ಮೂಲ: ಪ್ರವಾಸಿನಿ ಮಹಾಕೂಡ್

ಕನ್ನಡಕ್ಕೆ: ಭಾಗ್ಯ ಸಿ ಎಚ್
ಬಾಲ್ಯ
೧
ಭಯ, ಅಲ್ಲಿ ಭಯವಿತ್ತು, ಬರೀ ಭಯ
ಭಾನುವಾರವನ್ನುಳಿದು, ಬಾಲ್ಯದ ಎಲ್ಲ ರಾತ್ರಿಗಳಲ್ಲೂ.
ಅವಳಿಗೆ ಅಷ್ಟಿಷ್ಟು ಲೆಕ್ಕ ತಿಳಿದಿತ್ತು; ಶಿಕ್ಷಕಿಯ ಬೈಗುಳ ಅವಳ ಕಂಗಳಲ್ಲಿ ಮಡುಗಟ್ಟಿತ್ತು.
ಪರೀಕ್ಷೆ ಹತ್ತಿರ ಬಂದಾಗ, ಜ್ವರ,ಜ್ವರ.
ದುರ್ಬಲ ಚಿಲ್ಟಾರಿ ಶರೀರವು ತಾಯಿಯ ಸೆರಗಿನ
ತುದಿಯನ್ನು ಆಶ್ರಯಿಸಿತು.
ತಾಯಿಗೆ ಸಮಯವಿರಲಿಲ್ಲ
ಅವಳೊಂದು ದೇಹವಾಗಿ ಹಾಸಿಗೆಯ ಮೇಲೆ ಬಿದ್ದಿರುತ್ತಿದ್ದಳು.
ಭಯ,ಅಲ್ಲಿ ಭಯವಿತ್ತು, ಬರೀ ಭಯ.
೨
ಅವಳ ಎಳೆಯ ಶರೀರವು ಅಸಂಖ್ಯ ಕನಸುಗಳನ್ನು ಹೊತ್ತು ತೊನೆಯುತ್ತಿದ್ದಾಗ
ಅವಳಿಗೆ ಮಳೆಹನಿಗಳ ಸದ್ದು ಕೇಳಲು ಆಸೆ,
ಆದರೆ ಸಿಡಿಲಿನ ಭಯ.
ಮಳೆಯು ತಾಯಿಯನ್ನು ಆತಂಕಗೊಳಿಸುತ್ತಿತ್ತು.
‘ ಆಕೆ’ ಅಜ್ಜನಿಗೆ ಸಮಯಕ್ಕೆ ಸರಿಯಾಗಿ ಚಹಾ ಕೊಟ್ಟಳೋ ಇಲ್ಲವೋ?
ಮಳೆಗಾಲಕ್ಕೆ ಮೊದಲು ಅವ್ವ ಅವಳನ್ನು
ಅಜ್ಜ ಅಜ್ಜಿಯರ ಮನೆಗೆ ಕರೆದೊಯ್ಯುತ್ತಿದ್ದಳು.
ಅವಳು ಮೊದಲ ಬಾರಿಗೆ ಅಜ್ಜನ ಬಾಯಿಂದ ರಾಮಾಯಣ, ಭಾರತ ಕೇಳಿದ್ದಳು.

೩.
ಬಾಲ್ಯದಲ್ಲಿ ಅವಳಿಗೆ
ತಾಯಿಯು ಮೈತುಂಬಾ ಒಡವೆ ಹಾಕಿಕೊಳ್ಳುವುದು ಆಪ್ಯಾಯಮಾನವಾಗಿತ್ತು,
ಗೊತ್ತೇ ಆಗದ ಹಾಗೆ ಚಹಾ ಕದಿಯುವುದು ಕೂಡಾ.
ಇಂಥವೇ ಕೆಲ ಸಂಗತಿಗಳು ಅವಳಿಗೆ ಖುಷಿ ಕೊಡುತ್ತಿತ್ತು-
ತಂದೆಯ ನಶೆಯ ಕಣ್ಣುಗಳಿಂದ ದೂರ ಇರುವುದು,
ಹೆದ ಹೆದರಿಕೊಂಡೇ ಉಪ್ಪಿನಕಾಯಿಗೆ ಒಣಹಾಕಿದ್ದ
ಮಾವಿನಕಾಯಿ ಚೂರುಗಳನ್ನು ಲಪಟಾಯಿಸುವುದು,
ದೋ..ಡ್ಡವಳಾಗಿ ಅಮ್ಮನ ಸೀರೆ ಉಡುವುದು, ಹೀಗೆ..
ಅವಳ ಪುಟ್ಟ ಶರೀರವನ್ನು ದಾರಿ ತಪ್ಪಿಸುವ, ಪಟ್ಟಿ ಮಾಡಲೂ ಆಗದ ಕೆಲವು ಭಯಂಕರ ಆಸೆಗಳು!.
೪.
ಅವಳ ಬಾಲ್ಯವು ಯಾವಾಗ ಹಾರಿಹೋಯಿತು
ಸ್ಪಷ್ಟವಾಗಿ ತಿಳಿದಿಲ್ಲ.
ಅದಿನ್ನೂಅವಳ ಪುಸ್ತಕದೊಳಗಿಂದ ಇಣುಕುತ್ತಿದೆ,
ಕೈ ಬೀಸಿ ಕರೆಯುತ್ತಿದೆ.
‘ಬಾ.,ಬಾ., ಇದು ಈಗಲೂ ನಿನ್ನ ದೇಹವೇ,
ಎಲ್ಲ ಕೊಳೆ ಧೂಳನ್ನು ನಿನ್ನ ಬೆರಳುಗಳಿಂದ ತೊಡೆದುಹಾಕು”.
ಅವಳು ಕೈ ಚಾಚುತ್ತಾಳೆ, ಅದು ನಡುಗುತ್ತದೆ.
ಬಾಲ್ಯವು ಅವಳ ಪ್ರೀತಿಯ ಶಾಲಾಪುಸ್ತಕದ ಮುಚ್ಚಿದ
ಪುಟಗಳ ಒಳಗೆ ಏನೇನೂ ಬದಲಾಗದೆ ಉಳಿದಿದೆ.
ಭಸ್ಮವಾದ ಕನಸುಗಳ ಮುಷ್ಟಿಯೊಳಗಿಂದ ಅದು ಯಾವಾಗ ತಪ್ಪಿಸಿಕೊಂಡಿತೆಂದು ಹೇಳುವುದು ಕಷ್ಟ.

೫.
‘ಚಿಟ್ಟೆಯನ್ನು ಹಿಡಿಯಬೇಡ ಮಗೂ’,
ಅಮ್ಮ,ಸಾಯುವ ಮೊದಲು ಉಪದೇಶಿಸಿದ್ದಳು,
‘ಪಾಪಮಾಡುವುದನ್ನು ನೋಡಬೇಡ,ನಿನ್ನ ಕಣ್ಣುಗಳು ಕುರುಡಾಗುತ್ತವೆ’.
ಆದರೂ ಅವಳು ನಿಷೇಧಗಳನ್ನು ಒಂದು ರಾತ್ರಿ ಕಂಡಳು,
ಆಕಸ್ಮಿಕವಾಗಿ, ಹಠಾತ್ತನೆ, ಅರಿವಿಲ್ಲದೆ.
ತುಸು ತಡವಾಗಿ ಮನೆಗೆ ಮರಳುತ್ತಿದ್ದಳು, ಕತ್ತಲಾಗಿತ್ತು.
ಎಲ್ಲವೂ ಅಸ್ಪಷ್ಟ, ಅವಳಿಗೆ ಅಳುಬರುತ್ತಿತ್ತು, ಕುರುಡಾಗಿಬಿಟ್ಟೆ ಅನಿಸಿತು.
ಅಂತೂ ಬೆಳಗ್ಗೆ ಸೂರ್ಯ ಹುಟ್ಟುವುದನ್ನು ಕಂಡಾಗ ಅವಳಿಗೆ ಖುಷಿಯಾಯ್ತು.
ಓ.., ಅಮ್ಮನೂ ಸುಳ್ಳು ಹೇಳುತ್ತಾಳೆ, ಅಂದುಕೊಂಡಳು.
ಅಂದಿನಿಂದ ಕೆಲದಿನಗಳವರೆಗೆ ಅವಳಿಗೆ ಯಾವುದೇ ಚಿಂತೆ ಇರಲಿಲ್ಲ.






0 Comments