ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋವು ತಿಂದು ಗೋವಿನಂತಾದವನು

download

ಎನ್ ಕೆ ಹನುಮಂತಯ್ಯ

 

ಅಸ್ಪೃಶ್ಯ!

ಹೌದು; ನಾನು ವಿದ್ಯುತ್ತಿನ ಹಾಗೆ

ನಿಮ್ಮ ತಣ್ಣನೆಯ ಸ್ಪರ್ಶಕ್ಕೆ

ಸಿಕ್ಕಲಾರೆ

 

blackಅಸ್ಪೃಶ್ಯ!

ಹೌದು; ನಾನು ಕಡಲ ಆಳದ ಹಾಗೆ

ನಿಮ್ಮ ಸುಡುಗಣ್ಣು ಸ್ಪರ್ಶಕ್ಕೆ

ಸಿಕ್ಕಲಾರೆ

 

ಅಸ್ಪೃಶ್ಯ!

ಹೌದು; ನಾನು ಮೊಲೆ ಮೂಡಿದ ನೆಲ

ಜೀವ ಪ್ರೇಮದ ತೊಗಲ

ಸಂಭೋಗಿನಿ

ಹುಟ್ಟುತ್ತವೆ ನನ್ನೊಳಗೆ ಕಾಡು ಕಣಿವೆ

ನದಿ ಪರ್ವತಗಳು

 

ಅಸ್ಪೃಶ್ಯ!

ಹೌದು; ನಾನು ಸ್ವ

ತಂತ್ರವನು ಭೋಗಿಸುವ ನಿಮ್ಮಂಥ

ಸಲಿಂಗ ಕಾಮಿಗಳಿಗೆ

ಹೆದರಲಾರೆ

ಪಕ್ಕೆ ತಬ್ಬಿದ ಮರಿ ಕಾಯುತ್ತ

ಮರದಿಂದ ಮರಕ್ಕೆ ಹಾರುವ

ಕೋತಿಗೆ ಹೆದರುತ್ತೇನೆ

 

ಅಸ್ಪೃಶ್ಯ!

ಹೌದು; ನೀರು ನಾಳೆಗಳಿಲ್ಲದೆ

ಹಣ ಅಣ್ವಸ್ತ್ರಗಳ ಕುಲುಮೆಯಾಗಿರುವ

ನಿಮ್ಮ ಕಣ್ಣಿನ ಪ್ರಭೆಗೆ

ಹೆದರಲಾರೆ

ನಿಮ್ಮ ಮಲ ತಿಂದು ನಿಮ್ಮ ಮನೆ ಕಾಯುವ

ನಾಯಿಗೆ ಹೆದರುತ್ತೇನೆ

ಕೃತಕ ಕಣ್ಣಿಗೆ ಕನಸು ಕಾಣುವುದಿಲ್ಲ

 

ಅಸ್ಪೃಶ್ಯ!

ಹೌದು; ನಾನು ಗೋವು ತಿನ್ನುತ್ತೇನೆ

ಗೋವು ತಿಂದು ಗೋವಿನಂತಾಗಿ

ಗಿರಿ ಕಣಿವೆ ಬಯಲೊಳಗೆಲ್ಲ

ಕುಣಿಯುತ್ತೇನೆ

ನೆಲದ ಮೇಲೆಯೇ ನಿಂತು

ಬಾಲ ಎತ್ತಿ ಕಾಮನಬಿಲ್ಲಿಗೆ

ಬಡಿಯುತ್ತೇನೆ

ಮಳೆಮೋಡಗಳ ತಿವಿದು

ಸುಡುಗಾಡಿಗೆ ಕೆಡವುತ್ತೇನೆ

 

ಅಸ್ಪೃಶ್ಯ!

ಹೌದು; ನಾನು ಗೋವು ತಿನ್ನುತ್ತೇನೆ

ಗೋವು ತಿಂದು ಗೋವಿನಂತಾಗಿ

 

ರೋಮ ರೋಮಗಳಲ್ಲು ಕೆಚ್ಚಲನು ಹೊತ್ತು

ತಿರುಗುತ್ತೇನೆ

ಕಸದ ತೊಟ್ಟಿಯಲಿ ಬಿದ್ದ ಕೂಸುಗಳಿಗೆ

ಹಾಲು ಕುಡಿಸುತ್ತೇನೆ

 

ಅಸ್ಪೃಶ್ಯ!

ಹೌದು; ನಾನು ಗೋವು ತಿಂದು

ಗೋವಿನಂತಾದವನು

ನೀವು ನೀಡುವ ಮೇವು ತಿಂದು

ನಿಮ್ಮಂಥ ಮನುಷ್ಯನಾಗಲಾರೆ

ಮನುಷ್ಯರನ್ನು ತಿನ್ನಲಾರೆ

‍ಲೇಖಕರು admin

8 November, 2015

1 Comment

  1. Noorulla thyamagondlu

    ಈ ಕವನ ನನ್ನನ್ನು ಅದೆಷ್ಟು ಸಲ ಓದಿಸಿ ಕೊಂಡಿದೆಯೋ.ಮತ್ತೆ ,ಮತ್ತೆ ಓದಿಸುತ್ತಲೇ ಇದೆ,ಹಾಗು ನನ್ನನ್ನು ತುಂಬ ಚಿಂತನೆಗೆ ಹಚ್ಚುವಂತೆ ಮಾಡಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading