ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೇ… ಎಲ್ಲಿರುವೆ ನೀನೀಗ?

ಬಿಳಿಯ ಹೂಗಳೆಲ್ಲ ಕೆಂಪಾಗಿ

-ಜಬೀವುಲ್ಲಾ ಎಂ ಅಸದ್

ಉಳುವ ನೇಗಿಲಿಗೆ ನೆಲದ ಬಿಸಿ ನೆತ್ತರು ತಾಗಿ,
ಕಣ್ಣ ಮುಂದಣ ಬಯಲು ಬೆತ್ತಲಾಗಿ ತೋರಿ
ಮುರಿದ ಕನಸು, ಕುದಿವ ಮನಸು
ಕಾಣದಾಗಿದೆ ಹೆಜ್ಜೆಗುರುತುಗಳು ಕಾಣಸಿಗುವ ದಾರಿ
ಹುಟ್ಟಬೇಕಾಗಿದೆ ಮತ್ತೆ
ಬುದ್ಧ, ಬಸವ, ಅಂಬೇಡ್ಕರರಂತೆ ಮತ್ತೊರ್ವ ಪ್ರವಾದಿ

ಊರಿದ ಹೆಜ್ಜೆ ಎತ್ತಲಾಗದೆ ಬಿಟ್ಟ ಬೇರು
ಶಾಸ್ತ್ರ, ಮಂತ್ರ, ಕುತಂತ್ರದಿ ಕೆಳ ಕೆಡವಿ
ಮೇಲೆ ಹತ್ತಿ ಕೂತು
ಬಿಡಿಸಿಕೊಳ್ಳಲಾಗದಂತೆ ಬಲ ಬಳಸಿ ಅತಿರೇಕದಿ
ಜಾತಿ ಎಂಬ ಉರಿ ಬಿಗಿದು
ಬಲವಂತದಿ ಕಟ್ಟಿ ಹಾಕಿದ
ಕರಗಳ ಪಾಡು
ಶತಮಾನಗಳ ತೀರದ ಗೋಳು

ಪ್ರೇಮದಿ ಹಚ್ಚಿಟ್ಟ ಉರಿವ ಕರುಳ ದೀಪಗಳು
ಬೀಸುವ ಗಾಳಿಯೊಂದಿಗೆ ನಿರಂತರ ಕಾದಾಡಿ
ಕೊನೆಗೆ ಸೋತು, ಶರಣಾಗಿ…
ನೋವಿನ ಬಣ್ಣದಲಿ ಅದ್ದಿ ತೆಗೆದ ಹೃದಯಗಳು
ನರಳಿ, ಬಾಡಿದ ಹೂಗಳಾಗಿ
ಹುಟ್ಟಿದೆ ಒಂದು ಕ್ರಾಂತಿಯ ಗೀತೆ
ವಿಪ್ಲವವಾಗಿ

ಚೇ… ಎಲ್ಲಿರುವೆ ನೀನೀಗ?
“ಜಗತ್ತಿನ ಎಲ್ಲೆ ಆಗಲಿ ಅನ್ಯಾಯದ ವಿರುದ್ದ
ನೀನು ಸಿಡಿದು ನಿಂತರೆ ಆಗ
ನೀನು ನನ್ನ ಸಂಗಾತಿ”
ಅಂದಿರುವೆಯಲ್ಲ ಬಾ ಬೇಗ
ಬಂದು ಜೊತೆ ನಿಲ್ಲು ಈಗ

ಬೆವರಿಗೆ ಬೆಲೆ ಇಲ್ಲದ ನಾಡಲ್ಲಿ
ನರನಾಡಿಯಲ್ಲಿ ಹರಿವ ರಕುತದಲ್ಲಿ
ಧರ್ಮ ಹುಡುಕುವವರ ನಡುವಲ್ಲಿ
ಬುದ್ಧನಂತೆ ಬೋಧಿವೃಕ್ಷದ ಕೆಳಗೆ
ಬಯಕೆಗಳ ಹತ್ತಿಕ್ಕಿ ಶಾಂತ ಮೂರ್ತಿಯಾಗಿ
ದುಃಖ ತುಂಬಿದ ಜಗಕೆ ಮದ್ದಿನಂತೆ
ಮುಗುಳ್ನಗುತ್ತ ಧ್ಯಾನಸ್ತನಾಗುವುದು
ನಮ್ಮಿಂದ ಸಾಧ್ಯವಿಲ್ಲ, ಇಲ್ಲ!

ಅಟ್ಟಹಾಸದಿ ಬಂಡವಾಳಶಾಹಿಗಳು
ಬಂಧಿಸಿಟ್ಟ ಪಂಜರ ಭೇದಿಸಿ
ಸ್ವಾತಂತ್ರ್ಯದ ಹರುಷದಲಿ
ಹಾರಿದ ಹಕ್ಕಿಯ ಗುಂಪಿನ ಮೇಲೆ ಅಧಿಕಾರಶಾಹಿಗಳು
ಯುದ್ಧದ ನೆಪದಲ್ಲಿ ಮುಗಿಲಗಲ ಎಸೆದ
ಮದ್ದು ಗುಂಡುಗಳ ಧಾಳಿಗೆ
ರೆಕ್ಕೆ ಸಂಕುಲ ಛಿಧ್ರಗೊಂಡು
ಇಳೆಗೆ ರಕುತದ ಮಳೆ ಸುರಿಯೇ
ಬಿಳಿಯ ಹೂಗಳೆಲ್ಲ ಕೆಂಪಾಗಿ

‍ಲೇಖಕರು Admin

11 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading