ಗೌರಿ ಪಾತ್ರದ ಬಗ್ಗೆ ಕ್ಲಾರಿಟಿ ಇತ್ತು

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

। ಕಳೆದ ಸಂಚಿಕೆಯಿಂದ ।

ಒಂದೆರೆಡು ಕ್ಷಣದ ನಂತರ ಸುಧಾರಿಸಿಕೊಂಡು, ನನ್ನ ಮನಸ್ಸಲ್ಲಿದ್ದದ್ದನ್ನು ನೇರವಾಗಿ ಅವರು ಪ್ರಶ್ನೆ ಕೇಳಿದಷ್ಟೇ ಧೃಡವಾಗಿ ಉತ್ತರಿಸಿದೆ, 

ಮೇಡಂ ನಿಮ್ಮ ಬರಹ, ನಿಮ್ಮ ಸಿನೆಮಾ ಗ್ರಹಿಕೆ, ನಿಮ್ಮೊಂದಿಗೆ ಚರ್ಚೆಗಳೆಲ್ಲದರ ಜೊತೆಗೆ ನಾನಿಲ್ಲಿ ಬಂದಿರುವುದು ನೀವು ಹೆಣ್ಣು, ಹೆಣ್ಣಿನ ದೇಹದ ಸೂಕ್ಷ್ಮತೆಗಳು ನಿಮಗೆ ಗೊತ್ತು, ಹಾಗೇ ಅದನ್ನು ಪದಗಳಿಗೆ ರೂಪಾಂತರಿಸುವುದು ನಿಮಗೆ ಗೊತ್ತು. ಹಾಗಾಗಿ ನಿಮ್ಮ ಬಳಿ ಬಂದಿದ್ದೇನೆ. ಈ ಕತೆಯನ್ನ ನೀವೇ ಬರೆಯಬೇಕು.

ಇಷ್ಟನ್ನು ಧೃಡವಾಗಿ ಹೇಳಿದವನು, ಒಂದನ್ನು ಮಾತ್ರ ಹೇಳಲಿಲ್ಲಾ, ‘ನಿಮ್ ಹತ್ರ ಎಷ್ಟು ಬೇಕಾದ್ರು ಜಗಳ ಆಡ್ಕೊಂಡು ತಿದ್ದಿಸಬಹುದು, ಬೇರೆಯವರ ಹತ್ರ ಕಷ್ಟ’, ಅನ್ನೋ ಒಂದು ವಿಷಯಾನ ನನ್ನೊಳಗೆ ಇಟ್ಕೊಂಡೆ. ಮುಂದೆ ಯಾವಾಗಲಾದ್ರು ಹೇಳಿದ್ರಾಯ್ತು ಅಂತ. 

ಸಂಧ್ಯಾ ಮೇಡಂಗೆ ನನ್ನ ಉತ್ತರ ಒಪ್ಪಿಗೆಯಾಗಿ ಸರಿ ಮಂಜು ಬರೀತೀನಿ, ನಿಮ್ ತಲೆಯಲ್ಲಿ ಏನೇನಿದೆ ಎಲ್ಲಾ ಹೇಳ್ಬಿಡಿ, ಆಮೇಲೆ ನನಗೆ ಟೈಂ ಕೊಡಿ, ಕತೆಯ ಬಗ್ಗೆ ಚಿಂತಿಸಲು, ಸ್ವಲ್ಪ ದಿನ ಕತೆಯನ್ನು ಯೋಚಿಸುತ್ತಾ ಅದರೊಳಗೆ ಬದುಕುತ್ತೇನೆ. ಆನಂತರ ಬರೆದು ಕಳಿಸ್ತೀನಿ ಅಂತ ಹೇಳಿದ್ರು, ಇಬ್ಬರೂ ಕೂತು ಸಾಕಷ್ಟು ಚರ್ಚೆ ಮಾಡಿ, ಕತೆಗೆ ಒಂದು ಬೇಸಿಕ್ ರೂಪು ರೇಷೆ ಮಾಡಿಕೊಂಡ್ವಿ, ಅದರಲ್ಲಿ ಮುಖ್ಯವಾದುದು ಪಾತ್ರಗಳು, ಮುಖ್ಯ ಕಥಾನಾಯಕಿಗೆ ಗೌರಿ ಹೆಸರನ್ನು ಅವರು ಸೂಚಿಸಿದರು.

ಹಲವು ಕಾರಣಗಳಿಗಾಗಿ ನನಗೆ ಮುಖ್ಯವಾದ ಹೆಸರನ್ನು ಇನ್ನೊಂದು ಪಾತ್ರಕ್ಕೆ ನಾನು ಸೂಚಿಸಿದೆ. ಈ ಕಥೆಯಲ್ಲಿ ಚರ್ಚಿಸುವ ಮುಖ್ಯ ವಿಷಯವಾದ ಕಾಮದ ಬಗ್ಗೆ ಎತ್ತುವ ಪ್ರಶ್ನೆಗಳಿಗೆ ಒಂದು ವೈಜ್ಞಾನಿಕ ವಿಶ್ಲೇಷಣೆ ಬೇಕಾಗುತ್ತದೆ ಎಂದು ಮೇಡಂ ಮನಃಶಾಸ್ತ್ರಜ್ಞನ ಪಾತ್ರದ ಅವಶ್ಯಕತೆ ಹೇಳಿದರು. 

ನನಗೆ ಸಿನೆಮಾ ಕತೆ-ಚಿತ್ರಕತೆಯಲ್ಲಿ ಒಂದೇ ಕತೆಯನ್ನು ಹೇಳುವ ಬದಲಿಗೆ, ಕಥೆಗೆ ಪೂರಕವಾದ ಮುಖ್ಯ ಕಥೆಯ ಇನ್ನೊಂದು ಆಯಾಮವನ್ನು ಚರ್ಚಿಸುವ, ಮುಖ್ಯ ಕಥೆಯೊಂದಿಗೆ ಸಮಾನಾಂತರದಲ್ಲಿ ಸಾಗುವ ನಿರೂಪಣೆ ತುಂಬ ಇಷ್ಟ. ಈ ಮಾದರಿಯ ಪರಿಚಯ ಮಾಡಿಕೊಟ್ಟವರು ನಮ್ಮ ಎಚ್.ಎ.ಅನಿಲ್ ಕುಮಾರ್ ಸರ್, ಹರಿವು ಸಿನೆಮಾದಲ್ಲಿ ಶರಣಪ್ಪನ ಕಥೆಯೊಂದಿಗೆ ಸುರೇಶನ ಪಾತ್ರದ ಕಥೆಯನ್ನು ಬರೆಯುವಾಗ ಈ ಮಾದರಿಯ ಬಗ್ಗೆ ವಿವರಿಸಿದ್ದರು. ಅದೇ ಮಾದರಿಯಲ್ಲಿ ಇಲ್ಲೂ ಒಂದು ಸಮಾನಾಂತರ ಟ್ರ್ಯಾಕ್ ಇದ್ದರೆ ಚೆನ್ನಾಗಿರುತ್ತದೆ ಎಂದು ಸಂಧ್ಯಾ ಮೇಡಂಗೆ ಹೇಳಿದೆ.

ಸಾಮಾನ್ಯವಾಗಿ ಬಹುತೇಕ ಸಿನೆಮಾಗಳಲ್ಲಿ ಈ ಮಾದರಿಯ A ಟ್ರ್ಯಾಕ್ ಮತ್ತು B ಟ್ರ್ಯಾಕ್ ಇದ್ದೇ ಇರುತ್ತದೆ. ಈ ಸಮಾನಂತರ ಟ್ರ್ಯಾಕ್ಗೆ ಹುಟ್ಟಿಕೊಂಡಿದ್ದು ಸುಮಾ ಪಾತ್ರ. ಆ ನಂತರ ನನಗೊಂದು ಆಲೋಚನೆ ಬಂತು, ಈ ಹಿಂದಿನ ಹರಿವು ಸಿನೆಮಾದಲ್ಲಿ ಎರಡೂ ಕಥೆಗಳು ಒಂದೆಡೆ ಸೇರಿ ಮುಂದೆ ಸಾಗುತ್ತವೆ.

ಒಂದು ಇನ್ನೊಂದರ ಮೇಲೆ ಪ್ರಭಾವ ಬೀರುತ್ತವೆ, ಆದರೆ ಈ ಸಿನೆಮಾದಲ್ಲಿ ಆ ಮಾದರಿಯನ್ನು ಅನುಸರಿಸುವುದು ಬೇಡ, ಈ ಗೌರಿ ಮತ್ತು ಸುಮಾ ಯಾವತ್ತಿಗೂ ಸೇರಲೇ ಬಾರದು, ಆದರೆ ಒಬ್ಬರು ಇನ್ನೊಬ್ಬರನ್ನು ಪ್ರಭಾವಿಸಬೇಕು, ಇವರಿಬ್ಬರಿಗೂ ಕನೆಕ್ಟೆಡ್ ಪಾಯಿಂಟ್ ಬೇಕಲ್ಲಾ ಎಂದು ನನ್ನ ಆಲೋಚನೆ ಮುಂದಿಟ್ಟೆ, ಮೇಡಂ ಸ್ವಲ್ಪ ಹೊತ್ತು ಚಿಂತಿಸಿ ಕಟ್ಟಿದ ಪಾತ್ರವೇ ಜಯಮ್ಮ. ಮನೆಕೆಲಸ ಮಾಡುವ ಪಾತ್ರ. ಕೂಡಲೇ ಹಿಂದಿನ ಘಟನೆಯೊಂದು ನೆನಪಾಯಿತು.

2015ರ ಫೆಬ್ರವರಿ ತಿಂಗಳು, ಆಗೊಮ್ಮೆ ಬಿ.ಸುರೇಶ್ ಸರ್ ಜೊತೆ ಮಾತಾನಾಡುತ್ತಾ ಅವರ ಸಿನೆಮಾ ಆಫೀಸಿನ ಮುಂದೆ ನಿಂತಿದ್ದಾಗ ಅಲ್ಲಿ ಮೂಲೆಯಲ್ಲಿ ಹೊಸ ಮೊಪೆಡ್ ಗಾಡಿಯೊಂದು ಬಂದು ನಿಂತಿತು. ಸುರೇಶ್ ಸರ್ ನನ್ನ ಗಮನ ಅತ್ತ ಸೆಳೆದು, ಅಲ್ಲಿ ನೋಡು, ಅವರು ಇಲ್ಲೊಂದು ಮನೆಗೆ ಕೆಲಸ ಮಾಡೋದಿಕ್ಕೆ ಬರ್ತಾರೆ, ಆದ್ರೆ ಗಾಡಿನ ಇಲ್ಲೇ ನಿಲ್ಸಿ, ಹೊಸ ಫೋನು ಗಾಡೀಲಿ ಇಟ್ಟು ಹಳೇ ಫೋನು ತಗೊಂಡು ಹೋಗ್ತಾರೆ, ನೋಡು ಅಂತ ಹೇಳಿದ್ರು. ಅದು ನನಗೆ ಸಕತ್ ಇಂಟ್ರೆಸ್ಟಿಂಗ್ ಅನ್ಸಿತ್ತು,

ಸಂಧ್ಯಾ ಮೇಡಂಗೆ ಆ ಘಟನೆ ಹೇಳಿ, ಮನೆ ಕೆಲ್ಸದವ್ರ ಪಾತ್ರಾನ ಸ್ವಲ್ಪ ವಿಶೇಷವಾಗಿ ಕಟ್ಟಿಕೊಡಿ, ತುಸು ಹಾಸ್ಯಮಿಶ್ರಿತ ಲೇಪ ಇರಲಿ ಆ ಪಾತ್ರಕ್ಕೆ ಅಂತ ಹೇಳಿದ ಮೇಲೆ ಅವರೂ ಒಂದಷ್ಟು ಪ್ರಸಂಗಗಳನ್ನು ನೆನಪಿಸಿದರು, ಒಬ್ಬರ ಮನೆಯ ವಿಷಯ ಇನ್ನೊಬ್ಬರ ಮನೆಗೆ ತಲುಪುವುದರಲ್ಲಿ ಇವರ ಪಾತ್ರದ ಪ್ರಾಮುಖ್ಯತೆಯನ್ನು ಮೇಡ ವಿವರಿಸಿದ ಮೇಲೆ ಒಂದಷ್ಟು ಚರ್ಚಿಸಿ ಜಯಮ್ಮನ ಪಾತ್ರದ  ಕ್ಯಾರೆಕ್ಟರ್ ಡಿಸೈನ್ ಫಿಕ್ಸ್ ಮಾಡಿದೆವು. 

ಮನಃಶಾಸ್ತ್ರಜ್ಞನ ಪಾತ್ರದ ಬಗ್ಗೆ ಮೊದಲಿಗೆ ಒಂದಷ್ಟು ಚರ್ಚೆಯಾಯಿತು, ನನಗೆ ತಲೆಗೆ ಬಂದಿದ್ದು ಅದು ಹೆಣ್ಣಿನ ಪಾತ್ರಾನೇ ಅಂತ. ಆದ್ರೆ ಸಂಧ್ಯಾ ಮೇಡಂ, ಬೇಡ ಅದ್ಯಾಕೆ ಕಾಮದ ವಿಷಯ ಹೆಣ್ಣಿನ ಜೊತೆಯಲ್ಲೇ ಚರ್ಚೆಯಾಗಬೇಕು? ಗಂಡಿನ ಜೊತೆ ಯಾಕೆ ಚರ್ಚೆ ಮಾಡಬಾರದು ಎಂಬ ಪ್ರಶ್ನೆ ಎತ್ತಿದರು, ನನಗು ಸರಿ ಎನಿಸಿತು ಮತ್ತು ಆ contrast, visually ಚೆನ್ನಾಗಿರುತ್ತೆ ಅಂತ ನನಗೂ ಅನಿಸಿತು. ನಮ್ಮದು ಲೋ ಬಡ್ಜೆಟ್ ಸಿನೆಮಾ ಆದ್ದರಿಂದ ಆ ಕ್ಯಾರೆಕ್ಟರ್ ಸಿಂಪಲ್ಲಾಗೇ ಇರ್ಲಿ ಅಂತ ಡಿಸೈಡ್ ಕೂಡ ಆಯ್ತು. 

ಗೌರಿ ಪಾತ್ರದ ಬಗ್ಗೆ ಹೇಗೂ ಒಂದು ಕ್ಲಾರಿಟಿ ಇತ್ತು, ಆಕೆ ಚೆನ್ನಾಗಿ ಓದಿ, ಒಳ್ಳೆ ಸಂಬಳದ ಕೆಲಸದಲ್ಲಿರುವವಳು, ಇಂಡಿಪೆಂಡೆಂಟ್, ಸ್ವಂತ ಮನೆ, ನೋಡಲು ಸಮಾಜದ ಶತಶತಮಾನದ ಸಂಸ್ಕೃತಿ ಪರಂಪರೆಯ ಕನ್ನಡಕದ ಚೌಕಟ್ಟಿನ ರೂಪವಾದ ಒಳ್ಳೆ ಮನೆತನದ ಸುಸಂಸ್ಕೃತ ಮನೆತನದ ಹೆಣ್ಣಿನಂತೆ ಕಾಣಬೇಕು ಆಧುನಿಕತೆಯ ಲಕ್ಷಣಗಳೂ ಇರಬೇಕು ಇತ್ಯಾದಿ ಎಲ್ಲವೂ ನಿರ್ಧಾರಿತವಾಯಿತು. 

ಈ ಕ್ಯಾರೆಕ್ಟರ್ ಡಿಸೈನಿಂಗ್ ಚರ್ಚೆ ನಡೆದದ್ದು, ಪಾತ್ರಗಳನ್ನು ಕಲ್ಪಿಸಿಕೊಳ್ಳಲು ಸಹಾಯವಾಗಲಿ ಎಂದು. ಈ ಮೇಲಿನ ಪಾತ್ರಗಳ ಬಗ್ಗೆ ಚರ್ಚೆಯಾದ ಮೇಲೆ ಬಂದದ್ದು ಗೌರಿ ತನ್ನ ಬಯಕೆ ಹೇಗೆ ವ್ಯಕ್ತ ಪಡಿಸುತ್ತಾಳೆ ಹಾಗು ಯಾರ ಬಳಿ ವ್ಯಕ್ತಪಡಿಸುತ್ತಾಳೆ? ಈ ಅಂಶದ ಬಗ್ಗೆ ಸಾಕಷ್ಟು ಚರ್ಚೆಯಾಯಿತು.

ಆ ಎಲ್ಲಾ ಚರ್ಚೆಯ ಮೂಲಕ ಹುಟ್ಟಿದ ಪಾತ್ರವೇ ಗಂಡಿನ ಪಾತ್ರ. ಅದಕ್ಕೆ ನಾನು ಕೂಡಲೇ ಸುರೇಶ ಎಂದು ಸೂಚಿಸಿದೆ. ಮೇಡಂದು ಮತ್ತೆ ಪ್ರಶ್ನೆ ಸುರೇಶಾನೇ ಯಾಕೆ? ಹರಿವು ಸಿನೆಮಾದಲ್ಲು ಸುರೇಶ ಇದ್ದ. ಸುರೇಶನಿಗೂ ನಿಮಗೂ ಇರುವ ಲಿಂಕ್ ಏನು ? 

ನಾನು ….. !?

। ಮುಂದಿನ ವಾರಕ್ಕೆ ।

‍ಲೇಖಕರು ಮಂಸೋರೆ

October 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ನಾತಿಚರಾಮಿ ಚಿತ್ರ ನೋಡಿದ್ದೇನೆ. ಈಗ ನೆನಪಿನಲ್ಲಿ ರಿವೈಂಡ್ ಆಗ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: