ಚರಿತ್ರೆಯಾದ ಋಣಾನುಬಂಧ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

೧೯೯೮ರ ಕೊನೆಯ ವೇಳೆಗೆ ಕುಂಬಳಗೋಡಿನಲ್ಲಿ ಅತ್ಯಾಧುನಿಕವಾದ ಆಫ್ಸೆಟ್ ಮುದ್ರಣದ ಪ್ರೆಸ್ ಸ್ಥಾಪನೆಗೊಂಡಿತ್ತು. ಮುದ್ರಣಾಲಯದ ಸಿಬ್ಬಂದಿ ಮತ್ತು ಅದಕ್ಕೆ ಸಂಬಂಧಿಸಿದ ಫೋಟೋ ವಿಭಾಗ, ಪ್ಲೇಟ್ ಮೇಕಿಂಗ್  ಮತ್ತು ಪ್ಯಾಕಿಂಗ್ ವಿಭಾಗಗಳು ಕುಂಬಳಗೋಡಿಗೆ ವರ್ಗಾವಣೆ ಹೊಂದಿದ್ದವು. ಮಹಾತ್ಮ ಗಾಂಧಿ ರಸ್ತೆಯಲ್ಲಿ ಉಳಿದದ್ದು, ಸಂಪಾದಕೀಯ, ಆಡಳಿತ, ಅಕೌಂಟ್ಸ್, ಪ್ರಸರಣ, ಜಾಹಿರಾತು- ಈ ವಿಭಾಗಗಗಳು ಮಾತ್ರ. ಕಂಪ್ಯೂಟರಿನಲ್ಲೇ ಪುಟ ಸಿದ್ಧಪಡಿಸುವ ತಂತ್ರಾಂಶ ಮತ್ತು ಪೇಜ್ ಗ್ರಿಡ್ (ಪುಟದ ಹಂದರ) ಬಂದಿದ್ದು ಕಟ್ ಅಂಡ್ ಪೇಸ್ಟ್ ಗೆ ವಿದಾಯ ಹೇಳಲಾಗಿತ್ತು.

ಮಹಾತ್ಮಗಾಂಧಿ ರಸ್ತೆ ಕಛೇರಿಯಲ್ಲಿ ಕುಳಿತು ಕಂಪ್ಯೂಟರ್ ಸ್ಕ್ರೀನ್ ಮೇಲೆ ಮೂಡುವ ಪುಟದ ಹಂದರಕ್ಕೆ ಮುಖ್ಯ ಉಪಸಂಪಾದಕರ ಮಾರ್ಗದರ್ಶನದಲ್ಲಿ ಉಪ ಸಂಪಾದಕರುಗಳು ಸುದ್ದಿಗಳನ್ನು, ಚಿತ್ರಗಳನ್ನು ಮೂವ್ ಮಾಡುವ ಮೂಲಕ ಪುಟವನ್ನು ಮುದ್ರಣಕ್ಕೆ ಸಿದ್ಧಗೊಳಿಸ ಬೇಕಾಗಿತ್ತು. ಯಾವ ಸುದ್ದಿ/ಚಿತ್ರ ಯಾವ ಪುಟಕ್ಕೆ, ಪುಟದಲ್ಲಿ ಎಷ್ಟನೆ ಕಾಲಮ್ಮಿಗೆ ಹೋಗಬೇಕು ಎಂದು ಕಮಾಂಡ್ ಕೊಟ್ಟರೆ ಸಾಕಾಗಿತ್ತು. ಅಗ್ರ ವಾರ್ತೆ ಶೀರ್ಷಿಕೆಗೆ, ಒಂದನೇ ಪುಟದ ಎರಡನೇ ಕಾಲಮ್ಮಿನಿಂದ ಏಳನೆ ಕಾಲಮ್‌ವರಗೆ (೨ ಬೈ ೭) ಎಂದು ಕಮಾಂಡ್ ಕೊಟ್ಟರೆ ಆ ಶೀರ್ಷಿಕೆ ಒಂದನೇ ಪುಟದ ಹಂದರದಲ್ಲಿ ಆ ಜಾಗದಲ್ಲಿ ಹೋಗಿ ನೆಲೆಗೊಳ್ಳುತ್ತಿತ್ತು.

ಸಂಪಾದಕೀಯ ವಿಭಾಗದವರು ಪುಟ ಸಿದ್ಧಗೊಳಿಸುವುದಕ್ಕೆ ಪೂರ್ವಭಾವಿಯಾಗಿ ಜಾಹಿರಾತು ವಿಭಾಗದವರು ಪುಟದ ಹಂದರದಲ್ಲಿ ಜಾಹಿರಾತುಗಳನ್ನು ನೆಲೆಗೊಳಿಸಿರುತ್ತಿದ್ದರು. ಹೀಗೆ ಕಂಪ್ಯೂಟರಿನಲ್ಲಿ ಸಿದ್ಧಪಡಿಸಲಾದ ಪುಟವನ್ನು ಕುಂಬಳಗೋಡಿಗೆ ಟ್ರಾನ್ಸ್ಮಿಟ್ ಮಾಡಲಾಗುತ್ತಿತ್ತು. ಅಲ್ಲಿ ನೆಗೆಟಿವ್ ಆಗಿ, ಪ್ಲೇಟ್ ಆಗಿ ಮುದ್ರಣಕ್ಕೆ ಸಂಚಿಕೆ ಸಿದ್ಧವಾಗುತ್ತಿತ್ತು.

ಅತ್ಯಾಧುನಿಕವಾದ ಕಂಪ್ಯೂಟರೀಕೃತ ಆಫ್‌ಸೆಟ್ ಮುದ್ರಣ ಯಂತ್ರದಲ್ಲಿ ಮುದ್ರಣ ಶುರುವಾಯಿತು. ‘ಪ್ರವಾ’ ಮತ್ತು ‘ಡಿಎಚ್’ ಸಂಚಿಕೆಗಳು ನಯನ ಮನೋಹರವಾಗಿ, ವರ್ಣರಂಜಿತವಾಗಿ ಕಂಗೊಳಿಸತೊಡಗಿದವು. ಓದುಗರ ಕಣ್ಮನಗಳಿಗೆ ಹಬ್ಬವಾಯಿತು. ರಜತ ಮಹೋತ್ಸವದ ಸಂಭ್ರಮ ಅತ್ಯಾಧುನಿಕವಾದ ಸುಂದರ ಮುದ್ರಣದಲ್ಲಿ ಮೇರು ಮುಟ್ಟಿತ್ತು.

ಹೊಸದೊಂದು ಅವತರಿಸಿದಾಗ ಹಳೆಯದನ್ನು ಕಳೆದುಕೊಳ್ಳಬೇಕಾಗುವುದು ಪ್ರಕೃತಿಯ ಅನಿವಾರ್ಯತೆಗಳಲ್ಲೊಂದು. ಈ ಪಕ್ರಿಯೆಯಲ್ಲಿ ಮನುಷ್ಯ ಸಂಬಂಧಗಳೂ ನಲುಗುತ್ತವೆ. ಕುಂಬಳಗೋಡು ಮುದ್ರಣ ಶುರುವಾದ ಮೇಲೆ ಕಂಪೋಜಿಂಗ್ ವಿಭಾಗ ಅನವಶ್ಯಕವಾಯಿತು. ಕಂಪಾಜಿಟರುಗಳು ಮತ್ತು ಪೇಜು ಸಿದ್ಧಗೊಳಿಸುತ್ತಿದ್ದ ಮೇಕಪ್ ಮೆನ್‌ಗಳಿಗೆ ಕೆಲಸವಿಲ್ಲದಂತಾಯಿತು. ಆದರೆ ಆಡಳಿತ ವರ್ಗ ಮಾನವೀಯತೆಯಿಂದ ವರ್ತಿಸಿ ಅವರುಗಳನ್ನು ವಜಾ ಮಾಡದೆ ನಿವೃತ್ತಿಯವರೆಗೆ ಉಳಿಸಿಕೊಂಡಿತು. ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ತೋರಿಸುವ ಮೂಲಕ. ಯಾವುದೇ ಪತ್ರಿಕೆ ಇರಲಿ ಸಂಪಾದಕೀಯ ವಿಭಾಗಕ್ಕೂ ಕಂಪೋಜಿಂಗ್ ವಿಭಾಗಕ್ಕು ಇದ್ದ ಅವಿನಾಭಾವ ಸಂಬಂಧ ಇವತ್ತು ನಿನ್ನೆಯದಲ್ಲ. ಈಗ ಆ ಪ್ರಚೀನ ಸಂಬಂಧ ಮಾಯವಾಗಿತ್ತು.

ಈ ಕಂಪೋಜಿಂಗ್ ವಿಭಾಗದ ಮೇಲುಸ್ತುವಾರಿಗಳು, ಕಂಪಾಜಿಟರುಗಳು ಮತ್ತು ಮೇಕಪ್ ಮೆನ್‌ಗಳಲ್ಲಿ  ಮಾಧ್ಯಮಿಕ ಶಾಲೆಯವರೆಗೆ ಕಲಿತಂಥ ಅಕ್ಷರಸ್ಥರೇ ಹೆಚ್ಚಾಗಿದ್ದರು. ಆದರೆ ವಿವೇಕ, ವಿವೇಚನೆಗಳಲ್ಲಿ ಅವರಲ್ಲಿ ಕೆಲವರು ಪತ್ರಕರ್ತರಿಗಿಂತ ಯಾವ ರೀತಿಯಲ್ಲೂ ಕಡಿಮೆ ಎನಿಸುತ್ತಿರಿರಲ್ಲ. ಅವರಲ್ಲೂ ತಾವು ಪತ್ರಕರ್ತರಿಗೆ ಕಡಿಮೆಯಲ್ಲ ಎನ್ನುವ ಅರಿಮೆ ಎದ್ದು ಕಾಣುತ್ತಿತ್ತು. ಹೀಗಾಗಿ ಹೊಸದಾಗಿ ಬಂದ ಉಪಸಂಪಾದಕರುಗಳು ಪುಟಗಳನ್ನು ಮಾಡಿಸಲು ಹೋದಾಗ ಮೇಕಪ್ ಮೆನ್‌ಗಳೇ ಸುದ್ದಿಯ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದ ಸಂದರ್ಭಗಳೂ ಇದ್ದವು. ಅಂಥವರು ಕೆಲವರು ನೆನಪಾಗುತ್ತಿದ್ದಾರೆ. ಕಂಪೋಜಿಂಗ್ ವಿಭಾಗ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿತ್ತು.

ಮೂರು ಪಾಳಿಗೂ ಒಬ್ಬೊಬ್ಬ ಮೇಲುಸ್ತುವಾರಿ (ಸೂಪರ್ ವೈಸರ್) ಇದ್ದರು. ಅವರಲ್ಲಿ ರಾಮಯ್ಯ ಅಂತ ಒಬ್ಬರಿದ್ದರು. ರಾಜಕೀಯ ಪ್ರಜ್ಞೆ, ಮುದ್ರಣ ಜ್ಞಾನ ಆತನಲ್ಲಿ ಚೆನ್ನಾಗಿತ್ತು. ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ‘ಈ ಸುದ್ದಿ ನಮ್ಮ ರಾಜ್ಯಕ್ಕೆ ಮಹತ್ವದ್ದು ಇದು ಮೊದಲ ಪುಟದಲ್ಲೇ ಡಬ್ಬಲ್ ಕಾಲಂ ಸುದ್ದಿಯಾಗಿ ಬರಬೇಕು, ಇದನ್ನ ಸಣ್ಣ ಶೀರ್ಷೀಕೆಯಲ್ಲಿ ಸಿಂಗಲ್ ಕಾಲಮ್ಮಿಗೆ ಮಾಡಿದ್ದಿರಲ್ಲ, ಏನ್ಸಾರ್ ನೀವು’ ಎಂದು ಪುಟ ಮಾಡಿಸಲು ಹೋಗುವವರ ಜೊತೆ ವಾದಕ್ಕಿಳಿಯುತ್ತಿರ‍್ದು. ಅಷ್ಟೇ  ಅಲ್ಲದೆ ಆ ಸುದ್ದಿಯನ್ನು ಎರಡು ಕಾಲಮ್ಮಿಗೆ ಮಾಡಿಸಿಟ್ಟಿರುತ್ತಿದರು. ಚಿತ್ರಗಳ ವಿಷಯದಲ್ಲೂ ಈ ಫೋಟೂ ಮೂರು ಕಾಲಮ್ಮಿಗೆ ಬರಬೇಕು, ಚೆನ್ನಾಗಿದೆ ಎಂದು, ಉಪಸಂಪಾದಕರು ಡಬ್ಬಲ್ ಕಾಲಮ್ಮಿಗೆ (ಡಿಸಿ) ಬರೆದಿದ್ದರೂ ತಾನೇ ಬ್ಲಾಕ್ ಮೇಕಿಂಗ್ ಸೆಕ್ಷನ್ನಿಗೆ ಹೋಗಿ ಮೂರು ಕಾಲಮ್ಮಿಗೆ ಮಾಡಿಸುತ್ತಿದ್ದರು. ಈ ಚಿತ್ರ ನಮ್ಮಲ್ಲಿ ಚೆನ್ನಾಗಿ ಪ್ರಿಂಟಾಗುವುದಿಲ್ಲ, ಇದು ‘ಡಿಸಿ’ ಸಾಕು ಎಂದು ತಾವೇ ನಿರ್ಧರಿಸಿಬಿಡುತ್ತಿದ್ದರು.

ನಾರಾಯಣ. ಕನ್ನಯ್ಯ, ರಾಮಕೃಷ್ಣ, ಮೋಹನ್, ಗಾಳಿಮಠ ಇವರೆಲ್ಲ ಪುಟ ಸಿದ್ಧಪಡಿಸುವ ಮೇಕಪ್ ಮೆನ್‌ಗಳಾಗಿದ್ದರು. ಇವರಲ್ಲಿ ಒಬ್ಬೊಬ್ಬರದು ಒಂದೊಂದು ಬಗೆಯ ಸ್ವಭಾವ, ಆಸಕ್ತಿ. ನಾರಾಯಣ ಹಾಸ್ಯ  ಸ್ವಭಾವದ ವ್ಯಕ್ತಿ. ಪುಟ ಮಾಡಿಸಲು ಹೊಸಬರು ಯಾರೇ ಹೋದರೂ ಅವರು ಮೊದಲು ಹೇಳುತ್ತಿದ್ದುದು: ‘ನನಗೆ ತ.ರಾ.ಸು ಅವರಿಂದ ನಿ.ರಾ.ಸು. ಅವರ ವರೆಗೆ ಎಲ್ಲರೂ ಗೊತ್ತು’. ‘ಪ್ರವಾ’ ಶುರುವಾದ ದಿನಗಳಲ್ಲಿ ಖ್ಯಾತ ಕಾದಂಬರಿಕಾರ ತ.ರಾ.ಸು. ಎರಡುಮೂರು ತಿಂಗಳು ಉಪಸಂಪಾದಕರಾಗಿದ್ದರು. ನಿ.ರಾ.ಸು. (ಎನ್.ಆರ್.ಸುಬ್ರಹ್ಮಣ್ಯ) ಸುದ್ದಿ ಸಂಪಾದಕರಾಗಿ ನಿವೃತ್ತಿ ಹೊಂದಿದವರು. ನಾರಾಯಣನ ಮಾತಿನಲ್ಲಿ ತಾನು ಇವರೆಲ್ಲರನ್ನೂ ಬಲ್ಲೆ ನನ್ನ ಮಾತಿಗೆ ನೀವೂ ಸ್ವಲ್ಪ ಬೆಲೆ ಕೊಡಬೇಕು ಎನ್ನುವ ದಿಟ್ಟತನವಿರುತ್ತಿತ್ತು.

ಈ ನಾರಾಯಣನಿಗೂ ವೈಎನ್ಕೆಗೂ ಒಂದು ರೀತಿಯ ವಿಚಿತ್ರ ಮನೋಮಿಲಾಖತಿ ಇತ್ತು. ವೈಎನ್ಕೆ ಡೆಪ್ಯುಟಿ ನ್ಯೂಸ್ ಎಡಿಟರ್ ಆಗಿದ್ದಾಗ ಮಾರ್ನಿಂಗ್ ಎಡಿಷನ್ ಅವರ ಜವಾಬ್ದಾರಿಯಾಗಿತ್ತು. ಆದರೆ ಅವರು ಎಂದೂ ಮೇಕಪ್ ಸ್ಟೋನಿಗೆ ಹೋಗುತ್ತಿರಲಿಲ್ಲ, ಕೂತ ಜಾಗಕ್ಕೆ ಮೇಕಪ್ ಮೆನ್‌ನ ಕರೆಸಿ ಎಂಟು ಕಾಲಮ್ಮಿನ ಒಂದು ಡೆಮ್ಮಿ ಸಿದ್ಧಪಡಿಸಿ ಆ ರೀತಿ ಪೇಜು ಕಟ್ಟುವಂತೆ ಹೇಳುತ್ತಿದ್ದರು. ನಾರಾಯಣನ ಕೈಯ್ಯಲ್ಲಿ  ಆ ಡೆಮಿಯನ್ನಿಟ್ಟು ‘ಏ ‘ಘಾ’ ಎನ್ನುತ್ತಿದ್ದರು.

‘ಎಸ್ ಸಾರ್’ ಎಂದು ನಾರಾಯಣ ಪ್ರತಿಕ್ರಿಯಿಸುತ್ತಿದ್ದ

‘ನೋಡಿ ‘ಘಾ’ ಎಂದರೆ ಎಸ್ ಸಾರ್ ಎನ್ನುತ್ತಾನೆ,ನನ್ನ ತಲೆ ತಿನ್ನುತ್ತಾನೆ’ ಎಂದು ವೈಎನ್ಕೆ ಎದುರು ಕುಳಿತಿದ್ದವರಿಗೆ  ಹೇಳುತ್ತಿದ್ದರು.

‘ನನಗೆ ತಲೆ ಮಾಂಸ ಎಂದರೆ ತುಂಬ ಇಷ್ಟ ಸಾರ್’ ಎನ್ನುತ್ತಿದ್ದ ನಾರಾಯಣ.

ಸಾಪ್ತಾಹಿಕ ಪುರವಣಿ ಪುಟಗಳು ಬೆಳಗಿನ ಪಾಳಿಯಲ್ಲಿ ಸಿದ್ಧವಾಗುತ್ತಿದ್ದವು. ಈ ಪುಟಗಳನ್ನು ಕನ್ನಯ್ಯ ಮತ್ತು ರಾಮಕೃಷ ಮಾಡುತ್ತಿದ್ದರು. ಈ ರಾಮಕೃಷ್ಣನಿಗೆ ಚಿನ್ನಾಯಿಡು ಎಂದೂ ಕರೆಯಲಾಗುತ್ತಿತ್ತು. ಏಕೆಂದರೆ ಅವನಣ್ಣ ‘ಪೆದ್ದ’ ನಾಯಿಡು ಸಹ ಕಂಪೋಜಿಜಟರ್ ಆಗಿದ್ದ. ಈ ಚಿನ್ನಾಯಿಡೂಗೆ ಸಿನಿಮಾ ಪುಟ ತಾನೇ ಮಾಡಬೇಕೆಂಬ ಹಟ. ನಾನು ಸಾಪು ಪುಟಗಳನ್ನು ಮಾಡಿಸಲು ಹೋಗುವ ವೇಳೆಗಾಗಲೇ ಸಿನಿಮಾ ಪುಟವನ್ನು ತನ್ನ ಸುಪರ್ದಿಗೆ ತೆಗೆದು ಕೊಂಡು ಅದಕ್ಕೆ ಸಂಬಂಧಿಸಿದ ಸುದ್ದಿಯ ಗ್ಯಾಲಿಗಳು ಮತ್ತು ಬ್ಲಾಕುಗಳನ್ನು ತೆಗೆದಿಟ್ಟುಕೊಂಡು ಸಿದ್ಧನಾಗಿರುತ್ತಿದ್ದ. ಎಷ್ಟೋ ವೇಳೆ ನಾನು ಹೋಗುವದಕ್ಕು ಮೊದಲೇ ತನ್ನ ಇಚ್ಛಾನುಸಾರ ಪುಟವನ್ನು ಸಿದ್ಧ ಪಡಿಸಿರುತ್ತಿದ್ದ.

ಒಮ್ಮೆ ಹೀಗಾಯಿತು. ಆ ಕಾಲದ ಛಮಕ್ ಛಮಕ್ ನಟಿ ಜ್ಯೋತಿಲಕ್ಷ್ಮಿಯ ಭಂಗಿಯ ಒಂದು ಚಿತ್ರ, ಕಾಮಪ್ರಚೋದಿಸುವಂಥ ಭವ್ಯ ಭಂಗಿಯ ಚಿತ್ರವದು. ನಾನು ಅದನ್ನು ಡಬ್ಬಲ್ ಕಾಲಮ್ಮಿಗೆ ಮಾಡಿಸಿದ್ದೆ. ರಾಮಕೃಷ್ಣ ಅದನ್ನು ಬಿಸಾಡಿ ನಾಲ್ಕು ಕಾಲಮ್ಮಿಗೆ ಬೇರೆ ಒಂದು ಬ್ಲಾಕನ್ನು ಮಾಡಿಸಿ ಮೊದಲ ನಾಲಕ್ಕು ಕಾಲಮ್ಮುಗಳಲ್ಲೇ ಜ್ಯೋತಿಲಕ್ಷ್ಮಿಯನ್ನು ಪ್ರತಿಷ್ಠಾಪಿಸಿದ್ದ. ಕೆಳಗೆ ಜೀನತ್ ಅಮ್ಮಾನಳ ಅಂಥದೇ ಕಾಮಪ್ರಚೋದಕ ಭಂಗಿಯ ಚಿತ್ರವನ್ನು ಅಡ್ಡಡ್ಡಲಾಗಿ ಮಲಗಿಸಿ ಪುಟ ಸಿದ್ಧಗೊಳಿಸಿಯೇ ಬಿಟ್ಟಿದ್ದ. ಸಣ್ಣಪುಟ್ಟ ಸುದ್ದಿಗಳನ್ನಷ್ಟೇ ತುಂಬುವುದಷ್ಟೆ ನನ್ನ ಕೆಲಸವಾಗಿತ್ತು.

‘ನಾನು ಬರುವ ಮೊದಲೇ ಇದನ್ನೆಲ್ಲ ನಿನಗೆ ಮಾಡಲು ಹೇಳಿದವರು ಯಾರು?’

‘ನನಗೆ ಇದು ಚೆನ್ನಾಗಿದೆ ಅನ್ನಿಸ್ತು ಮಾಡಿದೆ ಸರ್, ಜನ ಇದನ್ನ ಇಷ್ಟಪಡ್ತಾರೆ ಸಾರ್’

ನಾನು ಪುಟವನ್ನು ಮುಗಿಸಿ ‘ಪ್ರೂಫ್’ ಕಳುಹಿಸು ಎಂದು ಹೇಳಿ ಮೇಲಕ್ಕೆ ಹೋದೆ. ರಾಮಕೃಷ್ಣನ ತಲೆಹರಟೆಯನ್ನು ವೈಕುಂಠರಾಜು ಅವರಿಗೆ ತಿಳಿಸಿದೆ.ಪೇಜ್ ಪ್ರೋಫ್ ಬಂತು. ಅದನ್ನು ನೋಡಿದ ರಾಜು ‘ಇರಲಿ ಬಿಡಿ ಹಿ ಹ್ಯಾಸ್ ಸಮ್ ಏಸ್ತಟಿಕ್ ಸೆನ್ಸ್’ ಎಂದರು.

ಗಾಳಿಮಠ ಸುದ್ದಿಜ್ಞಾನವಿದ್ದವರು.ಆದರೆ ಗಂಭೀರ ಸ್ವಭಾವದ ವ್ಯಕ್ತಿ. ತಾನೆಷ್ಟೊ ತನ್ನ ಕೆಲಸವೆಷ್ಟೋ ಎನ್ನುವಂಥ ಸ್ವಭಾವ. ತಾನಾಗಿ ಏನನ್ನೂ ಬಾಯಿ ಬಿಡುತ್ತಿರಲಿಲ್ಲ. ಸಂದರ್ಭ ಬಂದಾಗ ತನ್ನ ಅರಿವನ್ನು ತೋರಿಸುತ್ತಿದ್ದರು.

ಮೋಹನ್ ಇನ್ನೊಬ್ಬ ಶಿಸ್ತಿನ ಕೆಲಸಗಾರ. ಈತ ಇಂದಿನ ಖ್ಯಾತ ಸಂಗೀತ ಸಂಯೋಜಕ ಹಂಸಲೇಖ ಅವರ ತಮ್ಮ. ಹಂಸಲೇಖಾ ಅವರ ತಂದೆಯವರೂ ಸ್ವಂತ ಮುದ್ರಣಾಲಯ ನಡೆಸುತ್ತಿದ್ದರಂತೆ. ಹೀಗಾಗಿ ಹಂಸಲೇಖಾ ಅವರಿಗೂ ಮುದ್ರಣ/ಪ್ರಕಟಣ  ಪ್ರಪಂಚಕ್ಕು ಅನ್ಯೋನ್ಯವಾದ ನಂಟು. ಹಂಸಲೇಖಾ ಅವರೂ ಸ್ವಲ್ಪ ಕಾಲ ‘ಪ್ರವಾ’ದಲ್ಲಿ ಕಂಪಾಜಿಟರ್ ಆಗಿದ್ದರಂತೆ. ನಾನು ಸೇರುವ ವೇಳೆಗೆ ಅವರು ‘ಪ್ರವಾ’ ಬಿಟ್ಟು, ಮೊಳೆ ಜೋಡಿಸುವ ಕಂಪೋಜಿಂಗ್‌ನಿಂದ ಸಾಂಗ್ ಕಂಪೋಜಿಂಗಿನ ತಾರಾಲೋಕಕ್ಕೆ ಜಿಗಿದಿದ್ದರು.

ಇನ್ನೊಬ್ಬರಿದ್ದರು  ಪ್ರತಿಭೆ ಮತ್ತು ಆಸಕ್ತಿಗಳಿಂದ ಸಾಹಿತ್ಯದಲ್ಲಿ ಒಲುಮೆ ಬೆಳೆಸಿಕೊಂಡ ವಿಶಿಷ್ಟ ವ್ಯಕ್ತಿ. ವೃತ್ತಿಯಿಂದ ಕಂಪಾಜಿಟರ್. ಜಿಂದೆ ನಂಜುಂಡಸ್ವಾಮಿ ಅಂತ. ಜಿಂದೆ ಅವರೂ ‘ಪ್ರವಾ’ದಲ್ಲಿ ಕಂಪೋಜಿಟರ್ ಆಗಿದ್ದರು. ಸಾಹಿತ್ಯಾಭಿಮಾನಿ. ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯನವರ ಶಿಷ್ಯ. ಗುರುವಿನ ಹಾದಿಯಲ್ಲೇ ನಡೆದು ಬರವಣಿಗೆಯನ್ನ ಸಾಧಿಸಿಕೊಂಡಿದ್ದರು. ಮೊಳೆ ಜೋಡಿಸುತ್ತಲೇ ರಾತ್ರೋರಾತ್ರಿ ಒಂದು ರೋಮಾಂಚಕ  ಪತ್ತೇದಾರಿ ಕಾದಂಬರಿ ಬರೆದು ಬಿಡುತ್ತಿದ್ದರು ಎಂದು ಅವರ ಬಗ್ಗೆ ಪ್ರತೀತಿ ಇತ್ತು. ನರಸಿಂಹಯ್ಯನವರ ಕಾದಂಬರಿಗಳಂತೆಯೇ ಜಿಂದೆಯವರ ಕಾದಂಬರಿಗಳಲ್ಲೂ ಸಸ್ಪೆನ್ಸ ಮತ್ತು ಸೆಕ್ಸ್ನ ಹದವಾದಮಿಶ್ರಣ ಇರುತ್ತಿತ್ತು. ಕೆಲವೇ ದಿನಗಳಲ್ಲಿ ಅವರು ಜನಪ್ರಿಯ ಕಾದಂಬರಿಕಾರರಾದರು.

ಚಿಕ್ಕ ಪೇಟೆಯ ಪ್ರಕಾಶಕರು ಅವರ ಕೃತಿಗಳನ್ನು ಪ್ರಕಟಿಸಲು ಮುಂದಾಗುತ್ತಿದ್ದರು. ಒಂದು ದಿನ ಜಿಂದೆಯವರು ‘ಪ್ರವಾ’ಗೆ ರಾಜೀನಾಮೆಕೊಟ್ಟು ಮದ್ರಾಸಿಗೆ ಹೋದರು. ಅಲ್ಲಿ ಅಭಿಮಾನಿಯೊಬ್ಬರ ಆಶ್ರಯದಲ್ಲಿ ಬರವಣಿಗೆ ಮುಂದುವರಿಸಿದರು. ಪುಂಖಾನುಪುಂಖವಾಗಿ ಒಂದೆರಡು ವರ್ಷ ಅವರ ಪತ್ತೇದಾರಿ ಕಾದಂಬರಿಗಳು ಬರುತ್ತಿದ್ದವು.

ರಾಮ್ ಸಿಂಗ್ ಅಂತ ಒಬ್ಬರು, ಮೇಲುಸ್ತುವಾರಿಯಾಗಿದ್ದರು. ರಾತ್ರಿ ಪಾಳಿ ಬಂತೆಂದರೆ ಅವರು ಖಿನ್ನರಾಗಿ ಬಿಡುತ್ತಿದರು. ಅವರಿದ್ದದ್ದು ಯಲಚೇನಹಳ್ಳಿಯಲ್ಲಿ. ಆಗ ರಾತ್ರಿ ಪಾಳಿ ಮಾಡುವವರಿಗೆ ನಗರ ಮಧ್ಯೆ ಇದ್ದವರನ್ನು ಮಾತ್ರ ಪಾಳಿಯ ನಂತರ ಮನೆಗಳಿಗೆ ಮುಟ್ಟಿಸಲು ವಾಹನ ಸೌಕರ್ಯವಿತ್ತು. ನಗರದ ಹೊರವಲಯದಲ್ಲಿದ್ದವರು ರಾತ್ರಿ ತಾವು ಕೆಲಸ ಮಾಡುವ ಜಾಗದಲ್ಲೇ ಮಲಗಿದ್ದು ಬೆಳಿಗ್ಗೆ ಬಸ್ಸು ಹಿಡಿದು ಮನೆ ತಲುಪಬೇಕಾಗುತ್ತಿತ್ತು. ರಾಮ್ ಸಿಂಗ್ ರಾತ್ರಿ ತನ್ನ ಕೆಲಸದ ಜಾಗದಲ್ಲೇ ಅಂದರೆ ಮೊದಲ ಮಹಡಿಯಲ್ಲೇ ಮಲಗಿ ಬೆಳಿಗೆ ಮನಗೆ ಹೋಗುತ್ತಿದ್ದರು.ಮತ್ತೆ ಮರದು ದಿನ ರಾತ್ರಿ ಪಾಳಿಗೆ ಬರುತ್ತಿದ್ದರು.

‘ಏನ್ರೀ ಸಿಂಗ್ ಸಮಾಚಾರ’ ಎಂದರೆ, ಸಾರ್ ರಾತ್ರಿ ಇಲ್ಲಿ ಮಲಗಿದ್ದೆ ಸಾರ್, ಬೆಳಿಗ್ಗೆ ಏಳೋವಾಗ ಟೈಂ ಆಫೀಸಿನಲ್ಲಿ ಮಲಗಿದ್ದೆ ಸಾರ್, ಭಾಳ ಭಯ ಆಗುತ್ತೆ ಸಾರ್ ಎನ್ನುತಿದ್ದರು. ಮತ್ತೊಂದು ದಿನ ಕೇಳಿದಾಗ ಏಳುವ ವೇಳೆಗೆ ಎಂ.ಡಿ.ಯವರ ಆಫೀಸಿನ ಬಾಗಿಲ ಬಳಿ ಮಲಗಿದ್ದುದಾಗಿ ತಿಳಿಸಿದರು. ರಾತ್ರಿ ತನ್ನನ್ನು ಮಿನಿ ಉಡುಗೆಯ ಸುಮಕೋಮಲ ಯುವತಿಯೊಬ್ಬಳು ಬಂದು ಎತ್ತಿಕೊಂಡು ಹೋಗುತ್ತಾಳೆಂದು ನಂತರ ಏನಾಗುತ್ತದೆಂಬುದು ತಮಗೆ ಗೊತ್ತಾಗುತ್ತಿಲ್ಲವೆಂದೂ ತಮಗೆ ರಾತ್ರಿ ಪಾಳಿ ತಪ್ಪಿಸ ಬೇಕೆಂದೂ ಅವರು ಹೇಳಿಕೊಳ್ಳುತ್ತಿದ್ದರು.

‘ಮೋಹಿನಿ’ಯೊಬ್ಬಳು ತನ್ನನ್ನು ಹೀಗೆ ಕಾಡುತ್ತಿರುವುದಾಗಿ ಅವರು ನಂಬಿದ್ದರು. ಅವರ ನಂಬಿಕೆಗೆ ಒಂದು ಕಟ್ಟುಕಥೆಯ ಆಧಾರವಿತ್ತು.ಶ್ರೀ ಗುರುಸ್ವಾಮಿಯವರು ಮಹಾತ್ಮಗಾಂಧಿ ರಸ್ತೆಯ ಈ ಕಟ್ಟಡವನ್ನು ಖರೀದಿಸುವ ಮುನ್ನ ಅಲ್ಲಿ ‘ಫನಲ್ಸ್’ ಎನ್ನುವ ಬಾರ್ ನಡೆಯುತ್ತಿತ್ತು.ಆ ಕಾಲದಲ್ಲಿ ಅಲ್ಲಿ ಒಂದೆರಡು ಕೊಲೆಗಳಾಗಿದ್ದವಂತೆ.  ಕೊಲೆಯಾದ ಅತೃಪ್ತ  ಪ್ರೇತಾತ್ಮಗಳು ಇನ್ನೂ ಕಟ್ಟಡದಲ್ಲಿ ಠಳಾಯಿಸುತ್ತಿವೆ ಎಂಬ ವದಂತಿಯೇ ರಾಮಸಿಂಗರ ‘ಕಥೆ’ಗಳ ಮೂಲವಾಗಿತ್ತು. ರಾಮ ಸಿಂಗರ ಕಥೆಗಳನ್ನೆಲ್ಲ ಕೇಳಿಸಿಕೊಂಡು ಅವರಲ್ಲಿ ಧೈರ್ಯ ತುಂಬುತ್ತಾ ಅಂದಿನ ಕೆಲಸ ನಿರ್ವಹಿಸಬೇಕಿತ್ತು.

ನವ ತಂತ್ರಾಂಶಗಳ ಆಗಮನದಿಂದ ಈ ಭೂತಾತ್ಮಪ್ರೇತಾತ್ಮ ಸಂಬಂಧಗಳೆಲ್ಲ ಇತಿಹಾಸದ ಪುಟಗಳನ್ನು ಸೇರಿವೆ. ಪತ್ರಿಕೆಯ ಪುಟಗಳಲ್ಲಿ ಇದ್ದು ಏಳೇಳಿ ಬೀಳುತ್ತಿದ್ದ ಈ ಮಾನವೀಯ ಸ್ಪರ್ಶ ಈಗ ಕಾಣಿಸುತ್ತಿಲ್ಲ. ಮನೆಗಳಲ್ಲೇ ಕುಳಿತು ಪುಟಗಳನ್ನು ಸಿದ್ಧ ಪಡಿಸಬಹುದು.

ತಂತ್ರಾಂಶದ ಈ ಯುಗದಲ್ಲಿ ಡಿಜಿಟಲ್ ಪ್ರಿಂಟಿಗ್ ಬಂದಿದೆ. ಕನ್ನಡ ಲಿಪಿಯನ್ನು ಮುದ್ರಣಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಕನ್ನಡದ  ಅಚ್ಚುಮೊಳೆಗಳನ್ನು ಸಿದ್ಧಪಡಿಸುವ ಕಾರ್ಯ ಮೊದಲು ಬಂಗಾಳದ ಶ್ರೀರಾಂಪುರದಲ್ಲಿ ಶುರುವಾಯಿತೆಂದು ಸಂಶೋಧಕರು ಹೇಳುತ್ತಾರೆ. ಇನ್ನು ಕೆಲವರು ಅದಕ್ಕೂ ಮೊದಲು ನಮ್ಮ ದಕ್ಷಿಣ ಕನ್ನಡದ ಅಕ್ಷರ ಶಿಲ್ಪಿ ಅತ್ತಾವರ ಅನಂತಾಚಾರಿ ಎಂಬುವರು ಗುಜರಾತ್ ಟೈಪ್ ಫೌಂಡ್ರಿಯವರಿಗೆ ಕನ್ನಡ ಅಚ್ಚು ಮೊಳೆಗಳನ್ನು ವಿವಿಧ ಗಾತ್ರಗಳಲ್ಲಿ ಸಿದ್ಧಪಡಿಸಿ ಕೊಟ್ಟಿದ್ದರಂತೆ. ಇದೆಲ್ಲ ಇತಿಹಾಸವಾಯಿತು.

ಇಂದು ಪ್ರಕಟಣ ಪ್ರಪಂಚ ಅತ್ತಾವರ ಅನಂತಾಚಾರಿ ಅವರಂಥವರ ಋಣಾನುಬಂಧದಿಂದ ಮುಕ್ತವಾಗಿದೆ ಅನ್ನಬಹುದು. ಮೊಳೆ ಜೋಡಿಸುವುದು ಹೋಗಿದೆ, ಆದರೆ ಇಂದಿನ ಆಧುನಿಕ ತತ್ರಾಂಶ ಅಳವಡಿಸಿಕೊಂಡಿರುವ ಕೀ ಬೋರ್ಡಿನ ಅಕ್ಷರ ರೂಪಗಳು ಹಿಂದಿನವರ ಆವಿಷ್ಕಾರದ ತದ್ರೂಪವೇ ಆಗಿದೆ ಎನ್ನುವವರೂ ಇದ್ದಾರೆ.

ಮುಂದೆ ಬೃಂದಾವನ್ ಟೈಪ್ಸ್ ಎನ್ನುವ ಕನ್ನಡದ ಹೊಸ ಅಚ್ಚಿನ ಮೊಳೆಗಳು ಬಂದವು. ಇವು ಅನಂತಾಚಾರಿ ರೂಪಿಸದ ಅಕ್ಷರ ವಿನ್ಯಾಸದ ಸುಧಾರಿತ ರೂಪ ಎಂದು ಖ್ಯಾತ ಸಂಶೋಧಕ ಶ್ರೀನಿವಾಸ ಹಾವನೂರ ಮತ್ತು ಪತ್ರಕರ್ತ ಎಂ.ಬಿ.ಸಿಂಗ್ ಹೇಳುತ್ತಿದ್ದರು. ಪತ್ರಿಕಾ ಪ್ರಪಂಚದೆ ಈ ‘ಸಬಾಲ್ಟರ್ನ್’ಗಳ ಪ್ರತಿಭೆ ಮತ್ತು ಕೊಡುಗೆಯನ್ನು ಮಾನ್ಯ ಮಾಡುವ ಕೆಲಸವನ್ನು ನಮ್ಮ ಸಾಂಸ್ಕೃತಿಕ ಪ್ರಪಂಚ ಮಾಡದೇ ಇರುವುದು ವಿಷಾದನೀಯ.      

March 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: