ಚದುರಂಗದ ಕುದುರೆ…

ಟಿ ಎಸ್ ಶ್ರವಣ ಕುಮಾರಿ

ಎಂಟು ಗಂಟೆಯಾದರೂ, ಎಚ್ಚರವಾಗಿದ್ದರೂ ಏಳುವ ಮನಸ್ಸಾಗದೆ, ಹಾಸಿಗೆಯಲ್ಲೇ ಹೊರಳಾಡುತ್ತಿದ್ದಳು ಚಂದ್ರಲೇಖಾ. ಭಾನುವಾರ ಬೇರೆ, ಎದ್ದೇಳಲೇಬೇಕಾದ ಅನಿವಾರ್ಯವೂ ಇಲ್ಲ. ನಿನ್ನೆ ಶಾರ್ವರಿ ಫೋನ್‌ ಮಾಡಿದಾಗಿನಿಂದ ಮನ ಅಸ್ವಸ್ಥವಾಗಿತ್ತು. ಆ ಬಗ್ಗೆ ಸಿದ್ದಾರ್ಥನೊಂದಿಗೆ ಮಾತನಾಡಬೇಕೆ, ಹೇಗೆ ಕೇಳಬೇಕು ಎನ್ನುವುದರ ಬಗ್ಗೆ ಸ್ವತಃ ಅವಳಿಗೇ ಇನ್ನೂ ತೀರ್ಮಾನಕ್ಕೆ ಬರಲಾಗಿರಲಿಲ್ಲ. ನಿನ್ನೆ ಬೆಳಗ್ಗೆ ಆರುಗಂಟೆಗೇ ಸಿದ್ದಾರ್ಥ ಹಳ್ಳಿಗೆ ಹೋಗಬೇಕೆಂದು ಕಾರು ತೆಗೆದುಕೊಂಡು ಹೋಗಿದ್ದ.

ಮೊನ್ನೆ ಶುಕ್ರವಾರ ರಾತ್ರಿ ಊರಿನಿಂದ ಫೋನ್‌ ಬಂದಿತ್ತೇನೋ. ಬಹಳ ಹೊತ್ತು ಬಾಲ್ಕನಿಯಲ್ಲೇ ಅಡ್ಡಾಡುತ್ತಾ ಮಾತಾಡುತ್ತಿದ್ದ. ಹೀಗೆ ಆಗೀಗ ಅವರು ಕರೆಮಾಡುವುದು, ಆ ವಾರಾಂತ್ಯದಲ್ಲಿ ಅವನು ಹಳ್ಳಿಗೆ ಹೋಗುವುದು ಇದ್ದದ್ದೇ, ಹಾಗಾಗಿ ಅವಳೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಮಾಮೂಲಿಯಾಗಿ ಧೃತಿ ಎದ್ದ ಮೇಲೆ ಅವಳ ಎಲ್ಲಾ ಕೆಲಸ ಮುಗಿಸಿ, ತಿಂಡಿ ತಿನ್ನಿಸಿ ಡ್ರಾಯಿಂಗ್‌ ರೂಂ ಮಧ್ಯದಲ್ಲೇ ರಬ್ಬರ್‌ ಶೀಟಿನ ಮೇಲೆ ಆಟದಸಾಮಾನು ಹರವಿ ಅವಳನ್ನು ಕುಳ್ಳಿರಿಸಿದ್ದಳು.

ನಂತರ ಕೆಲಸದ ಕಮಲಿಯನ್ನು ಜೊತೆ ಮಾಡಿಕೊಂಡು ಪ್ರತಿವಾರ ಮಾಡುವಂತೆ ಮನೆಯೆಲ್ಲಾ ಡಸ್ಟಿಂಗ್‌ ಮಾಡಿ, ಜೊತೆಯಲ್ಲಿ ಧೃತಿಯನ್ನು ಗಮನಿಸಿಕೊಳ್ಳುತ್ತಲೇ ಕಿಟಕಿ, ಬಾಗಿಲು, ಮುಂತಾದವನ್ನು ಒರೆಸಿಸಿ, ಕಾರ್ಪೆಟ್‌ ವ್ಯಾಕ್ಯೂಮ್‌ ಮಾಡಿ… ಹೀಗೇ ಕೆಲಸದಲ್ಲಿ ತೊಡಗಿಕೊಂಡಿರುವಾಗ ಶಾರ್ವರಿಯ ಫೋನ್‌ ಬಂದಿತ್ತು…

***

ಇವಳ ಪ್ರಾಜೆಕ್ಟ್‌ನಲ್ಲೇ ಕಳೆದ ಮೂರುವರ್ಷದಿಂದಿದ್ದ ಶಾರ್ವರಿ ಹಿಂದಿನ ತಿಂಗಳು ಮನೆಗೆ ಹತ್ತಿರವೆಂದು ತುಂಬಾ ಪ್ರಯತ್ನಪಟ್ಟು ಸಿದ್ದಾರ್ಥನಿದ್ದ ದೊಮ್ಮಲೂರಿನ ಆಫೀಸಿಗೆ ಟ್ರಾನ್ಸ್‌ಫರ್‌ ತೆಗೆದುಕೊಂಡು ಹೋಗಿದ್ದಳು. ಅಷ್ಟೊಂದು ಹಚ್ಚಿಕೊಂಡಿಲ್ಲದಿದ್ದರೂ ಓಕೆ… ಒಳ್ಳೆಯ ಗೆಳತಿ, ಗಾಸಿಪ್‌ಗಳಿಂದ, ಲೂಸ್‌ಟಾಕ್ಸ್‌ಗಳಿಂದ ಸ್ವಲ್ಪ ದೂರವೇ. ಅನಾವಶ್ಯಕವಾಗಿ ಇತರರ ವಿಷಯದಲ್ಲಿ ಮೂಗು ತೂರಿಸುವವಳಲ್ಲ. ಅವಳೇ ಹಾಗಂದ ಮೇಲೆ ಚಂದ್ರಲೇಖಾಳಿಗೆ ಸಹಜವಾಗಿಯೇ ಗೊಂದಲವಾಗಿತ್ತು.

ಒಂದಷ್ಟು ಹೊತ್ತು ಮಾಮೂಲಿನಂತೆ ಹರಟಿದ ನಂತರ ‘ಚಂದ್ರಾ, ಹೇಗ್‌ಹೇಳ್ಬೇಕೂಂತ ನಂಗೊತ್ತಾಗ್ತಿಲ್ಲ, ಹೇಳೋದೇ ಬೇಡಾಂತಾನೂ ಅನ್ಸತ್ತೆ, ಆದ್ರೂ ನೀನು ನನ್ನ ಫ್ರೆಂಡಾಗಿರೋದ್ರಿಂದ ಹೇಳ್ದಿದ್ರೇನೂ ತಪ್ಪಾಗತ್ತೆ. ನಾನರ್ಥ ಮಾಡ್ಕೊಂಡಿರೋದೇ ಸುಳ್ಳಾಗಿರ್ಲಿ ಚಂದ್ರಾ. ತಪ್ಪು ತಿಳ್ಕೊಳ್ದಿದ್ರೆ…’ ಹಿಂಜರಿಯುತ್ತಿರುವಾಗ ‘ಪರ‍್ವಾಗಿಲ್ಲ. ಇಷ್ಟೊಂದು ಪೀಠಿಕೆ ಯಾಕೆ ಶಾರಿ, ಅದೇನ್‌ ವಿಷ್ಯಾನೋ ಹೇಳು, ಯಾವ್ದೇ ವಿಷ್ಯ ಆಗಿದ್ರೂ ನಿನ್ನ ತಪ್ಪು ತಿಳ್ಕೊಳಲ್ಲ’ ಎಂದಿದ್ದಳು ಚಂದ್ರಲೇಖಾ. 

ಆದರೂ ಸಾಕಷ್ಟು ಸುತ್ತುಬಳಸಿ ನಂತರ ‘ಇವತ್ತು ಸಿದ್ದಾರ್ಥ ಊರಲ್ಲಿಲ್ಲ ಅಲ್ವಾ;’ ಅಂದಳು ಶಾರ್ವರಿ. ‘ಹೌದು’ ಚಂದ್ರಲೇಖಾಳಿಗೆ ಅಚ್ಚರಿಯಾಯಿತು. ನಿನ್ನೆ ರಾತ್ರಿತಂಕ ನಂಗೇ ಗೊತ್ತಿಲ್ದಿದ್ದ ಪ್ರೋಗ್ರಾಂ ಇವ್ಳಿಗ್ಹೇಗೆ ಗೊತ್ತಾಯ್ತು?! ಅದೂ… ಚಂದ್ರಾ… ಸಿದ್ದಾರ್ಥ, ಮಾಳವಿಕಾ ಶರ್ಮಾ ಜೊತೆ ಸ್ವಲ್ಪ ಜಾಸ್ತೀನೇ ಓಡಾಡ್ತಿರ‍್ತಾರೆ. ನಿನ್ಗಂಡ ಅಲ್ವಾಂತ ಗಮನಕ್ಕೆ ಬರತ್ತೆ, ಇಲ್ಲಾಂದ್ರೆ ನಿಂಗೊತ್ತಲ್ಲ, ನಾನಿಂಥ ವಿಷಯಗಳಿಂದ ತುಂಬಾ… ದೂರ. ಎಲ್ಲಾ ಕಡೆ ಒಟ್ಟಿಗೆ ಕಾಣಿಸ್ಕೋತಾರೆ, ಅಗತ್ಯಕ್ಕಿಂತ್ಲೂ ಸ್ವಲ್ಪ ಹೆಚ್ಚೇ ಅನ್ಸೋಂಗಿರತ್ತೆ ಅವರ ಬಿಹೇವಿಯರ್’ ಎನ್ನುತ್ತಿರುವಾಗಲೇ ಚಂದ್ರಲೇಖಾಳ ಬಿ.ಪಿ. ಏರತೊಡಗಿತ್ತು.

‘ಯಾವ ಮಾಳವಿಕಾ ಶಾರಿ?’ ದುಗುಡದಿಂದಲೇ ಕೇಳಿದಳು. ‘ಅದೇ ಕಣೇ ಪೂನಾದ ಹುಡುಗಿ, ಅಲ್ಲಿ ಟೆಸ್ಟಿಂಗ್‌ನಲ್ಲಿದ್ಲು… ನಾನು ಬರಕ್ಕೆ ಮೂರ‍್ತಿಂಗ್ಳು ಮುಂಚೆ ಇಲ್ಲಿಗೆ ಬಂದಿದ್ದೇನೋ…’ ತಕ್ಷಣ ಚಂದ್ರಾ ‘ಬೆಕ್ಕಿನಕಣ್ಣೋಳು… ಪೂಜಾಭಟ್‌ ಥರ ಇದಾಳೆ ಅನ್ಕೋತಿದ್ವಲ್ಲಾ…’ ಎಂದಳು. ‘ಅವಳೇ, ಯಾವಾಗಿಂದ ಫ್ರೆಂಡ್ಷಿಪ್‌ ಶುರುವಾಗಿದ್ಯೋ ನಂಗೊತ್ತಿಲ್ಲ…’ ಶಾರ್ವರಿ ಮಾತುಮುಗಿಸುವ ಮುನ್ನವೇ ‘ಅವ್ಳಿಗೆ ಮದ್ವೆಯಾಗಿದ್ಯಲ್ವಾ, ಗಂಡ ಇಂಟೆಲ್‌ನಲ್ಲಿದಾನೇಂತ ಇಲ್ಲಿದ್ದಾಗ ಹೇಳಿದ್ಲು’ ಅಂದಳು ಚಂದ್ರಾ. ‘ಬ್ರೇಕಾಗೋದ್ರಲ್ಲಿದೆ, ಇಷ್ಟ್ರಲ್ಲೇ ಡೈವೋರ್ಸ್ ಅಂತ ಸುದ್ದಿ’ ಶಾರ್ವರಿ ಎಂದಾಗ ಸ್ವಲ್ಪಹೊತ್ತು ಚಂದ್ರಲೇಖಾಳ ಕಂಠ ಸ್ಥಬ್ದವಾಯಿತು. 

‘ಕೇಳ್ತಿದೆಯಾ..’ ಕೇಳಿದಾಗ ‘ಹ್ಞೂಂ  ಹೇಳು’ ಎಂದಳು ಯೋಚನೆಗಿಳಿಯುತ್ತಾ. ‘ನಿನ್ನೆ ಅವ್ರಿಬ್ರೂ ಲಂಚ್‌ಟೈಮ್ನಲ್ಲಿ ಕೆಫೆಟೋರಿಯಾದ ಮೂಲೇಲ್ಕೂತು ಹರಟ್ತಿದ್ರು. ನಾನು ಹಿಂದಿನ ಚೇರಲ್ಲೇ ಕೂತಿದ್ದೆ. ಸಿದ್ದಾರ್ಥನಿಗೆ ಇನ್ನೂ ನಾನೂ, ನೀನೂ ಫ್ರೆಂಡ್ಸ್‌ ಅನ್ನೋ ವಿಷಯ ಗೊತ್ತಿಲ್ಲಾನ್ಕೊಂಡಿದೀನಿ. ಯಾವ ಭಿಡೆಯಿಲ್ದೆ ಅವ್ರಿಬ್ರೂ ವೀಕೆಂಡಿನ ಪ್ರೋಗ್ರಾಂ ಡಿಸ್ಕಸ್‌ ಮಾಡ್ತಿದ್ರು. ʻನಾಳೆ ಬೆಳಗ್ಗೆ ಆರೂವರೆಗೆ ನಿಮ್ಮನೆ ಹತ್ರಾನೆ ಬರ‍್ತೀನಿʼ ಅಂತ ಸಿದ್ದಾರ್ಥ ಹೆಬ್ಬೆಟ್ಟು ತೋರಿಸ್ತಾ ಎದ್ರು. ಇಬ್ರೂ ತೋಳೊಳಗೆ ತೋಳು ಸೇರಿಸ್ಕೊಂಡು ನಗ್ನಗ್ತಾ ಅಲ್ಲಿಂದ ಹೊರಟ್ರು. ನಿಂಗೆ ಹೇಳ್ಳೋ, ಬೇಡ್ವೋ ಅಂತ ನಿನ್ನೆಯಿಂದ ನೂರ‍್ಸಲ ಯೋಚ್ನೆ ಮಾಡ್ದೆ.‌ ಆದ್ರೂ ನಿನ್‌ಗಮನಕ್ಕೆ ತಂದ್ರೆ ಒಳ್ಳೇದನ್ನಿಸ್ತು ಚಂದ್ರಾ. ಸಾರಿ, ಇಫ್‌ ಐ ಆಮ್‌ ರಾಂಗ್’ ಅಂದಳು. ಮುಂದೇನು ಹೇಳಿದಳೋ ಒಂದೂ ಚಂದ್ರಾಳ ಕಿವಿಯ, ಬುದ್ಧಿಯ ಒಳಗೆ ಇಳಿಯಲಿಲ್ಲ. ಫೋನಿಟ್ಟಳು… ತಲೆ ಕಲ್ಲು ಹೊಡೆದ ಜೇನುಗೂಡಾಯಿತು… 

ವಾಸನೆ ಬಂದು ಇತ್ತ ಗಮನ ಹರಿದಾಗ ಧೃತಿ ಶೀಟಿನ ಮೇಲೇ ಹೇಸಿಗೆ ಮಾಡಿಕೊಂಡಿದ್ದಳು, ಚಡ್ಡಿಯಿಂದ ಈಚೆಗೆ ಬಂದದ್ದನ್ನು ತಟ್ಟುತ್ತಿದ್ದಳು. ಕೋಪವುಕ್ಕಿ ಬೆನ್ನಿಗೆ ಗುದ್ದಿದ ತಕ್ಷಣ ಜೋರಾಗಿ ಕಿರುಚಿಕೊಂಡು ಅಳತೊಡಗಿದಳು. ಬಾತ್ರೂಮಿಗೆ ಕರೆದುಕೊಂಡು ಹೋಗಿ ತೊಳೆಸುವಾಗ ಏನೂ ಅರ್ಥವಾಗದ ಮಗುವನ್ನು ಹೊಡೆದದ್ದಕ್ಕೆ ತನ್ನ ಮೇಲೇ ಬೇಸರವಾದರೂ ಅವಳನ್ನು ಸಮಾಧಾನ ಪಡಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಮೂರು ವರ್ಷದ ಧೃತಿ ಮೆಂಟಲಿರಿಟಾರ್ಡೆಡ್.‌

ಹೊತ್ತುಹೊತ್ತಿಗೆ ನೋಡಿಕೊಂಡು ಅವಳನ್ನು ಟಾಯ್ಲೆಟ್ಟಿಗೆ ಕರೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಇದೇ ಅವಸ್ಥೆ. ಪ್ರತಿದಿನವೂ ಕೆಲಸಕ್ಕೆ ಹೋಗುವಾಗ ಸಿದ್ದಾರ್ಥ ಕೇರ್‌ಸೆಂಟರಿಗೆ ಬಿಟ್ಟು ಹೋಗುತ್ತಾನೆ. ಕರೆದುಕೊಂಡು ಬರುವ ಕೆಲಸ ಚಂದ್ರಲೇಖಾಳದ್ದು. ಈಗಿನ್ನೂ ಚಿಕ್ಕವಳು, ಬಿಹೇವಿಯರ್‌ ವೈಲ್ಡಲ್ಲ. ಸೆಂಟರಿನವರೂ ಒಪ್ಪಿಕೊಂಡಿದ್ದಾರೆ. ಎಲ್ಲಿಯತನಕ ಹೀಗೆ ಸಾಗುತ್ತದೆ ಎನ್ನುವುದರ ಬಗ್ಗೆ ಅವಳಿಗೆ ಸಂಶಯವಿದೆ.

ಮ್ಯಾನೇಜ್‌ ಮಾಡಲಾಗದಿದ್ದರೆ ಕೆಲಸ ಬಿಡಬೇಕಾಗಬಹುದೇನೋ ಎನ್ನುವ ಭಯವೂ ಇದೆ. ಅವಳು ʻಹೀಗೆʼ ಎಂದು ಗೊತ್ತಾದಾಗಿನಿಂದ ಪ್ರಮೋಶನ್‌ಗಳ ಆಸೆಯನ್ನು ತೊರೆದು ಮನೆಯ ಹತ್ತಿರದ ಆಫೀಸಿನಲ್ಲೇ ಇರಲು ಹೇಗೋ ಮ್ಯಾನೇಜ್‌ ಮಾಡುತ್ತಿದ್ದಾಳೆ. ಹಾಗಾಗಿ ಮೂರುವರ್ಷದಿಂದ ದಿನಚರಿ ಧೃತಿಯೊಂದಿಗೆ ಫಿಕ್ಸ್‌ ಆಗಿಬಿಟ್ಟಿದೆ. ಮನಸ್ಸು ʻಮುಂದೇನು?ʼ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿ ಸೋಲುತ್ತಿರುತ್ತದೆ.. 

ಪ್ರತಿ ಶನಿವಾರ, ಭಾನುವಾರವೂ ಕೇರ್‌ಸೆಂಟರಿಗೆ ರಜಾ. ಮಾಲ್‌, ಸಿನಿಮಾ ಎಲ್ಲಾ ಕನಸಿನಂತಾಗಿ ಹೆಚ್ಚುಕಡಿಮೆ ಮನೆಗೇ ಕಟ್ಟಿಹಾಕಿದಂತಿದೆ. ಮನೆಯಲ್ಲಿದ್ದಾಗಲೂ ಸಿದ್ದಾರ್ಥ ಮಗುವನ್ನು ಪೂರ್ತಿಮನಸ್ಸಿನಿಂದ ಗಮನಿಸುವುದಿಲ್ಲ. ಮನಸ್ಸಿದ್ದರೆ ತಿನ್ನಿಸುವುದೋ, ಕುಡಿಸುವುದೋ ಮಾಡುತ್ತಾನೆ. ತೊಡೆಮೇಲೆ ಕೂರಿಸಿಕೊಂಡು ಟೀವಿನೋಡುತ್ತಾ ಎಂಗೇಜ್‌ ಮಾಡಿಕೊಂಡಿರುತ್ತಾನೆ, ತಟ್ಟಿ ಮಲಗಿಸುತ್ತಾನೆ. ಸುಸ್ಸು ಮಾಡಿದೆ, ಕಕ್ಕ ಮಾಡಿದೆ ಎನ್ನುತ್ತಾನಷ್ಟೇ. ತೆಗೆಯುವ ಜಾಯಮಾನವೇ ಇಲ್ಲ. ‘ಮಕ್ಕಳ ಈ ಕೆಲ್ಸಾನೆಲ್ಲಾ ಮಾಡೋ ಅಭ್ಯಾಸವೇ ನನಗಿಲ್ಲ’ ಎಂದು ಜಾರಿಕೊಳ್ಳುತ್ತಾನೆ.

‘ನಾನೇನು ಹತ್ತುಮಕ್ಳನ್ನು ಹೆತ್ತು ಸಾಕಿದ್ದೀನಾ. ಗಂಡ್ಸು ಅನ್ನೋ ಅಹಂ ತೋರಿಸ್ಬೇಡ. ಇದ್ರಬಗ್ಗೆ ನಿನ್ನ ಜವಾಬ್ದಾರೀನೂ ಇದ್ಯಲ್ವಾ’ ಎಂದು ಕೂಗಾಡಿದರೂ ಅದಕ್ಯಾವ ಕಿಮ್ಮತ್ತೂ ಇಲ್ಲದೆ ಅದು ಅವಳ ಪಾಲಿನದೇ ಎನ್ನುವಂತೆ ತನ್ನ ಪಾಡಿಗಿರುತ್ತಾನೆ. ಅವನೇ ಮಾಡಲಿ ಎನ್ನುವ ಹಟಕ್ಕೆ ಬಿದ್ದು ಸುಮ್ಮನಿದ್ದರೆ ಗಂಟೆಗಳಾದರೂ ಅವನೇನು ಜಪ್ಪಯ್ಯ ಅನ್ನುವುದಿಲ್ಲ. ಜನ್ಮದಲ್ಲೇ ಯಾರಿಗೂ ಯಾವುದಕ್ಕೂ ಸೋತು ಗೊತ್ತಿಲ್ಲದಿದ್ದ ಚಂದ್ರಲೇಖಾ ಈ ವಿಷಯದಲ್ಲಿ ಸೋತು ನೆಲಕಚ್ಚಿದ್ದಾಳೆ. ಅಷ್ಟೇಕೆ ಧೃತಿ ಹುಟ್ಟಿದಮೇಲೆ ಬಹಳಷ್ಟು ವಿಷಯಗಳಲ್ಲಿ ಕಾಂಪ್ರಮೈಸ್‌ ಮಾಡಿಕೊಳ್ಳಲೇಬೇಕಾಗಿದೆ, ಮಾಡಿಕೊಂಡಿದ್ದಾಳೆ.

ಸಿದ್ದಾರ್ಥ ಹಳ್ಳಿಗೆ ಹೋಗುವುದು ಹೆಚ್ಚಾಗಿದೆ. ಅವನಮ್ಮ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದು ಆಗಾಗ ಪಕ್ಕದ ಹಳ್ಳಿಯಿಂದ ನಾಟಿವೈದ್ಯನನ್ನು ಕರೆತಂದು ಮಾಲೀಶ್‌ ಮಾಡಿಸಬೇಕೆನ್ನುವ ನೆಪವೂ ಇದೆ. ರೋಷವುಕ್ಕಿದರೂ ಉಪಾಯವಿಲ್ಲದೆ ಹಲ್ಲುಕಚ್ಚಿಕೊಂಡು ಅನುಭವಿಸುತ್ತಿದ್ದಾಳೆ. ಅಂತಹುದರಲ್ಲಿ ಈಗ ಈ ವಿಷಯ… ನಿನ್ನೆಯಿಡೀ ಯೋಚನೆ ಬಿಟ್ಟು ಇನ್ನೇನು ಮಾಡಲೂ ಸಾಧ್ಯವಾಗಲಿಲ್ಲ… ಧೃತಿಯ ನೆಪದಿಂದ ಇವಳ ಹೊಟ್ಟೆಗೂ ಒಂದಿಷ್ಟು ಬಿದ್ದಿತ್ತಷ್ಟೇ. ರಾತ್ರಿಯಿಡೀ ಕಣ್ಣು ಹತ್ತಲಿಲ್ಲ…

***

ಏಳುವ ಮನಸ್ಸಿಲ್ಲದಿದ್ದರೂ ಧೃತಿಗೆ ಎಚ್ಚರವಾಗಿದ್ದರಿಂದ ಏಳಲೇಬೇಕಾಯಿತು. ಭಾನುವಾರ ಕಮಲಿಯೂ ಬರುವುದಿಲ್ಲ. ಪಾತ್ರೆಯೇನೂ ಹೆಚ್ಚಿಲ್ಲ. ನಿನ್ನೆಯೆಲ್ಲಾ ವ್ಯಾಕ್ಯೂಮ್‌ ಮಾಡಿರುವುದರಿಂದ ಕಸಗುಡಿಸುವುದೂ ಬೇಕಿಲ್ಲ. ಏನು ಮಾಡಲೂ ಮನಸ್ಸಿಲ್ಲ. ತಲೆಯೆಲ್ಲಾ ಕೆಟ್ಟ ಮೊಸರು ಗಡಿಗೆಯಾಗಿದೆ. ಫ್ರಿಜ್ಜಿನಲ್ಲಿ ಇಬ್ಬರಿಗೂ ಬೆಳಗ್ಗೆ, ಮಧ್ಯಾಹ್ನ ಎರಡು ಹೊತ್ತಿಗೂ ಸಾಕಾಗುವಷ್ಟು ದೋಸೆಹಿಟ್ಟಿದೆ. ಧೃತಿಗೆ ಸ್ವಲ್ಪ ಖಾರವಾದರೂ ಹೇಳಲು ಗೊತ್ತಾಗುವುದಿಲ್ಲ; ಮುಖವೆಲ್ಲಾ ಕೆಂಪಾಗಿ ಮೈಯೆಲ್ಲಾ ಅದುರಿಹೋಗುತ್ತದೆ. ಅವಳಿಗೆ ಜ್ಯಾಮು, ತನಗೆ ಉಪ್ಪಿನಕಾಯೋ, ಚಟ್ನಿಪುಡಿಯೋ ಆಗುತ್ತದೆ. ಮನಸ್ಸಿದೆಯೋ, ಇಲ್ಲವೋ ಎಲ್ಲವೂ ಆಗಲೇಬೇಕಲ್ಲ ಎಂದುಕೊಂಡು ಮುಖತೊಳೆಸಲು ಅವಳನ್ನು ಕರೆದುಕೊಂಡು ಹೋದಳು.  

ಯಾಂತ್ರಿಕವಾಗಿ ಎಲ್ಲವನ್ನೂ ಮುಗಿಸಿ ಧೃತಿಗೆ ಫಿಸಿಯೋಥೆರಪಿಸ್ಟ್ ಹೇಳಿಕೊಟ್ಟಿದ್ದ ಆಟಗಳನ್ನು ಆಡಿಸತೊಡಗಿದಳು. ಕೆಲಸದಲ್ಲಿ ತೊಡಗಿಕೊಂಡರೂ ಯೋಚನೆಗೆ ಬಿಡುವಿರಲಿಲ್ಲ. ಸಿದ್ದಾರ್ಥ ಧೃತಿಯ ವಿಷಯವನ್ನು ಬಿಟ್ಟರೆ ತನ್ನೊಂದಿಗೆ ಯಾವತ್ತಿನ ಹಾಗೇ ಇದಾನಲ್ವಾ… ನಿನ್ನೆ ಶಾರ್ವರಿ ಹೇಳುವತನಕ ತನಗೆ ಅಂಥ ಬದಲಾವಣೆಯೇನೂ ಕಂಡಿರಲಿಲ್ಲ. ಅವನು ಹಳ್ಳಿಗೆ ಹೋಗಬೇಕೂನ್ನೋದೂ ಸಹಜವಾಗೇ ಇತ್ತು. ನಾನ್‌ತಾನೇ ಅಪ್ಪ-ಅಮ್ಮನ್ನ ಧಿಕ್ಕರಿಸಿ ಬಂದಿದ್ದು, ಅವನಲ್ಲವಲ್ಲ.

‘ನಾನೊಬ್ನೇ ಮಗ. ಅಕ್ಕಂದ್ರೆಲ್ಲಾ ಮದ್ವೆಯಾಗಿ ಬೇರೆ ಊರಲ್ಲಿರೋದು. ಇದುವರ‍್ಗೂ ಸಂಸಾರಾನೂ ಅಲ್ಲೇ ಇದ್ದಿದ್ರಿಂದ ಪ್ರತಿವಾರವೂ ಹಳ್ಳಿಗೋಗ್ತಿದ್ದೆ. ಈಗಷ್ಟಲ್ದಿದ್ರೂ ಸಮಯಾಂದ್ರೆ ಹೋಗಿ ಬರ್ತಿರಬೇಕಾಗತ್ತೆ. ನಿನಗಿಷ್ಟವಿದ್ರೆ ನೀನೂ ಬರ‍್ಬೋದು’ ಮೊದಲೇ ಹೇಳಿದ್ದ. ಹೊಸದ್ರಲ್ಲಿ ಒಂದೆರ‍್ಡೇ ಎರಡ್ಸಲ ಹೋಗಿದ್ದೇನೋ ಅಷ್ಟೇ. ಅಲ್ಲಿನ ಯಾವುದೂ ಇಷ್ಟವಾಗ್ಲಿಲ್ಲ, ಸರಿಹೋಗ್ಲಿಲ್ಲ. ಅವರಪ್ಪ ಅಮ್ಮಂಗೂ ತನ್ಬಗ್ಗೆ ಆದರವೇನಿಲ್ಲ; ಕೋಪ್ವೇ ಇದ್ಯೇನೋ… ಮಗಂಗೋಸ್ಕರ ಸಹಿಸ್ಕೊತಾರಷ್ಟೇ.

ಹಳೇಕಾಲದ ಗಲೀಜು ನಾಡಹೆಂಚಿನ ಮನೆ. ಗಮಾರ್ ಜನ. ಸರಿಯಾದ ಬಾತ್ರೂಮ್‌-ಟಾಯ್ಲೆಟ್‌ ವ್ಯವಸ್ಥೆಯಿಲ್ಲ. ಮನೆಯೆಲ್ಲಾ ಗಬ್ಬುಹಿಕ್ಕೆಯ ಮುಗ್ಗುಲುನಾತ ಮಡುಗಟ್ಟಿರತ್ತೆ.  ದನ-ಕರು ಪರ‍್ವಾಗಿಲ್ಲ, ಕೋಳಿ, ಕುರಿಗಳು ಬೇರೆ. ಇವ್ನು ಬಂದಾಂತ ಅದ್ರಲ್ಲಿ ಯಾವ್ದೋ ಒಂದಕ್ಕೆ ಮೋಕ್ಷವಾಗತ್ತೆ.‌ ತಡ್ಕೊಳಕ್ಕಾಗಲ್ಲ. ಅಲ್ಲಿರೋವಾಗ ಸಿದ್ದಾರ್ಥನೂ ಅವ್ರಂತೇ ಆಗ್ಬಿಡ್ತಾನೆ. ಮನೆತುಂಬಾ ಚೇಳುಗಳು ಓಡಾಡ್ತಿರುತ್ವೆ, ಅಂಥಲ್ಲಿ ರಾತ್ರಿ ನಿದ್ರೆ ಬರುತ್ತಾ? ಸಾಧ್ಯವೇ ಇಲ್ಲಾನ್ಸಿ ಆಮೇಲೆ ತಾನು ಹೋಗ್ಲಿಲ್ಲ, ಅವ್ನು ಕರೀಲಿಲ್ಲ. ಈಗ್ಲೂ ಹಾಗೇ ಹೋಗಿದಾನೆ ಅಂತಾನೇ ಅಂದ್ಕೊಂಡಿದ್ದು… ಸ್ವಲ್ಪಹೊತ್ತಿಗೆ ಧೃತಿ ಮಲಗಿಕೊಂಡಿತು. ಪಕ್ಕದಲ್ಲೇ ಉರುಳಿಕೊಂಡಳು ಮಂಪರು ಬಂದಂತಾಗಿ… ಅಮ್ಮ ಕೂಗುತ್ತಿದ್ದಳು ‘ನಿಂಗವ್ರ ಶಾಪ ತಟ್ಟತ್ತೆ…’ ಥಟ್ಟನೆಚ್ಚರಾಗಿ ಮನ ಹಿಂದಕ್ಕೋಡಿತು

***

ಅಪ್ಪನ ವಂಶವೇ ಜೋಯಿಸರ ವಂಶ. ವಂಶದ ಹಿರಿಯರ ಬಗ್ಗೆ ವಿಪರೀತ ಹೆಮ್ಮೆ, ಗರ್ವ. ರೋಸಿಹೋಗುವಷ್ಟು ಮಡಿ-ಸಂಪ್ರದಾಯ. ಅಮ್ಮನೋ… ಅದೇ ನೀರಲ್ಲಿ ನೆಂದು ಹದವಾದೋಳು. ಅಕ್ಕ-ಅಣ್ಣ ಹುಟ್ಟಿ ಹನ್ನೆರ‍್ಡು ವರ್ಷವಾದ್ಮೇಲೆ ಅಮ್ಮ ಮುಟ್ಟುನಿಲ್ತು ಅಂದ್ಕೊಂಡಾಗ ಹುಟ್ಟಿದವಳಂತೆ ತಾನು.‌ ಮಗುವಾಗಿದ್ದಾಗಿಂದ್ಲೂ ಹಟಮಾರಿಯಂತೆ. ದೊಡ್ಡವರಿಬ್ರೂ ಮನೆಯ ರೀತಿರಿವಾಜುಗಳಿಗೆ ಹೊಂದಿಕೊಂಡುಬಿಟ್ಟಿದ್ರು. ತನಗ್ಮಾತ್ರ ಮೊದ್ಲಿಂದ್ಲೂ ಅದ್ಯಾಕೋ ಮಡಿ-ಮೈಲಿಗೆ, ಸಂಪ್ರದಾಯದ ಸಂದರ್ಭಗಳು ಬಂದಾಗ ಧಿಕ್ಕರಿಸಿ ನಿಂತ್ಕೊಳೋ ಹಟ ಬರ‍್ತಿತ್ತು.

ಮುಟ್ಟಾದಾಗ ಬೇಕೂಂತಾನೇ ಇಡೀ ಮನೆಯೆಲ್ಲಾ ಮುಟ್ಕೊಂಡು ಬರ್ತಿದ್ದೆ. ಹೆದರಿ ಅಮ್ಮನೇ ʻಆದ್ ತಕ್ಷಣ ಸ್ನಾನನಾದ್ರೂ ಮಾಡ್ಕೊಂಡ್ಬಂದ್ಬಿಡುʼ ಅಂತ ರಾಜಿಗೆ ಬಂದ್ಲು. ತನಗಿಟ್ಟಿದ್ದು ಅಜ್ಜಿಯ ಹೆಸರು ಚಂದ್ರಮತಿಯಂತೆ… ಸತ್ಯಹರಿಶ್ಚಂದ್ರನ ಗೋಳುಹೆಂಡ್ತಿ ಹೆಸರು. ತಿರುಡಾ ತಿರುಡಾ ಪಿಕ್ಚರ್‌ನಲ್ಲಿ ‘ಕೊಂಜುಂನಿಲವುಂ… ಚಂದ್ರಲೇಖಾ…’ ಹಾಡಿನಲ್ಲಿ ಅವಳನ್ನು ನೆಲದಿಂದ ಮೇಲೆದ್ದ ಅಪ್ಸರೆಯಂತೆ ನೋಡಿದ ತಕ್ಷಣವೇ ಡಿಸೈಡ್‌ ಮಾಡಿಬಿಟ್ಟಿದ್ದೆ ‘ಐ ಆಮ್‌ ನೋ ಮೋರ್‌ ಚಂದ್ರಮತಿ, ಓನ್ಲಿ ಚಂದ್ರಲೇಖಾ’ ಅಂತ. ಅಪ್ಪನಿಗೆ ಹೇಳದೇನೆ ಬದಲಾಯಿಸಿಕೊಂಡೂ ಬಿಟ್ಟೆ. ಮುಂದೆ ಗೊತ್ತಾದಾಗ ಬೇಜಾರಿನಲ್ಲಿ ಮೂರ‍್ದಿನ ಊಟ, ಮಾತು ಬಿಟ್ಟಿದ್ರು. ತಾನೇನು ಕೇರ್‌ ಮಾಡಿರ್ಲಿಲ್ಲ.

ಪಿ.ಯು.ಸಿ ಆದ್ಮೇಲೆ ಹಟಹಿಡ್ದು ಬಿ.ಇ. ಮಾಡಿ ಕೆಲ್ಸಕ್ಕೆ ಸೇರಿದ್ದು. ಊರು ಬಿಟ್ಬಿಡ್ತೀಯಾ, ಮದ್ವೆ ಮಾಡ್ಬುಡ್ತೀವೀಂತ ಇಬ್ಬರದೂ ಇನ್ನಿಲ್ಲದ ಒತ್ತಾಯ. ‘ನನ್ನ ಗಂಡನ್ನ ನಾನೇ ಆರಿಸ್ಕೊಳೋದು’ ಅಂತ ಖಡಾಖಂಡಿತವಾಗಿ ಹೇಳಿ ಬೆಂಗ್ಳೂರಿಗೆ ಬಂದಿದ್ದೆ. ಕಡೆಗೆ ಸೋತು ‘ಯಾರಾದ್ರೂ ನಮ್ಮವ್ರನ್ನೇ ಮಾಡ್ಕೋ. ಹೊಟ್ಟೆ ಉರಿಸ್ಬೇಡ’ ಎಂದು ಹೇಳಿಕಳಿಸಿದ್ದರು… ಧಿಕ್ಕರಿಸಿ ನಿಲ್ಲೋದು ಒಂಥರಾ ಅಮಲೇ ಇರ‍್ಬೇಕು. ಅಷ್ಟು ಹೇಳ್ತಿರೋವಾಗ ʻಏನಾದ್ರೂ ಮಾತ್ಕೇಳ್ಬಾರ‍್ದುʼ ಅನ್ನೋ ಹಟ ಯಾಕ್ಬರ‍್ತಿತ್ತು ಅನ್ನೋದೇ ಗೊತ್ತಿಲ್ಲ… ಮಲಗಲು ಸಾಧ್ಯವಾಗದೆ ಡ್ರಾಯಿಂಗ್‌ರೂಮಿನ ಸೋಫಾದಲ್ಲಿ ಒರಗಿ ಗೋಡೆಯಮೇಲೆ ಹಾಕಿದ್ದ ಜಗತ್ತನ್ನೇ ಗೆದ್ದ ಹಮ್ಮಿನಿಂದ ನಿಂತಿದ್ದ ತಮ್ಮಿಬ್ಬರ ಫೋಟೋ ನೋಡತೊಡಗಿದಳು… ಅಂದಿನ ಚಿತ್ರ ಕಣ್ಮುಂದೆ ಬಂತು… 

‘ಅಯ್ಯೋ… ಪಾಪಿಷ್ಟೆ ನಿನ್ನ ಹೆರೋ ಬದ್ಲು ನಾನು ಬಂಜೆಯಾಗಿದ್ರೆ ಚೆನ್ನಾಗಿತ್ತು. ಹುಣ್ಣು ಹುಟ್ಕೊಂಡ್‌ಹಂಗೆ ನನ್ನ ಹೊಟ್ಟೇಲಿ ಹುಟ್ಬಿಟ್ಟೆ… ಅವನಿಗಾಗ್ಲೇ ಮದ್ವೆಯಾಗಿ ಹದ್ನೈದು ವರ್ಷವಾಗಿದೆ, ಇಬ್ರು ಮಕ್ಳಿದಾರೆ ಅಂತೀಯ. ಏನು ಚಿಕ್ಕೋನಾ? ಅವನನ್ನ ಹೆಂಡ್ತಿ, ಮಕ್ಳಿಂದ ಕಿತ್ಕೊಂಡ್ರೆ ನಿಂಗವ್ರ ಶಾಪ ತಟ್ಟಲ್ವಾ. ನಮ್ಮ ಜಾತಿಯಾ… ಜನ್ವಾ… ಊರಲ್ಲಿ ಮಾನ-ಮರ‍್ಯಾದೆ ಇಟ್ಕೊಂಡು ಬದುಕಿರೋರು ನಾವು. ಒಂದಲ್ಲಾ… ಎರ‍್ಡೆರೆಡು ತಪ್ಪು ಮಾಡ್ತಿದೀ ನೀನು. ಯೋಚ್ನೆಮಾಡು’ ಅಮ್ಮ ಗೊಳೋ ಎಂದತ್ತಳು. ‘ಇಪ್ಪತ್ವರ್ಷಕ್ಕೆ ಮದ್ವೆಮಾಡಿ ಕೂರ‍್ಸಿದಾರೆ, ಎರ‍್ಡು ಮಕ್ಳಿವೆ. ನಂಗೇನು ವಯಸ್ಸು ಕಮ್ಮೀನಾ. ನಂಗಿಂತ ಎರಡ್ವರ್ಷಕ್ಕೆ ದೊಡ್ಡೋನಷ್ಟೆ. ಅವ್ರವ್ರಿಗೆ ಬೇಕಾದವ್ರನ್ನ ಮದ್ವೆಯಾಗಕ್ಕೆ ಬಿಡ್ದಿದ್ರೆ ಹೀಗೇ ಆಗೋದು. ಒಳ್ಳೇ ಪೊಸಿಶನ್‌ನಲ್ಲಿದಾನೆ. ಓ ಅಂದ್ರೆ ಠೋ ಅನ್ನಕ್ಕೆ ಬರ‍್ದಿರೋಳನ್ನ ಜೀವ್ಮಾನ್ವಿಡೀ ಸಹಿಸ್ಕೊಂಡಿರಕ್ಕಾಗತ್ತಾ. ತನ್ನ ಲೆವೆಲ್ಗಿರೋ ಹೆಂಡ್ತಿ ಬೇಕೂನ್ಸತ್ತೆ. ನಾನವ್ನನ್ನೇ ಮದ್ವೆಯಾಗೋದು ಅಷ್ಟೆ’ ಕಡ್ಡಿ ತುಂಡುಮಾಡಿದ ಹಾಗಂದಿದ್ದೆ.

‘ಮದ್ವೇನೇ ಮಾಡ್ಕೋಬೇಡ. ಹೀಗೇ ಹಾಯಾಗಿರು. ಮೊದ್ಲಿಂದ್ಲೂ ಹಟಾನೇ ಸಾಧಿಸ್ತಿ. ಅವತ್ತೇ ಗೊತ್ತಿತ್ತು ನೀನೊಂದಿನ ಕೈಕೊಡೋಳೇಂತ. ಇದೇ ನಿರ್ಧಾರಾನೇ ಆದ್ರೆ ನಿನ್ನ ಪಾಲಿಗೆ ನಾವು ಸತ್ವಿ ಅಂತಿಳ್ಕೋ’ ಅಪ್ಪ ಕಡೆಯ ಪ್ರಯತ್ನವೇನೋ ಅನ್ನೋಹಾಗೆ ಹೇಳಿದ್ರು. ಇಂತ ಎಮೋಷನಲ್‌ ಬ್ಲಾಕ್ಮೇಲ್‌ಗೆ ಏನಾದ್ರೂ ಬಗ್ಬಾರ್ದು ಅಂತ ಗಟ್ಟಿ ನಿರ್ಧಾರ ತೆಗೆದುಕೊಂಡಾಗಿತ್ತು.

‘ಒಳ್ಳೇದೇ ಆಯ್ತು ಆಗ ನೀವೂ ಕೊರಗೋದು ತಪ್ಪತ್ತೆ, ನಂಗೂ ನಿರಾಳವಾಗತ್ತೆ. ನಿಮ್ಗೆ ವಿಷ್ಯ ತಿಳ್ಸಿಹೋಗಕ್ಕೆ ಬಂದೆ ಅಷ್ಟೆ, ನೀವೊಪ್ಪಲ್ಲ ಅನ್ನೋದು ಗೊತ್ತಿದ್ದಿದ್ದೇ. ಅದು ಬೇಕಾಗೂ ಇಲ್ಲ. ಅಕ್ಕನ್ನ ಭಾಳ ನೋಡಿಕೊಟ್ಟು ಅವ್ಳು ಅನುಭವಿಸ್ತಿರೋದನ್ನ ನೋಡ್ತಿಲ್ವಾ, ಅಂಥ ಗತಿ ನಂಗ್ಬೇಕಿಲ್ಲ. ನಿಮ್ಮಗನ್ನ ಗೂಟಕ್ಕೆ ಕಟ್ಟಿಹಾಕ್ಕೊಳಿ ಸಾಕು’ ಎನ್ನುತ್ತಾ ಹೊರಟುಬಂದು ರಸ್ತೆಯ ಮೂಲೆಯಲ್ಲಿ ಕಾಯುತ್ತಿದ್ದ ಸಿದ್ಧಾರ್ಥನ ಕಾರುಹತ್ತಿದ್ದೆ… ‘ಏನಾಯ್ತು?’ ಎಂದವನಿಗೆ ‘ಋಣ ಕಡ್ಕೊಂಡ್ಬಂದೆ’ ಅಂದಿದ್ದೆ ಕೈಕೊಡವುತ್ತಾ… ‘ನೆಕ್ಸ್ಟ್ ನಿನ್ನ ಡೈವೋರ್ಸ್‌ದು ಸೆಟಲ್‌ ಆಗ್ಬೇಕಲ್ವಾ, ಅಲ್ಲಿವರ‍್ಗೆ ಕಾಯ್ಬೇಕು’ ಅಂದಿದ್ದಕ್ಕೆ ‘ಅದ್ರ ಪಾಡಿಗೆ ಅದ್ಬರ‍್ಲಿ, ಆದಷ್ಟು ಬೇಗ ನನ್ನ ಪ್ಲಾಟಿಗೆ ಷಿಫ್ಟಾಗ್ಬಿಡು. ತುಂಬಾ ದಿನ ಕಾಯಕ್ಕಾಗಲ್ಲ’ ಅಂದ… ಅದಾಗಕ್ಕೆ ಹೆಚ್ಚು ದಿನವೇನೂ ಬೇಕಾಗ್ಲಿಲ್ಲ.‌ 

ಮೊನ್ನೆ ಆಗಸ್ಟ್‌ ಹದಿನೈದಕ್ಕೆ ಮದುವೆಯಾಗಿ ಐದು ವರ್ಷವಾಯಿತು. ಅದಕ್ಕೆ ಮುಂಚೆ ಲಿವ್‌ಇನ್‌ ರಿಲೇಶನ್‌ನಲ್ಲಿ ಒಂದ್ವರ್ಷಕ್ಕೂ ಹೆಚ್ಚು ಇದ್ದಿದ್ದು. ಕಡೆಗೆ ಡೈವೋರ್ಸ್‌ ಸೆಟಲ್‌ ಆದ್ದಿನ ಕೋರ್ಟಿನ ಕಾಂಪೌಂಡಿನ ಹೊರಗೆ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ ಕಾಯುತ್ತಾ ಕುಳಿತಿದ್ದೆ. ಅವನ ಮೊದಲ ಹೆಂಡತಿ, ಮಕ್ಕಳೊಂದಿಗೆ ಆವರಣದಲ್ಲಿದ್ದ ಮರದ ಕೆಳಗೆ… ಅವರಪ್ಪನೊಂದಿಗೇನೋ… ಕಾಯುತ್ತಾ ನಿಂತಿದ್ದಳು. ಹೇಗಿದ್ದಳೋ… ಸರಿಯಾಗಿ ಕಾಣಲಿಲ್ಲ… ಅವನೂ ಹೊರಬಂದು ಅವರೊಡನೆ ಐದ್ನಿಮಿಷ ಮಾತಾಡ್ತಾ ನಿಂತಿದ್ದ. ಹೊರಡುವಾಗ ಹೆಂಡತಿ, ಮಕ್ಕಳು ಅವನ ಕಾಲಿಗೆ ಬಿದ್ದರು.

ಏನೋ ಹೇಳಿ ತನ್ನೆಡೆಗೆ ಹೊರಟುಬಂದವನನ್ನೇ ನೋಡುತ್ತಾ ನಿಂತೇ ಇದ್ದರು. ಏಕೋ ತನ್ನಿಂದ ಅದನ್ನು ತುಂಬಾಹೊತ್ತು ನೋಡಲಾಗದೆ ಮುಖ ತಿರುಗಿಸಿ ಕುಳಿತೆ. ‘ಅಬ್ಭಾ! ಅಂತೂ ಪರಿಹಾರವಾಯ್ತು’ ಎನ್ನುತ್ತಾ ಪಕ್ಕದಲ್ಲಿ ಕೂತ. ‘ಎಷ್ಟಕ್ಕೆ ಸೆಟ್ಲ್‌ ಆಯ್ತು?’ ಎಂದಿದ್ದಕ್ಕೆ ‘ಉಂಡೆಯಾಗಿ ಇಪ್ಪತ್ಲಕ್ಷ, ತಿಂಗ್ಳಿಗೆ ಇಪ್ಪತ್ಸಾವ್ರ’ ನಿಟ್ಟುಸಿರಿಟ್ಟ. ‘ಏನಂತಾ ಜಾಸ್ತಿಯಿಲ್ಲ. ಉಳ್ಸಿದ್ದಿದೆ, ಇಪ್ಪತ್ಲಕ್ಷ ಕೊಡ್ತೀನ್ಬಿಡು. ಇಬ್ರ ದುಡ್ಮೆ ಇದೆ. ಇಪ್ಪತ್ಸಾವ್ರ ಹೆಚ್ಚಲ್ಲ. ಅಂದ್ಹಾಗೆ ಕಾಲಿಗ್ಬೇರೆ ಬಿದ್ದಂಗಿತ್ತು’ ಎಂದೆ. ‘ಅವರವರ ಸೆಂಟಿಮೆಂಟ್ಸ್’ ನಕ್ಕ. ತಾನೂ ನಗುತ್ತಾ ಕಾರಿನ ಕೀ ತಿರುಗಿಸಿದೆ… ಅದಾಗಿಯೇ ಆರು ವರ್ಷಕ್ಕೂ ಮೇಲೇ ಆಗಿದೆ. ಧೃತಿ ಹುಟ್ಟೇ ಮೂರು ವರ್ಷವಾಯಿತಲ್ಲಾ!

***

ರೂಮಿನೊಳಗೆ ಸದ್ದಾಯಿತು. ಹನ್ನೆರಡು ಗಂಟೆಯಾಗಿದೆ. ಕೋಳಿನಿದ್ದೆಯಿಂದ ಎದ್ದಳೇನೋ… ಇನ್ನೂ ಇಬ್ಬರದೂ ಸ್ನಾನವಾಗಿಲ್ಲ. ಮಗಳನ್ನು ಸ್ನಾನಕ್ಕೆ ಕರೆದುಕೊಂಡು ಹೋದಳು. ʻಇಷ್ಟರೊಳಗೇ ತನ್ನ ಸ್ನಾನ ಮುಗಿಸಿಬಿಡಬೇಕಿತ್ತು; ಎದ್ದಿರುವಾಗ ಒಬ್ಬಳನ್ನೇ ಬಿಟ್ಟುಹೋಗುವುದು ಕಷ್ಟʼ ಎಂದುಕೊಂಡರೂ ಈಗೇನೂ ಮಾಡುವಂತಿರಲಿಲ್ಲ. ಮಧ್ಯಾಹ್ನ ಊಟಮಾಡಿ ಒಂದೆರಡು ಗಂಟೆ ಮಲಗುತ್ತಾಳೆ. ಆಗ ಮಾಡಿದರಾಯಿತು ಎಂದುಕೊಂಡು ಅವಳ ಸ್ನಾನ, ಡ್ರೆಸ್ಸು ಮುಗಿಸಿ ಟೀವಿಯಲ್ಲಿ ಕಾರ್ಟೂನ್‌ ಹಾಕಿ ಅವಳ ಕುರ್ಚಿಯಲ್ಲಿ ಕೂರಿಸಿದಳು. ಸದ್ದಿಲ್ಲದೆ ಸ್ವಲ್ಪಹೊತ್ತು ನೋಡುತ್ತಾಳಷ್ಟೆ.

ಫೋನ್‌ ಬಂದಮೇಲೆ ಮೂಡ್‌ಹಾಳಾಗಿ ಬಟ್ಟೆಯನ್ನೂ ಒಗೆದಿರಲಿಲ್ಲ. ವಾರದ ಬಟ್ಟೆ, ರಾಶಿ ಬಿದ್ದಿದೆ. ಅವಳು ಗಲಾಟೆ ಶುರುಮಾಡುವುದರೊಳಗೆ ಆದಷ್ಟು ಕೆಲಸಗಳನ್ನು ಮುಗಿಸಿಕೊಂಡು ಬಿಡಬೇಕು ಎಂದುಕೊಂಡು ಬಟ್ಟೆಗಳನ್ನು ವಾಷಿಂಗ್‌ ಮಿಷೀನಿಗೆ ತುಂಬಿದಳು. ಏನೋ ಅನುಮಾನವಾಗಿ ಸಿದ್ದಾರ್ಥನ ವಾರ್ಡ್ರೋಬನ್ನು ತೆಗೆದಳು. ಯಾವಾಗಲೂ ಹಳ್ಳಿಗೆ ತೆಗೆದುಕೊಂಡು ಹೋಗುತ್ತಿದ್ದ ಪಾಯಿಜಾಮಾ, ಲುಂಗಿ, ಜುಬ್ಬಾ ಎಲ್ಲಾ ಅಲ್ಲೇ ಮಲಗಿವೆ. ಇಸ್ತ್ರಿಯಾಗಿದ್ದ ಬಟ್ಟೆಗಳಲ್ಲಿ ಮೂರ್ನಾಲ್ಕು ಹ್ಯಾಂಗರ್‌ಗಳು ಖಾಲಿಯಾಗಿ ನೇತಾಡುತ್ತಿವೆ…

ಈ ಬಾರಿ ಬ್ಯಾಕ್‌ಪ್ಯಾಕ್‌ ತೆಗೆದುಕೊಂಡು ಹೋಗಿಲ್ಲ; ಸಣ್ಣ ಸೂಟ್ಕೇಸಿನೊಂದಿಗೆ ಹೋದಹಾಗಿತ್ತಲ್ಲವೇ ಎಂದುಕೊಳ್ಳುತ್ತಾ ಅವನು ಹೊರಟಾಗಿನ ದೃಶ್ಯವನ್ನು ಕಣ್ಮುಂದೆ ತಂದುಕೊಳ್ಳಲು ನೋಡಿದಳು. ಹೌದು… ಶೂಲೇಸ್‌ ಕಟ್ಟಿಕೊಂಡು, ಸೂಟ್ಕೇಸ್‌ ಕೈಗೆತ್ತಿಕೊಂಡು ಹೊರಡುವಾಗ ಬಾಗಿಲಿಗೆ ತಗುಲಿ ಸದ್ದಾಗಿತ್ತು. ಪ್ರತಿಸಲದ ಹಾಗಿರದೆ ಸ್ವಲ್ಪ ಹೆಚ್ಚು ಖುಷಿಯಾಗಿದ್ದನೆ? ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದಳು… ಏನೋ ಉರುಳಿದ ಸದ್ದು ಡ್ರಾಯಿಂಗ್‌ ರೂಮಿನಿಂದ… ತಕ್ಷಣವೇ ಹೊರಗೋಡಿದಳು… ಯಾವುದೋ ಧ್ಯಾನದಲ್ಲಿ ಧೃತಿಯ ಕುರ್ಚಿಯ ಬೆಲ್ಟ್‌ ಕಟ್ಟಿರಲಿಲ್ಲ. ಏನಾಯಿತೋ… ಕಾರ್ಪೆಟ್ಮೇಲೆ ಬಿದ್ದಿದ್ದಳು. ಹೆದರಿಕೆಗೆ ಜೋರಾಗಿ ಅಳಲಾರಂಭಿಸಿದಳು… ಸಧ್ಯ ಪೆಟ್ಟಾಗಿರಲಿಲ್ಲ. 

ಮಧ್ಯಾಹ್ನದ ನಮಾಜಿನ ಕೂಗು ಕೇಳಿಸುತ್ತಿತ್ತು. ಅಡುಗೆ ಮನೆಗೆ ಹೋಗಿ ಒಟ್ಟಿಗೇ ದೋಸೆಯನ್ನು ಹೊಯ್ದು ತಂದು ಮಗಳಿಗೆ ತಿನ್ನಿಸುತ್ತಲೇ ತಾನೂ ತಿಂದು ಆ ಕೆಲಸವನ್ನು ಮುಗಿಸಿದಳು. ಟೀವಿಯನ್ನು ಆರಿಸಿ ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಟ್ಟುತ್ತಾ ಮತ್ತೆ ಯೋಚನೆಗೆ ಜಾರಿದಳು. ಅವಳು ನಿದ್ರಿಸಿದೊಡನೆ ಎತ್ತಿಕೊಂಡು ಹೋಗಿ ಕ್ರಿಬ್‌ನಲ್ಲಿ ಮಲಗಿಸಿದಳು. ಈಗೀಗ ಭಾರವಾಗುತ್ತಿದ್ದಾಳೆ… ಮೊದಲಿನಂತೆ ಎತ್ತಿಕೊಳ್ಳಲು ಕಷ್ಟವಾಗುತ್ತಿದೆ… ಅಥವಾ ತನಗೆ ವಯಸ್ಸಾಗುತ್ತಿದೆಯೇ? ಅಕಸ್ಮಾತ್‌ ಎಚ್ಚರವಾಗಿಬಿಟ್ಟರೆ ಎನ್ನುವ ಭಯದಿಂದ ಬಾತ್ರೂಮಿನ ಬಾಗಿಲು ತೆಗೆದಿಟ್ಟೇ ಸ್ನಾನ ಮುಗಿಸಿ ತನ್ನ ಬಟ್ಟೆಗಳನ್ನೂ ವಾಷಿಂಗ್‌ ಮೆಶೀನಿನಲ್ಲಿ ತುರುಕಿ ಆನ್‌ಮಾಡಿದಳು. ಏನಾದರೂ ಕೆಲಸದಲ್ಲಿ ತೊಡಗಿಕೊಂಡರೆ ವಾಸಿಯೇನೋ ಎನ್ನಿಸಿ ಇಸ್ತ್ರಿ ಮಾಡಬೇಕಿರುವ ಬಟ್ಟೆಗಳನ್ನು ತೆಗೆದಿರಿಸಿಕೊಂಡು ಶುರುಹಚ್ಚಿಕೊಂಡಳು. ಅಷ್ಟರಲ್ಲಿ ಕಾಲಿಂಗ್‌ ಬೆಲ್ಲಾಯಿತು. ಗೋಡೆಗಡಿಯಾರದ ಕಡೆ ನೋಡಿದಳು. ಮೂರು ಗಂಟೆ… 

ʻಇಷ್ಟುಹೊತ್ತಿಗೆ ಯಾರು ಬರುತ್ತಾರೆʼ ಎಂದುಕೊಂಡು ಕಂಡಿಯಲ್ಲಿಣುಕಿದಳು. ಯಾರೋ ಹಳ್ಳಿಯ ಹೆಂಗಸು… ಒಬ್ಬ ಹುಡುಗನೊಂದಿಗೆ ನಿಂತಿದ್ದಾಳೆ. ಅಕ್ಕ-ಪಕ್ಕದ ಮನೆಯನ್ನು ಹುಡುಕಿಕೊಂಡು ಬಂದವರೇನೋ ಎಂದುಕೊಂಡು ಬಾಗಿಲು ತೆರೆದು ‘ಯಾರ‍್ಬೇಕು?’ ಕೇಳಿದಳು. ಆಕೆ ‘ಸಿದ್ದಾರ್ಥ…’ ಎನ್ನುತ್ತಾ ನಿಂತಳು. ‘ಅವ್ರು ಮನೇಲಿಲ್ಲ’ ಅಂದ ತಕ್ಷಣ ‘ಒಳಗ್ಬರ‍್ಬೋದಾ?’ ಕೇಳಿದಳಾಕೆ. ಅವನೂರಿನವರೇನೋ, ತಾನಿದುವರ‍್ಗೆ ನೋಡಿಲ್ಲ; ಅಷ್ಟೇನೂ ಅಪಾಯಕಾರಿಯಾಗಿ ಕಾಣುತ್ತಿಲ್ಲ ಎನ್ನಿಸಿ ಒಳಗೆ ಕರೆದು ಸೋಫಾ ತೋರಿಸಿದಳು. ಅವರಿಬ್ಬರೂ ಸಂಕೋಚದಿಂದ ಮುದುರಿಕೊಂಡು ಕುಳಿತರು. ‘ನಾನಿದುವರ‍್ಗೂ ನಿಮ್ಮನ್ನು ನೋಡಿಲ್ಲ’ ಎಂದಳು. ಆಕೆಯೂ ಹೌದೆನ್ನುವಂತೆ ತಲೆಯಾಡಿಸಿ ಸುಮ್ಮನೆ ಕುಳಿತಳು. ಮುಂದೆ ಮಾತಾಡಲು ತೋಚಲಿಲ್ಲ. ಒಳಗೆ ಹೋಗಿ ಐರನ್ಬಾಕ್ಸಿನ ಸ್ವಿಚ್ಚನ್ನು ಆರಿಸಿಬಂದು ಇವಳೂ ಸುಮ್ಮನೆ ಕುಳಿತಳು.

ಸ್ವಲ್ಪಹೊತ್ತಿನ ನಂತರ ತಲೆತಗ್ಗಿಸಿದಂತೆಯೇ ಆಕೆ ಮೆತ್ತಗಿನ ದನಿಯಲ್ಲಿ ‘ನಾನು ಸಿದ್ದಾರ್ಥವ್ರ ಎಂಡ್ರು ರತ್ನಿ’ ಎಂದಳು. ಬೆಚ್ಚಿಬಿದ್ದ ಚಂದ್ರಾ ‘ಅಂದ್ರೇ…?’ ʻಇಲ್ಲಿಗ್ಯಾಕೆ ಬಂದ್ರಿ?ʼ ಎನ್ನುವಂತೆ ಆಕೆಯ ಮುಖವನ್ನೇ ನೋಡಿದಳು. ಅವಳು ತಲೆಯೆತ್ತದೆ ‘ಇವ್ನು ದೊಡ್ಮಗ ಸಿವ್ರಾಜ’ ಎಂದಳು. ʻಅದನ್ನ ಕಟ್ಕೊಂಡು ನಂಗೇನು. ನಂಗ್ಯಾಕೆ ಹೇಳ್ತಿದೀಯ? ಇದೊಳ್ಳೇ ಪೀಕ್ಲಾಟʼ ಎನ್ನಿಸಿ ಮುಜುಗರವಾಯಿತು.

‘ಎದ್ದೋಗಿ’ ಅನ್ನಬೇಕೆಂದುಕೊಳ್ಳುವಷ್ಟರಲ್ಲಿ ಮತ್ತೆ ಆ ಹೆಂಗಸೇ ಮಾತನಾಡಿ ‘ಇವಂದು ಪಿಯೂಸಿ ಮುಗ್ದೈತೆ, ಅದೇನಾ ಸಿಯಿಟಿಯಂತೆ ಅದೂ ಆಗಿ ಬೆಂಗ್ಳೂರಾಗಿನ ಕಾಲೇಜ್ಲೇ ಸೀಟೂ ಸಿಕ್ಕೈತೆ. ಅಡ್ಮಿಸನ್ಗೆ, ಆಸ್ಟ್ಲುಗೆ ಸೇರ‍್ಸಕ್ಕೆ ವಸಿ ದುಡ್ಡುಬೇಕಿತ್ರಾ…’ ಅವಳ ಮಾತನ್ನು ಅಲ್ಲಿಗೇ ಕತ್ತರಿಸಿ ‘ತಿಂಗ್ಳು-ತಿಂಗ್ಳು ಕಳ್ಸೋದರಲ್ಲಿ ನೀವು ಇದಕ್ಕೆಲ್ಲಾ ಇಟ್ಕೋಬೇಕು. ಒಂದ್ಸಲ ಡೈವರ್ಸ್‌ ಆದ್ಮೇಲೆ ಎಲ್ಲಾ ಮುಗೀತು…’ ಇನ್ನೂ ಏನೋ ಹೇಳಬೇಕೆಂದು ಮಾತು ಜೋಡಿಸಿಕೊಳ್ಳುತ್ತಿರುವಾಗಲೇ ‘ತಿಂಗ್ಳು ಕೆಳ್ಗೆ ಬಂದಿದ್ದಾಗ ಇವ್ರಿಗೇಳಿದ್ನಿ. ಆಟೇಮಿಗೆ ಕಳಿಸ್ತಿನಿ ಅಂದವ್ರು ಎಲ್ಲೋ ಮರ‍್ತುಬಿಟ್ಟವ್ರೆ. ನಿನ್ನಿಗೆ ಬರ‍್ತರೆನೋ ಅಂದ್ಕಂಡಿದ್ದಿ, ಬರ‍್ನಿಲ್ಲ. ನಾಳೆ ಬುದ್ವಾರದ್ವಳ್ಗೆ ಕಟ್ಬೆಕು. ಟೇಮಿಲ್ಲಾ, ಮಾವಾರು ನೀವಿಬ್ರೇ ಒಂದಪಾ ಓಗ್ಬನ್ನಿ ಅಂದ್ರು. ಅದ್ಕೇ ಬಂದಿ’ ಎಂದವಳು ಮತ್ತೆ ತಲೆತಗ್ಗಿಸಿದಳು.

‘ನೀವು ಮಾವನಮನೆಗೆ ಹೋಗಿದ್ರಾ?’ ದಿಗ್ಭ್ರಮೆಯಿಂದ ಕೇಳಿದಳು. ‘ನಾವು ಅವ್ರಮನ್ಲೇ ಇರಾದಲ್ವಾ. ಒಂದ್ಸಲ್ಪ್ದಿನ ಅಪ್ಪನ್ಮನ್ಲಿದ್ವೇನೋ ಅಸ್ಟೆಯಾ. ಬೇಯ್ಸಾಕವ್ರು ಬೇಕಲ್ಲವ್ರಾ ಮುದುಕ್ರಿಗೆ. ಒಂದೆರಡ್ಮೂರ‍್ತಿಂಗ್ಳಲ್ಲೇ ಇವ್ರು ಎರೆಡೆರೆಡ್ಮನಿಯಾಕೆ, ಅಲ್ಗೇ ಬಂದ್ಬಿಡೂಂದ್ರು. ಗಂಡಸ್ರಂದ್ರೆ ಅಂಗೇಲ್ವಾ. ಗಂಡ್ನೇ ಬಂದ್ಕರ‍್ದಾಗ ಇಲ್ಲಾನ್ನಕ್ಕಾಯ್ತದಾ. ಓ… ಅಲ್ಲೇ ಇರದು ನಿಮ್ಗೊತ್ತಿಲ್ವೇನೋ’ ಚಂದ್ರಾ ಬಿಟ್ಕಣ್ಣು ಬಿಟ್ಬಾಯಲ್ಲಿ ನೋಡುತ್ತಿರುವಾಗಲೇ ‘ಮೂರ‍್ತಿಂಗ್ಳ ಮುಂಚಿಂತಂಕ ಅದ್ನೈದು ದಿನಕ್ಕೊಂದಪ ಬರೋವ್ರು… ಈಚೀಚ್ಗೆ ತಿಂಗ್ಳಿಗೊಂದ್ಸಲ ಬತ್ತವ್ರೆ. ಈಸಲ್ವೇ ತಿಂಗ್ಲಾದ್ರೂ ಬರ‍್ನಿಲ್ಲ. ದುಡ್ಡಿಗೇಳಿದ್ದು ಮರ‍್ತಿರ್ಬೈದು’ ಅಂದಳಾಕೆ. ಸುತ್ತಲ ಪ್ರಪಂಚವೆಲ್ಲಾ ಗಿರಗಿರ ತಿರುಗತೊಡಗಿದಂತೆ ಅನ್ನಿಸಿತು. ಮಾತಾಡಲೂ ಶಕ್ತಿಯಿಲ್ಲದೆ ಗರಬಡಿದವಳಂತೆ ಕುಳಿತಳು ಚಂದ್ರಾ. ‘ಒರಗೋಗವ್ರಾ, ನಿಮ್ಗೆ ತೊಂದ್ರೆಯಾಗ್ದಿದ್ರೆ ಅವ್ರು ಬರಾತಂಕ ಕೂತಿದ್ದು ಇಸ್ಕಂಡೋಯ್ತಿವಿ. ಇಲ್ಲಾದ್ರೆ ರೋಷ್ಟೊತ್ತು ಬಿಟ್ಬರಾಣ್ವೇ’ ಅಳುಕುತ್ತಲೇ ಆಕೆ ಕೇಳಿದಳು. 

ರೂಮಿನೊಳಗೆ ಧೃತಿಯೆದ್ದ ಸದ್ದಾಯಿತು. ಕನಸಿನಲ್ಲಿರುವಂತೆ ಹೋಗಿ ಮುಖತೊಳೆಸಿ ಬಟ್ಟೆಹಾಕಿ ಎತ್ತಿಕೊಂಡು ಬಂದಳು. ‘ಇದೇ ಮಗಾ ಅಲ್ಲವ್ರಾ, ಯಾನಾ ಎಸ್ರೇಳಿದ್ರು. ನಂಗೇಳಾಕ ಬರದಿಲ್ಲ…’ ತಡವರಿಸುತ್ತಿದ್ದಾಗಲೇ ಸಿವ್ರಾಜ ‘ಧೃತಿ’ ಅಂದ. ‘ಆ…ಅದೇಯಾ… ರೋಸ್ಟುಸಾರಿಲ್ಲ ಮಗೀಗೆ. ಎಲ್ಲೋ ಬಿಟ್ಟು ಕೆಲ್ಸಕೋಗ್ತೀರೀಂದ್ರು’ ʻಅಂದರೆ… ಈಕೆಗೆ ಈ ಮನೆಯ ಎಲ್ಲ ವಿದ್ಯಮಾನವೂ ಗೊತ್ತಿದೆ. ತಾನೇ ದಡ್ಡಮೂಳಿ. ಡೈವೋರ್ಸ್‌ ಆಗಿರೋದು ಪೇಪರ‍್ನಲ್ಲಿ ಮಾತ್ರಾ. ಸಿದ್ಧಾರ್ಥ ತನ್ಗಿಂತ ಚೆನ್ನಾಗಿ ಇವಳ್ಜೊತೆ ಸಂಸಾರ ಮಾಡಿಕೊಂಡಿದಾನೆ…ʼ ತಲೆಕೆಟ್ಟು ಕೆರವಾಗಿಹೋಯಿತು.

ಕಷ್ಟಪಟ್ಟು ‘ಸಿದ್ಧಾರ್ಥ ಕೆಲ್ಸದ್ಮೇಲೆ ಊರಿಗೋಗಿದಾರೆ. ರಾತ್ರಿ ಹೊತ್ತಾಗ್ಬಹುದು. ಬಂದ್ಮೇಲೆ ಹೇಳ್ತೀನಿ. ತಡವಾದ್ರೆ ಬಸ್ಸಿಗೆ ಲೇಟಾಗತ್ತೆ. ಹೋಗ್ಬನ್ನಿ’ ಹೊರಗೆ ದಬ್ಬಿದರೆ ಸಾಕೆನ್ನಿಸಿ ಅವರನ್ನೆಬ್ಬಿಸಿದಳು. ‘ನಮ್ಮಕ್ಕ ಇಲ್ಲೇ ಸಿದ್ದಾಪುರದಲ್ಲವ್ಳೆ. ಅಲ್ಲಿದ್ಕಂಡು ಒತಾರೆಗೇ ಬರ್ತಿವಿ. ಅಡ್ಮಿಸನಾದ್ಮೇಲೆ ಒಟ್ಗೆ ಊರಿಗೋಗಾದು” ಎನ್ನುತ್ತಾ ಇಬ್ಬರೂ ಎದ್ದರು. ಅವರಿಬ್ಬರೂ ಹೊರಟ ತಕ್ಷಣ ಬಾಗಿಲುಹಾಕಿ ಒಳಗೆ ಬಂದವಳಿಗೆ ತಡೆಯಲಾಗಲಿಲ್ಲ. ಎಂದೂ ಅಳದವಳಿಗೆ ಬಿಕ್ಕಿಬಿಕ್ಕಿ ಅಳುಬಂತು. ʻಜೀವನದಲ್ಲಿ ಸೋತೇ ಗೊತ್ತಿಲ್ಲʼ ಎಂದುಕೊಳ್ಳುತ್ತಿದ್ದವಳು ಇಂದು ಮಖಾಡೆ ಮುಖಜಜ್ಜಿಕೊಂಡು ಕೆಳಗೆ ಬಿದ್ದಿದ್ದಳು. ತಲೆಚಚ್ಚಿಕೊಂಡು ಜೋರಾಗಿಯೇ ಅಳತೊಡಗಿದಳು…

ʻಹಲ್ಕಟ್‌ ನನ್ಮಗ ಎಷ್ಚೆನ್ನಾಗಿ ನನ್ನ ಉಪಯೋಗಿಸ್ಕೊಂಡ. ಊರಿಗ್ಹೋದಾಗ ಆ ಹೆಂಡ್ತಿ, ಇಲ್ಲಿದ್ದಾಗ ನಾನು… ಈಗ ವೀಕೆಂಟಿಗೆ ಇನ್ನೊಂದ್‌ ರಂಭೆ ಬೇರೆ. ಚಂಡಾಲ… ಯಾರ‍್ಯಾರ‍್ಗೂ ಸೊಪ್ಪುಹಾಕ್ದಿದ್ದ ನನ್ನೇ ಯಾಮಾರಿಸ್ಬಿಟ್ನಲ್ಲ.‌ ವಂಚಕ ಸೂಳೆಮಗ… ಇಲ್ಲ ಈ ಮೋಸಾನ ಸಹಿಸ್ಕೋಬಾರ್ದು! ಸಹಿಸ್ಕೊಳಲ್ಲ! ಬಡ್ಡಿಮಗ ಬರ‍್ಲಿ, ಮುಖದ ನೀರಿಳಿಸ್ತೀನಿʼ ಸಿದ್ದಾರ್ಥನ ಡಿಕ್ಷನರಿ ಭಾಷೆಯೆಲ್ಲಾ ಪುಂಖಾನುಪುಂಖವಾಗಿ ಮನದನಾಲಿಗೆಯ ಮೇಲೆ ಬಂದವು…. ʻಏನಂದ್ಕೊಂಡಿದಾನೆ ನನ್ನ…ʼ ಅವ್ನೆಂಡ್ತಿ… ಅವ್ಳಿನ್ನೆಂಥಾ ಜಾಣೆ! ʻಗಂಡಸ್ರಂದ್ರೆ ಅಂಗೇಲ್ವಾʼ ಅಂತಾಳಲ್ಲ. ಇನ್ನಾಲ್ಕು ಜನನ್ನ ಕಟ್ಕೊಂಡ್ರೂ ಯೋಚ್ನೆಯಿಲ್ಲ ಅನ್ನೋಹಾಗೆ. ದರಿದ್ರದೋನು ಹೆಂಗಸ್ರನ್ನ ಅದೆಷ್ಚೆನ್ನಾಗಿ ಬುಟ್ಟಿಗ್ಹಾಕ್ಕೊತಾನೆ! ಆಗ ನನ್ಹತ್ರ ಕಂಪ್ಯಾಟಿಬಿಲಿಟಿ… ವೇವ್‌ಲೆಂಗ್ತ್… ಇಬ್ಬರ ಮಧ್ಯದ ಕೆಮಿಸ್ಟ್ರಿ… ಏನೇನೋ ಭೋಂಕಿದ. ಈಗ ಮಾಳವಿಕನತ್ರ ಏನೇನು ಕತೆ ಕಟ್ಟಿರ‍್ಬೋದು…?!

ಯೋಚನೆ ಇನ್ನೊಂದು ದಿಕ್ಕಿಗೆ ಹೊರಳಿತು… ಬರ‍್ಲಿ ಇವತ್ತು ಕಾದಿದೆ… ಮನೆಯಿಂದ ಆಚೆಗ್ಹಾಕ್ತೀನಿ. ಬಿದ್ದುಸಾಯ್ಲಿ ಹೊರ‍್ಗಡೆ…… ಸಿಕ್ಕಿದ್ದೇ ಸಾಕೂಂತ ಅವಳ್ಮನೆಗೇ ಹೋಗ್ಬಿಟ್ರೆ…?! ಹೋಗ್ಲಿ… ಅಲ್ಲೇ ಬಿದ್ಸಾಯ್ಲಿ… ಹೋದ್ರೇನೋ ಸರಿ… ʻಈ ಮನೆ ನಂದು. ಬೇಕಾದ್ರೆ ಇಲ್ಲಿರು ಇಲ್ದಿದ್ರೆ ನೀನೇ ಹೋಗುʼ ಅಂತ ರಾಜಾರೋಷವಾಗಿ ಆ ಮೇನಕೇನೂ ಇಲ್ಲೇ ತಂದಿಟ್ಕೊಂಡ್ರೆ… ನನ್ನಿಟ್ಕೊಂಡಿದ್ಹಾಗೆ!! ನ..ನ್ನಿ..ಟ್ಕೊಂ..ಡಿ..ದ್ದಾ..ಗೆ.. ತಲೇಲಿ ಬಂತಕ್ಷಣ ಎತ್ತಿ ಕುಕ್ಕಿದಂತಾಯಿತು… ಅಯ್ಯೋ ನನ್ಗತಿಯೇ… ತನ್ನ ಬಗ್ಗೆಯೇ ಅಸಹ್ಯವಾಯಿತು.… ರೋಷ ಅಳುವಿಗೆ ತಿರುಗಿತು.

ಥಟ್ಟನೆ ಅಂದು ಕೋರ್ಟಿನ ಹೊರಗೆ ಅವನ ಹೆಂಡತಿ ಮಕ್ಕಳು ಅವನು ತನ್ನೆಡೆಗೆ ಬರುವುದನ್ನೇ ನೋಡುತ್ತಿದ್ದ ದೃಶ್ಯ ಕಣ್ಮುಂದೆ ಬಂದು ನಡುಗಿದಳು. ನನ್ನಂತೆ ಇವತ್ತು ಮಾಳವಿಕಾ ಕಾಯ್ತಿದಾಳಾ…? ಈಗಿಂಥಾ ಮಗೂನೂ ಕಟ್ಕೊಂಡು ಹೋಗೋದಾದ್ರೂ ಎಲ್ಲಿಗೆ…? ಡೈವರ್ಸ್‌ ಕೊಡ್ತಾನಾ? ಕೊಡಲ್ಲಾಂದ್ರೆ…  ನಾನೇ ತೊಗೊಂಡ್ರೆ…? ನಂಗೇನ್ಸಿಗತ್ತೆ ಮಣ್ಣು… ಇದ್ವರ‍್ಗೂ ಉಳ್ಸಿದ್ದು, ದುಡ್ದಿದ್ದು ಎಲ್ಲಾ ಖರ್ಚಾಗೋಗಿದೆ… ಬೇರೆ ಮನೆ ಮಾಡ್ಕೊಂಡಿರಕ್ಕಾಗತ್ತಾ…  ಇನ್ನೀಜನ್ಮದಲ್ಲಿ ಕೆಲಸ ಬಿಡಕ್ಕೆ ಸಾಧ್ಯವಿಲ್ಲ. ಮುಂದೇನು…? ರಾತ್ರಿಯಾಗತೊಡಗಿತ್ತು. ಕತ್ತಲಿಗೆ ಹೆದರಿ ಅಳುತ್ತಿದ್ದ ಧೃತಿಯನ್ನು ತಬ್ಬಿಕೊಂಡು ಕಣ್ಮುಚ್ಚಿಕೊಂಡು ಮುಂದಿನ ದಾರಿ ಹುಡುಕತೊಡಗಿದಳು… ಮನೆಯೊಳಗೂ ಕತ್ತಲಾವರಿಸತೊಡಗಿತ್ತು…

‍ಲೇಖಕರು Admin

August 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಧನ್ಯವಾದಗಳು ಮೋಹನ್ ಸರ್…
    ಧನ್ಯವಾದಗಳು ಟೇಮ್ ಅವಧಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: