ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’

ಇದು ಲಾಕ್ ಡೌನ್ ಭಾನುವಾರದ ಓದು ‘ಬಂಗಾರದೊಡ್ಡಿ’

ಚಿನ್ನಸ್ವಾಮಿ ವಡ್ಡಗೆರೆ

ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಿಂದ ಹರಿಯುವ ಒಂದು ನಾಲೆಯ ಹೆಸರು ‘ಬಂಗಾರದೊಡ್ಡಿ’. ಈ ನಾಲೆಗೆ ಬಂಗಾರದೊಡ್ಡಿ’ ಎಂಬ ಹೆಸರು ಬರಲು ಕಾರಣವೇನು?. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಒಂದು ರೋಚಕ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ. ‘ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ’ ಎಂಬ ಮೈಸೂರು ಅರಸರ ಕಾಲದ ಶ್ರೀಸಾಮಾನ್ಯರ ಬದುಕನ್ನು ಸಾಮಾಜಿಕ ಕಾದಂಬರಿಯಾಗಿಸಿದ್ದ ಮಲೆಯೂರು ಗುರುಸ್ವಾಮಿ 16 ನೇ ಶತಮಾನದಲ್ಲಿ ನಡೆದ ಸಣ್ಣ ಎಳೆಯೊಂದನ್ನು ಹಿಡಿದುಕೊಂಡು ‘ಬಂಗಾರದೊಡ್ಡಿ’ ಎಂಬ ಚಾರಿತ್ರಿಕ ಕಾದಂಬರಿ ರಚಿಸಿದ್ದಾರೆ.

ಕಾದಂಬರಿ ಪ್ರವೇಶಿಕೆಗೆ ರವಿ ಹಂಜ್ ವಿದ್ವತ್ಪೂರ್ಣ ಮುನ್ನುಡಿ ಇದೆ. ಇತಿಹಾಸದ ಪುಟಗಳಲ್ಲಿ ಸ್ಮರಣೀಯರಾಗಿರುವ ದೇವದಾಸಿಯರನ್ನು ನೆನಪಿಸಿದ್ದಾರೆ.

ಬಂಗಾರದೊಡ್ಡಿಯ ಕತೆ ಹೀಗಿದೆ…
ತಿರುಚನಾಪಳ್ಳಿಯ ರಾಜ ತಿರುಮಲನಾಯಕನ ರಾಜಾಜ್ಞೆಯಂತೆ ಮೈಸೂರು ರಾಜ್ಯವನ್ನಾಳಿದ ಧೀರ ಅರಸು ರಣಧೀರ ಕಠೀರವ ನರಸರಾಜ ಒಡೆಯರ್ ಅವರನ್ನು ಕೊಲ್ಲಲ್ಲು ಬಂದು ಕಂಠೀರವನ ಸನ್ನಿಧಾನದಲ್ಲಿ ಬಂಗಾರ’ದವಳಾಗಿ ತನ್ನ ಸಂಗೀತ, ನೃತ್ಯ, ಸಾಹಿತ್ಯ ಅಭಿರುಚಿಯಿಂದ ಎಲ್ಲರ ಮನಸ್ಸನ್ನು ಗೆದ್ದು ತ್ಯಾಗಮೂರ್ತಿಯಾದ ‘ಬಂಗಾರ’ದವಳ ಜೀವನಗಾಥೆ ಈ ಕಾದಂಬರಿಯ ವಸ್ತು.

‘ಬಂಗಾರದವಳು’ ಎಂದರೆ ರಾಜನ ಖಾಸ ವೇಶ್ಯ. ಉಪಪತ್ನಿ ಎಂದೂ ಅರ್ಥವಿದೆ. ರಾಜಾಜ್ಞೆ ಎಂಬ ಭೂತಕ್ಕೆ ಹೆದರಿ ರಾಜನನ್ನು ಕೊಲ್ಲಲ್ಲು ಬಂದವಳು ‘ಜೀವವನ್ನು ತನ್ನ ಗರ್ಭದಲ್ಲಿ ಪೋಷಿಸಿ ಬೆಳೆಸುವುದರಲ್ಲಿ ಆನಂದ ಕಾಣುವ ಹೆಣ್ಣು ಮತ್ತೊಂದು ಜೀವದ ಕೊಲೆಯನ್ನು ಕಲ್ಪಿಸಿಕೊಳ್ಳುವುದು ಪಾಪಕರವಾದ ಹೇಯಕೃತ್ಯ’ ಎಂದು ಭಾವಿಸಿ ರಾಜನ ಸನ್ನಿಧಾನದಲ್ಲಿ ಬದುಕುವ ಅವಕಾಶ ಪಡೆದ ಪುಣ್ಯವಂತೆ ಮನೋರಮಾ ‘ದೊಡ್ಡಮ್ಮ’. ಇವಳ ಕೋರಿಕೆಯಂತೆ ಈಕೆಯ ಹೆಸರಿನಲ್ಲೆ ಶ್ರೀರಂಗಪಟ್ಟಣದ ಬಳಿ ಕಾವೇರಿ ಹರಿಯುವ ಜಾಗದಲ್ಲಿ ‘ಬಂಗಾರದೊಡ್ಡಿ’ ಎಂಬ ನಾಲೆಯನ್ನು ರಣಧೀರ ಕಠೀರವ ನರಸರಾಜ ಒಡೆಯರ್ ಕಟ್ಟಿಸಿದ್ದಾರೆ. ಇದರ ಹಿಂದೆಮುಂದೆ ನಡೆದ ಘಟನೆಗಳೆ ಈ ಚಾರಿತ್ರಿಕ ಕಾದಂಬರಿಯ ಭಿತ್ತಿ.

ಮೈಸೂರು ರಾಜ್ಯದ ದೊರೆಯೇ ರಣಾಧೀರ ನಾಯಕನೇ
ನಿನ್ನಂಥವರಾರು ಇಲ್ವಲ್ಲೋ ಲೋಕದಾ ಮ್ಯಾಲೆ !
ಹಿಂದೆ ಇನ್ನೂರು ದಂಡು!ಮುಂದೆ ಮುನ್ನೂರು ದಂಡು
ನಿನ್ನಂಥೋರ್ ಯಾರು ಇಲ್ವಲ್ಲೋ ಲೋಕದ ಮ್ಯಾಲೆ !!
ತಿರುಚನಪಳ್ಳಿಯೊಳಗೆ ಕೊಬ್ಬಿದ ಮಲ್ಲಜಟ್ಟಿ
ಉಟ್ಟಾ ಚಡ್ಡಿಯನ್ನು ದಿಡ್ಡಿ ಬಾಗಿಲಮೇಲೆ
ತೂಗಿಬಿಟ್ಟನಂತ ಕೇಳಿ ಕಿಡಿಕಿಡಿಯಾದ ದೊರೆಯೇ !!

ಇದು 70 ದ ದಶಕದಲ್ಲಿ ಸಮುದಾಯ ತಂಡ ಆಡಿದ ‘ಹುತ್ತವ ಬಡಿದರೆ’ ನಾಟಕಕ್ಕೆ ಸಿ.ವೀರಣ್ಣ ಬರೆದಿದ್ದ ರಂಗಗೀತೆ. ಈ ಗೀತೆಯನ್ನು ಕೇಳಿದರೆ ಈಗಲೂ ಮೈನವಿರೇಳುತ್ತದೆ. ಇಂತಹ ಅಪ್ರತಿಮ ರಾಜನ ಚಿರಿತ್ರೆಯ ಜೊತೆಗೆ ದೊಡ್ಡಮ್ಮನ ತ್ಯಾಗ ಮತ್ತು ಅರಮನೆಗಳ ಒಳಗಿನ ಸಂಚು, ಊಳಿಗದವರ, ದೇವದಾಸಿಯರ ಅತಂತ್ರಸ್ಥಿತಿ, ಗರಡಿಮನೆ, ಕತ್ತಿವರಸೆ ಎಲ್ಲವನ್ನೂ ಚಿತ್ರವತ್ತಾಗಿ ಮಲೆಯೂರು ಗುರುಸ್ವಾಮಿ ‘ಬಂಗಾರದೊಡ್ಡಿ’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.

ಕಾದಂಬರಿಯಲ್ಲಿ 16 ನೇ ಶತಮಾನದಲ್ಲಿ ತೆರಕಣಾಂಬಿಯಲ್ಲಿ ನಡೆಯುತ್ತಿದ್ದ ಗರಡಿಮನೆಗಳ ಇತಿಹಾಸ, ಆಗಿನಿಂದ ಇಂದಿಗೂ ನಡೆಯುತ್ತಿರುವ ಗುರುವಾರದ ಸಂತೆಯ ವಿವರಗಳಿವೆ. ಭರತ ಬಾಹುಬಲಿಯರ ತ್ಯಾಗದ ಕತೆ ಇದೆ. ಜೊತೆಗೆ ರಾಜ, ಅರಮನೆ ಕುರಿತು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದ ಜನಪದ ಇದೆ. ಇದೆಲ್ಲವೂ ‘ಕಾದಂಬರಿಯ ಕೇಂದ್ರ’ ವಸ್ತುವಿಗೆ ಅಪಚಾರವಾಗದಂತೆ ದೊಡ್ಡಮ್ಮನ ಜೀವನವನ್ನು ಕಟ್ಟಿಕೊಡುವಲ್ಲಿ ಮಲೆಯೂರು ಸಫಲರಾಗಿದ್ದಾರೆ. ಕುತೂಹಲಕರವಾದ ಚಾರಿತ್ರಿಕ ಸಂಗತಿಗಳನ್ನು ಬೆನ್ನತ್ತಿ ಹೋಗುವುದು ಮಲೆಯೂರು ಗುರುಸ್ವಾಮಿ ಅವರಿಗೆ ರಕ್ತಗತವಾಗಿ ಬಂದ ಬಳುವಳಿ. ʼಬಂಗಾರದೊಡ್ಡಿ’ ಮಗು ಅವರ ಆರನೇಯ ಕಾದಂಬರಿ. ಆಶ್ಚರ್ಯ ಎಂದರೆ ಉಳಿದ ಅವರ ಐದು ಕಾದಂಬರಿಗಳು ಇತಿಹಾಸದ ಪುಟಗಳನ್ನೇ ಕುರಿತು ಇವೆ.

ಆದರೆ ಅವರ ಗಮನ ಇತಿಹಾಸದ ಪುಟಗಳಲ್ಲಿ ಮೆರೆದ ರಾಜ ಮಹಾರಾಜರು, ಯುದ್ಧ, ಸಾವುನೋವುಗಳಿಗಿಂತ ಹೆಚ್ಚಾಗಿ ತಮ್ಮ ತ್ಯಾಗ ಮತ್ತು ಸಾಮಾಜಿಕ ಕೆಲಸಕಾರ್ಯಗಳಿಂದ ಬಡವರಿಗೆ, ರೈತರಿಗೆ,ಶೋಷಿತರಿಗೆ ನೆರವಾಗಿ ಇತಿಹಾಸದ ಪುಟಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ವ್ಯಕ್ತಿಗಳನ್ನು ಕುರಿತು ಇರುತ್ತದೆ.

ಇದಕ್ಕೆ ಉದಾಹರಣೆಯಾಗಿ ಅವರ ಮಲೆ ಮಹಾದೇಶ್ವರರ ಜೀವನಕುರಿತು ಬರೆದ ‘ಮಹಾಯಾತ್ರಿಕ’ ಅರಸರ ಕಾಲದ ಸಾಮಾನ್ಯರ ಜೀವನ ಕುರಿತು ಬರೆದ ‘ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ’, ವಿದೂಷಿ ಬೆಂಗಳೂರು ನಾಗರತ್ನಮ್ಮ ಅವರನ್ನು ಕುರಿತು ಬರೆದ ‘ಕಪಿಲೆ ಹರಿದಳು ಕಡಲಿಗೆ’, ವಿಕ್ಷಪ್ತವಾಗಿ ಬದುಕಿದ ಸಂಸ ಅವರ ಜೀವನ ಮತ್ತು ನಾಟಕ ಆಧರಿಸಿ ಸಂಸ’ ಕಾದಂಬರಿ ಹಾಗೂ ಚಿಕ್ಕದೇವ ಒಡೆಯರ ಕಾಲದ ಚಾರಿತ್ರಿಕ ಕಾದಂಬರಿ ಅಪ್ರತಿಮವೀರ’ ಕೃತಿಗಳನ್ನು ಗಮನಿಸಬಹುದು. ಮೈಸೂರು ಅರಸು ರಣಧೀರ ಕಠೀರವ ನರಸರಾಜ್ ಒಡೆಯರ್ 10 ನೇ ಅರಸು ಚಾಮರಾಜ ಒಡೆಯರ್ ಅವರ ಮಗ. ಇವರ ಆಳ್ವಿಕೆ 1638 ರಿಂದ 1679.

ರಣಧೀರ ಕಠೀರವ ಮೈಸೂರು ರಾಜನಾಗುವುದು ಕೂಡಾ ಒಂದು ವಿಚಿತ್ರ ಸನ್ನಿವೇಶದಲ್ಲಿ. ಚಾಮರಾಜ ಒಡೆಯರ್ ಅವರು ರಾಜ್ಯಭಾರದಲ್ಲಿ ಆಸಕ್ತಿ ಕಳೆದುಕೊಂಡು ತೆರಕಣಾಂಬಿಯಲ್ಲಿ ಬಂದು ನೆಲಸಿರುತ್ತಾರೆ. ಅಲ್ಲಿ ರಣಧೀರ ಕಠೀರವ ಸಾಮಾನ್ಯರೊಂದಿಗೆ ಆಡುತ್ತಾ ನಲಿಯುತ್ತಾ ಬಾಲ್ಯ ಕಳೆಯುತ್ತಾರೆ. ಮಟ್ಟಿಯ ಮಣ್ಣಲ್ಲಿ ಸಾಮು ಗರಡಿ, ಮಲ್ಲಯುದ್ಧದಲ್ಲಿ ಪ್ರಾವಿಣ್ಯಪಡೆದಿರುತ್ತಾರೆ.

ತಿರುಚಾನಪಳ್ಳಿಯ ಜಟ್ಟಿಯ ರುಂಡ ಕತ್ತರಿಸಿ ಧೀರನೆನ್ನಿಸಿಕೊಂಡಿರುತ್ತಾರೆ. ಇದೆ ಸಮಯದಲ್ಲಿ ವಿಕ್ರಮರಾಯನ ಸಂಚಿಗೆ ಮೈಸೂರು ಆಳುತ್ತಿದ್ದ ಇಮ್ಮಡಿರಾಜ ಒಡೆಯರ್ ಸಾವನ್ನಪ್ಪುತ್ತಾರೆ (ಇದು ವಿಗಡ ‘ವಿಕ್ರಮರಾಯ’ ನಾಟಕದ ವಸ್ತು). ಆಗ ರಣಧೀರ ಕಠೀರವ ಪಟ್ಟಕ್ಕೆ ಬರುತ್ತಾರೆ. ಇದೆ ಸಮಯದಲ್ಲಿ ಬಿಜಾಪುರದ ರಾಜ ರಣದುಲ್ಲಾಖಾನ್ ಮೈಸೂರು ಸಾಮ್ರಾಜ್ಯಕ್ಕೆ ದಂಡೆತ್ತಿ ಬರುತ್ತಾನೆ. ಈ ಯುದ್ದದಲ್ಲಿ ರಣಧೀರ ಕಠೀರವ ಜಯಗಳಿಸುತ್ತಾರೆ. ಇದು ಒಂದು ಹಂತದ ವರೆಗಿನ ಇತಿಹಾಸ.

ಬಂಗಾರದೊಡ್ಡಿ’ ಇದೆಲ್ಲವನ್ನೂ ಹೇಳುವುದರ ಜೊತೆಗೆ ಜಟ್ಟಿಯ ರುಂಡ ಕತ್ತಿರಿಸಿದ ಸೇಡಿಗೆ ತಿರುಚಾನಪಳ್ಳಿಯಿಂದ ರಣಧೀರನನ್ನು ಕೊಲ್ಲಲ್ಲು ಬಂದ ಮನೋರಮಾ ಎಂಬ ಸ್ಫೂರದ್ರೂಪಿ ಹೆಣ್ಣುಮಗಳು ದೊಡ್ಡಮ್ಮನಾಗಿ, ರಾಜನ ಕೊಲೆಯ ಸಂಚಿನ ಆರೋಪಿಯಾಗಿ, ‘ಬಂಗಾರದೊಡ್ಡಿ’ ನಾಲೆಯ ನಿರ್ಮಾಣಕ್ಕೆ ಕಾರಣವಾಗಿ ಕೊನೆಗೆ ಶ್ರವಣ ಬೆಳಗೊಳದಲ್ಲಿ ಸಲ್ಲೇಖನವ್ರತ ಕೈಗೊಂಡ ತ್ಯಾಗ ಜೀವನದವರೆಗಿನ ಎಲ್ಲಾ ವಿವರಗಳನ್ನು ಮಲೆಯೂರು ಗುರುಸ್ವಾಮಿ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮೈಸೂರು ಸಾಮ್ರಾಜ್ಯದ ಬಿಟ್ಟುಹೋದ ಪುಟಗಳ ಇತಿಹಾಸವನ್ನು ಕಟ್ಟಿಕೊಟ್ಟಿರುವ `ಬಂಗಾರದೊಡ್ಡಿ’ ಅತ್ತ್ಯುತ್ತಮ ಕಾದಂಬರಿಗಳ ಸಾಲಿನಲ್ಲಿ ನಿಲ್ಲಬಲ್ಲ ಕೃತಿ.

‍ಲೇಖಕರು Admin

January 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: