ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಚಳವಳಿ ಇಂದು ಮತ್ತೆ ಮರುಕಳಿಸಬೇಕಿದೆ…’ – ಅಪ್ಪಗೆರೆ ಸೋಮಶೇಖರ್

ಹೆಣ್ಣಿನ ಗೋಳಟ್ಟಿ ಬನ್ನಿಯ ಮರಬೆಂದೊ…

– ಅಪ್ಪಗೆರೆ ಸೋಮಶೇಖರ್

‘ಹೆಣ್ಣಿನ ಗೋಳಟ್ಟಿ ಬನ್ನಿಯ ಮರಬೆಂದೊ
ಅಲ್ಲಿ ಸನ್ಯಾಸಿ ಮಠಬೆಂದೊ ಹಾರುವರ
ಪಂಚಾಂಗಕತ್ತಿ ಉರಿದಾವೊ’
ನಮ್ಮ ದೇಶ ಕಂಡಂತಹ ಪ್ರಾಮಾಣಿಕ ಹಾಗೂ ಸ್ವಾಭಿಮಾನಿ ಘನತೆವೆತ್ತ ರಾಷ್ಟ್ರಪತಿಯಾಗಿದ್ದ ಶ್ರೀ ಕೆ. ಆರ್. ನಾರಾಯಣ್ ಅವರು ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ : ಭಾರತೀಯರಾದ ನಾವು ಈ ಹಿಂದೆ ಗಾಂಧೀಜಿಯವರನ್ನ ಕೊಂದು ಅಪರಾಧಿಗಳಾಗಿ ಇಡೀ ಜಗತ್ತಿನ ಎದುರು ತಲೆತಗ್ಗಿಸಿದ್ದೆವು. ಅದೇ ರೀತಿ ಇಂದು ಭಾರತೀಯರಾದ ನಾವು ಸಹ ಧಮರ್ೀಯರ ಪ್ರಾರ್ಥನಾ ಮಂದಿರವನ್ನು ಧ್ವಂಸ ಮಾಡುವ ಮೂಲಕ ಮತ್ತೊಮ್ಮೆ ಇಡೀ ಜಗತ್ತಿನ ಎದುರು ಅಪರಾಧಿಗಳಾಗಿ ತಲೆತಗ್ಗಿಸಿದ್ದೀವಿ ಎಂದು ಹೇಳಿದ್ದರು. ಹಾಗೆಯೇ ದೇಶಾದ್ಯಂತ ಇಂದು ಹೆಣ್ಣಿನ ಮೇಲೆ ನಡೆಯುತ್ತಿರುವ ಅಸಂಖ್ಯಾತ ಅತ್ಯಾಚಾರದ ಪ್ರಕರಣಗಳಿಂದಾಗಿ ಭಾರತೀಯ ನಾಗರೀಕರೆಲ್ಲ ಇಡೀ ಜಗತ್ತಿನೆದುರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಪರಂಪರೆಯ ಉದ್ದಕ್ಕೂ ಭಾರತೀಯ ಸಂಸ್ಕೃತಿಯ ಸಂಕೇತವೆಂಬಂತೆ ಹೆಣ್ಣನ್ನು ಭಾವನಾತ್ಮಕವಾಗಿ, ಭೂಮಿ ನದಿ ನಿಸರ್ಗದ ಹಿನ್ನೆಲೆಯಲ್ಲಿ ದೈವೀಕರಿಸಿ ವೈಭವಿಕರಿಸುತ್ತಾ ಬರಲಾಗಿದೆ. ಆದರೆ, ಅದೇ ಸಮಾಜ ಇಂದು ಹೆಣ್ಣಿನ ಮೇಲೆ ಅವ್ಯಾಹತವಾಗಿ ನಡೆಸುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆಯಂತಹ ದೌರ್ಜನ್ಯದ ಪ್ರಕರಣಗಳನ್ನು ಗಮನಿಸಿದರೆ ಈ ಜಾತಿವಾದಿ ಪುರುಷ ಪ್ರಧಾನ ಸಮಾಜದ ಕರಾಳತೆಯ ಮುಖಗಳು ಅನಾವರಣಗೊಳ್ಳುತ್ತವೆ. ಅದರಲ್ಲಿಯೂ ಮೂರು-ನಾಲ್ಕು ವರ್ಷದ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರವಂತೂ ಪುರುಷನ ಆಳದಲ್ಲಿರುವ ಕಾಮುಕತೆಯ ಕ್ರೌರ್ಯ ಹಾಗೂ ಅದರ ಅಮಾನವೀಯತೆ ಭಯಾನಕ ಸ್ವರೂಪ ಅರ್ಥವಾಗುತ್ತದೆ. ಪ್ರಸ್ತುತ ಜಗತ್ತು ಎಷ್ಟೆಲ್ಲಾ ಆಧುನಿಕತೆ, ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಗತಿಯ ಉತ್ತುಂಗ ಸ್ಥಿತಿಯನ್ನು ಮುಟ್ಟಿದೆ ಎನ್ನುವಾಗಲೂ ಸಹಾ, ಮನುಷ್ಯ ಮಾತ್ರ ದಿನೇದಿನೆ ಅಂತಃಕರಣವನ್ನ ಕಳೆದುಕೊಂಡು ವಿಕೃತ ಅನಾಗರೀಕತೆಯ ಕಡೆಗೆ ಮುಖಮಾಡಿದ್ದಾನೆ ಎಂದೆನಿಸುತ್ತದೆ. ಹಿಂದೆಂದಿಗಿಂತಲೂ ಇಂದು ಸಮಾಜದ ಮಾನಸಿಕರೋಗ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ನಮ್ಮ ಪರಂಪರೆಯಲ್ಲಿ ಮಹಿಳಾ ದೌರ್ಜನ್ಯದ ಬಹುದೊಡ್ಡ ಚರಿತ್ರೆಯೆ ಇದೆ. ಸತಿಸಹಗಮನ ಪದ್ಧತಿ, ಮಾಸ್ತಿಕಲ್ಲು(ಎಲ್ಲಿಯೂ ನಮಗೆ ಒಂದೇ ಒಂದು ಮಹಾಪತಿಯರ ಕಲ್ಲು ಸಿಗುವುದಿಲ್ಲ!), ವಿಧವಾ ಪದ್ಧತಿ, ಬಸವಿ ಬಿಡುವುದು, ಬೆತ್ತಲಸೇವೆ, ಬೇವಿನುಡುಗೆ, ಗಂಧದುಡುಗೆ ಸೇವೆ, ಓಕುಳಿ ಆಚರಣೆ, ದೇವದಾಸಿ ಪದ್ಧತಿ, ಕೆರೆಗೆಹಾರದಂತಹ ಜನಪದ ಕಥನಗಳು ಸಾಕ್ಷಿ ನುಡಿಯುತ್ತವೆ. ಪುರಾಣದ ಸ್ತ್ರೀ ಪಾತ್ರಗಳಾದ ಸೀತೆ, ಅಹಲ್ಯೆ, ಸೂರ್ಪನಖ, ದ್ರೌಪದಿ ಮುಂತಾದವರು ಶೋಷಿತ ಸ್ತ್ರೀ ಸಮುದಾಯದ ಪ್ರತಿನಿಧಿಗಳೆ ಸರಿ. ದ್ರಾವಿಡ ಪ್ರಣೀತ ಮಾತೃ ಪ್ರಧಾನ ವ್ಯವಸ್ಥೆಯನ್ನು ಹತ್ತಿಕ್ಕುವ ಮೂಲಕ ಅಸ್ತಿತ್ವಕ್ಕೆ ಬಂದ ಆರ್ಯ ಪ್ರಣೀತ ಪಿತೃ ಪ್ರಧಾನ ಸಮಾಜದ ಆಳದಲ್ಲಿಯೇ ಸ್ತ್ರೀ ವಿರೋಧಿ ಧೋರಣೆ ಇದೆ. ಮಹಿಳಾ ಶೋಷಣೆಯ ಆಚರಣೆಗಳಿಗೆ ಧರ್ಮ, ಸಂಸ್ಕೃತಿ, ಶಾಸ್ತ್ರ, ಸಂಪ್ರದಾಯ, ಶಿಷ್ಟಾಚಾರದ ಮುದ್ರೆಯೊತ್ತುವ ಮೂಲಕ ಸ್ವತಃ ಮಹಿಳೆಯರೆ ಅಂಗೀಕರಿಸಿ ಪಾಲಿಸುವಂತಹ ಹುನ್ನಾರವನ್ನು ಎಣೆಯಲಾಗಿದೆ. ಮಹಿಳೆಯರನ್ನು ಅನಾದಿಕಾಲದಿಂದಲೂ ಅರಿವಿನ ಪ್ರಕ್ರಿಯೆಯಿಂದಲೇ ಹೊರಗಿಡುವ ಮೂಲಕ ಮೌಢ್ಯ, ಕಂದಾಚಾರದ ಕಂದಕಕ್ಕೆ ದೂಡಲಾಗಿದೆ. ‘ಮಹಿಳೆಯರು ಎಲ್ಲಿ ಗೌರವಿಸಲ್ಪಡುತ್ತಾರೊ, ಪೂಜಿಸಲ್ಪಡುತ್ತಾರೊ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎಂದು ಹೇಳುವ ಮನುಧರ್ಮಶಾಸ್ತ್ರವೇ, ‘ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ’ ಎಂದು ಹೇಳುವ ಮೂಲಕ ಮಹಿಳೆ ಕೇವಲ ಪುರುಷನ ಉಪಭೋಗದ ವಸ್ತು ಎಂಬುದನ್ನು ಅಧಿಕೃತಗೊಳಿಸುತ್ತದೆ. ಈ ಕಾರಣದಿಂದಲೇ ವೇದ ಶಾಸ್ತ್ರ ಪುರಾಣ ಆಗಮಾದಿಗಳೆಲ್ಲಾ ನಂಬಿಕೆ ಕಳೆದುಕೊಂಡು ಪ್ರಶ್ನೆಗೆ ಗುರಿಯಾಗಿದ್ದು.

ಗೌತಮ ಬುದ್ಧನ ಕಾಲದಿಂದಲೂ ಸಹಾ ಮಹಿಳಾ ಸ್ವಾತಂತ್ರ್ಯ, ಸ್ವಾವಲಂಬನೆ, ಸಮಾನತೆ, ಸಬಲೀಕರಣದ ಚರ್ಚೆಗಳು ಗಂಭೀರವಾಗಿ ನಡೆದುಕೊಂಡು ಬಂದಿದೆ. ಸ್ವತಃ ಬುದ್ಧನೆ ಮಹಿಳೆಯರನ್ನು ತನ್ನ ಸಂಘದಲ್ಲಿ ಸೇರಿಸಿಕೊಳ್ಳಬೇಕೆ ಬೇಡವೆ ಎಂಬ ಗೊಂದಲದಲ್ಲಿದ್ದಾಗ, ತನ್ನ ಶಿಷ್ಯ ಆನಂದನ ಒಟ್ಟಿಗಿನ ತಾತ್ವಿಕ ಚರ್ಚೆ ತರುವಾಯ ಸ್ಪಷ್ಟತೆಯನ್ನ ಕಂಡುಕೊಂಡು ಆನಂತರದಲ್ಲಿ ಮಹಿಳಾ ಸಮಾನತೆಯನ್ನು ಪ್ರತಿಪಾದಿಸುತ್ತಾನೆ. ಆ ಕಾರಣದಿಂದಲೇ ಬುದ್ಧನಿಗೆ ಆಮ್ರಪಾಲಿಯಂತಹ ವೇಶ್ಯಾ ವೃತ್ತಿಯಲ್ಲಿ ತೊಡಗಿದ್ದ ಹೆಣ್ಣು ಮಗಳ ಮನಸ್ಸನ್ನ ಪರಿವರ್ತಿಸಿ ತನ್ನ ಸಂಘದಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಲಿಕ್ಕೆ ಸಾಧ್ಯವಾಗಿದ್ದು. ಬಹಳ ಮುಖ್ಯವಾಗಿ ಹನ್ನೆರಡನೆ ಶತಮಾನದ ವಚನ ಚಳವಳಿಯು ಮಹಿಳಾ ಸಬಲೀಕರಣದ ಅಗತ್ಯತೆಯನ್ನು, ಸಾಮಾಜಿಕ ಸಂದರ್ಭದಲ್ಲಿ ಮಹಿಳಾ ಪ್ರಾತಿನಿಧ್ಯದ ಅನಿವಾರ್ಯತೆ ಹಾಗೂ ಮಹಿಳಾ ಸಮುದಾಯದ ಅಭಿವ್ಯಕ್ತಿಯ ಪ್ರಾಮುಖ್ಯತೆಯನ್ನು ಮನಗಂಡು ಪ್ರಾಯೋಗಿಕವಾಗಿ ಆಗುಮಾಡಿದ್ದು ಚಾರಿತ್ರಿಕವಾಗಿ ದಾಖಲಾರ್ಹ ಸಂಗತಿಯಾಗಿದೆ.
ಆತರುವಾಯದ ಅನೇಕ ಸಮಾಜ ಪರಿವರ್ತನಕಾರರು ಮಹಿಳಾಪರ ಚಿಂತನೆಗಳನ್ನು ಇನ್ನಷ್ಟು ಖಚಿತ ಪಡಿಸಿದ್ದು, ಅನಾದಿಕಾಲದಿಂದಲೂ ಧರ್ಮ, ಸಂಪ್ರದಾಯ, ಸಂಸ್ಕೃತಿಯ ನೆಪದಲ್ಲಿ ಮಹಿಳೆಯ ಮೇಲೆ ನಡೆಸಲಾಗುತ್ತಿದ್ದ ದೌರ್ಜನ್ಯಗಳನ್ನು ಬಯಲು ಮಾಡಿದ್ದು ಮಹಿಳಾ ಸಮುದಾಯದಲ್ಲಿ ಮಹತ್ವದ ಜಾಗೃತಿಯನ್ನು ಹುಟ್ಟುಹಾಕಿದೆ. ಪ್ರಧಾನವಾಗಿ ಮಹಾತ್ಮ ಜ್ಯೋತಿಬಾ ಫುಲೆ, ಮಾತೆ ಸಾವಿತ್ರಿಬಾಯಿ ಫುಲೆ ದಂಪತಿಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಾಡಿದ ಹಲವು ಸಮಾಜ ಪರಿವರ್ತನ ಚಳವಳಿಯ ಚಟುವಟಿಕೆಗಳು ಸಾಮಾಜಿಕ ಸಂಕಟಗಳಿಂದ ಮಹಿಳೆಯರನ್ನು ಬಿಡುಗಡೆಗೊಳಿಸುವ ದೃಷ್ಟಿಯಿಂದಲೂ ಸಹಾ ಮಹತ್ವದ ಮೈಲುಗಲ್ಲಾಗಿವೆ. ಫುಲೆ ದಂಪತಿಗಳು 1848ರಲ್ಲಿಯೇ ಸ್ಥಾಪಿಸಿದ ದೇಶದ ಪ್ರಥಮ ಹೆಣ್ಣು ಮಕ್ಕಳ ಶಾಲೆ, 1864ರಲ್ಲಿ ಸ್ಥಾಪಿಸಿದ ‘ಮಹಿಳಾ ಸೇವಾ ಕೇಂದ್ರ’, ಅನಾಥಾಲಯ, ವಿಧವಾ ಗರ್ಭಿಣಿ ಸ್ತ್ರೀಯರಿಗಾಗಿ ಪ್ರಸೂತಿ ಗೃಹ ಸ್ಥಾಪಿಸಿದ್ದು; ಸತಿಸಹಗಮನ ಪದ್ಧತಿ, ವಿಧವಾ ಪದ್ಧತಿ, ಜಾತಿಪದ್ಧತಿ, ವಿಧವೆಯರ ಬ್ರೂಣಹತ್ಯೆ, ಶಿಶುಹತ್ಯೆ, ಬಾಲ್ಯವಿವಾಹದ ವಿರುದ್ಧ ಹೋರಾಟ ರೂಪಿಸಿ, ವಿಧವಾ ಪುನರ್ ವಿವಾಹಗಳನ್ನು ಮಾಡಿಸುವ ಮೂಲಕ ವೈಚಾರಿಕ ಕ್ರಾಂತಿಯನ್ನ ನಿರ್ಮಿಸಿದ್ದು ಮಹತ್ವದ ಚಾರಿತ್ರಿಕ ಪಲ್ಲಟವಾಗಿದೆ.
ಈ ಎಲ್ಲಾ ಐತಿಹಾಸಿಕ ಬೆಳವಣಿಗೆಗಳ ಅರಿವಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಮಗ್ರ ಮಹಿಳೆಯರ ಸ್ವಾತಂತ್ರ್ಯ, ಸಮಾನತೆ, ಹಕ್ಕುಬಾದ್ಯತೆಗಳ ಹಿತದೃಷ್ಟಿಯಿಂದ ಸಂವಿಧಾನಬದ್ಧವಾಗಿ ಹೋರಾಡಲಿಕ್ಕೆ ಸಾಧ್ಯವಾಗಿದ್ದು. ಈ ದೇಶದ ಶೋಷಿತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆಯನ್ನು ಕಾನೂನಾಗಿಸಿದ್ದ ಮನುಧರ್ಮಶಾಸ್ತ್ರವನ್ನು ಬಹಿರಂಗವಾಗಿ ಸುಡುವ ಮೂಲಕ ಜಾತಿವಾದಿ ಸಮಾಜಕ್ಕೆ ಮಾರ್ಮಿಕವಾದ ವೈಚಾರಿಕ ಪೆಟ್ಟು ನೀಡಿದರು. 1936ರಲ್ಲಿ ಮುಂಬಯ್ನಲ್ಲಿ ನಡೆದ ದೇವದಾಸಿಯರ ಸಮ್ಮೇಳನದಲ್ಲಿ ಭಾಗವಹಿಸಿ ದೇವದಾಸಿ, ವೇಶ್ಯಾ ಪದ್ಧತಿಯ ವಿಕಾರಗಳನ್ನು ಮನವರಿಕೆ ಮಾಡಿಕೊಟ್ಟು ಆ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಢಿಸಿದರು. 1942ರಲ್ಲಿ ಅಖಿಲ ಭಾರತ ಹಿಂದುಳಿದ ವರ್ಗಗಳ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಹಿಳಾ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯದ ಮಹತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹಿಂದೂ ಪ್ರಣೀತ ಜಾತಿವಾದಿ ಸಮಾಜ ಶತಮಾನಗಳಿಂದ ಮಹಿಳೆಯರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಬಗೆಗೆ ಸ್ಪಷ್ಟ ಅರಿವಿತ್ತು. ಇದನ್ನ ಮನಗಂಡೆ ಭವಿಷ್ಯ ಭಾರತದ ಎಲ್ಲಾ ಜಾತಿ ಸಮುದಾಯದ ಮಹಿಳೆಯರ ಸಮಾನತೆ, ಸ್ವಾವಲಂಬನೆ, ಸಬಲೀಕರಣ ಹಾಗೂ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ, ತಾವು ಕಾನೂನು ಮಂತ್ರಿಯಾಗಿದ್ದಾಗ ‘ಹಿಂದೂಕೋಡ್ ಬಿಲ್’ ಎಂಬ ಖಾಸಗಿ ಮಸೂದೆಯನ್ನು ಮಂಡಿಸಿದರು. ಆದರೆ ಜಾತಿವಾದಿ ಸ್ತ್ರೀ ವಿರೋಧಿಗಳ ಅಸಹಕಾರದಿಂದಾಗಿ ಮಸೂದೆ ಜಾರಿಯಾಗದಿದ್ದಾಗ ‘ಯಾವ ಸಕರ್ಾರ ಮಹಿಳೆಯರ ಹಕ್ಕು ಬಾದ್ಯತೆಗಳನ್ನು ಗೌರವಿಸುವುದಿಲ್ಲವೊ ಅಂತ ಸಕರ್ಾರದಲ್ಲಿ ನಾನು ಇರುವುದಿಲ್ಲ’ ಅಂತ ಹೇಳಿ ಅಸಮಾಧಾನದಿಂದ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಬಹುಶಃ 1951ರಲ್ಲಿಯೇ ‘ಹಿಂದೂ ಕೋಡ್ ಬಿಲ್’ ಮಸೂದೆ ಅನುಷ್ಠಾನಗೊಂಡಿದ್ದರೆ ಇಂದು ಈ ಪ್ರಮಾಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿರಲಿಲ್ಲ.
ಮನುಷ್ಯನ ಮನಸ್ಸು, ಆಲೋಚನೆ, ನಡವಳಿಕೆಗಳು ವಿಕೃತಗೊಂಡಿದ್ದಾವೆ ಎಂಬುದಕ್ಕೆ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯವಾದ ದೌರ್ಜನ್ಯದ ಪ್ರಕರಣಗಳೆ ಸಾಕ್ಷಿ. ಮಾಧ್ಯಮಗಳ ಮೂಲಕ ದಾಖಲಾದ ಪ್ರಕರಣಗಳು ಕೆಲವಾದರೆ, ದಾಖಲಾಗದ ಪ್ರಕರಣಗಳು ಇನ್ನೆಷ್ಟು? ಇಂದು ಮಹಿಳೆ(ಮಕ್ಕಳನ್ನೂ ಒಳಗೊಂಡಂತೆ) ದಿನನಿತ್ಯ ಅಭದ್ರತೆಯಲ್ಲಿ ಆತಂಕದಿಂದ ಬದುಕುವ ವಾತಾವರಣ ನಿಮರ್ಾಣವಾಗಿರುವುದಕ್ಕೆ ಯಾರು ಹೊಣೆಗಾರರು? ಮಾಧ್ಯಮಗಳು ಬಿತ್ತರಿಸುತ್ತಿರುವ ಕಾಮ ಪ್ರಚೋದಿತ ದೃಶ್ಯಾವಳಿಗಳೆ? ತಂತ್ರಜ್ಞಾನ, ಆಧುನಿಕತೆ, ಅಂತರ್ಜಾಲ ತರೆದಿಟ್ಟಿರುವ ಮುಕ್ತ ಮಾಹಿತಿಯ ದುರ್ಬಳಕೆಯೆ? ಮನುಷ್ಯನನ್ನು ಆವರಿಸುತ್ತಿರುವ ವಿವೇಚನಾ ಶೂನ್ಯತೆಯೆ? ಮನುಷ್ಯನಲ್ಲಿ ಹೆಚ್ಚಾಗುತ್ತಿರುವ ಮಾನಸಿಕ ರೋಗದ ವಿಕೃತಿಯ ಪರಮಾವಧಿಯೇ? ಮನುಷ್ಯ ನಾಗರೀಕತೆಯಿಂದ ಅನಾಗರೀಕತೆಯ ಕಡೆಗೆ ಚಲಿಸುತ್ತಿರುವುದರ ಸಂಕೇತವೇ? ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಕಾನೂನುಗಳು ದುರ್ಬಲವಾಗಿದ್ದಾವೆಯೇ? ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿನ ಪಕ್ಷಪಾತವೆ? ಅತ್ಯಾಚಾರ, ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ಈವರೆಗೆ ಕಠಿಣ ಕಾನೂನು ಕ್ರಮ ಜಾರಿಯಾಗದಿರುವುದೆ? ಹಾಗಾದರೆ ಈ ಎಲ್ಲಾ ಅನಾರೋಗ್ಯಕರ ಸ್ಥಿತಿಗೆ ಚಿಕಿತ್ಸೆಯ ಮೂಲ ಎಲ್ಲಿ? ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ದೌರ್ಜನ್ಯ ಎಸಗಿದ ಅಪರಾಧಿಗಳನ್ನು ಸಂವಿಧಾನಬದ್ಧ ಗಂಭೀರ ಶಿಕ್ಷೆಗೆ ಗುರಿಪಡಿಸುವುದೊಂದೆ ತತ್ಕ್ಷಣದ ಸೂಕ್ತ ಪರಿಹಾರ ಮಾರ್ಗವಾಗಿದೆ. ಈಗಾಗಲೇ ಇರುವ ಕಾನೂನುಬದ್ಧ ಶಿಕ್ಷೆಗಳು ಸರಳವಾಗಿದ್ದರೆ, ಕಠಿಣ ಕಾನೂನಿನ ಅಗತ್ಯವಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಹೊಸ ಕಾನೂನನ್ನು ಅನುಷ್ಠನಗೊಳಿಸಬೇಕಾಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009ರ ಸೆಕ್ಷನ್ 17 ಹಾಗೂ 2012ರಲ್ಲಿ ಜಾರಿಗೆ ಬಂದ ಲೈಂಗಿಕ ಅಪರಾಧಿಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಶಾಲೆ, ಕಾಲೇಜು, ಆಡಳಿತ ಇಲಾಖೆ, ಖಾಸಗಿ ಸಂಸ್ಥೆಗಳಲ್ಲಿನ ಪುರಷ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ನಿರಂತರವಾಗಿ ಸಮಾಲೋಚನ ಸಭೆಯ ಮೂಲಕ ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಕಾನೂನಿನ ತೀಕ್ಷ್ಣತೆಯ ಬಗೆಗೆ ಎಚ್ಚರಿಕೆಯ ಅರಿವನ್ನು ಮೂಡಿಸುವುದು; ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳುವಲ್ಲಿ ಪಕ್ಷಪಾತ ತೋರುವ, ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ವಿಳಂಬ ನೀತಿ ಅನುಸರಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ಸಹಾ ಕಠಿಣ ಶಿಕ್ಷೆಗೆ ಗುರಿಪಡಿಸುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ.
ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವ ಹಾಗೂ ಸ್ವತಃ ಮಹಿಳೆಯರೇ ತಮ್ಮ ಮೇಲಾಗುವ ಎಲ್ಲ ಬಗೆಯ ದೌರ್ಜನ್ಯಗಳನ್ನು ಧೈರ್ಯವಾಗಿ ಎದುರಿಸುವ ಮನೋಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜಿನ ಹೆಣ್ಣು ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ; ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳ ಪೋಷಕರು ಹಾಗೂ ಅಲ್ಲಿನ ಆಡಳಿತ ಸಿಬ್ಬಂದಿಯ ಜೊತೆಗೆ ಕಾಲಕಾಲಕ್ಕೆ ಸಮಾಲೋಚನಾ ಸಭೆಯನ್ನು ಕಾನೂನು ಬದ್ದವಾಗಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ. ಇದು ಸಾಧ್ಯವಾದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಪ್ರಮಾಣವನ್ನು ತಡೆಗಟ್ಟಬಹುದೆನಿಸುತ್ತದೆ.
ಕಾನೂನಾತ್ಮಕ ಸಂಗತಿಗಳ ಪ್ರಾಮಾಣಿಕ ಅನುಷ್ಠಾನದ ಜೊತೆಗೆ ಈ ಬಗೆಯ ದೌರ್ಜನ್ಯಗಳ ವಿರುದ್ಧ ಪ್ರಬಲವಾದ ಸಾಮಾಜಿಕ ಹೋರಾಟಗಳು ಜಾಗೃತಗೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಅನ್ಯಾಯಗಳ ವಿರುದ್ಧದ ಸಂಘಟನಾತ್ಮಕ ಪ್ರತಿಭಟನಾ ಧ್ವನಿಗಳು ಇಲ್ಲದಂತಾಗಿದೆ. ನಿರಂತರವಾಗಿ ಶೋಷಣೆ, ಅತ್ಯಾಚಾರ, ಕೊಲೆ, ದೌರ್ಜನ್ಯಗಳು ವರದಿಯಾಗುತ್ತಿದ್ದರು ಸಹಾ ಇದು ನಮಗೆ ಅಥವಾ ನಮ್ಮ ಜಾತಿ/ಧರ್ಮದವರಿಗೆ ಸಂಬಂಧಿಸಿದ್ದಲ್ಲ ಎನ್ನುವಂತಹ ವಿಕಾರ ಮನೋಧರ್ಮ ಪ್ರಬಲವಾಗಿ ಬೆಳೆಯುತ್ತಿದೆ. ಯಾವುದೇ ಜಾತಿ ಸಮುದಾಯಗಳ ಮೇಲೆ ಬದನವಾಳು, ಕಂಬಾಲಪಲ್ಲಿ, ಖೈರ್ಲಾಂಜಿಯಂತಹ ಅನ್ಯಾಯಗಳು ನಡೆದಾಗ ಪ್ರಾಮಾಣಿಕವಾದ ಜಾತ್ಯಾತೀತ ಹೋರಾಟದ ಮನೋಭಾವ ವ್ಯಾಪಕವಾಗಿ ಎಲ್ಲರಲ್ಲೂ ಜಾಗೃತಗೊಳ್ಳಬೇಕಿದೆ. ಆಗ ಮಾತ್ರ ಮನುಷ್ಯ ಸಮಾಜ ವಿವೇಕಶೂನ್ಯತೆಯ ಕರಾಳತೆಯಿಂದ ಹೊರಬಂದು ಸ್ವಸ್ಥ ಮಾನವೀಯ ಸಮಾಜ ನಿರ್ಮಿಸಲು ಸಾಧ್ಯ.
ಎಪ್ಪತ್ತರ ದಶಕದಲ್ಲಿ ಕೋಲಾರದ ಕುಂಬಾರ ಸಮುದಾಯದ ಶೇಷಗಿರಿಯಪ್ಪನ ಕೊಲೆಯಾಗಿ ಆತನ ಮಗಳು ಅನುಸೂಯಮ್ಮಳ ಮೇಲೆ ಸಾಮೋಹಿಕ ಅತ್ಯಾಚಾರವಾದಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂದು ರಾಜ್ಯಾದ್ಯಂತ ರೂಪಿಸಿದ ಚಳವಳಿ ಇಂದು ಮತ್ತೆ ಮರುಕಳಿಸಬೇಕಿದೆ. ಆ ನಿಟ್ಟಿನಲ್ಲಿ ಎಲ್ಲಾ ಸಾಮಾಜಿಕ ಸಂಘಟನೆಗಳು ಹಾಗೂ ನಾಗರೀಕರೆನಿಸಿಕೊಂಡವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

‍ಲೇಖಕರು G

18 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading