ಚಂದ್ರಪ್ರಭ ಕಠಾರಿ ಕಥೆ- ನೀಲನಕ್ಷೆ…

ಚಂದ್ರಪ್ರಭ ಕಠಾರಿ

ಈಶಾನ್ಯಕ್ಕೆ ಹಾಲು, ಅಗ್ನೇಯಕ್ಕೆ ಅಡುಗೆಮನೆ, ನೈರುತ್ಯಕ್ಕೆ ಮಾಸ್ಟರ್ ಬೆಡ್, ವಾಯುವ್ಯಕ್ಕೆ ಬಚ್ಚಲು….. ರೆಡಿಯಾಯಿತಲ್ಲ ಮನೆಯ ಪ್ಲಾನು!

ಮನೆ ಕಟ್ಟುವ ಎಲ್ಲಾ ಮಾಲೀಕರದ್ದು ಮನೆನಕ್ಷೆಯ ಬಗ್ಗೆ ಇಂಥದ್ದೇ ಸುಲಭ ಗ್ರಹಿಕೆ. ಮನೆಯ ಬೇರೆ ಬೇರೆ ವಿಭಾಗಗಳನ್ನು ಮೊದಲೇ ವಾಸ್ತು ಪ್ರಕಾರವೆಂದು ನಿರ್ದಿಷ್ಟ ದಿಕ್ಕಿನಲ್ಲಿರಿಸಿ, ಇರುವ ಇಪ್ಪತ್ತು ಮೂವತ್ತು ಅಥವಾ ಮೂವತ್ತು ನಲವತ್ತು ಅಡಿ ಅಳತೆಯ ಚಿಕ್ಕ ಸೈಟುಗಳಲ್ಲಿ ವಿವಿಧ ಉದ್ದೇಶಗಳಿಗೆ ಬಳಸುವ ಜಾಗಗಳು ಹೆಚ್ಚು ವಿಸ್ತಾರವಾಗಿರುವಂತೆ, ಜಾಗ ಒಂದಿಂಚು ಅಪವ್ಯಯವಾಗದಂತೆ ನಕ್ಷೆ ರಚಿಸುವುದು ನಿಜಕ್ಕೂ ಸುಲಭ ಸಾಧ್ಯದ ಮಾತೇ? ಆದರೆ, ಮಾಲೀಕರಿಗೆ ಅದು ಬಾಳೇಹಣ್ಣು ಸಿಪ್ಪೆ ಸುಲಿದಂತೆ! ಬರೀ ಬಾಯಿ ಮಾತಲ್ಲೇ “ಅದನ್ನು ಇಲ್ಲಿ ಹಾಕಿ…ಇದನ್ನು ಅಲ್ಲಿ ಹಾಕಿ….ಜಾಗ ಚಿಕ್ಕದಾಯಿತು…ಇನ್ನೂ ದೊಡ್ಡದು ಮಾಡಿ” ಎಂದು ನಕ್ಷೆ ರಚನೆಯು ಬ್ರಹ್ಮಾಂಡ ವಿದ್ಯೆಯೇನಲ್ಲ, ಅದಕ್ಕೆಂತಹ ನೈಪುಣ್ಯತೆ ಬೇಕು! ಸಾಮಾನ್ಯ ಜ್ಞಾನ ಸಾಕೆಂದು ಎಲ್ಲ ಗೊತ್ತಿರುವಂತೆ ಪುಕ್ಕಟೆ ಸಲಹೆ ನೀಡುತ್ತಾರೆ. ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂತು ತಲೆಯನ್ನು ಕಿಚಡಿ ಮಾಡಿಕೊಂಡು, ಇರುವ ಬುದ್ಧಿಯನ್ನೆಲ್ಲ ಖರ್ಚು ಮಾಡಿದರೂ ದಿಕ್ಕಿಗೆ ಹೊಂದಾಣಿಕೆಯಾದರೆ ಅಳತೆ ಖೋತಾವಾಗಿ ಅಳತೆ ಸರಿಯಾಗಿ ಬಂದರೆ ಬಳಸುವ ಜಾಗ ದಿಕ್ಕು ತಪ್ಪಿ ಒದ್ದಾಡುವುದ ಪರಿ ಅವರಿಗೆ ಹೇಳಿ ಪ್ರಯೋಜನವಿಲ್ಲ. ಆ ಕಷ್ಟ ಅವರಿಗೆ ಅರ್ಥವಾಗುವುದೂ ಇಲ್ಲ!

ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಗಾಂಧೀ ಬಜಾರಿನಲ್ಲಿರುವ ಸೈಟೊಂದಕ್ಕೆ ಮನೆ ನಕ್ಷೆ ರಚಿಸಲು ಈಗಾಗಲೇ ಎಂಟು ಪ್ಲಾನುಗಳನ್ನು ತಯಾರಿಸಿದರೂ ಮಾಲೀಕ ಪ್ರಸಾದ್ ಮತ್ತವನ ಅಕ್ಕಂದಿರಿಗೆ ಸಂತೃಪ್ತಿಯಾಗದೆ ಮಗದೊಂದು ನಕ್ಷೆ ತಯಾರಿಸಲು ಹೇಳಿದ್ದು ಅಸಹನೆ, ಸಿಟ್ಟು ತಂದರೂ ಕಟ್ಟಡದ ಕಾಂಟ್ರಾಕ್ಟ್ ಸಿಗುವವರೆಗೂ ಹಲ್ಲು ಕಚ್ಚಿಕೊಂಡು ಸಹನಾಶೀಲನಾಗಿರಬೇಕಾದ ಅವಸ್ಥೆಗೆ ಅನಂತ ತನಗೆ ತಾನೇ ಶಪಿಸಿಕೊಳ್ಳುತ್ತಿದ್ದ. ಮತ್ತೆ ಪ್ರತಿ ಬಾರಿ ನಕ್ಷೆ ರಚಿಸುವಾಗಲೂ ಅಂದುಕೊಳ್ಳುವಂತೆ ಇದೇ ಕೊನೆಯ ಪ್ರಯತ್ನ, ಇದಕ್ಕೂ ಒಪ್ಪದಿದ್ದಲ್ಲಿ ಬೇರೆ ಯಾರಾದ್ರು ಇಂಜಿನಿಯರನ್ನು ನೋಡ್ಕೊಳ್ಳಿ ಎಂದು ನಿಷ್ಟುರವಾಗಿ ಹೇಳಿಬಿಡಬೇಕೆಂದು ಅನಂತ ನಿರ್ಧರಿಸಿದ.

ರಚಿಸಿದ ಮನೆಯ ಪ್ಲಾನನ್ನು ಒಪ್ಪದೆ ಪದೇ ಪದೇ ತಿದ್ದುಪಡಿ ಮಾಡಲು ಹೇಳಿ ಅನಂತನನ್ನು ಗೋಳು ಹೊಯ್ದುಕೊಳ್ಳುತ್ತಿದ್ದದ್ದು ಬೇರೆ ಮಾತು. ಆದರೆ, ಕಳೆದ ಮೂರು ತಿಂಗಳಿಂದ ತಿರುಗಾಡಿ ಸಜ್ಜನರು, ಸ್ನೇಹಪರರಾದ ಪ್ರಸಾದನ ಕುಟುಂಬದವರು ಪ್ರತಿಬಾರಿಯ ಭೇಟಿಯಲ್ಲೂ ಆತ್ಮೀಯವಾಗಿ ಲೋಕಾಭಿರಾಮವಾಗಿ ಮಾತಾಡುತ್ತ, ವೈಯಕ್ತಿಕ ಖಾಸಗಿ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತ ಹರಟೆಗೆ ಇಳಿಯುತ್ತಿದ್ದದ್ದು ಅನಂತನಿಗೆ ಇಷ್ಟವಾಗುತ್ತಿತ್ತು. ಹಾಗೆ ಗೆಳೆಯನಂತೆ ಒಡನಾಡುವ ಪ್ರಸಾದರು ಅನಂತನಿಗೆ ಸಿಕ್ಕಿದ್ದು ಕೂಡ ಆಕಸ್ಮಿಕವೇ!

ಮೂರು ವರ್ಷಗಳ ಹಿಂದೆ ಗಿರಿನಗರದಲ್ಲಿ ಮನೆ ಕಟ್ಟುವ ಕಾಂಟ್ರಾಕ್ಟ್ ಅನಂತನಿಗೆ ಸಿಕ್ಕಿತ್ತು. ಮಾಲೀಕರಾದ ಸತ್ಯನಾರಾಯಣ ಆಫೀಶಿಯಲ್ ಏರಿಯಾದಲ್ಲಿ ಸೈಟು ಸಿಕ್ಕೀತೆಂಬ ಖುಷಿಯಲ್ಲಿ ವರ್ಷಾನುಗಟ್ಟಲೆ ಯಾರೂ ಕೊಳ್ಳದೆ ಉಳಿದು, ಅರೆಕಾಡಿನಂತೆ ಗಿಡಗಂಟೆಗಳು ಯಥೇಚ್ಚ ಬೆಳೆದು ನೆಲವೇ ಕಾಣದಿದ್ದ ಸೈಟನ್ನು ತರಾತುರಿಯಲ್ಲಿ ಕೊಂಡಿದ್ದರು. ಮನೆನಕ್ಷೆ ರಚಿಸುವ ಮುಂಚೆ ಸೈಟನ್ನು ಅಳತೆ ಮಾಡಲು ಅನಂತ ಬಂದಾಗ ಅದಿದ್ದ ಅವಸ್ಥೆಯನ್ನು ನೋಡಿ ದಂಗಾದ. ಬೆಳೆದ ಗಿಡಗಂಟೆಗಳನ್ನು ತೆಗೆಸಿ ಜಾಗವನ್ನು ಸ್ವಚ್ಚಗೊಳಿಸಲು ವಾರಗಳೇ ಹಿಡಿದವು. ಸೈಟಿನ ಮುಂದಿದ್ದ ರಸ್ತೆಯ ಮಟ್ಟದಿಂದ ಸುಮಾರು ಆಳೆತ್ತರದ ಬೆಟ್ಟದ ಹಾಸು ಕಂಡು, ಹಿಂದಕ್ಕೆ ಸಾಗಿದಂತೆ ಏರುಮುಖವಾಗಿತ್ತು. ಸಮತಟ್ಟಲ್ಲದ, ಅಂಕುಡೊಂಕದ ಬೆಟ್ಟದ ಮೇಲೆ ಮನೆ ಕಟ್ಟಲಾಗದ ಪರಿಸ್ಥಿತಿಗೆ ಸತ್ಯನಾರಾಯಣ ತಲೆ ಮೇಲೆ ಕೈಹೊತ್ತು ಕೂತರು. ಬೆಟ್ಟದ ಹಾಸನ್ನು ಡೈನಮೆಟ್ ಇಟ್ಟು ಉಡಾಯಿಸುವಂತಿರಲಿಲ್ಲ. ಎಡಬಲ, ಹಿಂದಕ್ಕೆ ಆಗಲೇ ಕಟ್ಟಿದ್ದ ಬಹುಅಂತಸ್ತಿನ ಮನೆಗಳ ಪಾಯಕ್ಕೆ ಅಪಾಯವಾಗುವ ಎಲ್ಲಾ ಸಾಧ್ಯತೆಗಳಿದ್ದವು.  

ಅನಂತ – ಸತ್ಯನಾರಾಯಣರಿಗೆ ಧೈರ್ಯ ತುಂಬಿ, ಆಂಧ್ರಪ್ರದೇಶದಿಂದ ಬಂಡೆ ಬಗೆಯುವ ಕಲ್ಲುಕುಟಿಗರನ್ನು ಕರೆಸಿ, ಹುಳಿ ಸುತ್ತಿಗೆಯಿಂದ ಅಲ್ಲಲ್ಲಿ ರಂಧ್ರ ಕೊರೆದು ಬಿಟ್ಟ ಬಿರುಕುಗಳಲ್ಲಿ ಚಾಣಗಳನ್ನು ಇಟ್ಟು ಸುತ್ತಿಗೆಯಿಂದ ಬಡಿದು ತುಂಡುತುಂಡಾಗಿ ಬಂಡೆಯನ್ನು ತೆಗೆಯುವ ವ್ಯವಸ್ಥೆ ಮಾಡಿದ. ಹಾಗೆ ಕಲ್ಲುಗಳನ್ನು ತೆಗೆದು ಸೈಟನ್ನು ಸಪಾಟು ಮಾಡುವುದು ಸಾಹಸದ ಕೆಲಸವಾಗಿ ಕಷ್ಟಸಾಧ್ಯವಾಗಿತ್ತು. ಆದರೆ, ಅನಂತನ ಇಚ್ಛಾಶಕ್ತಿ ಬದ್ಧತೆಯಿಂದ ಕೆಲಸ ನಿರಂತರ ಸಾಗಿತು.  

ಆದರೆ, ದಿನವಿಡೀ ಕಲ್ಲು ಕುಟ್ಟುವ ಸದ್ದು ತಂತಮ್ಮ ತಲೆ ಕುಟ್ಟಿದಂತಾಗಿ ರೋಸೆದ್ದ ಅಕ್ಕಪಕ್ಕ ಮನೆಯವರು ಕೆಲಸ ನಿಲ್ಲಿಸಬೇಕೆಂದು ಗಲಾಟೆ ಮಾಡತೊಡಗಿದರು. ಸಮಜಾಯಿಷಿ ಹೇಳ ಹೋದ ಅನಂತನ ಮೇಲೆ ಎರಗಿದ – ವಿದ್ಯಾವಂತರಂತೆ ಕಂಡ ಮಧ್ಯವಯಸ್ಕ ಹೆಂಗಸರು, ಗಂಡಸರ ಕೆಟ್ಟಮಾತಿನ ದಾಳಿಗೆ ಅವನ ಬಾಯಿ ಕಟ್ಟಿ ತೆಪ್ಪಗಾಗುವಂತಾಯಿತು. 

ಅಲ್ಲೊಬ್ಬ ಅದೇ ಬೀದಿಯ ಯುವಕ ದಿನಾಲೂ ಒಂದರ್ಧ ತಾಸು ಸೈಟಿನ ಎದುರಿಗೆ ನಿಂತು ಬಂಡೆ ಸಡಿಲಿಸುವ ಕೆಲಸವನ್ನು ಮೆಚ್ಚುಗೆ, ಕುತೂಹಲದಿಂದ ನೋಡುತ್ತಿದ್ದವನು. ಆ ದಿನ ಅನಂತ ಮತ್ತು ಕಲ್ಲುಕುಟಿಗರ ಮೇಲೆ ಮಧ್ಯಾಹ್ನದ ಹೊತ್ತು ಗಳಿಗೆ ನಿದ್ದೆ ಮಾಡಲು ಆಸ್ಪದವಿಲ್ಲವೆಂದು ಅಕ್ಕಪಕ್ಕದವರು ಜಗಳಕ್ಕೆ ನಿಂತದ್ದನ್ನು ಗಮನಿಸಿದ. ಮಾತಿಗೆ ಮಾತು ಬೆಳೆದು ಸ್ಥಳೀಯನೊಬ್ಬ ಅನಂತ ಮೇಲೆ ಕೈಮಾಡಲು ಹೋದಾಗ ಓಡಿ ಬಂದ ಯುವಕ ಅಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡ. “ಅಲ್ರೀ…ಅವ್ರ ಜಾಗದಲ್ಲಿ ಅವ್ರು ಕೆಲ್ಸ ಮಾಡ್ತಿದ್ದಾರೆ. ಮನೆ ಕಟ್ಟೋವಾಗ ಸೌಂಡ್ ಆಗೊಲ್ವ? ಯಾಕೆ…ನೀವುಗಳು ಹೀಗೆ ಬಂಡೆಗಳನ್ನು ಒಡೆದು ತಾನೇ ಮನೆ ಕಟ್ಟಿದ್ದು? ಆಗ ಶಬ್ಧ ಆಗ್ಲಿಲ್ವ? ಸ್ವಲ್ಪ ಸಿವಿಲೈಜ್ಡ್ ಆಗಿ ಬಿಹೇವ್ ಮಾಡಿ. ಇದೇ ರೋಡಿನಲ್ಲಿ ನನ್ನಕ್ಕನ ಮನೆ ಸಹ ಬಂಡೆಗಳನ್ನು ಒಡ್ದೆ ಕಟ್ಟಿದ್ದು” ಅಂತದ್ದು, “ನೋಡ್ರಿ…ಇಂಜಿನಿಯರ್ರೇ…ಬೇಕಾದ್ರೆ ಮಧ್ಯಾಹ್ನ ಒಂದ್ ಅವರ್ ಅವ್ರು ಮಲಗೋ ಹೊತ್ತಲ್ಲಿ ಕೆಲ್ಸ ನಿಲ್ಸಿ…” ಅಂದಾಗ ಅನಂತ ಆಗಲೆಂಬಂತೆ ತಲೆಯಾಡಿಸಿದ. ಯುವಕನ ಜೋರು ಮಾತಿಗೆ ಮರು ಮಾತಾಡದೆ ಜಗಳಕ್ಕೆ ನಿಂತವರು ಅಲ್ಲಿಂದ ಕಾಲ್ತೆಗೆದರು.  

ಹಾಗೆ ಪರಿಚಯವಾದ ಪ್ರಸಾದ್ – ಗಿರಿನಗರದಲ್ಲಿ ಹಠತೊಟ್ಟು, ಬೆಟ್ಟಹಾಸನ್ನು ಸವರಿ ಅಚ್ಚುಕಟ್ಟಾಗಿ ಮನೆ ಕಟ್ಟಿದ ಅನಂತನ ಕೆಲಸದ ಬದ್ಧತೆಯನ್ನು ಮೆಚ್ಚಿ, ತನ್ನಪ್ಪ ಬರೆದಿಟ್ಟ ಉಯಿಲಿನಂತೆ ಗಾಂಧೀಬಜಾರಲ್ಲಿನ ಸೈಟಿನಲ್ಲಿ ತನಗೂ, ಇಬ್ಬರು ಅಕ್ಕಂದಿರಿಗೂ ಸೇರಿ ಮನೆಕಟ್ಟಲು ಕೋರಿದ್ದ. 

ಮನೆ ಕಟ್ಟಲು ಬೇಕಾದ ನಕ್ಷೆ ರಚಿಸುವ ಮುಂಚೆ ಮೊದಲ ಬಾರಿಗೆ ಅನಂತ ಅವರಿದ್ದ ಮನೆಗೆ ಭೇಟಿ ಇತ್ತಾಗ, ಪ್ರಸಾದ್ ಮಾತಾಡಿದ ಧಾಟಿ ವಿಚಿತ್ರವೆನಿಸಿತು.

“ನೋಡಿ ಅನಂತ್…ಪ್ಲಾನ್ ಬರಿಯೋಕ್ಕೆ ಮುಂಚೆ ಒಂದ್ ವಿಶ್ಯ ನಿಮ್ಮತ್ರ ಹೇಳ್ಬೇಕು. ಪರ್ಸನಲ್ ವಿಶ್ಯ….ಆದ್ರು ಪರವಾಗಿಲ್ಲ…ನೀವೂ ನಮ್ಗೆ ಗೊತ್ತಿರೋರೆ…ನಮ್ ಇಬ್ರು ಅಕ್ಕಂದಿರು ಇದ್ದಾರಲ್ಲ ಚೆನ್ನಾಗೇ ಇದ್ದಾರೆ. ಸ್ವಂತ ಮನೆ ಇದೆ. ಒಬ್ಳು ಬ್ಯಾಂಕ್ ಮ್ಯಾನೇಜರ್…ಮತ್ತೊಬ್ಳು ಐಟಿಯಲ್ಲಿ ಕೆಲ್ಸ ಮಾಡ್ತಾಳೇ. ಕೈತುಂಬ ಸಂಬಳ. ಅಲ್ದೆ ಅವ್ರ ಮಕ್ಳು ಸ್ಟೇಟ್ಸಲ್ಲಿ ದುಡೀತಾರೆ. ಆದ್ರೂ ಬಾಡಿಗೆ ಮನೇಲಿ ಇರೋ ನಾನು ಸ್ವಂತ ಮನೆ ಕಟ್ಟೋದು ಅವರಿಗಿಷ್ಟವಿಲ್ಲ. ಅಪ್ಪ ಏನೋ ವಿಲ್ ಮಾಡಿದ್ದಾರೆ…ನಿಜ. ಆದ್ರೆ ಐದಾರು ಮನೆಗಳನ್ನು ಕಟ್ಟಿ ಬಾಡಿಗೆ ಬಿಟ್ಟಿರೋರು ಪೂರ್ತಿ ಸೈಟ್ನ ನನ್ನ ಹೆಸರಿಗೆ ಮಾಡ್ಬಹುದಿತ್ತು. ಅವರದ್ದು ದುರಾಸೆ. ಅಲ್ಲೂ ಅವರಿಗೆ ಮನೆ ಬೇಕಂತೆ…ಅವರೇನು ಅಲ್ಲಿ ಇರೋದಿಲ್ಲ. ಬಾಡಿಗೆ ಕೊಡ್ತಾರೆ. ನಮ್ ಪ್ರೈವೇಸಿ ಹಾಳಾಗುತ್ತೆ. ಏನು ಮಾಡೋದು?” ಅಂದಾಗ ಅನಂತನಿಗೆ ಹೇಗೆ ಪ್ರತಿಕ್ರಯಿಸಬೇಕೆಂದು ತೋಚದೆ ತುಟ್ಟಿ ಬಿಚ್ಚಲಿಲ್ಲ. ಮನೆ ಕಟ್ಟೋ ವಿಚಾರದ ಜೊತೆಗೆ ಕುಟುಂಬದವರ ವೈಯಕ್ತಿಕ, ವೈಮನಸ್ಸುಗಳನ್ನು ಕಾರಿಕೊಂಡಿದ್ದಕ್ಕೆ ಇರುಸುಮುರುಸುಗೊಳಗಾದ.  

ನೆಲ ಅಂತಸ್ತಿನಲ್ಲಿ ಕಾರು ಪಾರ್ಕಿಂಗ್ ಮತ್ತು ಒಂದು ರೂಮಿವಿರುವ ಮನೆ – ಬಾಡಿಗೆ ಕೊಡಲು. ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಅಕ್ಕಂದಿರಿಗೆ ಮನೆಗಳು, ಮೂರು ಮತ್ತು ನಾಲ್ಕನೇಯ ಅಂತಸ್ತಿನಲ್ಲಿ ತಾನಿರಲು ಡ್ಯೂಪ್ಲೆಕ್ಸ್ ಮನೆಗೆ ನಕ್ಷೆ ತಯಾರು ಮಾಡಲು ಪ್ರಸಾದ್ ತಿಳಿಸಿ, ಜೊತೆಗೆ ಲಿಫ್ಟ್ ಸೌಲಭ್ಯವನ್ನು ಮೂರನೇ ಅಂತಸ್ತಿಗೆ ನಿಲ್ಲಿಸಲು ಹೇಳಿದ. “ಲಿಫ್ಟ್ ಟೆರೇಸಿನವರೆಗು ಬೇಡ. ಅಕ್ಕಂದಿರ ಮನೆ ಬಾಡಿಗೆದಾರರು ಟೆರೇಸಿಗೆ ಬಂದರೆ ನಮ್ ಪ್ರೈವೇಸಿಗೆ ತೊಂದರೆಯಾಗುತ್ತೆ. ಈ ವಿಷಯವನ್ನು ಅಕ್ಕಂದಿರಲ್ಲಿ ಚರ್ಚಿಸಬೇಡಿ” ಎಂದು ಪರೋಕ್ಷವಾಗಿ ಅದು ಗೋಪ್ಯವಾಗಿರಲಿ ಅಂದ. ಅನಂತನಿಗೆ ಕಟ್ಟಡ ಒಂದೇ ಆಗಿರುವಾಗ ಪ್ರಸಾದನ ಮನೆಯ ನಕ್ಷೆಯನ್ನಾಗಲಿ ಅಥವಾ ಲಿಫ್ಟನ್ನು ಮೂರನೇ ಅಂತಸ್ತಿಗೆ ಸೀಮಿತಗೊಳಿಸುವುದಾಗಲಿ ಅವನ ಅಕ್ಕಂದಿರಿಗೆ ತಿಳಿಯದಂತೆ ಗುಟ್ಟಾಗಿ ಇಡಲು ಸಾಧ್ಯವೇ? ಎನಿಸಿತು. 

ವಾಸ್ತುಪುರುಷನೊಂದಿಗೆ ಗುದ್ದಾಡಿ, ತಿಣುಕಾಡಿ ನೆಲ ಅಂತಸ್ತು ಮತ್ತು ಪ್ರಸಾದನ ಡ್ಯೂಪ್ಲೆಕ್ಸ್ ಮನೆಗೆ ಮೊದಲ ನಕ್ಷೆಯನ್ನು  ತಯಾರಿಸಿ ಅನಂತ ಹಾಜರು ಪಡಿಸಿದ. ಎರಡಂತಸ್ತಿನ ಡ್ಯೂಪ್ಲೆಕ್ಸ್ ಮನೆಯ ಕೆಳಭಾಗದಲ್ಲಿ ಅಡುಗೆ, ಅತಿಥಿಗಳಿಗೆಂದು ಒಂದು ರೂಮು ಅದಕ್ಕೆ ಹೊಂದಿಕೊಂಡಂತೆ ಬಚ್ಚಲು, ಹಾಲು, ಡೈನಿಂಗ್, ಎಲ್ಲರಿಗೆಂದು ಒಂದು ಪ್ರತ್ಯೇಕ ಬಚ್ಚಲು, ಪುಟ್ಟ ಪೂಜಾ ಸ್ಥಳ ಮತ್ತು ಮೇಲ್ಭಾಗದಲ್ಲಿ ಎರಡು ವಿಸ್ತಾರವಾದ ರೂಮು ಅದಕ್ಕೆ ಹೊಂದಿಕೊಂಡಂತೆ ಬಚ್ಚಲು, ಕೂತು ಹರಟೆ ಹೊಡೆಯಲು ಫ್ಯಾಮಿಲಿ ಜಾಗವೂ ಇದ್ದ ನಕ್ಷೆಯನ್ನು ಚೆನ್ನಾಗಿದೆಯೆಂದು ಪ್ರಸಾದ್ ಪ್ರಶಂಸಿಸಿದ. ಆದರೆ, ಐಟಿ ವಿಷಯದಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಅವರ ಮಗರಾಮ ಬಂದು ತನ್ನ ರೂಮು ಹೀಗಿರಬೇಕೆಂದು ಇಂಟರ್ನೆಟ್ಟಿನಲ್ಲಿ ಭಟ್ಟಿ ಇಳಿಸಿಕೊಂಡ ಒಂದು ಡ್ರಾಯಿಂಗನ್ನು ಮುಂದು ಮಾಡಿದ. ಅದರಲ್ಲಿ ರೂಮಿನ ಅಳತೆ ಅನಂತನ ನಕ್ಷೆಗಿಂತ ವಿಸ್ತಾರವಾಗಿದ್ದು ಬಚ್ಚಲಲ್ಲಿ ಬಾತ್ ಟಬ್ಬಿಗೂ ಜಾಗವಿತ್ತು. 

“ಅಯ್ಯೋ..ನೀವು ಸರಿಯಾಗಿ ನೋಡಿಲ್ಲ. ಈ ಡ್ರಾಯಿಂಗ್ ನಲವತ್ತು ಅರವತ್ತು ದೊಡ್ಡ ಸೈಟಿನದು. ನಮ್ಮ ಚಿಕ್ಕ ಸೈಟಿಗೆ ಹೊಂದಿಕೆಯಾಗುವುದಿಲ್ಲ” ಅಂದರೆ, ಮಗ ಒಪ್ಪಲಿಲ್ಲ. ತನಗೆ ಅದೇ ರೀತಿ ಇರಬೇಕೆಂದು ಪರೋಕ್ಷವಾಗಿ ಅನಂತನ  ಕೌಶಲ್ಯವನ್ನು ಶಂಕಿಸಿದ. ಅಷ್ಟರಲ್ಲಿ ತನ್ನ ಬೇಡಿಕೆ ಇಡಲು ಕಾಯುತ್ತಿದ್ದ ಪ್ರಸಾದನ ಶ್ರೀಮತಿ, “ಅಡುಗೆ ಮನೆ ಅಗ್ನಿಮೂಲೆಯಲ್ಲೇ ಮಾಡಿದ್ದೀರಾ….ಚೆನ್ನಾಗಿದೆ. ಆದ್ರೆ, ಮನೆಕೆಲಸದವಳು ಪಾತ್ರೆ ತಿಕ್ಕೋಕೆ ಕಿಚ್ಚನ್ನಿಂದಲೇ ಯುಟಿಲಿಟಿಗೆ ಹೋಗ್ಬೇಕು. ಅದು ನಮ್ಗೆ ಸರಿಬರಲ್ಲ. ಮನೆ ಹೊರಗಿನಿಂದಲೇ ಬಂದು ಬಟ್ಟೆ ಪಾತ್ರೆ ಮಾಡಿ ಹೋಗೋತರ ಪ್ಲಾನ್ ಮಾಡಿ” ಅಂದಳು. 

“ನೋಡಿ…ನಮ್ಮ ಸೈಟಿನ ಅಳತೆಗೆ ತಕ್ಕಂತೆ ಪ್ಲಾನ್ ಮಾಡ್ಕೊಬೇಕು. ಚಿಕ್ಕಸೈಟಿನಲ್ಲಿ ನಮ್ಮೆಲ್ಲಾ ಅಗತ್ಯಗಳನ್ನು ಪೂರೈಸುವುದು ಕಷ್ಟ. ಸುಮ್ನೆ ಮಾತಿಗೆ ಹೇಳ್ತಿನಿ. ಮನೆಕೆಲಸದವಳು ಗುಡಿಸೋಕೆ, ಸಾರಿಸೋಕೆ ಮನೆಯೊಳಗೆ ಬಂದೇ ಬರ್ತಾರಲ್ವ…” ಅಂದರೆ, ಶ್ರೀಮತಿಗೆ ಅನಂತನ ಮಾತಿನಲ್ಲಿ ಕೊಂಕು ಕಂಡು “ಅದು ಹೇಗೆ? ಮನೆಗೆ ಬರೋದು ಬೇರೆ…ಕಿಚ್ಚನ್ನೊಳ್ಗೆ ಬಿಟ್ಕೊಳೋದು ಬೇರೆ…” ಎಂದಳು ಹುಸಿಮುನಿಸಿನಿಂದ. “ಆಯ್ತು ಮೇಡಮ್…ಮತ್ತೊಂದು ಡ್ರಾಯಿಂಗ್ ಟ್ರೈ ಮಾಡ್ತೇನೆ” ಎಂದು ತಟ್ಟೆಯಲ್ಲಿದ್ದ ಚಕ್ಕುಲಿ ತಿಂದು, ತಣ್ಣಗಾದ ಕಾಫಿ ಹೀರಿ ಮತ್ತೊಂದು ನಕ್ಷೆ ರಚಿಸೋದು ಹೇಗೆಂದು ತಲೆ ಕೆರೆದುಕೊಂಡ.

ಪ್ರಸಾದನ ಮನೆ ಪ್ಲಾನು ಮೂರ್ನಾಲ್ಕು ಬಾರಿ ಹಲವು ತಿದ್ದುಪಡಿಗಳೊಂದಿಗೆ ಕೊನೆಗೂ ಸಂತೃಪ್ತಿಯಾಗಿ ಅಲ್ಲದಿದ್ದರೂ ಸಮಾಧಾನಕರವಾಗಿದೆಯೆಂದು ಅವನ ಕುಟುಂಬದವರು ಒಪ್ಪಿದಾಗ ಅನಂತ ಉಸ್ಸಪ್ಪ ಎಂದ. ಇನ್ನು ಪ್ರಸಾದನ ಅಕ್ಕಂದಿರ ಮನೆಗಳ ನಕ್ಷೆಗಳನ್ನು ತಯಾರು ಮಾಡಬೇಕು. ಅವರ ಅಗತ್ಯಗಳು ಇನ್ನು ಯಾವ ಪಾಟಿ ಇರುತ್ತದೋ ಎಂಬ ಆತಂಕದಲ್ಲೇ ಗಿರಿನಗರದ ಅವರ ಮನೆಗೆ ಕಾಲಿಟ್ಟ. 

ಗಂಭೀರವದನರಾಗಿದ್ದ ಅಕ್ಕಂದಿರು ಪ್ರಸಾದ್ ಮನೆಯವರಂತೆ ಮುಕ್ತರಾಗಿ ಮಾತಾಡದೆ, ಪ್ರತಿ ಮಾತನ್ನು ಅಳೆದು ಸುರಿದು ಮಾತಾಡುವುದನ್ನು ಕಂಡ ಅನಂತ ತನ್ನ ಮಾತಿನ ಲಹರಿಗೆ ಕಡಿವಾಣ ಹಾಕಿದ. ಸೀದಾ ಮನೆಯ ಪ್ಲಾನಿನ ಬಗ್ಗೆ ಮಾತಾಡದೇ “ನಿಮ್ಮದು ಯಾವ ಊರು? ಯಾವ ಜನ? ಓದಿದ್ದೆಲ್ಲಿ? ಬಿಲ್ಡಿಂಗ್ ಕಾಂಟ್ರಾಕ್ಟಲ್ಲಿ ಎಷ್ಟು ವರ್ಷಗಳ ಅನುಭವ? ಎಷ್ಟು ಮನೆಗಳನ್ನು ಕಟ್ಟಿದ್ದೀರಾ?…” ಇತ್ಯಾದಿ ಪ್ರಶ್ನೆಗಳನ್ನು ಎಸೆಯುತ್ತಿದ್ದರೆ ಅನಂತನಿಗೆ ಕೆಲಸ ಹುಡುಕಿ ಸಂದರ್ಶನಕ್ಕೆ ಬಂದ ಅನುಭವವಾಯಿತು. ಎಲ್ಲಕ್ಕೂ ಸಮಾಧಾನದಿಂದ ಉತ್ತರ ಕೊಡುತ್ತಿದ್ದವನಿಗೆ “ನಿಮಗೂ ಪ್ರಸಾದನಿಗೂ ಹೇಗೆ ಪರಿಚಯ? ಎಷ್ಟು ವರ್ಷದಿಂದ?” ಎಂದು ಕೇಳಿದಾಗ ಪ್ರಶ್ನೋತ್ತರ ಪೊಲೀಸರ ವಿಚಾರಣೆಯಂತೆ ಬದಲಾಗಿದ್ದು ಇದ್ಯಾಕೊ ಅತಿಯಾಯ್ತು ಎನಿಸಿತು.  “ನಿಮ್ಮ ಮನೆ ರೋಡಿನಲ್ಲಿರೋ ಸತ್ಯನಾರಾಯಣರ ಮನೆ ನಾನೇ ಕಟ್ಟಿದ್ದು. ಅಲ್ಲಿ ಬಂಡೆ ಒಡೆಯುವಾಗ ಸಿಕ್ಕಿದ್ರು. ಆಗ್ಲಿಂದ್ಲೇ ಗೊತ್ತು” ಎಂದಷ್ಟೇ ಹೇಳಿದ. ಪ್ರಸಾದನ ಮನೆ ಪ್ಲಾನಿನ ಬಗ್ಗೆ ವಿವರ ಕೇಳಿದಾಗ ಸಂಕ್ಷಿಪ್ತವಾಗಿ ವಿವರಿಸಿ ಇನ್ನೆಲ್ಲಿ ಅದನ್ನು ತೋರಿಸು ಅಂತಾರೊ ಎಂದು, “ಅದನ್ನು ಇನ್ನು ಮಾಡಿಲ್ಲ. ಬಿಲ್ಡಿಂಗ್ ಒಂದೇ ಅಲ್ವಾ…. ನಿಮ್ಮ ಮನೆಗಳ ಜೊತೆ ಶುರುಮಾಡ್ಬೇಕು” ಎಂದು ಬೂಸಿ ಬಿಟ್ಟ. 

ಬೆಳಿಗ್ಗಿನಿಂದ ಕಾರಿನಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ, ಬಡವಾಣೆಯಿಂದ ಬಡವಾಣೆಗೆ ತಿರುಗಿ ಮಧ್ಯಾಹ್ನವಾಗುತ್ತ ಬಂದು ಅನಂತನಿಗೆ ಹೊಟ್ಟೆ ಕಾವ್ ಕಾವ್ ಅನ್ನುತ್ತಿತ್ತು. ಸಿವಿಲ್ ಇಂಜಿನಿಯರ್ನ ಹಂಗಿಲ್ಲದೆ ನಿಷ್ಟ, ಪ್ರಾಮಾಣಿಕ ಮೇಸ್ತ್ರಿಯೊಬ್ಬನನ್ನು ನೆಚ್ಚಿಕೊಂಡು ತಾವು ಕಟ್ಟಿದ ಮನೆಗಳು ಹೇಗಿವೆಯೆಂದು ನೋಡಬೇಕೆಂದು ಅಕ್ಕಂದಿರು ಅನಂತನನ್ನು ಕಾರಿನಲ್ಲಿ ಕೂಡಿಸಿಕೊಂಡು ಬೆಂಗಳೂರಿನಲ್ಲಿ ಮೆರವಣಿಗೆ ಹೊರಟಿದ್ದರು. ಲಿಂಟಲ್, ಬೀಮ್, ಪ್ರಪೋಶನ್, ಟೆನ್ಶನ್, ಕಂಪ್ರೇಶನ್, ಕ್ಯೂರಿಂಗ್, ಬಾರ್ ಬೆಂಡಿಂಗ್, ಪ್ಲಂಬಿಂಗ್…ಇತ್ಯಾದಿ ಸಿವಿಲ್ ಇಂಜಿನಿಯರಿಂಗ್ ಪರಿಭಾಷೆಗಳನ್ನು ಪುಂಖಾನುಪುಂಖವಾಗಿ ಉದುರಿಸುತ್ತ ತಮಗೂ ಕಟ್ಟಡ ನಿರ್ಮಾಣದ ಪಾಂಡಿತ್ಯವಿದೆಯೆಂದು ತೋರುವುದಕ್ಕೋ? ಅಂಥ ನಿಪುಣತೆಯಿರುವುದರಿಂದಲೇ ಐದಾರು ಕಟ್ಟಡಗಳನ್ನು ಕಟ್ಟಿದ್ದೆವೆಂಬ ಜಂಭವೋ? ಅಥವಾ ತಮ್ಮ ಮನೆಯ ನಕ್ಷೆಯನ್ನು ತಯಾರು ಮಾಡುವಾಗ ತಾವು ಕಟ್ಟಿದ ಮನೆಗಳಿಗಿಂತಲೂ ಚೆಂದದ ಪ್ಲಾನನ್ನು ಸಿದ್ಧಪಡಿಸುವ ಸಾಮರ್ಥ್ಯ ಇದೆಯೋ? ಎಂಬ ಸವಾಲನ್ನು ಎಸೆಯುವಂತೆ ಕಟ್ಟಡಗಳ ವೀಕ್ಷಣೆ ಸಾಗಿತ್ತು. 

ಒಂದೊಂದೇ ಕಟ್ಟಡಗಳನ್ನು ನೋಡುತ್ತಿರುವಾಗ ಅನಂತ ಮನಸ್ಸಿನಲ್ಲಿ ಅವರ ಬೌದ್ಧಿಕ ಹುಸಿ ಪ್ರದರ್ಶನಕ್ಕೆ ನಗು ಬರುವಂತಾಯಿತು. ಕಟ್ಟಡಗಳನ್ನು ಇಂಜಿನಿಯರ್ ಉಸ್ತುವಾರಿ ಇಲ್ಲದೆ ಕಟ್ಟಿದ್ದಾರೆಂಬ ಹೆಚ್ಚುಗಾರಿಕೆಯನ್ನು ಬಿಟ್ಟರೆ ನೀಲನಕ್ಷೆಯಿಂದಿಡಿದು ನಿರ್ಮಾಣದ ಗುಣಮಟ್ಟದವರೆಗೂ ಹಲವು ನೂನ್ಯತೆಗಳು ಕಣ್ಣಿಗೆ ರಾಚುವಂತಿದ್ದವು. 

ಒಂದು ಮನೆಯಲ್ಲಿ ಬೆಡ್ ರೂಮನ್ನು ಹಾದು ಅಡುಗೆಕೋಣೆಗೆ ಹೋಗಬೇಕಾದಂಥ ಪರಿಸ್ಥಿತಿ ಇದ್ದರೆ, ಮತ್ತೊಂದು ಮನೆಯಲ್ಲಿ ಹಾಲಿಗೆ ಕಾಣುವಂತೆ ಬಚ್ಚಲು ಇತ್ತು. ಮಗದೊಂದರಲ್ಲಿ ಅಡುಗೆಮನೆಯನ್ನು ವಿಸ್ತರಿಸಿದಂತೆ ರಸ್ತೆಯ ಕಡೆಗಿದ್ದ ಬಾಲ್ಕನಿಯಲ್ಲಿ ಇದ್ದ ಸಿಂಕಲ್ಲಿ ಪಾತ್ರೆ ತೊಳೆದರೆ ನೀರು ರಸ್ತೆಗೆ ಚಿಮ್ಮುತ್ತಿತ್ತು. ಎರಡಡಿ ಅಗಲದ ಇಕ್ಕಟ್ಟಾದ ಮೆಟ್ಟಿಲುಗಳು, ಛಾವಣಿಯಲ್ಲಿ ತಲೆಯ ಮೇಲೆ ಬೀಳುವಂತೆ ಕಾಣುತ್ತಿದ್ದ ಅಡ್ಡಾದಿಡ್ಡಿ ಬೀಮಿನ ತೊಲೆಗಳು, ಅನಗತ್ಯ ಕಾರ್ನೀಸುಗಳು, ಕೆಟ್ಟದಾಗಿ ರಚಿಸಿದ ಕಮಾನುಗಳು ಕಟ್ಟಡದ ಜಾಗದ ಸದ್ಬಳಕೆಯನ್ನು ಹಾಳು ಮಾಡಿತ್ತಲ್ಲದೆ ಕಟ್ಟಡದ ಸೌಂದರ್ಯವನ್ನು ಹಾಳುಗೆಡುವಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮನೆಯ ಒಳ ಅಳತೆ ಹೆಚ್ಚಾಗಬೇಕೆಂಬ ಲೋಭದಿಂದ ಕಟ್ಟಡದ ಹೊರಗೋಡೆ ಮತ್ತು ಸುತ್ತ ಕಾಂಪೌಂಡಿನ ಮಧ್ಯೆ ಸೆಟ್ ಬ್ಯಾಕಿಗೆಂದು ಹೆಚ್ಚು ಜಾಗ ಬಿಟ್ಟಿರಲಿಲ್ಲವಾಗಿ ಗಾಳಿ, ಬೆಳಕಿಗೆ ಆಸ್ಪದವಿರದೆ ಮನೆಗಳು ಬೆಳಗಿನ ಹೊತ್ತಲ್ಲೂ ಕತ್ತಲೆ ಗವಿಯಂತಿದ್ದವು.   

ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತಾವು ಕಟ್ಟಿದ ಕಟ್ಟಡಗಳ ಬಗ್ಗೆ ತಮ್ಮನ್ನೇ ತಾವು ತಾರೀಫು ಮಾಡಿಕೊಳ್ಳುವಾಗ ಅನಂತ ನೂನ್ಯತೆಗಳ ಬಗ್ಗೆ ಹೆಚ್ಚು ಮಾತಾಡದೆ, ವೀಕ್ಷಣೆ ಮುಗಿಸಿ ಹಿಂದಿರುಗುವಾಗ ಇಂಥ ಅರೆಜ್ಞಾನವಂತರೊಂದಿಗೆ ಹೇಗಪ್ಪ ಏಗೋದೆಂದು ಕೊಂಡ. 

ತಾನು ಕೊಟ್ಟ ಪ್ಲಾನುಗಳಾವೂ ಅಕ್ಕಂದಿರಿಗೆ ಸರಿಬರದಾಗ, ಅವರ ನಿರ್ದೇಶನದಂತೆ ಮನೆಯ ನಕ್ಷೆಗಳನ್ನು ಅದೆಷ್ಟು ಗಬ್ಬುಗಬ್ಬಾಗಿ ಕಂಡರೂ ಅನಂತ ಮಾಡಿ ಮುಗಿಸಿ ಕೈತೊಳೆದುಕೊಂಡ. 

ಮನೆಮಂದಿಯ ಮೂರು ಪ್ಲಾನುಗಳನ್ನು ಹಲವು ಬದಲಾವಣೆಗಳಿಂದ ತಿಂಗಳಾನುಗಟ್ಟಲೆ ಸಿದ್ಧಪಡಿಸುವ ಹೊತ್ತಿಗೆ ಅನಂತನಿಗೆ ಸಾಕುಬೇಕಾಯಿತು. ಕೊನೆಗೂ ಅವರುಗಳಿಗೆ ಒಪ್ಪಿಗೆಯಾದಾಗ ಅಂದಾಜು ವೆಚ್ಚವನ್ನು ಲೆಕ್ಕಹಾಕಿ ಕೊಟ್ಟು, ಮುಖ್ಯವಾಗಿ ಸೈಟಿನಲ್ಲಿ ಕಟ್ಟಡದ ಕೆಲಸವನ್ನು ಪ್ರಾರಂಭಿಸಬೇಕೆಂದು ಕೊಂಡು ಆದಿನ ಎಲ್ಲರನ್ನೂ ಒಟ್ಟಿಗೆ ಮೀಟಿಂಗಿಗೆ ಕರೆದ.

ಗಿರಿನಗರದ ಮನೆಯಲ್ಲಿ ಅಕ್ಕಂದಿರು ಸೋಫಾದ ಮೇಲೆ ವಿರಾಜಮಾನರಾಗಿದ್ದರೆ ಅವರ ಗಂಡಂದಿರು ತಮಗೆ ಸಂಬಂಧಿಸದ ವ್ಯವಹಾರವೆಂದು ದೂರ ಕುಳಿತಿದ್ದರು. ಅಕ್ಕಂದಿರ ಎದುರಿಗೆ ಪ್ರಸಾದ್ ಮತ್ತವನ ಹೆಂಡತಿ, ಮಗ ಕೂತು ಬರಬಹುದಾದ ಸಿಡಿಲು, ಗುಡುಗನ್ನು ಎದುರಿಸಲು ಮಾನಸಿಕ ಸಿದ್ಧತೆ ನಡೆಸಿದ್ದರು. ಅನಂತ ಬಂದೊಡನೆ ಆ ವರ್ತುಲದಲ್ಲಿ ಕುಳಿತು ಲ್ಯಾಪ್ಟಾಪಿನ ಬ್ಯಾಗಿನಿಂದ ಅಂದಾಜು ವೆಚ್ಚದ ದಸ್ತಾವೇಜನ್ನು ತೆಗೆದು ಅದನ್ನು ವಿವರಿಸಲು ಮುಂದಾದ. ಅಷ್ಟೊತ್ತಿಗೆ, ಸಾಫ್ಟ್ ವೇರ್ ಅಕ್ಕ “ಸ್ವಲ್ಪ ತಾಳಿ….ಎಷ್ಟಿಮೇಶನನ್ನು ಆಮೇಲೆ ನೋಡೋಣ. ಬಿಲ್ಡಿಂಗ್ನ ಕಂಪ್ಲೀಟ್ ಪ್ಲಾನ್….ಮತ್ತೆ ಫ್ರಂಟ್ ಇಲಿವೇಶನ್ ಡಿಸೈನ್ ಹೇಗಿದೆ ಅಂತ ನೋಡಿಲ್ಲ. ಒಮ್ಮೆ ನೋಡೋಣ…ಕೊಡಿ” ಅಂದರು. 

ತನ್ನತ್ತಲೇ ಪ್ರಸಾದ ನೋಡುತ್ತಿರುವುದನ್ನು ಗಮನಿಸಿದ ಅನಂತ, ಮೊದಲೇ ಅಂದುಕೊಂಡಂತೆ ಇದು ಯಾವತ್ತಿದ್ದರೂ ಗೊತ್ತಾಗುವ ಬಚ್ಚಿಟ್ಟ ಬಸುರಿನ ಗುಟ್ಟು. ರಟ್ಟಾಗಲೇ ಬೇಕಿತ್ತು. “ಅದಕ್ಕೇನು ನೋಡಿ”…ಇದು ಕತೆಯ ಕ್ಲೈಮ್ಯಾಕ್ಸ್ ಎಂದುಕೊಂಡು ಕಟ್ಟಡದ ಎಲ್ಲಾ ಅಂತಸ್ತಿನ ನಕ್ಷೆಗಳನ್ನು ಅವರ ಕೈಗಿತ್ತ.

ಅಕ್ಕಂದಿರಿಬ್ಬರು ನೆಲ ಅಂತಸ್ತಿನಿಂದಿಡು ತಾರಸಿವರೆಗೂ ಎಲ್ಲಾ ನಕ್ಷೆಗಳನ್ನು ತಮ್ಮತಮ್ಮಲ್ಲೇ ಪಿಸುಪಿಸು ಮಾತಾಡುತ್ತ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದರು. ಲಿಫ್ಟು ಸೌಕರ್ಯವನ್ನು ಮೂರನೇ ಮಹಡಿಗೆ ನಿಲ್ಲಿಸಿದ್ದನ್ನು ಪ್ರಶ್ನಿಸಿದರೆ, ಪ್ರಸಾದ್ ಅನುಕೂಲಕ್ಕೆ ಮಾಡಿದ್ದೇನೆಂಬ ಆರೋಪ ತನ್ನ ಮೇಲೆ ಬಾರದಂತೆ ಹೇಗೆ ನಿಭಾಯಿಸುವುದೆಂದು ಅನಂತ ಯೋಚಿಸುತ್ತಿದ್ದ.

ಸುಮಾರು ಹೊತ್ತು ನೋಡಿದ ಮೇಲೆ ಬ್ಯಾಂಕ್ ಮ್ಯಾನೇಜರ್ ಅಕ್ಕ “ಎಲ್ಲಾ ಚೆನ್ನಾಗಿ ಬಂದಿದೆ. ಆದರೆ, ಫ್ರಂಟ್ ಎಲಿವೇಶನ್ ಇನ್ನೂ ಡಿಫರೆಂಟಾಗಿ ಮಾಡಬಹುದಿತ್ತು” ಎಂದು ತಮ್ಮ ಕಟ್ಟಡ ನಿರ್ಮಾಣದ ಕಲ್ಪನೆಗೆ ತಕ್ಕನಾಗಿ ಬಂದಿಲ್ಲವೆಂದು ವ್ಯಂಗ್ಯ ನುಡಿದಳು. ಅಷ್ಟೇ ತಾನೇ ಸಧ್ಯ ಗಂಡಾಂತರ ತಪ್ಪಿತಲ್ಲ ಎಂದು ಅನಂತ, ಪ್ರಸಾದ್ ಪರಸ್ಪರ ಮುಖ ನೋಡಿಕೊಂಡರು. ಅಷ್ಟರಲ್ಲಿ ಸಾಫ್ಟ್ ವೇರ್ ಅಕ್ಕ “ತಾಳಿ…ಸ್ವಲ್ಪ ತಾಳಿ” ಎಂದು ಅಕ್ಕಿ ಆರಿಸುವಾಗ ಕಲ್ಲುಚೂರು ಕಂಡಂತೆ “ಇದೇನು ಲಿಫ್ಟಿನ ಹೆಡ್ ರೂಮು ಟೆರೇಸ್ ಡ್ರಾಯಿಂಗಲ್ಲಿ ಕಾಣ್ತಾ ಇಲ್ಲಾ….!” ಎಂದವಳು ಕೊನೆಗೂ ಸಿಕ್ಕಿ ಬಿದ್ದೀರಾ ಎಂಬಂತೆ ಪ್ರಸಾದ್ ಕಡೆ ಒಮ್ಮೆ ನೋಡಿ ಅನಂತನತ್ತ ತಿರುಗಿದಳು.

ಅನಂತ :-  ಮೇಡಮ್…ಅದು…ಲಿಫ್ಟ್ ಟೆರೇಸಿನವರ್ಗೂ ಬರಲ್ಲ. ಥರ್ಡ್ ಫ್ಲೋರ್ನಲ್ಲೇ ನಿಲ್ಲುತ್ತೆ.

ಸಾಫ್ಟ್ ವೇರ್ ಅಕ್ಕ :-  ಅದೇ ಯಾಕೇಂತಾ? ಫಸ್ಟ್ ಫ್ಲೋರ್, ಸೆಕೆಂಡ್ ಫ್ಲೋರಲ್ಲಿ ಇರೋ ನಾವು ಟೆರೆಸ್ಸಿಗೆ ಹೋಗೋದು ಹೇಗೆ? ಬಟ್ಟೆ ಒಣಗಿಸೋದು ಇರುತ್ತೆ. ಕೆಲವೊಮ್ಮೆ ಚಿಕ್ಕ ಪಾರ್ಟಿಗಳನ್ನು ಟೆರೆಸ್ಸಲ್ಲೇ ಮಾಡೋದು. ಅಲ್ಲಿ ವಾಕಿಂಗ್ ಮಾಡಬಹುದು…

ಅನಂತ ( ಬಾಯಾರಿದವನಂತೆ) :- ಮೇಡಮ್…ಲಿಫ್ಟ್ ಟೆರೀಸಿನವರೆಗೂ ಹೋದರೆ ಡ್ಯೂಪ್ಲೆಕ್ಸ್ ಮನೆಗೆ ಜಾಗ ಸಾಕಾಗೋಲ್ಲ.

ಬ್ಯಾಂಕ್ ಮ್ಯಾನೇಜರ್ ಅಕ್ಕ: – ಅಲ್ರೀ…ಅನಂತ್…ಅದೇಂಗ್ರಿ ಐದೈದು ಅಡಿ ಇರೋ ಲಿಫ್ಟ್ ಜಾಗದಿಂದ ಮನೆ ದೊಡ್ದಾಗುತ್ತೆ. ಅಲ್ದೇ ನಮ್ ಮನೆಗಳು ಒಂದೊಂದೇ ಫ್ಲೋರ್ ನಲ್ಲಿ ಇದ್ರೆ….ಇದು ಎರಡು ಫ್ಲೋರ್ಲನ ಮನೆ ಅಲ್ವೇನ್ರಿ?

ಸಾಫ್ಟ್ ವೇರ್ ಅಕ್ಕ( ಸಿಟ್ಟಿನಿಂದ) :- ನಮ್ ಮನೇನು ಎರಡು ಫ್ಲೋರ್ನಲ್ಲಿ ಇರೋ ಹಂಗೆ ಪ್ಲಾನ್ ಮಾಡ್ರೀ!

ಅನಂತ :-  ಅದು ಹೆಂಗ್ ಸಾಧ್ಯ…ಮೇಡಮ್…ಒಟ್ಟು ನಾಲ್ಕು ಫ್ಲೋರಿನ ಪ್ಲಾನ್ಗೆ ಮಾತ್ರ ಗೌರ್ಮೆಂಟ್ ಪರ್ಮಿಶನ್ ಸಿಕ್ಕೋದು..

ಪ್ರಸಾದ್ ( ಗಂಟಲು ಸರಿಮಾಡಿಕೊಂಡು ) :- ಅಕ್ಕ…ನಿಮ್ಗೆಲ್ಲ ದೊಡ್ಡ ದೊಡ್ಡ ಮನೆ ಇದೆ. ಸೈಟು ಚಿಕ್ಕದು ಇರೋದ್ರಿಂದ ಎರಡು ಫ್ಲೋರಲ್ಲಿ ಮನೆ ಪ್ಲಾನ್ ಮಾಡಿರೋದು. ಹೇಗೂ ನೀವ್ ಕಟ್ಟಿದ ಮನೇನಾ ಬಾಡಿಗೆಗೆ ಬಿಡ್ತೀರಾ! ಬಾಡಿಗೆಗೆ ಬಂದೋರು ಟೆರೆಸಿಗೆ ಬಂದ್ರೆ ನಮ್ಗೆ ಪ್ರೈವೇಸಿ ಎಲ್ಲಿರುತ್ತೆ…ಹೇಳಿ?  

ಸಾಫ್ಟ್ ವೇರ್ ಅಕ್ಕ :- ಲಕ್ಷ ಲಕ್ಷ ಖರ್ಚು ಮಾಡಿ ಕಟ್ಟೋ ಮನೆಗೆ ನಾವ್ ಬರಲ್ಲಾಂತ ಯಾವಾಗ್ ಹೇಳುದ್ವಿ…ಪ್ರಸಾದಿ. ಅಪ್ಪ ವಿಲ್ ಮಾಡಿರೋದು ನಾವೆಲ್ಲ ಒಂದೊಂದು ಮಹಡಿಲೀ ಒಂದೇ ಕಡೆ ಇರ್ಲಿ ಅಂತ. ಎರಡು ಅಂತಸ್ತಲ್ಲಿ ಡ್ಯೂಪ್ಲೆಕ್ಸ್ ಮನೇಗೆ ನಾವ್ ಪರ್ಮಿಶನ್ ಕೊಟ್ಟಿರೋದು ಅಂಗಡೀಲೂ ನಮ್ಗೆ ಪಾಲು ಕೊಡ್ತೀಯಾಂತ!

ಅಪ್ಪ ಮಾಡಿದ್ದ ವಿಲ್ ಕೇವಲ ನಿವೇಶನಕ್ಕೆ ಸೀಮಿತವಾಗಿ, ಅಪ್ಪನ ನಂತರ ಪ್ರಸಾದ್ ಯಾಜಮಾನಿಕೆ ಹೊತ್ತು ನಡೆಸುತ್ತಿದ್ದ ಗಾಂಧೀಬಜಾರನಲ್ಲಿದ್ದ ಗ್ರಂಥಿಗೆ ಅಂಗಡಿಯಲ್ಲಿ ನಡೆಯುತ್ತಿದ್ದ ಜೋರು ವ್ಯಾಪಾರ ವಹಿವಾಟು ಅಕ್ಕಂದಿರ ಕಣ್ಣುಕುಕ್ಕಿರುವುದು ಆಶ್ಚರ್ಯ ಪಡುವ ವಿಚಾರವಾಗಿರಲಿಲ್ಲ.  

ಅಲ್ಲಿಯವರೆಗೂ ಹಲ್ಲುಕಚ್ಚಿ ಕೂತಿದ್ದ ಪ್ರಸಾದನ ಶ್ರೀಮತಿ ಅಂಗಡೀಲೂ ಪಾಲು ಕೇಳಿದ್ದರಿಂದ ವ್ಯಗ್ರಗೊಂಡಳು.

ಶ್ರೀಮತಿ ಪ್ರಸಾದ್ :- ಅಲ್ಲ ಅತ್ತಿಗೆ…ನಮ್ ಮನೆ ಕಟ್ಟೋದಿಕ್ಕೆ ನೀವ್ಯಾರ್ ಪರ್ಮಿಶನ್ ಕೊಡೋಕೆ? ಸೈಟಿನಲ್ಲಿ ಪಾಲು ತಗೊಂಡಿದ್ದು ಅಲ್ದೆ ಅಂಗಡೀಲೂ ಪಾಲನ್ನ ಅದ್ಯಾವ ಬಾಯಿಂದ ಕೇಳ್ತಿದ್ದೀರಾ?

ಬ್ಯಾಂಕ್ ಮ್ಯಾನೇಜರ್ ಅಕ್ಕ : – ಯಾಕೆ ಕೇಳ್ತಿದ್ದೀರಾ ಅಂದ್ರೆ!…ಅಪ್ಪನ್ನ ಅಮ್ಮನ್ನ ಕೊನೆಗಾಲದಲ್ಲಿ ನಾವ್ ನೋಡ್ಕೊಂಡಿದ್ದು. ಅವ್ರು ಆಸ್ಪತ್ರೆಲೀ ನರಳುತ್ತಿದ್ದಾಗ ನೀವ್ಯಾರಾದ್ರು ಆ ಕಡೆ ತಲೆ ಹಾಕಿದ್ರಾ? ಅಂಗಡೀಲಿ ಪಾಲು ಕೊಡಲ್ಲ ಅಂದ್ರೆ ಹೆಂಗೆ ತಗೋಬೇಕೂಂತ ನಮ್ಗೂ ಗೊತ್ತು.

ಶ್ರೀಮತಿ ಪ್ರಸಾದ್ :- ನಿಮ್ಗೆ ಒಳ್ಳೊಳ್ಳೆ ಕಡೆ ಕೆಲ್ಸ ಸಿಕ್ಕಿದೆ. ಮಾವನವರು ಇವರನ್ನ ಓದೋದು ಬಿಡ್ಸಿ ಗ್ರಂಥಿಗೆ ಅಂಗಡೀಲಿ ಕೊಳೆಯುವಂಗೆ ಮಾಡ್ದಿದ್ರೆ ಇವ್ರು ಎಂಜಿನಿಯರಿಂಗ್ ಓದಿ ನಿಮ್ಮಂಗೆ ಲಕ್ಷ ಲಕ್ಷ ಸಂಬಳದ ಕೆಲಸಕ್ಕೆ ಸೇರಿಸೋರು. ಅಂಗಡೀಲಿ ತಿಪ್ಪರಲಾಗ ಹಾಕಿದ್ರು ಪಾಲು ಕೊಡೋದಿಲ್ಲ…ಏನ್ ಮಾಡ್ತೀರೊ ಮಾಡ್ಕೊಳ್ಳಿ….

ಕುಟುಂಬ ಸದಸ್ಯರ ಮಾತುಕತೆ ಕಟ್ಟಡದ ನಿರ್ಮಾಣದಿಂದ ವಿಷಯಾಂತರಗೊಂಡು ಆಂತರಿಕ ಕೌಟುಂಬಿಕ ಸಂಗತಿಗಳಿಗೆ ವಾಗ್ಯುದ್ಧವಾಗಿ ಪರಿವರ್ತನೆಯಾದುದನ್ನು ಕಂಡ ಅನಂತ, “ಒಂದ್ನಿಮಿಷ ಬಂದೆ…ಫೋನು ಮಾಡ್ಬೇಕು” ಎಂದು ಸಭೆಯಿಂದ ತಪ್ಪಿಸಿಕೊಂಡು ಆಚೆ ಬಂದ. ಮನೆಯ ನೀಲನಕ್ಷೆಯ ಹಂತದಲ್ಲೇ ಹೀಗೆ ಮಾರಾಮಾರಿಯಾಗಿ,  ಅದರಲ್ಲೂ ತಾನು ಪ್ರಸಾದರಿಗೆ ಅನುಕೂಲವಾಗಿ ನಕ್ಷೆ ತಯಾರಿಸಿದ್ದೆನೆಂದು ಅವರ ಅಕ್ಕಂದಿರು ಸಂಶಯಿಸಿದರೆ ಮುಂದೆ ಕಟ್ಟಡ ನಿರ್ಮಾಣದಲ್ಲಿ ಎಂತೆಂಥ ಸಂಕಷ್ಟಗಳನ್ನು ಎದುರಿಸಬೇಕೊ ಎಂದು ಅನಂತ ಕಳವಳಗೊಂಡ.    

ಹತ್ತಿರದಲ್ಲಿದ್ದ ಗೂಡಂಗಡೀಲಿ ಟೀ ಕುಡಿದು, ಸಿಗರೇಟು ಸೇದುತ್ತ ಆಕಸ್ಮಾತ್ ತಾರಸಿಗೆ ಹೋಗಲು ಲಿಫ್ಟ್ ಬೇಕೇ ಬೇಕೆಂದು ಅಕ್ಕಂದಿರು ಹಟಕ್ಕೆ ಬಿದ್ದರೆ ಏನು ಮಾಡುವುದು? ಸಧ್ಯಕ್ಕೆ ಹೆಣಗಾಡಿ ಮಾಡಿಸಿಕೊಂಡ ನಕ್ಷೆಗಳು ಎಲ್ಲರಿಗೂ ಒಪ್ಪಿಗೆಯಾಗಿದೆ. ಲಿಫ್ಟ್ ಮೇಲಿನವರೆಗೂ ಹೋದರೆ ಡ್ಯೂಪ್ಲೆಕ್ಸ್ ಮನೆಯನ್ನು ಇಷ್ಟು ಅಚ್ಚುಕಟ್ಟಾಗಿ ಮತ್ತೆ ರಚಿಸಲು ಸಾಧ್ಯವಿಲ್ಲದ ಮಾತು ಎಂದು ಯೋಚಿಸುವಾಗ ಏನೋ ಹೊಳೆದಂತಾಯಿತು. ತಾರಸಿಗೆ ತಾವು ಹೋಗಲು ವ್ಯವಸ್ಥೆಯಿರಲೇಬೇಕೆಂದು ಹಟ ಮಾಡಿದರೆ ಕಟ್ಟಡದ ಹಿಂದಿರುವ ಸೆಟ್ ಬ್ಯಾಕಿನಿಂದ ಕಬ್ಬಿಣದ ಮೆಟ್ಟಿಲನ್ನು ಹಾಕಿದರಾಯಿತು ಎಂದು ಯೋಚಿಸಿ, ತನ್ನ ಬುದ್ಧಿವಂತಿಕೆಗೆ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡು ಸಭೆಗೆ ಹಿಂತಿರುಗಿದ. 

ಮನೆಯೊಳಗೆ ಬಂದರೆ ಅನಂತನಿಗೆ ಅಲ್ಲಿ ಕಂಡ ದೃಶ್ಯವನ್ನು ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಈ ಮುಂಚೆ ಜೋರು ಜೋರಾಗಿ ಕೂಗಾಡುತ್ತಿದ್ದವರು ಯಾವ ಈರ್ಷ್ಯೆಯ ಮಾತುಗಳು ವಿನಿಮಯವಾಗಿಲ್ಲವೆನ್ನುವ ಹಾಗೆ, ಟೀಪಾಯಿಯ ಮೇಲಿಟ್ಟಿದ್ದ ಮಂಡಕ್ಕಿಒಗರಣೆಯನ್ನು ಮೆಲ್ಲುತ್ತ, ಟೀ ಹೀರುತ್ತ ಒಬ್ಬೊರನ್ನೊಬ್ಬರು ಹಾಸ್ಯ ಮಾಡುತ್ತ ಹರಟೆ ಕೊಚ್ಚುತ್ತಿದ್ದರು. 

“ಬರ್ರೀ…ಇಂಜಿನಿಯರ್ ಸಾಹೇಬ್ರೆ…ಎಲ್ಲಿಗೆ ಹೋಗ್ಬಿಟ್ರಿ…ಟೀ ಕುಡಿಯೋಕೆ ನಿಮಗಾಗಿ ನಾವೆಲ್ಲ ಕಾಯ್ತಿದ್ವಿ. ಬನ್ನಿ ಕೂಡಿ” ಎಂದು ಸಾಫ್ಟ್ ವೇರ್ ಅಕ್ಕ ನಗುತ್ತಲೇ ಟೀ ಬಸಿದು ಕೊಟ್ಟಳು.

ಸಭೆ ಬರಖಾಸ್ತಾಗಿ….

“ಅನಂತ್… ಟೆರೇಸಿಗೆ ಲಿಫ್ಟ್ ಇರೋ ಬಗ್ಗೆ ನಮ್ಮಲ್ಲೇ ಸ್ವಲ್ಪ ಗೊಂದಲವಿದೆ. ಹೇಗೂ ಸಧ್ಯಕ್ಕೆ ಡ್ರಾಯಿಂಗೆಲ್ಲಾ ಫೈನಲ್ ಆಗಿದೆ. ಅಂಗಡಿ ವಿಶ್ಯದ ಬಗ್ಗೆ ಅಕ್ಕಂದಿರಿಗೆ ಸಮಾಧಾನವಿಲ್ಲ. ಮುಂದೆ ಕನ್ಸ್ ಟ್ರಕ್ಷನ್ ಶುರುವಾದಾಗ ಯಾರ್ದು ತಕರಾರು ಬರಬಾರ್ದು. ಅದಕ್ಕೆ ಈಗ್ಲೆ ನಮ್ಮ ವ್ಯತ್ಯಾಸಗಳನ್ನೆಲ್ಲ ಬಗೆಹರಿಸಿಕೊಳ್ತೀವಿ. ಒಂದಷ್ಟುದಿನ ಟೈಮ್ ಕೊಡಿ. ಯಾವಾಗ ಕೆಲಸ ಶುರುಮಾಡೋದೆಂದು ನಾನೇ ಫೋನ್ ಮಾಡಿ ತಿಳಿಸ್ತೀನಿ” ಎಂದು ಎಲ್ಲರ ಪರವಾಗಿ ಪ್ರಸಾದ್ ಮಾತಾಡಿದ. ಅಲ್ಲಿಗೆ ಜಡಿ ಹಿಡಿದ ಮಳೆ ಬಿಟ್ಟ ಹಾಗಾಯಿತು. 

ಇಷ್ಟುದಿನ ಪ್ರಸಾದರ ಮನೆಯ ನಕ್ಷೆಯ ತಯಾರಿಯಲ್ಲೇ ಹೆಚ್ಚು ಸಮಯ ತೊಡಗಿಸಿಕೊಂಡು, ಕಟ್ಟಡ ನಿರ್ಮಾಣವನ್ನು ಪ್ರಸಾದ್ ಮುಂದೂಡಿದ್ದರಿಂದ ಅದಾಗಲೇ ನಡೆಯುತ್ತಿದ್ದ ಬೇರೆ ಕಟ್ಟಡ ಕೆಲಸಗಳ ಬಗ್ಗೆ ಹೆಚ್ಚು ನಿಗಾ ಇಡಲು ಅನಂತನಿಗೆ ಸಮಯ ಸಿಕ್ಕಂತಾಯಿತು. 

ದಿನಗಳು ಕಳೆದು ವಾರಗಳು ಉರುಳಿ ತಿಂಗಳ ಕಾಲ್ಯೆಂಡರ್ ಮಗುಚಿಕೊಂಡರೂ ಪ್ರಸಾದ್ ಕಡೆಯಿಂದ ಕಟ್ಟಡ ನಿರ್ಮಾಣದ ಬಗ್ಗೆ ಯಾವ ಕರೆ ಬರಲಿಲ್ಲ. ಹಾಗೊಮ್ಮೆ ಪ್ರಸಾದರಿಗೆ ಫೋನು ಮಾಡಿದರೂ “ಎಲ್ರೂ ಬಿಜಿ ಇದ್ದಾರೆ. ಯಾವುದೇ ಇತ್ಯರ್ಥಕ್ಕೆ ಇನ್ನು ಬಂದಿಲ್ಲ, ತಿಳಿಸ್ತೀವಿ” ಎಂಬ ಸಿದ್ಧ ಬರುತ್ತಿತ್ತು. 

ಸುಮಾರು ತಿಂಗಳುಗಳು ಕಳೆದು ವರ್ಷವಾಗುತ್ತ ಬಂದರೂ ಪ್ರಸಾದರ ಕಡೆಯಿಂದ ಯಾವುದೇ ಜವಾಬು ಬರದಾಗ, ಬಹುಶಃ ಅಕ್ಕಂದಿರೊಂದಿಗಿನ ಮನಸ್ತಾಪಗಳು ಬಗೆಹರಿಯದೆ ಕಟ್ಟಡ ನಿರ್ಮಾಣದ ವಿಚಾರವನ್ನು ಕೈಬಿಟ್ಟಿರಬೇಕೆಂದು ಅನಂತ ಊಹಿಸಿ, ಡ್ರಾಯಿಂಗ್ ಮಾಡಲು ಪಟ್ಟ ಶ್ರಮವೆಲ್ಲ ವ್ಯರ್ಥವಾಯಿತೆಂದು ನೊಂದುಕೊಂಡ. ಕಾಲ ಸರಿದಂತೆ ಕಟ್ಟಡ ಕೆಲಸದ ಗಲಾಟೆಯಲ್ಲಿ ಆ ವಿಚಾರವನ್ನು ಮರೆತೂ ಬಿಟ್ಟ.

ಆ ದಿನ ಗಿರಿನಗರದ ಸತ್ಯನಾರಾಯಣ, ತಮ್ಮ ಮನೆಯ ರೂಮಿನ ಛಾವಣಿ ಮಳೆ ಬಂದಾಗ ತೇವಿಸಿಕೊಳ್ಳುತ್ತಿದೆ ಬಂದು ಪರಿಶೀಲಿಸಿ ಪರಿಹಾರ ಸೂಚಿಸಬೇಕೆಂದು ಅನಂತನಿಗೆ ಫೋನು ಮಾಡಿದ್ದರು. ಕೊನೆ ಅಂತಸ್ತಿನ ರೂಮಿನ ಛಾವಣಿಯ ಮೂಲೆಯಲ್ಲಿ ಮಳೆ ಬಂದಾಗ ತೇವಗೊಂಡು, ಸ್ವಲ್ಪ ಜಾಗ ಬಣ್ಣಗೆಟ್ಟಿತ್ತು. ತಾರಸಿಗೆ ಹೋಗಿ ನೋಡಿದರೆ ಅದೇ ಜಾಗದಲ್ಲಿ ಕಟ್ಟಡ ನಿರ್ಮಾಣ ಮುಗಿದ ಮೇಲೆ ಕಕ್ಕುಲಾತಿಯಿಂದ ಇಟ್ಟುಕೊಂಡ ಉಳಿದ ಮರಳುಗುಡ್ಡೆಯಲ್ಲಿ ಮಳೆ ನೀರು ಸೇರಿತ್ತು. ಅದನ್ನು ಅಲ್ಲಿಂದ ತೆಗಿಸಿ ಸಾಕು, ರಿಪೇರಿಯೇನು ಮಾಡುವುದು ಬೇಡವೆಂದು ಹೇಳಿ ಹೊರಡುವಾಗ, ಸತ್ಯನಾರಾಯಣ ಹಾಲಿನ ಟೀಪಾಯ್ ಮೇಲಿದ್ದ ಆಹ್ವಾನ ಪತ್ರಿಕೆಯೊಂದನ್ನು ತೋರಿ “ಕಂಗ್ರಾಂಟ್ಸ್! ತುಂಬಾ ಚೆನ್ನಾಗಿ ಬಿಲ್ಡಿಂಗ್ ಡಿಸೈನ್ ಮಾಡಿದ್ದೀರ” ಅಂದರು.

ಅನಂತನಿಗೆ ತಲೆಬುಡ ಅರ್ಥವಾಗದೆ “ಯಾವ ಬಿಲ್ಡಿಂಗ್ ಸಾರ್?” ಅನ್ನುತ್ತ ಆಹ್ವಾನ ಪತ್ರಿಕೆಯನ್ನು ಬಿಚ್ಚಿ ನೋಡಿದ. ಅವನ ಕೈ ನಡುಗಿ ಕುಸಿದು ಬೀಳುವಂತಾಯಿತು. ಅದೊಂದು ಹೊಸಮನೆಯ ಗೃಹಪ್ರವೇಶದ ಆಹ್ವಾನ ಪತ್ರಿಕೆಯಾಗಿತ್ತು.

ನೆಟ್ಟಕಲ್ಲಪ್ಪ ಸರ್ಕಲ್ಲಿನ ಹತ್ತಿರದ ಗಾಂಧೀಬಜಾರಿನ ಪ್ರಸಾದನ ಸೈಟಿನ ಬಳಿ ಬಂದರೆ ಅಲ್ಲಿ ನಾಲ್ಕಂಸ್ತಿನ ಭವ್ಯ ಕಟ್ಟಡವು ಎದ್ದು ನಿಂತಿತ್ತು. ಕಟ್ಟಡದ ಕೆಲಸಗಾರರು ಮನೆಯ ಮುಂದೆ ಬಿದ್ದಿದ್ದ ಉಳಿದ ಇಟ್ಟಿಗೆ, ಕಾಂಕ್ರೀಟ್ ಬ್ಲಾಕು, ಗ್ರಾನೈಟ್ ತುಂಡುಗಳನ್ನು ಸಾಗಿಸಿ, ಕಟ್ಟಡದ ಕಸದ ರಾಶಿಯನ್ನು ತೆಗೆದು ಸ್ವಚ್ಚಮಾಡುತ್ತಿದ್ದರು. ಗೃಹಪ್ರವೇಶಕ್ಕೆಂದು ಶಾಮಿಯಾನದವರು ಪೆಂಡಾಲು ಹಾಕಿ, ಗೇಟಿನ ಮುಂದೆ ಚಪ್ಪರ ಕಟ್ಟಿ ಹೂಗಳಿಂದ ಅಲಂಕಾರ ಮಾಡುತ್ತಿದ್ದರು. ಬಿಲ್ಡಿಂಗ್ ಮೇಲಿಂದ ಬಣ್ಣಬಣ್ಣದ ಎಲೆಕ್ಟ್ರಿಕ್ ಸೀರಿಯಲ್ ಲೈಟುಗಳು ಇಳೆ ಬಿದ್ದಿದ್ದವು. 

ಅರೆಕ್ಷಣ – ಥೇಟ್ ತಾನು ರಚಿಸಿದ ನಕ್ಷೆಯಂತೆ ಬಿಲ್ಡಿಂಗ್ ಇರುವುದನ್ನು ನೋಡಿ ಅನಂತನಿಗೆ ಖುಷಿಯಾಯಿತಾದರೂ ತಟ್ಟನೆ ಮನದಲ್ಲಿ ನಿರಾಶಭಾವ ಆವರಿಸಿತು. ಪ್ರಸಾದನ ಅಕ್ಕಂದಿರು ಒತ್ತಟ್ಟಿಗಿರಲಿ. ಗೆಳೆಯನಂತಿದ್ದ ಪ್ರಸಾದ್ ಮಾಡಿದ ಡ್ರಾಯಿಂಗಿಗಾದರೂ ದುಡ್ಡನ್ನು ಕೊಡದಿದ್ದದ್ದು ಬೇಸರದ ವಿಚಾರ! ಆದರೆ, ಅದಕ್ಕಿಂತ – ಬೇರೆ ಕಾಂಟ್ರಾಕ್ಟರಿಂದ ಕಟ್ಟಡವನ್ನು ಕಟ್ಟುತ್ತಿದ್ದೇವೆಂಬ ಒಂದು ಮಾತನ್ನು ಸೌಜನ್ಯಕ್ಕಾದರೂ ತಿಳಿಸದ ವಿದ್ಯಾವಂತರ ಸಣ್ಣಬುದ್ಧಿ ಅನಂತನನ್ನು ಬಹುವಾಗಿ ಕಾಡಿತು. ಒಳಗೆ ಹೋಗಿ ಲಿಫ್ಟ್ ಯಾವ ಅಂತಸ್ತಿನವರೆಗು ಇಟ್ಟಿದ್ದಾರೆಂದು ನೋಡಬೇಕೆಂಬ ಕುತೂಹಲ ಉಂಟಾದರೂ, ಉತ್ಸಾಹವಿರದೆ ಬೈಕ್ ಹತ್ತಿ ಅಲ್ಲಿಂದ ಹೊರಟ. 

‍ಲೇಖಕರು Admin

November 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: