ಜೋಗಿ ಬರೆಯುತ್ತಾರೆ: ಇವಳ ಉಡುಗೆ ಅವಳಿಗೆ ತೊಡಿಸಿ…

ರಾಮಾಯಣ ಮಹಾಭಾರತದಂಥ ಸೀರಿಯಲ್ಲುಗಳನ್ನು ಕನ್ನಡಕ್ಕೆ ಡಬ್ ಮಾಡುವುದಕ್ಕೆ ಅವಕಾಶ ಕೊಡಬೇಕು ಎಂದು ಹಿರಿಯ ನಟಿಯೊಬ್ಬರು ವಿನಂತಿ ಮಾಡಿಕೊಂಡದ್ದೇ ತಡ, ಡಬ್ಬಿಂಗ್ ಪರವಾಗಿ ಮಾತಾಡುವವರು ಚುರುಕಾಗಿದ್ದಾರೆ. ಡಬ್ಬಿಂಗ್ ಕುರಿತ ಒಳಿತು ಕೆಡುಕುಗಳ ಚರ್ಚೆ ಶುರುವಾಗಿದೆ. ಡಬ್ಬಿಂಗ್ ಮಾಡುವುದರಿಂದ ಅಂಥ ಅಪಾಯವೇನೂ ಇಲ್ಲ. ಅತ್ಯುತ್ತಮ ಚಿತ್ರಗಳು ಕನ್ನಡಿಗರಿಗೆ ನೋಡುವುದಕ್ಕೆ ಸಿಗುತ್ತವೆ. ಉದ್ಯಮ ಬೆಳೆಯುತ್ತದೆ ಎಂದು ಅವರು ವಾದಿಸುತ್ತಾರೆ. ತುಂಬ ಹಿಂದೆಯೇ ನಟ ಉಪೇಂದ್ರ ಕೂಡ ಡಬ್ಬಿಂಗ್ ಒಳ್ಳೆಯದು ಎಂದು ವಾದಿಸಿದ್ದರು. ರಜನೀಕಾಂತ್ ನಟಿಸಿದ ಚಿತ್ರವನ್ನೋ ಚಿರಂಜೀವಿ ಸಿನಿಮಾವನ್ನೋ ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರದರ್ಶನ ಮಾಡಿದರೆ ತಮಿಳರೂ ತೆಲುಗರೂ ಕನ್ನಡದಲ್ಲೇ ಆ ಸಿನಿಮಾಗಳನ್ನು ನೋಡುತ್ತಾರೆ. ಅದಕ್ಕೋಸ್ಕರ ಕನ್ನಡ ಕಲಿಯುತ್ತಾರೆ ಎಂದಿದ್ದರು.

ಇನ್ನೊಂದು ಕಡೆ ಡಬ್ಬಿಂಗ್ ಇಡೀ ಉದ್ಯಮವನ್ನು ನಾಶ ಮಾಡುತ್ತದೆ ಎಂದು ಅನೇಕರು ಗಾಬರಿಯಾಗುತ್ತಾರೆ. ಅವರ ವಾದ ಇದು. ಡಬ್ಬಿಂಗ್ ಶುರುವಾದ ತಕ್ಷಣ ಕನ್ನಡ ಚಿತ್ರಗಳ ನಿರ್ಮಾಣ ಕಡಿಮೆಯಾಗುತ್ತದೆ. ಹೀಗಾಗಿ ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಸಾವಿರಾರು ಮಂದಿ ಬೀದಿಪಾಲಾಗುತ್ತಾರೆ. ಅಲ್ಲದೇ ನಮ್ಮ ಸಂಸ್ಕೃತಿ, ಪರಂಪರೆ, ದೇಸೀಯತೆ ಮತ್ತು ಸೊಗಡು ಕಣ್ಮರೆಯಾಗುತ್ತದೆ. ಡಬ್ಬಿಂಗ್ ಎನ್ನುವುದು ಕನ್ನಡತನದ ಮೇಲೆ ಮಾಡುವ ಆಕ್ರಮಣ ಎಂದು ಡಬ್ಬಿಂಗ್ ವಿರೋಧಿಗಳು ಕೆಂಡಾಮಂಡಲ ಸಿಟ್ಟಾಗುತ್ತಾರೆ.

ಇದಕ್ಕೆ ಅನೇಕ ಒಳಸುಳಿಗಳಿವೆ. ಅವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ಉದ್ಯಮದ ಹೊರಗೆ ನಿಂತು ಮಾತಾಡುವವರ ವಾದವೇ ಬೇರೆ, ಉದ್ಯಮದ ಒಳಗಿದ್ದು ಮಾತಾಡುವವರ ತಾತ್ವಿಕತೆಯೇ ಬೇರೆ. ಒಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವ ಸಿನಿಮಾ ಬೇಕು ಅಷ್ಟೇ. ತಮಿಳು ಸಿನಿಮಾ ನೋಡಿದ ತಕ್ಷಣ ಅದನ್ನು ತಮಿಳು ಪ್ರೀತಿ ಎಂದು ಭಾವಿಸಲಾಗದು. ಎಂದಿರನ್ ಸಿನಿಮಾವನ್ನು ನಾನು ನೋಡುವ ಹೊತ್ತಿಗೆ, ಆ ಸಿನಿಮಾ ಚೆನ್ನಾಗಿದೆ ಅನ್ನುವುದಷ್ಟೇ ನನಗೆ ಮುಖ್ಯ. ಅದು .ಯಾವ ಭಾಷೆಯದು ಎನ್ನುವುದು ಗೌಣ. ತಮಿಳು ಸಿನಿಮಾ ಎನ್ನುವ ಕಾರಣಕ್ಕೆ ನಾವ್ಯಾರೂ ಪಯಣಂ ಸಿನಿಮಾ ನೋಡುವುದಿಲ್ಲ.

ಆದರೆ ಉದ್ಯಮದ ಮಂದಿಗೆ ಎದುರಾಗಿರುವ ಆತಂಕಗಳೇ ಬೇರೆ. ಡಬ್ಬಿಂಗಿಗೆ ಅನುಮತಿ ಕೊಟ್ಟರೆ ತೆಲುಗು, ತಮಿಳು, ಹಿಂದಿ ಸಿನಿಮಾಗಳು ಕ್ಷಣಾರ್ಧದಲ್ಲಿ ನಮ್ಮ ಭಾಷೆಯನ್ನು ತೊಟ್ಟುಕೊಂಡು ಇಲ್ಲಿಗೆ ಬಂದುಬಿಡುತ್ತವೆ. ಈ ಮೂರೂ ಭಾಷೆಯಲ್ಲಿ ವಾರಕ್ಕೆ ಒಂದೊಂದು ಸಿನಿಮಾ ಬಿಡುಗಡೆಯಾದರೂ ಕನ್ನಡಿಗರಿಗೆ ಮೂರು ಸಿನಿಮಾ ಸಿಕ್ಕಂತಾಯಿತು. ಈ ಮೂರೂ ಭಾಷೆಗಳ ಸಿನಿಮಾಗಳಿಗೆ ವಿಶ್ವ ಮಾರುಕಟ್ಟೆಯಿದೆ. ಹೀಗಾಗಿ ಒಂದೊಂದು ಸಿನಿಮಾದ ಬಜೆಟ್ಟು ಕೂಡ ಹತ್ತಾರು ಕೋಟಿ. ಹೀಗಾಗಿ ಅವರು ತಾಂತ್ರಿಕವಾಗಿ ಶ್ರೀಮಂತವಾಗಿರುತ್ತವೆ. ಅದ್ದೂರಿಯಾಗಿ ನಿರ್ಮಾಣಗೊಂಡಿರುತ್ತವೆ. ವಿಶ್ವದ ಅನೇಕ ತಾಣಗಳಲ್ಲಿ ಚಿತ್ರೀಕರಣಗೊಂಡಿರುತ್ತವೆ. ಅವುಗಳನ್ನು ಒಂದೆರಡು ಕೋಟಿಯಲ್ಲಿ ನಿರ್ಮಾಣಗೊಳ್ಳುವ ನಮ್ಮ ಚಿತ್ರಗಳು ಸರಿಗಟ್ಟುವುದಕ್ಕೆ ಸಾಧ್ಯವೇ ಇಲ್ಲ.

ಹೀಗಾಗಿ ಕನ್ನಡ ಮಾರುಕಟ್ಟೆ ಬಿದ್ದು ಹೋಗುತ್ತದೆ. ಇಲ್ಲಿನ ಸಿನಿಮಾಗಳು ಅವುಗಳ ಮುಂದೆ ಸೊರಗಿದಂತೆ ಕಾಣಿಸುತ್ತವೆ. ಹೀಗಾಗಿ ನಾವೆಲ್ಲ ಡಬ್ಬಿಂಗನ್ನು ವಿರೋಧಿಸಬೇಕು ಎಂದು ಚಿತ್ರೋದ್ಯಮದ ಮಂದಿ ವಾದ ಮಾಡುತ್ತಾರೆ. ಪಟ್ಟು ಹಿಡಿಯುತ್ತಾರೆ.

ಹಾಗೇ, ಉದ್ಯಮದೊಳಗೇ ಡಬ್ಬಿಂಗ್ ಬೇಕು ಅನ್ನುವವರೂ ಇದ್ದಾರೆ. ಅವರು ಕೊಡುವ ಕಾರಣವೂ ಕುತೂಹಲಕಾರಿಯಾಗಿದೆ. ನಮ್ಮ ನಾಯಕನಟರಿಗೆ ಕನ್ನಡದ ಮೇಲೆ ಪ್ರೀತಿಯಿಲ್ಲ, ಅವರದು ದುಡ್ಡಿನ ಮೇಲೆ ಮಾತ್ರ ಪ್ರೀತಿ. ಒಂದು ಚಿತ್ರ ಗೆದ್ದ ತಕ್ಷಣ ಸಂಭಾವನೆಯನ್ನು ಕೋಟಿಗೆ ಏರಿಸುತ್ತಾರೆ. ದೊಡ್ಡ ಸಂಭಾವನೆಯ ನಾಯಕನಿಗೆ ಹೊಂದುವಂತ ನಾಯಕಿ, ಪರಿಸರ, ಅದ್ದೂರಿತನಕ್ಕೋಸ್ಕರ ನಾವೂ ಏಳೆಂಟು ಕೋಟಿ ಖರ್ಚು ಮಾಡಬೇಕಾಗುತ್ತದೆ. ಕನ್ನಡ ಸಿನಿಮಾ ಸಾಮಾನ್ಯವಾಗಿ ಗಳಿಸುವುದು ಎರಡು ಕೋಟಿ. ಅದಕ್ಕಿಂತ ಹೆಚ್ಚಿಗೆ ಎಷ್ಟೇ ಖರ್ಚು ಮಾಡಿದರೂ ಅದು ರಿಸ್ಕೇ. ಈ ನಾಯಕನಟರಿಗೆ ಬುದ್ಧಿ ಬರಬೇಕಾದರೆ ನಾವು ಡಬ್ಬಿಂಗಿನ ಮೊರೆ ಹೋಗಬೇಕು. ಆಗ ಪರಭಾಷಾ ನಾಯಕರ ಜೊತೆ ನಮ್ಮ ನಟರೂ ಸ್ಪರ್ಧಿಸಿ ಗೆಲ್ಲಲಿ. ಇವರ ಯೋಗ್ಯತೆ ಏನೆಂದು ಆಗ ಗೊತ್ತಾಗುತ್ತದೆ.

ಈ ಮಧ್ಯೆ ಸೀರಿಯಲ್ ನಿರ್ಮಾಣ ಮಾಡುವವರ ಕೂಗು ಬೇರೆಯೇ ಇದೆ. ಕನ್ನಡದಲ್ಲಿ ದಿನಕ್ಕೆ ಏನಿಲ್ಲವೆಂದರೂ ಅರುವತ್ತು ಸೀರಿಯಲ್ಲುಗಳು ಪ್ರಸಾರವಾಗುತ್ತವೆ. ಒಂದೊಂದು ಸೀರಿಯಲ್ಲಿಗೂ ನೂರು ಮಂದಿ ಕೆಲಸ ಮಾಡುತ್ತಾರೆ. ಸುಮಾರು ಐದಾರು ಸಾವಿರ ಮಂದಿಗೆ ಸೀರಿಯಲ್ಲು ಉದ್ಯೋಗ ಕೊಟ್ಟಿದೆ. ಡಬ್ಬಿಂಗಿಗೆ ಅನುಮತಿ ನೀಡಿದ ತಕ್ಷಣ ಚಾನಲ್ಲುಗಳು ಬೇರೆ ಭಾಷೆಯ ಸೀರಿಯಲ್ಲುಗಳನ್ನು ಡಬ್ ಮಾಡಿ ಕನ್ನಡ ಚಾನಲ್ಲುಗಳಲ್ಲಿ ಪ್ರಸಾರ ಮಾಡುತ್ತವೆ. ಈಗ ಪ್ರತಿಯೊಂದು ಚಾನಲ್ಲೂ ಬಹುಭಾಷಾ ವಾಹಿನಿ. ಹೀಗಾಗಿ ಹಿಂದಿಯಲ್ಲೋ ಬಾಂಗ್ಲಾದಲ್ಲೋ ಪ್ರಸಾರವಾದ ಧಾರಾವಾಹಿ ಕನ್ನಡಕ್ಕೂ ಬರುತ್ತದೆ. ಇಲ್ಲಿ ಕಲಾವಿದರಿಗೆ, ನಿರ್ದೇಶಕರಿಗೆ ಕೆಲಸ ಇಲ್ಲದಂತಾಗುತ್ತದೆ. ಸಂಕಲನ, ಕತೆ, ಚಿತ್ರಕತೆ, ಸಂಭಾಷಣೆ, ಅಭಿನಯ, ವಾಹನ ಚಾಲಕರು, ತಂತ್ರಜ್ಞರು- ಈ ಯಾವ ವಿಭಾಗಕ್ಕೂ ಡಬ್ಬಿಂಗಿನಲ್ಲಿ ಕೆಲಸವಿಲ್ಲ. ಆ ಭಾಷೆಯನ್ನು ಕನ್ನಡಕ್ಕೆ ಅನುವಾದಿಸಬಲ್ಲ ಲೇಖಕರು ಮತ್ತು ಕಂಠದಾನ ಕಲಾವಿದರಿಗೆ ಮಾತ್ರ ಅಲ್ಲಿ ಅವಕಾಶ.

ಇವೆಲ್ಲವನ್ನೂ ನೋಡುತ್ತಿದ್ದರೆ ಎಂಥ ಅಪಾಯಕ್ಕೆ ನಾವು ಸಿಲುಕಿದ್ದೇವೆ ಅನ್ನುವುದನ್ನು ಸುಲಭವಾಗಿ ನಾವು ಊಹಿಸಬಹುದು. ಶಾರುಕ್ ಹತ್ತು ಕೋಟಿ ಸಂಭಾವನೆ ಪಡೆಯುತ್ತಾನೆ. ರಜನೀಕಾಂತ್ ಸಂಭಾವನೆ ಇಪ್ಪತ್ತೈದು ಕೋಟಿ ಎನ್ನುವುದನ್ನು ಓದಿ ಸಂತೋಷಪಡುವ ನಾವು ಪುನೀತ್ ರಾಜ್‌ಕುಮಾರ್ ಎರಡು ಕೋಟಿ ಪಡೆಯುತ್ತಾನೆ ಅಂದಾಗ ಕಸಿವಿಸಿಯಾಗುತ್ತೇವೆ. ಉಪೇಂದ್ರರ ಸೂಪರ್ ಚಿತ್ರ ತೆಲುಗಿಗೆ ಡಬ್ ಆಯಿತು ಅಂದಾಕ್ಷಣ ಹೆಮ್ಮೆ ಪಡುವ ನಾವು ನಮ್ಮಲ್ಲಿ ಡಬ್ಬಿಂಗ್ ಬರುತ್ತದೆ ಅಂದಾಕ್ಷಣ ಆತಂಕಗೊಳ್ಳುತ್ತೇವೆ. ಇದ್ದಕ್ಕಿದ್ದ ಹಾಗೆ ಸಂಸ್ಕೃತಿ, ಪರಂಪರೆ, ಕನ್ನಡತನ ಎಂದು ಮಾತಾಡುತ್ತೇವೆ.

ನಿಜಕ್ಕೂ ಸಮಸ್ಯೆಯಿರುವುದು ಇದ್ಯಾವುದರಲ್ಲೂ ಅಲ್ಲ. ಡಬ್ಬಿಂಗ್ ಬೇಕು ಅಥವಾ ಬೇಡ ಅನ್ನುವುದು ಉದ್ಯೋಗದ ಪ್ರಶ್ನೆಯಷ್ಟೇ ಅಲ್ಲ. ನಮ್ಮ ಕಲಾವಿದರು, ನಮ್ಮ ಲೇಖಕರು, ನಮ್ಮ ಕತೆಗಳು, ನಮ್ಮ ಪರಿಸರ ಕಲೆಯಾಗಿ ನಮ್ಮನ್ನು ತಟ್ಟುವ ಬೆರಗನ್ನು ನಾವು ಕಳೆದುಕೊಳ್ಳಲು ಬಯಸುತ್ತೇವಾ? ಟಿಎನ್ ಸೀತಾರಾಮ್ ಕೊಡುವಂಥ ಸೀರಿಯಲ್ಲುಗಳನ್ನು ಬೇರೆ ಯಾವ ಭಾಷೆಯಿಂದಾದರೂ ನಿರೀಕ್ಷಿಸಲು ಸಾಧ್ಯವಾ? ಸೂರಿ, ಯೋಗರಾಜ ಭಟ್, ಪುನೀತ್, ದರ್ಶನ್, ಸುದೀಪ್, ಜಯಶ್ರೀ, ಅನನ್ಯಾ ಕಾಸರವಳ್ಳಿ, ರಾಜೇಶ್, ಮಂಜುನಾಥ ಹೆಗಡೆ – ಎಲ್ಲರೂ ನಮ್ಮವರೇ ಅಲ್ಲವೇ. ಅವರು ಏನೇ ಮಾಡಿದರೂ ಅಲ್ಲಿ ನಮ್ಮ ಪರಿಸರದ ಕಂಪು ಹೊಮ್ಮುತ್ತಿರುತ್ತದಲ್ಲ.

ಅದ್ದೂರಿಯೊಂದೇ ನಮಗೆ ಮಾನದಂಡ ಆಗಬೇಕೇ? ಕಣ್ಮನ ಸೆಳೆಯುವ ಆರ್ಕಿಡ್ ಆಸೆಗೆ, ನಾವು ನಮ್ಮ ಮೈಸೂರು ಮಲ್ಲಿಗೆಯನ್ನು ಬಿಟ್ಟು ಬಿಡಲು ಸಿದ್ಧರಿದ್ದೇವಾ? ಕನ್ನಡ ಸಿನಿಮಾ, ಕನ್ನಡ ಸೀರಿಯಲ್ಲು ಅಂದರೆ ಭಾಷೆ ಒಂದೇ ಅಲ್ಲ. ಅದು ಬದುಕು. ಅದು ಮನಸ್ಸು. ಪ್ರತಿಭಾಷೆಯೂ ಅಷ್ಟೇ, ಅದು ಅಮ್ಮನಂತೆ. ಮಗಳಂತೆ, ಗೆಳತಿಯಂತೆ.

ಡಬ್ಬಿಂಗ್ ಬೇಕು ಅನ್ನುವವರ ಭಾಷೆಯಲ್ಲೇ ಮಾತಾಡುವುದಾದರೆ, ಪರಭಾಷಾ ಸಿನಿಮಾಗಳನ್ನು ಇಲ್ಲಿ ಪ್ರದರ್ಶನ ಮಾಡುವುದಾದರೆ ಅದಕ್ಕೆ ಸಬ್ ಟೈಟಲ್ ಹಾಕಿ. ಆಗ ಆ ಸಿನಿಮಾವನ್ನು ನೋಡಬಯಸುವ ಕನ್ನಡಿಗರು, ಕನ್ನಡ ಓದುವುದನ್ನೂ ಕಲೀತಾರೆ. ಪರಭಾಷಿಗರು ಕನ್ನಡ ಕಲಿಯಲೇಬೇಕು ಎಂಬ ಹಠದಲ್ಲಿ ಅರ್ಥವಿಲ್ಲ. ಒಬ್ಬ ತೆಲುಗನೋ ತಮಿಳನೋ ರಜನೀಕಾಂತ್, ಚಿರಂಜೀವಿ ಸಿನಿಮಾ ನೋಡುವುದಕ್ಕೆ ಕಷ್ಟಪಟ್ಟು ಕನ್ನಡ ಕಲಿತರೂ ಅವನದು ಕನ್ನಡದ ಮನಸ್ಸಾಗುವುದು ಸಾಧ್ಯವಿಲ್ಲ. ನಾವೂ ಅಷ್ಚೇ, ತೆಲುಗು ಸಿನಿಮಾ ನೋಡಿ ಬಂದರೂ ಅದನ್ನು ಕನ್ನಡದಲ್ಲೇ ಸವಿದಿರುತ್ತೇವೆ.

ಭಾಷೆ ನಮ್ಮ ಮನಸ್ಸಿನೊಳಗೆ ಮೆರೆಯದ ಹೊರತು, ಅದು ಮನಸ್ಸಿನ ಭಾಷೆಯೂ ಆಗದ ಹೊರತು ಅದನ್ನು ಉಳಿಸುವುದಕ್ಕೆ ಬೇರೆ ದಾರಿಗಳೇ ಇಲ್ಲ.

‍ಲೇಖಕರು G

February 22, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಡಾ.ಬಿ.ಆರ್.ಸತ್ಯನಾರಾಯಣ

    ಒಂದು ಒಳ್ಳೆಯ ಕನ್ನಡ ಕೃತಿ ಪ್ರಪಂಚದ ಯಾವ ಭಾಷೆಯಲ್ಲಿ ಬಂದರೂ ಅದು ಕನ್ನಡಕ್ಕೆ ಅನುವಾದವಾಗಬೇಕು. ಕನ್ನಡಿಗರು ಓದುವಂತಾಗಬೇಕು ಎಂದು ಅನುವಾದ ಅಕಾಡೆಮಿಯನ್ನೇ ಸ್ಥಾಪಿಸಿ ಸರ್ಕಾರ ಪೋಷಿಸುತ್ತದೆ. ಇವರು ಕನ್ನಡ ಪುಸ್ತಕಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸುವುದಿಸುವುದಕ್ಕಿಂತ ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವುದೇ ಹೆಚ್ಚು! ಅದು ಒತ್ತಟ್ಟಿಗಿರಲಿ. ಉದ್ಯೋಗನಿಮಿತ್ತವಾಗಿ ಕರ್ನಾಟಕಕ್ಕೆ ಬಂದಿರುವ ಹಲವರು, ಪರಿಸಸರದ ಭಾಷೆಯಾದ ಕನ್ನಡದ ಅಲ್ಪಸ್ವಲ್ಪ ಪರಿಚಯ ಪಡೆದುಕೊಂಡಿರುತ್ತಾರೆ. ಆವರು ಹೆಚ್ಚು ಕನ್ನಡ ಚಿತ್ರಗಳನ್ನು ನೋಡಿದಾಗ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಕೇವಲ ದೂರದರ್ಶನದ ಹಿಂದಿ ಕಾರ್ಯಕ್ರಮಗಳನ್ನು ನೋಡಿ ಹಿಂದಿಕಲಿತವರು ತುಂಬಾ ಜನರಿದ್ದಾರೆ. ದಶ್ಯಮಾದ್ಯಮದ ಶಕ್ತಿ ಅದು! ಆದರೆ ಆತನ ಮೆಚ್ಚಿನ ನಟರ ಚಿತ್ರಗಳನ್ನು ಅವನದೇ ಭಾಷೆಯಲ್ಲಿ ನೋಡಿದರೆ ಕನ್ನಡಕ್ಕೇನು ಪ್ರಯೋಜನ. ಉದಾಹರಣೆಗೆ ತಮಿಳು ಮಾತೃಭಾಷೆಯ ರಜನೀಕಾಂತ್ ಅಭಿಮಾನಿಗಳು ಇಲ್ಲಿದ್ದಾರೆ ಎಂದಿಟ್ಟುಕೊಳ್ಳೋಣ. ರಜನೀಕಾಂತನ ಒಂದು ಚಿತ್ರದ ಮೂಲಭಾಷೆಯ ಪ್ರದರ್ಶನದ ಜೊತೆಗೆ, ಕನ್ನಡಕ್ಕೆ ಡಬಿಂಗ್ ಆದ ಚಿತ್ರದ ಪ್ರದರ್ಶನವೂ ಕೆಲವು ಚಿತ್ರ ಮಂದಿರದಲ್ಲಿ ನಡೆಯುತ್ತಿದೆ ಎಂದಿಟ್ಟುಕೊಳ್ಳೋಣ. ಆಗ ರಜನೀಕಾಂತ್ ಅಭಿಮಾನಿಗಳು, ಅನಿವಾರ್ಯ ಕಾರಣಗಳಿಂದ, ಉದಾಹರಣೆಗೆ, ತನ್ನ ಕನ್ನಡದ ಸ್ನೇಹಿತರ ಜೊತೆ, ಚಿತ್ರಮಂದಿರ ಮನೆಯ ಹತ್ತಿರ ಇದೆ ಎಂದೋ, ಮೂಲಬಾಷೆಯ ಚಿತ್ರ ಪ್ರದರ್ಶನ ನಡೆಯುತ್ತಿರುವ ಚಿತ್ರಮಂದಿರದಲ್ಲಿ ಟಿಕೆಟ್ ಸಿಗಲಿಲ್ಲ ಎಂದೋ ಡಬ್ ಆದ ಚಿತ್ರವನ್ನೇ ನೋಡುತ್ತಾನೆ. ಹೀಗೆ ಒಂದೆರಡು ಚಿತ್ರಗಳನ್ನು ನೋಡುವಷ್ಟರಲ್ಲಿ ಆತನಿಗೆ ಕನ್ನಡ ಭಾಷೆಯ ಪರಿಚಯ ಚೆನ್ನಾಗಿಯೇ ಆಗುತ್ತದೆ ಅಲ್ಲವೆ? ಇನ್ನು ಕನ್ನಡ ಮಾತೃಭಾಷೆಯ ರಜನಿಕಾಂತ್ ಅಭಿಮಾನಿಗಳನ್ನು ನೋಡೋಣ. ಇವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಆದರೆ ರಜನಿಕಾಂತ್ ಇಷ್ಟ. ಆತನ ಚಿತ್ರಗಳೂ ಇಷ್ಟ. ಅವು ಕನ್ನಡದಲ್ಲಿ ಡಬ್ ಆಗಿಬಂದರೆ ನೋಡಿ ಖುಷಿಪಡುತ್ತಾರೆ. ಇಲ್ಲದಿದ್ದರೆ ಅನಿವಾರ್ಯವಾಗಿ ಮೂಲ ತಮಿಳು ಚಿತ್ರವನ್ನೇ ನೋಡುತ್ತಾರೆ. ಹೀಗೆ ಒಂದತ್ತಿಪ್ಪತ್ತು ತಮಿಳು ಚಿತ್ರಗಳನ್ನು ನೋಡುವಷ್ಟರಲ್ಲಿ ಕನ್ನಡಿಗನೂ ತಮಿಳುಭಾಷೆ ಕಲಿತುಕೊಳ್ಳುತ್ತಾನೆ. ಯಾರಾದರೂ ತಮಿಳು ಭಾಷಿಕರು ತಮಿಳಿನಲ್ಲಿ ಮಾತನಾಡಿದರೆ ತಾನೂ ತಮಿಳಿನಲ್ಲಿ ಮಾತನಾಡುವ ಉಮೇದು ತೋರಿಸುತ್ತಾನೆ. ಆಗ ಕನ್ನಡದರವು ನಿರಭಿಮಾನಿಗಳು, ಬೇರೆ ಭಾಷೆಯವರೊಂದಿಗೆ ಅವರ ಭಾಷೆಯಲ್ಲೇ ಮಾತನಾಡಲು ಪ್ರಯತ್ನಿಸುತ್ತಾರೆಯೇ ಹೊರತು ಕನ್ನಡದಲ್ಲಿ ಮಾತನಾಡಿ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡುವುದಿಲ್ಲ ಎಂದು ಕನ್ನಡ ಹೋರಾಟಗಾರರು ಆರೋಪ ಮಾಡುತ್ತಾರೆ! ಇಂದು ಒಂದು ಸದಭಿರುಚಿಯ ಕಾರ್ಟೂನನ್ನು ಹಿಂದಿ, ತಮಿಳು, ತೆಲಗು, ಮಲೆಯಾಳಂ ಭಾಷೆಯ ಮಕ್ಕಳು ಅವರದೇ ಭಾಷೆಯಲ್ಲಿ ನೋಡುತ್ತಿದ್ದಾರೆ. ಆದರೆ ಕನ್ನಡದ ಮಕ್ಕಳು ವಿಧಿಯಿಲ್ಲದೆ. ಅದನ್ನು ಇಂಗ್ಲಿಷ್ ಅಥವಾ ಡಬ್ ಆದ ಬೇರೆ ಭಾಷೆಯಲ್ಲಿ ನೋಡುತ್ತಿವೆ. ಇಂದು ಕನ್ನಡದ ಮಕ್ಕಳಿಗೆ ಹೆಚ್ಚು ಭಾಷೆ ಕಲಿಯುವಂತೆ ಮಾಡುತ್ತಿದ್ದೇವೆಯೇ ಹೊರತು, ಬೇರೆ ಭಾಷೆಯವರಿಗೆ ಕನ್ನಡ ಕಲಿಯುವಂತೆ ಮಾಡುತ್ತಿಲ್ಲ. ನೀವು ಡಬ್ಬಿಂಗ್ ನಿಷೇದಿಸುವುದರಿಂದ ಚಿತ್ರರಂಗದ ಬೆಳವಣಿಗೆಗೆ ಮಾರಕವಾಗುತ್ತದೆ ಎಂಬುದು ಅರ್ಧ ಸತ್ಯ. ಗುಣಮಟ್ಟವಿದ್ದಲ್ಲಿ ಗೆಲವು ಖಂಡಿತಾ ಇರುತ್ತದೆ. ಅಷ್ಟಕ್ಕೂ ಆತ್ಮಾಭಿಮಾನವನ್ನು ಒತ್ತೆ ಇಟ್ಟು, ಉಳಿಸಿಕೊಳ್ಳಬೇಕಾದ ತುರ್ತೂ ಯಾವ ಕಲೆಗೂ ಇರಬಾರದು. ಒಂದು ಚಿತ್ರದ ಡಬ್ಬಿಂಗ್ ನಿಂದ ಅನಾಹುತವಾಗುತ್ತದೆ ಎನ್ನುವುದಾದರೆ, ಪರಭಾಷಾ ಚಿತ್ರಗಳನ್ನು ಇಲ್ಲಿ ಪ್ರದರ್ಶನ ಮಾಡುವುದರಿಂದಲೂ ಅನಾಹುತವಾಗುತ್ತಿದೆ. ಡಬ್ಬಿಂಗ್ ಬೇಡ ಅನ್ನುವುದಾದರೆ ಪರಭಾಷಾ ಚಿತ್ರಗಳ ಪ್ರದರ್ಶನವೂ ಬೇಡ. ಆಗಿದ್ದರೆ ಹಿಂದಿನವರು ಡಬಿಂಗ್ ವಿರೋಧಿಸಿ ನಡೆಸಿದ ಹೋರಾಟವೆಲ್ಲಾ ವ್ಯರ್ಥವಾಗುವುದಿಲ್ಲವೆ? ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಅದು ಹೇಗೆ ವ್ಯರ್ಥವಾಗುತ್ತದೆ. ಅಂದಿನ ಹೋರಾಟಗಾರರ ಉದ್ದೇಶ ಈಡೇರಿದೆ ಅಲ್ಲವೆ? ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ಬಲವಾಗಿ ನೆಲೆಯೂರಬೇಕೆಂದು ಅಂದು ಡಬಿಂಗ್ ಚಿತ್ರಗಳನ್ನು ವಿರೋಧಿಸಿ ನಿಷೇದಿಸಲಾಗಿತ್ತು. ಈಗ ಸುಮಾರು ಅರ್ಧ ಶಮಾನದ ನಂತರವೂ ಕನ್ನಡ ಚಿತ್ರರಂಗಕ್ಕೆ ತನ್ನ ಮೇಲೆ ತನಗೆ ನಂಬಿಕೆ ಬಂದಿಲ್ಲವೆ? ಎಷ್ಟು ದಿನ ಸರ್ಕಾರ ಕೊಡುವ ಸಬ್ಸಿಡಿಯ ಮೇಲೆ ಚಿತ್ರರಂಗ ನಿಂತಿರಲು ಸಾಧ್ಯ? ವರ್ಷಕ್ಕೆ ನೂರಾರು ಚಿತ್ರಗಳು ನಿರ್ಮಾಣವಾಗುತ್ತಿವೆ ಎಂದರೆ ಅವರೆಲ್ಲಾ ಹಣ ಕಳೆದುಕೊಳ್ಳು ಚಿತ್ರನಿರ್ಮಾಣ ಮಾಡುತ್ತಾರೆಯೇ? ಡಬಿಂಗ್ ಚಿತ್ರಗಳಿಗೆ ಬೇಕಾಬಿಟ್ಟಿಯಾಗಿ ಅನುಮತಿ ಕೊಡುವುದಕ್ಕೆ ಬದಲಾಗಿ ಕೆಲವು ನಿಯಮಾವಳಿಗಳನ್ನು ರೂಪಿಸುವುದು ಒಳಿತು. ಉದಾಹರಣೆಗೆ, ಮೂಲಚಿತ್ರದೊಂದಿಗೆ ಡಬ್ಬಿಂಗ್ ಚಿತ್ರವೂ ಬಿಡುಗಡೆ ಮಾಡಬೇಕು. ಇಷ್ಟೇ ಚಿತ್ರಮಂದಿರದಲ್ಲಿ ಮೂಲಚಿತ್ರ ಜೊತೆಗೆ ಡಬಿಂಗ್ ಚಿತ್ರ ಬಿಡುಗಡೆ ಆಗಬೇಕು. ಪರಿಣತರ ಮಂಡಳಿಯೊಂದನ್ನು ಸಂಯೋಜಿಸಿ ಡಬ್ ಮಾಡುವ ಚಿತ್ರದ ಬಗ್ಗೆ ಅವರಿಂದ ಅನುಮತಿ ಪಡೆದುಕೊಳ್ಳಬೇಕು. ಕನ್ನಡ ಭಾಷೆ ಸಂಸ್ಖೃತಿ ಯಾವುದಕ್ಕೂ ಕೇಡು ಬಯಸದ ಸದಭಿರುಚಿಯ ಚಿತ್ರಗಳನ್ನು ಮಾತ್ರ ಡಬ್ ಮಾಡಬೇಕು. ಹೀಗೆ. . . ಇದು ಕೇವಲ ಕನ್ನಡ ಚಿತ್ರರಂಗದ ಪ್ರಶ್ನೆಯಲ್ಲ. ಕನ್ನಡ ಭಾಷೆಯ, ಮಕ್ಕಳ ಪ್ರಶ್ನೆಯೂ ಹೌದು. ಡಬಿಂಗ್ ಬೇಡ ಎನ್ನುವುದಾದರೆ, ಮೊದಲು ಬೇರೆ ಭಾಷೆಯ ಚಿತ್ರಗಳು, ಕಾರ್ಟೂನುಗಳು, ಜಾಹಿರಾತುಗಳನ್ನೂ ನಿಷೇದಿಸಲಿ. ಕೊನೆಗೂ ಒಂದು ಮಾತಂತು ಸತ್ಯ. ಡಬಿಂಗ್ ಚಿತ್ರಗಳನ್ನು ವಿರೋಧಿಸುವವರು ಹೃದಯದಿಂದ ಯೋಚನೆ ಮಾಡುವುದನ್ನು ಬಿಟ್ಟರೆ ಒಳ್ಳೆಯದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: