‘ಅವಧಿ’ಯಲ್ಲಿ ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ ಬರಹವನ್ನು ಪ್ರಕಟಿಸಿದ್ದೆವು. ಅದು ಎಷ್ಟು ಮನ ಕಲಕುವಂತಿತ್ತು ಎಂದರೆ ಸೀತಾರಾಂ ಅವರು ಬಯಸಿದ ಆ ಕೆಂಪು ಪಟ್ಟಿ ಇರುವ ಚಪ್ಪಲಿಯನ್ನು ಈಗ ನಾವೂ ಹುಡುಕುತ್ತಿದ್ದೇವೆ..
ಈ ಬರಹ ಅನೇಕರನ್ನು ಕಾಡಿದೆ. ಇದರ ಪರಿಣಾಮವಾಗಿ ಬಂದ ಇನ್ನೆರಡು ಕಥನಗಳನ್ನೂ ಪ್ರಕಟಿಸಿದ್ದೆವು .
ರಾಜಕುಮಾರ್ ಮಡಿವಾಳರ ತಮ್ಮ ನೆನಪಿನಾಳದಿಂದ ನೋವಿನ ಕಥನವೊಂದನ್ನು ಹೊರ ತೆಗೆದರು
ಶಿರಸಿಯ ಹಳ್ಳಿಯೊಳಗಿನ ಅನುಭವ ಕಟ್ಟಿಕೊಟ್ಟದ್ದು ಗೀತಾ ಹೆಗ್ಡೆ ಕಲ್ಮನೆ
ಈಗ ಎಂಟ್ರಿ ಕೊಟ್ಟಿದ್ದಾರೆ ದೂರ ನಾಡಿನ ಅಂಗೋಲಾದಿಂದ ಕೆ ಪ್ರಸಾದ್

ಜಯಂತ ಕಾಯ್ಕಿಣಿ ಅವರ ಪಾರ್ಲರ್ ಗೆ ಬಂದ ಪ್ರತಿಕ್ರಿಯೆಯ ಸುರಿಮಳೆ ಹೇಗಿತ್ತು ಎನ್ನುವುದು ನಿಮಗೆ ಗೊತ್ತು.
ಈಗ ಟಿ ಎನ್ ಸೀತಾರಾಂ ಅವರ ಚಪ್ಪಲಿ ಅನುಭವ ಇದೆ.
ಬನ್ನಿ ನಿಮ್ಮೊಳಗೆ ಇರುವ ಚಪ್ಪಲಿ ಕುರಿತ ಅನುಭವಗಳನ್ನು ಬರೆಯಿರಿ
avadhimag@gmail.com ಗೆ ಕಳಿಸಿಕೊಡಿ
ಚಪ್ಪಲಿ ಕಾಣೆಯಾಗಿದೆ

ಪ್ರಸಾದ್
2011 ರ ಮಾತು.
ಆಗ ನಾನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಲ್ಲಿ ಬಿ.ಟೆಕ್ ನ ಅಂತಿಮ ವರ್ಷದಲ್ಲಿದ್ದೆ. ಇಂಜಿನಿಯರಿಂಗ್ ನ ಅಂತಿಮ ವರ್ಷವೆಂದರೆ ಸುಖ-ದುಃಖಗಳ ಅದ್ಭುತ ಕಾಕ್-ಟೇಲ್ ಎಂದೇ ಹೇಳಬೇಕು. ಅಂತಿಮ ವರ್ಷದಲ್ಲಿ ಕಲಿಯಬೇಕಾದ ವಿಷಯಗಳ ಸಂಖ್ಯೆ ಕಮ್ಮಿಯಿದ್ದಿದ್ದು ಖುಷಿಯ ಸಂಗತಿಯಾದರೆ, ತಲೆಯ ಮೇಲೆ ತೂಗುತ್ತಿರುವ `ಪ್ಲೇಸ್-ಮೆಂಟ್’ ಎಂಬ ತೂಗುಕತ್ತಿಯ ಟೆನ್ಷನ್ನುಗಳು ತಲೆ ತಿನ್ನುವ ಸಂಗತಿಗಳಾಗಿದ್ದವು.
ಕಾಲೇಜಿನ ಡಿಜಿಟಲ್ ಲೈಬ್ರರಿಯಲ್ಲಿ ಕುಳಿತು ಒಂದೆರಡು ಘಂಟೆಗಳವರೆಗೆ ಇಂಟರ್ನೆಟ್ಟಿನ ಲೋಕದಲ್ಲಿ ಅಲೆದಾಡುತ್ತಿದ್ದಂತೆಯೇ ಎಸ್ಸೆಮ್ಮೆಸ್ಸೊಂದು ನನಗಾಗಿ ಇನ್-ಬಾಕ್ಸಿನಲ್ಲಿ ಕಾಯುತ್ತಿತ್ತು. ವಾಟ್ಸಾಪುಗಳು ಇನ್ನೂ ಬಂದಿರದ ಕಾಲವದು. ಎಲ್ಲಾ ಮಾತುಗಳು ಎಸ್ಸೆಮ್ಮೆಸ್ಸುಗಳಲ್ಲೇ. ಪಿಸುಮಾತಿನಿಂದ ಹಿಡಿದು ಘೋಷಣೆಯವರೆಗೂ. ಇನ್ನು ವಿದ್ಯಾರ್ಥಿಗಳನ್ನು ಆಕರ್ಷಿಸಲು ಟೆಲಿಕಾಂ ಕಂಪೆನಿಗಳಿಂದ ದಿನಕ್ಕೆ ನೂರು-ಇನ್ನೂರು ಎಸ್ಸೆಮ್ಮೆಸ್ಸುಗಳು ಉಚಿತವೆಂಬ ಆಮಿಷ ಬೇರೆ. `ಆರ್ಟಿಸ್ಟ್ ಫೋರಂ’ ಎಂಬ ಎಂಭತ್ತಕ್ಕೂ ಹೆಚ್ಚಿನ ಕಲಾವಿದರನ್ನು ಹೊಂದಿದ್ದ ವಿದ್ಯಾರ್ಥಿಗಳ ಗುಂಪಿಗೆ ನಾನು ಕನ್ವೀನರ್ ಆಗಿ ಅವಿರೋಧವಾಗಿ ಆಯ್ಕೆಗೊಂಡಿದ್ದೇನೆಂಬ ಎಸ್ಸೆಮ್ಮೆಸ್ಸು ಸಂದೇಶವೊಂದು ಇನ್-ಬಾಕ್ಸಿನಲ್ಲಿ ಕುಳಿತಿತ್ತು.
ತಕ್ಷಣಕ್ಕನಿಸಿದ್ದು ಅಚ್ಚರಿ. ಇತರರಂತೆ ಹಾಸ್ಟೆಲ್ ನಲ್ಲಿರದ ನನ್ನನ್ನು ಹೇಗೆ ಕನ್ವೀನರ್ ಆಗಿ ಆಯ್ಕೆ ಮಾಡಿಕೊಂಡರೆಂದು ನನಗೆ ಆಶ್ಚರ್ಯವಾಯಿತು. ಅಲ್ಲದೆ ಕಾಲೇಜಿನ ಎಲೆಕ್ಷನ್ನುಗಳೆಂದರೆ ಲೋಕಸಭೆಯ ಎಲೆಕ್ಷನ್ನುಗಳಂತೆ ಆಡುವ ಇತರ ವಿದ್ಯಾರ್ಥಿಗಳಂತೆ ತಿಂಗಳುಗಟ್ಟಲೆ ಸೀನಿಯರ್ ಗಳ ಹಿಂದೆ ಬಿದ್ದು ವಾಮ ಮಾರ್ಗಗಳ ಯಾವ ಕರಾಮತ್ತುಗಳನ್ನೂ ನಾನು ನಡೆಸಿರಲಿಲ್ಲ. ಕಳೆದೆರಡು ವರ್ಷಗಳಿಂದ ಗುಂಪಿನಲ್ಲಿ ಸಕ್ರಿಯವಾಗಿದ್ದು ಎಲ್ಲರಿಗೂ ಚಿರಪರಿಚಿತನಾಗಿದ್ದೆ ಎಂಬುದನ್ನು ಬಿಟ್ಟು ಇನ್ಯಾವ ಅರ್ಹತೆಯೂ ಮೇಲ್ನೋಟಕ್ಕೆ ನನಗೆ ಕಾಣಲಿಲ್ಲ.
ಸಾಂಸ್ಕೃತಿಕ ಉತ್ಸವಗಳನ್ನು ಬಹಳ ಉತ್ಸುಕತೆಯಿಂದ ಮಾಡುವ ಚಿತ್ರಕಲಾವಿದರ ಗುಂಪು ನಮ್ಮದಾಗಿತ್ತು. ಕನ್ವೀನರ್ ಎಂದಾದ ಮೇಲೆ ತಂಡದ ನೇತೃತ್ವವನ್ನು ವರ್ಷವಿಡೀ ವಹಿಸಿಕೊಂಡು ಆ ಶೈಕ್ಷಣಿಕ ವರ್ಷದಲ್ಲಿ ಉತ್ತಮವಾದ ಕಲಾಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸಿ ನಡೆಸಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿಯು ನನ್ನ ಹೆಗಲ ಮೇಲೆ ಬಂದಿತ್ತು. ಪ್ರತೀವರ್ಷದ ಸಂಪ್ರದಾಯದಂತೆ ಕನ್ವೀನರ್ ಹುದ್ದೆಯ ಜೊತೆಗೇ ಕೋರ್ ಕಮಿಟಿ ಸದಸ್ಯರ ಆಯ್ಕೆಯೂ ಜೊತೆಗೇ ಆಗುತ್ತಿತ್ತು. ಇದರಂತೆ ಸಹಜವಾಗಿಯೇ ಇನ್ನು ಕೆಲವೇ ನಿಮಿಷಗಳಲ್ಲಿ ಕೋರ್ ಕಮಿಟಿ ಸದಸ್ಯರ ಪಟ್ಟಿಯೊಂದು ನನ್ನಲ್ಲಿಗೆ ಬರುವುದು ಖಚಿತವಾಗಿತ್ತು. ಅಂದರೆ ಈ ವರ್ಷವಿಡೀ ಬೆನ್ನುಬೆನ್ನಿಗೆ ಮೀಟಿಂಗುಗಳು, ಭಾಷಣ, ಓಡಾಟ, ಶಿಬಿರ, ಕಾರ್ಯಾಗಾರಗಳು ಇತ್ಯಾದಿಗಳು. ಆ ದಿನಗಳಲ್ಲಿ “ಸ್ಟೇಜ್-ಫಿಯರ್” ಎಂಬ ಫೋಬಿಯಾ ಕೂಡ ಅಲ್ಪಸ್ವಲ್ಪ ಇದ್ದಿದ್ದ ಪರಿಣಾಮವಾಗಿ ಈ ಸಂದೇಶವನ್ನು ಓದಿ ನಗಬೇಕೋ ಅಳಬೇಕೋ ಎಂದು ತಿಳಿಯಲಿಲ್ಲ.
ಕ್ಲಾಸುಗಳನ್ನು ಮುಗಿಸಿ ಆದಷ್ಟು ಬೇಗ ಮನೆ ಸೇರುವ ತವಕದಲ್ಲಿದ್ದ ನಾನು ಬ್ರೌಸಿಂಗ್ ಮಾಡುತ್ತಾ ಕಾಲಕಳೆದಿದ್ದೆ. ಸಮಯವು ಆಗಲೇ ಸಂಜೆಯ ನಾಲ್ಕು ದಾಟಿತ್ತು. ಡಿಜಿಟಲ್ ಲೈಬ್ರರಿಯಿಂದ ಹೊರಬಿದ್ದ ನಾನು ಹೊರಟಿದ್ದು ಕಾಲೇಜಿನ ಗೆಸ್ಟ್-ಹೌಸ್ ಬಸ್ ನಿಲ್ದಾಣದ ಕಡೆಗೆ. ಹೊಸದಾಗಿ ರಚನೆಗೊಂಡ ಕೋರ್ ಕಮಿಟಿಯ ಸದಸ್ಯರೊಂದಿಗೆ ನಾಳೆಯ ದಿನವೇ ತುರ್ತಾಗಿ ಕರೆಯಬೇಕಾಗಿರುವ ಮೊದಲ ಮೀಟಿಂಗು, ವಾರದ ಬಳಿಕ ಸಲ್ಲಿಸಬೇಕಾಗಿರುವ ಮಿನಿ-ಪ್ರಾಜೆಕ್ಟ್ ಒಂದರ ವರದಿ, ಬರಲಿರುವ ಹಲವು ಹಿರಿ, ಕಿರಿ, ಕಿರಿಕಿರಿ ಪರೀಕ್ಷೆಗಳು, ಪ್ಲೇಸ್-ಮೆಂಟುಗಳಿಗಾಗಿ ತಯಾರಿ… ಹೀಗೆ ಮನದಲ್ಲೇ ಯೋಚನೆಗಳೊಂದಿಗೆ ಸೆಣಸಾಡುತ್ತಾ, ಯೋಜನೆಗಳನ್ನು ಹಾಕಿಕೊಳ್ಳುತ್ತಾ ದಾಪುಗಾಲಿಕ್ಕಿ ಹೋಗುತ್ತಿದ್ದಾಗ ಎದುರಲ್ಲಿ ಅಚಾನಕ್ಕಾಗಿ ಸಿಕ್ಕಿ ನನ್ನ ಯೋಚನಾ ಲಹರಿಗೆ ಬ್ರೇಕ್ ಹಾಕಿದ್ದು ಅಫಘಾನಿಸ್ತಾನ ಮೂಲದ ಒಬ್ಬ ಗೆಳೆಯ.
“ಲೋ… ಬರಿಗಾಲಲ್ಲಿ ಎಲ್ಲೋ ಪಾದಯಾತ್ರೆ ಹೊರಟಿದ್ದೀ?”, ಎಂದು ಕೇಳಿದ ಆತ. ನನ್ನ ಕಾಲುಗಳಲ್ಲಿ ಚಪ್ಪಲಿಗಳಿಲ್ಲ ಎಂದು ನನಗೆ ಅರಿವಾಗಿದ್ದೇ ಆಗ. ಆಗಲೇ ಬಹಳಷ್ಟು ದೂರ ಬರಿಗಾಲಲ್ಲೇ ನಡೆದುಕೊಂಡು ಬಂದುಬಿಟ್ಟಿದ್ದೆ ನಾನು. ಇನ್ನು ಕೆಲವೇ ಹೆಜ್ಜೆ ಮುಂದಿಟ್ಟಿದ್ದರೆ ಬಸ್ಸು ಹತ್ತಿ ಮನೆಗೆ ಹೋಗೇ ಬಿಡುತ್ತಿದ್ದೇನೋ ಏನೋ. ಬಟಾಬಯಲಾದ ನನ್ನ ಪೆದ್ದುತನವನ್ನು ಅರಗಿಸಿಕೊಳ್ಳಲಾಗದೆ ಅವನನ್ನೇ ಪಿಳಿಪಿಳಿ ನೋಡುತ್ತಾ ನಿಂತುಬಿಟ್ಟೆ. ಹಾಗಿದ್ದರೆ ಚಪ್ಪಲಿಯನ್ನು ಬಿಟ್ಟಿದ್ದಾದರೂ ಎಲ್ಲಿ ಎಂದು ತಲೆಕೆರೆಯುತ್ತಾ ನಿಂತ ನಿಲುವಲ್ಲೇ ಯೋಚಿಸತೊಡಗಿದೆ. ಗೊಂದಲದಲ್ಲಿದ್ದ ನನ್ನನ್ನು ನೋಡಿ ನಗುತ್ತಾ ಆತ ಹೊರಟುಹೋದ.
ನಿಸ್ಸಂದೇಹವಾಗಿ ನಾನಿದ್ದ ಕೊನೆಯ ಸ್ಥಳವೆಂದರೆ ಕಾಲೇಜಿನ ಡಿಜಿಟಲ್ ಲೈಬ್ರರಿ. ಡಿಜಿಟಲ್ ಲೈಬ್ರರಿಯಿಂದ ಯಾವ ವೇಗದಲ್ಲಿ ಹೊರಬಂದಿದ್ದೆನೆಂದರೆ ಹೊರಗೆ ಬಿಟ್ಟ ಚಪ್ಪಲಿಯ ಜ್ಞಾನವೇ ಇರಲಿಲ್ಲ. ಥೇಟು ಟ್ರಾನ್ಸ್ ನಲ್ಲಿದ್ದವನಂತೆ. ಹಾಳು ಅದೃಷ್ಟವನ್ನು ಶಪಿಸುತ್ತಾ ಪುನಃ ಡಿಜಿಟಲ್ ಲೈಬ್ರರಿಯ ಕಡೆಗೆ ಲಗುಬಗೆಯಿಂದ ಹೆಜ್ಜೆಹಾಕತೊಡಗಿದೆ. ಈ ಬಾರಿ ಚಪ್ಪಲಿಯಿಲ್ಲವೆಂಬುದು ತಿಳಿದಿದ್ದ ಪರಿಣಾಮ ಬರಿಗಾಲಿನಲ್ಲಿ ನಡೆಯುವುದು ತ್ರಾಸವೆನಿಸಿತು. ಅಸಲಿಗೆ ನಮ್ಮ ಡಿಜಿಟಲ್ ಲೈಬ್ರರಿ ಇದ್ದಿದ್ದು ಕಾಲೇಜಿನ ದೈತ್ಯ ಲೈಬ್ರರಿಯ ಕಟ್ಟಡದೊಳಗಡೆ. ಕಾಲೇಜಿನ ಲೈಬ್ರರಿಯ ಮುಖ್ಯದ್ವಾರದಿಂದ ಒಳಬಂದು, ರಿಜಿಸ್ಟರ್ ಒಂದರಲ್ಲಿ ನಮೂದಿಸಿ, ಒಳ ನಡೆದು ಡಿಜಿಟಲ್ ಲೈಬ್ರರಿಯನ್ನು ಸೇರಬೇಕಾಗಿತ್ತು. ಮುಖ್ಯವಾದ ಸಂಗತಿಯೆಂದರೆ ಲೈಬ್ರರಿಯ ಮುಖ್ಯದ್ವಾರದಿಂದ ಮೊದಲುಗೊಂಡು ಒಳಗಿನ ಎಲ್ಲಾ ಭಾಗಗಳೂ ಸಿಸಿಟಿವಿ ಕ್ಯಾಮೆರಾದ ಹದ್ದಿನ ಕಣ್ಣಿನ ಕಾವಲಿನಲ್ಲಿದ್ದವು. ಹೀಗಾಗಿ ಚಪ್ಪಲಿಯು ಕಳೆದುಹೋಗುವ ಯಾವ ಭಯವೂ ನನಗಿರಲಿಲ್ಲ.
ಡಿಜಿಟಲ್ ಲೈಬ್ರರಿಯು ಇನ್ನೂ ತೆರೆದಿತ್ತು. ಒಳಗೆ ಕಂಪ್ಯೂಟರುಗಳೊಂದಿಗೆ ವ್ಯಸ್ತರಾದವರ ಪಾದರಕ್ಷೆಗಳು ಹೊರಗೆ ಬಿದ್ದುಕೊಂಡಿದ್ದವು. ಆದರೆ ಅಚ್ಚರಿಯೆಂದರೆ ಡಿಜಿಟಲ್ ಲೈಬ್ರರಿಯ ಹೊರಭಾಗದಲ್ಲಿ ಇರಿಸಿದ್ದ ಚಪ್ಪಲಿಗಳಲ್ಲಿ ನನ್ನ ಚಪ್ಪಲಿಯೇ ಇರಲಿಲ್ಲ. ಯಾವನೋ ಕಿಡಿಗೇಡಿ ವಿದ್ಯಾರ್ಥಿಯೊಬ್ಬ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನ ಹೊರತಾಗಿಯೂ ನನ್ನ ಚಪ್ಪಲಿಗಳನ್ನು ಎಗರಿಸಿದ್ದ. ಅವನ ಭಂಡ ಧೈರ್ಯವು ಮೆಚ್ಚತಕ್ಕದ್ದೇ. ಆದರೆ ಮೆಚ್ಚುವಂಥಾ ಮೂಡ್ ನಲ್ಲಿ ನಾನಿರಲಿಲ್ಲ. ಬ್ರ್ಯಾಂಡೆಡ್ ಚಪ್ಪಲಿಯೂ ಆಗಿರಲಿಲ್ಲ ಅದು. ಅಸಲಿಗೆ ಬ್ರ್ಯಾಂಡ್ ಗಳ ಮೋಹ ನಮ್ಮ ಮನೆಯಲ್ಲಿ ಯಾರಿಗೂ ಇರಲಿಲ್ಲ. ವಿಷಯವು ಚಿಕ್ಕದಾಗಿದ್ದರೂ ನನ್ನ ಮಟ್ಟಿಗಂತೂ ಆ ಕ್ಷಣಕ್ಕೆ ಅದೊಂದು ಸಂದಿಗ್ಧವಾಗಿತ್ತು. ಆದರೆ ಚಪ್ಪಲಿ ಹೋಯಿತೆಂದು ಲಿಖಿತ ದೂರು ಕೊಡಲಾಗುವುದೇ? ವಿಧಿಯಿಲ್ಲದೆ ನಾನು ಹೊರಬಂದೆ.
ಮುಂದಿನ ಸವಾಲಿದ್ದಿದ್ದು ಮನೆಗೆ ವಾಪಾಸಾಗುವ ಬಗ್ಗೆ. ಸಂಜೆ ನಾಲ್ಕರ ನಂತರ ಮಂಗಳೂರಿನಿಂದ ಬರುವ ಎಲ್ಲಾ ಬಸ್ಸುಗಳು ಪ್ರಯಾಣಿಕರಿಂದ ತುಂಬಿಕೊಂಡು ಏದುಸಿರುಬಿಡುತ್ತಾ ಬರುವುದು ಸಾಮಾನ್ಯವಾಗಿತ್ತು. ಆ ತುಂಬಿದ ಬಸ್ಸನ್ನು ಹತ್ತಿದರೆ ಚಪ್ಪಲಿ ಮಾಯವಾದಂತೆ, ಎಲ್ಲರ ಕಾಲಿಗೆ ಸಿಕ್ಕು ಪಾದಗಳೇ ಮಾಯವಾಗುವ ಭಯವುಂಟಾಯಿತು. ಜೇಬಿಗೆ ಕೈ ಹಾಕಿದರೆ ಭರ್ತಿ ಏಳು ರೂಪಾಯಿಗಳಿದ್ದವು. ಮನೆಯಿಂದ ಕಾಲೇಜಿಗೆ ತೆರಳಲು ಏಳು ರೂಪಾಯಿ ಬಸ್ ಚಾರ್ಜ್, ಹಾಗೆಯೇ ಕಾಲೇಜಿನಿಂದ ಮನೆಗೆ ಮರಳಲು ಏಳು ರೂಪಾಯಿ. ಇವಿಷ್ಟೇ ಡೈಲಿ ಬೇಸಿಸ್ ನಲ್ಲಿ ನನಗೆ ಸಿಗುತ್ತಿದ್ದಿದ್ದು. ಸಹೋದರ ಸಹೋದರಿಯರಿಲ್ಲದೆ `ಸುಪುತ್ರ’ನೆಂಬ ಪಟ್ಟವನ್ನು ಅನಧಿಕೃತವಾಗಿ ಹೊಂದಿದ್ದರೂ ಕೂಡ ಪಾಕೆಟ್-ಮನಿಯಂಥಾ ಯಾವುದೇ ವಿಶೇಷವಾದ ಸವಲತ್ತುಗಳೇನೂ ನನಗಿರಲಿಲ್ಲ. ಹೀಗಾಗಿ ನಾಣ್ಯಗಳಷ್ಟೇ ಜೇಬಿನಲ್ಲಿದ್ದಿದ್ದು. “ರೆಹ ಭೀ ನಾ ಪಾವೂಂ, ಸೆಹ ಭೀ ನಾ ಪಾವೂಂ” ಪರಿಸ್ಥಿತಿ.
ಕೊನೆಗುಳಿದಿದ್ದು ಒಂದೇ ಆಯ್ಕೆ. ಕಾಲೆತ್ತಿ ಹಾಸ್ಟೆಲ್ ಕಡೆಗೆ ನಡೆಯತೊಡಗಿದೆ. ಲೈಬ್ರರಿಯಿಂದ ಬಾಯ್ಸ್-ಹಾಸ್ಟೆಲ್ ಬರೋಬ್ಬರಿ ಅರ್ಧ ಮೈಲಿನ ದೂರ. ಮೆಲ್ಲನೆ ಸಂಜೆಯಾಗುತ್ತಿದ್ದರೂ ಸೂರ್ಯದೇವ ಕೆಳಕ್ಕೆ ಬಂದು ಮುಖಕ್ಕೆ ರಾಚುತ್ತಿದ್ದ. ಬರಿಗಾಲಿನಲ್ಲಿ ನಡೆದು ಅಭ್ಯಾಸವಿಲ್ಲದ ಕಾರಣ ಹೆಜ್ಜೆ ಇಟ್ಟಲ್ಲೆಲ್ಲಾ ಚುಚ್ಚಿದಂತಾಗುತ್ತಿತ್ತು. ಅಂತೂ ಹಾಸ್ಟೆಲ್ ಸೇರಿ ಗೆಳೆಯನೊಬ್ಬನಲ್ಲಿ ಎಕ್ಸ್ಟ್ರಾ ಪಾದರಕ್ಷೆಯ ಭಿಕ್ಷೆಯನ್ನು ಕೇಳಿದಾಗ ಆತನೂ ಮೊದಲಿಗೆ ಹುಬ್ಬೇರಿಸಿದರೂ, “ಅಷ್ಟೇನಾ, ನೀನೂ ಒಂದು ಜೋಡಿಯನ್ನು ಅಲ್ಲಿಂದಲೇ ಎತ್ಹಾಕಿಕೊಂಡು ಬರಬೇಕಿತ್ತು” ಎಂದು ಸಿಂಪಲ್ಲಾಗಿ ಹೇಳಿದ. “ಚಪ್ಪಲಿ ಕಳವಾಗಿರುವುದೇನೋ ಹೌದು. ಆದರೆ ಚಪ್ಪಲಿ ಮಾಫಿಯಾ ಮಾಡಬೇಡ ಇದನ್ನು”, ಅಂದೆ. ಕದಿಯಲು ಇನ್ನೇನೂ ಸಿಕ್ಕಿಲ್ಲವೋ ಏನೋ ಆ ಪುಣ್ಯಾತ್ಮನಿಗೆ ಎನ್ನುತ್ತಾ ಇಬ್ಬರೂ ಹೊಟ್ಟೆತುಂಬಾ ನಕ್ಕೆವು.
ಅಂತೂ ಮನೆಗೆ ಬಂದು ಈ ಚಪ್ಪಲಿ ಪುರಾಣವನ್ನು ಪೆಚ್ಚಾಗಿ ಹೇಳಿ ನಿರಾಳನಾದೆ. ಕಾಲೇಜುಗಳಲ್ಲೂ ಚಪ್ಪಲಿಗಳು ಮಾಯವಾಗುತ್ತವೆಯೇ ಎಂದು ಮಾತಾಪಿತೃಗಳು ಹುಬ್ಬೇರಿಸುತ್ತಾ ಮೂಗಿಗೆ ಬೆರಳಿಟ್ಟರು. ಅಪ್ಪನಿಗೆ ಎಂದಿನಂತೆ ಬಯ್ಯಲು ಮನಸ್ಸಾದರೂ, ಬೈಯಲು ಈ ಬಾರಿ ಕಾರಣವಿರಲಿಲ್ಲ. ಅಷ್ಟರ ಮಟ್ಟಿಗೆ ನಾನು ಬಚಾವಾದೆ. ಅಮ್ಮನಿಗೆ ಏನು ಹೇಳಬೇಕೆಂದೇ ತಿಳಿಯದೆ “ಹೀಗೂ ಉಂಟೇ” ಎಂಬ ಶೈಲಿಯಲ್ಲಿ ತಲೆಯಾಡಿಸಿ ಅಡುಗೆಮನೆಯಲ್ಲಿ ಮರೆಯಾದರು. ಚಪ್ಪಲಿಯನ್ನು ಕಳೆದುಕೊಂಡ ನನ್ನದಲ್ಲದ ತಪ್ಪಿಗೆ ಹೊಸ ಚಪ್ಪಲಿಯೇನೂ ಮನೆಗೆ ಬರಲಿಲ್ಲ. ಉಪಯೋಗಿಸದೇ ಅಟ್ಟದ ಮೂಲೆಯಲ್ಲಿದ್ದ ಹಳೆಯ ಜೋಡಿಯೊಂದು ಶಾಪವಿಮೋಚನೆಯಾದಂತೆ ಈ ಮೂಲಕ ಹೊರಕ್ಕೆ ಬಂದಿತು.
ಚಪ್ಪಲಿಯೆಂದರೆ ಲಾಭದಂತೆ. ಹೊಂಚುಹಾಕುವವರು ಎಲ್ಲೆಲ್ಲೂ ಇರುತ್ತಾರೆ.





ಚೆನ್ನಾಗಿದೆ ಅವಸ್ಥೆ!