ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತೆಯ ಮೇಲಿನ ಹಾಡು…

ಪ್ರೊ. ಚಂದ್ರಶೇಖರ ಹೆಗಡೆ

ದುರ್ಮರಣಗಳ ಕತ್ತಲೆಯಲ್ಲಿ
ಸಾಗುತ್ತಿರುವ ಮನುಜನ ನೆತ್ತಿಯ ಮೇಲೆ
ಬರೀ ಮೂಳೆ ರಕ್ತ ಮಾಂಸದ ಮಹಾಭಿಷೇಕ
ಬೆಳಕನ್ನೆಲ್ಲಿ ಹುಡುಕುವುದೋ
ಮುರಿದು ಬಿದ್ದ ಸಮಾಧಿಯೊಳಗೆ ?

ಸಾವಿನಿಂದುದಿಸಿದ ತಾಪದ ಮೇಲೆ
ಬೇಯಿಸಿಕೊಳ್ಳುತ್ತಿದೆ ವಿಧಿ
ಎಂದೂ ಕುದಿಯಲಾರದ ಬೇಳೆಗಳ
ಬೆಂದುಹೋಗುವವೆಂದು ಕಾದಿದೆ
ಜಗ ನಡುಗಿ ಬಿಡುಗಣ್ಣ ಬಿಟ್ಟುಕೊಂಡು
ಭರವಸೆಯ ಕೆದಕಿ

ಜವರಾಯನ ಭೋಜನವಿಂದು
ಪುಷ್ಕಳಮಾಯ್ತು ಜೀವಗಳನುಂಡು ತೇಗಿ
ಅತಿರೇಕಗಳನೆಲ್ಲ ಇನ್ನಿಲ್ಲದಂತೆ
ಬಳಿದು ರಸಾಯನದಂತೆ ಹೀರಿ
ಬಗೆ ಬಗೆಯ ಒಡಲ ಭಕ್ಷ್ಯಗಳ
ಸವಿರುಚಿಯ ಚಪ್ಪರಿಸಿದೆ ತೂಗಿ

ಕಳೆಗಟ್ಟಿದೆ ಹಬ್ಬವಿಂದು ಸಲ್ಲುವವರಿಂದಲೇ
ತುಂಬಿಕೊಂಡು ಆ ಯಮಲೋಕ
ಕರ್ತಾರನ ಕಮ್ಮಟದ ಖಾಲಿತನದಿ
ನಿರ್ಭಾವದಿಂದೆದ್ದ ಒಳಸುಳಿಗಳನೇಕ
ಭುವನದೆಣಿಕೆಗೆ ದಕ್ಕೀತೇ ಲಯಕಾರನ
ಮಾಯೆಯೊಳಗಿನ ರಾಮನ ಲೆಕ್ಕ

ಹೆಣಗಳ ಸೇತುವೆಯ ಕೊನೆಗೆ
ನಂಬಿಕೊಂಡ ಅಮರ ದೇವಲೋಕ
ಸಕ್ಕರೆಯಿರುವಲ್ಲಿ ಹೊರಟಿದೆ
ಹುಡುಕಾಟದ ಇರುವೆಗಳ ಮೆರವಣಿಗೆ
ಮುಕ್ತಿಯೆಂದವರಲ್ಲೀಗ ಹೇಳತೀರದ ಹಿಂಜರಿಕೆ
ತುಂಬಿದೆ ಜಗವೆಲ್ಲಾ ಕಮಟು ಜೀವದ ವಾಕರಿಕೆ

‍ಲೇಖಕರು Avadhi

25 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading