ಚಂದ್ರಪ್ರಭ ಕಠಾರಿ ನೋಡಿದ ಸಿನಿಮಾ ರೈಟರ್…

ಪೊಲೀಸ್ ವ್ಯವಸ್ಥೆಯ ಆಳದಲ್ಲಿ ಬೇರು ಬಿಟ್ಟಿರುವ ಜಾತಿ ತಾರತಮ್ಯದ ಚಿತ್ರಣ – ರೈಟರ್

ಚಂದ್ರಪ್ರಭ ಕಠಾರಿ

ಸಮಾಜದ ಅಂಚಿನಲ್ಲಿರುವ ಸಮುದಾಯದ ಕತೆಗಳು ಸಿನಿಮಾದ ವಸ್ತುವಾಗಿ, ಪ್ರಧಾನವಾಗಿ ತಮಿಳು, ಮಲಯಾಳಮ್, ಮರಾಠಿ ಚಿತ್ರಗಳಾಗಿ, ಭಾರತೀಯ ಸಿನಿಮಾ ಇತಿಹಾಸದಲ್ಲಿ ತಡವಾಗಿಯಾದರೂ ಇತ್ತೀಚಿನ ವರುಷಗಳಲ್ಲಿ ಬರುತ್ತಿರುವುದು ಸಮಾಧಾನದ ಸಂಗತಿ. ಅಂಥ ಸಿನಿಮಾಗಳ ಸಾಲಿಗೆ, ಅಷ್ಟೇನು ಚರ್ಚಿತವಾಗದ ತಮಿಳು ಸಿನಿಮಾ ‘ ರೈಟರ್ ‘ ಕೂಡ ಸೇರುತ್ತದೆ.

ಸಾರ್ವಜನಿಕರ ಸಾಮಾಜಿಕ ಜೀವನವನ್ನು ಕಾನೂನಿನ ಚೌಕಟ್ಟಿನಲ್ಲಿ ಕಾಪಾಡುವ, ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಹೊತ್ತ ಪೊಲೀಸ್ ಇಲಾಖೆಯಂತ ಸಾಂವಿಧಾನಿಕ ವ್ಯವಸ್ಥೆಯ ಆಳದಲ್ಲಿ ಬೇರು ಬಿಟ್ಟಿರುವ ಜಾತಿ ತಾರತಮ್ಯ ಅದರಲ್ಲೂ ತಳಜಾತಿಯ ಸಹೋದ್ಯೋಗಿಗಳ ಬಗ್ಗೆ ಇರುವ ಅಸಹಿಷ್ಣುತೆಯನ್ನು, ಫ್ರಾಂಕ್ಲಿನ್ ಜಾಕೊಬ್ ತಮ್ಮ ಚೊಚ್ಚಲ ನಿರ್ದೇಶನದ ತಮಿಳು ಚಿತ್ರ ರೈಟರ್ ನಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಪ್ರಾಥಮಿಕ ತನಿಖಾ ವರದಿ ( ಎಫ್ ಐ ಆರ್ ) ಗಾಗಿ ದೂರು ದಾಖಲಿಸುವ, ಅಪರಾಧವನ್ನು ವಿವರಿಸಿ ವರದಿಯನ್ನು ತಯಾರು ಮಾಡುವ ರೈಟರ್ ಹುದ್ದೆಯ ಪಾತ್ರವನ್ನು ಕೇಂದ್ರಿಕರಿಸಿ ಸಾಗುವ ಸಿನಿಮಾ ತನ್ನ ಚಿತ್ರಕತೆಯಿಂದ ಗಮನ ಸೆಳೆಯುತ್ತದೆ. 

ತಂಗರಾಜ್ – ತನಿಖಾ ವರದಿಯ ತಯಾರಿಯಲ್ಲಿ ಪಳಗಿರುವ ಹೆಚ್ಚು ಅನುಭವಿರುವ ರೈಟರ್ ಆಗಿ ಓರ್ವ ನಿಷ್ಟಾವಂತ ಪೊಲೀಸ್ ಕಾನ್ಸ್ ಟೇಬಲ್. ನಿಷ್ಟಾವಂತ ಅಂದರೆ ಪ್ರಚಲಿತ ಪೊಲೀಸ್ ಭ್ರಷ್ಟ ವ್ಯವಸ್ಥೆಯಲ್ಲಿದ್ದು ಅದಕ್ಕೆ ಪ್ರತಿರೋಧ ಒಡ್ಡದೆ, ಚೂರುಪಾರು ಮಾನವೀಯ ಸಂವೇದನೆಯನ್ನು ಉಳಿಸಿಕೊಂಡ ವ್ಯಕ್ತಿ. ನಿವೃತ್ತಿ ಹೊಸ್ತಿಲಲ್ಲಿರುವ ಅವನಿಗೆ ಪೊಲೀಸರ ಸಂಘಟನೆಯನ್ನು ಕಟ್ಟುವ ಹಂಬಲ ಅಚಲವಾದದ್ದು. ಆದರೆ, ಐಎ ಎಸ್ ಅಂಥ ಸರ್ಕಾರಿ ಉನ್ನತ ಹುದ್ದೆಯ ಅಧಿಕಾರಿಗಳ ಸಂಘಟನೆ ಇರುವಾಗ ಪೊಲೀಸರ ದುಃಖದುಮ್ಮಾನಗಳನ್ನು ಹೇಳಿಕೊಳ್ಳಲು ಅಗತ್ಯವಾದ ಸಂಘಟನೆಯನ್ನು ಆರಂಭಿಸಲು  ಕಾನೂನು ತೊಡಕಿದೆ. ಅದು ಕಳೆದು ಇಪ್ಪತ್ತೈದು ವರ್ಷಗಳಿಂದಲೂ ಕೋರ್ಟಿನಲ್ಲಿ ಮೇಲಾಧಿಕಾರಿಗಳ ಉದಾಸೀನತೆಯಿಂದ ನೆನೆಗುದಿಗೆ ಬಿದ್ದಿದೆ. ಆದರೂ ತಂಗರಾಜ್ ಆಶಾವಾದಿ.

ತನ್ನ ನಿವೃತ್ತಿಗೆ ಮುಂಚೆ ಅಂಥದೊಂದು ಸಂಘಟನೆ ಸಾಧ್ಯವಾಗುತ್ತದೆಂಬ ನಂಬಿಕೆಯಲ್ಲಿದ್ದಾನೆ. ಎಂಟುಗಂಟೆಯಷ್ಟೆ ಕೆಲಸ, ಸರಿಯಾದ ಭತ್ಯೆ, ಮೇಲಾಧಿಕಾರಿಗಳಿಂದ ಉಚಿತ ಗೌರವ ಇತ್ಯಾದಿ ಬೇಡಿಕೆಗಳನೊತ್ತ ಸಂಘಟನೆಯ ಸೃಷ್ಟಿಗೆ ಹೋರಾಡುತ್ತಿರುವ ತಳವರ್ಗದ ತಂಗರಾಜ್ ಮೇಲೆ ಅವನ ಮೇಲಾಧಿಕಾರಿಗೆ ಎಲ್ಲಿಲ್ಲದ ಕೋಪ. ಕೆಳ ಹುದ್ದೆಯಲ್ಲಿರುವವರು ತನ್ನ ಅಡಿಯಾಳಂತೆ ಇರಬೇಕೆಂಬ ಬಯಸುವವನು ಸಿಟ್ಟಿನಿಂದ ಸಂಘಟನೆಯ ದಾಖಲೆ ಪತ್ರಗಳಿಗೆ ಬೆಂಕಿ ಇಡುತ್ತಾನೆ. ತಂಗರಾಜನಿಗೆ ಎಲ್ಲಾ ಸಹೋದ್ಯೋಗಿಗಳ ಮುಂದೆ ಕಪಾಳಕ್ಕೆ ಹೊಡೆದು ಅವಮಾನಿಸುತ್ತಾನೆ. ಇಷ್ಟು ಸಾಲದೆಂಬಂತೆ ಶಿಕ್ಷೆಯಾಗಿ ವರ್ಗಾವಣೆ ಮಾಡುತ್ತಾನೆ. 

ವರ್ಗಾವಣೆಗೊಂಡ ತಂಗರಾಜನಿಗೆ ಯಾವುದೋ ಕಾರಣಕ್ಕೆ ಯುವಕನೊಬ್ಬನನ್ನು ಬಂಧಿಸಿ, ಠಾಣೆಯಲ್ಲಿಡದೆ ಮದುವೆಛತ್ರವೊಂದರಲ್ಲಿ ಕೂಡಿಟ್ಟವನನ್ನು ಕಾಯುವ ಕೆಲಸ. ಹೊಸ ಠಾಣೆಯಲ್ಲೂ ಸಹಿತ ಮೇಲಾಧಿಕಾರಿ ವರ್ತನೆ ಮೊದಲಿದ್ದ ಠಾಣೆಗಿಂತ ಭಿನ್ನವಾಗಿಲ್ಲ. ಅದೇ ದರ್ಪ. ಆದರೆ ಮೇಲಾಧಿಕಾರಿ ಇಕ್ಕಟ್ಟಿನಲ್ಲಿದ್ದಾನೆ. ಛತ್ರದಲ್ಲಿ ಕೂಡಿ ಹಾಕಿದ ಯುವಕನ ಮೇಲೆ ತನಿಖಾ ವರದಿ ತಯಾರಿಸುವಲ್ಲಿ ವಿಳಂಬವಾಗುತ್ತಿದೆಯೆಂದು ಡೆಪ್ಯೂಟಿ ಕಮೀಶನರ್ ಕೋಪಗೊಂಡಿದ್ದಾನೆ.

ಸ್ವತಃ ತಾನೇ ಠಾಣೆಗೆ ಖುದ್ದಾಗಿ ಬಂದು ಬರೆದ ಎಫ್ ಐ ಆರ್ ಸರಿಯಾಗಿಲ್ಲವೆಂದು ಅದರಲ್ಲಿ ನುರಿತ ತಂಗರಾಜನಿಗೆ ತನಿಖಾ ವರದಿಯನ್ನು ಬರೆಯಲು ಹೇಳುತ್ತಾನೆ. ಇಲ್ಲಿ ಎಡವಟ್ಟಾಗುತ್ತದೆ. ಹಾಲಿ ಪೊಲೀಸ್ ವ್ಯವಸ್ಥೆಗೆ ಅನುಕೂಲವಾಗುವಂತೆ ತನಿಖಾ ವರದಿಯನ್ನು ತಂಗರಾಜ ಎಂದಿನಂತೆ ರಚಿಸುತ್ತಾನೆ. ಆದರೆ, ಅದರಿಂದ ಒಬ್ಬ ಅಮಾಯಕ ತಳಜಾತಿಯ ಹಳ್ಳಿ ಯುವಕನನ್ನು ಅನ್ಯಾಯವಾಗಿ ಸುಳ್ಳು ಕೇಸೊಂದರಲ್ಲಿ ಸಿಕ್ಕಿಸುವ ಜಾಲ ನಂತರ ಅವನಿಗೆ ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ. 

ತನ್ನ ಇಷ್ಟು ವರ್ಷದ ಕೆಲಸದಲ್ಲಿ ಯಾವ ಅಪಾದಿತನ ಮೇಲೂ ಕೈ ಎತ್ತದವನು ಈಗ ಯುವಕನ ಮೇಲೆ ಕೈ ಮಾಡಿದ್ದಕ್ಕೇ ನೊಂದುಕೊಳ್ಳುವ ಸಂವೇದನೆ ಉಳ್ಳವನಿಗೆ, ತಾನು ಬರೆದ ತನಿಖಾ ವರದಿಯಿಂದ ಪಿಎಚ್ಡಿಗಾಗಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮುಗ್ಧ ಯುವಕ ಶಿಕ್ಷೆಗೊಳಗಾಗುವುದನ್ನು ತಪ್ಪಿಸ ಬೇಕಾಗಿದೆ. ನೆಮ್ಮದಿಯಿಂದ ನಿವೃತ್ತಿಯಾಗಬೇಕಾಗಿದೆ. 

ಯುವಕನನ್ನು ಯಾಕೆ ಬಂಧಿಸಲಾಯಿತು? ತಂಗರಾಜ ಅವನನ್ನು ಮುಗ್ಧನೆಂದು ಸಾಬೀತು ಮಾಡಿ ಶಿಕ್ಷೆಯಿಂದ ಪಾರು ಮಾಡುವನೇ? ಡೆಪ್ಯೂಟಿ ಕಮೀಶನರಂಥ ಉನ್ನತ ಹುದ್ದೆಯಲ್ಲಿರುವವನಿಗೆ ಒಬ್ಬ ಸಾಮಾನ್ಯ ಹಳ್ಳಿ ಯುವಕ ಮೇಲೆ ಅಪಾದನೆ ಹೊರಿಸುವ ಜರೂರತ್ತು ಏನಿತ್ತು? ಇತ್ಯಾದಿ ಪ್ರಶ್ನೆಗಳಿಗೆ ಸಸ್ಪೆನ್ಸ್ ಸಿನಿಮಾದಂತೆ ಸಾಗುವ ದೃಶ್ಯಾವಳಿಗಳನ್ನು ಚಿತ್ರ ನೋಡಿಯೇ ಅನುಭವಿಸಬೇಕು. 

ಸಿನಿಮಾ ನೋಡುತ್ತ ಮೂಡುವ ಮೇಲಿನ ಪ್ರಶ್ನೆಗಳು, ಅದಕ್ಕೆ ಸಿಗುವ ಉತ್ತರಗಳಲ್ಲಿ ಎಂಥ ಕಲ್ಲೆದೆಯನ್ನು ನಡುಗಿಸುವಂತೆ ವ್ಯವಸ್ಥೆಯಲ್ಲಿ ಹುದುಗಿರುವ ಜಾತಿ ದ್ವೇಷದ ಪರಿಚಯವಾಗುತ್ತದೆ. 

ಪ್ರಮುಖ ಪಾತ್ರ ತಂಗರಾಜನ್ ಆಗಿ ನಟಿಸಿರುವ  ಸಮುತಿರಕನಿಯ ಅಭಿನಯ ಚಿತ್ರದ ಜೀವಾಳ. ಚಿಕ್ಕಪುಟ್ಟ ಅಪರಾಧಗಳನ್ನು ಮಾಡಿ ಸಧ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಕಾಫಿ, ತಿಂಡಿ ಸರಬರಾಜು ಮಾಡುವ ಕೆಲಸದಲ್ಲಿರುವ ಅರಿವಜಗನ್ (ದೀಲಿಪ್) ಪಾತ್ರ ಸೇರಿ ಉಳಿದ ಪೊಲೀಸ್ ಪಾತ್ರಗಳು ನಟನೆಯಲ್ಲಿ ತನ್ಮಯತೆಯನ್ನು ಸಾಧಿಸಿವೆ.

ಕ್ಲೈಮ್ಯಾಕ್ಸಲ್ಲಿ ಪ್ರತೀಕಾರದ ಕತೆಯಾಗಿ ಚಿತ್ರ ಅಂತ್ಯಗೊಂಡಿದ್ದು ಸ್ವಲ್ಪ ನಿರಾಸೆ ತಂದರೂ ವ್ಯವಸ್ಥೆಯಾಳದಲ್ಲಿ ಮಡುಗಟ್ಟಿರುವ ಜಾತಿ ತಾರತಮ್ಯ, ದ್ವೇಷವನ್ನು ಅಬ್ಬರಕ್ಕೆ ಎಡೆಯಿಲ್ಲದಂತೆ ತಣ್ಣಗೆ ಚಿತ್ರಿಸಿರುವ ರೀತಿಗೆ ನಿರ್ದೇಶಕರು ಅಭಿನಂದಾನರ್ಹರು. ಖ್ಯಾತ ನಿರ್ದೇಶಕ ಪ ರಂಜೀತರ ಸಹ ನಿರ್ಮಾಣದ ರೈಟರ್ ಚಿತ್ರವನ್ನು ಸಮಸಮಾಜದ ಕನಸುಯುಳ್ಳವರು ನೋಡಲೇ ಬೇಕಾದ ಸಿನಿಮಾ. ಚಿತ್ರ ಅಹ ಒಟಿಟಿ ಯಲ್ಲಿದೆ.

‍ಲೇಖಕರು Admin

March 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: