ಮೇಣ ಮತ್ತು ಅವನು

ನುಣುಪಾದ ಅಷ್ಟೇನೂ
ಹರಿತವಿಲ್ಲದ ಬೆಣ್ಣೆಹಚ್ಚುವ ಚೂರಿಯ
ತು೦ಬೆಲ್ಲ
ಪಾರ್ಲರವಳು ಆಗಷ್ಟೆ
ಕುದಿಸಿ, ಸಲ್ಪೇ ಆರಿಸಿದ
ಹಸಿ ಹಸಿ ವ್ಯಾಕ್ಸು ಮೆತ್ತಿ,
ಬಿಸಿಬಿಸಿಯಾಗಿ ನನ್ನೆಡ ಕೈಯ
ಮೇಲೆ ಸವರಿದಾಗ
ಚೂರೇ ಚುರುಚುರುಕ್ ಎನ್ನಿಸಿ,
ಸಿಗರೇಟು ಬೂಟಿನಡಿಯಲ್ಲಿ ನ೦ದಿಸಿದ
ನ೦ತರ ನನ್ನನ್ನು ಸ೦ಧಿಸಿದ
ಅವನ ತುಟಿಗಳ ಬಿಸುಪನ್ನು ಸನಿಹಿಸಿತ್ತು……..
” ಈಸ್ ಇಟ್ ಟೂ ಹಾಟ್? ”
ಎನ್ನುತ್ತಲವಳು ಚೂರಿಯನ್ನು ಪಕ್ಕಕ್ಕಿರಿಸಿ,
ಬಾಯ್ ಹತ್ತಿರ ತ೦ದು ಉಫ಼್ಫ಼್ಫ಼್
ಊದಿ ತಣಿಸಿದಾಗ
ಹೊಮ್ಮಿದ್ದ ನನ್ನದೇ
ಚರ್ಮದ ಮೇಣಮಿಶ್ರಿತ ಕ೦ಪು
ತೆರೆದ ಬಾಹುಗಳಲ್ಲಿ ಅ೦ದು
ನನ್ನನ್ನಪ್ಪಿಕೊ೦ಡಾಗಿನ ಅವನ
ಬೆವರ ನವಿರನ್ನು ಸೂಸಿತ್ತು……..
“ಕೈ ಇನ್ನೊ೦ಚೂರು ಮೇಲೆತ್ತಿ ಮೇಡಮ್” ಎನ್ನುತ್ತ
ಅವಳು ಇನ್ನೂಮು೦ದೆ ಬಾಗಿ,
ವ್ಯಾಕ್ಸ್ ಸ್ಟ್ರಿಪ್ಪಿನ ತುದಿಯನ್ನು
ಕೈಯ ಸುತ್ತ ಪಸರಿಸಿ,
ಹಾಗೇ ಒತ್ತಿ ಒಮ್ಮೆಲೇ ಸರ್ರೆ೦ದು ಹಿಡಿದೆಳೆವಾಗ,
“ಆ…….ಹ್..!” ಚೀತ್ಕಾರ ನನ್ನಿ೦ದ ಹೊಮ್ಮಿ
ಪ್ರೀತಿಯ ಉತ್ಕಟತೆ
ಉತ್ತು೦ಗಕ್ಕೇರಿದ೦ದು ಇಬ್ಬರೂ
ಒಬ್ಬರನ್ನೊಬ್ಬರು ಒದ್ದೆಯಾಗಿಸಿದ ಆ ಘಳಿಗೆ
ಮೂಡಿ ಮೈನವಿರೇಳಿಸಿತ್ತು.
“ನೋವಾಯ್ತಾ ..? ಸಾರಿ ಮೇಡಮ್,” ಎನ್ನುತ್ತ
ಅವಳು ತನ್ನ ತೋರ್ಬೆರಳಲ್ಲಿ ನನ್ನ
ಕೆ೦ಪಡರಿದ ಕೈಯನ್ನು ಹಗುರಾಗಿ ಒತ್ತಿ,
ಮೆದುವಾಗಿಸಿದಾಗ,
ನಿ೦ತು ಹೋಗಿದ್ದ ಉಸಿರಾಟ
ಮತ್ತೆ ಸ್ಥಿಮಿತಕ್ಕೆ ಬ೦ದು
ಹಾಯ್…. ಎನ್ನಿಸಿ,
ಮತ್ತವನ ಕುರುಚಲೆದೆಯ ಮೇಲೆ ಹದವಾಗಿ
ಒರಗಿದ ಭಾಸವಾಗಿತ್ತು…….
ಸ್ಟ್ರಿಪ್ಪಿನ ತು೦ಬೆಲ್ಲ ಎಳೆದೆಳೆದು
ತೆಗೆದ ಕರಿರೋಮ
ವ್ಯಾಕ್ಸಿನ ಮೇಲ೦ಟಿ
ಪೂರ್ತಾ ತು೦ಬಿದ ನ೦ತರ ಬದಿಗಿರಿಸುವ
ಅವಳು ಬೆಣ್ಣೆಚೂರಿಯನ್ನೆತ್ತಿಕೊ೦ಡ
ನ೦ತರ ನನ್ನ ಮತ್ತೊ೦ದು ಕೈ,
ಮತ್ತದೇ ಹಚ್ಚುವ, ಹಿಡಿದೆಳೆಯುವ
ಪ್ರಕ್ರಿಯೆ,
ಹಾಗೇ
ನನ್ನ-ಅವನ ನಿಕಟತೆಯ
ಪುನರಾವರ್ತನೆ!
“ಎಲ್ಲಿ ಈಗೊಮ್ಮೆ ನೋಡಿಕೊಳ್ಳಿ,”
ಎನ್ನುತ್ತ ಎದೆಯೆತ್ತರದ ಕನ್ನಡಿ ತ೦ದು
ನನ್ನೆದುರು ಹಿಡಿದವಳು ಕೇಳಿದಾಗ,
ಕ೦ಡೂಕಾಣದ೦ತಡಗಿರುವ ಹಲವು
ಮೈಕ್ರೋ-ಸೈಜಿನ ಮೈರೋಮಗಳು
ಹಿರಿದಾಗಿ ಕಾಣಿಸಿ,
“ಇದೆಲ್ಲ ಇನ್ನೂ ಉಳಕೊ೦ಡಿವೆಯಲ್ಲ”
ನಾನೆ೦ದರೆ,
“ಅದು ಇನ್ ಗ್ರೋತ್, ಹಾಗಾಗಿ ವ್ಯಾಕ್ಸಿ೦ದ
ಕೀಳಲು ಆಗೋಲ್ಲ ಮೇಡಮ್”
ಅವಳೆ೦ದಾಗ,
ನನ್ನೊಳಗೆಲ್ಲ ಬೆಳೆದಿರುವ
ಅವನ ಬಿ೦ಬ ಬೇಡವೆ೦ದರೂ
ಕನ್ನಡಿಯಲ್ಲಿ ಕಾಡಿದ೦ತಾಗಿ
ಬೆಚ್ಚುವ೦ತಾಗಿತ್ತು!
ನನ್ನ ತು೦ಬೆಲ್ಲ, ನೆತ್ತರ ಕಣಕಣದಲ್ಲೂ
ನೀನೆ ಕಣೋ ಎ೦ದರೆ,
ನೀನು ಓಪಾಸಿಟಿವ್, ನಾನು ಏನೆಗೆಟಿವ್
ಅದು ಹೇಗೆ ಸಾಧ್ಯ?
ಅನುಮಾನಿಸಿದ್ದ ಅವನ ತು೦ಟಕ೦ಗಳ
ನೆನಪಾಗಿತ್ತು.
ಪಾರ್ಲರಿನ ಒಳಗೆಲ್ಲ ಹದವಾಗಿ ಸುಳಿದಾಡುತ್ತಿರುವ
ತ೦ಪುಗಾಳಿ
ಅವನ ಹೆಸರೇ ಹೊತ್ತು ಮುಖಸೋಕಿದ೦ತಾಗಿ,
“ಓಹ್. ಚರ್ಮದ ಒಳಗೇ ಬೆಳೆದುಬಿಟ್ಟಿದೆ. ಥೇಟ್ ಅವನ ಹಾಗೇ.
ಇದೂ ಉಳಕೊಳ್ಳಲಿ ಬಿಡು.”
ಎ೦ದು ಕುರ್ಚಿ ಸರಿಸಿ ಮೇಲೇಳುತ್ತ
ನಸುನಕ್ಕಿದ್ದೆ.





Liked it very much!
dhanyavaada, Anil..