ಬಿ ಎಂ ಬಷೀರ್ ಕವಿತೆ: ಮೂರು ಬೆರಳುಗಳು..

ಬಿ.ಎ. ಫಲಿತಾಂಶ ಹೊರ ಬಿದ್ದದ್ದೇ ನಾನು ಮನೆ ಮಂದಿಯೆಲ್ಲ ಬೇಡ ಬೇಡವೆಂದರೂ, ಗಂಟುಮೂಟೆಯೊಂದಿಗೆ ಮುಂಬಯಿಗೆ ಹೊರಡುವ ನಿರ್ಧಾರ ಮಾಡಿದೆ. ಅಲ್ಲಿ ನನ್ನ ಬಂಧುಗಳು, ಮಿತ್ರರು ಎನ್ನುವವರು ಯಾರೂ ಇದ್ದಿರಲಿಲ್ಲ. ಆದರೂ ಯಾವುದೋ ಒಳಗಿನ ನಂಬಿಕೆಯಿಂದ(ಅಲ್ಲಿ ನನ್ನವರೆನ್ನುವವರು ಯಾರೋ ನನಗಾಗಿ ಕಾದು ನಿಂತಿರಬಹುದು ಎಂಬ ನಂಬಿಕೆಯಿಂದ) ಹೊರಟು ನಿಂತಿದ್ದೆ. ಮುಂಬೈಗೆ ಹೊರಟ ದಿನ ಇನ್ನೂ ಬೆಳಕು ಹರಿದಿರಲಿಲ್ಲ. ಕತ್ತಲು, ಚುಮುಚುಮು ಚಳಿ.

ನಾನಿನ್ನೇನೂ ಮನೆಯಿಂದ ಹೊರ ಕಾಲಿಡಬೇಕು ಎನ್ನುವಾಗ ನನ್ನ ಅಣ್ಣ ‘‘ಬಸ್‌ಸ್ಟಾಂಡ್‌ವರೆಗೆ ನಾನೂ ಬರುತ್ತೇನೆ’’ ಎಂದ. ನಾನು ಬಸ್ ಹತ್ತಿ, ಅದು ಹೊರಡುವವರೆಗೂ ಅಣ್ಣ ನನ್ನ ಜೊತೆಗಿದ್ದ. ಸುಮಾರು ಹತ್ತು ವರ್ಷಗಳ ಬಳಿಕ ‘ಆ ಕ್ಷಣ’ ನನ್ನೊಳಗೆ ಕವಿತೆಯ ರೂಪ ಪಡೆಯಿತು. ಅದನ್ನು ನಿಮ್ಮ ಮುಂದಿಟ್ಟಿದ್ದೇನೆ.


ಅವನ ಮೂರು ಬೆರಳುಗಳ

ಭಾರವನ್ನು ಹೆಗಲಲ್ಲಿ ಹೊತ್ತು

ನಾನು ಮುಂಬೈಯ ದಾರಿ ಹಿಡಿದೆ

ಅಮ್ಮನ ಕಣ್ಣ ಹನಿಗಿಂತ,

ಅಪ್ಪನ ಸಿಟ್ಟಿಗಿಂತ,

ತಂಗಿಯರ ನಿಟ್ಟುಸಿರಿಗಿಂತ ಭಾರವಾದದ್ದು

ಇನ್ನೊಂದು ಇದೆ ಎನ್ನುವುದನ್ನು ಅರಿತ ದಿನ ಅದು!

ಹಗಲಿನ್ನೂ ತೆರೆಯದ ಹೊತ್ತು

ಎಣ್ಣೆ ಮಗಿದಿದ್ದ ಚಿಮಿಣಿ ದೀಪ

ಇನ್ನೂ ಆ ಕ್ಷಣದ ಯಾಜಮಾನ್ಯಕ್ಕಾಗಿ ಒದ್ದಾಡುತ್ತಿತ್ತು

ಇನ್ನೊಬ್ಬರ ಮುಖದರ್ಶನಕ್ಕೆ

ಅವಕಾಶ ಕೊಡದ ಆ ಕತ್ತಲೇ

ನಮ್ಮನ್ನೆಲ್ಲ ರಕ್ಷಿಸಿತ್ತು!

ಏನನ್ನಿಸಿತೋ,

‘ತಮ್ಮನನ್ನು ಬಸ್ಸಿನವರೆಗೆ

ಬಿಟ್ಟು ಬರುವೆ’ ಅಂದ

ಬೇಡ ಅನ್ನಲಿಲ್ಲ ನಾನೂ

ದಾರಿ ಅರ್ಧ ಮುಗಿದರೂ ಮಾತಾಡಿರಲಿಲ್ಲ ಇಬ್ಬರೂ

ಮಂಜುಗತ್ತಲಲ್ಲಿ

ಎಡವುತ್ತಾ ಸಾಗುತ್ತಿದ್ದರೂ

ಪರಸ್ಪರ ಕೈ ಚಾಚಲಿಲ್ಲ

ಒಬ್ಬರನ್ನೊಬ್ಬರು ಆಧರಿಸಿ ನಿಲ್ಲಲಿಲ್ಲ

ನಾನೇ ಹೊತ್ತ ನನ್ನ ಭಾರವನ್ನು

ಕಣ್ಣು ತಪ್ಪಿಸಿ ನೋಡಿ,

ಪಕ್ಕನೆ ತಲೆತಗ್ಗಿಸುತ್ತಿದ್ದ!

ಈಗಲೂ ನೆನಪಿದೆ ನನಗೆ

ಕೆನ್ನೆಯ ಮೇಲೆ ಉದುರಿದ

ಆ ಮೊದಲ ಹನಿ!

‘ಓ ಮಳೆ…!’ ಎಂದೆ

‘ಹೌದು…ಮಳೆ…’ ಎಂದ

ಆಕಾಶ-ಭೂಮಿ ಇದ್ದಕ್ಕಿದ್ದಂತೆಯೇ ಒಂದಾಯಿತು

ಬಿಡಿಸಿದ ನನ್ನ ಛತ್ರಿಯೊಳಗೆ

ಸೇರಿಕೊಂಡ…

ಎರಡು ಮರೂಭೂಮಿಗಳು ಒಂದಾಗುವಂತೆ

ಪರಸ್ಪರ ಹತ್ತಿರವಾದೆವು

ಆಧಾರಕ್ಕೆಂದು ಒಂದು ಕೈಯನ್ನು ನನ್ನ ಹೆಗಲ ಮೇಲಿಟ್ಟ

ಅವನದೆಷ್ಟು ಜಿಪುಣನಾಗಿದ್ದ!?

ಮೂರು ಬೆರಳುಗಳನ್ನಷ್ಟೇ ಎಣಿಸಿ ಇಟ್ಟಿದ್ದ!

ಹೂವಿನ ಎಸಳಿನಂತಹ

ಆ ಮೂರು ಬೆರಳುಗಳು

ಅದೆಷ್ಟು ಭಾರವಾಗಿದ್ದವು!

ಬಸ್ಸು ಇನ್ನೇನೂ ಹೊರಡಬೇಕು

ಎನ್ನುವಷ್ಟರಲ್ಲಿ ತನ್ನ ಜೇಬಿನಿಂದ

ಲಕೋಟೆಯೊಂದ ತೆಗೆದ

‘ಬಂಧು, ಮಿತ್ರರಿಲ್ಲದ ಊರಿಗೆ

ಹೋಗುತ್ತಿದ್ದೀಯ.

ಕೊಲಾಬದಲ್ಲೊಬ್ಬ ನನ್ನ ಗೆಳೆಯನಿದ್ದಾನೆ

ನಿನ್ನ ಕುರಿತು ಈ ಪತ್ರದಲ್ಲಿ ಬರೆದಿದ್ದೇನೆ

ಅವನಿಗೆ ತೋರಿಸು’ ಎಣಿಸಿ ಎಣಿಸಿ ನುಡಿದ!

ಭದ್ರವಾಗಿ ಮುಚ್ಚಿದ್ದ

ಲಕೋಟೆ,

ಅವನಿಂದ ಇಸಿದುಕೊಳ್ಳುವಾಗ

ಈಗಲೂ ನೆನಪಿದೆ ನನಗೆ,

ತಪ್ಪಿಯೂ ಬೆರಳುಗಳು ಸ್ಪರ್ಶಿಸಿರಲಿಲ್ಲ!

ಬಸ್ಸು ಎಲ್ಲಿ ತಲುಪಬೇಕಿತ್ತೋ ಅಲ್ಲಿಗೆ ತಲುಪಲಿಲ್ಲ

ದಾರಿ ತಪ್ಪಿದೆ

ಮನುಷ್ಯನ ನರ ನಾಡಿಗಳಂತಿದ್ದ

ಆ ಗಲ್ಲಿಗಲ್ಲಿಗಳಲ್ಲಿ ಅಲೆದೆ

ಅವನ ಗೆಳೆಯನಿಗಾಗಿ

ಕೈಯಲ್ಲಿ ಭದ್ರವಾಗಿದ್ದ ಲಕೋಟೆ ಕಳೆದುಹೋಗುವವರೆಗೂ…

ಓ ದೇವರೆ…

ಈಗ ಹೊಳೆಯುತ್ತಿದೆ ನನಗೆ

ಒಂದೊಮ್ಮೆ ಅದು ನನಗೇ ಎಂದು ಕೊಟ್ಟ

ಲಕೋಟೆಯಾಗಿದ್ದಿರಲೂ ಬಹುದಿತ್ತು

ಕಳೆದು ಹೋಗುವ ಮೊದಲು

ಆ ಲಕೋಟೆಯನ್ನು ಒಡೆದು

ನಾನು ಓದಬೇಕಾಗಿತ್ತು..

‍ಲೇಖಕರು G

February 23, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. prakashchandra

    Eegaagake lakshaanthara veekshakarannu hondiruva janapriya Avadhi ideega hosa udugeyondige baruthiruvudu santhasada vishaya.Sheeghrave avadhi janapriyathe vishwaadyantha beleyali endu haaraisuve.

    ಪ್ರತಿಕ್ರಿಯೆ
  2. naveed ahamed khan ,Tumkur

    ellarallu kanna haniyannu tharuva kavithe. bareetha iri haagu post maadtha iri.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: