ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಹೆಗಡೆ ಹೊಸ ಕವಿತೆ – ಬೆಳಕು ಮತ್ತು ಬಯಲು…

ಚಂದ್ರಶೇಖರ ಹೆಗಡೆ

ಹರಿದು ಹೊರಟಿದ್ದೇನೆ ತಡೆದೊಮ್ಮೆ ನಿಲ್ಲಿಸಿ ಬಿಡು
ಮನವಾಗಿದೆ ಸಿಡಿವ ಚಿಂತನೆಗಳ ಚೆಲ್ಲುವ ಕಾಡು
ಭವದ ನೆಲದಿ ಭಜಿಸಿ ಬರಸೆಳೆದಪ್ಪಿ ಕೊಂದು ಹಾಡು
ಕಂಡರೂ ಹಾಗಿಲ್ಲ ಒಮ್ಮೆ ಬಂದು ಪ್ರಮಾಣಿಸಿ ನೋಡು

ಭಯಾನಕವೆಂದೆನಿಸಿದೆ ಅಂತರಂಗ ಪಯಣ
ಕಾಡುತ್ತಿದೆ ಕ್ಷಣ ಕ್ಷಣಕೂ ಬಯಲಾಗದ ಹರಣ
ಇದೇ ಇರಬೇಕು ಮಹಾನವಮಿಯ ಮರಣ
ಹುಡುಕಬೇಕಿದೆ ಸಮಾಧಿಗೆ ಹೊರಟ ಕಾರಣ

ಬೆಳಕು ಬಯಲಾದ ಸಂಭ್ರಮದ ಮಹಾಮನೆ
ತೋರಿಬಿಡು ಒಳಗೆ ಹೋಗುವ ಹಾದಿಯ ಬಿಮ್ಮನೆ
ಸಾಕಾಗಿದೆ ಅಲೆಯ ಮಾರಿಗಳ ಹೊಡೆತ ಸುಮ್ಮನೆ
ಕರೆದೊಯ್ದುಬಿಡು ಸುಖದ ಬೀಡಾಗಿರಬಹುದು ನಿಮ್ಮನೆ

ಕಣ್ಣ ಮುಂದಿದೆ ಕನಸು ತುಂಬಿದ ಶರಾಬಿನ ಬಟ್ಟಲು
ಆದರೂ ಇದಲ್ಲ ನಾ ತೇಲಬೇಕೆಂದ ನಶೆಯ ತೊಟ್ಟಿಲು
ನಿಜವಲ್ಲ ಈ ದೃಶ್ಯ; ಹೆಣೆದ ವದಂತಿಗಳ ಕಟ್ಟಲು
ಅಮಲೇರುವುದು ಆತ್ಮ ; ಶಬ್ದಗಳ ಹುಡುಕಿ ಮುಟ್ಟಲು

ಹರಿದರೂ ದಾಟಲಾಗುತಿಲ್ಲ ಭಾವಬಂಧನದ ಆಣೆಕಟ್ಟು
ಬೇಕೆಂದೆನಿಸಿದೆ ವರ ನೀಡು ಬಯಸಿದಾಗ ಮರುಹುಟ್ಟು
ಸಲಹು ದಯಪಾಲಿಸಿ ದೂರದೃಷ್ಟಿಯ ನೆಟ್ಟು
ಹೇಳಿಬಿಡು ಏಕಾಂತದೊಳಗೆ ಜಗದ ದರ್ಶನದ ಗುಟ್ಟು

‍ಲೇಖಕರು Admin

2 January, 2022

4 Comments

  1. ಬದರಿನಾಥ ಪಳವಳ್ಳಿ

    ಇದಕಿಂತಲೂ ಮಿಗಿಲಾದ ಪ್ರಾರ್ಥನೆ ಮತ್ತೊಂದಿರಲಾರದು.

    ಪ್ರತಿ ಸಾಲಲೂ ಇರುವ ನಿವೇದನೆ ಅಮಿತ.

    ಭಯಾನಕವೆಂದೆನಿಸಿದೆ ಅಂತರಂಗ ಪಯಣ – ನಮಗೂ ಸಹ.

    (ಹೊಸ ವರ್ಷದ ಶುಭಾಶಯಗಳೊಂದಿಗೆ)

    • Chandrashekhar Hegde

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ಸರ್

  2. Ganesh Kolapur

    Super article sir.

    • Chandrashekhar Hegde

      Thank you Ganesh.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading