ಚೈತ್ರಾ ಶಿವಯೋಗಿಮಠ
ಪ್ರೀತಿಯನೇ ಹಂಬಲಿಸಿ
ಹಸಿದು ಕುಳಿತವಳಿಗೆ
ಕೊಟ್ಟು ಖಾಲಿಯಾಗಲು
ಹವಣಿಸುವವ ಸಿಕ್ಕರೆ
ದೀವಳಿಗೆಯ ಹೋಳಿಗೆ
ಎರಡು ಒಂದಾಗುವುದೋ
ಒಂದು ಎರಡಾಗುವುದೋ
ಒಂದಕ್ಕೊಂದು ಮಿಡಿದು
ಏನೆಂದು ಹೆಸರಿಡುವುದು
ಇಮ್ಮಡಿಯಾಗುವ ದಿಗಿಲಿಗೆ

ಮುಂಬಿಸಿಲ ಬಿಸುಪಿಗೆ
ನೀರ್ಗಲ್ಲು ಸಣ್ಣಗೆ ಕರಗುವಂತೆ
ಹೊಂಬಿಸಿಲ ಸೊಲ್ಲಿಗೆ
ಸೋತು ಆರ್ದ್ರತೆಯ ತೇವ
ಈಗ ಎದೆಯಿಂದ ಚಕ್ಷುವಿಗೆ
ಏನೂ ಇಲ್ಲದಿರುವಾಗಲೇ
ಅಲ್ಲೇನೋ ಇರುವುದು
ಒಲವ ಸೆಲೆ ಉಕ್ಕುವುದು
ಇರುಳಲ್ಲಿ ಹೊಸ ಸೂರ್ಯ
ಕ್ಷಿತಿಜದಿಂದ ಏರಿದಂತೆ ಎದೆಮುಗಿಲಿಗೆ
ದೇಹದ ಬಟ್ಟೆ ತೊಟ್ಟು
ಮಾತಿಗಿಳಿಯುವುದು ಎರಡು
ಆತ್ಮಗಳೇ ಹೊರತು
ಕೆಲಸವಿಲ್ಲ ಈ ತುಟಿಗಳಿಗೆ






0 Comments