‘ಅವಧಿ’ಯಲ್ಲಿ ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ ಬರಹವನ್ನು ಪ್ರಕಟಿಸಿದ್ದೆವು. ಅದು ಎಷ್ಟು ಮನ ಕಲಕುವಂತಿತ್ತು ಎಂದರೆ ಸೀತಾರಾಂ ಅವರು ಬಯಸಿದ ಆ ಕೆಂಪು ಪಟ್ಟಿ ಇರುವ ಚಪ್ಪಲಿಯನ್ನು ಈಗ ನಾವೂ ಹುಡುಕುತ್ತಿದ್ದೇವೆ..
ಈ ಬರಹ ಅನೇಕರನ್ನು ಕಾಡಿದೆ. ಇದರ ಪರಿಣಾಮವಾಗಿ ಬಂದ ಇನ್ನೆರಡು ಕಥನಗಳನ್ನೂ ಪ್ರಕಟಿಸಿದ್ದೆವು .
ರಾಜಕುಮಾರ್ ಮಡಿವಾಳರ ತಮ್ಮ ನೆನಪಿನಾಳದಿಂದ ನೋವಿನ ಕಥನವೊಂದನ್ನು ಹೊರ ತೆಗೆದರು
ಶಿರಸಿಯ ಹಳ್ಳಿಯೊಳಗಿನ ಅನುಭವ ಕಟ್ಟಿಕೊಟ್ಟದ್ದು ಗೀತಾ ಹೆಗ್ಡೆ ಕಲ್ಮನೆ
ನಂತರ ಎಂಟ್ರಿ ಕೊಟ್ಟದ್ದು ದೂರ ನಾಡಿನ ಅಂಗೋಲಾದಿಂದ ಕೆ ಪ್ರಸಾದ್
ಈಗ ವೃಂದಾ ಸಂಗಮ ಹೊಸ ಕಥೆಗಳನ್ನು ಬಿಚ್ಚಿಟ್ಟಿದ್ದಾರೆ

ಜಯಂತ ಕಾಯ್ಕಿಣಿ ಅವರ ಪಾರ್ಲರ್ ಗೆ ಬಂದ ಪ್ರತಿಕ್ರಿಯೆಯ ಸುರಿಮಳೆ ಹೇಗಿತ್ತು ಎನ್ನುವುದು ನಿಮಗೆ ಗೊತ್ತು.
ಈಗ ಟಿ ಎನ್ ಸೀತಾರಾಂ ಅವರ ಚಪ್ಪಲಿ ಅನುಭವ ಇದೆ.
ಬನ್ನಿ ನಿಮ್ಮೊಳಗೆ ಇರುವ ಚಪ್ಪಲಿ ಕುರಿತ ಅನುಭವಗಳನ್ನು ಬರೆಯಿರಿ
avadhimag@gmail.com ಗೆ ಕಳಿಸಿಕೊಡಿ

ಅಜ್ಜಿಯ ಚಪ್ಪಲಿ
ಜಯಶ್ರೀ ಬಿ ಕದ್ರಿ, ಮಂಗಳೂರು
ನಾವಿದ್ದದ್ದು ಕೂಡು ಕುಟುಂಬದಲ್ಲಿ ಅಂದರೆ ನಮ್ಮ ತಾಯಿಯ ಮನೆಯಲ್ಲಿ. ನಮ್ಮ ತಂದೆಯವರು ಅಡಿಕೆ ತೋಟವನ್ನು ಸರಿಯಾಗಿ ನೋಡಿಕೊಳ್ಳದೆ.. ಒಟ್ಟು ಏನೇನೋ ಕಾರಣಗಳು. ಅದೇನೇ ಇರಲಿ. ಈಗ ನಾನು ಹೇಳುತ್ತಿರುವುದು ಚಪ್ಪಲಿ ವಿಷಯ.
ನಾವಿದ್ದ ಹಳ್ಳಿಯಿಂದ ಹೈಸ್ಕೂಲಿಗೆ ಹೋಗಲು 25 ಕಿ.ಮೀ. ಸಂಜೆ ಬರುವಾಗ ಬಸ್ಸಿನಲ್ಲಿ ನೂಕು ನುಗ್ಗಲು. ನಮಗೆ ಕೊಡಿಸುತ್ತಿದ್ದುದು ಆಗ 80 ರೂಪಾಯಿಯ ಬಾಟಾ ಚಪ್ಪಲಿ. ಅದು ವರ್ಷಗಟ್ಟಲೆ ಬರಬೇಕೆಂದು ನಿರೀಕ್ಷೆ. ಅದು ಬಸ್ಸಿನ ರಶ್ಶಿನಲ್ಲಿ ಯಾರದೋ ಕಾಲ್ತುಳಿತಕ್ಕೊಳಗಾಗಿಯೋ, ಸಂಜೆ ಎರಡೂವರೆ ಮೈಲು ನಡೆದು ಬರುವ ಕಷ್ಟಕ್ಕೋ ಕೆಲವೊಮ್ಮೆ ತುಂಡಾಗಿ, ಕೆಲವೊಮ್ಮೆ ಕಾಲ ಬಳಿ ಸವೆದು.. ಹೀಗೆಲ್ಲ ಇರುತ್ತಿತ್ತು.
ಆಗೆಲ್ಲ ನಾನು ಮಾತನಾಡದೆ ನನ್ನ ಅಜ್ಜಿಯ ಚಪ್ಪಲಿ ಹಾಕಿಕೊಂಡು ಹೋಗುತ್ತಿದ್ದೆ. ( ನನ್ನ ಅಜ್ಜಿಯಂತೆಯೇ ನಾನೂ ಕುಳ್ಳಗೆ, ಜೀವನ ಪ್ರೀತಿಯಿರುವ, ಆಗೊಮ್ಮೆ ಈಗೊಮ್ಮೆ ಗೋಳೊ ಎಂದು ಸಣ್ಣ ಪುಟ್ಟದ್ದಕ್ಕೆಲ್ಲ ಅತ್ತು ಬಿಡುವ, ಕತೆ ಪುಸ್ತಕ, ಸಿನೆಮಾ, ಬಟ್ಟೆಬರೆ ಅಂದರೆ ಆಸೆ ಪಡುವ ಜೀವಿ ಆಗಿದ್ದೆ. )
ನನ್ನ ಅಜ್ಜಿಯ ಕಾಲಿನಲ್ಲಿ ‘ಆಣಿ’ ಅಂದರೆ ‘ಕಾರ್ನ್” ಇತ್ತು. ಹಾಗಾಗಿ ಅವರಿಗೆ ಚಪ್ಪಲಿ ಇಲ್ಲದೆ ನಡೆಯಲಾಗುತ್ತಿರಲಿಲ್ಲ. ತೋಟ, ಗುಡ್ಡ, ಇಲ್ಲೆಲ್ಲ ನಡೆಯುವಾಗ ಆಕೆ ಅಜ್ಜನ, ಮಾವಂದಿರ ಹಳೆ ಚಪ್ಪಲಿಗಳನ್ನು ಬಳಸುತ್ತಿದ್ದಿರಬೇಕು.
ಒಂದು ಸಲ ಅವರಿಗೆ ಮದುವೆಯೊಂದಕ್ಕೆ ಅವರ ತವರು ಮನೆ ಕಡೆ ಹೋಗಬೇಕಿತ್ತು. ಆದರೆ ನಾನು ಆಗಲೇ ಅವರ ಚಪ್ಪಲಿ ಹಾಕಿಕೊಂಡು ಶಾಲೆಗೆ ಹೋಗಿದ್ದೆ. ಸಂಜೆ ಬಂದ ಮೇಲೆ ಆಕೆ ತನ್ನ ಪಾದದ ಆಣಿಯ ನೋವು ತಡೆಯಲಾಗದೆ ಸಪ್ಪಗೆ ಕುಳಿತು ಜೇನು ಮಯಣವನ್ನು ಬಿಸಿಯಾಗಿ ಕರಗಿಸಿ ಆ ಆಣಿಗೆ ಹಚ್ಚುತ್ತಿದ್ದರು.
ಎಂದೂ ನನ್ನನ್ನು ಬೈಯದ ಆಕೆ ಆವತ್ತು ಏನೋ ಅಂದ ನೆನಪು. ಅಂದಿನಿಂದ ನಾನು ಆ ಚಪ್ಪಲಿಯನ್ನು ಬಳಸದೆ ಬರಿಗಾಲಿನಲ್ಲಿಯೇ ಶಾಲೆಗೆ ಹೋಗುತ್ತಿದ್ದೆ. (ಸ್ತ್ರೀ ವಾದ , ಅದು ಇದು ಏನೂ ಗೊತ್ತಿರದ ಅಜ್ಜ ಶಾಲೆಗೆ ಕಳುಹಿಸುತ್ತಿದ್ದುದೇ ದೊಡ್ಡ ವಿಷಯ).
ಈಗ ನನ್ನ ಬಳಿ ಎಲ್ಲ ಸೀರೆಗೂ ಮ್ಯಾಚಿಂಗ್ ಆಗುವ ಚಪ್ಪಲಿಗಳು. ಹಾಗಿದ್ದರೂ ತಮ್ಮ ಬವಣೆಯನ್ನು ಮೀರಿ ನಮಗೆಲ್ಲ ವಿದ್ಯಾಭ್ಯಾಸ ಕೊಡಿಸಿದ ಅಜ್ಜ ಅಜ್ಜಿಯವರ ನಿಸ್ಪೃಹತೆ ನೆನಪಾಗುತ್ತಿರುತ್ತದೆ.





0 Comments