ಚರಿತಾ ಕಣ್ಣಲ್ಲಿ ಹಕ್ಕಿ ಬಿಟ್ಟ ಗೂಡು..

-ಚರಿತಾ

ನನ್ನ ಪಾಡಿಗೆ ನಾನು

ಮೊನ್ನೆ ಆ ಗೂಡನ್ನು ಕಿಟಕಿ ಗಾಜಿನ ಮೂಲಕ ಇಣುಕಿದಾಗ ಗೂಡಿನ ಬಾಯಿಗೆ ಒಂದಿಷ್ಟು ನಾರು ಪೇರಿಸಿಟ್ಟಿದ್ದು ಕಂಡೆ. ನಾನು ಇಲ್ಲಿಂದ ಇಣುಕೋದು ಗೊತ್ತಾಗಿ ಮರೆಮಾಡಿರಬೇಕು ಅನ್ನಿಸಿತು.ತುಂಬ ಹೊತ್ತಿನ ತನಕ ಗೂಡಿನ ಜೊತೆಗೆ ಯಾವುದೇ ವ್ಯವಹಾರವಾಗದ್ದನ್ನು ಕಂಡಮೇಲೆ ಹಕ್ಕಿ ಗೂಡು ಬಿಟ್ಟಿರುವುದು ಖಾತ್ರಿಯಾಯ್ತು. ಎರಡು ದಿನ ಬೆಂಗಳೂರಿಗೆ ಹೋಗಿಬರುವಷ್ಟರಲ್ಲಿ ನನಗೆ ಹೇಳದೆ, ಕೇಳದೆ, ಹೀಗೆ ಖಾಲಿ ಮಾಡಿದ್ದು ಮೋಸ ಅನಿಸಿ, ಸ್ವಲ್ಪ ಹೊತ್ತು ಮೌನ ಆಚರಿಸಿದೆ.ಇದು ಸಣ್ಣ ಶಾಕ್ ಅನಿಸಿದರೂ ಅನಿರೀಕ್ಷಿತವಾಗಿದ್ದರಿಂದ ಬೇಸರ ನಿಧಾವಾಗಿ ತಲೆವರೆಗೂ ಹರಡಿ ಕೂತಿತ್ತು.

ಎರಡು ಪುಟ್ಟ ದಾಸವಾಳದಂಥ ಹಕ್ಕಿಗಳು ಅವು. ‘ಹೂ ಹಕ್ಕಿ’ ಅನ್ನೋದು ಅವುಗಳ ಕನ್ನಡ ಹೆಸರು. ಉದ್ದ ಕೊಕ್ಕು, ಆಗಾಗ ಕೊಕ್ಕಿನಿಂದ ಹೊರಗಿಣುಕುವ ಮಕರಂದ ಹೀರುವ ಅವುಗಳ ನಾಲಿಗೆ..ಗಂಡು ಹಕ್ಕಿಗೆ ತಲೆ ಮತ್ತು ಕತ್ತಿನಲ್ಲಿ ಮಿರುಗುವ ನೀಲಿ ತುಪ್ಪಳ ಇದೆ. ಹೆಣ್ಣು ಹಕ್ಕಿ ಮಾತ್ರ ನೀಟಾಗಿ, ಯಾವುದೇ ಮೇಕಪ್ ಇಲ್ಲದೆ, ಹಳದಿ ಹೊಟ್ಟೆ, ಕಂದು ಬಣ್ಣದ ಬೆನ್ನು ಹೊತ್ತು ಪಟಪಟಪಟ ಒಂದೇ ಸಮನೆ ತನ್ನ ಮರಿಗೆ ಉದ್ದುದ್ದ ಹುಳುಗಳನ್ನು ತಂದು ತುರುಕುವುದು ನೋಡಿದ್ದೆ. ಮುಷ್ಟಿಗಾತ್ರದ ಗೂಡಿನಲ್ಲಿ ಒಂದೇ ಒಂದು ಮರಿ ಮಾಡಿದ್ದವು. ಆ ಮರಿ- ನೋಡನೋಡುತ್ತಿದ್ದಂತೆ ದಿನದಿನಕ್ಕು ಗಾಬರಿ ಹುಟ್ಟಿಸುವಷ್ಟು ಸ್ಪೀಡಾಗಿ ದೊಡ್ಡದಾಗೇಬಿಟ್ಟಿತ್ತು ! ಆಗಲೇ ಸಣ್ಣ ಅಂದಾಜು ಮಾಡಿದ್ದೆ,.. ಈಗ ನಿಜಕ್ಕೂ ಖಾಲಿ ಗೂಡು ನೋಡುವ ದಿನ ಬಂದೇಬಂತು !

ಆ ಗೂಡೋ – ಮಹತ್ವದ ಚರಿತ್ರೆಯನ್ನು ಆಗುಮಾಡಿದ್ದರ ಪುಣ್ಯದಭಾರಕ್ಕೋ ಏನೋ ಎಂಬಂತೆ ಗಂಭೀರವಾಗಿ, ದೇವರನ್ನೇ ಸಾಕ್ಷಾತ್ಕರಿಸಿಕೊಂಡ ವಿನಮ್ರ ಭಕ್ತನಂತೆ ತಣ್ಣಗೆ ಕಣ್ಮುಚ್ಚಿ, ದಾಸವಾಳದ ರೆಂಬೆಯ ತುದಿಯಲ್ಲಿ ಗಾಳಿಗೂ ಅಲುಗಾಡದೆ, ಮಹಾತ್ಮನಂತೆ ಕುಳಿತಿದೆ !

ಕಡೇಪಕ್ಷ ಮತ್ತೆ ಸಿಕ್ಕುವ ಸುಳ್ಳು ಪ್ರಾಮಿಸ್ ಕೂಡ ಮಾಡದೆ ಗೂಡುಬಿಟ್ಟ ಈ ಪಿಟ್ಟೆ ಹಕ್ಕಿಗಳ ಧಿಮಾಕು ಮತ್ತು ನಿಷ್ಠುರತೆಯ ಬಗ್ಗೆ ನಾಲಿಗೆ ಕಹಿಮಾಡಿಕೊಂಡು ತಿಂಡಿತಿನ್ನುತ್ತಿದ್ದಾಗಲೇ ಒಂದಿನ ‘ ಹೋ, ಇಲ್ಲೇ ಇದೀವಪ್ಪಾ..’ ಅಂತ ಒಳ್ಳೆ ಅಪರೂಪದ ನೆಂಟರ ಥರ ಹೊಸಮರಿಯನ್ನು ಬೇರೆ ಕಟ್ಟಿಕೊಂಡು ಧಾವಂತದಿಂದ ಪಟಪಟ ರೆಕ್ಕೆಬಡಿದು ಕರೆದು, ಗೂಡನ್ನು ತಟ್ಟಿಎಬ್ಬಿಸಿ, ಪುರ್ರ್..ಅಂತ ಅತ್ತಿತ್ತ ಹಾರಾಡಿ, ನನಗೆ ಚೆನ್ನಾಗಿ ಕಾಣಿಸೋ ಹಾಗೆ, ಸ್ಪಾಟ್ ಲೈಟ್ ಥರದ ಬೆಳಕಲ್ಲಿ ಮರಿಯನ್ನು ಕೂರಿಸಿ, ಷೋ ಮುಗಿಸಿ, ಮತ್ತೆ ಎತ್ತಲೋ ಮಾಯ !

ಆ ಮರಿಗೆ ರೆಕ್ಕೆ ಬಲಿತಿದ್ದರೂ ಹಿಂಭಾಗದ ಪುಕ್ಕ ಮಾತ್ರ ಪುಟ್ಟದಾಗೆ ಇತ್ತು. ಬೋಗನ್ವಿಲ್ಲ ಗಿಡದ ಕೊಂಬೆಯ ತುದಿಯಲ್ಲಿ ಕೂತು, ತೂರಾಡುತ್ತ, ‘ಬ್ಯಾಲೆನ್ಸ್ ಮಾಡೋದು ಹೇಗೆ ಅಪ್ಪಾ..’ ಅಂತ ಕೇಳ್ತಾ ಇತ್ತು.

ನಮ್ಮ ಡೈನಿಂಗ್ ಟೇಬಲ್ ಪಕ್ಕದ ದೊಡ್ಡ ಕಿಟಕಿಗೆ ನೇರವಾಗಿ ಮುಖಮಾಡಿದಂತೆ ನಮ್ಮ ಕಿಟಕಿಯ ಪ್ರತಿ ಫ್ರೇಂನಿಂದ ಬೇರೆ ಬೇರೆ ಕೋನಗಳಲ್ಲಿ ವಿವರವಾಗಿ ನೋಡಲು ಅನುಕೂಲ ಆಗೋಹಾಗೆ ಗೂಡುಕಟ್ಟಿವೆ ಅವು ! ಗಿಡದ ನಾರು, ಕೂದಲು,ತರಗೆಲೆ, ಸಣ್ಣ ಪೇಪರ್ ಚೂರು, ಹತ್ತಿ- ಇವುಗಳನ್ನೆಲ್ಲ ಸ್ವಲ್ಪಸ್ವಲ್ಪವೇ ತಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿಮಾಡಿ,.. ಈಗ ದೊಡ್ಡ ಮರಿಯನ್ನು ನನಗೆ ತೋರಿಸಲಿಕ್ಕೆ ಅಂತಾನೇ ಒಂದು ವಿಸಿಟ್ ಕೊಟ್ಟು ಹೋಗಿದ್ದೂ ಆಯ್ತು… ಆದ್ರೂ ಯಾಕೋ ಇದ್ಯಾವುದನ್ನೂ ನನ್ನ ಕ್ಯಾಮರದಲ್ಲಿ ಬಂಧಿಸಿಡುವ ಮನಸ್ಸು ಮಾತ್ರ ಆಗಲೇ ಇಲ್ಲ…!

ಬಹುಷಃ ಅಗಾಧ ಮತ್ತು ಅವಿರತ ಚಲನೆಯ ಗಡಿಯಾರದ ಮುಳ್ಳುಗಳನ್ನು ನನಗೆ ಬೇಕಾದ ಹಾಗೆ ತಿರುಚುವ ಅಥವಾ ವೈಂಡ್ ಅಪ್ ಮಾಡುವ ದೊಡ್ಡ ಮೇಧಾವಿ ನಾನು – ಎಂಬ ಭ್ರಮೆ ನಿಧಾನವಾಗಿ ಕರಗುತ್ತಿರಬಹುದು. ಬದುಕಿನ ಪ್ರತಿಯೊಂದು ಚಲನೆಯ ನಿಷ್ಠುರತೆಯ ಭಾರವಾದ ಹೆಜ್ಜೆಗುರುತುಗಳು ನನ್ನ ಉಸಿರಿನ ಹಾದಿಯಲ್ಲೂ ಮೂಡುತ್ತಿವೆ.. ನಿಲ್ಲದ ಈ ಚಲನೆಗೆ ತಲೆಬಾಗಿ, ದಾರಿಮಾಡಿಕೊಡುತ್ತ ಹಕ್ಕಿರೆಕ್ಕೆಯ ಧಾವಂತಕ್ಕೆ ಮುಗುಳ್ನಗುತ್ತಿದ್ದೇನೆ.

ಒಮ್ಮೆ ನನ್ನಲ್ಲಿದ್ದು, ನನ್ನದಾಗಿದ್ದು – ಮತ್ತೆ ನೆನಪಿರದಂತೆ ಕಳೆದುಹೋಗುವ ನೆನಪುಗಳು ನನ್ನ ಕಣ್ಣಗಲವನ್ನು ಮತ್ತೆ ವಿಸ್ತಾರಗೊಳಿಸಿವೆ.. ಪಡೆದು ಕಳೆಯುವ ಅವಿರತ ಚಲನೆಯ ಈ ಹಕ್ಕಿಗಳು ಆ ಬೆಚ್ಚನೆಯ ಗೂಡಿನ ನಿರ್ಲಿಪ್ತ ಗಾಂಭೀರ್ಯವನ್ನು ಮಾತ್ರ ನನಗಾಗಿ ಬಿಟ್ಟುಹೋಗಿವೆ…

‍ಲೇಖಕರು G

February 23, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: