ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಗುರಿಯೇ ತೀರುವುದು. ಸರಿಯಲ್ಲವೇ..? 

‘ಮಗುವಿನೊಡನೆ ಮಾತು…’

-ವಸುಂಧರಾ ಕದಲೂರು

ನೋಡು ಕಂದಾ ರಸ್ತೆ ಬದಿಯಲ್ಲಿ ನಡೆಯುತ್ತಾ ಹೋಗುವಾಗ ನೀನೇನು ಕಾಣುತ್ತೀಯಾ?

ಅಕ್ಕಪಕ್ಕದ ಸಾಲು ಮರಗಳನ್ನು ಅಲ್ಲವೇ?

ಸರಿ, ಅದೇ ಮರವನ್ನು ಮತ್ತೂ ಸೂಕ್ಷ್ಮ ನೋಡಿ ಹೇಳು ಮತ್ತೇನು ಕಂಡೀತು..?

ಆ ಮರದ ಕೈಗೆಟಕುವ ತೊಗಟೆ ಗೀಚಿದ್ದು, ಕೆತ್ತಿದ್ದು, ತೂತು ಮಾಡಿದ್ದು, ಕೈಗೆ ಸಿಕ್ಕ ರೆಂಬೆ ಮುರಿದದ್ದು. ಸರಿಯೇ?

ಹೌದು ನೂರಕ್ಕೆ ನೂರು ಸತ್ಯ. ಹಾಗೇ ಮುಂದುವರಿದು ಹೇಳು ನೋಡೋಣ ಮತ್ತೇನು ಕಂಡಿದೆ ನಿನಗೆಂದು.?

ಕೈಗೆಟುಕದ ಎತ್ತರದ ಕೊಂಬೆ ಚಿಗುರಿರುವುದು, ಕಾಯಿ- ಹಣ್ಣು – ಹೂ ಬಿಟ್ಟು ನಳನಳಿಸುವುದು, ಆಕಾಶಕ್ಕೆ ಮುತ್ತಿಡುವುದು, ಸೂರ್ಯನಿಗೆ ನಮಸ್ಕಾರ ತಿಳಿಸುವುದು, ಗಾಳಿಗೆ ಮೈಯೊಡ್ಡುವುದು, ಹಕ್ಕಿಗಳನು ಕೂರಿಸಿ ಜೋಕಾಲಿ ಆಡಿಸುವುದು, ಅಳಿಲುಗಳಿಗೆ ಜಾರುಬಂಡಿ ಮಾಡಿಸುವುದು, ತನ್ನ ಚೆಲುವನ್ನು, ಛಲವನ್ನು ಜಗತ್ತಿಗೆ ಸಾರುವುದು..

ನಿಜ ನಿಜ , ನೀ ಹೇಳುವುದೆಲ್ಲಾ ನಿಜ. ಆದರೆ ನೀನು ಹಾಗೆ ಬರೀ ಎತ್ತರ ನೋಡಿದರೆ ಸಾಕೇ.? ಮರದ ಆಳಕ್ಕಿಳಿದು ಯೋಚಿಸೊಮ್ಮೆ…

ಹಾ..! ಅದೀಗ ಸರಿಯಾದ ಮಾತು. ಮರದ ಆಳ ಎಂದರೆ, ಗಟ್ಟಿ ನೆಲತಬ್ಬಿ ಮಣ್ಣೊಳಗೆ ಹುದುಗಿ, ಜೀವರಸ ಹೀರಿ, ಮೇಲು ಮೇಲಿನವರೆಗೆ ಚಾಚಿದ ತುದಿವರೆಗೆ ನಿರಂತರ ಉಣಲಿಕ್ಕುವುದು. ಆಮೇಲೆ ಯಾರಾದರು ಕಿಡಿಗೇಡಿಗಳು ಬುಡಮಟ್ಟ ಕಡಿದರೂ ಮತ್ತೆ ಚಿಗುರಿ ಎದ್ದು ನಿಲ್ಲುವೆನೆಂಬ ಛಾತಿ ತೋರುವುದು. ಚಿಗುರಿಯೇ ತೀರುವುದು. ಸರಿಯಲ್ಲವೇ..?

ಷಹಬ್ಬಾಷ್..! ಈಗ ನೀನು ಬಾಳಿನ ಪಾಠವನ್ನು ಚೆನ್ನಾಗಿ ಕಲಿತಿರುವೆ. ಬದುಕುವೆ ಬಿಡು.  ನೂರಾರು ವರುಷ ಬದುಕುವ ಮರದಂತೆ. ಹಾ! ಮತ್ತೊಂದು ಮಾತು ಚೆನ್ನಾಗಿ ನೆನಪಿಡು, ನಿನ್ನಂತೆಯೇ ಹಲವು ಲಕ್ಷ ಮರಗಳಿರುತ್ತವೆ ಈ ನೆಲದ ಮೇಲೆ. ನೀನು ಅವುಗಳ ಒಟ್ಟಿಗೇ ಬಾಳಬೇಕು. ಹಾಗೆಯೇ ಒಂದು ಮರಕ್ಕೂ ಎತ್ತರ ಇನ್ನೊಂದು ಮರ ಇರುತ್ತದೆ ಎಂಬುದನು ಎಂದಿಗೂ ಮರೆಯಬಾರದು ಸರಿಯೇ..?

ಆಗಲಿ, ನಾನು ಮರೆಯುವುದಿಲ್ಲ. ಆದರೆ ಆ ಮರ ಮರೆತರೆ..?!

ಅದು ನಿನ್ನ ತಪ್ಪಲ್ಲ ಬಿಡು. ಅಲ್ಪಮತಿಯ ಅಜ್ಞಾನಕ್ಕೆ ನೀನು ಚಿಂತಿಸುವುದರಲ್ಲಿ ಅರ್ಥವಿಲ್ಲ. ನಿನ್ನ ಬದುಕಿನ ಸಾರ್ಥಕ್ಯ ನೀನು ನೋಡು.

‍ಲೇಖಕರು avadhi

2 May, 2020

1 Comment

  1. Ravichandra

    Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading