ ಇಲ್ಲ ಅಂತ ನಾನೂ ಹಠ ಹಿಡಿಬೇಕು. ಮತ್ತೆ ಪರೀಕ್ಷೆ ಬಂದರೆ ಇವೆಲ್ಲ ಬಂದ್. ಅವಳಿಗೆ ನಮ್ಮ ಗಮನ ಸೆಳೆಯಬೇಕು. ಹಿಡಿದದ್ದೇ ಹಠ. ಬೆಂಡೆಕಾಯಿ ಗೊಜ್ಜು ಮಾಡಿದರೆ ಊಟ, ಇಲ್ಲಾಂದ್ರೆ ಬೇಡ. ಸರಿ ಓಡು ಅಡಿಗೆ ಮುಗಿಸು. ಪರೀಕ್ಷೆಗೆ ಹೊರಡು. ಪರೀಕ್ಷೆಯಲ್ಲಿ ಕುಳಿತರೆ ಎಲ್ಲ ಅಮ್ಮನ ಪಕ್ಕದಲ್ಲಿ ಇಟ್ಟಿದ್ದೇನಾ ಏನಾದ್ರೂ ಮರೆತು ಬಿಟ್ಟೆನಾ, ತಗೊಳ್ಳಕ್ಕೆ ಹೋಗಿ ಮತ್ತೆ ಬಿದ್ದು ಬಿಡ್ತಾಳಾ ಅಂತ ಬರುವ ಯೋಚನೆ ಹತ್ತಿಕ್ಕಿ ಬರೆಯಬೇಕು.

ನನಗೋ ಉತ್ಸಾಹ ಹೆಚ್ಚು. ಹಾಡು ಡ್ಯಾನ್ಸ್ ನಾಟಕ ಡಿಬೇಟ್ ಎಲ್ಲದೂ ಬೇಕು. ಅಮ್ಮ ಹೇಳುತ್ತಿದ್ದಳು ಅವಳಾ ಗಾಳಿ ತರಾ ಹಾತರ್ಾಳೆ. ನನ್ನ ಬಹುಮಾನಗಳಿಗೆಲ್ಲ ಅವಳ ಖುಶಿ. ಕತೆ ಕವನ ಬರೆದರೆ ಮೊದಲ ಕೇಳುಗಳು ಅವಳು. ಅಮ್ಮೀ ನಿನ್ನೆ ಬರೀತಾ ಇದ್ದೆಯಲ್ಲ ಆ ಕತೆ ಮುಗಿದ್ದಿದ್ದರೆ ಓದೆ. ಕೇಳುತ್ತಾ ಮುಳುಗಿ ಹೋಗುತ್ತಿದ್ದಳು. ಕಾರಂತರು ಅನಕೃ ತರಾಸು ದೇವುಡು ಭೈರಪ್ಪ ತ್ರಿವೇಣಿ ಎಲ್ಲರ ಕಾದಂಬರಿಗಳನ್ನು ಓದಿ ಹೇಳುತ್ತಿದ್ದೆ. ಈಗಿನಂತೆ ಟಿವಿ ಇಲ್ಲ. ಪಾಪ ಮನೆಯಲ್ಲೇ ಇದ್ದು ಬೇಜಾರು ಅಂತ. ಇಂದು ಓದಿದ ಕತೆ ಮಾರನೇ ದಿನವೇ ಮನೆಗೆ ಯಾರಾದರೂ ಬಂದರೆ ಅದಕ್ಕೆ ಇವಳ ಹೂರಣವೂ ಬೆರೆಸಿ ಸುಂದರವಾಗಿ ಒಪ್ಪಿಸುತ್ತಿದ್ದಳು. ಅವಳ ಖಜಾನೆಯಲ್ಲಿ ಅದೆಷ್ಟು ಕತೆಯಿತ್ತೋ? ಕೂತಿದ್ದಕ್ಕೆ ನಿಂತಿದ್ದಕ್ಕೆ ಒಂದು ಕತೆ. ಅವಳದ್ದೇ ಕತೆ ಬರೆದರೆ ಹತ್ತು ಕಾದಂಬರಿಯಾಗುತ್ತೆ. ಅವಳು ಹೇಳುವ ಶೈಲಿಯೋ ಅದನ್ನು ಕೇಳಿಯೇ ಅನುಭವಿಸಬೇಕು.

ಮುಂದೆ ಕೆಲಸದ ನಿಮಿತ್ತ ಚಿಕ್ಕಣ್ಣ ಬೆಂಗಳೂರಿಗೆ ಬಂದ. ಅವನ ಹಿಂದೆ ನಾವಿಬ್ಬರು ಬಾಲ. ಅಮ್ಮನೊಂದಿಗೆ ಚೌಕಾಭಾರದ ಪಟ. ಅದ್ಯಾಕೊ ಅವಳಿಗೆ ಬೇಸರವೇ ಬರಲಿಲ್ಲ, ಚೌಕಾಭಾರ. ಮತ್ತೆ ಹಾಸಿದೆವು ಪಟ. ನಾಲ್ಕು ಎಂಟು ಭಾರ ಹೀಗೆ ಅವಳು ಬಾಯಲ್ಲಿ ಹೇಳಿದ್ದೇ ಬೀಳುತ್ತಿತ್ತು. ವಠಾರದ ಮನೆ. ಎಲ್ಲರಿಗೂ ಹಿಡಿಸಿದಳು ಹುಚ್ಚು. ನಮ್ಮ ಮನೆ ಕಟ್ಟೆ ತುಂಬಾ ವಠಾರದ ಮಕ್ಕಳು. ಆಗೀಗ ಆಫೀಸಿನಿಂದ ಬೇಗ ಬಂದರೆ ರಜೆ ಇದ್ದರೆ ನನಗೂ ಆಡುವ ಮೋಜು.

ಮುಂದೆ ಮದುವೆ ಆದ ಹೊಸತರಲ್ಲಿ ಒಂದಿನ ಅಮ್ಮನ ಮನೆಯಿಂದ ಹೊತ್ತು ತಂದೆ ಚೌಕಾಭಾರದ ಸೆಟ್ಟು. ರೀ ಚೌಕಾಭಾರ ಆಡಾಣ. ಅವರನ್ನ ಸೋಲಿಸಿ ತುಪ್ಪಾ ಕಾಯಿಸಬೇಕು ಅಂತ ಆಸೆ ನನಗೆ. ಇವರಿಗೆ ಆ ಚೌಕಾಭಾರದ ತಲೆಬುಡ ತಿಳಿಯಲಿಲ್ಲ. ಅರ್ಧ ಆಟಕ್ಕೆ ಏಳುತ್ತಾ, ‘ಹೋಗೆ ಇದೂ ಒಂದು ಆಟಾನಾ….ಆಡಿದರೆ ಆಡಬೇಕು ಟೆನ್ನಿಸ್…ನನ್ನ ಕೈಲಾಗಲ್ಲಪ್ಪ’. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿ, ಅಂತೂ ತುಪ್ಪ ಕಾಯಿಸಲಾಗಲಿಲ್ಲ. ಅಮ್ಮನಮನೆ ಹತ್ತಿರದಲ್ಲೆ, ಅಲ್ಲಿಗೆ ಹೋದಾಗಲೆಲ್ಲ ಪುರುಸೊತ್ತಿದ್ದಾಗ ಬೇಗ ಬಾರೆ ಆಡಾಣ ಅಮ್ಮನ ವರಾತ. ಇವರೊಂದಿಗೆ ಹೇಳುತ್ತಿದ್ದೆ- ರೀ ಒಲಿಂಪಿಕ್ಸ್ನಲ್ಲಿ ಏನಾದ್ರೂ ಚೌಕಾಭಾರ ಇಟ್ಟರೆ ನಾನೂ ನಮ್ಮಮ್ಮ ಇಂಡಿಯಾಗೆ ಗೋಲ್ಡ್ ಮೆಡಲ್ ತರ್ತೀ ವಿ. ನಾನೇನಾದ್ರೂ ಪಿ.ಎಂ. ಆದ್ರೆ ಒಂದು ಮನವಿ ಹಾಕೇ ಬಿಡ್ತೀನಿ.

ಮುಂದೆ ಬಸಿರಿ ಬಾಣಂತಿ -ಹೀಗೆ ಸಂಸಾರದ ಭಾರದ ನಡುವೆ ನನ್ನ ಚೌಕಾಭಾರ ಹಿಂದೆ ಬಿತ್ತು. ಅಮ್ಮ ಮೊಮ್ಮಕ್ಕಳ ಜೊತೆ ಆಡುತ್ತಿದ್ದಳು. ಯಾವತ್ತಾದರೂ ನಾನೂ ಸೇರಿಕೊಳ್ಳುತ್ತಿದ್ದೆ. ಮೊಮ್ಮಕ್ಕಳು ಗಂಭೀರವಾಗಿ ಆಡುತ್ತಿರಲಿಲ್ಲ. ‘ಹೋಗೆ, ಈಗಿನ ಹುಡುಗರಿಗೆ ಆಡಕ್ಕೆ ಬರಲ್ಲ, ಬರೀ ತಂಟೆ ಮೋಸ ಮಾಡ್ತಾರೆ’ ಅಂತ ಚಿಕ್ಕ ಮಕ್ಕಳ ಹಾಗೆ ಮುಖ ಉಬ್ಬಿಸಿಕೊಳ್ಳುತ್ತಿದ್ದಳು. ಆಮೇಲೆ ಒಂದಷ್ಟು ದಿನ ಚೌಕಾಭಾರದ ಪಟ ಎತ್ತಿಟ್ಟುಬಿಟ್ಟಿದ್ದಳು. ನಾನು ಹೋದಾಗ ಎಲ್ಲೇ ನಿನ್ನ ಚೌಕಾಭಾರ ಎಂದರೆ ಬೇಡ ಬಿಡು ಎಂದು ಉದಾಸೀನವಾಗಿ ನುಡಿಯುತ್ತಿದ್ದಳು. ಕಣ್ಣಲ್ಲೇಕೋ ನೀರು ತುಂಬಿರುತ್ತಿತ್ತು. ಒತ್ತಾಯಿಸಿ ಕೇಳಿದಾಗ ಸೊಸೆಯರ್ಯಾರೊ, ‘ನೀವು ಹೀಗೆ ಮನೆಯಲ್ಲಿ ದಾಳ ಆಡಿ ಆಡಿಯೇ ಮನೆ ಹಾಳಾಯ್ತು. ಧರ್ಮರಾಯ ಪಗಡೆಯಾಟ ಆಡಿಯೇ ಅಲ್ವಾ ರಾಜ್ಯ ಕಳ್ಕೊಂಡಿದ್ದು’ ಅಂದರಂತೆ. ಮನೆಯಲ್ಲಿ ದಾಳದ ಶಬ್ದ ಬರಬಾರದು ಅಂತ ತಾಕೀತು. ನಾನು ಅದಕ್ಕೆಲ್ಲ ನೀನು ತಲೆಕೆಡಿಸಿಕೊಳ್ಳಬೇಡ ಧರ್ಮರಾಯ ರಾಜ್ಯಾನಾ ಹೆಂಡ್ತಿನಾ ಪಣಕ್ಕಿಟ್ಟಾ ಅಂದರೆ ನೀನೇನೂ ಇಡಲ್ವಲ್ಲ. ನಿಂಗೆ ಖುಶಿ ಕೊಡೋ ಆಟ. ಇಡೀದಿನ ಮನೆಯಲ್ಲಿ ಕಾಲತಳ್ಳಬೇಕಲ್ಲ. ಅವರಿಗೆ ನಾನು ಹೇಳ್ತೀನಿ ಎಂದೆ. ಮತ್ತೆ ಹಾಸಿದಳು ಪಟ.

ಕೊನೆಕೊನೆಯಲ್ಲಿ ಯಾರಿಗೂ ಆಟ ಆಡಲು ಪುರುಸೊತ್ತಿರಲಿಲ್ಲ. ನಾನು ಗಂಡ ಮಕ್ಕಳು ಬಿಜಿನೆಸ್ ಸಾಹಿತ್ಯದ ಚಟುವಟಿಕೆ ಟಿವಿ ಕಾರ್ಯಕ್ರಮ ಅಂತೆಲ್ಲ ಮುಳುಗಿಹೋಗಿದ್ದೆ. ಅಣ್ಣಂದಿರೂ ಬಿಜಿಯಾಗಿದ್ದರು. ಮೊಮ್ಮಕ್ಕಳು ಹೋಗಜ್ಜಿ ಅದೆಂಥಾ ಆಟ ಬೋರು ಎಂದು ಬ್ಯಾಟುಬಾಲು ಹಿಡಿದು ಓಡುತ್ತಿದ್ದರು. ಯಾವಾಗಾದರೂ ಮಧ್ಯಾಹ್ನದ ಹೊತ್ತು ಅಮ್ಮನ ಮನೆಗೆ ಹೋದರೆ ಒಬ್ಬಳೇ ಪಟ ಹಾಸಿ ಆಡುತ್ತಿರುತ್ತಿದ್ದಳು. ಇಬ್ಬರ ಆಟವನ್ನೂ ಒಬ್ಬಳೇ ಆಡುತ್ತಿದ್ದಳು. ಅಭ್ಯಾಸವಿತ್ತಲ್ಲ, ಇಡೀ ಜೀವನದ ಆಟವನ್ನು ಒಬ್ಬಳೇ ಆಡಿ. ಗಂಡನೆಂಬುವವ ಕಟ್ಟಿದ ಸಂಸಾರದ ಬಂಡಿಯನ್ನು ಹೊತ್ತುಕೊಳ್ಳದೆ ಅವ ತಪ್ಪಿಸಿಕೊಂಡರೂ ಇವಳು ಹೆಗಲು ಕೊಟ್ಟು ರೂಢಿಯಿತ್ತಲ್ಲ. ಕೈಸೋತು ಮನ ಬೇಸತ್ತು ಹೋದರೂ ಆಡುತ್ತಿದ್ದಳು.

ಅವಳು ಸಾಯುವ ಕೆಲ ತಿಂಗಳುಗಳ ಮೊದಲು ಫೋನು ಮಾಡಿ ಹೇಳುತ್ತಿದ್ದಳು, ಅಮ್ಮಿ ಯಾವಾಗ ಬರ್ತೀಯೆ, ಪುರುಸೊತ್ತಾಗಿ ಬಾರೆ, ಒಂದಿನ ಉಳ್ಕೊಳ್ಳೆ, ಚೌಕಾಭಾರ ಆಡಾಣ ಅಂತ. ಆದರೆ ನನಗೆ ನನ್ನ ಜೀವನದ ಸಂಕಷ್ಟ ಕಾಲ. ಲಕ್ಷಲಕ್ಷ ಬಿಜಿನೆಸ್ಸಿನ ಸಾಲ ತಲೆಯಮೇಲೆ. ಹೋಗಮ್ಮಾ ನನ್ನದೇ ಏಳು ಹನ್ನೊಂದು, ಚೌಕಾಭಾರ ಆಡಕ್ಕೆ ಟೈಮೂ ಇಲ್ಲ ಮೂಡೂ ಇಲ್ಲ. ಆಮೇಲಾಮೇಲೆ ಕರೆಯೋದನ್ನೆ ಬಿಟ್ಟಳು. ದಿನಾ ಬೆಳಿಗ್ಗೆ ಹನ್ನೊಂದು ಗಂಟೆಗೆ ಫೋನು-ನೀನಂತೂ ಬರಲ್ಲ ನಿನ್ನ ದನಿ ಆದರೂ ಕೇಳೋಣ ಅಂತ ಮಾಡ್ದೆ. ನೀನು ಬಿಜಿ ಇದೀಯಾ…ಫೋನಲ್ಲೆ ಕತೆ, ಹಬ್ಬಕ್ಕೆ ಸೀರೆ ತಗೊಂಡ್ಯೇನೆ ಸ್ವೀಟ್ ಏನು ಮಾಡ್ತೀಯೆ. ಮೂವತ್ತು ವರುಷಗಳ ಕಾಲ ನಾಲ್ಕು ಗೋಡೆಗಳಲ್ಲೇ ಕಳೆದರೂ ಬತ್ತದ ಉತ್ಸಾಹ. ಯಾರು ಯಾವುದೇ ಮದುವೆಗೆ ಹೋಗಿ ಬಂದರೂ ಹುಡುಗಿಯ ಚೆಂದ ಬಣ್ಣ ಸೀರೆ ಮದುವೆಗೆ ಬಂದವರ ಎಲ್ಲ ವಿವರಗಳನ್ನು ನಾವು ರೇಗುವವರೆಗೂ ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದಳು. ಮತ್ತಾರೊಂದಿಗೋ ತಾನೇ ಮದುವೆ ನೋಡಿ ಬಂದಂತೆ ಹೇಳುತ್ತಿದ್ದಳು.

ಅವಳು ಸಾಯುವ ನಾಲ್ಕು ದಿನ ಮೊದಲು ಹೋಗಿದ್ದೆ. ಎಲ್ಲೋ ಹೋದವಳು ಅನೀರೀಕ್ಷಿತವಾಗಿ ಹೋದೆವು. ಜ್ವರಬಂದು ಮಲಗಿದ್ದಳು. ನಾನು ಬಂದದ್ದು ಗೊತ್ತಾದದ್ದೇ ಎದ್ದು ಕುಳಿತು, ‘ಅಮ್ಮಿ ಬಾರೆ ಒಳಗೆ.’ ಚಿಕ್ಕಣ್ಣ ರೇಗಿಸಿದ -ನೋಡು ಮಗಳು ಬಂದ ಕೂಡಲೇ ಚಿಗುರಿಬಿಟ್ಟಳು. ‘ಚಿಗುರಲಿಲ್ಲವೋ, ಬದುಕಿದೆ’ ಅಂದಳು. ಎದೆ ನೀವಿದರೆ ಕೈ ಹಿಡಿದುಕೊಂಡು ಎಷ್ಟು ಹಾಯಾಗುತ್ತೆ ಅಮ್ಮಿ, ನೀ ಮುಟ್ಟಿದರೆ ನಮ್ಮಮ್ಮ ಮುಟ್ಟಿದಂತಾಗುತ್ತೆ ಎಂದಳು. ವಿಕ್ಸ್ ಕೊಡು ಹಾಗಾದರೆ ಚೆನ್ನಾಗಿ ಹಚ್ಚಿ ನೀವುತ್ತೇನೆ ಅಂತ ನೀವಿದೆ. ಯಾಕೋ ತುಂಬಾ ಆದ್ರ್ರಳಾಗಿ ಕಣ್ತುಂಬಿ ನೋಡಿದಳು. ಅವಳ ಮುಖದಲ್ಲಿ ಎಂಥಾ ಸಮಾಧಾನ. ಸಧ್ಯದಲ್ಲೇ ಬರ್ತೀನಿ ಇರು ಉಳ್ಕೋತೀನಿ ಚೌಕಾಭಾರ ಆಡಣ ಎಂದೆ. ನಿಂಗೆಲ್ಲಿ ಪುರುಸೊತ್ತು ನಿನ್ನ ಕೆಲಸ ನೀ ಮಾಡ್ಕೋ ಎಂದಳು.

ಮನೆಗೆ ಹೊರಟಾಗ ದಾರಿಯಲ್ಲಿ ಇವರು ಹೇಳಿದರು, ಕೂಲಾಗಿ. ‘ಯಾಕೋ ನಿಮ್ಮಮ್ಮ ಸ್ವಲ್ಪ ಅನುಮಾನ ಕಣೆ ಅವರ ನಡವಳಿಕೆ ನೋಡಿದರೆ ನಿನ್ನ ಜೊತೆ ಮಾತಾಡುವಾಗ ತುಂಬಾ ಎಕ್ಸೈಟ್ ಆಗಿ ಕೆಂಪು ಕೆಂಪಾಗಿದ್ದರು ಎಂದರು, ಗಟ್ಟಿಯಾಗಿ ಕೈ ಹಿಡಿದುಕೊಂಡೆ. ಹೌದೇನ್ರಿ ಹಾಗಾದ್ರೆ ಈ ಶನಿವಾರಾನೆ ಹೋಗ್ತೀನಿ ಮಕ್ಕಳನ್ನು ಕರೆದುಕೊಂಡು ಅಲ್ಲೇ ಉಳಿದುಕೊಂಡು ಚೌಕಾಭಾರ ಆಡಿ ರಾತ್ರಿಯೆಲ್ಲ ಮಾತಾಡಿ ಬರ್ತೀನಿ. ಆದರೆ ಆ ಶನಿವಾರ ಬರಲೇ ಇಲ್ಲ. ಅದಕ್ಕೂ ಮೊದಲು ಬುಧವಾರವೇ ಬಂತು ಅವಳ ಸಾವಿನ ಸುದ್ದಿ. ಸಾಯುವಾಗ ಕೆಲಸದ ಹುಡುಗಿ ಒಬ್ಬಳೇ ಇದ್ದದ್ದು ಅವಳ ಹತ್ತಿರ, ‘ಒಂದುದ್ದ ಲೋಟ ನೀರು ಕೊಡು, ಮಗಳಂತೂ ದೂರ ಇದ್ದಾಳೆ, ನಿನ್ನನ್ನೇ ಮಗಳು ಅಂದುಕೊಳ್ತೀನಿ’ ಅಂದಳಂತೆ. ಆಟದಲ್ಲಿ ಗೆದ್ದು ನಡೆದಿದ್ದಳು ಅಮ್ಮ. ನಮ್ಮ ನೆನಪಿನಲ್ಲಿ ಉರುಳಿಬಿದ್ದ ಕಾಯಿಗಳು…ಪಗಡೆ ಹಾಸು.

ಅವಳಿಲ್ಲದೇ ಈಗ ಎಂಟು ವರುಷಗಳು ಕಳೆದಿವೆ. ಆದರೆ ಅವಳು ಹೊಸೆದ ಹತ್ತಿಯ ಬತ್ತಿಗಳು ಇನ್ನೂ ನಮ್ಮ ಮನೆಯ ದೀಪವನ್ನು ಬೆಳಗುತ್ತಿವೆ. ದಿನಾ ಮುಟ್ಟುವಾಗೊಮ್ಮೆ ಅನಿಸುತ್ತದೆ, ಅವಳ ಸ್ಪರ್ಶವಿದೆ ಇದರಲ್ಲಿ. ಅವಳುಟ್ಟು ಕೊಟ್ಟ ಸೀರೆ ಇನ್ನೂ ಒಗೆಯದೆ ಹಾಗೇ ಇದೆ. ಆಗೀಗ ಸ್ವಲ್ಪ ಹೊತ್ತು ಉಟ್ಟು ಹಾಗೇ ಎತ್ತಿರಿಸುತ್ತೇನೆ, ಅವಳ ವಾಸನೆ ಇದೆ ಅದರಲ್ಲಿ. ಮಕ್ಕಳು ತಟ್ಟೆಯಲ್ಲಿ ಅನ್ನ ಚೆಲ್ಲಿದರೆ ಗದರುತ್ತೇನೆ, ‘ನಿಮ್ಮಜ್ಜಿ ಮೇಲಿಂದ ಬಯ್ತಾಳೊ ನನ್ನನ್ನು.’ ತರಕಾರಿ ಸಿಪ್ಪೆಯ ಚಟ್ನಿ ಮಾಡಿದಾಗ ಇವರು ಬಾಯಿ ಚಪ್ಪರಿಸಿ, ‘ಆಹಾ ಹುಳಿ ಉಪ್ಪು ಖಾರ ಹದವಾಗಿದೆ’ ಎಂದರೆ ನಗ್ತಾ ಹೇಳ್ತೀನಿ, ‘ಅಮ್ಮನ ಆತ್ಮಕ್ಕೆ ಶಾಂತಿಯಾಗಿದೇರಿ, ಪರವಾಗಿಲ್ಲ ನನ್ನ ಮಗಳು ಸಂಸಾರ ಅಚ್ಚುಕಟ್ಟಾಗಿ ಮಾಡ್ತಾಳೆ’ ಅಂತ. ಮಜ್ಜಿಗೆ ಕಡೆದು ಬೆಣ್ಣೆ ತೆಗೆವಾಗ ತುಪ್ಪ ಕಾಸುವಾಗ ತರಕಾರಿ ಹೆಚ್ಚುವಾಗ ಬಟ್ಟೆ ಮಡಚುವಾಗ ಎಲ್ಲದರಲ್ಲೂ ಅವಳು ನೆನಪಾಗುತ್ತಾಳೆ. ಎಷ್ಟೊಂದು ಒಪ್ಪವೈನ. ಅವಳು ನನ್ನ ಮಾತಿಗೆ ಪ್ರತಿಯಾಡಲು ಇಲ್ಲ ಎನ್ನುವುದನ್ನು ಬಿಟ್ಟರೆ ಅವಳಿಲ್ಲ ಅನಿಸುವುದೇ ಇಲ್ಲ. ವರ್ಷಕ್ಕೊಮ್ಮೆ ತಿಥಿ ಮಾಡುತ್ತಾರೆ ಮಠದಲ್ಲಿ. ನಂಗೇನು ಅದರಲ್ಲಿ ನಂಬಿಕೆ ಇಲ್ಲ. ಅಣ್ಣಂದಿರು ಕರೆಯುತ್ತಾರೆ ಹೋಗುತ್ತೇನೆ. ಅಣ್ಣನ ಮಕ್ಕಳು ಕಾಯುತ್ತಿರುತ್ತಾರೆ, ‘ಯಾಕೆ ಅತ್ತೆ, ಇಷ್ಟು ಲೇಟು…?’…..ಅಜ್ಜಿ ಫೋನ್ ಮಾಡಿದ್ದಳು ಕಣೊ ಹೆಂಗಾಯಿತಂಗೆ ಕೆಲಸ ಬಿಟ್ಟು ಓಡಬೇಡ ವೈನಾಗಿ ಮಾಡಿ ಒಂದು ನಿರಿಗೆಯೂ ಮುದುರದಂತೆ ಒಪ್ಪವಾಗಿ ಸೀರೆ ಉಟ್ಟು ನೀಳ ಬೈತಲೆ ಮಾಡಿ ಜಡೆ ಹೆಣೆದು ಹೋಗು ಎಂದಳು, ಅದಕ್ಕೆ ಲೇಟು ಕಣೊ…

ಅವಳು ಪಟ್ಟ ಕಷ್ಟಗಳು ಸಾಮಾನ್ಯವಲ್ಲ. ಬರೆದರೆ ಹತ್ತು ಕಾದಂಬರಿಯಾದೀತು. ಸುಮಾರಿನವರಾದರೆ ನೂರು ಸಲ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತು. ಆದರೂ ಅವಳೆಷ್ಟು ಜೀವನ್ಮುಖಿಯಾಗಿದ್ದಳು. ಕೆಲವೊಮ್ಮೆ ಹೇಳುತ್ತಿದ್ದಳು, ‘ಹುಟ್ಟಿಸಿದ ಆ ಬ್ರಹ್ಮನೇ ಸತ್ತರೂ ನಾನು ಸಾಯಲ್ಲ ಅಂತ. ನಮಗೂ ಹಾಗೇ ಅನ್ನಿಸಿಬಿಟ್ಟಿತ್ತು, ಅಮ್ಮ ಯಾವತ್ತು ಸಾಯಲ್ಲಾ ಅಂತ. ಅವಳು ಐಸಿಯುನಲ್ಲಿದ್ದಾಗಲೂ ನರ್ಸ್ಗಳು, ಅಕ್ಕಪಕ್ಕದ ಪೇಷಂಟ್ಗಳು ಎಷ್ಟು ಚೆಂದ ಇದೆ ಈ ಅಜ್ಜಿ ಎನ್ನುತ್ತಿದ್ದರು. ಮುಗ್ಧವಾಗಿ ಏನೇನೋ ಪ್ರಶ್ನೆ ಕೇಳಿ ಅವರನ್ನೂ ನಗಿಸುತ್ತಿದ್ದಳು.

ಆದರೆ ಅಮ್ಮ ಸತ್ತಾಗಲೂ ನನಗೊಂದು ಮರುಜನ್ಮ ನೀಡಿದಳು. ಅವಳು ಸಾಯುವ ಸಂದರ್ಭದಲ್ಲಿ ಬಿಜಿನೆಸ್ಸಿನಿಂದಾದ ನಷ್ಟದಿಂದ ನಾನು ಕುಸಿದುಹೋಗಿದ್ದೆ. ನಮಗೆ ನಮ್ಮವರೆನ್ನುವವರು ಆ ಸಮಯದಲ್ಲಿ ಯಾರೂ ಇರಲಿಲ್ಲ. ಪ್ರೀತಿಸಿ ಮದುವೆಯಾದ ನಮ್ಮನ್ನು ನಮ್ಮ ಕಷ್ಟಸುಖಗಳನ್ನು ಕೇಳುವವರು ಯಾರೂ ಇರಲಿಲ್ಲ. ನಮಗೂ ಅತಿ ಸ್ವಾಭಿಮಾನ. ನಾವಿಬ್ಬರೂ ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಳ್ಳುತ್ತಿದ್ದೆವು. ಅದು ನಮಗೆ ನಾವು ಹೇಳಿಕೊಳ್ಳುವ ಧೈರ್ಯವಾಗಿತ್ತು. ಮಕ್ಕಳು ಆತಂಕಗೊಂಡರೆ ಅವರನ್ನು ತಬ್ಬಿ ಧೈರ್ಯ ಹೇಳುತ್ತಿದ್ದೆವು. ಇಡೀ ಪ್ರಪಂಚದಲ್ಲಿ ನಾವು ನಾಲ್ಕೇ ಜನ ಪ್ರತ್ಯೇಕ ಎನಿಸುತ್ತಿತ್ತು. ಯಾರೂ ಇಲ್ಲದ ಅನಾಥಪ್ರಜ್ಞೆ ಕಾಡುತ್ತಿತ್ತು.

ಅಮ್ಮ ಸಾಯುವ ಗಳಿಗೆಯಲ್ಲಿ ನನ್ನನ್ನು ನೆನೆದಳು ಅನ್ನುವುದು ನನ್ನ ಅಸ್ತಿತ್ವವನ್ನು ಒತ್ತಿ ಹೇಳಿತು. ನಾನು ಅವಳಿಗೆ ಮನದಲ್ಲೇ ಆಶ್ವಾಸನೆ ನೀಡಿದೆ. ನಾನು ನಿನ್ನ ಮಗಳು, ಈ ಬದುಕನ್ನು ಗೆದ್ದು ತೋರಿಸುತ್ತೇನೆ ನೋಡುತ್ತಿರು ಅಂತ. ಅದೆಂತಹ ಆತ್ಮವಿಶ್ವಾಸ ನೀಡಿತು ಎಂದರೆ ನಾನು ಮತ್ತೊಮ್ಮೆ ಹುಟ್ಟಿಬಂದೆ.
ಆದರೂ ಇದನ್ನು ಬರೆಯುವಾಗ ಯಾಕಿಷ್ಟು ದುಃಖ… ಜೊತೆಯಲ್ಲೇ ಬೆರೆತು ಹೋಗಿದ್ದರೂ ರಕ್ತ ಮಾಂಸಗಳಲ್ಲಿ ತುಂಬಿದ್ದರೂ ಅವಳ ಅಸ್ತಿತ್ವವೇ ಬೇಕು ಅನಿಸುತ್ತದೆ ಅಲ್ಲವೇ… ಉಕ್ಕುಕ್ಕಿ ಬರುವ ಕಣ್ಣೀರು ಅವಳಿಗೆ ಬಿಡುವ ಅಶ್ರುತರ್ಪಣ.?

‍ಲೇಖಕರು Admin

9 May, 2016

1 Comment

  1. Subhash Kulkarni

    ಚಿಕ್ಕವರಿದ್ದಾಗ ಆಡಿದ್ದೇನೆ…
    ಈಗ ಮೊಮ್ಮಕ್ಕಳಿಗೆ ಹೇಳಿ ಕೊಡೋಣ ಎಂದರೆ ರೂಲ್ಸ್ ನೆನಪಾಗುತ್ತಿಲ್ಲ. ಕಾಯಿ ಕಡಿಯುವ ಮುನ್ನ ಒಳಗೆ ಪ್ರವೇಶವಿಲ್ಲ… ಕಟ್ಟೆಯಲ್ಲಿರುವ ಕಾಯಿ ಕಡಿಯುವಂತಿಲ್ಲ. ಕಾಯಿಗಳು ಯಾವ ಮಾರ್ಗದಲ್ಲಿ ಮುನ್ನಡೆಯುತ್ತವೆ ಎನ್ನುವುದು ಗೊತ್ತಿರುವ ಸಂಗತಿ… ಆದರೆ ಕವಡೆ ಹಾಕಿದಾಗ ಬರುವ ಕಾಂಬಿನೇಶನ್ ಗೆ ಏನು ಸಂಖ್ಯೆ..? ಯಾವಾಗ ಇನ್ನೊಂದು ಸಲ ಆಡೋದು…? ಸ್ವಲ್ಪ ಕನ್ಫಫ್ಯೂಶನ್….. ಯಾಕೆಂದರೆ ಏಳು ಮನೆ ಆಟದಲ್ಲಿ ಮತ್ತು ಪಗಡೆ-ಪಟ್ಟದ ಆಟದಲ್ಲಿ ಕವಡೆಯ ವ್ಯಾಲ್ಯೂಗಳು ಬೇರೆ ಇವೆ ಗೊತ್ತು…

    ಗೊತ್ತಿದ್ದವರು ತಿಳಿಸುತ್ತೀರಾ…? ಥ್ಯಾಂಕ್ಸ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading