ಜಿ ಪಿ ಬಸವರಾಜು
‘ಉತ್ತರ ಪ್ರದೇಶವನ್ನು ಗುಜರಾತ್ ಮಾಡಲು ಹೊರಟರೆ ಮೋದಿಯನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ.’
‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸೋನಿಯಾ ಮತ್ತು ರಾಹುಲರನ್ನು ಬೆತ್ತಲು ಮಾಡಿ ಇಟಲಿಗೆ ಅಟ್ಟಿಬಿಡುತ್ತೇನೆ.’
‘ನೀವು 100 ಕೋಟಿ, ನಾವು 25 ಕೋಟಿ. ಕೇವಲ 15 ನಿಮಿಷ ಪೊಲೀಸರನ್ನು ಆಚೆಗಿಡಿ, ನಾವೇನು ಮಾಡಬಲ್ಲೆವೆಂಬುದನ್ನು ತೋರಿಸಿಕೊಡುತ್ತೇವೆ.’
‘ಬಿಎಸ್ಪಿಯ ಮುಖ್ಯಸ್ಥೆ ಮಾಯಾವತಿ ಈಗಾಗಲೇ ನರೇಂದ್ರ ಮೋದಿಯ ತೊಡೆಯ ಮೇಲೆ ಮೂರು ಬಾರಿ ಕುಳಿತಾಗಿದೆ.’
ಇಂಥ ಮಾತುಗಳಿಗೆ ಕೊನೆ ಮೊದಲು ಎಂಬುದು ಇರುತ್ತದೆಯೇ? ಕೊಲ್ಲುವುದು, ಬೆತ್ತಲು ಮಾಡುವುದು, ದೇಶವನ್ನು ಬಿಟ್ಟು ಓಡಿಸುವುದು ಹೀಗೆ ಅನೇಕ ರೀತಿಯ ಹಗೆತನದ ಮಾತುಗಳು ಈಗ ಆವೇಶದಿಂದ ಹರಿದಾಡುತ್ತಿವೆ. ‘ತಾಟಕಿ’, ‘ಪಾಕಿಸ್ತಾನದ ಏಜೆಂಟ್’, ‘ಜಿರಲೆ’ ‘ಚಾಯ್ವಾಲಾ’, ‘ಪಾನ್ವಾಲಾ’, ‘ನಪುಂಸಕ’ ಇನ್ನೂ ಎಷ್ಟೋ. ಎದೆತುಂಬ ದ್ವೇಷವನ್ನು, ಹಗೆತನವನ್ನು ತುಂಬಿಕೊಂಡು ಮಾತನಾಡಲು ಹೊರಟರೆ ಮಾತು ಬೆಂಕಿಯಾಗುತ್ತದೆ. ಬೆಂಕಿಯ ಹೊಳೆ ಹರಿದರೆ ಅದು ಎಲ್ಲವನ್ನೂ ಎಲ್ಲರನ್ನೂ ಸುಡುತ್ತದೆ; ನಾಶಮಾಡುತ್ತದೆ. ಜಾತಿ, ಧರ್ಮ, ಪ್ರದೇಶ, ಹುಟ್ಟಿನ ಮೂಲ, ಲಿಂಗ ತಾರತಮ್ಯ ಹೀಗೆ ಹಲವಾರು ನೆಲೆಗಳಿಂದ ಹರಿಯುವ ಮಾತುಗಳು ವ್ಯಕ್ತಿ ಗೌರವವನ್ನು ತುಂಡುತುಂಡು ಮಾಡುತ್ತವೆ. ಮನುಷ್ಯರು ಅವಮಾನಿತರಾಗುತ್ತಾರೆ. ಹಗೆತನ ಹೊಗೆಯಾಡಿ, ಬೆಂಕಿ ಧಗಧಗಿಸುತ್ತದೆ. ಇದು ಅನೇಕ ಅಮಾನವೀಯ ಕೃತ್ಯಗಳಿಗೆ ಪ್ರೇರಣೆ ನೀಡುತ್ತದೆ. ಜಾತಿ, ಧರ್ಮಗಳನ್ನು ಹಿಡಿದುಕೊಂಡ ಸಮುದಾಯಗಳು ಬಡಿದಾಟಕ್ಕೆ, ಕೊಲೆ ಸುಲಿಗೆಗೆ ಮುಂದಾಗುತ್ತವೆ. ಶಾಂತಿ ಕದಡಿ ಸಮಾಜದ ಸಾಮರಸ್ಯ ಹಾಳಾಗುತ್ತದೆ. ಯಾವುದೇ ರಾಷ್ಟ್ರದ ಒಳಗಿನ ನೆಮ್ಮದಿ ಕಲಕುತ್ತದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ; ರಾಷ್ಟ್ರದ ಪ್ರಗತಿಗೂ ಅಡ್ಡಿಯುಂಟಾಗುತ್ತದೆ.
ಚುನಾವಣೆಯ ಸಂದರ್ಭದಲ್ಲಂತೂ ಇಂಥ ಮಾತುಗಳಿಗೆ ಲಂಗು ಲಗಾಮು ಇರುವುದಿಲ್ಲ. ಇದನ್ನು ತಡೆಯುವುದಕ್ಕಾಗಿಯೇ ಚುನಾವಣಾ ಆಯೋಗ ಹಲವು ನಿರ್ಬಂಧಗಳನ್ನು ವಿಧಿಸಿರುತ್ತದೆ. ಈ ಕಟ್ಟುಪಾಡುಗಳನ್ನು ಮೀರಿ ನಡೆದುಕೊಳ್ಳುವವರನ್ನು ಅಂಕೆಯಲ್ಲಿಡಲು ನೋಡುತ್ತದೆ. ಇದಕ್ಕಾಗಿಯೇ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ತಪ್ಪು ಮಾಡಿದವರನ್ನು ದಂಡಿಸಲು ನೋಡುತ್ತದೆ. ಈ ಚುನಾವಣೆಯಲ್ಲಂತೂ ಹಗೆತನದ ಮಾತುಗಳು ರಭಸವಾಗಿ ಹರಿದಾಡಿವೆ; ಇದಕ್ಕೆ ಕಾರಣರಾದವರನ್ನು ಪೊಲೀಸರು ಬಂಧಿಸಿಯೂ ಇದ್ದಾರೆ. ಇಷ್ಟೇ ಹಗೆತನವನ್ನು ಕೊನೆಗೊಳಿಸುವುದಿಲ್ಲ. ಬಂಧಿತರು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ. ಮತ್ತೆ ಚುನಾವಣಾ ಭಾಷಣ ಮಾಡುತ್ತಾರೆ. ಅಲ್ಲಿ ಇಂಥವೇ ಹಗೆತನದ ಮಾತುಗಳು. ಇವನ್ನೆಲ್ಲ ಕೊನೆಗಾಣಿಸುವುದು ಹೇಗೆ? ಚುನಾವಣಾ ಆಯೋಗಕ್ಕೆ ಶಿಕ್ಷಿಸಲು ಇರುವ ಅಧಿಕಾರ ಬಹಳ ಕಡಿಮೆ. ಹಗೆತನದ ಮಾತುಗಳನ್ನಾಡುವ ಅಭ್ಯಥರ್ಿಗಳನ್ನು ಬಗ್ಗುಬಡಿಯುವಷ್ಟು ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ. ಈಗಿರುವ ಅದರ ಅಧಿಕಾರಕ್ಕೆ ದುಷ್ಟರು ಯಾರೂ ಹೆದರುವುದಿಲ್ಲ. ಹಗೆತನದ ಮಾತುಗಳಿಂದ ರೋಸಿ ಹೋಗಿರುವ ಸುಪ್ರೀಂ ಕೋಟರ್್, ಇಂಥ ಮಾತುಗಳನ್ನು ಆಡುವ ಅಭ್ಯಥರ್ಿಗಳಿರುವ ರಾಜಕೀಯ ಪಕ್ಷವನ್ನೇ ಅಮಾನ್ಯ ಮಾಡಲು ಸಾಧ್ಯವೇ, ಯೋಚಿಸಿನೋಡಿ ಎಂದು ಕಾನೂನು ಆಯೋಗಕ್ಕೆ ಸೂಚಿಸಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ತೀವ್ರವಾಗಿ ನಡೆಯುವ ಇಂಥ ಚಿಂತನೆಗಳು ಚುನಾವಣೆ ಮುಗಿದ ಮೇಲೆ ನಿಂತುಹೋಗುತ್ತವೆ. ಮತ್ತೆ ಮಾಮೂಲು ಸ್ಥಿತಿ; ಇಂಥವೇ ಮಾತುಗಳು.
ಆದರೂ ಭಾರತೀಯ ಸಮಾಜ ಮತ್ತು ಮತದಾರ ಇಂಥ ಮಾತುಗಳಿಗೆ ಹೆಚ್ಚಿನ ಬೆಲೆಯನ್ನು ಕೊಡುವುದಿಲ್ಲ; ಬೆಂಬಲವನ್ನೂ ನೀಡುವುದಿಲ್ಲ. ಆಂಧ್ರಪ್ರದೇಶದ ಶಾಸಕ ಅಕ್ಬರುದ್ದೀನ್ ಒವೈಸಿ ಹೈದರಾಬಾದಿನಲ್ಲಿ ಇಂಥ ಹಗೆತನದ ಮಾತನಾಡಿದಾಗ ಜನ ತೋರಿದ ಪ್ರತಿಕ್ರಿಯೆಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಅಲ್ಲಿನ ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಕೂಡಲೇ ಒವೈಸಿ ಮಾತುಗಳನ್ನು ಖಂಡಿಸಿದರು; ಒವೈಸಿಯನ್ನು ಬಂಧಿಸಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದರು. ಅದರಂತೆ ಬಂಧನವೂ ಆಯ್ತು. ಅದರಿಂದ ಒವೈಸಿ ಪಾಠ ಕಲಿತರೆ ಇಲ್ಲವೇ ಎಂಬುದು ಬೇರೆಯ ಸಂಗತಿ. ಆದರೆ ಜನ ಪ್ರತಿಭಟಿಸಿ ತಮ್ಮ ಕೋಪವನ್ನು ತೋರಿಸಿದ್ದಂತೂ ನಿಜ. ಚುನಾವಣೆಯ ಸಂದರ್ಭದಲ್ಲಿಯೂ ಅಷ್ಟೆ. ಅಭ್ಯರ್ಥಿ ಯಾರೇ ಆಗಿರಲಿ, ಅವರಾಡುವ ಮಾತು ಎಷ್ಟೇ ಹಗೆತನದಿಂದ ಕೂಡಿರಲಿ, ಮತದಾರರು ಅದನ್ನೆಲ್ಲ ಕೇಳಿಸಿಕೊಳ್ಳುತ್ತಾರೆ. ಮತದಾನದ ಸಂದರ್ಭದಲ್ಲಿ ತಮ್ಮ ಹಕ್ಕನ್ನು ವಿವೇಕದಿಂದ ಚಲಾಯಿಸುತ್ತಾರೆ. ಹೀಗಾಗಿಯೇ ನಮ್ಮಲ್ಲಿ ಪ್ರಜಾಪ್ರಭುತ್ವ ಇನ್ನೂ ಅರ್ಥಪೂರ್ಣವಾಗಿ ಉಳಿದುಕೊಂಡು ಬಂದಿದೆ.

ಹಣ, ಪ್ರಭಾವ, ಜಾತಿ ಇತರ ನೂರಾರು ಕಾರಣಗಳು ನಮ್ಮ ಚುನಾವಣೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತ ಬಂದಿವೆ. ಈ ಅಂಶಗಳನ್ನೇ ಪ್ರಧಾನವಾಗಿಟ್ಟುಕೊಂಡು ಮತದಾರರ ಬಳಿಗೆ ಹೋದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಗೆಲ್ಲುವುದನ್ನೂ ನಾವ್ಲು ನೋಡಿದ್ದೇವೆ. ಇಷ್ಟಾದರೂ ಒಳ್ಳೆಯ ಅಂಶಗಳು ನಮ್ಮ ಪ್ರಜಾಪ್ರಭುತ್ವದಲ್ಲಿ ಉಳಿದುಕೊಂಡು ಬಂದಿವೆ. ಹಣ, ಪ್ರಭಾವ, ಜಾತಿ, ಅಧಿಕಾರ, ಧರ್ಮ ಇತ್ಯಾದಿ ಎಲ್ಲ ಅಂಶಗಳನ್ನು ದೂರವಿರಿಸಿದ, ರಾಷ್ಟ್ರದ ಹಿತವನ್ನೇ ಪ್ರಧಾನ ಆಶಯವನ್ನಾಗಿಸಿಕೊಂಡ, ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಅಭ್ಯರ್ಥಿಗಳನ್ನು, ಪಕ್ಷಗಳನ್ನು ನಮ್ಮ ಜನ ಬೆಂಬಲಿಸಿ ಹೊಸ ಭರವಸೆಯನ್ನು ಚಿಗುರಿಸಿದ್ದಾರೆ. ದಿಲ್ಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸಾಧಿಸಿದ ಗೆಲುವು ಅನೇಕ ಸಂಗತಿಗಳನ್ನು ನಿಚ್ಚಳವಾಗಿ ತೋರಿಸಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರನ್ನು ಜನ ಬೆಂಬಲಿಸುತ್ತಾರೆ; ಮತಧರ್ಮಗಳನ್ನು ಬಳಸಿ, ಭಾವನೆಗಳನ್ನು ಕೆರಳಿಸಿ ಮತಪಡೆಯಲು ನೋಡುವವರನ್ನು ಜನ ತಿರಸ್ಕರಿಸುತ್ತಾರೆ; ಸಭ್ಯರು, ಸ್ವಚ್ಛ ಹಿನ್ನೆಲೆಯನ್ನು ಉಳ್ಳವರು, ರಾಷ್ಟ್ರದ ಬಗ್ಗೆ ಕಾಳಜಿ ಇರುವವರು, ಹಣಕಾಸಿಲ್ಲದೆ ಬರಿಗೈಲಿ ಚುನಾವಣೆಗೆ ಸ್ಪರ್ಧಿಸಿದರೂ ಜನ ಅವರ ಬೆಂಬಲಕ್ಕೆ ನಿಲ್ಲುತ್ತಾರೆ; ಸಮಾಜದ ನೈತಿಕತೆಗೆ ಬೆಂಬಲ ಕೊಡುತ್ತಾರೆ. ದಿಲ್ಲಿಯ ಚುನಾವಣೆ ಹೇಳಿರುವುದೂ ಇದನ್ನೇ. ಭಾರತೀಯ ಮತದಾರ ವಿವೇಕಿಯೂ ಹೌದು, ಪ್ರಬುದ್ಧನೂ ಹೌದು. ನಮ್ಮ ಪ್ರಜಾಪ್ರಭುತ್ವ ಸರಿದಾರಿಯಲ್ಲಿ ನಡೆದಿರುವುದರ ಹಿಂದೆ ಇಂಥ ಸತ್ಯಗಳು ಇವೆ.
ನಮ್ಮ ಸಂವಿಧಾನವೂ ಹಗೆತನದ ಮಾತುಗಳಿಗೆ ಅವಕಾಶ ನೀಡಿಲ್ಲ. ಅದರ ಮೂಲ ಆಶಯದಲ್ಲಿಯೇ ಇದು ಕಾಣಿಸುತ್ತದೆ. ಕುಲಮೂಲ, ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಇತ್ಯಾದಿ ನೆಲೆಗಳನ್ನು ಬಳಸಿಕೊಂಡು ಹಗೆತನದ ಮಾತುಗಳನ್ನಾಡಿ ವ್ಯಕ್ತಿಗಳನ್ನು ನೋಯಿಸಲು ಸಾಧ್ಯವಾಗದಂತೆ ತಡೆಯಲು ಸಂವಿಧಾನ ಪ್ರಯತ್ನಿಸುತ್ತದೆ; ಈ ಸಂಬಂಧಿ ಕಾನೂನುಗಳೂ ಇವೆ. ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿದೆ. ಮಾತು ಮುಕ್ತ ಎಂದ ಕೂಡಲೇ ಅದು ಬೇಕಾಬಿಟ್ಟಿಯ ಮಾತಿಗೆ ಪರವಾನಗಿಯಲ್ಲ. ನಮ್ಮ ಸಾಮಾಜಿಕ ವ್ಯವಸ್ಥೆ ಹದಗೆಡಬಾರದು; ಸಾರ್ವಜನಿಕ ಆರೋಗ್ಯ ಮತ್ತು ನೈತಿಕ ಮೌಲ್ಯಕ್ಕೆ ಧಕ್ಕೆಯಾಗಬಾರದು. ಇಡೀ ಸಮುದಾಯದ ಸಾಮರಸ್ಯ ಕೆಡಬಾರದು. ಈ ದೃಷ್ಟಿಯಿಂದ ಕೆಲವು ನಿರ್ಬಂಧಗಳೂ ಇರುತ್ತವೆ. ಈ ನಿರ್ಬಂಧಗಳ ಚೌಕಟ್ಟಿನಲ್ಲಿಯೇ ನಮ್ಮ ಸ್ವಾತಂತ್ರ್ಯವೂ ಇರುತ್ತದೆ. 1951 ರಲ್ಲಿ ನಮ್ಮ ಸಂವಿಧಾನಕ್ಕೆ ತಂದ ತಿದ್ದುಪಡಿ ಈ ‘ಸಕಾರಣ ನಿರ್ಬಂಧಗಳ’ನ್ನು ಸೇರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥಪೂರ್ಣಗೊಳಿಸಲು ಪ್ರಯತ್ನಿಸಿದೆ.
128 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಒಂದೇ ವಿಚಾರ ಧಾರೆ ಇರುವುದಿಲ್ಲ. ಸಾವಿರಾರು ನಂಬಿಕೆಗಳು, ಧರ್ಮಗಳು, ಕುಲಮೂಲಗಳು, ಭಾಷೆಗಳು, ಆಚರಣೆಗಳು, ದೇವರುಗಳು ಇತ್ಯಾದಿ ವಿವಿಧತೆಗಳೇ ನಮ್ಮ ರಾಷ್ಟ್ರದ ವಿಶೇಷ. ತನ್ನ ತನವನ್ನು ತೋರಿಸಲು, ತನ್ನದೇ ಗುರುತನ್ನು ಉಳಿಸಿಕೊಳ್ಳಲು ಈ ವಿವಿಧತೆ ನೆರವಾಗುತ್ತದೆ ಎಂಬುದು ನಿಜ. ಹಾಗೆಯೇ ಇದು ದೇಶದ ಏಕತೆಯನ್ನು ಉಳಿಸಿಕೊಳ್ಳುವಲ್ಲಿ ದೊಡ್ಡ ತಲೆನೋವನ್ನೂ ತಂದುಹಾಕುತ್ತದೆ. ಒಂದು ರೀತಿಯ ಸಮತೋಲನವನ್ನು ಕಾಯ್ದುಕೊಂಡು ರಾಷ್ಟ್ರದ ಏಕತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ದೊಡ್ಡ ಜವಾಬ್ದಾರಿಯ ಕೆಲಸ. ನಮ್ಮ ರಾಷ್ಟ್ರ ಯಾವುದೇ ಒಂದು ಧರ್ಮವನ್ನು ಮಾನ್ಯ ಮಾಡಿಲ್ಲ. ರಾಷ್ಟ್ರಭಾಷೆ ಎಂಬುದು ಇರುವಂತೆ ರಾಷ್ಟ್ರಧರ್ಮ ಎಂಬುದು ನಮಗಿಲ್ಲ. ಎಲ್ಲ ಧರ್ಮಗಳೂ ಇಲ್ಲಿ ಸಮಾನ. ಎಲ್ಲ ಪ್ರಜೆಗಳೂ ಸಮಾನ ಹಕ್ಕುಬಾಧ್ಯತೆಗಳನ್ನು ಪಡೆದಿದ್ದಾರೆ. ಇದೇ ನಮ್ಮ ಪ್ರಜಾಪ್ರಭುತ್ವದ ಹೆಗ್ಗಳಿಕೆ. ನಮ್ಮ ಸಂವಿಧಾನದ ತಿರುಳೂ ಇದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅದು ನಮ್ಮ ಸಂವಿಧಾನವನ್ನು ಆಧರಿಸಿಯೇ ಅಧಿಕಾರ ನಡೆಸಬೇಕು. ತಾನು ಬೆಂಬಲಿಸುವ, ಗೌರವಿಸುವ ಯಾವುದೇ ಧರ್ಮ, ಭಾಷೆ, ಜನಾಂಗವನ್ನು ಸ್ಥಾಪಿಸಿ, ಇತರ ಧರ್ಮಗಳನ್ನು, ಭಾಷೆ, ಜನಾಂಗಗಳನ್ನು ಕಡೆಗಣಿಸಲು ಬರುವುದಿಲ್ಲ. ಯಾವುದೇ ಪಕ್ಷವಾದರೂ ರಾಷ್ಟ್ರದ ಏಕತೆಯನ್ನು ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳಲೇ ಬೇಕು. ಅದು ನಮ್ಮ ಸಂವಿಧಾನ ವಿಧಿಸಿರುವ ಕಟ್ಟುಪಾಡು.
ನಮ್ಮ ಸಂವಿಧಾನ ಜಾತಿಗಳನ್ನು ಮೀರಿದ್ದು; ಧರ್ಮಗಳನ್ನು ಮೀರಿದ್ದು. ಈ ರಾಷ್ಟ್ರದಲ್ಲಿ ಯಾರು ಯಾವ ನಂಬಿಕೆಯನ್ನು ಬೇಕಾದರೂ ಇಟ್ಟುಕೊಳ್ಳಬಹುದು; ಯಾವುದೇ ಧರ್ಮವನ್ನು ಅನುಸರಿಸಬಹುದು; ಯಾವುದೇ ಭಾಷೆ, ಬಣ್ಣ, ಕುಲಮೂಲಗಳನ್ನು ಗೌರವಿಸಬಹುದು. ಆದರೆ ಇತರರನ್ನು, ಇತರ ನಂಬಿಕೆಯವರನ್ನು ಅಗೌರವದಿಂದ ಕಾಣುವಂತಿಲ್ಲ. ಸಹನೆ, ಸಹಬಾಳ್ವೆ ಅತಿ ಮುಖ್ಯ. ಇದನ್ನು ಉಲ್ಲಂಘಿಸಿದರೆ ಜನ ಮುಂದಿನ ಚುನಾವಣೆಯಲ್ಲಿ ಅಂಥ ಪಕ್ಷವನ್ನು ಉರುಳಿಸಿ ಬಿಡುತ್ತಾರೆ. ಹೀಗಾಗಿಯೇ ಭಾರತ ಇಡೀ ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ; ಹಾಗೆಯೇ ಅನೇಕ ಕೌತುಗಳನ್ನು ಕಾಣಿಸುವ ರಾಷ್ಟ್ರವೂ ಹೌದು. ಇಲ್ಲಿ ನಡೆಯುವ ಚುನಾವಣೆಯೆಂದರೆ ಕ್ಷಣಕ್ಷಣಕ್ಕೂ ಮೈ ನವಿರೇಳಿಸುವ ಚುನಾವಣೆ. ಇಡೀ ಜಗತ್ತೇ ಈ ಚುನಾವಣೆಯನ್ನು ತೆರೆದ ಕಣ್ಣುಗಳಿಂದ ನೋಡುತ್ತಿರುತ್ತದೆ.
(ಸೌಜನ್ಯ: ಸಂಯುಕ್ತ ಕನಾಟಕ)



ದಿಲ್ಲಿಯಂತಹ ಸಣ್ಣ ರಾಜ್ಯದಲ್ಲಿ ಆಡಳಿತ ನಡೆಸಿದ್ದರೆ AAP ನ ಮೇಲೆ ಸ್ವಲ್ಪವಾದರೂ ಭರವಸೆ ಇಟ್ಟುಕೊಳ್ಳಬಹುದಿತ್ತು. ಜಡ್ಡು ಗಟ್ಟಿದ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಿಕ್ಕ ಅವಕಾಶವನ್ನು ಕೈ ಚೆಲ್ಲಿದವರನ್ನು ಹುಂಬರು ಅನ್ನಬಹುದೇ ಹೊರತು ಮೌಲ್ಯಾಧಾರಿತ ಪಕ್ಷ ಎನ್ನಲು ಸಾಧ್ಯವಿಲ್ಲ. ಐದು, ಹತ್ತು ,ಇಪ್ಪತು, ಇಪ್ಪತೈದು ಪಕ್ಷಗಳನ್ನು ಜತೆಗಿಟ್ಟುಕೊಂಡು ಇಡೀ ಭಾರತದ ರಾಜ್ಯಭಾರ ನಡೆಸಿದವರ ಉದಾಹರಣೆ ನಮ್ಮ ಮುಂದಿದೆ . ಆಡಳಿತ ನಡೆಸಲು ರಾಜಕೀಯ ಇಚ್ಚಾಶಕ್ತಿ ಬೇಕು. ಪುಸ್ತಕದ ಮಕ್ಕಾಮಕ್ಕಿ ಓದಲ್ಲ. ಇನ್ನು “ಬೈಗುಳ ಸಾಹಿತ್ಯ”ದ ಬಗ್ಗೆ ಒಂದೆರೆಡು ಮಾತು. ನಮ್ಮ ನಾಯಕರು ಆಡಿದ ಮಾತುಗಳು ಮತ್ತು ದೃಶ್ಯಾವಳಿಗಳನ್ನು ತೋರಿಸಿದರೂ ಸಹ ನಾನು ಹಾಗೆ ಹೇಳೇ ಇಲ್ಲ; ನನ್ನ ಮಾತನ್ನು ತಿರುಚಲಾಗಿದೆ ಎನ್ನುವವರಿಗೆ ಮೂಗುದಾರ ಹಾಕುವುದು ಕಷ್ಟ ಸಾಧ್ಯ. ಏಕೆಂದರೆ ನಾಳೆ ಅವರೇ ಅಧಿಕಾರಕ್ಕೆ ಬರುತ್ತಾರೆ. ತಮಗೆ ಬೇಕಾದ ಕಾನೂನು ಮಾಡಿಕೊಳ್ಳುತ್ತಾರೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಭೇದ ಭಾವ ಇಲ್ಲದೆ ಎಲ್ಲರೂ “ಧ್ವನಿ ಮತ”ದಿಂದ ಅಂತಹ ಕಾನೂನನ್ನು ಅಂಗೀಕರಿಸುತ್ತಾರೆ. –ಎಂ ಎ ಶ್ರೀರಂಗ ಬೆಂಗಳೂರು