ಚಳಿಯ ಹಾಡು ಪಾಡು…

ಕಂ ಕ ಮೂರ್ತಿ

ಪಾರಿಜಾತದ ಗಿಡದಲ್ಲಿ ಹೂ ಕಡಿಮೆ ಆಗಿದೆ. ಹಾಲು ಚೆಲ್ಲಿದಂತೆ ಕರಿ ಡಾಂಬರು ರಸ್ತೆಯನ್ನು ತುಂಬಿ ಬೀಳುತ್ತಿಲ್ಲ, ಅಲ್ಲಲ್ಲಿ ರಸ್ತೆ ಅಂಚಿನಲ್ಲಿ ಒಂದೊಂದು ಹೂವುಗಳು. ಅದನ್ನು ಸಂಗ್ರಹಿಸಲು ಬರುವವರೂ ಕಡಿಮೆ ಆಗಿದ್ದಾರೆ. ಮೊದಲೆಲ್ಲ ಬೆಳಿಗ್ಗೆ ಆರಕ್ಕೆ ಬರುತ್ತಿದ್ದವರು‌ ಈಗ ಏಳಾದರೂ ಬರುವುದಿಲ್ಲ. ಚಳಿ ಹಾಗೆ ತಣ್ಣಗೆ ಕೊರೆಯುತ್ತಿದೆ. ಯಾರಿಗೆ ಬೇಕು ಬೆಳಗಿನ‌ ಉಸಾಬರಿ ತಣ್ಣಗೆ ಹೊದ್ದು ಮಲಗಿ ಬಿಡುವುದೇ ಸುಖ. ಹೀಗೆ ಚಾದರವನ್ನು ಬೆಚ್ಚಗೆ ಹೊದ್ದು ಮಲಗುವುದೆಂದರೆ‌ ಕನಸನ್ನು‌ ಮೆಲಕು ಹಾಕುವುದು. ನಾಳೆಯೋ ನಾಡಿದ್ದೋ ಅರಳಲಿರುವ ಕನಸನ್ನು ಅಥವಾ ಈಗಾಗಲೇ ಸತ್ತು ಹೋಗಿರುವ ಕನಸನ್ನು ನೆನೆದು‌ ಮೂಸಿ ನೋಡುವುದು. ಹೀಗೆ ಎಲ್ಲ ಉಸಾಬರಿಗೆ ಮುಸುಕಿ ಹಾಕಿಕೊಂಡು‌ ಮಲಗಿ‌ ಕನಸಿನ ಜತೆ ಕನವರಿಸುತ್ತ ಸುಮ್ಮನೆ ಇದ್ದು ಬಿಡುವುದು ಎಷ್ಟು ಖುಷಿ.

ಚಳಿಗೆ ಒಂದು ಗುಣವಿದೆ. ಅದು ನಮ್ಮ‌ಸೋಮಾರಿತನವನ್ನು ಬೆಚ್ಚಗಾಗಿಸುತ್ತದೆ. ಮಗುವಿನಂತೆ ನಮ್ಮನ್ನು ಎತ್ತಿಕೊಂಡು ತೊಟ್ಟಿಲಿಗೆ ಹಾಕಿ ತೂಗಿ ಜೋಗುಳ ಹಾಡುತ್ತದೆ. ಹೊರಗೆ ಹೋಗಬೇಡ ಗುಮ್ಮ ಇದೆ, ಇನ್ನೊಂದಿಷ್ಟು ಹೊತ್ತು ಮಲಗು ಎಂದು ಮುದ್ದು ಮಾಡಿ ಹೇಳುತ್ತ ಬೆಚ್ಚನೆಯ ಚಾಮರ ಬೀಸುತ್ತಲೇ ಇರುತ್ತದೆ. ಚಳಿಯಲ್ಲಿ ಮನಸ್ಸಿನ ಉದ್ವಿಗ್ನತೆ ಕಡಿಮೆ ಎನ್ನುವುದು, ಇದನ್ನು ಯಾರಾದರೂ ಅಧ್ಯಯನ‌ ಮಾಡಿ ಹೇಳಬೇಕು.

ಆದರೆ ಒಂದು‌ ಮಾತಂತೂ ನಿಜ ಅದು ತಾಯಿಯಂತೆ ಅಪ್ಪಿ ಸಂತೈಸುತ್ತದೆ. ಹೊದ್ದಿರುವ ಬೆಡಶೀಟ್ ಅನ್ನು ತೆಗೆದು ಬಿಸಾಕಿ ಅದನ್ನು ಹಾಗೆಯೇ‌ ನಿರುದ್ವಿಗ್ನತೆಯಿಂದ ಅನುಭವಿಸಬೇಕು ಅನಿಸುತ್ತದೆ. ಈ ಚಳಿಯೊಂದು ಇಲ್ಲದಿದ್ದರೆ ಎದುರಿನ ಹೊಂಗೆ‌ಮರದಲ್ಲಿ ಕಾಗೆ ಮರಿಯೊಂದು ತನ್ನ ತಾಯಿಗೆ ಮೈ ಅಂಟಿಸಿ ಕೂತ ಚಿತ್ರ ಕಾಣಿಸುತ್ತ ಇರಲಿಲ್ಲವೇನೋ?

ಹೇಗೋ ಮೈ ಕೊಡವಿಕೊಂಡು ತಲೆಗೆ ಉಲ್ಲನ್ ಟೋಪಿ ಹಾಕಿಕೊಂಡು ಕೆರೆಗೆ ಪ್ರದಕ್ಷಿಣೆ ಹಾಕಲು ಬಂದರೆ ಎಲ್ಲರೂ ನನ್ನಂತೆ ಕಾಣುತ್ತಾರೆ. ಒಂದು ಅಂಗುಲ ಮೈಯ್ಯೂ ಕಾಣದಂತೆ ಎಂತೆಂತೋ ಹೊದ್ದಿದ್ದಾರೆ. ಉಲ್ಲನ್ ಬಟ್ಟೆಯ ಗಂಟಿನಂತೆ ವೇಷ ಮಾಡಿಕೊಂಡು ಆಕಳಿಸುತ್ತ ನಡೆಯುತ್ತಿದ್ದರೆ ಅವರ ಬಾಯಿಂದ ಹೊರಡುವ ಹೊಗೆ ಉದಾಸೀನವಾಗಿ ಪರಿಸರಕ್ಕೆ ಹರಡುತ್ತದೆ.

ಅಲ್ಲಾದರೂ ಅಂತ ಚೈತನ್ಯ ಏನಿದೆ? ಕೆರೆಯ ನೀರಿನಲ್ಲಿ ಆವಿ ಸೋಮಾರಿಯಂತೆ ಏಳುತ್ತಿದೆ.‌ ಆಕಾಶದಲ್ಲಿ ‌ಕಣ್ಣು ಬಿಡುತ್ತಿರುವ ಸೂರ್ಯನಿಗೂ ಉತ್ಸಾಹವಿಲ್ಲ. ಎಳೆಕಂದ ಬಾಯಿ ತೆರೆದಂತೆ ಕಾಣುತ್ತಿದ್ದಾನೆ. ಕೆರೆಯ ಮರದ ಮೇಲೆ ಬಿಳಿ ರೆಕ್ಕೆಯ ಗರುಡ ಸೋಮಾರಿಯಂತೆ ಮಲಗಿದೆ. ಬಾತುಗಳು ನಾಳೆ ಎದ್ದರಾಯಿತು ಎಂದು ಆಕಳಿಸುತ್ತಿವೆ. ಬಣ್ಣದ ಗರಿಗಳ ಬಿಚ್ಚಿ ಬೆಳಗಿನ ರಂಗಿಗೆ ಮತ್ತೇರಿಸುತ್ತಿದ್ದ ನವಿಲುಗಳು ಹಸಿರು ಉಡಿಯಿಂದ ಹೊರ ಬಂದೇ ಇಲ್ಲ.

ಠಣಕ್ ಎಂದು ಶಬ್ಧ ಮಾಡುತ್ತ ಮನದ ಚೈತನ್ಯವನ್ನು ಅರಳಿಸುತ್ತಿದ್ದ‌ ಮೀನು ಎಲ್ಲಿ ಪಾತಾಳ ಸೇರಿವೆಯೋ?
ಆದರೂ ಏನು ಸುಖ. ಮೈ‌ಕೊರೆಯುವ ಚಳಿಯಲ್ಲಿ ವೀರ ಯೋಧರಂತೆ ಹೆಜ್ಜೆ ಹಾಕುವುದು, ಎದುರಿಗೆ ಬಂದವರು ಪರಿಚಿತರಾದರೂ ಗುರುತಿಸುವುದು ಕಷ್ಟ. ಮೈ ತುಂಬಿರುವ ಬಟ್ಟೆ, ಅವರ ನಡಿಗೆಯ ಲಾಲಿತ್ಯದಿಂದಲೇ ಗುರುತಿಸಬೇಕು. ಸಣ್ಣಗೆ ಹಿಮ ಬೀಳುತ್ತಿರುವ ಈ ಬೆಳಗಿನ ಹೊತ್ತು ಎಲ್ಲ ಎಷ್ಟು ಚೆಂದ ಕಾಣುತ್ತಾರೆ. ಒಬ್ಬರನೊನ್ನಬ್ಬರು ತಬ್ಬಿ ನಡೆಯುವ ಜೋಡಿಗಳು ಚಳಿಗಾಳವೇ ಇರಲಿ ಎಂದು ಹಾರೈಸುತ್ತವೆ. ಮುಂದೆ ಬರುವುದು ಬಿರು ಬೇಸಿಗೆ. ಬದುಕು ನಾವೆಣಿಸಿದಂತೆ ಇರುವುದಿಲ್ಲ ಮಾರಾಯರೆ ಎಂದು ಹೇಳಲು ಮನಸ್ಸು ಬರುವುದಿಲ್ಲ. ಏಕೆಂದರೆ ಸುಖದ‌ ಕಾವಿನಲ್ಲಿ ಇರುವಾಗ ಕಷ್ಟವನ್ನು ನೆನೆಯಬಾರದು.

ಯಾರೋ ದೋಣಿಯಲ್ಲಿ ಮೀನು‌ ಹಿಡಿಯುತ್ತಿದ್ದಾರೆ.‌ಮುಂದಿನ ತಿಂಗಳು ಕೆರೆ ಹೊಳೆತ್ತುತ್ತಾರಂತೆ. ಆಗ ಸಾಯವ ಮೀನನ್ನು ಈಗಲೇ‌ ಹಿಡಿದು ಬಿಡುವ ಕಾಯಕ. ಒಂದಲ್ಲ, ಸಹಸ್ರಾರು ಜಲಚರಗಳಿವೆ ಅವುಗಳ ಪಾಡೇನು? ಯೋಚಿಸಿದರೆ ಸಂಕಟವಾಗುತ್ತದೆ. ಚಳಿಗಾಲ ಕಳೆದು ಬೇಸಿಗೆ ಬರುವ ಹೊತ್ತಿಗೆ ಕೆರೆ ಹೊಸ ನೀರಿನಲ್ಲಿ ಶೃಂಗಾರಗೊಂಡಿರುತ್ತದೆ. ಮತ್ತೆ ಹೊಸ ಮಿಲನ, ಹೊಸ ಹುಟ್ಟು.‌ ಹೊಸ‌ ಮೀನು, ಹಕ್ಕಿಗಳ ಹಾಡು. ಸೃಷ್ಟಿ ನಿರಂತರ.

ಥತ್ತೇರಿ, ಎಂತ ಚಳಿ ಅನಿಸಿದಾಗ ಊರಿನ ಅಮ್ಮ ನೆನಪಾಗುತ್ತಾಳೆ. ಬೆಳಿಗ್ಗೆ ಐದಕ್ಕೆ ಎದ್ದು ಒಲೆಗೆ ಬೆಂಕಿ ಹಾಕಿ ಇಷ್ಟೊತ್ತಿಗೆ ಹಾಲು ಕರೆದು, ದೇವರಿಗೆ ತುಪ್ಪದ ದೀಪ ಹಚ್ಚಿಟ್ಟು ಎಲ್ಲಿಯೋ ಇರುವ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಕೊಟ್ಟಿಗೆಯ ಹಸುವಿಗೆ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತ ಅಗಳದಲ್ಲಿ ಆಗತಾನೇ ಅರಳಿದ ತುಂಬೆ ಗಿಡದ ಬುಡಕ್ಕೆ ತಂಬಿಗೆ ನೀರು ಹಾಕಿ ನಿಂತ ಅವಳ ಭಂಗಿ ಕಣ್ಮುಂದೆ ಕಾಣುತ್ತದೆ. ಎಲ್ಲ ಅಮ್ಮಂದಿರೂ ಹಾಗೆ.

ಚಳಿಗೆ ಮೈಯೊಡ್ಡಿ ನಿಲ್ಲಬೇಕು ಎಂಬ ಬಯಕೆ ಆಗುತ್ತದೆ. ಏಕೆಂದರೆ ಅದಕ್ಕೆ ಪ್ರೀತಿಯನ್ನು ಅರಳಿಸುವುದು ಗೊತ್ತು. ಕೆರಳಿಸುವುದು ಗೊತ್ತು. ಬೆಚ್ಚಗೆ ಆಗಬೇಕಾದರೆ ಮೊದಲು ತಣ್ಣಗಾಗಬೇಕು.

ಪರವಾಗಿಲ್ಲ, ಪಾರಿಜಾತದ ಗಿಡ ಬೇಸಿಗೆಯಲ್ಲಿಯೇ ಜೊಂಪೆಜೊಂಪೆ ಹೂ ಬಿಡಲಿ, ಈಗ ಎಲೆ ಹಸಿರಾಗಿದೆಯಲ್ಲ ಅಷ್ಟೇ ಸಾಕು. ಏಕೆಂದರೆ ಅದರ ಎಲೆಯೊಂದರ ಮೇಲೆ ಯಾವುದೋ ಕೀಟ ಎಷ್ಟು ಸಮಾಧಾನದಿಂದ ಗೂಡು ಕಟ್ಟಿದೆ ಎಂದರೆ ಅದಕ್ಕೆ ಕಾಲದ ಹಂಗೇ ಇಲ್ಲ.

ಕಾಲದ ಹಂಗಿಲ್ಲದೇ ಬದುಕುವುದು ಧ್ಯಾನಸ್ಥ ಸ್ಥಿತಿ. ಅದಕ್ಕೆ ಹಂಬಲಿಸದವರು ಯಾರು?.

‍ಲೇಖಕರು Admin

November 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: