ಚಂದ್ರಪ್ರಭ ಕಠಾರಿ
ದೇಶದಾಪ್ರತಿಮ
ಮಾತುಗಾರ ಜನರಾ-
ಪೇಕ್ಷೆಯ ಜನನಾಯಕ
ಜವರಾಯ ಕುಣಿದು
ರಸ್ತೆಗಳಲಿ
ಆಂಬುಲೆನ್ಸುಗಳಲಿ
ಸಾಲು ಸಾಲು ಶವ
ಗಳ ಮೆರವಣಿಗೆ ಹೊರಟಿರುವಾಗ
ಲಸಿಕೆಯಿಲ್ಲದೆ
ಟೀಕಾ ಉತ್ಸವ ನಡೆದಿರುವಾಗ
ಕಾಣೆಯಾಗಿದ್ದಾನೆ.
ಮೊನ್ನೆಯಷ್ಟೆ ಟಿವೀಲಿ
ಮಿತ್ರೊ ದೇಶದಿಂದ
ಕೊರೊನಾ ಒದ್ದೊಡಿಸಿ-
ದ್ದೇನೆಂದು ಕೂಗಿದ್ದ ನೆನಪು
ದೇಶವಾಸಿಗಳ ದೇಹದಲಿ
ಕೊರೊನಾ ಮನೆ ಮಾಡಿ
ಆಸ್ಪತ್ರೆಯಲಿ ಹಾಸಿಗೆ ಸಿಗದೆ
ಆಕ್ಸಿಜನ್ ಐಸಿಯು
ವೆಂಟಿಲೇಟರಿರದೆ ಇರಿವ
ಬಾಣಗಳ ಹಾಸಿಗೆಯ ಮೇಲೆ
ಸ್ಟ್ರೆಚ್ಚರಲಿ ಮಲಗಿ ನರಳುವಾಟ

ನದಿಗಳಲಿ ಅಲೆ ಅಲೆಯಾಟ
ರಾಶಿ ರಾಶಿ ಹೆಣಗಳ
ತೇಲಾಟ
ಭಾರತದ ಭೂಪಟದಲಿ
ದುರ್ಬೀನು ಹುಡುಕಾಟದಲಿ
ಕಾಣದ ಜನನಾಯಕನ
ಆ ಸ್ಥಾನದಲಿ ಕಂಡ
ಸೆಗಣಿ ಗೋಮೂತ್ರದಲಿ
ಮಿಂದೆದ್ದವರು
ಹೇಗಾದರೂ ಉಸಿರಾಡು
ನಿನ್ನ ಮೂಗಿನ ನಳಿಕೆಗಳೇ
ದೇವರಿತ್ತ ಆಕ್ಸಿಜನ್ ಸಿಲಿಂಡರು
ಗಳೆನ್ನುವ ಸತ್ತರೇ ಸಾಯಿರೆಂದು
ಕತ್ತಿಯ ಮಾತಿನಲಿ ಚುಚ್ಚುವ
ಜನನಾಯಕನ ಮಿತ್ರರು.
ಮರುಳ ನೀ
ಜೀವ ನಶ್ವರ
ಆತ್ಮ ಶಾಶ್ವತ
ಕರ್ಮವಷ್ಟೇ ನಿನ್ನ ಕಾಯಕ
ದೇವರಿಗೆ ಬಿಟ್ಟು ಬಿಡು
ಫಲಾಫೇಕ್ಷೆ
ಗೀತೋಪದೇಶದ ದೀಕ್ಷೆ
ಪ್ರಾಣವಾಯುವಿಗಾಗಿ
ಚೀರಾಡಿ ಜೀವ ಹಿಡಿದವಗೆ
ವಾಟ್ಸಾಪ್ ಯೂನಿವರ್ಸಿಟಿ
ಗೆಳೆಯರ ಉಪದೇಶ
ಪ್ರಶ್ನಿಸುವ ಕಾಲವಿದಲ್ಲ.

ಎಪ್ಪತ್ತು ವರುಷದ ಘನಂದಾರಿ
ಇಂಡಿಯಾದಲಿ ಈಗಷ್ಟೇ
ಜನನಾಯಕನ ಕಾಲದಲಿ
ಬಂದಿದೆ ಆಕ್ಸಿಜನ್ ಘಟಕ
ಕುಲುಮೆಯಲಿ ಬೇಯುತಿದೆ
ಕಾಯಬೇಕು ಪ್ರಾಣವಾಯು
ಇಳಿಯಬೇಕು ನಳಿಕೆಗಳಲಿ
ಹಾದು ಹೊರಬೇಕು
ಫ್ಯಾಕ್ಟರಿಗಳಲಿ
ರಸ್ತೆಗಿಳಿದು ಟ್ಯಾಂಕರುಗಳಲಿ
ಸಾಗಿ ಆಸ್ಪತ್ರೆ ಸೇರಿ
ನೀನು ಬದುಕಿದ್ದರೆ
ನಿನ್ನೆದೆಗೂಡ ಸೇರಬೇಕು
ತಾಳಬೇಕು
ಸಹಿಸಿಕೊಳ್ಳಬೇಕು
ಪ್ರಶ್ನಿಸುವ ಕಾಲವಿದಲ್ಲ
ಮಾತು ಕೇಳು
ಸಹಿಸಿಕೊ….
ಕಣ್ಮುಚ್ಚು… ಧ್ಯಾನಿಸು
ಸದ್ಗತಿ ಸಿಗುವುದು
ತಡವಾದರೆ
ಜನರಿಲ್ಲ ಹೊರಲು
ದೇವರ ಹೆಗಲು
ಕಾಯಬೇಕಾದೀತು
ಸುಡಲು ಕಟ್ಟಿಗೆ ಇಲ್ಲ
ಗಿಡ ನೆಡಬೇಕಾದೀತು
ಹೂಳಲು ಜಾಗವಿಲ್ಲ
ಚಂದ್ರ ಮಂಗಳನಲ್ಲಿಗೆ
ಹೋಗಬೇಕಾದೀತು..
ಅತ್ತು ಅತ್ತು
ಭಾರತಾಂಭೆಯ
ಕಣ್ಣು ಇಂಗಿ ಹೋದೀತು.






‘ಹೊರಲು ದೇವರ ಹೆಗಲು’ ಕವನದಲ್ಲಿ ಚಂದ್ರಪ್ರಭ ಕಠಾರಿ ವರ್ತಮಾನದ ನಗ್ನ ಸತ್ಯಗಳನ್ನು, ವ್ಯಕ್ತಿತ್ವ ಕೇಂದ್ರದ ರಾಜಕಾರಣವನ್ನು ಕಟುವಾಗಿ, ದಿಟ್ಟವಾಗಿ ಅನಾವರಣಗೊಳಿಸಿದ್ದಾರೆ…. ಅಭಿನಂದನೆಗಳು…