ಚಂಪಾ: ಖಂಡಿತವಾದಿಯೂ, ಲೋಕವಿರೋಧಿಯೂ…

ಜಿ ಪಿ ಬಸವರಾಜು

ಹೊಡಕೊಳ್ಳೋದು ಮತ್ತು ಪಡಕೊಳ್ಳೋದು. ಇವೇನೂ ಅಪರಿಚಿತ ಪದಗಳಲ್ಲ. ಕನ್ನಡಬಲ್ಲವರಿಗೆ ಸುಲಭವಾಗಿ ತಿಳಿಯುವ ಪದಗಳು. ಆದರೆ ಈ ಪದಗಳ ಹಿಂದಿರುವ ಸತ್ಯವನ್ನು ತೋರಿಸಿಕೊಟ್ಟವರು ಚಂದ್ರಶೇಖರ ಪಾಟೀಲರು. ಮುಸುಕು ಹೊದ್ದು ಮಲಗಿದ್ದ ಈ ಪದಗಳ ಮುಸುಕನ್ನು ಸರಿಸಿ, ಈ ಪದಗಳ ಬಗ್ಗೆ ಎಚ್ಚರ ಮೂಡಿಸಿದವರು ಪಾಟೀಲರು. ಈ ಎಚ್ಚರ ಮೂಡಿದ್ದೇ ಜನ ಹೊಸ ದಿಕ್ಕಿನಲ್ಲಿ ಯೋಚಿಸತೊಡಗಿದರು. ಯಾವುದೇ ಪ್ರಶಸ್ತಿ ಅಥವಾ ಪದವಿ ದೊರೆತಾಗ ತಕ್ಷಣ ಮನಸ್ಸಿನಲ್ಲಿ ಈ ಪದಗಳು ಮೂಡಿ, ಅರ್ಥಗಳು ಬಿಚ್ಚಿಕೊಂಡು, ಒಂದು ಕ್ಷಣ ಯೋಚಿಸಿ ವ್ಯಕ್ತಿತ್ವವನ್ನು ತೂಗಿನೋಡುವ ಪರಿಪಾಠ ಸಹಜವಾಗಿಯೇ ಬೆಳೆದುಬಂತು.

ಹೊಡಕೊಳ್ಳುವ ಚಾಲೂಕುತನ ಮತ್ತು ಪಡಕೊಳ್ಳುವ ಗಟ್ಟಿತನ ಎರಡೂ ಪಾಟೀಲರಲ್ಲಿದ್ದವು. ಹೀಗಾಗಿಯೇ ಅವರು ಧಾರವಾಡವನ್ನು ತೊರೆದು ಬೆಂಗಳೂರಿನಲ್ಲಿ ನೆಲೆನಿಂತರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪದವಿಯಲ್ಲಿಯೂ ಅವರು ಅಧಿಕಾರ ನಡೆಸಿದರು. ಪಾಟೀಲರು ಪರಿಷತ್ತಿನ ಅಧ್ಯಕ್ಷರಾಗಲು ಅಗತ್ಯವಾಗಿದ್ದ ತಂತ್ರಗಾರಿಕೆಯನ್ನು ಬಲ್ಲವರಾಗಿದ್ದರು. ಪ್ರಾಧಿಕಾರದ ಅಧ್ಯಕ್ಷ ಪದವಿಯನ್ನು ಅವರು ಹೊಡೆದುಕೊಂಡರೆಂಬ ಟೀಕೆಗಳೂ ಇವೆ. ಅದೇನೇ ಆಗಿದ್ದರೂ, ಅಲ್ಲಿ ತಮ್ಮ ಗಟ್ಟಿತನವನ್ನು, ಕಸುವನ್ನು ತೋರಿಸಿದ್ದು ಪಾಟೀಲರ ಎದೆಗಾರಿಕೆ.

ಸರ್ಕಾರದ ಕೃಪಾಪೋಷಿತ ಸಂಸ್ಥೆ ಎಂಬ ಕೆಟ್ಟ ಹೆಸರನ್ನು ಪಡೆದುಕೊಂಡಿದ್ದ ಪರಿಷತ್ತನ್ನು ಅಗತ್ಯ ಕಂಡಾಗ ದಿಟ್ಟತನದಿಂದ ಪಾಟೀಲರು ಮುನ್ನಡೆಸಿದರು ಎಂಬುದಕ್ಕೆ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿ ಹೇಳುತ್ತದೆ. ಸರ್ಕಾರದ ಹಣ, ಜನತೆಯ ಹಣ ಎಂಬುದನ್ನೂ ಅವರು ತೋರಿಸಿಕೊಟ್ಟವರು. ಮುಖ್ಯಮಂತ್ರಿಗೂ ಸೊಪ್ಪು ಹಾಕದೆ, ಪರಿಷತ್ತಿನ ಅಧ್ಯಕ್ಷರಾಗಿ ಬೆನ್ನು ಬಗ್ಗಿಸದೆ, ಡೊಗ್ಗು ಸಲಾಮು ಹೊಡೆಯದೆ, ಪರಿಷತ್ತಿನ ಕಾರ್ಯಕ್ರಮ ಹೇಗೆ ನಡೆಯಬೇಕೋ ಹಾಗೆ ನಡೆಸಿದರು. ಆ ಹೊತ್ತಿನಲ್ಲಿ ಅವರು ಐವತ್ತಾರು ಇಂಚಿನ ಎದೆ ತೋರಿಸಿದ್ದು ಅವರ ಮತ್ತು ಪರಿಷತ್ತಿನ ಘನತೆಯನ್ನು, ಗಟ್ಟಿತನವನ್ನು ಸಾಬೀತುಗೊಳಿಸಿತು. 

ಧಾರವಾಡ ಜಿಲ್ಲೆಯ ಎರೆಮಣ್ಣಿನಲ್ಲಿ ಹುಟ್ಟಿಬೆಳೆದ ಪಾಟೀಲರಿಗೆ ಮಣ್ಣಿನ ಜಿಗುಟುತನ, ಒರಟುತನ ಹುಟ್ಟುಗುಣಗಳಾಗಿದ್ದವು. ಇಂಗ್ಲಿಷ್‌ ಅಧ್ಯಾಪಕರಾಗಿದ್ದರೂ ಅವರ ಬದುಕಿಗಂಟಿದ್ದು ಕನ್ನಡವೇ; ತರಗತಿಯಲ್ಲಿ ಪಾಠ ಮಾಡಿದ್ದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ಅವರು ಪಾಠ ಮಾಡಿದ್ದು ಬೀದಿಗಳಲ್ಲೇ; ಜನತೆಯ ನಡುವೆಯೇ; ವಿಶೇಷವಾಗಿ ಯುವಕ-ಯುವತಿಯರ ನಡುವೆಯೇ. ಹೀಗಾಗಿಯೇ ‘ಕನ್ನಡ ಕನ್ನಡ, ಬರ್ರಿ ನಮ್ಮ ಸಂಗಡʼ ಎಂದು ಪಾಟೀಲರು ಕರೆದಾಗ ಕನ್ನಡ ಪ್ರೇಮಿಗಳು, ಯುವಜನ ಅವರನ್ನು ಕಿಂದರಿ ಜೋಗಿಯನ್ನು ಮಕ್ಕಳು ಹಿಂಬಾಲಿಸಿದಂತೆ ಹಿಂಬಾಲಿಸಿದರು. ಭವನದಲ್ಲಿಯೇ ಕುಳಿತು ಅವರು ಈ ಮಾತನ್ನು ಹೇಳಿದ್ದರೆ ಯಾರು ಬರುತ್ತಿದ್ದರು? ಅವರು ಬೀದಿಗೆ ಬಂದು ಕರೆದ ದಿಟ್ಟತನ ಮತ್ತು ಸರಳತೆ ಕನ್ನಡಿಗರನ್ನು ಸೆಳೆಯಿತು. ಬೀದಿಗೆ ಬಂದು ಚಳವಳಿ ಮಾಡುವುದು ವಿಶ್ವವಿದ್ಯಾನಿಲಯದ ಪ್ರೊಫೆಸರಿಗೂ ಸಾಧ್ಯ ಎಂಬುದನ್ನು ಅವರು ತಮ್ಮ ನಡತೆಯಿಂದ ತೋರಿಸಿಕೊಟ್ಟರು. 

ಗೋಕಾಕ್‌ ಚಳವಳಿ, ಜೆಪಿ ಚಳವಳಿ, ನವನಿರ್ಮಾಣ ಕ್ರಾಂತಿ ಹೀಗೆ ಚಂಪಾ ಮುಖ್ಯ ಚಳವಳಿಗಳಲ್ಲಿ ಪಾಲುದಾರರಾಗಿದ್ದರು.

ಸಮಾಜವಾದ, ವಿಶೇಷವಾಗಿ ಲೋಹಿಯಾ ಅವರ ವಿಚಾರಧಾರೆ, ಕರ್ನಾಟಕದಲ್ಲಿ ಯುವ ಬರಹಗಾರರು ಮತ್ತು ಕಲಾವಿದರನ್ನು ಅಗಾಧವಾಗಿ ಸೆಳೆದ ಕಾಲವೊಂದಿತ್ತು. ಆ ಕಾಲದ ಯುವಪಡೆಯಲ್ಲಿದ್ದ ಚಂಪಾ ಸಹಜವಾಗಿ ಈ ತಾತ್ವಿಕ ಚಿಂತನೆಯ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋದರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅನೇಕ ಸಮಾಜಿವಾದಿಗಳನ್ನು ರೂಪಿಸಿದ ದೀಕ್ಷಾಗುರು. ಈ ಗುರುವಿನಿಂದಾಗಿ ಸಮಾಜವಾದ ಕರ್ನಾಟಕದಲ್ಲಿ ಬಗೆಬಗೆಯ ಚಳವಳಿಗಳೂ ಹುಟ್ಟಿಕೊಂಡವು. 

ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ಯಾವ ಯಜಮಾನಿಕೆಯನ್ನೂ ಸಹಿಸದ ಸಮಾಜವಾದ ಯುವಜನರಿಗೆ ಪ್ರಿಯವಾಗುವುದು, ಅವರನ್ನು ಬಂಡುಕೋರರನ್ನಾಗಿ ರೂಪಿಸುವುದು ಸಹಜ ಕ್ರಿಯೆಯಾಗಿತ್ತು. ಚಂಪಾ ಹೀಗೆ ತಮ್ಮನ್ನು ಸಮಾಜವಾದಕ್ಕೆ ಒಡ್ಡಿಕೊಂಡರು. ಚಂಪಾ ಅವರ ಸಮಾಜವಾದಿ ಚಿಂತನೆಯ ಆಳ ಅಗಲ ಎಷ್ಟು ಎನ್ನುವುದಕ್ಕಿಂತ ಅವರು ಈ ಚಿಂತನೆಗೆ ತೊರಿದ ನಿಷ್ಠೆ ಮತ್ತು ಹೋರಾಟಗಳು ಅವರಿಗೊಂದು ಜಾಗವನ್ನು ಖಂಡಿತಾ ಕೊಟ್ಟಿವೆ.

ಚಂಪಾ ಯಾವುದೇ ಕ್ಷೇತ್ರದ ಯಜಮಾನಿಕೆಯನ್ನು ಸಹಿಸಲಿಲ್ಲ. ಅವರು ಬೀದಿಗಳಲ್ಲಿ ಯುವಜನರಿಗೆ ಹೇಳಿದ್ದೂ ಇದನ್ನೇ. ತಾವೂ  ಯಜಮಾನಿಕೆಯ ವಿರುದ್ಧ ಬಂಡೆದ್ದರು; ವಿದ್ಯಾರ್ಥಿಗಳು, ಯುವಜನರಲ್ಲೂ ಈ ಬಂಡೇಳುವ ಗುಣವನ್ನು ಬೆಳೆಸಿದರು. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ-ಹೀಗೆ ಯಜಮಾನಿಕೆ, ಪಾಳೆಯಗಾರಿಕೆ  ಯಾವುದೇ ಕ್ಷೇತ್ರದಲ್ಲಿರಲಿ, ಅದರ ವಿರುದ್ಧ ಬಂಡೆದ್ದಾಗಲೇ ಬದುಕಿಗೆ ಅರ್ಥ ಎಂಬುದನ್ನು ತಿಳಿದ ಪಾಟೀಲರು ಬಂಡಾಯವನ್ನು ಮಾಡುತ್ತಲೇ ಬದುಕು ಕಟ್ಟಿಕೊಂಡರು. ನಮ್ಮ ಪ್ರಜಾತಂತ್ರ ವ್ಯವಸ್ಥೆ ನಿಧಾನಕ್ಕೆ ಸರ್ವಾಧಿಕಾರದತ್ತ ಚಲಿಸುತ್ತಿದ್ದಾಗ ಇಡೀ ದೇಶದಲ್ಲಿ ಹೊಸ ರೀತಿಯ ಪ್ರತಿಭಟನೆ ಆರಂಭವಾಯಿತು. ಜಯಪ್ರಕಾಶ್‌ ನಾರಾಯಣ ಬಿಹಾರದ ವಿದ್ಯಾರ್ಥಿ ದಂಗೆಗೆ ಕಾರಣವಾದರು.

ಜೆಪಿ ಮುಂದಾಳುತನದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ಷುರುವಾದವು. ಕರ್ನಾಟಕವೂ ತನ್ನ ಪ್ರತಿಧ್ವನಿಯನ್ನು ನೀಡಿತು. ಧಾರವಾಡದಲ್ಲಿ ಚಂಪಾ ಮತ್ತು ಗೆಳೆಯರು ದನಿಗೂಡಿಸಿದರು. ಜನ ನೋಡುನೋಡುತ್ತಿದ್ದಂತೆಯೇ ಸರ್ವಾಧಿಕಾರ ತನ್ನ ಉದ್ದೋಉದ್ದ ತೋಳುಗಳನ್ನು ಚಾಚಿತು. ಕರ್ನಾಟಕದ ಬರಹಗಾರರು, ಕಲಾವಿದರು, ಪ್ರಜ್ಞಾವಂತರು, ಯುವಜನರು ಪ್ರತಿಭಟನೆಯನ್ನು ತೋರಿಸಿದರು. ಅರಸು ಸರ್ಕಾರ ತುಂಬ ವಿವೇಚನೆಯಿಂದ ನಡೆದುಕೊಂಡರೂ, ಕೆಲವು ಬರಹಗಾರರ ಮತ್ತು ಕಲಾವಿದರ ಬಂಧನವಾಯಿತು. ಧಾರವಾಡದಲ್ಲಿ ಪಾಟೀಲರೂ ಜೈಲು ಸೇರಿದರು. (ಮುಂದೆ ಅವರು ತಮ್ಮ ಜೈಲುವಾಸವನ್ನು ಕುರಿತು ಬರೆದದ್ದು ಬಹಳ ಮುಖ್ಯ ಸಾಂಸ್ಕೃತಿಕ ಚರಿತ್ರೆಯೂ ಆಯಿತು)

ಜಾತಿ ವ್ಯವಸ್ಥೆಯಲ್ಲಿನ ಯಜಮಾನಿಕೆಯನ್ನು ಪಾಟೀಲರು ಮೊದಲಿನಿಂದಲೂ ಎದುರಿಸುತ್ತ ಬಂದವರು. ಅದರ ವಿರುದ್ಧ ದನಿಎತ್ತಿದವರು. ಭಾರತದಲ್ಲಿನ ಜಾತಿಪದ್ಧತಿಯ ಬಗ್ಗೆ ಸೂಕ್ಷ್ಮವಾಗಿ ಲೋಹಿಯಾ ಮಾತನಾಡಿದ್ದರು. ಜಾತಿ, ಧರ್ಮ, ಪವಾಡ ಪುರುಷರು, ಮೌಢ್ಯ, ಜಗದ್ಗುರುಗಳು-ಇಂಥ ಎಲ್ಲ ವಿಚಾರದಲ್ಲಿಯೂ ಚಂಪಾ ಅವರ ನಿಲುವು ಸಮಾಜವಾದಿ ಚಿಂತಕನ ನಿಲುವೇ ಆಗಿತ್ತು. ಅವರ ಲೇಖನಿ ಹರಿತವಾಗಿತ್ತು. ವ್ಯಂಗ್ಯ, ಕಟಕಿ, ವಿಡಂಬನೆ, ಹಾಸ್ಯ ಎಲ್ಲವನ್ನೂ ಬೆರಸಿ ಚೂಪಾದ ಗದ್ಯದಲ್ಲಿ ಚಂಪಾ ಬರೆಯುವುದನ್ನು ಸಹಿಸುವುದು ಪಟ್ಟಭದ್ರ ಬಲಪಂಥೀಯ ಶಕ್ತಿಗಳಿಗೆ ಕಷ್ಟವಾಗುತ್ತಿತ್ತು. ಚಂಪಾ ಅವರ ದಿಟ್ಟತನ,ಹೋರಾಟದ ಮನೋಧರ್ಮ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿದ್ದವು. ಪುರೋಹಿತಶಾಹಿ ವಿರುದ್ಧದ ಪಾಟೀಲರ ಹೋರಾಟ ಅವರ ಕೊನೆಯ ಉಸಿರು ಇರುವವರೆಗೂ ಪ್ರಖರವಾಗಿತ್ತು.

ರಾಜಕಾರಣಿಗಳನ್ನು ಬೆತ್ತಲು ಮಾಡಿ ನಿಲ್ಲಿಸುತ್ತಿದ್ದುದು ಹೊಸದೇನಲ್ಲ. ನಮ್ಮ ಹಾಸ್ಯ ಬರಹಗಾರರ, ವ್ಯಂಗ್ಯ ಚಿತ್ರಕಾರರ ಮತ್ತು ವಿಡಂಬನಾ ಚತುರರ ಕೇಂದ್ರ ವ್ಯಕ್ತಿಗಳೇ ರಾಜಕಾರಣಿಗಳು. ಮೊಗೆದಷ್ಟೂ ಸಿಕ್ಕುವ ಅವರ ಚರಿತ್ರೆ  ಈ ಬಗೆಯ ಬರಹಗಾರರಿಗೆ  ಮತ್ತು ಕಲಾವಿದರಿಗೆ ಬರಿದಾಗದ ಗಣಿ. ಆದರೆ ಇದೇ ವ್ಯಂಗ್ಯವನ್ನು ಬಳಸಿ ಎಲ್ಲ ರಂಗಗಳ ವ್ಯಕ್ತಿಗಳನ್ನು ಬೆತ್ತಲು ಮಾಡಿದವರು ಕಡಿಮೆ. ತಮ್ಮ ಲಂಕೇಶ್‌ ಪತ್ರಿಕೆಯ ಮೂಲಕ ಲಂಕೇಶರು ಈ ಕೆಲಸವನ್ನು ಮಾಡಿದರು. ಚಂಪಾ ಅವರಂತೂ ಕ್ಷೇತ್ರ ನೋಡದೆ ಪಾತ್ರವನ್ನಷ್ಟೇ ನೋಡಿ ಬಹುಪಾಲು ವ್ಯಕ್ತಿಗಳನ್ನು ಬೆತ್ತಲು ಮಾಡಿ ನಿಜರೂಪ ತೋರಿಸಿದರು.

ಚಂಪಾ ಅವರ ವ್ಯಂಗ್ಯಕ್ಕೆ ಸಿಕ್ಕವರ ಪಾಡಂತೂ ಹೇಳಲು ಸಾಧ್ಯವಾಗದ ಪಾಡು. ಚಂಪಾ ಹೀಗೆ ಕುಟುಕುತ್ತಿದ್ದುದರ ಹಿಂದೆ ಒಂದು ತತ್ವ, ಸಿದ್ಧಾಂತ ಕ್ರಿಯಾಶೀಲವಾಗಿರುತ್ತಿದ್ದ ಕಾರಣ, ಅವರ ಬರಹಗಳು ಕೇವಲ ಚಾರಿತ್ರ್ಯವಧೆಯ, ದುರುದ್ದೇಶದ ಬರಹಗಳು ಎನಿಸುತ್ತಿರಲಿಲ್ಲ.

ರೋಹಿತಶಾಹಿಯ ಹುನ್ನಾರಗಳು, ಜಾತಿ ಜಾಣರ, ಸಂಘ ಪರಿವಾರದವರ ಕುಟಿಲೋಪಾಯಗಳು ಬಯಲಾಗಿ ಚಂಪಾ ಅವರ ಬರಹಗಳು ಆರೋಗ್ಯಕರ ಸಮಾಜವನ್ನು ಕಟ್ಟಲು ನೆರವು ನೀಡುವಂಥ ಕೆಲಸಗಳಾಗಿ ಕಾಣಿಸುತ್ತಿದ್ದವು. ರಾಜಕೀಯ ಕ್ಷೇತ್ರದ ವ್ಯಕ್ತಿಗಳ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ವ್ಯಕ್ತಿಗಳನ್ನೂ ಜನ ಬಿಡುಗಣ್ಣಿನಿಂದ ನೋಡುವುದು, ಅವರ ಬೆಲೆಯನ್ನುಕಟ್ಟುವುದು  ಮತ್ತು ಈ ಬಗೆಯ ಚಿಂತನೆಗೆ ಚಂಪಾ ಬರಹಗಳು ಹುಮ್ಮಸ್ಸು ತುಂಬಿದವು.

ʼಚಂಪಾ ಕನ್ನಡ ಕನ್ನಡ ಬರ್ರಿ ನಮ್ಮಸಂಗಡʼ ಎಂದದ್ದು ಬರಿಯ ಪ್ರಾಸಬದ್ಧ ಮಾತಾಗಿರಲಿಲ್ಲ. ಅದರ ಹಿಂದಿನ ಕಾಳಜಿ ಮೈಗಂಟಿದ ಕಾಳಜಿಯಾಗಿತ್ತು. ʼಉದ್ರಿ ಚಂದಾದಾರರಿಗೆʼ ಅವರು ಬರೆಯುತ್ತಿದ್ದ ಪತ್ರಗಳೆಲ್ಲ ಅಚ್ಚಗನ್ನಡದ ಪತ್ರಗಳೇ. ಅವುಗಳಲ್ಲಿ ಬಾಕಿಯನ್ನು ಸೂಚಿಸುತ್ತಿದ್ದ ಅಂಕಿಗಳು ಕನ್ನಡ ಅಂಕಿಗಳೇ. ಎಷ್ಟೊಂದು ನಿಷ್ಠೆಯಿಂದ ಅವರು ಈ ಪತ್ರಗಳನ್ನು ಬರೆಯುತ್ತಿದ್ದರು. ಈ ಪತ್ರಗಳು ಹಣ ಸಂಗ್ರಹಕ್ಕೆ ನೆರವಾಗುತ್ತಿದ್ದವು ಎಂಬುದು ಬೇರೆಯ ಮಾತುಇದಿಷ್ಟೇ ಅಲ್ಲ ಸಂಕ್ರಮಣದಂಥ ಸಾಹಿತ್ಯ ಪತ್ರಿಕೆಯನ್ನು ಚಂದಾದಾರರ ಚಂದಾ ನೆರವಿನಲ್ಲಿಯೇ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಡೆಸಿದ್ದು ಕನ್ನಡದ ಮೇಲಿನ ಪ್ರೀತಿಯಿಂದ; ಸಾಹಿತ್ಯ ನಿಷ್ಠೆಯಿಂದ.

ಭಾಷೆಯ ಯಜಮಾನಿಕೆಯನ್ನು ಚಂಪಾ ಬಲ್ಲವರಾಗಿದ್ದರು. ಮೊದಲು ಸಂಸ್ಕೃತ, ನಂತರ ಇಂಗ್ಲಿಷ್‌ ಈ ದೇಶವನ್ನು, ವಿಶೇಷವಾಗಿ ಹಿಂದುಳಿದ ಮತ್ತು ದಲಿತವರ್ಗದವರನ್ನು ಹೇಗೆ ತುಳಿಯಿತು ಎಂಬುದನ್ನು ತಮ್ಮ ಸಮಾಜವಾದಿ ಚಿಂತನೆಯ ತಳಹದಿಯ ಮೂಲಕ ಬಲ್ಲವರಾಗಿದ್ದ ಚಂಪಾ, ಗೋಕಾಕ್‌ ಚಳವಳಿಯಲ್ಲಿ ಮುಖ್ಯ ಕನ್ನಡಪರ ದನಿಯಾದದ್ದು ಕೇವಲ ಆಕಸ್ಮಿಕವಲ್ಲ. ಕನ್ನಡ ಎಲ್ಲ ಹಂತಗಳಲ್ಲೂ ತನ್ನ ಇರುವಿಕೆಯನ್ನು ಕರ್ನಾಟಕದಲ್ಲಿ ತೋರಬೇಕು ಎಂಬುದು ಅವರ ಎಲ್ಲ ಕನ್ನಡಪರ ಹೋರಾಟಗಳ ಹಿಂದಿನ ಪ್ರೇರಣೆಯಾಗಿತ್ತು. ಕನ್ನಡ ಪುಸ್ತಕ ಸಂತೆ, ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡದ ಗೋಷ್ಠಿಗಳು, ಸಂವಾದಗಳು ಹೀಗೆ ಎಲ್ಲದರಲ್ಲೂ ಚಂಪಾ ಅವರ ಕನ್ನಡ ಪ್ರೀತಿ ಕಾಣಿಸುತ್ತಲೇ ಇತ್ತು.


ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ
ನಮ್ಮ ಆದಿಕವಿ ಪಂಪ, ಗುರುಎ ನಮ್ಮ ಅಂತ್ಯಕವಿ ಚಂಪಾ

ಇದೊಂದು ಗಾದೆಯ ಮಾತಿನಂತೆ ಚಾಲ್ತಿಗೆ ಬಂತು. ಈ ಸಾಲುಗಳನ್ನು ಕಾವ್ಯಪ್ರಿಯರು ಬಹಳ ಸುಲಭವಾಗಿ, ಪ್ರೀತಿಯಿಂದ ಹೇಳುತ್ತಾರೆ.  ಈ ಮಾತಿನಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೂ ಇದೆ. ತಮಾಷೆಯಾಗಿದ್ದರೂ, ಈ ಮಾತಿನಲ್ಲಿ ಚಂಪಾ ಅವರನ್ನು ಕವಿ ಎಂದು ಗುರುತಿಸಿರುವುದು ನ್ಯಾಯಬದ್ಧವಾಗಿಯೇ ಇದೆ.. ಎಂಥ ಬಂಡಾಯಗಾರನಾಗಿದ್ದ ಹೊತ್ತಲ್ಲೂ ಈ ಕವಿ ಚಂಪಾ ಅವರನ್ನು ಬಿಟ್ಟು ದೂರ ಸರಿಯಲಿಲ್ಲ ಎಂಬುದೂ ಮುಖ್ಯವಾದದ್ದೇ.  ಗಾಂಧೀ ಸ್ಮರಣೆ.  ಅರ್ಧ ಸತ್ಯದ ಹುಡುಗಿ, ದೇವಬಾಗ ಇವೇ ಮೊದಲಾದ ಕವಿತಾ ಸಂಗ್ರಹಗಳು ಚಂಪಾ ಸಮರ್ಥ ಕವಿ ಎಂಬುದನ್ನು ಈಗಲೂ ಹೇಳುತ್ತವೆ.

ಸಂಕ್ರಮಣ ೧೯೬೪ರಲ್ಲಿ ಆರಂಭವಾದ ಹೊತ್ತಿಗಾಗಲೇ ಚಂಪಾ ಕವಿಯಾಗಿ ಹೆಸರು ಪಡೆದಿದ್ದರು.  ಆಗ ಬಹಳ ಜೋರಾಗಿ ತಲೆ ಎತ್ತುತ್ತಿದ್ದುದು ನವ್ಯಪಂಥ. ಚಂಪಾ ಬಹಳ ನಿಷ್ಠೆಯಿಂದಲೇ ಈ ಚಳವಳಿಯಲ್ಲಿ ಪಾಲ್ಗೊಂಡವರು. ಪಶ್ಚಿಮದ ಅಬ್ಸರ್ಡ್‌ ನಾಟಕಗಳು ಕನ್ನಡದಲ್ಲಿ ಅಸಂಗತ ನಾಟಕಗಳಾಗಿ ರೂಪ ಪಡೆದಾಗ ಚಂಪಾ ಅನೇಕ ಅಸಂಗತ ನಾಟಕಗಳನ್ನು ಬರೆದರು. ಅಪ್ಪ, ಟಿಂಗರ ಬುಡ್ಡಣ್ಣ, ಕೊಡೆಗಳು, ಗೋಕರ್ಣದ ಗೌಡಶಾನಿ, ಕುಂಟ ಕುಂಟ ಕುರುವತ್ತಿ ಇತ್ಯಾದಿ ನಾಟಕಗಳು ಚಂಪಾ ಅವರ ಪ್ರತಿಭಾಶಕ್ತಿಯನ್ನು ತೋರುವ ನಾಟಕಗಳಾಗಿವೆ.

ನವ್ಯ ಸಾಹಿತ್ಯ ಚಳವಳಿಯನ್ನು ಮುನ್ನಡೆಸಿದ ಎಂ.ಗೋಪಾಲಕೃಷ್ಣ ಅಡಿಗರಿಗೆ ೫೦ ತುಂಬಿದ್ದು ೧೯೬೮ರಲ್ಲಿ. ಆಗ ನವ್ಯ ಚಳವಳಿ ಬಹಳ ಬಿರುಸಾಗಿ ಅಬ್ಬರಿಸುತ್ತಿದ್ದ ಕಾಲ. ಚಂಪಾ ಬರೆದ ಪದ್ಯ, ಅಡಿಗರ ಕಾವ್ಯ ಆ ಹೊತ್ತಿನಲ್ಲಿ ಮಾಡಿದ ಪರಿಣಾಮ ಎಂಥದು ಎಂಬುದನ್ನು ಹೇಳುತ್ತದೆ; ಜೊತೆಗೆ ಈ ಪದ್ಯ ನವೋದಯ ಕಾಲದ ಮುಖ್ಯ ಶಿಖರಗಳಾದ ಬೇಂದ್ರೆ ಮತ್ತು ಕುವೆಂಪು ಅವರ ವಿರುದ್ಧವೂ ಧ್ವನಿ ಎತ್ತುತ್ತದೆ:

ಬೆರಳು ಮೋಹನ ಮುರಲಿ ತೂತ ಕೊರೆದು
ಬೆರಳು ಕೈಯಾಗಿ
 ಚಂಡೆ ಮದ್ದಳೆಗೊಮ್ಮೆ ಕೈ ಹಚ್ಚಿದಾಗ
ಗಾರುಡಿನ ಪುಂಗಿ 
ಹಾವಿನ ಬುಟ್ಟಿಯಲ್ಲೇ ಮಂಗಮಾಯ.
ಮಲ್ಲಾಡದ ಹಕ್ಕಿ ಹಾಡು
 ಓ ಅದು ದೊಡ್ಡ ರಾಮಾಯಣಂ

                                               (೫೦ರ ಅಡಿಗರು)

ಮತ್ತೆ ಅದೇ ಪದ್ಯದ ಮುಂದಿನ ಭಾಗದಲ್ಲಿ ಚಂಪಾ ಬರೆಯುತ್ತಾರೆ:
ಈ ಪರಿಸ್ಥಿತಿ ಇತ್ತು, ಸರಿ. 
ಈಗ ಅಡಿಗರಿಗೆ ೫೦.
ಚಂಡೆ ಬಾರಿಸಿದ ಕೈ
ಬೋಳು ತಲೆ ಮೇಲೆ.
ಬೋಳು ತಲೆ ಮೇಲೆ
ಮುತ್ತಿನ ಕಿರೀಟ.
ಮುತ್ತಿನ ಕಿರೀಟದಲ್ಲಿ
ಅಲ್ಲಲ್ಲಿ ಕಾಜಿಜ ಟುಕಡಿ
ಕಾಜಿನ ಟುಕಡಿಯ ತುಂಬ
ಪರಾಕು ಪಂಪುಗಳಪ್ರತಿಬಿಂಬ

ಅಡಿಗರ ಜೊತೆಯಲ್ಲಿದ್ದು ನವೋದಯದ ಕವಿಗಳನ್ನು ಟೀಕಿಸುವುದು ಸಹಜ. ಆದರೆ  ಅಡಿಗರನ್ನು ಬಿಡುಗಣ್ಣಿನಿಂದ ನೋಡುವುದು ಮತ್ತು ಅವರನ್ನು ಹರಿತ ವಿಮರ್ಶೆಗೆ ಒಡ್ಡುವುದು ಸುಲಭದ ಕೆಲಸವಲ್ಲ. ಪರಾಕು ಪಂಪುಗಳ ಪ್ರತಿಬಿಂಬ ಅಡಿಗರಲ್ಲೂ ಇದೆ ಎಂದು ಟೀಕಿಸುವುದು ವಸ್ತುನಿಷ್ಠ ನೋಟವನ್ನು ಬೇಡುತ್ತದೆ. ಅವರು ಜನಸಂಘದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ನಿಂತದ್ದಕ್ಕೆ ಅಡಿಗರಿಗೆ ನೆಹರೂ ಅವರ ಬಗ್ಗೆ ಮತ್ತು ಕಾಂಗ್ರೆಸ್‌ನ ಬಗ್ಗೆ ಇದ್ದ ಸಿಟ್ಟು ಕಾರಣವಿರಬಹುದು. ಆದರೆ ಅವರು ಬಲಪಂಥೀಯ ಶಕ್ತಿಗಳ ಜೊತೆ ಕೈಜೋಡಿಸಿದ್ದನ್ನು ಕೆಲವು ಬರಹಗಾರರು ವಿರೋಧಿಸಿದರು.

ಚಂಪಾ ಅವರ ವಿರೋಧ ಇಲ್ಲಿಂದಲೇ ಆರಂಭವಾಯಿತೆನ್ನಬಹುದು. ಮುಂದೆ ಉದ್ದಕ್ಕೂ ಚಂಪಾ ಅಡಿಗರನ್ನು ತಾತ್ವಿಕವಾಗಿ ವಿರೋಧಿಸುತ್ತಲೇ ಹೋದರು. ʼಒಂದು ಜನಾಂಗದ ಕಣ್ಣು ತೆರೆಸಿದ ಕವಿʼ ಎಂದು ಲಂಕೇಶರು ಅಡಿಗರನ್ನು ಹೊಗಳಿದರೆ, ಚಂಪಾ ತಮ್ಮ ಎಂದಿನ ವ್ಯಂಗ್ಯವನ್ನು ಬೆರೆಸಿ, ʼಒಂದು ಜನಾಂಗದ ಕಣ್ಣು ಮುಚ್ಚಿಸಿದ ಕವಿʼ ಎಂದು ಹೇಳಿದರು. ಇದು ಕೇವಲ ಟೀಕೆಯೊ ಅಥವಾ ಈ ಮಾತಿನ ಹಿಂದೆ ಒಂದು ತಾತ್ವಿಕ ನೋಟ ಇರಬಹುದೇ ಎಂಬುದನ್ನು ಪರೀಕ್ಷಿಸಲು ಅವಕಾಶವಿದೆ.

ಮೈಸೂರಿನಲ್ಲಿ ೧೯೭೪ರಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ ಆರಂಭವಾದಾಗ ಚಂಪಾ ಅದರಲ್ಲಿ ಸಕ್ರಿಯವಾಗಿದ್ದರು. ಸಮಾಜವಾದಿ ಚಿಂತನೆಯ ವಿಚಾರವಂತರೇ ಅದರಲ್ಲಿ ಹೆಚ್ಚಾಗಿದ್ದುದು, ಕುವೆಂಪು ಅವರ ದಿಟ್ಟ ನುಡಿ ಕರ್ನಾಟಕದಲ್ಲಿ ಪ್ರತಿಧ್ವನಿಸಿದ್ದು ಮತ್ತು ವಿರೋಧವೂ ಪುರೋಹಿತಶಾಹಿಯಿಂದ ಬಂದದ್ದು ಈಗ ಇತಿಹಾಸ. ಈ ಇತಿಹಾಸ ಪುಟದಲ್ಲಿ ಚಂಪಾ ಅವರಿಗೂ ಜಾಗವಿದೆ.

ಮುಂದೆ ೧೯೭೯ರಲ್ಲಿ ಬಂಡಾಯ ಚಳವಳಿ ಆರಂಭವಾದಾಗ ಚಂಪಾ ಅಲ್ಲಿಯೂ ಮುಖ್ಯಧ್ವನಿಯಾಗಿದ್ದರು. ಅದರ ನಾಯಕತ್ವವನ್ನು ವಹಿಸಿದವರಲ್ಲಿ ಚಂಪಾ ಕೂಡಾ ಮುಖ್ಯರೇ. ತಮ್ಮ ಸಾಹಿತ್ಯಕ ಪತ್ರಿಕೆ ‘ಸಂಕ್ರಮಣ’ದ ಚಲನೆಯಲ್ಲಿಯೂ ಸ್ಥಿತ್ಯಂತರವಾದಾಗ ಗಿರಡ್ಡಿ ಗೋವಿಂದರಾಜ ಮತ್ತು ಸಿದ್ಧಲಿಂಗಪಟ್ಟಣಶೆಟ್ಟಿ ಸಂಕ್ರಮಣದಿಮದ ಹೊರಹೋದರು. ಚಂಪಾ ಒಬ್ಬರೇ ಸಂಪಾದಕರಾಗಿ ಕೊನೆಯವರೆಗೂ ಸಂಕ್ರಮಣವನ್ನು ಮುನ್ನಡೆಸಿದರು. ಸಂಕ್ರಮಣ ಬಂಗಾರದ ಹಬ್ಬವನ್ನು ಆಚರಿಸಿಕೊಂಡ ಸಾಹಿತ್ಯಕ ಪತ್ರಿಕೆಯಾಗಲು ಚಂಪಾ ಕಾರಣರಾದದ್ದು ಕೂಡಾ ಮುಖ್ಯ ಸಂಗತಿಯೇ.

ಸಂಕ್ರಮಣ ನಡೆಸುತ್ತಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಧನ ನಿಗದಿಪಡಿಸಿದ್ದು, ಲೇಖಕರ ವಿಳಾಸ ಹೊತ್ತಗೆಯನ್ನು ಪ್ರಕಟಿಸಿದ್ದು ಟೀಕೆಗೆ ಕಾರಣವಾದರೂ, ಅದು ಅಂಥ ದೊಡ್ಡ ಟೀಕೆಯಾಗಿ ಉಳಿಯಲಿಲ್ಲ. ತಮ್ಮೆಲ್ಲ ಕ್ರಿಯಾಶೀಲತೆಯ ಮೂಲಕ ಚಂಪಾ ಹೊಸ ಹೊಸ ಬರಹಗಾರರಿಗೆ ಸಂಕ್ರಮಣದ ಮೂಲಕ ದಿಡ್ಡಿ ಬಾಗಿಲನ್ನು ತೆರೆದಿದ್ದರು ಎಂಬುದು ಬಹಳ ಮುಖ್ಯವಾದ ಸಂಗತಿಯೇ. ಸಂಕ್ರಮಣ ತನ್ನ ಗುಣಮಟ್ಟವನ್ನು ಕಾಯ್ದುಕೊಂಡಿತ್ತೇ ಎಂಬ ಪ್ರಶ್ನೆಯಂತೂ ಇದ್ದೇ ಇದೆ. ಇಷ್ಟಾದರೂ, ಸಂಕ್ರಮಣದಲ್ಲಿ ಅವರು ನಿರಂತರವಾಗಿ ಬರೆದ ಸಂಪಾದಕೀಯ, ಬರಹಗಳು, ಕಟಕಿಯ ಟಿಪ್ಪಣಿಗಳು ಮುಖ್ಯ ಸಾಂಸ್ಕತಿಕ ದಾಖಲೆಗಳು ಎಂಬುದನ್ನು ಕಡೆಗಣಿಸುವಂತೆಯೇ ಇಲ್ಲ.

ಬೆಂಗಳೂರನ್ನು ಸೇರಿ ಧಾರವಾಡದ ಚಂಪಾ ಕಳೆದುಹೋದರೇ? ಲೌಕಿಕ ಎಂಬುದು ಸುಲಭವಾಗಿ ಜಯಿಸಬಹುದಾದ ಬಾಬತ್ತಲ್ಲ.

ಸಾರ್ವಜನಿಕ ಸಂವಾದವಿರಲಿ, ಚರ್ಚೆ ಇರಲಿ, ಮಾತುಕತೆಯಿರಲಿ, ಜಗಳವಿರಲಿ ಚಂಪಾ  ಜೀವಂತಿಕೆಯನ್ನು ತುಳುಕಿಸುತ್ತಿದ್ದರು. ಎಂಥ ವಿರೋಧಗಳಿಗೂ ಎದೆಕೊಡುತ್ತಿದ್ದರು. ತಮ್ಮ ನಿಲುವುಗಳಿಗೆ ಗಟ್ಟಿಯಾಗಿ ನಿಲ್ಲುತ್ತಿದ್ದರು. ಇದೆಲ್ಲದರ ಒಟ್ಟು ವ್ಯಕ್ತಿತ್ವವಾಗಿ ಚಂಪಾ ನಮ್ಮ ನಡುವೆ ಇದ್ದರು. ಅವರ ಇರವು ಮುಖ್ಯವಾದ ಸಾಂಸ್ಕೃತಿಕ ದನಿಯಾಗಿತ್ತು; ಸೈದ್ಧಾಂತಿಕ ಹೋರಾಟವಾಗಿತ್ತು. ಭಾಷೆ, ಸಂಸ್ಕೃತಿ,ಸಾಹಿತ್ಯ, ಪ್ರಚಲಿತ ವಿದ್ಯಮಾನ ಎಲ್ಲವನ್ನೂ ನಿಂತು ನೋಡುವ, ಚರ್ಚಿಸುವ, ಧ್ಯಾನಿಸುವ ಮನಸ್ಸು ಎಷ್ಟು ಅಗತ್ಯ ಎಂಬುದನ್ನೂ ಚಂಪಾ ಬದುಕು ತೋರಿಸಿಕೊಟ್ಟಿತ್ತು.

ಈ ಋಣ ನಮ್ಮೆಲ್ಲರ ಮೇಲಿದೆ.

‍ಲೇಖಕರು Admin

January 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: