
ಕಾಮ ಮನುಷ್ಯನ basic instinct. ಗಂಡು ಹೆಣ್ಣಿನ ಅಗತ್ಯ ಮತ್ತು ಅನಿವಾರ್ಯ. ದಾಂಪತ್ಯದ ಯಶಸ್ಸಿಗೆ, ದೈನಂದಿನ ಬದುಕಿನ ಕ್ರಿಯಾಶೀಲತೆಗೆ ಮೂಲ.
ನಮ್ಮ ಮೂಲ ಜೀವನ ಶೈಲಿಯನ್ನು ಕಳೆದುಕೊಂಡು ಅನಾಥರಾಗಿ, ಇವತ್ತಿನ ನಮ್ಮದಲ್ಲದ ಒತ್ತಡದ ಬದುಕನ್ನು ಎದುರಿಸಲು ನಮಗೆ ಬೇಕಾಗಿರುವುದು ಈ ಮನುವಾದಿಗಳ, ಬಂಡವಾಳಶಾಹಿಗಳ ‘art of living’, ಧ್ಯಾನ, ಯೋಗ, ಭಜನೆಗಳ ತರಗತಿಯ ಜ್ಞಾನವಲ್ಲ. ಕನ್ನಡ ಕವಿಗಳು ಕಟ್ಟಿಕೊಟ್ಟಿರುವ ಆರೋಗ್ಯಕರವಾದ ಪ್ರೇಮತುಂಬಿದ ಲೈಂಗಿಕತೆಯ ಪಾಠಗಳನ್ನು, ತುರ್ತಾಗಿ ಓದುವ, ಕೇಳುವ, ಕೇಳಿಸುವ, ಪ್ರಚುರ ಪಡಿಸುವ, ಬದುಕಿನ ಭಾಗವಾಗಿಸುವುದೊಂದೆ, ಇಂದಿನ ದುಬಾರಿ ಜೀವನದಲ್ಲಿ ನಮಗುಳಿದಿರುವ ಅತೀ ಅಗ್ಗದ ಮಾರ್ಗವಿದೊಂದೆ.
ಇವತ್ತಿನ ಒತ್ತಡದ, ವೇಗದ ಬದುಕಿನ ಕಾರಣದಿಂದ ಸಡಿಲವಾಗುತ್ತಿರುವ ದಂಪತಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಕನ್ನಡ ಕವಿಗಳು ಹೇಳುವ ಸುಖೀ ದಾಂಪತ್ಯದ ಈ ಸೂತ್ರಗಳು ನಮಗೆ ಕೈಮರದಂತಿದೆ.

ಗಂಡಿನ ಭೋಗಭಾಷೆಯನ್ನು ಬದಲಿಸಿ ಭೋಗಿ- ಭೋಗ್ತೃವಾಗಿಯೂ; ಭೋಗ್ತೃ- ಭೋಗಿಯಾಗಿಯೂ ತಿರುವು ಪಡೆಯಬೇಕಾಗಿದೆ.ಇದನ್ನೆ ನಮ್ಮ ವಚನಕಾರ್ತಿ ಕದಿರೆ ರೆಮ್ಮವ್ವೆ “ಎಲ್ಲರ ಗಂಡಂದಿರು ಮೇಲೆ ಎನ್ನ ಗಂಡ ಕೆಳಗೆ ನಾ ಮೇಲೆ” ಎನ್ನುತ್ತಾಳೆ. ಮತ್ತೊಬ್ಬ ವಚನಕಾರ್ತಿ ಗೊಗ್ಗವ್ವೆಯ “ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದು ಅರಿಯಬೇಕು” ಎಂಬ ಮಾತುಗಳು ಸಾಂಪ್ರದಾಯಿಕ ದಾಂಪತ್ಯದ ಭೋಗಕಲ್ಪನೆಯನ್ನು ನಿರಾಕರಿಸಿ ಈ ನೆಲಮೂಲ ಗುರುತಿಸುವ ದಾಂಪತ್ಯದ ಏಕತೆಯನ್ನು ಸಾರುತ್ತವೆ.
ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನ- ಸುಭದ್ರೆಯ ದಾಂಪತ್ಯ ಸುಖವನ್ನು ವರ್ಣಿಸುವ ಪದ್ಯವೊಂದು ಮೇಲಿನ ಮಾತುಗಳಿಗೆ ಪ್ರಮಾಣವನ್ನು ಒದಗಿಸುತ್ತವೆ.
//ತಳಿರ್ಗಳ ಪಾಸಿನೊಳ್ ಪೊರಳತಿರ್ದಳಲಂ ಕಿಡೆ ಸೋಂಕೆ ಸೋಂಕುಗಳ್
ಕಳೆದವು ಮೆಯ್ಯ ಸುಯ್ಯ ಪದವೆಂಕೆಗಳಂ ಬಿಗಿಯಪ್ಪಿದಪ್ಪುಗಳ್ ಕಳೆದವು
ನಾಣುಮಂ ಕಿರಿದು ಜಾಣುಮನಳ್ಕರಿನೀವ ಚುಂಬನಂ ಕಳೆದವು
ಗರ್ವಮಂ ಕಳೆದುವಂತವರಿರ್ವರ ಮನ್ಮಥದ್ರವಂ //ಕಾಮದೇವನುಂ ರತಿಯುಂ ವಸಿಷ್ಠ ಅರುಂಧತಿಯುಮ್ ಈಶ್ವರನುಂ, ಪಾರ್ವತಿಯೆನಿಸಿ ಸಮರೂಪ ಸಮಸತ್ವ ಸಮರತ ಸಮಾನುರಾಗ ಪಡೆಯೆ ಸುಖಮಿರ್ಪು.
(ಚಿಗುರುಗಳ ಹಾಸಿಗೆಯಲ್ಲಿ ಪರಸ್ಪರರ ಸ್ಪರ್ಶವು, ಹೊರಳುತಿದ್ದ ಸಂತಾಪವನ್ನು ಕಳೆಯಿತು. ಬಿಗಿಯಾದ ಆಲಿಂಗನವು ದೇಹದ ಉಸುರಿನ ಬೆಂಕಿಯನ್ನು ಹೋಗಲಾಡಿಸಿತು. ಪರಸ್ಪರ ಪ್ರೀತಿಯಿಂದ ಕೊಡುತ್ತಿರುವ ಮುತ್ತುಗಳು ಅವರಿಬ್ಬರಲ್ಲಿದ್ದ ನಾಚಿಕೆಯನ್ನು,ಕಿಲಾಡಿತನವನ್ನು ಕಳೆದವು. ಇನ್ನು ಅವರಿಬ್ಬರಲ್ಲಿ ಮೂಡಿದ ಕಾಮರಸವು ಇಬ್ಬರಲ್ಲಿನ ಅಹಂ (ಗರ್ವ) (ತಾನು ಹೆಣ್ಷು,ತಾನು ಗಂಡು ಎಂಬ egoವನ್ನು) ಕಳೆಯಿತು.
ಹೀಗೆ ಕಳೆದು ಮನ್ಮಥ-ರತಿ, ವಸಿಷ್ಠ-ಅರುಂಧತಿ, ಶಿವ-ಶಿವೆಯರಾಗಿ ಸಮರೂಪದ, ಸಮಶಕ್ತಿಯ, ಸಮಾನವಾದ ಸುರತಕ್ರೀಡೆ, ಸಮಾನಪ್ರೀತಿಯನ್ನು ಪಡೆದರೆ ಮಾತ್ರ ಸುಖವಾಗಿ ಇರುತ್ತಾರೆ ಎನ್ನುತ್ತಾನೆ ಪಂಪ.
ಪಂಪನ ಆದಿಪುರಾಣದಲ್ಲಿ ಮತ್ತೊಂದು ಸುಖೀದಾಂಪತ್ಯ ಜೋಡಿಯಿದೆ. ವಜ್ರಜಂಘ ಮತ್ತು ಶ್ರೀಮತಿಯರದು.
ಈ ಜೋಡಿಯ ಅನನ್ಯತೆಯನ್ನು ಪಂಪ ಹೀಗೆ ಕಟ್ಟಿಕೊಡುತ್ತಾನೆ.

ಮದನನ ಮಣಿದರ್ಪಣದಂತಿದ್ದ ಶ್ರೀಮತಿಯ ಕೈಯನ್ನು ಹೆಣ್ಣನ್ನು ವಶೀಕರಿಸಿಕೊಳ್ಳಲು ಮನ್ಮಥನು ಬಳಸುವ ಔಷದಿಯಂತಿದ್ದ ವಜ್ರಜಂಘನು ಹಿಡಿದು, ಬದುಕಿನಲ್ಲಿ ಅಖಿಲಭೋಗವನ್ನು ಭೋಗಿಸುತ್ತಾ ನಲವತ್ತೊಂಬತ್ತು ಅವಳಿ ಮಕ್ಕಳನ್ನು ಪಡೆದು, ಬದುಕಿನ ಎಲ್ಲ ಜವಾಬ್ದಾರಿಗಳನ್ನು ನೆರವೇರಿಸಿ ಒಂದು ರಾತ್ರಿ ವಜ್ರಜಂಘ ಮತ್ತು ಶ್ರೀಮತಿಯರು ಮಲಗಲು ಸಿದ್ದರಾಗುತಿದ್ದಾಗ ಪ್ರತಿರಾತ್ರಿ ಸೆಜ್ಜೆವಳನು ಕೇಶಸಂಸ್ಕಾರಕೆಂದು ಹಾಕುವ ಕಾಲಾಗರುಧೂಪವನ್ನು ಮಲಗುವ ಕೋಣೆಯಲ್ಲಿ ಇಟ್ಟು ಹೋಗಿದ್ದನು.
ಮಲಗಲು ಬಂದ ದಂಪತಿಗಳು ಚಿನ್ನದ ಮಂಚದ ಮೇಲೆ ಸಮುದ್ರದ ನೊರೆಯಂತೆ ಬೆಳ್ಳಗಿರುವ ರೇಷ್ಮೆದುಪ್ಪಟಿಗಳ ಮೇಲೆ ಎಂದಿನಂತೆ ಪರಸ್ಪರ ಅಪ್ಪಿ, ಉನ್ಮೀಲಿತನೇತ್ರರಾಗಿ ಮುಚ್ಚಿದ್ದ ಗವಾಕ್ಷಗಳ ತೆರೆಯಲು ಮರೆತು ನಿದ್ರಾವಶರಾಗುತ್ತಾರೆ. ಆಗ ಆ ಕಾಲಾಗರುಧೂಪವು ನಿಧಾನವಾಗಿ ಕೋಣೆಯನ್ನು ಬಿಡದೆ ಆವರಿಸಲು, ಅದರಿಂದ ಪರಸ್ಪರ ಅಪ್ಪಿ ಮಲಗಿದ್ದ ಆ ದಂಪತಿಗಳು ತೋಳುಗಳನ್ನು ಸಡಿಲಿಸದೆಯೇ ಜೊತೆಯಾಗಿಯೇ ಪ್ರಾಣ ನೀಗುತ್ತಾರೆ. ಹೀಗೆ ಕಾಂತನೂ ಕಾಂತೆಯೂ ಜೊತೆಯಲ್ಲಿ ಸಾಯಲು ಅದೆಷ್ಟು ಪುಣ್ಯಮಾಡಿದ್ದರೋ ಎನ್ನುತ್ತಾನೆ.
ಹದಿನಾಲ್ಕನೇ ಶತಮಾನದಲ್ಲಿದ್ದ ಕವಿ ಕಲ್ಲರಸನು ದಂಪತಿಗಳಿಗಾಗಿಯೇ ಜನವಶ್ಯವೆಂಬ ಒಂದು ಕಾಮಶಾಸ್ತ್ರ ಕೃತಿಯನ್ನೇ ಬರೆದಿದ್ದಾನೆ. ಈ ಕೃತಿಯಲ್ಲಿ-
ಗಂಡನಾದ ಮಲ್ಲಿಕಾರ್ಜನ ಅರಸನನ್ನು ಮಡದಿ “ಗುಣಸದನ ಶುಭವದನ ನನಗೆ ಕಾಮಶಾಸ್ತ್ರದ ನೆಲೆಯ” ತಿಳಿಸು ಎಂದು ಕೇಳಿದಾಗ ಆತ ಅವಳಿಗೆ ಕಾಮಶಾಸ್ತ್ರ ದ ಎಲ್ಲ ಬಗೆಗಳನ್ನು ವಿವರಿಸುತ್ತಾನೆ.
(ಭಾರತೀಯ ದಾಂಪತ್ಯದಲ್ಲಿ, ಲೈಂಗಿಕತೆಯ ವಿಚಾರದಲ್ಲಿ ಹೆಣ್ಣಿನ ಇಷ್ಟಕ್ಕೆ, ಭಾವನೆಗೆ, ಎಂದೂ ಬೆಲೆಕೊಡದ ಗಂಡು ಕಲಿಯಬೇಕಾದ ಪಾಠಗಳ ಬಗೆ ಎಂತಹದು ಎಂಬ ವಿಷಯಗಳೂ ಈ ಕೃತಿಯಲ್ಲಿವೆ.
ಕಲ್ಲರಸ ಕವಿ “ಚುಂಬನಾಧಿಕಾರ” ಎಂಬ ಭಾಗದಲ್ಲಿ ಹೇಳುವ ಚುಂಬನದಲ್ಲಿ ಹದಿನಾಲ್ಕು ಬಗೆಗಳು, ಆಲಿಂಗನದ ಹನ್ನೆರಡು ಬಗೆಗಳು, ಸುರತದ ಬಾಹ್ಯಸುರತ ಮತ್ತು ಆಭ್ಯಂತರ ಸುರತದ ಬಗೆಗಳನ್ನು ದಂಪತಿಗಳು ಅನುಸರಿಸಿದರೆ ಸುಖೀದಾಂಪತ್ಯದ ಎಂಬುದು ಅಂಗೈಮೇಲಿನ ನೆಲ್ಲಿಕಾಯಿ.
ಕಲ್ಲರಸ ಹೇಳುವ ಎಲ್ಲ ವಿಧಾನಗಳನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ ಅನಿಸುತ್ತದೆ ಏಕೆಂದರೆ
ಅವು ಏನೆಂಬುದು
ಗೊತ್ತು ನಿಮಗೆ
ಹಾಗಾಗಿ ಇನ್ನಿರುವೆ
ನಾನು ಸುಮಗೆ.






ರೇಣುಕಾರಾಧ್ಯ ಸರ್ ಅದು “Art of living” ಆಗಬೇಕು.
ಒಟ್ಟಿನಲ್ಲಿ ಲೇಖನ ಚೆನ್ನಾಗಿದೆ.
ಚೆಂದ ಉಂಟು ಮಾರಾಯ್ರೆ ಲೇಖನ
ಕಾಮಸೂತ್ರವೊಂದನ್ನು ಬಿಟ್ಟರೆ ಲೈಂಗಿಕ ವಿಷಯ ಚರ್ಚಿಸುವ ಗ್ರಂಥಗಳೇ ಇಲ್ಲವೆಂದುಕೊಂಡಿದ್ದವರಿಗೆ
ಹಳಗನ್ನಡ ಕೃತಿಗಳ ಉತ್ತಮ ಉದಾಹರಣೆ ನೀಡಿದ್ದೀರಿ ಧನ್ಯವಾದಗಳು
ಡಿ.ಎಮ್.ನದಾಫ್ ಅಫಜಲಪುರ