ಎರಡು ಮೊಗೆ ಕಾಯಿ ಕೊಟ್ಟು ತೆಗೆದುಕೊಂಡವಳು..

ನಾನು ಚಿಕ್ಕವಳಿದ್ದಾಗ ನನ್ನ ಅಜ್ಜ ಅಂದರೆ ಅಪ್ಪನ ಚಿಕ್ಕಪ್ಪ ನನ್ನನ್ನು ಪದೇ ಪದೇ “ಎರಡು ಮೊಗೆ ಕಾಯಿ ಕೊಟ್ಟು ತೆಗೆದುಕೊಂಡವಳು” ಎಂದು ರೇಗಿಸುತ್ತಿದ್ದರು.

ಅದಕ್ಕೆ ಪೂರಕವೆಂಬತ್ತೆ ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಅಪ್ಪ ಕೂಡ “ನಿಮ್ಮ ಅಮ್ಮನಿಗೆ ಡೆಲಿವರಿ ಆದಾಗ ನಿನ್ನ ಅಮ್ಮನ ಪಕ್ಕದ ಬೆಡ್ ನಲ್ಲಿ ಒಬ್ಬಳು ಹಳ್ಳೇರ ಹೆಂಗಸು ಇದ್ದಳು. ಅವಳಿಗೆ ಅದೇ ದಿನ ಮಗಳು ಹುಟ್ಟಿದ್ದಳು. ಅವಳಿಗೆ  ನಾಲ್ಕು ಹುಡುಗಿಯರೇ ಇದ್ದರಂತೆ. ಅದಕ್ಕೇ ನಮ್ಮ ಹತ್ತಿರ ತಗೋ ಅಂದಳು. ನಮಗೆ ಎರಡನೆಯದ್ದೂ ಗಂಡು ಮಗುವೇ ಆಗಿತ್ತು. ಆದರೆ ನನಗೆ ಮಗಳು ಬೇಕಿತ್ತು, ಅದಕ್ಕೇ ನಮ್ಮ ಮಗನನ್ನು ಕೊಟ್ಟು ನಿನ್ನನ್ನು ತಗೊಂಡೆವು”  ಎನ್ನುತ್ತಿದ್ದರು.

ಅಮ್ಮ  ಬೆಳ್ಳಗಿನ ಹೆಂಗಸು. ಅದಕ್ಕೆ ತಕ್ಕ ಹಾಗೆ  ಅಣ್ಣ ಕೂಡ ಅಮ್ಮನ ಹಾಗೆ ಬೆಳ್ಳಗಿದ್ದ. ಉದ್ದನೆಯ ಮೂಗು, ಚಂದದ ಮೈಕಟ್ಟು. ಆದರೆ ನಾನೋ ಕರಿ ಕಪ್ಪು. ಥೇಟ್ ಯಾರ ಬಳಿ ಕೊಂಡೆವು ಎಂದು ಹೇಳುತ್ತಿದ್ದರೋ ಅವಳ ಹಾಗಿನ ಮೊಂಡು ಮೂಗು ನನ್ನ ಅಪ್ಪನದ್ದು ನನ್ನದೇ ಬಣ್ಣವಾದರೂ ಹೆಣ್ಣು ಹುಡುಗಿಯ ಬಣ್ಣ ಮಾತ್ರ ಹಾಗಿರುವಂತಿಲ್ಲ ಎಂಬುದು ನಮ್ಮ ಸಮಾಜದ ಅಲಿಖಿತ ನಿಯಮವಲ್ಲವೇ?  ಹೀಗಾಗಿ ಕಪ್ಪು ಹುಡುಗಿ ಅಂದರೆ. ಮನೆಯ ಎಲ್ಲರ ಕಣ್ಣಲ್ಲೂ ತಮಾಷೆ.

ಬೆಳ್ಳಗೆ, ತೆಳ್ಳಗೆ ಅಷ್ಟು ವಯಸ್ಸಾದರೂ ಚಂದ ಚಂದವಿದ್ದ ನನ್ನ ಅಜ್ಜನಿಗೆ ನಾನು ಮುದ್ದಿನ ಮೊಮ್ಮಗಳು. ಆದರೂ ನನ್ನ ಬಣ್ಣಕ್ಕೆ  ಹಾಸ್ಯವಂತೂ ಇದ್ದೇ ಇರುತ್ತಿತ್ತು.

“ನನ್ನ ಟವೆಲ್ ತಗೊಂಡು ಒರೆಸಿಕೋ ಬೇಡ….ಅದಕ್ಕೆ ಕಪ್ಪು ಬಣ್ಣ ತಾಗುತ್ತೆ..” ಅಜ್ಜ ರೇಗಿಸುತ್ತಿದ್ದರೆ ನಾನು ಕೆಟ್ಟ ಕೋಪದಲ್ಲಿ ಅವರೇ ಕುಳಿತು ಮಲ್ಲಿಗೆಯಂತೆ ಬಿಳುಪಾಗಿಸುತ್ತಿದ್ದ ಅವರ ಟವೆಲ್ ಗೇ ಮುಖ ಒರೆಸುತ್ತಿದ್ದೆ. ಕೆಲವು ದಿನ, ಕೋಪ ಮತ್ತೂ ಹೆಚ್ಚಾಗಿದ್ದರೆ ಅವರು ಉಟ್ಟುಕೊಳ್ಳುತ್ತಿದ್ದ   ಬಿಳಿಯ ದೋತರಕ್ಕೇ ಮುಖ ಒರೆಸಿ ಏನೂ ಆಗದಂತೆ ಹೊರಟು ಬಿಡುತ್ತಿದ್ದರೂ ಕೊನೆಗೆ ನಾನು ಮುಖ ಒರೆಸಿದ್ದರಿಂದ ಅವರ ಬಿಳಿಯ ದೋತರವೇನಾದರೂ ಕಪ್ಪಾಗಿ ಬಿಟ್ಟರೆ ಎಂಬ ಭಯ ಕಾಡಿ, ಗುಟ್ಟಾಗಿ ದೋತರವನ್ನೆಲ್ಲ ಬಿಚ್ಚಿ ಪರೀಕ್ಷಿಸಿ ಅದು ಕಪ್ಪಾಗಿಲ್ಲ ಎಂದು ಖಾತರಿ ಪಡಿಸಿಕೊಳ್ಳುತ್ತಿದ್ದೆ.

ಆದರೆ ಈ ಕಪ್ಪು ಬಣ್ಣ ನನಗೇ ಏಕಿದೆ ಎಂದರೆ ಮತ್ತದೇ ಮೊಗೆ ಕಾಯಿ ಕೊಟ್ಟು ನನ್ನನ್ನು ಖರೀದಿಸಿದ ಕಥೆ ಹೇಳುತ್ತಿದ್ದರು. ಅವರೂ ಅಪ್ಪ ಹೇಳಿದ ಅದೇ ನಮ್ಮೂರಿನ ಹಳ್ಳೇರ ಹೆಂಗಸೊಬ್ಬಳ ಹೆಸರನ್ನು ಹೇಳುತ್ತಿದ್ದರು. ಹೀಗಾಗಿ  ತೀರಾ ಹಿಂದುಳಿದ ದಲಿತ ಸಮುದಾಯಕ್ಕೆ ಸೇರಿದ ಆ ಹೆಂಗಸರು ಯಾರಾದರೂ ತೋಟದ ಕೆಲಸಕ್ಕೆ ಬಂದರೆ ನಾನು ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ನಾನು ಬಂದಾಗಲೇ ಅವರನ್ನು ಕೆಲಸಕ್ಕೆ ಕರೆಸೋದು ಯಾಕೆ ಎಂದು ಚಿಕ್ಕಪ್ಪನಲ್ಲಿ ಜಗಳ ಕೂಡ ಮಾಡುತ್ತಿದ್ದೆ.  

“ನಾನೂ ಶಾಲೆಗೆ ಹೋಗಬೇಕಲ್ಲ? ಮಧ್ಯ ಯಾವಾಗ ಕರೆಯಿಸೋದು? ರಜೆ ಇದ್ದಾಗ ಮಾತ್ರ ನಾವೆ ನಿಂತು ಕೆಲಸ ಮಾಡಿಸ ಬಹುದು. ಇಲ್ಲಾ ಅಂದ್ರೆ ಯಾವ ಕೆಲಸವನ್ನೂ ಸರಿಯಾಗಿ ಮಾಡೋದಿಲ್ಲ..” ಹಿರೇಗುತ್ತಿಯಲ್ಲಿಯೇ ಹೈಸ್ಕೂಲು ಹೆಡ್ ಮಾಸ್ಟರ್ ಆಗಿದ್ದ ಚಿಕ್ಕಪ್ಪ ನನ್ನ ಒದ್ದಾಟ, ಸಿಟ್ಟು ಎಲ್ಲವನ್ನು ಗಮನಿಸಿದರೂ ಗಮನಿಸದಂತೆ ನಸು ನಗುತ್ತಲೇ ಹೇಳುತ್ತಿದ್ದರು.

ನನ್ನ ಅಜ್ಜಿ ಸತ್ತು ಕೇವಲ ಐದೇ ದಿನಕ್ಕೆ ನಾನು ಹುಟ್ಟಿದ್ದರಿಂದ  ಅಮ್ಮನಿಗೆ ನಾನು ಹುಟ್ಟಿದ ಸಂದರ್ಭದಲ್ಲಿ ಅವರ ತಾಯಿ ಮನೆಗೆ ಹೋಗಲಾಗಿರಲಿಲ್ಲ. ಹೀಗಾಗಿ ದಲಿತ ಕೇರಿಯ ಸಮೀಪವಿದ್ದ ಆ ಚಿಕ್ಕ ಆಸ್ಪತ್ರೆಯಲ್ಲಿಯೇ ನಾನು ಹುಟ್ಟಿದ್ದೆ. ಅದಕ್ಕೆಂದೇ ಆ ಸಂದರ್ಭದಲ್ಲಿ ಅಲ್ಲಿ ಬೇರೆಯವರ ಹೆರಿಗೆ ಆಗಿದ್ದಿರಬಹುದು ಮತ್ತು ನನ್ನನ್ನು ಬದಲಾಯಿಸಿದ್ದಿರಬಹುದು ಎಂದೇ ಸುಮಾರು ವರ್ಷಗಳ ಕಾಲ ನಂಬಿ ಬಿಟ್ಟಿದ್ದೆ.

ಅಜ್ಜ ಹೇಳಿದ ಕಥೆಗೂ, ಅಪ್ಪ ಹೇಳಿದ ಕಥೆಗೂ ಒಂದಿಷ್ಟು ವ್ಯತ್ಯಾಸ ಕಾಣಿಸಿದಾಗ “ಮೊಗೆ ಕಾಯಿ ಕೊಟ್ಟಿದ್ದು ಯಾರಿಗೆ? ಸುಳ್ಳೇ ಸುಳ್ಳೇ ಹೇಳ್ತೀರಿ ..” ಎಂದು ಪ್ರಶ್ನಿಸಲು ತೊಡಗಿದಾಗಿಯೂ ಅಜ್ಜ ಮಾತ್ರ ನಿನ್ನನ್ನು ಬದಲಾಯಿಸಿಕೊಳ್ಳಲು ಅವಳಿಗೆ ಎರಡು ಮೊಗೆ ಕಾಯಿ ಕೊಟ್ಟಿದ್ದೆ. ಅದು ನಿಮ್ಮ ಅಪ್ಪನಿಗೆ ಗೊತ್ತಿರಲಿಲ್ಲ ಎಂದು  ಅಲ್ಲಿಯೇ ಸಾರಿಸಿ ಸಮ ಮಾಡಿ ಬಿಟ್ಟಿದ್ದರು.

ಹೀಗಾಗಿ ಚಿಕ್ಕವಳಿರುವಾಗಿನಿಂದಲೂ ನನಗೆ ಮೊಗೆಕಾಯಿ ಎಂದರೆ ವೈರಿಯನ್ನು ಕಂಡಂತಾಗುತ್ತಿತ್ತು. ಅಮ್ಮ ಏನಾದರೂ ಮೊಗೆ ಕಾಯಿ ದೋಸೆ ಮಾಡಿದರೆ, ಮೊಗೆಕಾಯಿ ಹುಳಿ  ಮಾಡಿದರೆ ಅಥವಾ ಮೊಗೆಕಾಯಿ ಕಡಬು ಮಾಡಿದರೆ ನನಗೆ ಆ ದಿನ ಎಲ್ಲಿಲ್ಲದ ಕೋಪ.

“ನನಗೆ ಸೇರೋದಿಲ್ಲ ಎಂದು ಗೊತ್ತಿದ್ದೂ ಯಾಕೆ ಮಾಡ್ತಿ? ನಾನು ಊಟಾನೇ ಮಾಡೋದಿಲ್ಲ. ಎಲ್ಲಾ ಮೊಗೆಕಾಯಿ ನೀನೆ ತಿಂದ್ಕೊ…” ಎಂದು ಮುಖ ಉಬ್ಬಿಸಿ ಹೇಳುತ್ತಿದ್ದರೆ ಅಣ್ಣ ಮುಸಿ ಮುಸಿ ನಗುತ್ತಿದ್ದ.

“ಮುಖ ಯಾಕೆ ಹಾಗೆ ಮೊಗೆಕಾಯಿ ಉಬ್ಬಿದಂತೆ ಉಬ್ಬಿಸ್ತಿ…? ಎಂದು ಕಿಚಾಯಿಸಿ ನಾನು ಮತ್ತಿಷ್ಟು ಸಿಟ್ಟಿಗೇಳುವಂತೆ ಮಾಡುತ್ತಿದ್ದ. ಮುದ್ದಿನ ಮಗಳು, ಅದೂ ಅಲ್ಲದೇ ಇಡೀ ದಿನ ಆಟ ಆಡ್ತಾಳೆ, ತಿಂದಿದ್ದು ಹತ್ತೇ ನಿಮಿಷದಲ್ಲಿ ಕರಗಿ ಹೋಗುತ್ತದೆ ಎಂದು ಅಮ್ಮ ಒಂದಿಷ್ಟು ಹೆಚ್ಚಿಗೆ ತಿನ್ನಿಸಿ ನಾನು ಮೊಗೆಕಾಯಂತೆ ಗುಂಡಗೆ ಕಾಣಲು ಕಾರಣಳಾಗಿದ್ದರಿಂದ ಏಳನೇ ತರಗತಿಗೆ ಬರುವಷ್ಟರಲ್ಲಿ ನಾನು ವೀಕ್ ಆಗ್ತೀನಿ ಎಂದು ಹಠ ಹಿಡಿದು ಊಟ ಬಿಡಲು ಪ್ರಾರಂಭಿಸಿ ಬಿಟ್ಟಿದ್ದೆ. ಅಂತೂ ಮೊಗೆಕಾಯಿ ನನ್ನನ್ನು ಆವರಿಸಿಕೊಂಡು ನನ್ನ ಮೇಲೆ ನಾನು ಕೋಪ ಗೊಳ್ಳುವಂತೆ ಮಾಡಿಬಿಟ್ಟಿತ್ತಲ್ಲದೇ  ಊರಲ್ಲಿ ಆ ದಲಿತ ಹೆಂಗಸರನ್ನು ಕಂಡರೆ ಒಳಗೋಡಿ ಬಂದು ಬಚ್ಚಿಟ್ಟುಕೊಳ್ಳುವಂತಾಗುತ್ತಿತ್ತು.

ಇಷ್ಟೂ ಸಾಲದು ಎಂಬಂತೆ ನನ್ನನ್ನು ಯಾರಿಂದ ಮೊಗೆ ಕಾಯಿ ಕೊಟ್ಟು ಕೊಂಡು ಕೊಂಡೆವು ಅನ್ನುತ್ತಿದ್ದರೋ ಅವಳು ಅಲ್ಲೆಲ್ಲಾದರೂ ನಮ್ಮ ಮನೆಯೆದುರು ಇರುವ ರಸ್ತೆಯಲ್ಲಿ ಓಡಾಡಿದರೂ ಸಾಕು “ಮಗಾ…. ಎಲ್ಲಿಂವೆ…?” ಎಂದು ಒಳಗಿದ್ದವಳನ್ನು ಕರೆ ಕರೆದು ಮಾತನಾಡಿಸಿಯೇ ಮುಂದೆ ಹೋಗುತ್ತಿದ್ದಳು. ಅವಳು “ಮಗಾ……” ಎಂದರೆ ಸಾಕು, ನಿನ್ನಮ್ಮ ಬಂದಳು ಎಂದು ಮನೆ ಮಂದಿಯೆಲ್ಲ ಗೊಳ್ಳನೆ ನಗಲಾರಂಭಿಸುತ್ತಿದ್ದರು. ಅದೂ ಸಾಕಾಗದು ಎಂಬಂತೆ ಆ ಹೆಂಗಸಿನ ಹೆಸರು ಏನಿತ್ತೋ ಗೊತ್ತಿಲ್ಲ, ಆದರೆ ಎಲ್ಲರೂ ಆಕೆಯನ್ನು ಅಮ್ಮಾ ಅಂತಲೇ ಕರೆಯುತ್ತಿದ್ದರು. ಆದರೆ ನಾನೇನಾದೂ ಅವಳನ್ನು “ಅಮ್ಮಾ…” ಎಂದು ಕರೆದು ಬಿಟ್ಟರೆ  ಅದೇ ಮತ್ತೊಂದು ಪ್ರಹಸನಕ್ಕೆ ಕಾರಣವಾಗುತ್ತಿದ್ದುದರಿಂದ

ಆ ಹೆಂಗಸಿಗೆ ನೀರು ಬೇಕಂತೆ

ನಾಗಪ್ಪನ ಹೆಂಡತಿ ಕರಿತಿದ್ದಾಳೆ

ಅವಳು ಯಾವ ಗದ್ದೆಗೆ ಹೋಗಬೇಕು ಅಂತಾ ಕೇಳ್ತಿದ್ದಾಳೆ

ಎನ್ನುತ್ತ ಅವಳನ್ನು ಆದಷ್ಟು ಅಮ್ಮ  ಎಂದು ಕರೆಯದಂತೆ ತಪ್ಪಿಸಿಕೊಳ್ಳುತ್ತಿದ್ದೆ.

ಆಗಲೇ  ತೀರಾ ಮುದುಕಿಯಾಗಿದ್ದ ನನ್ನ ಅಜ್ಜಿಯ ವಯಸ್ಸಿನವಳಾದ ಅವಳಿಗೆ  ನಾನು ಹುಟ್ಟುವ ಸಮಯಕ್ಕೆ ಮಕ್ಕಳು ಹುಟ್ಟುವಂತಿರಲಿಲ್ಲ ಎಂಬ ಸಾಮಾನ್ಯ ಯೋಚನೆಯನ್ನೂ ನಾನು ಮಾಡಿರಲಿಲ್ಲ.  ಅಜ್ಜಿ ಸತ್ತು ಐದನೇ ದಿನಕ್ಕೆ ಹುಟ್ಟಿದ ನಾನು ತಮ್ಮ ಅವ್ವನ ಪ್ರತಿರೂಪ ಎಂದು ಮುದ್ದಿಸುತ್ತಿದ್ದ ಅಪ್ಪ ಚಿಕ್ಕಪ್ಪಂದಿರ ಮಾತನ್ನು  ಒರೆಗೆ ಹಚ್ಚಿ ನೋಡುವ ವ್ಯವಧಾನವೂ ಆ ಸಂದರ್ಭದಲ್ಲಿ ನನಗಿರಲಿಲ್ಲ.

ಒಟ್ಟಿನಲ್ಲಿ  ಅಮ್ಮ ಎಂದು ಕರೆಯಿಸಿ ಕೊಳ್ಳುತ್ತಿದ್ದ ಅವಳನ್ನು ಬಿಡಿ, ಇಡೀ ನಮ್ಮ ದಲಿತ ಕೇರಿಯ ಹೆಂಗಸರೇ ಮನೆಯ ಕಡೆ ಬರಬಾರದು ಎಂಬಂತೆ ವರ್ತಿಸುತ್ತಿದ್ದ ನನ್ನ ವರ್ತನೆಯನ್ನು ನೆನಪಿಸಿಕೊಳ್ಳುತ್ತ, ನಾಚಿ ನೀರಾಗುತ್ತ ನಾನು  ಡಾ. ಶಿವರುದ್ರ ಕೆ ಕಲ್ಲೋಳಿಕರ್ ರವರು ಬರೆದ ಹೊಲಗೇರಿಯ ರಾಜ ಕುಮಾರ ಕಾದಂಬರಿಯನ್ನು ಒಂದುವರೆ ತಾಸಿನಲ್ಲಿ ಓದಿ ಮುಗಿಸಿದಾಗ ಸಮಯ ರಾತ್ರಿ ಒಂದು ಗಂಟೆ.

ಹೀಗಾಗಿಯೇ   ಆ ದಿನದ ರಾತ್ರಿಯಿಡೀ ನನ್ನ ನಿದ್ದೆಯನ್ನು ಕಸಿದು ತಲ್ಲಣಿಸುವಂತೆ ಮಾಡಿದ ಹೊಲಗೇರಿಯ ರಾಜಕುಮಾರ ಕಾದಂಬರಿಯನ್ನು ಈ ವಾರದ ನಿಮ್ಮ ಓದಿಗೆ ರೆಕಮಂಡ್ ಮಾಡುತ್ತಿದ್ದೇನೆ.

ಮುನ್ನುಡಿಯನ್ನು ಬರೆದ ಹಿರಿಯ ಕವಿ, ಕಥೆಗಾರ, ಕಾದಂಬರಿಕಾರರಾಗಿರುವ ಸರಜೂ ಕಾಟ್ಕರ್ ರವರು ಇದೊಂದು ಸತ್ಯ ಘಟನೆಯನ್ನು ಆಧರಿಸಿ ಅದಕ್ಕೆ ಒಂದಿಷ್ಟು ಕಲ್ಪನೆಯನ್ನು ಬೆರೆಸಿ ಬರೆದ ರಸವತ್ತಾದ ಕಾದಂಬರಿ ಎಂದು ಮೊದಲಲ್ಲಿಯೇ ಹೇಳಿ ಬಿಡುವುದರಿಂದ ಇಡೀ ಕಾದಂಬರಿಯ ಓದಿಗೊಂದು ಸರಾಗತೆಯನ್ನು ಆ ಮಾತುಗಳೇ ತಂದುಕೊಟ್ಟು ಬಿಡುತ್ತವೆ, ಸತ್ಯ ಘಟನೆಯನ್ನು ಆಧರಿಸಿದ್ದು ಎಂಬ ಒಂದು ಸಾಲು ಇಡೀ ಕಾದಂಬರಿಯನ್ನು ಎಲ್ಲಿಯೂ ಹಿಡಿತ ತಪ್ಪಿಸಿಕೊಳ್ಳಲು ಬಿಡದೇ ತನ್ನಲ್ಲಿಯೇ ಮುಳುಗುವಂತೆ ಮಾಡುತ್ತದಲ್ಲದೇ ಮುಂದೇನಾಯಿತು ಎಂಬ ತೀವ್ರ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗುತ್ತದೆ.

ನಾನು ಓದಿದ ಈ ಹೊಲಗೇರಿಯ ರಾಜಕುಮಾರ ನಾಲ್ಕನೇ ಆವೃತ್ತಿಯಲ್ಲಿ ಪ್ರಕಟಗೊಂಡಿದ್ದು. ಯಾವುದೋ ಸಂದರ್ಭದಲ್ಲಿ ಪುಸ್ತಕ ಕಳಿಸುತ್ತೇನೆಂದು ಹೇಳಿದ ಮಾತಿಗೆ ಬದ್ಧರಾಗಿ ಲಡಾಯಿಯ ಬಸೂ  ಮೇ ರಜೆಯಲ್ಲಿ ನಾನು ಅನಾರೋಗ್ಯದಿಂದ ಎದ್ದೇಳಲೂ ಆಗದ ಸ್ಥಿತಿಯಲ್ಲಿದ್ದಾಗ ಕಳುಹಿಸಿ ಕೊಟ್ಟಿದ್ದರು. ಬಂದ ಪುಸ್ತಕವನ್ನು ಆಗಿಂದಾಗ್ಗೆ ಓದಿ ಮುಗಿಸದಿದ್ದರೆ ಅದು ಪುಸ್ತಕಗಳ ರಾಶಿಯಲ್ಲಿ ಎಲ್ಲೋ ಹುದುಗಿ ಮಾಯವಾಗಿ ಬಿಡುವ ಅಪಾಯಕ್ಕೆ ಸಿಲುಕಿ ಬಿಡುತ್ತದೆಯಲ್ಲದೇ, ಮತ್ತೊಮ್ಮೆ ನಾನೇ ಪ್ರಜ್ಞಾಪೂರ್ವಕವಾಗಿ ಅಥವಾ ಕಳುಹಿಸಿದವರು ಆ ಪುಸ್ತಕದ ಬಗ್ಗೆ ನೆನಪಿಸ ಬೇಕಾದ ಮುಜುಗರದ ಸಂದರ್ಭ ಸೃಷ್ಟಿಯಾಗಿ ಬಿಡುತ್ತದೆ.

ಆದರೆ ಈ ಪುಸ್ತಕ ನನ್ನ ಕೈ ಸೇರಿದಾಗ ಒಂದೇ ಒಂದು ಅಕ್ಷರವನ್ನೂ ಓದಲಾಗದ ಸನ್ನಿವೇಶದಲ್ಲಿದ್ದೆ. ರಜೆ ಮುಗಿಸಿ ನನ್ನ ಕಾರ್ಯಸ್ಥಳಕ್ಕೆ ಹಿಂದಿರುಗಿದ ನಂತರ ಪುಸ್ತಕಗಳನ್ನು ಜೋಡಿಸುವಾಗ ಮತ್ತೆ ಈ ಪುಸ್ತಕ ಕಣ್ಣಿಗೆ ಬಿತ್ತು. ಐವತ್ತಕ್ಕೂ ಹೆಚ್ಚು ರಂಗ ಪ್ರಯೋಗಗಳನ್ನು ಕಂಡ, ಮೂರು ವಿಶ್ವ ವಿದ್ಯಾಲಯಗಳಿಗೆ ಪಠ್ಯವಾಗಿದ್ದ ಕಾದಂಬರಿ ಎನ್ನುವುದು ಈ ಪುಸ್ತಕವನ್ನು ಓದಲೇ ಬೇಕು ಎಂದು ನಾನು  ಎತ್ತಿಟ್ಟುಕೊಳ್ಳಲು ಇರುವ ಮುಖ್ಯ ಕಾರಣ.

ಕಲ್ಪನೆಯ ಪಾತ್ರವೊಂದು ತನ್ನಂತೆ ಇದ್ದರೆ ಮಾನನಷ್ಟ ಮೊಕದ್ದಮೆ ಹೂಡುವ ಈ ಕಾಲದಲ್ಲಿ ಇಂತಹ ಕಾದಂಬರಿಯನ್ನು ಬರೆಯಲಾಗುತ್ತಿತ್ತೇ ಎಂಬುದನ್ನೂ ನಾವು ಯೋಚಿಸಬೇಕು. ಯಾಕೆಂದರೆ ಗೆಳೆಯ ಚಿಮನಳ್ಳಿ ರಮೇಶಬಾಬುರವರು ಸಿಕ್ಕಾಗಲೆಲ್ಲ ಅವರ ಹದ ಕಾದಂಬರಿಯ ನಾಯಕನ ಬಗ್ಗೆ ನಾವೆಲ್ಲ ತಮಾಷೆ ಮಾಡುತ್ತ ಆ ನಾಯಕನನ್ನು ಹೋಲುವ ವ್ಯಕ್ತಿಯ ಬಗ್ಗೆ ಮಾತನಾಡುತ್ತ “ಕೇಸ್ ಹಾಕ್ತಾನೆ ಇರಿ…” ಎಂದು ರೇಗಿಸುತ್ತಿರುತ್ತೇವೆ. ಆದರೆ ಇಲ್ಲಿ ಕಲ್ಲಪ್ಪ ಕೋಲ್ಕಾರ ಕಾದಂಬರಿಯನ್ನು ಓದಿ ಕಾದಂಬರಿಕಾರರನ್ನು ಮುಖತಃ ಭೇಟಿಯಾಗಲು ತೀರಾ ಉತ್ಸುಕರಾಗಿದ್ದ ವಿಷಯವನ್ನು ಮತ್ತು ಕೊನೆಗೂ ಭೇಟಿ ಮಾಡಲಾಗದ ವಿಷಾದವನ್ನು  ಕಾದಂಬರಿಕಾರರು ತಮ್ಮ ಮಾತಿನಲ್ಲಿ ತೋಡಿಕೊಂಡಿದ್ದಾರೆ.

ತಮ್ಮ ಮೇಲೆ ಬರೆದ ಕಥೆ, ಕಾದಂಬರಿಯನ್ನು ಒಪ್ಪಿಕೊಳ್ಳುವುದಕ್ಕೂ ಎಂಟೆದೆ ಬೇಕು. ಅಂತಹ ಧೈರ್ಯ ಕಲ್ಲಪ್ಪ ಕೋಲ್ಕರ್ ರವರಿಗೆ ಇತ್ತು ಎಂಬುದನ್ನು ನಾವು ಗಮನಿಸಬೇಕು. ತಾನು ಕುರಂದವಾಡದ ರಾಜಕುಮಾರ ಎಂಬುದಕ್ಕೆ ಸಾಕ್ಷಿ ಸಂಗ್ರಹಿಸಲೇ ಆ ಕಾಲಕ್ಕೆ ನಾಲ್ಕೈದು ಲಕ್ಷ ಖರ್ಚು ಮಾಡಿದ್ದ ಕಲ್ಲಪ್ಪ ಚಂದ್ರಪ್ಪ ಕೋಲ್ಕರ್ ರವರ ಪರವಾಗಿ ಎಲ್ಲಾ ಸಾಕ್ಷ್ಯಗಳಿದ್ದರೂ ಅದನ್ನು ಮಾನ್ಯ ಮಾಡಿಸಲಾಗದ ನೋವಿನಲ್ಲಿದ್ದರೂ ಒಂದಲ್ಲ ಒಂದು ದಿನ ತಾನು ಕುರಂದವಾಡದ ರಾಜಕುಮಾರ ಎಂಬುದನ್ನು ಸಾಧಿಸಿಯೇ ಸಿದ್ಧ ಎಂಬಂತೆ ಸಿಕ್ಕಾಗಲೆಲ್ಲ ಬತ್ತದ ಉತ್ಸಾಹ ತೋರುತ್ತಿದ್ದುದನ್ನು ಸರಜೂ ಕಾಟ್ಕರ್ ನೆನಪಿಸಿಕೊಳ್ಳುತ್ತಾರೆ

ಅದಕ್ಕಿಂತ ಮುಖ್ಯ ಕಾರಣ ಇದು ಕಲ್ಲಪ್ಪ ಚಂದ್ರಪ್ಪ ಕೋಲ್ಕಾರ್ ಎಂಬ ವ್ಯಕ್ತಿಯ ಜೀವನ ಚರಿತ್ರೆಯನ್ನು ಆಧರಿಸಿದ್ದು ಎಂಬುದು. ಒಬ್ಬ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಆ ವ್ಯಕ್ತಿ ಜೀವಂತ ಇರುವಾಗಲೇ ಅವನನ್ನು  ಕಾದಂಬರಿಯ ಪಾತ್ರವನ್ನಾಗಿಸುವುದು ಸುಲಭದ ಮಾತಲ್ಲ. ಸುಮಾರು ಇಪ್ಪತ್ಮೂರು ವರ್ಷಗಳ ನಂತರ ನಾಲ್ಕನೇ ಮುದ್ರಣ ಕಾಣುತ್ತಿರುವುದಾಗಿ ಕಾದಂಬರಿಕಾರರು ಹೇಳುತ್ತಿರುವುದನ್ನು ಗಮನಿಸಿದರೆ ಈ ಘಟನೆಗಳೆಲ್ಲ ನಡೆದು ಸಮೀಪ ಅರ್ಧ ಶತಮಾನವಾಗಿದ್ದಿರಬಹುದು. ಆ ಕಾಲವಾದ್ದರಿಂದ ಆ ವ್ಯಕ್ತಿಯ ಬಗ್ಗೆ ಬರೆಯಲು ಸಾಧ್ಯವಾಯಿತೇ ಎಂದು ನಾನು ಯೋಚಿಸುತ್ತೇನೆ.  

ಮೂಲತಃ ಕುರಂದವಾಡದ ರಾಜಕುಮಾರನಾಗಿದ್ದವನು ರಾಜಕೀಯದ ಚದುರಂಗದಾಟಕ್ಕೆ ಸಿಲುಕಿ, ಕ್ಷಿಪ್ರ ಕ್ರಾಂತಿಯೊಂದರಲ್ಲಿ ತನ್ನ ಅಜ್ಜ, ತಂದೆ- ತಾಯಿಯರನ್ನು ಕಳೆದುಕೊಂಡು, ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದವನೊಬ್ಬನ ಆಸರೆಯಿಂದ ಆ ಕ್ರಾಂತಿಯಲ್ಲಿ ಸಾಯದೇ  ಬದುಕುಳಿದು, ನಂತರ ಹೊಲಗೇರಿಯಲ್ಲಿ ಬೆಳೆದ ಕಥೆ ಇರುವ ಈ ಕಾದಂಬರಿಯು ಒಂದು ಅತ್ಯುತ್ತಮ ಮನೋವಿಶ್ಲೇಷಕ ಕೃತಿಯಾಗಿಯೂ ನನಗೆ ಭಾಸವಾಗುತ್ತದೆ.

ಇಲ್ಲಿ ಹೊಲಗೇರಿಯಲ್ಲಿ ಬೆಳೆಯುವ ಮಾದೇವ ತಾನು ಮಾಧವರಾವ್ ಗಾಯಕವಾಡ್ ಎಂದು ಕರೆಯಿಸಿಕೊಳ್ಳುವ ಬಯಕೆ ವ್ಯಕ್ತಪಡಿಸುವ ರೀತಿ ಮತ್ತು ತಾನು ದಲಿತ ಜಾತಿಗೆ ಸೇರಿದವನಲ್ಲ ಎಂದು ಅರಿವಾದ ಕೂಡಲೇ ತನ್ನ ಹೆಂಡತಿಯನ್ನು “ಆ ಹೊಲ್ಯಾರಂಗ ಮಾಡಬ್ಯಾಡ” ಎಂದು ಮಾತು ಮಾತಿಗೆ ವ್ಯಂಗ್ಯವಾಡುವುದು,  ತಾನು ದೇವರಿಗಿಂತ ಹೆಚ್ಚು ಎಂದುಕೊಂಡ ಅಂಬೇಡ್ಕರ್ ಫೋಟೋವನ್ನು ಎಸೆದು ಒಡೆದು ಹಾಕುವುದು, ತನ್ನನ್ನು ಹೆತ್ತ ಮಗನಿಗಿಂತಲೂ ಹೆಚ್ಚು ಮುದ್ದಾಗಿ ಸಾಕಿದ್ದ ಜಾನೋಬಾ ಮತ್ತು ಹೀರಾಬಾಯಿ ತನ್ನನ್ನು ಜಾತಿಭೃಷ್ಟನನ್ನಾಗಿ ಮಾಡಿದರು ಎಂದು ಕೊರಗುವುದು, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹೆಂಡತಿ ಸುಮತಿಯಂತಹ ಹೊಲತಿಯನ್ನು ಮದುವೆಯಾಗಿ ತನ್ನ ಶ್ರೇಷ್ಟ ರಕ್ತ ಕಲುಷಿತವಾಯಿತೆಂದು ಹೇಸಿಕೊಳ್ಳುವುದು, ಜೀವಕ್ಕೆ ಜೀವವಾಗಿದ್ದ ಮಕ್ಕಳು ಅತ್ತು ಅತ್ತು ಸೊರಗಿದರೂ ನಿರ್ಲಕ್ಷಿಸುವುದು, ತನ್ನ ಹೊಲಗೇರಿಯನ್ನು ಅಕ್ರಮ ಚಟುವಟಿಕೆಗಳ ತಾಣವನ್ನಾಗಿ ಮಾಡಿದ್ದ ತುಳಸಿ ಮತ್ತು ವಿಮಲಿಯರಿಂದಷ್ಟೇ ತನಗೆ ವಿಷಯ ತಿಳಿದದ್ದು. ಹೀಗಾಗಿ ಅವರನ್ನು ರಾಜ ನರ್ತಕಿಯನ್ನಾಗಿಸಬೇಕು ಎನ್ನುವ ಮನಸ್ಥಿತಿ.. ಹೀಗೆ ಎಲ್ಲವನ್ನೂ ಓದುತ್ತಿದ್ದರೆ ಒಂದು ಮನಸ್ಸು ಈ ಜಾತಿ ಪದ್ದತಿಯ ಅಡಿಯಲ್ಲಿ ಹೇಗೆ ಯೋಚಿಸುತ್ತದೆ ಎಂಬುದಕ್ಕೆ  ತಾಜಾ ತಾಜಾ ನಿದರ್ಶನವಾಗಿ ಕಣ್ಣೆದುರಿಗೆ ನಿಲ್ಲುತ್ತದೆ.

ತಾನು ರಾಜನಾಗಿ ಅಧಿಕಾರ ಸ್ವೀಕರಿಸಿದಂತೆ, ಅಕ್ಕಪಕ್ಕದ ಶತ್ರು ರಾಜರೊಂದಿಗೆ, ಜಾತಿಯ ಹೆಸರು ಹೇಳಿ ನಿಂದಿಸುತ್ತ, ಹೊಲೆಯ ರಾಜನೊಬ್ಬನಿಗೆ ಕರ ಕೊಡಲು ನಿರಾಕರಿಸಿದ ಸಾಮಂತ ರಾಜರೊಂದಿಗೆ ಯುದ್ಧ ಮಾಡುತ್ತಿರುವ ಕನಸಿನೊಂದಿಗೆ ಪ್ರಾರಂಭವಾಗುವ ಕಾದಂಬರಿಯು ಒಬ್ಬನ ಹುಟ್ಟು ಮತ್ತು ಆತ ಬೆಳೆದ ಪರಿಸರ ಹೇಗೆ ನಮ್ಮ ಜೀವನದಲ್ಲಿ ಅಚ್ಚಳಿಯದ ಪ್ರಭಾವ ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೊದಲ ನೋಟದಲ್ಲಿಯೇ ವಿಷದವಾಗಿ ತಿಳಿಸುತ್ತದೆ. ತನ್ನನ್ನು ಹೊಲೆಯ ಎಂದ ಸಾಮಂತನನ್ನು ಬಗ್ಗು ಬಡಿಯಲು ಹೋದ ಮಾದೇವ ಪಕ್ಕದಲ್ಲಿ ಮಲಗಿದ ಹೆಂಡತಿಯನ್ನು ಒದ್ದು ಖಡ್ಗದಿಂದ ಇರಿದಂತೆ ದೂರ ತಳ್ಳುವ ಕನಸು ಇಡೀ ಕಾದಂಬರಿಯ ಉದ್ದಕ್ಕೂ ತನ್ನ ಪ್ರಭಾವವನ್ನು ತೋರಿಸಿದೆ.

ಕಾದಂಬರಿಯ ಬಹು ಭಾಗ ಕನಸುಗಳಿಂದಲೇ ತುಂಬಿದ್ದರೂ  ಅದು ಕಥೆಯ ಓಘಕ್ಕೆ ಎಲ್ಲಿಯೂ ತಡೆಯೊಡ್ಡದೆ ಅದನ್ನು ಸರಾಗವಾಗಿಸುವ ಕೆಲಸ ಮಾಡುತ್ತದೆ. ಕೆಲವು ಕಡೆಗಳಲ್ಲಂತೂ ಕನಸುಗಳಿಲ್ಲದಿದ್ದರೆ ಹೇಳಬೇಕಾದ ವಿಷಯಗಳನ್ನು ಹೇಳಲು ಆಗುತ್ತಲೇ ಇರಲಿಲ್ಲ ಎಂಬುದನ್ನೂ ಗಮನಿಸಬೇಕು. ಅದರಲ್ಲೂ ಮಾದೇವನ ತಲೆಗೇರಿದ ಜಾತಿಯ ಶ್ರೇಷ್ಟತೆಯ ವ್ಯಸನವನ್ನು ಇಳಿಸಲು ಇಂತಹ ಕನಸುಗಳು ಮತ್ತು ಆತ ಒಬ್ಬನೇ ಮಾತನಾಡಿಕೊಂಡು ತನ್ನೊಳಗೇ ಮಥಿಸಿಕೊಳ್ಳುವ ವಿಧಾನ ನಿಜಕ್ಕೂ ಕಥೆಯನ್ನು ಹರಿತವಾಗಿಡಲು ನೆರವಾಗಿದೆ.

ಅಂಬೇಡ್ಕರ್ ರನ್ನು ಓದಿಕೊಂಡು ಸಂಘ ಕಟ್ಟಿ ಹೋರಾಟಕ್ಕೆ ಇಳಿದವನು ಆ ಸಂಘಕ್ಕೆ ರಾಜಿನಾಮೆ ನೀಡುವುದು ಮತ್ತು ಹೆಂಡತಿಯ ಬಳಿ ನಿಮ್ಮ ಅಂಬೇಡ್ಕರ್ ಮತ್ತು ನಮ್ಮ ಶಿವಾಜಿ ಎಂದು ವರ್ಗೀಕರಿಸುವುದು ಅಚ್ಚರಿ ಹುಟ್ಟಿಸುತ್ತದೆ. ದಲಿತ ಪ್ರಜ್ಞೆ ಎನ್ನುವುದು ಹುಟ್ಟಿನಿಂದ ಬರುತ್ತದೆಯೋ ಅಥವಾ ಸಂಸ್ಕಾರದಿಂದ ಬರುತ್ತದೆಯೋ?  ದಲಿತರಲ್ಲದೆಯೂ ದಲಿತ ಪ್ರಜ್ಞೆ ಬೆಳೆಸಿಕೊಳ್ಳಬಹುದೇ? ತಮಗಾದ ನೋವು ಅವಮಾನಗಳನ್ನು ಇತರರು ಅನುಭವಿಸಲು ಸಾಧ್ಯವಿಲ್ಲ ಎಂಬ ಒಂದು ವಾದ ನಿಜವಾದದ್ದಾದರೂ ಹೆಜ್ಜೆ ಹೆಜ್ಜೆಗೂ ಅದೇ ಅವಮಾನವನ್ನು ಎದುರಿಸಿ ಬೆಳೆದ, ಬೆಳೆದ ನಂತರವೂ ಉದ್ಯೋಗದಲ್ಲಿಯೂ ಅದೇ ತಿರಸ್ಕಾರ ಹೀಗಳಿಕೆಯನ್ನು ಎದುರಿಸಿದವನು ತಾನು ಹುಟ್ಟಿನಿಂದ ಹೊಲೆಯನಲ್ಲ ಎಂಬುದು ತಿಳಿದ ಕೂಡಲೇ ತನ್ನ ಬಣ್ಣ ಬದಲಿಸಿ, ಮೇಲ್ವರ್ಗದವರಂತೆ ಯೋಚಿಸುವ ರೀತಿಯನ್ನು ನೋಡಿದರೆ ಈ ಪ್ರಜ್ಞೆಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳುವುದೇನೋ ಎನ್ನಿಸಿ ಬಿಡುತ್ತದೆ.

ತಾನು ಶ್ಯಾಣವ್ವ ಕುಳಿ, ಸೂರ್ಯವಂಶಿ, ಗಾಯಕವಾಡ ಮನೆತನದವನು ಎಂದುಕೊಳ್ಳುವ ಮಾದೇವ ತನ್ನ ಮೂಲ ಹುಡುಕಿ ಹೊರಟೇಬಿಡುತ್ತಾನೆ. ಆದರೆ ಸತ್ಯ ತಾನು ತಿಳಿದಂತಿಲ್ಲ ಎಂಬುದು ಅರಿವಾಗುತ್ತದೆ. ಮೈಸೂರು ಅರಮನೆಯನ್ನೋ, ಜೈಪುರದ ಅರಮನೆಯನ್ನೋ ಕನಸಿದವನಿಗೆ ಕಂಡಿದ್ದು ಬರಿದಾದ ದೊಡ್ಡವಾಡೆ. ಅಲ್ಲಿಯೂ ತನ್ನ ತಂದೆ-ತಾಯಿಯನ್ನು ಕೊಂದ ಚಿಕ್ಕಪ್ಪ ಅಥವಾ ಆತನ ಮಕ್ಕಳಿಲ್ಲ.  ಅಪ್ಪ ಅಚ್ಯುತ್ ರಾವ್ ಅವರ ತಂಗಿ ಅಹಲ್ಯಾಬಾಯಿ ಮಾತ್ರ. ಆಕೆಯೂ ಅಣ್ಣನ ಕುರುಹನ್ನು ಒಪ್ಪಿ ಸಂತೋಷ ಪಡುತ್ತಾಳಾದರೂ ಆತ ಬೆಳೆದದ್ದು ಒಂದು ಹೊಲೆಯರ ಮನೆಯಲ್ಲಿ ಎಂದಾಗ ಮುಖಭಾವವನ್ನು ಬದಲಿಸುತ್ತಾಳೆ.

ತಾನೇ ಸ್ವತಃ ಅಕ್ರಮ ಸಂಬಂಧದಿಂದ ಮಕ್ಕಳನ್ನು ಪಡೆದಿದ್ದರೂ ಮಗಳು ದಲಿತನೊಬ್ಬನನ್ನು ವಿವಾಹವಾಗಿ ಒಳ್ಳೆಯ ರೀತಿ ಜೀವನ ನಡೆಸುವುದನ್ನು ಒಪ್ಪದ ಆಕೆ, ಮಾದೇವನಿಗೆ ಅಲ್ಲಿಯೇ ಉಳಿ ಎಂಬ ಮಾತಿರಲಿ, ಒಂದು ಊಟ ನೀಡುವ ಸೌಜನ್ಯವಿರಲಿ, ಒಂದು ಕಪ್ ಚಹಾ ಮಾಡಿಕೊಡುವ ಉದಾರತೆಯನ್ನೂ ಆಕೆ ತೋರುವುದಿಲ್ಲ. ತಾನು ಆಸ್ತಿಗೋಸ್ಕರ ಬರಲಿಲ್ಲ ಎಂದರೂ ಆಕೆಯ ನಿರ್ಲಿಪ್ತತೆ ಆತನನ್ನೇ ಮುಜುಗರಕ್ಕೀಡು ಮಾಡಿ ತಕ್ಷಣ ಅಲ್ಲಿಂದ ಹೊರಟರೆ ಸಾಕು ಎಂಬಷ್ಟು ಉಸಿರುಗಟ್ಟಿಸುತ್ತದೆ. ತಾನು ಅಕ್ರಮ ಸಂಬಂಧ ಹೊಂದಿದ್ದರೂ ಅತ್ಯುನ್ನತ ಮಟ್ಟದ ಅಧಿಕಾರಿಗಳೊಂದಿಗೇ ಹೊಂದಿದ್ದೆ. ಆದರೆ ಮಗಳು ಯಕಃಶ್ಚಿತ ಹೊಲೆಯನೊಬ್ಬನನ್ನು ಮದುವೆ ಆದಳು ಎನ್ನುವ ಅಹಲ್ಯಾಬಾಯಿ  ಮಾದೇವನ ಕಣ್ಣಿಗೆ ತನ್ನೂರಿನಲ್ಲಿ ಮೈಮಾರಿ ಜೀವನ ನಡೆಸುವ ತುಳಸಿ, ವಿಮಲಿಯರಿಗಿಂತ ಕಡೆಯಾಗಿ ಕಾಣುತ್ತಾಳೆ

ಅತ್ತೆಯ ಉದಾಸೀನತೆ, ಮರಾಠನಾಗಿಯೂ ಹಮಾಲಿ ಕೆಲಸ ಮಾಡಿ ಪೈಸೆ ಪೈಸೆಗೆ ಲೆಕ್ಕ ಹಾಕುವ ಅರ್ಜುನ್ ರಾವ್  ಕರಾಡಕರ್ ನ ಬಡತನ ಮತ್ತು ದೀನ ಸ್ಥಿತಿ ಮಾದೇವನಿಗೆ ಕುಲ ಮತ್ತು ಜಾತಿ ಶ್ರೇಷ್ಟತೆಯನ್ನು ತಂದುಕೊಡುವುದಿಲ್ಲ ಎಂಬುದನ್ನು ಅರ್ಥ ಮಾಡಿಸಿತ್ತು. ತನ್ನ ಒಡನಾಡಿಗಳಾದ ಪರಿಶ್ಯಾ, ರಾವಶ್ಯಾ, ಹಿರಿಯ ಖಂಡೋಬಾ ಎಲ್ಲರೂ ತನಗೆ ನೀಡಿದ ಪ್ರೀತಿಯ ಮುಂದೆ ಅತ್ತೆಯ ನಿರ್ಲಿಪ್ತತೆ, ಶಿವಾಜಿ ಮಹಾರಾಜ್ ಕಿ ಜೈ ಎಂದಾಗ ನವಿರೇಳದ ಮಹಾರಾಷ್ಟ್ರದ ಮರಾಠಾ ಮಂದಿ ತೀರಾ ಸ್ವಾರ್ಥಿಗಳಂತೆ ಕಾಣುತ್ತಾರೆ. ಈ ಬಣ್ಣದ ಜಗತ್ತಿನಲ್ಲಿ ಸೋ ಕಾಲ್ಡ ಮೇಲ್ವರ್ಗದವರು ವರ್ತಿಸುವ ರೀತಿಯ ಬಗ್ಗೆ ನನಗೂ ಧಿಕ್ಕಾರವಿದೆ. ಆ ಮೇಲ್ವರ್ಗ ಎನ್ನುವುದನ್ನು ಕೇವಲ ಜಾತಿ ಆಧಾರಿತವಾಗಿ ಹೇಳುತ್ತಿಲ್ಲ. ಅದನ್ನು ಆರ್ಥಿಕ ಹಾಗೂ ಅಧಿಕಾರದ ಶ್ರೇಣಿಯಲ್ಲಿ ಹೇಳುತ್ತಿದ್ದೇನೆ.

ಸರಿಯಾಗಿ ಒಂದು ವರ್ಷಗಳ ಹಿಂದೆ ಅಗಷ್ಟ್ ನಲ್ಲಿ ನಾನೊಂದು ಅಪಘಾತಕ್ಕೀಡಾಗಿದ್ದೆ. ಧಾರವಾಡದ ಒಂದು ಕಾರ್ಯಕ್ರಮ ಮುಗಿಸಿ ರಾತ್ರಿ ಕವಿ ಮಿತ್ರ ರಮೇಶ ಗುಬ್ಬಿಯವರ ಕಾರ್ ನಲ್ಲಿ ಬರುವಾಗ ಅಣಶಿ ಘಾಟ್ ನಲ್ಲಿ ಕಾರು ಬ್ರೆಕ್ ಫೇಲ್ ಆಗಿ ಒಂದು ಗುಡ್ಡಕ್ಕೆ ಅಪ್ಪಳಿಸಿ ಟೈಯರ್ ಬ್ಲಾಸ್ಟ ಆಗಿ ಬಿಟ್ಟಿತ್ತು. ಮೂಗು ಒಡೆದು ಹೋಗಿ ಮೂಗಿನಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು. ನನಗೆ ಮೂಗಿನ ನೋವು ಅನುಭವಕ್ಕೆ ಬರುತ್ತಿರಲಿಲ್ಲವಾದ್ದರಿಂದ  ತಲೆಗೆ ಏಟು ಬಿದ್ದಿದೆ, ಹೀಗಾಗಿ ಮೂಗಿಂದ ರಕ್ತ ಸೋರುತ್ತಿದೆ, ಇನ್ನು ಕೆಲವೇ ಕ್ಷಣಗಳಲ್ಲಿ ನಾನು ಸಾಯುತ್ತೇನೆ. ನನ್ನ ಗಂಡ ಮಕ್ಕಳಿಗೆ ಸುದ್ದಿ ತಿಳಿಸುವವರಾದರೂ ಯಾರು ಎಂದೆಲ್ಲ ಯೋಚಿಸುತ್ತ ಕಾರಿಂದ ಹೊರ ಬರಲೂ ಆಗದೇ ಒದ್ದಾಡುತ್ತಿದ್ದೆ.

ಕಾರ್ ನ ಚಾಲಕ ಮತ್ತು ರಮೇಶ ಗುಬ್ಬಿ ಹೊರ ಬಂದು ನನ್ನನ್ನು ಹೊರ ತೆಗೆಯುವುದು ಹೇಗೆ ಎಂದು ಮಾತನಾಡುವುದು ಕೇಳಿಸುತ್ತಿತ್ತು. ದಟ್ಟವಾದ ಅರಣ್ಯದ ನಡುವಿನ ಕಗ್ಗತ್ತಲಲ್ಲಿ ಒಂದೇ ಒಂದು ವಾಹನದ ಸುಳಿವೂ ಇರಲಿಲ್ಲ. ಅಂತೂ ಸುಮಾರು ಇಪ್ಪತ್ತು ನಿಮಿಷಗಳ ನಂತರ ಬಂದ ಕಾರೊಂದರ ಹೆಡ್ ಲೈಟ್  ಬೆಳಕಿನ ಸಹಾಯದಿಂದ ಡಿಕಿ ಮೇಲೆತ್ತಿ ಅಲ್ಲಿಂದ ನನ್ನನ್ನು ಹೊರಗೆಳೆದುಕೊಂಡಿದ್ದರು. ಮನೆಗೆ ಹಾಗೂ ಹತ್ತಿರದಲ್ಲೇ ಅರಣ್ಯ ಇಲಾಖೆಯಲ್ಲಿರುವ ಸ್ನೇಹಿತ ರಾಜುಗೆ ಫೋನಾಯಿಸಿದ್ದೆ. ನಮ್ಮವರ ಗಡಿಬಿಡಿಗೆ ಕಂಗಾಲಾಗಿ ಪೂಣೆಯಿಂದ ಬಂದಿದ್ದ ಎಕ್ಸ್ ಸರ್ವಿಸ್ ಮ್ಯಾನ್ ಸದಾಶಿವರು ತಮ್ಮ ಕಾರನ್ನು ತಂದು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದರು.

ಅದಾಗಿ ಹತ್ತು ದಿನಗಳ ನಂತರ ಶಾಲೆಗೆ ಹೊರಟಿದ್ದೆ. ದಾರಿ ಮಧ್ಯದಲ್ಲಿ ಜೋರಾದ ಮಳೆ ಬಂತೆಂದು ನನ್ನ ಗಾಡಿ ನಿಲ್ಲಿಸಿ ರೇನ್ ಕೋಟ್ ಹಾಕಿಕೊಳ್ಳುವಾಗ ಪಕ್ಕದ ಆಟೋ ಸ್ಟಾಂಡಿನಿಂದ  ಇಬ್ಬರು ರಿಕ್ಷಾ ಡ್ರೈವರ್ ಗಳು ಮಾತನಾಡಿಸುವುದೋ ಬೇಡವೋ ಎಂಬಂತೆ ಪಕ್ಕ ಬಂದು ನಿಂತರು. ಗುರುತು ಪರಿಚಯವೇ ಇಲ್ಲದ ಇವರೇಕೆ ನನ್ನ ಪಕ್ಕ ಬಂದಿದ್ದಾರೆ ಎಂದು ಯೋಚಿಸುವಾಗಲೇ “ಈಗ ಹೇಗಿದ್ದೀರಿ ಟೀಚರ್..? ಎಂದರು. ನಾನು ಇವರಿಗೆ ನನ್ನ ಅಪಘಾತದ ಬಗ್ಗೆ ಗೊತ್ತಾಗಿದ್ದಾದರೂ ಹೇಗೆ ಎಂದುಕೊಳ್ಳುತ್ತ, “ಈಗ ಪರವಾಗಿಲ್ಲ ಎಂದಿದ್ದೆ.  

ನಿಮಗೆ ಆಕ್ಸಿಡೆಂಟ್ ಆದ ಜಾಗಕ್ಕೆ ಮಾರನೆಯ ದಿನ ಹೋಗಿ ನೋಡಿದೆವು ಟೀಚರ್. ಆ ಕಾರಿನ ಅವಸ್ಥೆ ನೊಡಿದರೆ ನೀವು ಬದುಕಿದ್ದೇ ಹೆಚ್ಚು..” ಒಬ್ಬಾತನ ಧ್ವನಿಯಲ್ಲಿ ನಡುಕವಿತ್ತು. ಆ ಜಾಗ ತುಂಬಾ ಕೆಟ್ಟದ್ದು ಟೀಚರ್. ಇಲ್ಲಿಯವರೆಗೆ ಆ ಜಾಗದಲ್ಲಿ ಆಕ್ಸಿಡೆಂಟ್ ಆಗಿ ಬದುಕಿದವರೇ ಇಲ್ಲ. ಗಾಡಿ ಗುಡ್ಡಕ್ಕೆ ಹೊಡೆಯುವ ಬದಲು ಪಕ್ಕದ ಕಮರಿಗೆ ಬಿದ್ದಿದ್ದರೆ ಒಂದು ಮೂಳೇನೂ ಸಿಕ್ತಿರಲಿಲ್ಲ ಟೀಚರ್. ನಿಮ್ಮ ಅದೃಷ್ಟ ಚೆನ್ನಾಗಿದೆ.”

ಮತ್ತೊಬ್ಬ ತೀರಾ ಕಳಕಳಿಯಿಂದ ಹೇಳಿದ್ದ. “ ನಾವು ನಿಮ್ಮ ಮನೆಗೇ ಬರಬೇಕೆಂದುಕೊಂಡಿದ್ದೆವು. ನಂತರ ಹೆಚ್ಚೇನು ಏಟಾಗಿಲ್ಲ ಅಂತಾ ಗೊತ್ತಾಯ್ತು. ಅದಕ್ಕೇ ಬರಲಿಲ್ಲ.”  ಎಂದಾಗ ನನಗೆ ನಿಜಕ್ಕೂ ಕಣ್ಣು ಹನಿಗೂಡಿತ್ತು. ಪ್ರತಿದಿನ ನಾನು ಗಾಡಿಹೊಡೆದುಕೊಂಡು ಹೋಗುವಾಗ ನನ್ನ್ನು ನೋಡಿದ್ದಷ್ಟೆ. ನನಗಂತೂ ಅವರ ಮುಖ ಪರಿಚಯವೂ ಇರಲಿಲ್ಲ. ಆದರೂ ತಮ್ಮೂರಿನ ಟೀಚರ್ ಎಂಬ ಕಳಕಳಿ. ಆದರೆ ತೀರಾ ಆತ್ಮೀಯತೆಯ ಸೋಗು ಹಾಕುವ, ಮಾತನಾಡುವಾಗ ನಮಗೋಸ್ಕರವೇ ಬದುಕಿರುವಂತೆ ಆಡುವ ಅದೆಷ್ಟೋ ಸ್ನೇಹಿತರು ವಿಷಯ ತಿಳಿದ ನಂತರವೂ ಕನಿಷ್ಟ ಬಾಯಿ ಮಾತಿಗಾದೂ ಹೇಗಿದ್ದಿ ಎಂದು ವಿಚಾರಿಸಿರಲಿಲ್ಲ.

ಬರೀ ಮೀನು ಮಾರುವ ಹೆಂಗಸರ ಜೊತೆ, ಆಟೋ ಡ್ರೈವರ್ ಗಳ ಜೊತೆ, ಬಸ್ ಕಂಡಕ್ಟರ್ ಗಳ ಜೊತೆ, ಕೂಲಿ ಮಾಡುವವರೊಟ್ಟಿಗೆ ಮಾತಾಡಿಕೊಂಡಿರುತ್ತಾಳೆ ಎಂಬುದು ಮೊದಲಿನಿಂದಲೂ ನನ್ನ ಮೇಲಿರುವ ಘನಗಂಭೀರ ಆರೋಪ . ಆದರೆ ಈ ಘಟನೆ ನಡೆದ ನಂತರ ಇಂತಹ ಆರೋಪಕ್ಕೆ ಖುಷಿ ಪಡುತ್ತಿದ್ದೇನೆ.

ಕಾದಂಬರಿಯ ಅಂತ್ಯದಲ್ಲಿ ಮಾದೇವ ಕೂಡ ಇಂತಹುದ್ದೊಂದು ವ್ಯತ್ಯಾಸವನ್ನು ತಿಳಿದುಕೊಳ್ಳುತ್ತಾನೆ. ತಮ್ಮವನಲ್ಲದಿದ್ದರೂ ತಮ್ಮವನಿಗಿಂತ ಹೆಚ್ಚು ಆಸ್ತೆಯಿಂದ ಕಂಡ ಹೊಲಗೇರಿಯನ್ನೇ ಅಪ್ಪಿಕೊಳ್ಳುತ್ತಾನೆ.

ಇಡೀ ಕಾದಂಬರಿಯಲ್ಲಿ ಮಾದೇವನ ಪಾತ್ರದಷ್ಟೇ ಸಶಕ್ತವಾಗಿ ಮೂಡಿ ಬಂದಿರುವುದು ಸುಮತಿಯ ಪಾತ್ರ.  ಮಾನವ ಸಂಬಂಧಗಳ ಒಳ ತಿರುಳನ್ನು ಮೌನವಾಗಿ ಮಥಿಸುತ್ತಲೇ ಮನುಷ್ಯನ ಆಂತರಿಕ ಹಾಗೂ ಸಾಮಾಜಿಕ ಪ್ರಜ್ಞೆಯನ್ನೂ ವಿಶ್ಲೇಷಿಸುತ್ತಾಳೆ.  ಗಂಡ ಮೇಲ್ವರ್ಗದವಳೊಬ್ಬಳನ್ನೇ ಮದುವೆಯಾಗಿ ರಾಜಕುಮಾರನಂತೆ ಇರುತ್ತೇನೆ ಎಂದು ಹೊರಟು ಹೋದಾಗಲೂ ತನ್ನ ಮಕ್ಕಳನ್ನು ಎದೆಗವಚಿಕೊಂಡು ಕೂಲಿ ನಾಲಿ ಮಾಡಿಯಾದರೂ ಮಕ್ಕಳನ್ನು ಸಾಕುವ ಶಪಥ ಮಾಡುತ್ತಾಳೆ. ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ಹುಡುಗಿಯರಿಗೆ ಇರಲೇ ಬೇಕಾದ ಸ್ವಾಭಿಮಾನ ಮತ್ತು ಜೀವನ ಪ್ರೀತಿಗೆ ಪ್ರತೀಕವಾಗಿ ನಿಲ್ಲುತ್ತಾಳೆ.

ಕಾಲೇಜಿನಲ್ಲಿಯೇ  ಸೈಕಲ್ ಹೊಡೆದು ಕೊಂಡು ಬರುವ ಮಾದೇವನಿಗೆ “ತೂ ಮಹಾರ್ ಹೋಯ್” ಎನ್ನುವ ಸಹಪಾಠಿಗಳಿಗೆ ಪ್ರತಿಷ್ಟೆಯ ಸಂಕೇತವಾಗಿ ಸೈಕಲ್ ಬಳಕೆಯಾಗಿದ್ದರೆ, ಕಾದಂಬರಿಯ ಕೊನೆಯಲ್ಲಿ ದಲಿತ ಚಳುವಳಿಯ ಮುಂಚೂಣಿಯಲ್ಲಿ  ಅಂಬೇಡಕರರನ್ನು ಹೊತ್ತು ಮುನ್ನಡೆಸುವ ಸಂಕೇತವಾಗಿ ಬಿಂಬಿತವಾಗಿದೆ. ಜಾತಿ ಪಲ್ಲಟ ತಲ್ಲಣಗಳನ್ನು ಕಾದಂಬರಿ ತುಂಬಾ ವಿವರವಾಗಿ ವಿಷದವಾಗಿ ಹಿಡಿದಿಟ್ಟಿದೆ.

ಕೊನೆಯದಾಗಿ ಈ ಕುರಂದ ಎಂಬ ಶಬ್ಧಕ್ಕೂ ಹೊಲೆಯ ಮತ್ತು  ಮಾದಿಗರಿಗೆ ಇರುವ ಸಂಬಂಧದ ಬಗ್ಗೆ ನನಗೊಂದು ರೀತಿಯ ಕುತೂಹಲವಿದೆ. ಯಾಕೆಂದರೆ ತುಮಕೂರಿನ ಸಿದ್ದರ ಬೆಟ್ಟ ಹಾಗೂ ಕುರುಂಕೋಟೆ ನಿರ್ಮಿಸಿದ ಮಾದಿಗ ಜನಾಂಗದ ದೊರೆಯ ಹೆಸರೂ ಕುರಂಗರಾಯ.  ಕುರಂಗ ಅಥವಾ ಕುರಂದ ಎಂದರೆ ಜಿಂಕೆ ಎಂಬ ಅರ್ಥವನ್ನು ಕೊಡುತ್ತದಂತೆ. ಇದರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದ ನಮ್ಮ ಹಿರಿಯ ಐಪಿಎಸ್ ಅಧಿಕಾರಿ ನಂಜುಂಡಸ್ವಾಮಿಯಂಥವರು ವಿವರಣೆ ನೀಡಬಹುದೇನೋ.

ಒಂದು ಇಡೀ ಸಮಾಜವನ್ನು ಕಟ್ಟಿಕೊಡುವಲ್ಲಿ ಹೊಲಗೇರಿಯ ರಾಜಕುಮಾರ ಯಶಸ್ವಿಯಾಗಿದೆ. ಸಮಾಜದ ಒಳನೋಟಗಳು ಇದ್ದಕ್ಕಿದ್ದಂತೆಯೇ ಚಿತ್ರಿತವಾಗಿ ಮುಂದಿನ ಜನಾಂಗಕ್ಕೆ ಕೇವಲ ಸಾಹಿತ್ಯಿಕ ಕೃತಿಯಾಗಿ ಮಾತ್ರವಲ್ಲದೇ ಸಾಮಾಜಿಕ ಅಧ್ಯಯನಕ್ಕೂ ಆಕರ ಗೃಂಥವಾಗಿ ನಿಲ್ಲುವಷ್ಟು ಸತ್ವ ಇದರಲ್ಲಿದೆ. ಇಂತಹುದ್ದೊಂದು ಸಾಮಾಜಿಕ ನೆಲೆಯಲ್ಲಾದರೂ ಈ ಪುಸ್ತಕವನ್ನು ಓದಲೇ ಬೇಕು. ಒಂದಿಷ್ಟೂ ಬೇಸರಗೊಳ್ಳದಂತೆ  ಓದಿಸುವ ಈ ಕಾದಂಬರಿಯ ಓದಿಗಾಗಿ ನಿಮಗೆಲ್ಲರಿಗೂ ಹ್ಯಾಪಿ ರೀಡಿಂಗ್

‍ಲೇಖಕರು Avadhi

July 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

5 ಪ್ರತಿಕ್ರಿಯೆಗಳು

  1. Sangeeta Kalmane

    ಸಂಕ್ಷಿಪ್ತವಾಗಿ ಕಾದಂಬರಿಯ ಸಾರಾಂಶ ನಿಮ್ಮ ಜೀವನದ ಘಟನೆಗಳೊಂದಿಗೆ ಬರೆಯುವ ನಿಮ್ಮ ಶೈಲಿ ಓದುವಾಗ ಭಾನುವಾರವನ್ನು ಕಾಯುವಂತಾಗುತ್ತದೆ. ನಿಮಗೂ ಪ್ರಚುರಪಡಿಸುತ್ತಿರುವ ಅವಧಿಗೂ ಧನ್ಯವಾದಗಳು.

    ಪ್ರತಿಕ್ರಿಯೆ
  2. ಋತಊಷ್ಮ

    ಪುಸ್ತಕದ ಪರಿಚಯವನ್ನು ತುಂಬಾ ಅದ್ಭುತವಾಗಿ ಹೆಣೆದಿರುವಿರಿ. ಹೋದ ವರುಷ ಈ ಪುಸ್ತಕವನ್ನು ಬಸೂ ಸರ್ ರವರಿಂದ ಪಡೆದುಕೊಂಡು ಅದೇ ರಾತ್ರಿ ಓದಿ ಮುಗಿಸಿದಾಗ ಆದ ಅನುಭವಗಳು ರೋಚಕ. ಅಲ್ಲಿಂದ ಇಲ್ಲಿಯವರೆಗೂ ಈ ಪುಸ್ತಕವನ್ನು ನನ್ನ ಅನೇಕ ಸ್ನೇಹಿತರಿಗೆ ಕಾಣಿಕೆಯಾಗಿ ನೀಡಿರುವೆ. ಎಷ್ಟೋ ಗುರುತು ಪರಿಚಯವಿಲ್ಲದ ಚೇತನಗಳಿಗೆ ಈ ಪುಸ್ತಕ ಓದಲು ರೆಕಮಂಡ್ ಮಾಡಿದ್ದೇನೆ. ಈಗ ಇನ್ನೂ ಖುಷಿಯಾಗುತ್ತಿದೆ ನಿಮ್ಮಿಂದ ಮತ್ತು ಅವಧಿಯ ಮುಖಾಂತರ ಪುಸ್ತಕದ ಬಗ್ಗೆ ಗೊತ್ತಾಗುತ್ತಿದೆಯೆಂದು. ಥ್ಯಾಂಕ್ಯೂ ಮ್ಯಾಮ್.

    ಪ್ರತಿಕ್ರಿಯೆ
  3. ಸುಜಾತ ಲಕ್ಷೀಪುರ

    ನನ್ನ ಸ್ನೇಹಿತ ಪ್ರಕಾಶ್‌ ಈ ಪುಸ್ತಕದ ಬಗ್ಗೆ ಬಹಳ ಅಭಿಮಾನದಿಂದ ಮಾತಾಡಿ, ಮೆಚ್ಚಿಗೆ ವ್ಯಕ್ತಪಡಿಸಿದ್ದರು. ಅದು ಏಕೆ ಎಂದು ಈಗ ತಿಳಿಯಿತು.
    ಕಥೆಯೇ ವಿಶೇಷತೆಯಿಂದ ಕೂಡಿದೆ. ಇಡೀ ಕಾದಂಬರಿಯ ಒಟ್ಟು ತಿರುಳನ್ನು ಅದರ ಎಲ್ಲಾ ಸೂಕ್ಷ್ಮತೆ ಜತೆಗೆ, ತಮ್ಮ ಜೀವನದ ಅಂತಹುದೇ ಘಟನೆಗಳೊಂದಿಗೆ ತಳುಕು ಹಾಕುತ್ತಾ ಹೆಣೆಯುವ ಶ್ರೀದೇವಿಯವರ ಬರಹದ ಕಲೆಯೆ ಕಲೆ. ಕಾದಂಬರಿ ಮಾತ್ರವಾಗಿ ಅಲ್ಲದೆ, ಸಾಮಾಜಿಕ, ಮನೋ ವೈಜ್ಞಾನಿಕ ನೆಲೆಗಳಲ್ಲಿ ಕೂಡ ಇದನ್ನು ನೋಡಲು ಸಾಧ್ಯ ಎಂಬುದೇ ಆ ಕೃತಿಯ ಬಹುಮುಖತೆಯನ್ನೂ ತೋರುತ್ತದೆ. ಈ ಬಗೆಗಿನ ಒಳನೋಟ ವಿಮರ್ಶೆಯೊಂದಿಗೆ ಬುಕ್ ರೆಕಮಂಡ್ ಮಾಡುತ್ತಿರುವ ಶ್ರೀದೇವಿ ಅವರಿಗೆ ಧನ್ಯವಾದಗಳು. ತಮ್ಮ ಬರಹದ ಮೂಲಕವೇ ಓದಿಗೆ ಹಚ್ಚುವ ಅವರ ಶೈಲಿಗೆ,ಅದರಿಂದೆ ತುಡಿವ ಸೂಕ್ಷ್ಮ,ಅಂತಃಕರಣದ ಲೇಖಕಿಯ ಮನಸ್ಸಿಗೂ ಒಂದು ಥ್ಯಾಂಕ್ಸ್.

    ಪ್ರತಿಕ್ರಿಯೆ
  4. ರಾಜು ಪಾಲನಕರ ಕಾರವಾರ

    ಶ್ರೀದೇವಿ ಮೇಡಂ ಅವಧಿಯಲ್ಲಿ ನಿಮ್ಮ ಅಂಕಣ ಬರಹ ತುಂಬಾ ಚೆನ್ನಾಗಿದೆ…ಡಾ”ಶಿವರುದ್ರ ಕಲ್ಲೋಳಿಕರ ಅವರ… ಹೊಲಗೇರಿಯ ರಾಜಕುಮಾರ ಕಾದಂಬರಿ ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ನಿಮಗೆ ಅಭಿನಂದನೆಗಳು

    ಪ್ರತಿಕ್ರಿಯೆ
  5. ಬಿ.ಎಲ್. ರಾಜು

    This write up of Shreedevi draws our attention because she juxtaposes the protagonist’s experiences in the text and her personal experiences and instils a sort of curiosity in the readers towards the novella Holegeriya Rajakumara. Her write up is certainly a new attempt in the field of letters. As Shreedevi rightly mentions, the novella opens up the deeper structure of caste chemistry and casteism, the blantant realities dehumanising the people. The text is very much known for it unravels the social forces that shape one’s caste consciousness . Of course, Shreedevi has recommended a seminal text to the readers’ community. Really a commendable writing…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: