ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಾ ಅರ್ಜುನಪುರಿ ಅನುವಾದಿತ ಕವಿತೆ – ನಾನು, ಮನೆ ಕೆಲಸದವಳು…

ಮೂಲ: ಹರ್ಮನ್ ಎಚ್ ಲೆ ರೌಕ್ಸ್ 

ಕನ್ನಡಕ್ಕೆ : ಚೈತ್ರಾ ಅರ್ಜುನಪುರಿ

ನಾನು, ಮನೆ ಕೆಲಸದಾಕೆ
ನಾಲ್ಕು ಗಂಟೆಗೆ ಎದ್ದೇಳುತ್ತೇನೆ.
ಆಟೋ ಹತ್ತುತ್ತೇನೆ, ಕಾಯುತ್ತೇನೆ.
ನಿಮ್ಮ ಆದೇಶದ ಹಾಗೆ ಏಳರೊಳಗೆ ಕೆಲಸಕ್ಕೆ ಹಾಜರಿರಬೇಕಲ್ಲವೇ.

ಮಳೆಯಿರಲಿ, ಚಳಿಯಿರಲಿ
ನಾನು ಹೊರಟುಬಿಡುತ್ತೇನೆ. ಕೆಲವೊಮ್ಮೆ ಬಹಳ ದೂರ.
ಕೆಲವು ದಿನ ರಸ್ತೆ ಬದಿಯಲ್ಲಿ
ಟೀ ಕುಡಿಯುತ್ತೇನೆ,
ಇದಕ್ಕೆ ಬರೀ ಒಂದು ರೂಪಾಯಿ
ಬೇರೆ ದಿನಗಳಲ್ಲಿ ಆ ಕಾಸೂ ಇರುವುದಿಲ್ಲ
ಆದರೂ ಪರವಾಗಿಲ್ಲ
ಅಮ್ಮಾವ್ರು ನಿನ್ನೆ ಮಿಕ್ಕಿದ ಅನ್ನ ಕೊಡುತ್ತಾರೆ.

ಊಟ ಊಟವೇ.

ನಮಸ್ತೆ ಅಮ್ಮಾವ್ರೇ.

ನನ್ನಲ್ಲಿ ಕೌಶಲ್ಯವಿದೆ.
ನನ್ನಮ್ಮ ಕಲಿಸಿಕೊಟ್ಟ ಹಾಗೆ ಬಟ್ಟೆ ಮಡಚಬಲ್ಲೆ,
ಇಸ್ತ್ರಿ ಪೆಟ್ಟಿಗೆಯೇ ನಾನು ಎಂಬಂತೆ ಇಸ್ತ್ರಿ ಮಾಡಬಲ್ಲೆ.
ಮನೆ ಒಪ್ಪವಾಗಿಸುವ ಗುಟ್ಟು ತೋರಿಸಬಲ್ಲೆ
ಇದು ನಮಗೆ ಮಾತ್ರ ತಿಳಿದಿರುವ ರಹಸ್ಯ.

ನಿಮ್ಮ ಬಟ್ಟೆಗಳನ್ನು ಒಗೆಯುತ್ತೇನೆ,
ಅಂತಹ ಬಟ್ಟೆಗಳನ್ನು ನಾನು ಜೀವನದಲ್ಲೇ ತೊಡುವುದಿಲ್ಲ.
ಕೆಲವೊಮ್ಮೆ ನಿಮಗೆ ಅಡುಗೆ ಮಾಡುತ್ತೇನೆ,
ಆ ಊಟ ಯಾವತ್ತೂ ನನಗೆ ಸಿಗುವುದಿಲ್ಲ.

ನೆಲದ ಮೇಲೆ ಒದ್ದೆಯಾದ ಟವೆಲ್‌ ಗಳು,
ಪಾಲಿಷ್ ಮಾಡಿದ ಅಮೂಲ್ಯ ಮರದ ಪೀಠೋಪಕರಣಗಳು,
ಕಿಟಕಿಗಳು, ಎಂದಿಗೂ ಮುಗಿಯದ ಆ ಕಿಟಕಿಗಳು.
ಸದಾ ಇರುವ ಧೂಳು…

ಕೆಲವು ಸಲ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತೀರಿ,
ನನಗೆ ಒಳ್ಳೆಯ ಸಂಬಳ ಸಿಗುತ್ತದೆ, ಸವಲತ್ತುಗಳು ಸಿಗುತ್ತವೆ
ನಿಮ್ಮ ಕುಟುಂಬದಲ್ಲಿ ಒಬ್ಬಳಂತೆ ನನ್ನನ್ನು ನೋಡಿಕೊಳ್ಳುತ್ತೀರಿ
ಇದು ಕೆಲವೇ ಕೆಲವರಿಗೆ ಸಿಗುವ ಅದೃಷ್ಟ

ಉಳಿದವರು, ನಾವು ಕೇವಲ ಕೆಲಸಗಾರರು, ಮನೆ ಕೆಲಸದವರು.

ನಿಮ್ಮ ಪರಸ್ಪರ ಜಗಳಗಳನ್ನು ನೋಡುತ್ತೇನೆ
ಆದರೆ ಅದರ ಬಗ್ಗೆ ಮಾತನಾಡಲು ನನಗೆ ಧೈರ್ಯವಿಲ್ಲ,
ಅದು ನನಗೆ ಸಂಬಂಧಿಸಿದ್ದಲ್ಲ.
ನಿಮ್ಮ ರಹಸ್ಯಗಳನ್ನು ನಾನು ನೋಡುತ್ತೇನೆ,
ನಿಜವಾಗಲೂ ನೀವು ನಡೆಸುತ್ತಿರುವುದು
ನಕಲಿ ಜೀವನ.
ನಾನು ಕೇವಲ ಆಳು, ಮನೆ ಕೆಲಸದಾಕೆ
ಆದರೆ ನಾನು ಎಲ್ಲವನ್ನೂ ನೋಡುತ್ತೇನೆ.

ಎಲ್ಲಾ ಇದ್ದರೂ ನೀವು ಎಷ್ಟು ಅತೃಪ್ತರಾಗಿದ್ದೀರಿ
ಎನ್ನುವುದನ್ನು ನೋಡಿದಾಗ
ಕೆಲವು ಸಲ ನನಗೇ ಬೇಸರವಾಗುತ್ತದೆ.

ಪರದೆ ಹಾಕಿ ನಿಮ್ಮ ನಿಜ ಜೀವನವನ್ನು ಜಗತ್ತಿನಿಂದ ಬಚ್ಚಿಟ್ಟಿರುವ
ಕಿಟಕಿಗಳನ್ನು ಉಜ್ಜಿ ಉಜ್ಜಿ ತೊಳೆಯುತ್ತೇನೆ.
ನೀವು ನಡೆದಾಡುವ ನೆಲವನ್ನು ತಿಕ್ಕಿ ತಿಕ್ಕಿ ಒರೆಸುತ್ತೇನೆ.
ನಿಮ್ಮ ಮಕ್ಕಳ ಜೊತೆಯಲ್ಲಿ ಆಟವಾಡುತ್ತೇನೆ,
ನಾನು ಅವರನ್ನು ಪ್ರೀತಿಸುವ ಹಾಗೆ ಅವರೂ ನನ್ನನ್ನು ಪ್ರೀತಿಸುತ್ತಾರೆ.

ಕೆಲವು ಸಲ ನಾನು ನಿಮಗೆ ಕೇವಲ ಒಂದು ವಸ್ತು,
ವಾರಾಂತ್ಯದಲ್ಲಿ ನೀವು ಕುಡಿದು ಮಜಾ ಮಾಡಿದ ಮೇಲೆ
ಬಂದು ಎಲ್ಲವನ್ನೂ ಸ್ವಚ್ಛಗೊಳಿಸುವ ಒಂದು ಯಂತ್ರ
ಅದನ್ನು ನಾನು ಮಾಡುತ್ತೇನೆ. ನಾನು ದುಡಿಯಬೇಕು.
ನಾನು ಕೃತಜ್ಞಳಾಗಿದ್ದೇನೆ.

ದುಬಾರಿ ಅಂಗಡಿಗಳಲ್ಲಿ ನೀವು ಖರೀದಿಸಿದ
ನಿಮ್ಮ ನವಿರಾದ ಒಳ ಉಡುಪುಗಳನ್ನು ಮಡಚುತ್ತೇನೆ,
ನೀವು ಬಳಸುವ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತೇನೆ,
ದುಃಖವನ್ನು ಅಳಿಸಿಹಾಕಿ, ನಿಮ್ಮ ಮನೆಯನ್ನು
ಸುಂದರಗೊಳಿಸುತ್ತೇನೆ.

ನಾನು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತೇನೆ
ನಾನು ಅಗ್ಗದ ಕೂಲಿ ಕಾರ್ಮಿಕೆ.
ಆದರೂ ಆ ದುಡಿಮೆ ಕಠಿಣ.
ಮಹಡಿ ತೊಳಿ,
ಗೋಡೆ ಒರೆಸು,
ಕಸ ಗುಡಿಸು,
ಮನೆ ಒರೆಸು,
ಇಸ್ತ್ರಿ ಮಾಡು,
ಬಟ್ಟೆ ಒಗೆದು ಒಣಗಿ ಹಾಕು,
ಪಾತ್ರೆ ತೊಳಿ,
ಶೌಚಾಲಯ ಸ್ವಚ್ಛ ಮಾಡು.

ನಾನು ಅದೃಷ್ಟಶಾಲಿ ಎನ್ನುವುದು ಗೊತ್ತು,
ನನಗೆ ಕೆಲಸ ಇದೆ.
ಈ ಕೆಲಸದಿಂದ ನಾನು ದೇಶ ಕಟ್ಟಿದ್ದೇನೆ,
ನನ್ನ ಸ್ವಂತ ಮಕ್ಕಳಿಗೆ ಊಟ ಹಾಕಿದ್ದೇನೆ, ಅವರನ್ನು ಶಾಲೆಗೆ ಸೇರಿಸಿದ್ದೇನೆ
ನಿಮ್ಮ ಮಕ್ಕಳಿಗೆ ಅಡುಗೆ ಮಾಡಿದ್ದೇನೆ, ಅವರಿಗೆ ಊಟ ತಿನ್ನಿಸಿದ್ದೇನೆ,
ಭವಿಷ್ಯ ಕಟ್ಟಿಕೊಳ್ಳಲು ಶಾಲೆಗೆ ಹೋದ ನನ್ನ ಮಕ್ಕಳ ಬಟ್ಟೆ ಒಗೆದಿದ್ದೇನೆ
ಭವಿಷ್ಯ ಕಟ್ಟಿಕೊಳ್ಳಲು ಶಾಲೆಗೆ ಹೋದ ನಿಮ್ಮ ಮಕ್ಕಳ ಬಟ್ಟೆ ಒಗೆದಿದ್ದೇನೆ.

ಕೆಲವು ಸಲ ನನ್ನನ್ನು ಚೆನ್ನಾಗಿ, ಸಭ್ಯವಾಗಿ ನಡೆಸಿಕೊಳ್ಳುತ್ತೀರಿ.
ಇತರೆ ವೇಳೆ ನನ್ನನ್ನು ಕಸದಂತೆ ನಡೆಸಿಕೊಳ್ಳುತ್ತೀರಿ,
ನಿಮ್ಮ ಮುಂದೆ ನಾನು ಕುಳಿತುಕೊಳ್ಳದೇ ಇರಬಹುದು
ನನಗೇನೋ ಖಾಯಿಲೆಯಿದೆ ಎನ್ನುವ ಹಾಗೆ
ಬೇರೆ ತಟ್ಟೆ, ಲೋಟ ಕೊಡುತ್ತೀರಿ
ಆದರೂ ನಿಮಗೆ ಅಡುಗೆಯನ್ನು ನಾನೇ ಮಾಡುತ್ತೇನೆ.
ಸಂಕಟವಾಗುತ್ತದೆ ಕೆಲವೊಮ್ಮೆ.
ನಿಮ್ಮ ದೃಷ್ಟಿಯಲ್ಲಿ ನಾನು ಕೊಳಕೇನೋ ಎನಿಸುತ್ತದೆ.

ನಾನು ಕೊಳಕಿ ಅಲ್ಲ.

ನಿಮ್ಮ ಮಕ್ಕಳು ನನ್ನ ಹತ್ತಿರ ಓಡಿ ಬರುತ್ತಾರೆ,
ಆಗಾಗ ನಾನು ಅವರ ಜೊತೆ ಮಾತನಾಡುತ್ತೇನೆ
ನಿಮ್ಮ ಸಾಕುಪ್ರಾಣಿಗಳು ನನಗೆ ಗೊತ್ತು,
ನಿಮ್ಮ ಇಷ್ಟಾರ್ಥಗಳೆಲ್ಲಾ ನನಗೆ ಗೊತ್ತು,
ನಿಮಗೆ ಏನಿಷ್ಟವಿಲ್ಲವೇನೋವುದೂ.
ನನ್ನ ಬಗ್ಗೆ ನಿಮಗೆ ಏನು ಗೊತ್ತು?

ನೀವು ಕೆಲಸಕ್ಕೆ ಹೋದಾಗ,
ನಿಮ್ಮ ಮನೆಯನ್ನು ಗುಡಿಸಿ, ಒರೆಸಿ, ಒಪ್ಪವಾಗಿರಿಸುವವಳು ನಾನು,
ನಿಮಗೆ ಮುಖ್ಯವಾದ ಅನೇಕ ಸಣ್ಣ ಕೆಲಸಗಳನ್ನು ಮಾಡುವವಳು ನಾನು.

ನೀವು ಒಪ್ಪವಾದ ನಿಮ್ಮ ಮನೆಗೆ ಬರುತ್ತೀರಿ,
ನಾನಿನ್ನೂ ನನ್ನ ಮನೆಯನ್ನು ಒಪ್ಪ ಮಾಡಬೇಕಿದೆ.

ನಾನು ಸೇವಕಿ, ಮನೆ ಕೆಲಸದಾಕೆ, ಅಗ್ಗದ ಕೂಲಿ.
ಇದು ನಾನು, ಶಿವಮ್ಮ, ಗಂಗಮ್ಮ, ಸಾಕಮ್ಮ

ನಿಮ್ಮ ಬದುಕನ್ನು ಕಟ್ಟಿಕೊಳ್ಳಲು
ನಿಮಗಾಗಿ ಮನೆಯನ್ನು ಒಪ್ಪ ಮಾಡಿದ ಹಾಗೆ,
ಈ ದೇಶವನ್ನೂ ಕಟ್ಟಿದ್ದೇನೆ.

ವಿದ್ಯಾವಂತರಷ್ಟೇ ನನಗೆ ಬೆಲೆಯಿದೆ,
ಎಷ್ಟೋ ಕುಟುಂಬಗಳಿಗೆ ನಾನೇ ಆಧಾರ
ನಾನು ಕೇವಲ ಮನೆ ಕೆಲಸದವಳಲ್ಲ.

ನನಗೊಂದು ಹೆಸರಿದೆ

ನನಗೊಂದು ಮೌಲ್ಯವಿದೆ

ನಾನು ಭರವಸೆ.

ನನಗೀಗ ವಯಸ್ಸಾಗಿದೆ, ಕೈಗಳ ನೆರಿಗೆಗಳು
ನೀರಿನೊಂದಿಗೆ,
ಚಳಿಯಲ್ಲಿ
ನಾನು ಮಾಡಿದ ಅಷ್ಟೂ ವರ್ಷಗಳ ಕೆಲಸವನ್ನು ತೋರುತ್ತಿವೆ.
ಯಾವುದೇ ನಿವೃತ್ತಿ ಪಿಂಚಣಿ ನನಗಾಗಿ ಕಾಯುತ್ತಿಲ್ಲ,
ನನ್ನ ಮನೆಯನ್ನು ಒಪ್ಪವಾಗಿಸಲು ಯಾರೂ ಇಲ್ಲ.
ನನ್ನ ಕೈಲಾಗುವ ತನಕ ಚಾಕರಿ
ಮಾಡುತ್ತಲೇ ಇರುತ್ತೇನೆ.

ನನ್ನ ಹೆಸರು ಅನೇಕರಿಗೆ ಭವಿಷ್ಯ,
ಟೇಬಲಿನ ಮೇಲೆ ಊಟ, ಜೀವನ, ಕಠಿಣ ಪರಿಶ್ರಮ
ನಿಮ್ಮ ಮನೆಯಲ್ಲಿ ನಾನು ಕೆಲಸದವಳು,
ಅವನ್ನು ಬೇರೆಯವರು ಮಾಡುವುದಿಲ್ಲ,
ಆ ಕೆಲಸ ಮಾಡಲು ನಾನು ತಯಾರಿದ್ದೇನೆ.
ನನಗೆ ಗೌರವವಿದೆ,
ಹಾಗೇ ನಿಮ್ಮ ಶೌಚಾಲಯ ತೊಳೆಯಲು
ನನಗೆ ನಾಚಿಕೆಯಾಗುವುದಿಲ್ಲ.

ಒಳ್ಳೆಯ ಕೆಲಸವೇ ಇದು.

ನಾನು,

ನಾನೇ.

‍ಲೇಖಕರು Admin

28 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading