ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳುಕೃತಿ ಅತ್ಯಂತ ಜನಪ್ರಿಯ ಬಹುರೂಪಿಈ ಕೃತಿಯನ್ನು ಪ್ರಕಟಿಸಿದೆ. 

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

೨೦೦೯ರ ಮಾರ್ಚ್ ‌೨೦. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲು ಕಲ್ಪಿಸಿಕೊಂಡಿದ್ದ ʼನಮ್ಮ ಮಕ್ಕಳು ನಮ್ಮ ಭವಿಷ್ಯʼ ಎಂಬ ಅಂತರ್ಜಾಲ ವ್ಯವಸ್ಥೆಯ ಪ್ರಯತ್ನದ ಉದ್ಘಾಟನೆ. ಬೆಂಗಳೂರಿನ ಬಾಲಭವನದಲ್ಲಿ ಕಾರ್ಯಕ್ರಮ. ಚೈಲ್ಡ್‌ರೈಟ್ಸ್‌ ಟ್ರಸ್ಟ್‌ ಸಂಸ್ಥೆಗೆ ಈ ಕಲ್ಪನೆಯನ್ನು ಸಾಕಾರಗೊಳಿಸಲು ಬೆಂಬಲ ನೀಡುತ್ತಿದ್ದ ಎವ್ವೆರಿ ಚೈಲ್ಡ್‌ ಸಂಸ್ಥೆಯ ಮುಖ್ಯಸ್ಥ ರಾಮಪ್ಪನವರು ಹಾಗೂ ಗುರುಪ್ರಸಾದ್‌, ಸುಮತಿ, ಪಾಯಲ್‌, ವೀನಸ್, ಚಂದ್ರಮೌಳಿ ಬಹಳ ಉತ್ಸಾಹದಿಂದ ಮುಂದಾಗಿದ್ದರು. ಅಂಕಿಸಂಖ್ಯೆಯ ಸಂಗ್ರಹ ತಂತ್ರಜ್ಞಾನವನ್ನು ಸಿದ್ಧಪಡಿಸುತ್ತಿದ್ದ ಶ್ಯಾಂ ಕೇದಾರ್ ‌ಅವರೊಂದಿಗೆ ಡಾ. ಸಾಮ್ಯುಯಲ್ ‌ಪಾಲ್‌ ಹಾಗೂ ನೀನಾ ನಾಯಕ್‌ ಅವರಿದ್ದರು.

ಆ ಕಾರ್ಯಕ್ರಮಕ್ಕೆ ಸನ್ನಿವೇಶ ಸೃಷ್ಟಿಸಲೊಂದು ಹಾಡು ಬರೆಯಬೇಕೆಂಬ ಹುಕಿ ಮಾರ್ಚ್ ‌ಆರಂಭದಿಂದಲೇ ತಲೆಯಲ್ಲಿ ಸುತ್ತುತ್ತಿತ್ತು. ʼಮಕ್ಕಳ ಲೆಕ್ಕಪಕ್ಕದ ಹಾಡು ಪಾಡುʼ ಸಿದ್ಧ ಮಾಡಿದೆ. ಹಾಡು ಆಧರಿಸಿ ʼಸಮʼ ಸಂಸ್ಥೆಯ ಗೆಳೆಯ ಗೆಳತಿಯರನ್ನೇ ಸೇರಿಸಿಕೊಂಡು ನಾಗಸಿಂಹ ಜಿ. ರಾವ್‌ಗೀತ ನಾಟಕ ಕಲ್ಪಿಸಿಬಿಟ್ಟರು.  ಗೆಳೆಯ ನಾ.ಶ್ರೀನಿವಾಸ್‌(ಪಾಪು) ಆ ಹಾಡಿಗೆ ರಾಗ ಸಂಯೋಜಿಸಿದರು,

ಎಷ್ಟಿದ್ದಾರೆ ? ಗೊತ್ತಿಲ್ಲ!
ಹೆಂಗಿದ್ದಾರೆ? ಗೊತ್ತಿಲ್ಲ!
ಎಲ್ಲಿದ್ದಾರೆ ? ಗೊತ್ತಿಲ್ಲ!
ಯಾಕಿದ್ದಾರೆ? ಗೊತ್ತಿಲ್ಲ!

ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ ಗುರಿಯಿಲ್ಲ!

ಎಷ್ಟಿದ್ದಾರೆ ಗೊತ್ತಿಲ್ದಿದ್ರೂ ಉದ್ದ ಅಗಲದ ಯೋಜನೆಯಂತೆ
ಹೆಂಗಿದ್ದಾರೆ ತಿಳೀದೇ ಇದ್ರು ದಪ್ಪ ದಪ್ಪದ ವರದಿಗಳಂತೆ.

ಯಾರೆಂಗಿದ್ರೆ ಇವರಿಗೇನಂತೆ
ಯಾರೆಲ್ಲಿ ಹೋದ್ರೂ ಚಿಂತಿಲ್ವಂತೆ
ಏನ್ಕೇಳಿದ್ರೂ ಗೊತ್ತಿಲ್ವಂತೆ
ಬುಕ್ಕಲ್ಲಿ ಮಾತ್ರ ಬರ್ದವ್ರಂತೆ
ಅದೇ ಸತ್ಯ. . . ಇದೇ ನಿತ್ಯ . . .
ಇದೇ ವೇದ… ಅದೇ ವಾಕ್ಕು . . .
ಹರೀತೈತೆ ಹಾಲು
ಸುರೀತೈತೆ ಜೇನು.
ಇಲ್ಲೆಲ್ಲಾ ಚಿನ್ನ
ಮುಟ್ಟಿದ್ದೇ ಚೆನ್ನ

ಇಂತದ್ದೆಲ್ಲಾ ಗುಡ್ಡೇ ಹಾಕಿ
ಗಂಟು ಮೂಟೆ ಕಟ್ಟಿ,
ಊರು ಕೇರಿ ಓಡ್ಸಿ,
ಡೆಲ್ಲಿನೂ ದಾಟ್ಸಿ,
ಜಗತ್ತಿಗೆಲ್ಲಾ ಸಾರ್ಬಿಡ್ತಾರೆ.
‘ನಮ್ಮೂರೇ ಸ್ವರ್ಗ, ಮಕ್ಳೆಲ್ಲಾ ಸುಖಿಯೇ’.
ಬಣ್ಣ ಬಣ್ಣದ ಪುಸ್ತಕ ಮಾಡಿ
ದೊಡ್ಡ ದೊಡ್ಡ ಪಟಗಳ ಮಾಡ್ಸಿ
ಪುರಿ ಚರ್ಪು ಮಾಡಿ ಹಂಚಿ ಬಿಡ್ತಾರೆ.
ಕಣ್ಣೂ ಬಾಯಿ ಬಿಟ್ಕಂಡು ಹೇಳ್ದಷ್ಟು ಕೇಳಿ
ಅಂತಪ್ಪಣೆ ಕೊಟ್ಬಿಡ್ತಾರೆ!

ಹೇಳೋದಾದ್ರೆ…
ಇರೋದಿಂಗ್ನೋಡಿ…

ನಮ್ಕೇರಿ ಮಕ್ಳು, ಪಂಚಾಯ್ತಿ ಸೊಡರುಗಳು
ಅನ್ನ ನೀರಿಲ್ದೆ ಸೊರಗ್ತಾವೆ, ಉಟ್ಟೀ ಉಟ್ಟೀ ಸಾಯ್ತಾವೆ?
ಶಾಲೆ ಬಿಟ್ಟು ದುಡೀತಾವೆ
ತಾಳೀ ಉಳ್ಳಾಕ್ಕೊಂಡು ಉರುಳ್ತಾವೆ
ಛಳೀಲಿ ನಡಗ್ತಾವೆ ಮಳೇಲಿ ನೆನೀತಾವೆ
ಬಿಸಿಲಾಗೇ ಬೆವರೋಗಿ ಉಳ್ಳೋರ ಉಪ್ಪೆಸ್ರಾಗ್ತಾವೆ.

ಏನಂತೆ, ಎಲ್ಲಂತೆ, ಯಾವಾಗಂತೆ, ಯಾರಂತೆ, ಯಾಕಂತೆ, ಅಂತೆ ಕಂತೆ
ಉತ್ರಾ ಒಂದೇ ಅಂತೆ. . .
‘ಗೊತ್ತಿಲ್ಲ!’ ‘ಗೊತ್ತಿಲ್ಲ!’ ‘ಗೊತ್ತಿಲ್ಲ!’ ‘ಗೊತ್ತಿಲ್ಲ!’
ಪ್ರಶ್ನೆ ಕೇಳ್ದೋವ್ರ ಬಾಯೇ ಒಲ್ದಬಿಡ್ತಾರೆ.

ಏಯ್! ಸತ್ಯ ನಿಂಗೇನ್‌ಗೊತ್ತು?
ಇವೆಲ್ಲಾ ಹೀಗಿಲ್ಲ. ಎಲ್ಲಾ ಚೆನ್ನಾಗಿದೆ.
ಒಳ್ಳೇ ವರದಿ ಐತೆ. ಮೇಲಕ್ಕೆತ್ತಾಕೈಯ್ತೆ.
‘ಮಕ್ಳೆಲ್ಲಾ ಸುಖವಾಗೌರೆ’.

ಆದ್ರೂವೆ,
ಎಷ್ಟಿದ್ದಾರೆ? ಕೇಳ್ಬೇಡಿ!
ಹೇಗಿದ್ದಾರೆ? ಹೇಳ್ಬೇಡಿ!
ಎಲ್ಲಿದ್ದಾರೆ? ನೋಡ್ಬೇಡಿ!
ಯಾಕಿದ್ದಾರೆ? ತಿಳೀಬೇಡಿ!

ಆದ್ರೆ,
ಇಲ್ ಉಟ್ದೋರ್ಗೆ ಹಕ್ಕೈತೆ,
ಉತ್ರ ಸಿಗಲೇಬೇಕೈತೆ.
‘ಎಂತಾ ಉತ್ರಾ?
ನಿಜದಾ ಚಿತ್ರ.
ಮಕ್ಕಳ ಲೆಕ್ಕ ಸಿಗಲೇ ಬೇಕು.
ಯೋಜನೆಗರ್ಥ ಬರಲೇಬೇಕು
ಎಣಿಸಲೇ ಬೇಕು, ತೂಗಲೇ ಬೇಕು
ಮಾಹಿತಿಗೆಂದೂ ಬೆಲೆ ಸಿಗಬೇಕು.

ಆಗೇನಾಗ್ತೈತೆ?
ಎಷ್ಟಿದ್ದಾರೆ? ಗೊತ್ತೈತೆ .
ಹೇಗಿದ್ದಾರೆ? ತಿಳಿದೈತೆ .
ಎಲ್ಲಿದ್ದಾರೆ? ನೋಡೋಣ
ಯಾಕಿದ್ದಾರೆ? ತಿಳಿಯೋಣ.

ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲಾನ್ನೋದ್ ಗೊತ್ತಿಲ್ಲ.

ಈ ಹಾಡು ಮೂಡಿ ಬರಲು ನನ್ನ ಕ್ಷೇತ್ರಕಾರ್ಯ ಕಾರಣವಾಗಿತ್ತು. ಮಕ್ಕಳ ಹಕ್ಕುಗಳನ್ನು ಮನಸ್ಸು ಮೈಗೂಡಿಸಿಕೊಂಡು ಊರೆಲ್ಲಾ ಅಲೆಯುವ ನನಗೆ ಗ್ರಾಮೀಣ ಮಕ್ಕಳ ಪರಿಸ್ಥಿತಿ ಕುರಿತು ಸದಾ ಒಂದು ಪ್ರಶ್ನೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅದೆಷ್ಟು ಕೋಟಿ ರೂಪಾಯಿಗಳ ಯೋಜನೆ ಮಾಡಿ ಗ್ರಾಮೀಣ ಪ್ರದೇಶಗಳಿಗೇ ಮೀಸಲಿಡುತ್ತದೆ. ಅದರಲ್ಲಿ ಮಕ್ಕಳಿಗಾಗಿಯೇ ಇರುವ ಯೋಜನೆಗಳದ್ದು ಸಿಂಹಪಾಲು ಎನ್ನಬಹುದು.

ಮೊದಲಿಗೆ ಆರೋಗ್ಯ – ತಾಯಿಯ ಆರೋಗ್ಯದಿಂದ ಆರಂಭಿಸಿ, ಸುಸೂತ್ರ ಹೆರಿಗೆಗೆ, ಆರೈಕೆಗೆ, ನವಜಾತ ಮಕ್ಕಳ ಶುಶ್ರೂಷೆ ಬೆಳವಣಿಗೆಗೆ, ರೋಗ ನಿರೋಧಕಗಳಿಗೆ, ಆಹಾರ, ಔಷಧಿ, ಜನ್ಮ ದಾಖಲೆಗೆ, ಅಂಗನವಾಡಿ ವ್ಯವಸ್ಥೆ, ಶಾಲೆ, ಆಟೋಟಗಳು, ಗ್ರಂಥಾಲಯ… ಒಂದೇ ಎರಡೇ.. ಮುಂದೆ ಮಕ್ಕಳ ರಕ್ಷಣೆಗಾಗಿ ಸಮಿತಿಗಳು, ವ್ಯವಸ್ಥೆಗಳು. ಆದರೂ ದೇಶದ ಬಹುತೇಕ ಹಳ್ಳಿಗಳ ಮಕ್ಕಳ ಪರಿಸ್ಥಿತಿ ತೀರಾ ಕನಿಷ್ಠ!

ಮೆಹಬೂಬ್‌ ಉಲ್ ‌ಹಕ್‌ ಮತ್ತು ಅಮರ್ತ್ಯ ಸೇನ್‌ಜಂಟಿಯಾಗಿ ಅಭಿವೃದ್ಧಿ ಪಡಿಸಿದ ʼಮಾನವ ಅಭಿವೃದ್ಧಿ ಸೂಚ್ಯಂಕʼಗಳ (1990/Human Development Indicators-HDI) ಹಿನ್ನೆಲೆಯ ಮೂರು ಅಂಶಗಳನ್ನು ಜೀವಿತಾವಧಿ, ಸಾಕ್ಷರತೆ ಮತ್ತು ಜೀವನ ಮಟ್ಟವನ್ನು ಇಟ್ಟುಕೊಂಡು ಎಲ್ಲ ಹಳ್ಳಿಗಳನ್ನು ತಾಳೆ ಹಾಕಿ ನೋಡಿದರೆ ಭಾರತದ ಬಹುತೇಕ ಹಳ್ಳಿಗಳು ಹೀನಾಯ ಪರಿಸ್ಥಿತಿಯಲ್ಲಿ ಇರುವುದು ಕಂಡುಬರುತ್ತದೆ.

ಆ ಸೂಚ್ಯಂಕಗಗಳಲ್ಲಿ ಸಾಕಷ್ಟು ಸಂಖ್ಯೆಯ ವಿಚಾರಗಳನ್ನು ಕಲೆ ಹಾಕಬೇಕಿರುವುದು ʼಮಕ್ಕಳಿಗೆʼ ಸಂಬಂಧಿಸಿದ್ದು ಎಂದರೆ ಆಗ ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಕಲ್ಪನೆಗಳು ಮೂಡಲಾರಂಭಿಸುತ್ತದೆ.

ಮಾನವಾಭಿವೃದ್ಧಿ ಸೂಚ್ಯಂಕ ಮೂರು ಮೂಲಭೂತ ವಿಚಾರಗಳ ಸಂಯೋಜನೆ. ಮಾನವ ಅಭಿವೃದ್ಧಿಯ ಅಂಶಗಳು, ಅಂದರೆ,  ಜೀವಿತಾವಧಿ, ಅರಿವು/ಜ್ಞಾನ ಮತ್ತು ಜೀವನ ಮಟ್ಟ. ಜೀವಿತಾವಧಿ ಎಂದರೆ ಎಷ್ಟು ವರ್ಷಗಳ ಕಾಲ ಜನ ಬದುಕುತ್ತಾರೆ ಎಂಬುದರಿಂದ; ಜ್ಞಾನವನ್ನು ವಯಸ್ಕರ ಸಾಕ್ಷರತೆ ಮತ್ತು ಎಷ್ಟು ವರ್ಷಗಳ ಕಾಲ ಶಾಲೆಯ ಕಲಿಕೆಯಲ್ಲಿ ತೊಡಗಿಕೊಂಡದ್ದು ಎಂಬುದರಿಂದಲೂ ಮತ್ತು ಜೀವನ ಮಟ್ಟ ಎಂಬುದನ್ನು ದೇಶದ ನಿಜವಾದ ಜಿಡಿಪಿಯನ್ನು ಆಧರಿಸಿ ಜನರ ಕೊಳ್ಳುವ ಸಾಮರ್ಥ್ಯವನ್ನು ಸ್ಥಳೀಯವಾಗಿ ವ್ಯಕ್ತಿಗತ ಜೀವನ ನಿರ್ವಹಣೆಯ ನಿಜವಾದ ಖರ್ಚಿಗೆ ಹೊಂದಿಸಿ ಅಳೆಯಲಾಗುತ್ತದೆ.

ಹುಟ್ಟಿದ ಮಕ್ಕಳು ಹುಟ್ಟಿದ ದಿನ, ವಾರ, ತಿಂಗಳು ಮತ್ತು ವರ್ಷಗಳಲ್ಲೇ ನಿಧನ ಹೊಂದಿದರೆ ಅಥವಾ ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲಿದರೆ? ಸತ್ತು ಹೋದರೆ? ಶಾಲೆಗೆ ಸೇರುವ ಅವಕಾಶಗಳೇ ಇಲ್ಲದಿದ್ದರೆ, ಸೇರಿದರೂ ಶಾಲೆಗೆ ಹೋಗಲು ಅಥವಾ ಕಲಿಯಲು ಅವಕಾಶಗಳೇ ಇಲ್ಲದಿದ್ದರೆ? ಹೊಟ್ಟೆಗೆ ಬಟ್ಟೆಗೆ ಔಷಧಿಗೆ ಸಾಕಾಗದಿದ್ದರೆ? ಅಂತಹವರು ಹೇಗೆ ಬೆಳೆಯುತ್ತಾರೆ ಬಾಳುತ್ತಾರೆ?

ತಿನ್ನಲು ಉಣ್ಣಲು ಸಿಗದಿರುವುದು ಮತ್ತು ತಾಯಿಗೆ, ಕುಟುಂಬಕ್ಕೆ, ಒಟ್ಟೂ ಸಮುದಾಯಕ್ಕೆ ಉತ್ತಮ ಅಭ್ಯಾಸಗಳನ್ನು ಕುರಿತು ಮಾಹಿತಿ ಸಮರ್ಪಕವಾಗಿ ಇಲ್ಲದಿರುವುದರಿಂದಲೇ ನಮ್ಮ ದೇಶದ, ಅದರಲ್ಲೂ ದಕ್ಷಿಣ ಭಾರತ ರಾಜ್ಯಗಳೆಲ್ಲಕ್ಕೂ ಹೋಲಿಸಿದರೆ ಕರ್ನಾಟಕದ ಐದು ವರ್ಷದೊಳಗಿನ ಮಕ್ಕಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಸ್ಟಂಟಿಂಗ್‌/ಕುಬ್ಜತೆ (ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವುದು)  ಮತ್ತು ವೇಸ್ಟಿಂಗ್‌ಗೆ/ಕ್ಷಯಿಸುವುದು (ಎತ್ತರಕ್ಕೆ ತಕ್ಕ ತೂಕವಿಲ್ಲದಿರುವುದು) ಒಳಗಾಗಿರುವುದು ಕಂಡುಬರುತ್ತದೆ.

ಇದು ಗ್ರಾಮೀಣ ಪ್ರದೇಶಗಳಲ್ಲೇ ಅತಿ ಹೆಚ್ಚು. ಇದು ವಾಸ್ತವ. ಕರ್ನಾಟಕದಲ್ಲಿರುವ ಸರಿ ಸುಮಾರು ಆರೂ ಮುಕ್ಕಾಲು ಕೋಟಿ ಜನರಲ್ಲಿ ಎರಡೂವರೆ ಕೋಟಿಯಷ್ಟು ೧೮ ವರ್ಷದೊಳಗಿನ ಮಕ್ಕಳು. ಈ ಎರಡೂವರೆ ಕೋಟಿಯಲ್ಲಿ ಒಂದೂವರೆ ಕೋಟಿಗೂ ತುಸು ಹೆಚ್ಚು ಮಕ್ಕಳು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಕುಬ್ಜತೆ ಮತ್ತು ಕ್ಷಯಿಸುವಿಕೆ ಈ ಎರಡೂ ವಿಚಾರದಲ್ಲೂ ಕರ್ನಾಟಕದ ೫ ವರ್ಷದೊಳಗಿನ ಮಕ್ಕಳೇ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವುದು. (೨೦೧೫-೧೬ರ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆಯೂ ಅದನ್ನೇ ಹೇಳಿದೆ). ಇದು ಹಲವಾರು ವರ್ಷಗಳಿಂದ ಹೀಗೇ ಇದೆ.

ಕುಬ್ಜತೆ ಮತ್ತು ಕ್ಷಯಿಸುವಿಕೆ ನಾವೆಷ್ಟು ಹಿಂದುಳಿದಿದ್ದೇವೆ ಎಂದು ತೋರುವ ಎರಡು ಪ್ರಮುಖ ಆರಂಭಿಕ ಸೂಚ್ಯಂಕಗಳಷ್ಟೆ. ಇದಕ್ಕೆ ಅಪೌಷ್ಟಿಕತೆ, ಸಂಪೂರ್ಣ ರೋಗನಿರೋಧಕಗಳು ಸಿಗದಿರುವುದು, ಅಂಗನವಾಡಿಗಳಿಗೆ ದಾಖಲಾಗುವ ಮತ್ತು ಹಾಜರಾಗುವ ಮಕ್ಕಳಲ್ಲಿನ ಸಂಖ್ಯೆಯ ಏರು ಪೇರು ಕಾರಣಗಳಾಗುತ್ತವೆ.

ಅದೇ ರೀತಿ ಶಾಲೆಗಳಲ್ಲಿ, ಅದರೊಡನೆ ಶೈಕ್ಷಣಿಕ ಮಟ್ಟದಲ್ಲಿ ಹಿಂದುಳಿದಿರುವುದು, ಆರೋಗ್ಯ ತಪಾಸಣೆ, ಚಿಕಿತ್ಸೆ ವ್ಯವಸ್ಥೆ, ಬಾಲ್ಯವಿವಾಹ, ಹೆರಿಗೆಯಲ್ಲಿ ತಾಯಂದಿರ ಸಾವು, ೧೮ ವರ್ಷದೊಳಗಿನವರು ತಾಯಂದಿರಾಗುವುದು, ಬಾಲಕಾರ್ಮಿಕರು, ಅಂಗವಿಕಲತೆ, ಮಕ್ಕಳ ಮೇಲಾಗುವ ಅಪರಾಧಗಳು, ಲೈಂಗಿಕ ಶೋಷಣೆ, ಜೀತ (ಈಗಲೂ ವಿವಿಧ ಹೆಸರುಗಳಲ್ಲಿ), ಮಕ್ಕಳ ಅಪಹರಣ, ಮಾರಾಟ ಸಾಗಣೆ… ಈ ಎಲ್ಲದರಲ್ಲೂ ಗ್ರಾಮೀಣ ಪ್ರದೇಶಗಳ ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತ ಕುಟುಂಬಗಳ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೀಡಾಗುತ್ತಿರುವುದು.

ಇದು ಬೆಂಗಳೂರು, ದೆಹಲಿ ಸರ್ಕಾರಕ್ಕೆ ಗೊತ್ತಿಲ್ಲವೆ? ಬೇಡ ಬಿಡಿ. ಅಷ್ಟು ದೂರ ಹೋಗುವುದು ಬೇಡ. ಆಯಾ ಗ್ರಾಮಪಂಚಾಯತಿಗಳೆಂಬ ಸ್ಥಳೀಯ ಸರ್ಕಾರಗಳಿಗೆ ಗೊತ್ತಿಲ್ಲವೆ? ಅಥವಾ ಗೊತ್ತು ಮಾಡಿಕೊಳ್ಳಲು ಬಿಡುವುದಿಲ್ಲವೆ?

ಸುಮಾರು ಹತ್ತು ವರ್ಷಗಳ ಕಾಲ (೧೯೯೨-೨೦೦೧) ಚೈಲ್ಡ್ ‌ರಿಲೀಫ್ ‌ಅಂಡ್‌ ಯೂ ಸಂಸ್ಥೆಯೊಡನೆ ಕೆಲಸ ಮಾಡುವಾಗ ಹಳ್ಳಿ ಹಾಡಿ ಸುತ್ತುತ್ತ ಚಿಕ್ಕಪುಟ್ಟ ಸ್ವಯಂಸೇವಾ ಸಂಘಟನೆಗಳೊಡನೆ ನೂರಾರು ಗ್ರಾಮ ಪಂಚಾಯತಿಗಳಿಗೆ ಭೇಟಿ ಕೊಟ್ಟಿದ್ದೆ, ಎಲ್ಲ ಕಡೆ  ಮಕ್ಕಳ ಕುರಿತು ಮಾಹಿತಿಗೆ ಒಂದೇ ಉತ್ತರ ʼನಮಗೆ ಗೊತ್ತಿಲ್ಲʼ. ಯಾಕೆ ಗೊತ್ತಿಲ್ಲ? ಇದಕ್ಕೆ ಅವರಿಂದ ಉತ್ತರವಿಲ್ಲ.

ಮಾಹಿತಿ ಹುಡುಕಾಟ

೨೦೦೩ರಲ್ಲಿ ಇದೇ ಪ್ರಶ್ನೆ ಇಟ್ಟುಕೊಂಡು ಸಹೋದ್ಯೋಗಿಗಳಾದ ಸತೀಶ್‌ ಜಿ.ಸಿ, ರಾಘವೇಂದ್ರ, ಕವಿತಾ ಮಾಕ್ಸಿ, ಶ್ವೇತಾ ಮತ್ತಿತರರ ಪಡೆ ಕಟ್ಟಿಕೊಂಡು ಬಳ್ಳಾರಿ ಜಿಲ್ಲೆಯ ಮೂರು ತಾಲೂಕುಗಳ (ಹಗರಿಬೊಮ್ಮನಹಳ್ಳಿ ತಾಲೂಕು: ಮರಬ್ಬೀಹಾಳ್‌, ತಂಬ್ರಳ್ಳಿ, ಅಂಕಸಮುದ್ರ, ಬಾಚಿಕೊಂಡನಹಳ್ಳಿ ಮತ್ತು ಹಂಪಾಪಟ್ಟಣ ಗ್ರಾಮ ಪಂಚಾಯತಿಗಳು; ಕೂಡ್ಲಿಗಿ ತಾಲೂಕು: ಶಿವಪುರ, ಬಣವಿಕಲ್ಲು, ಹಿರೆಹೆಗ್ನಾಳ್‌, ಹ್ಯಾಳ್ಯ ಮತ್ತು ಬಡೆಲಡಕು ಗ್ರಾಮಪಂಚಾಯತಿಗಳು; ಮತ್ತು ಬಳ್ಳಾರಿ: ಕಪ್ಪಗಲ್ಲು, ಕೊಳಗಲ್ಲು, ಸಿರಿವಾರ, ಶ್ರೀಧರಗಡ್ಡೆ ಮತ್ತು ಹಲ್ಕುಂದಿ ಗ್ರಾಮ ಪಂಚಾಯತಿಗಳು) ೧೫ ಗ್ರಾಮಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ಒಂದು ಸಮೀಕ್ಷೆ ಆರಂಭಿಸಿದೆವು.

ಯುನಿಸೆಫ್‌ನಲ್ಲಿ ಕೆಲಸ ಮಾಡಿದ್ದ ಡಾ.ಪದ್ಮಿನಿ ನಮ್ಮ ಈ ಕುತೂಹಲಕರ ಅಧ್ಯಯನಕ್ಕೆ ಸಲಹೆಗಾರರಾಗಿದ್ದರು. ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ಈ ಪ್ರಯತ್ನಕ್ಕೆ ಮೊದಮೊದಲು ಸಹಾಯ ಮಾಡಿದವರು ಕ್ರೈ.

ನಮ್ಮ ಪ್ರಶ್ನೆ ಇದ್ದದ್ದು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಸ್ಥಿತಿಗತಿ ಕುರಿತು ವರದಿಗಳು ಬರುತ್ತವೆ. ರಾಜ್ಯ ಮಟ್ಟದಲ್ಲೂ ಕೇಳಿದರೆ ಸಿಕ್ಕೀತು. ಜಿಲ್ಲಾ ಮಟ್ಟದಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಗ್ರಾಮಪಂಚಾಯತಿ ಮಟ್ಟಕ್ಕೆ ಬಂದು ಮಕ್ಕಳ ಸಂಖ್ಯೆ, ಸ್ಥಿತಿಗತಿ ಕುರಿತು ಕೇಳಿದರೆ ಸಿಗುವ ಉತ್ತರ ʼಗೊತ್ತಿಲ್ಲʼ.

ಇಂಗ್ಲಿಷ್‌ನಲ್ಲಿ ಇದಕ್ಕೆ ಡಿಸ್ ಅಗ್ರೆಗೇಟೆಡ್ ಡಾಟಾ – ಚಿಕ್ಕ ಪುಟ್ಟ ಪ್ರದೇಶಗಳಲ್ಲಿನ ವಿಂಗಡಿಸಿದ ದತ್ತಾಂಶಗಳು, ಅಂದರೆ ಗಂಡು, ಹೆಣ್ಣು, ವಿವಿಧ ವಯೋಮಾನ, ಜಾತಿ, ಧರ್ಮ, ಆರ್ಥಿಕ ಪರಿಸ್ಥಿತಿಯ, ಭೂಮಿ ಹಿಡುವಳಿದಾರರಂತೆ, ಇತ್ಯಾದಿ ಹಿನ್ನೆಲೆಯಲ್ಲಿ ಗ್ರಾಮಪಂಚಾಯತಿಯಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ದತ್ತಾಂಶ ʼಇಲ್ಲʼ. ಅಲ್ಲಿಲ್ಲ ಅಂದರೆ, ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ, ಆಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಣ್ಣ ಬಣ್ಣದ ಮಾತುಗಳ ಚಿತ್ರಗಳ ವರದಿ ಹೇಗೆ ತಯಾರಾಗುತ್ತವೆ? ಎಲ್ಲವೂ ಊಹೆಗಳು ಅಂದಾಜುಗಳೇನು!

ನನಗೆ ಈ ಪ್ರಶ್ನೆಗಳು ಬರಲು ಇನ್ನೊಂದು ಕಾರಣ, ೨೦೦೩ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕಾಗಿ ಯುನಿಸೆಫ್‌ನ ಸಮಾಲೋಚಕನಾಗಿ ʼಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾ ಯೋಜನೆ ೨೦೦೩-೧೦ʼ ತಯ್ಯಾರು ಮಾಡುವ ಜವಾಬ್ದಾರಿಯನ್ನು ನನಗೆ ನೀಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯಾಗಿದ್ದ ರೇವತಿ ಅವರೊಡನೆ ವಿವಿಧ ಇಲಾಖೆಗಳೊಡನೆ ಸಮಾಲೋಚಿಸಿ ಮಕ್ಕಳ ಪರಿಸ್ಥಿತಿಗಳನ್ನು ಅಧಿಕೃತವಾಗಿ ಕಲೆ ಹಾಕುವ ಆವಶ್ಯಕತೆಯಿತ್ತು.

ನನಗೆ ಬೇಕಿರುವಂತೆ ವಿವರವಾದ ಮಾಹಿತಿ ಕೊಡಲು (ಅದೆ ಡಿಸ್ ಅಗ್ರಗೇಟೆಡ್) ಅನೇಕ ಇಲಾಖೆಗಳು ಹಿಂದೆಮುಂದೆ ನೋಡಿದ್ದರು. ರೇವತಿ ನಾನು ಜೊತೆಯಾಗಿ ಇಲಾಖೆಗಳ ಅಂಕಿಅಂಶ ಅಧಿಕಾರಿಗಳಿಗೆ ಪತ್ರ ಬರೆದು ಭೇಟಿಯಾದರೂ ದತ್ತಾಂಶಗಳನ್ನು ನೀಡಲು ಒಪ್ಪಿರಲಿಲ್ಲ. [ಈ ಕತೆ ಮತ್ತೆ ಮುಂದೆ ಯಾವಾಗಲಾದರೂ ಬರೆಯುವೆ].

ಹಗರಿಬೊಮ್ಮನಹಳ್ಳಿ (ಶಂಭುಲಿಂಗನ ಗೌಡ ಮತ್ತು ಲಕ್ಷ್ಮಣ ನಾಯಕ್‌ ಚೌಹಾನ್‌); ಕೂಡ್ಲಿಗಿ (ನೀಲ್‌ಕುಮಾರ್ ‌ಮತ್ತು ಪಂಪಾಪತಿ) ಹಾಗೂ ಬಳ್ಳಾರಿ (ಹೊನ್ನೂರ್ ‌ಸಾಬ್‌ ಮತ್ತು ಅನಿಲ್‌ಕುಮಾರ್‌)ಯ ೧೫ ಗ್ರಾಮ ಪಂಚಾಯತಿಗಳಿಗೆ ಎಡತಾಕುತ್ತಿದ್ದ ನಮ್ಮ ತಂಡಕ್ಕೆ ಸಾಕಷ್ಟು ತರಬೇತಿಗಳನ್ನು ಕೊಟ್ಟಿದ್ದೆವು.

ರಾಘವೇಂದ್ರ ಹೆಚ್.ಸಿ. ಅವರ ಮುಂದಾಳತ್ವದಲ್ಲಿ ಸತತ ಮೂರು ವರ್ಷಗಳ ಕಾಲ ಈ ತಂಡ ಸೈಕಲ್‌ಹೊಡೆದಿತ್ತು. [ರಾಘವೇಂದ್ರ ಈಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ]. ಮೊದಮೊದಲು ನಾವು ಗ್ರಾಮ ಪಂಚಾಯತಿಗಳಿಗೆ ಹೋಗಿ ಯಾವ ಮಾಹಿತಿ ಕೇಳುತ್ತಿದ್ದೆವೋ ಅದಕ್ಕೆ ʼಗೊತ್ತಿಲ್ಲ ಗೊತ್ತಿಲ್ಲʼ ಎಂದು ಕೈಯಾಡಿಸುತ್ತಿದ್ದರೋ, ಅಂತಹ ದತ್ತಾಂಶಗಳನ್ನು ಗ್ರಾಮಪಂಚಾಯತಿಯ ವ್ಯಾಪ್ತಿಯ ಹಳ್ಳಿಗಳು/ವಾರ್ಡ್‌ಗಳ ಮಟ್ಟದಲ್ಲೇ ಇರುವ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ನ್ಯಾಯಬೆಲೆ ಅಂಗಡಿ, ಗ್ರಾಮಲೆಕ್ಕಿಗರು ಇವರನ್ನೇ ಮಾತನಾಡಿಸಿ ಪಡೆದು ಆಯಾ ಗ್ರಾಮಪಂಚಾಯತಿಗಳ ಜಾತಕವನ್ನು ಸಹೋದ್ಯೋಗಿ ಸತೀಶ್‌ಜಿ.ಎಸ್‌. ಸಿದ್ಧಮಾಡತೊಡಗಿದರು.

೨೦೦೩ರಿಂದ ೨೦೦೬ರ ವರೆಗೆ ಈ ಸುತ್ತಾಟ, ಮಾಹಿತಿ ಸಂಗ್ರಹ, ಅದನ್ನು ತಾಳೆ ಹಾಕುವುದು ಅದಕ್ಕೆ ಅರ್ಥ ಕೊಡುವುದು ನಡೆದಿತ್ತು. ಕೆಲವೆಡೆ ಮಾಹಿತಿ ಕೊಡಲು ಸುತರಾಂ ಸಂಬಂಧಿಸಿದವರು ಸಿದ್ಧರಿರಲಿಲ್ಲ. ಅವರಿಗೆ ಮೇಲಾಧಿಕಾರಿಗಳ ಒಪ್ಪಿಗೆ ಪತ್ರ ಬೇಕಿತ್ತು! ಅದನ್ನು ತಂದು ಕೊಟ್ಟರೆ ಸಿಗುತ್ತಿದ್ದ ಉತ್ತರ, ಈ ಮಾಹಿತಿ ನಮ್ಮಲ್ಲಿಲ್ಲ ಅಥವಾ ಕೊಡುವುದಿಲ್ಲ. ಆಗ ನಮ್ಮಲ್ಲಿ ಏಳುತ್ತಿದ್ದ ಪ್ರಶ್ನೆ ಒಂದು ಅಂಗನವಾಡಿ ಅಥವಾ ಒಬ್ಬ ಎ.ಎನ್.ಎಂ. ಅಥವಾ ಒಂದು ಶಾಲೆಯಲ್ಲಿ ಖಂಡಿತಾ ಇರುವ ಮಾಹಿತಿ ಅದ್ಯಾಕೆ ಸ್ಥಳೀಯರಿಗೆ ಬಹಿರಂಗವಾಗಿ ಸಿಗಬಾರದು. ಜೊತೆಗೆ ಸ್ಥಳೀಯರು ಯಾಕೆ ಇವನ್ನೆಲ್ಲಾ ಕೇಳುವುದಿಲ್ಲ.

ಮೊದಮೊದಲು ನಾವು ಯಾಕೆ ಇಂತಹ ಮಾಹಿತಿ ಅಂಕಿಅಂಶ ಕೇಳುತ್ತಿದ್ದೇವೆ ಅದನ್ನಿಟ್ಟುಕೊಂಡು ಏನು ಮಾಡುತ್ತೇವೋ ಎಂಬ ಆತಂಕ ಅಳಕು ಅಧಿಕಾರಿಗಳಿಗಿತ್ತು. ಎಷ್ಟೋ ಬಾರಿ ಅಂಗನವಾಡಿಗಳ ಮೇಲ್ವಿಚಾರಕಿಯರು ನಮ್ಮ ತಂಡದವರನ್ನು ತಡವಿಕೊಂಡು ಯಾಕೆ ಬೇಕು ಇವೆಲ್ಲಾ, ಮಾಹಿತಿ ಕೊಡಬೇಡಿ ಅಂತ ಎಲ್ಲರಿಗೂ ಹೇಳಿದ್ದೇನೆ ಎಂದದ್ದುಂಟು.

ಆರೋಗ್ಯ ಕಾರ್ಯಕರ್ತೆಯರಂತೂ ಕೈಗೆ ಸಿಗದೆ ಓಡಾಡಿದ್ದುಂಟು. ಹಾಗೆಯೇ ಶಾಲಾ ಮುಖ್ಯಶಿಕ್ಷಕರೂ ಕೂಡಾ. ಕಾರಣ ಬಹಳ ಸ್ಪಷ್ಟ: ಎಷ್ಟು ಮಕ್ಕಳು ಹುಟ್ಟಿದವು ಎನ್ನುವುದಕ್ಕಿಂತಲೂ, ಎಷ್ಟು ಮಕ್ಕಳು ಸತ್ತರು, ಯಾಕೆ ಸತ್ತರು, ಎಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಇದ್ದಾರೆ, ೧೮ರೊಳಗಿನ ಎಷ್ಟು ಬಾಲಕಿಯರಿಗೆ ಮದುವೆಯಾಗಿದೆ, ಅವರಲ್ಲಿ ಎಷ್ಟು ಜನರಿಗೆ ಮಕ್ಕಳಾಗಿವೆ, ಎಷ್ಟು ತಾಯಂದಿರು ಹೆರಿಗೆಯಲ್ಲಿ ಸತ್ತರು ಎಷ್ಟು ಮಕ್ಕಳು ಶಾಲೆಗಳಿಂದ ದೂರವಿದ್ದಾರೆ, ಅವರಲ್ಲಿ ದೀರ್ಘಕಾಲದ ವಲಸೆಯಲ್ಕಿರುವ ಮಕ್ಕಳೆಷ್ಟು, ಅರ್ಥಾತ್‌ ಹಾಜರಾಗುತ್ತಿಲ್ಲ, ಅದರಲ್ಲಿ ಹೆಣ್ಣುಮಕ್ಕಳೆಷ್ಟು, ಅಂಗವಿಕಲತೆಯಿರುವವರೆಷ್ಟು, ಅವರಲ್ಲಿ ಬಾಲಕಾರ್ಮಿಕರೆಷ್ಟು, ಎಷ್ಟು ಮಕ್ಕಳು ಪಂಚಾಯತಿ ವ್ಯಾಪ್ತಿಯಿಂದ ಕಾಣೆಯಾಗಿದ್ದಾರೆ, ಮಕ್ಕಳಿಲ್ಲದಿದ್ದರೂ ಯಾಕೆ ಹಾಜರಾತಿ ಹಾಕಿದ್ದೀರಿ, ಈ ಎಲ್ಲದರಲ್ಲೂ ಹಿಂದುಳಿದ ಜಾತಿ ವರ್ಗದವರು, ಅಲ್ಪಸಂಖ್ಯಾತರು ಎಷ್ಟು… ಓಹೋ! ನಮ್ಮ ತಂಡದವರ ಬೈ ಸೈಕಲ್ ‌ಕಾಣುತ್ತಿದ್ದಂತೆಯೇ ಸಾಕಷ್ಟು ಸಂಖ್ಯೆಯಲ್ಲಿ ಅಧಿಕಾರಿಗಳು ಮಾಹಿತಿ ʼಇಲ್ಲʼ ಎನ್ನಲು ಅಥವಾ ಆಮೇಲೆ ಬನ್ನಿ ಎನ್ನಲು ಕಾರಣಗಳನ್ನು ಹುಡುಕಬೇಕಿತ್ತು! ಆಗಾಗ್ಗೆ ಕೇಳಿಬರುತ್ತಿದ್ದ ಸಿಟ್ಟಿನ ಉದ್ಗಾರ, ʼನಮ್ಮ ಮೇಲಿನವರೇ ಇಷ್ಟೆಲ್ಲಾ ಕೇಳ್ತಿಲ್ಲ. ನಿಮಗ್ಯಾಕೆ ಬೇಕು ಇದೆಲ್ಲಾ?ʼ

|ಮುಂದಿನ ಸಂಚಿಕೆಗಳಲ್ಲಿ|

‍ಲೇಖಕರು ವಾಸುದೇವ ಶರ್ಮ

November 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಎಷ್ಟೆಲ್ಲ ಕೊಡ್ತಾ ಇದೀರಾ ಸರ್ ಮಕ್ಕಳ ಲೋಕಕ್ಕೆ ಕರೆದೊಯ್ದು….ಪ್ರಕಟ ಆದ ಕೂಡಲೇ ಓದುವ ಇಚ್ಛೆಯು ಬೆಳೆದಿದೆ.
    ಧನ್ಯವಾದಗಳು ಸರ್ ಇಷ್ಟೆಲ್ಲಾ ಒದಗಿಸುತ್ತಿರುವ”ಅವಧಿ”ಗೆ ಹಾಗೆ ನಿಮಗೂ…..

    ಪ್ರತಿಕ್ರಿಯೆ
  2. Kamalakar

    One of the most important pieces I have read by its importance. Amazing work, amazing commitment. Such basic info, such vicious ignorance at bureaucratic levels. Keep writing.

    ಪ್ರತಿಕ್ರಿಯೆ
  3. Vijayaprasadks

    The JJB and CWC terms successfully completed due to study materials of CRT mad sharing the information not only conflict with law bit also for care and protection. I thankful to CRT team and specially VasudevSharmaji.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: