ಗೋವಾ ಎಂಬ ಮಾಯೆ…

ವಾಣಿ

ಪ್ರತಿ ಸಲ ಈ ಹೆಸರು ಕೇಳಿದಾಗ ಏನೋ ಒಂಥರಾ ಫಾರಿನ್ ಭಾವನೆ. ಕೆಲಸದಲ್ಲಿ ಸಿಕ್ಕಾಪಟ್ಟೆ ತಿರುಗಾಡೋ ನಾನು ಈ ಊರಿಗೆ ಹೋಗಬೇಕು ಅಂತ ಯಾವತ್ತೂ ಅನ್ಕೊಂಡಿರ್ಲಿಲ್ಲ.

ನನ್ನ ಕೆಲಸ ನನ್ನನ್ನುತುಂಬಾ ಜಾಗಗಳಿಗೆ ಕರ್ಕೊಂಡು ಹೋಗುತ್ತೆ. ನಾನು ಒಬ್ಬಳು ಇಂಜಿನಿಯರ್. ಸುತ್ತೋ ಹುಚ್ಚು ಜಾಸ್ತಿ. ಒಂದೇ ಮೇಜಿನಲ್ಲಿ ತಿಂಗಳಾನುಗಟ್ಟಲೆ ಒಂದೇ ಕಡೆ ಕೂತು ಕೆಲಸ ಮಾಡೋದು ನನಗೆ ಒಂದು ದೊಡ್ಡ ಶಿಕ್ಷೆಯಂತೆ. ಹಾಗಾಗಿ ನನಗೆ ಸಿಕ್ಕಿರೋ ಈ ಕೆಲಸ ವರವೇ ಸರಿ.

ನಮ್ಮ ದೇಶದ ಎಷ್ಟೋ ರಾಜ್ಯಗಳ ಹಳ್ಳಿಗಳು ಶಹರುಗಳು ಜನಜೀವನ ವೇಷ ಭೂಷಣ ಭಾಷೆ ಇವೆಲ್ಲವನ್ನು ನೋಡುವ ಅನುಭವಿಸುವ ಸದಾವಕಾಶ ನನ್ನದು.

ಗೋವಾ ಅಂದಾಗ್ಲೆಲ್ಲಾ ಅಯ್ಯೋ ಅದು ಬಾರಿ ದುಬಾರಿ .ಆ ಊರಿನ ಹೆಸರು ಯಾರೇ ತೆಗೆದರೂ ಯಾವುದೊ ಒಂದು ಫೆಸ್ಟೋ ಅಥವಾ ಮ್ಯೂಸಿಕ್ ಫೆಸ್ಟ್ ಬಗ್ಗೆ ಮಾತಾಡುತ್ತಾರೆ. ಯಾವಾಗಲೂ ದೊಡ್ಡ ಪಾರ್ಟಿ ಮಾಡೋ ಜಾಗ ಅನ್ಸುತ್ತೆ.

ಪಾರ್ಟಿ ಜನಜಂಗುಳಿ ಎಲ್ಲಾ ಸ್ವಲ್ಪ ನನಗೆ ದೂರ. ಹಾಗಾಗಿ ಎಂದು ಈ ಊರಿನ ನೋಡಬೇಕು ಅನ್ನೋ ಕುತೂಹಲ ಇರಲಿಲ್ಲ. ಹೀಗೊಮ್ಮೆ ಕಳೆದ ವರ್ಷ ದಂಡಕಾರಣ್ಯಕ್ಕೆ ಚಾರಣ ಹೋಗಿದ್ವಿ. ಮುಗಿದ ನಂತರ ಸ್ನೇಹಿತರೆ ಎಲ್ಲರೂ ಗೋವಾ ಇಲ್ಲೇ ಹತ್ರ ಪಕ್ಕದಲ್ಲಿದೆ ಹೋಗೋಣ ಅಂದ್ರು. ನನ್ನ ಗೆಳೆಯರೇ ಅಲ್ವಾ ಸರಿ ಆಯ್ತು ಒಂದು ಸಲ ನೋಡೇ ಬಿಡೋಣ ಅನ್ಕೊಂಡು ಸರಿ ಅಂದೆ .

ಕಾರವಾರದಿಂದ ಬಸ್ ಹತ್ತಿ ಗೋವಾ ಮುಟ್ಟಿದ್ವಿ. ಗೋವಾ ಬಾರ್ಡರ್ ಹತ್ರ ಬಸ್ಸನ್ನ ಚೆಕಿಂಗ್ ಗಾಗಿ ನಿಲ್ಸಿದ್ರು. ಅದು ಕೋವಿಡ್ ಸಮಯ. ಅದಕ್ಕಾಗಿ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಚೆಕಿಂಗ್. ಚೆಕಿಂಗ್ ಮುಗಿಸಿ ಬಸ್ ಹತ್ತಿ ಬಾರ್ಡರ್ ದಾಟಿದ ಕೂಡಲೇ ಒಂದು ವಿಚಿತ್ರ ನಡೀತು. ಅದು ತನಕ ಸಮಾಧಾನವಾಗಿದ್ದ ನನ್ನ ಎಲ್ಲಾ ಗೆಳೆಯರು ದಿಡೀರನೆ ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದರು. ಗೌರ್ಮೆಂಟ್ ಬಸ್ಸಿನೊಳಗೆ ಮಂಗಗಳಂತೆ ಕಾಣಿಸಿದೆವು.

ರೂಮಿಗೆ ರೆಸ್ಟ್‌ ಮಾಡಿ ಎಲ್ಲರೂ ರಾತ್ರಿ ಎಂಟಕ್ಕೆ ಸಿಕ್ಕಾಗ ನೋಡಿದ್ರೆ ಇನ್ನೊಂದು ಆಶ್ಚರ್ಯ ಕಾದಿತ್ತು. ಎಲ್ಲರೂ ತರತರದ ಹೂವು ಇರೋ ಬಟ್ಟೆ ಹಾಕಿಕೊಂಡು ಟೋಪಿ ಹಾಕ್ಕೊಂಡು ಅದರ ಮೇಲೆ ಒಂದು ಕೂಲಿಂಗ್ ಗ್ಲಾಸ್!!

ಸರಿ ಎಲ್ಲರೂ ರಾತ್ರಿ ಊಟಕ್ಕೆ ಹೋಗಿ ಕೂತು 15 20 ನಿಮಿಷದ ನಂತರ ಎಲ್ಲಾ ಗೆಳೆಯರು ಮಾಯ. ಸಮುದ್ರ ತೀರ. ಸಹಿಸಲಾಗದ ಸೆಕೆ. ಇವರೆಲ್ಲರೂ ನನ್ನ ಕರ್ಕೊಂಡು ಹೋಗಿದ್ದು ಜಾಗ ಒಂದು ಸೆಕೆಂಡಿಗೆ ಗಾಬರಿ ಬೀಳಿಸೋ ಹಾಗಿತ್ತು. ಅತಿ ಉದ್ದದ ಸಮುದ್ರ ತೀರ, ಉದ್ದಕ್ಕೂ ಮುಗಿಯದ ರೆಸ್ಟೋರೆಂಟ್ಗಳು ಬಾರುಗಳು. ಎಲ್ಲಿ ನೋಡಿದರೂ ಎಲ್ಲರೂ ಬಣ್ಣ ಬಣ್ಣದ ಬಟ್ಟೆ. ಹಾಡಿನ ಗದ್ದಲ. ಎಲ್ಲಿ ನೋಡಿದರೂ ಅಂಗಡಿಗಳು, ಬಟ್ಟೆಗಳು, ಕಾರ್‌ಗಳ ಬಾಡಿಗೆ ಅಂಗಡಿಗಳು, ಶರಾಬಿನ ಅಂಗಡಿಗಳು. ಕಾಲಿಡಲು ಜಾಗವಿಲ್ಲದ ಊರು.

ತುಂಬ ದಿಗಿಲಾಗಿ ಇದು ನಮ್ಮೂರೇ ಅಲ್ಲ ನಮ್ಮ ದೇಶವೇ ಅಲ್ಲ ಅನ್ನೋ ಭಾವನೆ. ಎಲ್ಲೋ ಕಳೆದು ಹೋಗಿರೋ ಪರದೇಶಿಯ ಪರಿಸ್ಥಿತಿ. ಫೋನಿಗೆ ಸಿಗದ ಗೆಳೆಯರು, ಹಿಂತಿರುಗಿ ಹೋಗಲು ರೂಮಿನ ಕೀ ಇಲ್ಲ. ತಲೆಕೆಟ್ಟು ರಾತ್ರಿಯೆಲ್ಲ ಓಡಾಡಿ ತಕ್ಷಣಕ್ಕೆ ಮಾರನೆಯ ದಿನದ ಬೆಳಗಿನ ಮೊದಲ ಫ್ಲೈಟ್ ಬುಕ್ ಮಾಡಿಕೊಂಡು ಅಲ್ಲಿಂದ ಓಡಿಬಂದೆ.

ಆಗ ನಾವು ಹೋಗಿದ್ದು ನಾರ್ತ್ ಗೋವಾಗೆ ಇದು ನನಗೆ ಗೊತ್ತಿರಲಿಲ್ಲ.

ಮತ್ತೆ ಕೆಲಸದ ಮೇಲೆ ಪುನಃ ಗೋವಾಗೆ ಹೋಗಬೇಕಾಯಿತು. ಅಯ್ಯೋ! ಮತ್ತೆ ಅಲ್ಲಿಗೆ ಹೋಗಬೇಕಾ! ಅಂದುಕೊಳ್ಳುತ್ತಲೇ ಹೋದೆ. ಆದರೆ ಈ ಸಲ ಕಂಡ ಗೋವಾ ಹಿಂದಿನದಕ್ಕೆ ತದ್ವಿರುದ್ಧ! ಶುದ್ಧ, ಶಾಂತ, ಅನಂತ.

ನಮ್ಮ ಕೆಲಸ ಬಂದರಿನಲ್ಲಿತ್ತು. ಬಂದರಿನಲ್ಲಿ ಕೆಲಸ ಗಡಿಯಾರದ ಮುಳ್ಳಿನಂತೆ ನಡೆಯುತ್ತದೆ. ಎಲ್ಲಿಯೂ ಏನೇನು ನಿಲ್ಲುವುದಿಲ್ಲ ಒಂದು ನಿಮಿಷದ ಸಮಯ ವ್ಯರ್ಥವಾದರೆ ಕೋಟ್ಯಂತರ ರೂಪಾಯಿ ನಷ್ಟ. ಹಲವಾರು ಮಶೀನ್ಗಳ ಕೆಲಸ ಸದ್ದು ಗದ್ದಲ. ಕೆಲಸಗಾರರ ಮೈಯಿಂದ ಬೆವರು ನದಿಯಾಗಿ ಹರಿಯುತ್ತಿರುತ್ತದೆ. ಕೆಲಸ ಮುಗಿಸಿ ಮೂರು ದಿನ ರಜೆ ಪಡೆದು ಊರು ನೋಡಲು ಹೊರಟೆ.

ದಕ್ಷಿಣ ಗೋವಾ ನೋಡೋಣ ಅಂತ ಅಂದುಕೊಂಡು ಮೊದಲಿಗೆ ಇರೋದಕ್ಕೆ ಒಂದು ಗೂಗಲ್ ನಲ್ಲಿ ಹುಡುಕಿದ ತಕ್ಷಣ ಸಿಕ್ಕಿದ Quinta da santanaದಲ್ಲಿ ರೂಮ್ ಬುಕ್ ಮಾಡ್ಕೊಂಡೆ. ಗಾಡಿ ಬಾಡಿಗೆಗೆ ಪಡೆದು ಹೊರಟೆ. ದಾರಿಯಲ್ಲಿ ನನ್ನ ಕಣ್ಣನ್ನೇ ನಂಬಲಾಗುತ್ತಿಲ್ಲ. ತೆಂಗಿನ ಮರಗಳು ಭತ್ತದ ಗದ್ದೆ , ಗುಡ್ಡ ಇಳಿಜಾರು ಜಲಪಾತ ನೋಡಿ ಆಶ್ಚರ್ಯವಾಯಿತು. ಒಂದು ಸೆಕೆಂಡಿಗೆ ಅಯ್ಯೋ! ಇದು ನಮ್ಮ ಮಂಗಳೂರು ತರಾನೇ ಇದೆ! ಅನ್ಸೋಕೆ ಶುರುವಾಯಿತು. ನನ್ನ ತಲೆಯಲ್ಲಿ ಇದ್ದ ಗೋವಾ ನನ್ನ ಕಣ್ಣಿಗೆ ಕಾಣುತ್ತಿದ್ದ ಗೋವಾಗೆ ಅಜಗಜಾಂತರ ವ್ಯತ್ಯಾಸ. ಮನಸು ಮುದಗೊಂಡಿತು. ಈ Quinta da santana ಜಾಗ ಇದ್ದಿದ್ದು ಯಾವುದೋ ಒಂದು ಸಣ್ಣ ಹಳ್ಳಿಯೊಳಗಡೆ. ಸುಮಾರು ಎರಡು ಗಂಟೆಗಳ ಡ್ರೈವ್ ನಂತರ ಎಲ್ಲೋ ಹಳ್ಳಿಯ ಕೊನೆಯಲ್ಲಿ ಸಿಕ್ಕಿತು ಮನೆ. ಕ್ರಿಸ್ಟೊವೊ ಅನ್ನೋ ಪುಣ್ಯಾತ್ಮ ಈ ಕಾಡಿನೊಳಗೆ ಬಂದು ಮನೆ ಕಟ್ಟಿ ನಮ್ಮಂತವರಿಗೆ ಬಾಡಿಗೆ ಕೊಡುತ್ತಿದ್ದಾರೆ. ಹಳೆಯ ವಿಂಟೇಜ್‌ ಕಾರುಗಳ ಸಂಗ್ರಹ ಆತನ ಹವ್ಯಾಸ. ಆ ಕಾರುಗಳ ಸಂಗ್ರಹವು ಅದ್ಭುತವಾಗಿದೆ.

ನಿಶ್ಯಬ್ದ ಕಾಡಿನೊಳಗಿರುವ ಸುಖವೇ ಬೇರೆ. ಈ ಸಿಟಿಯಲ್ಲಿ ಇದ್ದು ಇದ್ದು ನಮ್ಮ ಕಿವಿಗಳು ಸೂಕ್ಷ್ಮತೆಗಳನ್ನೇ ಕಳೆದುಕೊಂಡಿವೆ. ಮಳೆಗೆ ಮುಂಚಿನ ಗಾಳಿಯ ಹಾರಾಟ. ಆ ರಭಸಕ್ಕೆ ಎಲೆಗಳ ನಲುಗಾಟ. ಹಕ್ಕಿ ಪುಕ್ಕಗಳ ಚೆಲ್ಲಾ ಪಿಲ್ಲಿ,ಕೊಂಚ ಧೂಳು ಹಾರುತ್ತೆ. ಇದೆಲ್ಲದರ ಸದ್ದು, ನಂತರ ಮಳೆಯ ನರ್ತನ, ಹಬೆ ಮಣ್ಣಿನ ವಾಸನೆ, ಅಪರೂಪದ ಹೂಗಳು, ಎಲೆಗಳು, ಗಿಡಗಳು… ಅಬ್ಬಬ್ಬಾ ಸ್ವರ್ಗಕ್ಕೆ ಮೂರೇ ಗೇಣು.

ಮಳೆ ಆರ್ಭಟ ಮುಗಿಯೋದ್ರೊಳಗೆ ಸ್ವಲ್ಪ ಮ್ಯಾಗಿ ಮಾಡ್ಕೊಂಡು ತಿಂದು ಹೊರಗೆ ಹೋಗೋಣ ಅಂತ ಹೊರಟೆ. ಸುತ್ತಲಿನ ಪ್ರದೇಶವೆಲ್ಲ ಹಳ್ಳಿ. ದೂರ ದೂರಕ್ಕೆ ಒಂದೊಂದು ಮನೆ. ಗುಡ್ಡಗಾಡಿನ ಪ್ರದೇಶ, ಟೈಮ್ ಟೈಮಿಗೆ ಸರಿಯಾಗಿ ಹಾಲು, ಮೀನು, ಬನ್ ಮಾರುವವರು ಗಾಡಿಯಲ್ಲಿ ಸೈರನ್ ಹೊಡೆಯುತ್ತಾ ಬರುತ್ತಾರೆ. ಟೈಮು ಎಷ್ಟೆಂದು ಯಾರನ್ನು ಕೇಳಬೇಕಾಗಿಲ್ಲ. ಮೀನು ಮಾರುವವ ಊರಿನಲ್ಲಿ ಓಡಾಡುತ್ತಿದ್ದಾನೆಂದರೆ ಸುಮಾರು 8:30.

ವ್ಯವಸಾಯ ಆಧರಿಸಿದ ಜೀವನ. ಮರ-ಗಿಡಗಳ ನಡುವಿನ ಪ್ರಶಾಂತ ವಾತಾವರಣ. ಸ್ವಲ್ಪ ದೂರಕ್ಕೆ ಹೋದರೆ ಸಮುದ್ರ. ನೀಲಿ ಸೀರೆಗೆ ಹಸಿರು ಜರಿ. ಅಲೆಗಳು ಬಂದು ಅಪ್ಪಳಿಸಿದಾಗ ಯಾರೋ ಉಯ್ಯಾಲೆ ಕಟ್ಟಿ, ನನ್ನನ್ನು ತೂಗಿ ಜೀಕಿದ ಹಾಗೆ. ಪ್ರತಿ ಸಲವೂ ಅಲೆಗಳಿಗೆ ಕಾಯುವುದು. ಎಷ್ಟು ಸಲ ತೂಗಿದರು ಅದು ಕಡಿಮೆ ಅನಿಸುತ್ತದೆ. ಮಳೆ ಸುರಿಯುತ್ತಿದ್ದರೆ ಆಕಾಶಕ್ಕೂ ಸಮುದ್ರಕ್ಕೂ ಅಂತರವೇ ಇರುವುದಿಲ್ಲ. ಆಕಾಶ ಭೂಮಿ ಎರಡೂ ಒಂದಾದಂತಹ ಮನಮೋಹಕ ದೃಶ್ಯ.

ಇಲ್ಲಿ ಕ್ರಿಶ್ಚಿಯನ್ನರು ಹೆಚ್ಚು. ನಮ್ಮ ಊರುಗಳಲ್ಲಿರುವ ಹಾಗೆಯೇ ಊರಿನ ಹೆಬ್ಬಾಗಿಲಲ್ಲಿ ಸಣ್ಣ ಗುಡಿ ಅದರಲ್ಲಿ ಏಸು. ಉದ್ದಕ್ಕೂ ತೆಂಗಿನ ಮರಗಳು. ಬಣ್ಣ ಬಣ್ಣದ ಮನೆಗಳು. ಈ ಬಣ್ಣದ ಮನೆಗಳ ಹಿಂದೆ ಒಂದು ಅಚ್ಚರಿಯ ಕಥೆ ಇದೆ. ಈ ಮನೆಗಳು ಹೇಗೆ ಬಂದವು? ಹುಡುಕುತ್ತಾ ಹೋದೆ.

ಗೋವಾದ ಈ ಹೊಸ ಹೆಸರು ಕೇಳಿ ನನಗೆ ಆಶ್ಚರ್ಯ. ಗೋಪಕ ಪಟ್ಟಣ, ಗೋಪಕಪುರಿ. ಮಹಾಭಾರತದಲ್ಲಿ ಇದರ ಹೆಸರು ಗೋಮಂತಕ್. ಗೋವುಗಳಿರುವ ರಾಷ್ಟ್ರವಂತೆ.

ಈ ಊರು, ಈ ಊರಿನ ಹೆಸರಿನ ಕತೆ ಹುಡುಕಿದಾಗ ಸಿಕ್ಕ ಕತೆಯಿದು. ಸ್ಕಂದ ಪುರಾಣದಲ್ಲಿ ಹೇಳುತ್ತಾರಂತೆ ವಿಷ್ಣು ತನ್ನ ಆರನೇ ಅವತಾರದಲ್ಲಿ ಪರಶುರಾಮನಾದಾಗ , ಪಶ್ಚಿಮ ಘಟ್ಟಗಳ ಮೇಲೆ ನಿಂತು ಸಮುದ್ರದ ಕಡೆ ಬಾಣವನ್ನು ಹೂಡುತ್ತಾನಂತೆ. ಬಾಣ ಎಲ್ಲಿ ಬಿದ್ದಿತ್ತೋ ಆ ಜಾಗವನ್ನು ಬಿಡಲು ಸಮುದ್ರರಾಜನಿಗೆ ಹೇಳುತ್ತಾನೆ. ಆ ಜಾಗವನ್ನು ಪರಶುರಾಮ ತನ್ನ ರಾಜ್ಯವೆಂದು ಆ ಜಾಗದ ಹೆಸರು ಬೆನಾಲಿ (ಅರ್ಥ: ಬಾಣ ಬಿದ್ದಿರುವ ಭೂಮಿ) ಎಂದಾಗುತ್ತದೆ. ಇಂದಿನ ಆ ಜಾಗದ ಹೆಸರು ಬೆನೌಲಿಮ್.

ಮೊದಲಿಗೆ ಗೋವಾ, ಮೌರ್ಯ ಸಾಮ್ರಾಜ್ಯದ ಒಂದು ಭಾಗವಾಗಿತ್ತಂತೆ. ಇದಾದ ನಂತರ ಚಾಲುಕ್ಯರು ರಾಷ್ಟ್ರಕೂಟರು ಕದಂಬರು ಈ ರಾಜ್ಯವನ್ನು ಆಳಿದ್ದಾರೆ. ಚಾಲುಕ್ಯರ ನಂತರ ಬಹಮನಿ ಸುಲ್ತಾನರ ಪಾಲಾಯಿತು. ನಂತರ ಪೋರ್ಚುಗೀಸರು ಇದರ ಮೇಲೆ ದಾಳಿ ಮಾಡುತ್ತಾರೆ. ಅಲ್ಫೋನ್ಸೊ ಡಿ ಅಲ್ಬುಕರ್ಕ್, ಮೊದಲಿಗೆ ಗೋವಾದ ಸುಲ್ತಾನರೆದುರಿಗೆ ಸೋಲುತ್ತಾನೆ. ಮತ್ತೆ ದಂಡೆತ್ತಿ ಬಂದಾಗ , ಆದಿಲ್ ಶಾ ಸೋಲುತ್ತಾನೆ. ಈ ರಾಷ್ಟ್ರವು ಪೋರ್ಚುಗೀಸರ ಪಾಲಾಗುತ್ತದೆ. ಗೋವಾ ಸರಿಸುಮಾರು ೪೫೦ ವರ್ಷಗಳ ಕಾಲ ಪೋರ್ಚುಗೀಸರ ಆಳ್ವಿಕೆಯಲ್ಲಿರುತ್ತದೆ. ಹದಿನಾರನೇ ಶತಮಾನದ ಕೊನೆಯ ವೇಳೆಗೆ ಗೋವಾ ʼಗೋಲ್ಡನ್ ಗೋವಾʼ ಆಗಿರುತ್ತದೆ. ʼಲಿಸ್ಬನ್ ಆಫ್ ದ ಈಸ್ಟ್ʼ ಅಂತಾರೆ (ಗೋವಾ ನೋಡಿದರೆ ಲಿಸ್ಟನ್ ನೋಡುವುದೇ ಬೇಡವಂತೆ). ಅಷ್ಟು ಸುಂದರವಾಗಿ ಗೋವಾವನ್ನು, ಲಿಸ್ಬನ್ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಉತ್ತರ ಭಾಗದಲ್ಲಿ ಪೋರ್ಚುಗೀಸರ ಮೊದಲ ಕಾಲೋನಿ ಗೋವಾ ಆಗಿರುತ್ತದೆ. ವ್ಯಾಪಾರಕ್ಕೆಂದು ಬಂದ ಇವರು, ಇಲ್ಲಿನ ಸಂಪತ್ತು ಕಂಡು ಇಲ್ಲಿಯೇ ತಳವೂರುತ್ತಾರೆ. ಹಾಗಾಗಿ ನಾವು ನೋಡುವ ಕಟ್ಟಡಗಳಲ್ಲಿ ಜನ ಜೀವನ ಶೈಲಿಯಲ್ಲಿ ಆಹಾರ ಪದ್ಧತಿಗಳಲ್ಲಿ ಇವರ ಛಾಯೆ ಕಾಣಿಸುತ್ತದೆ. ಬಣ್ಣ ಬಣ್ಣದ ಮನೆಗಳು ಪೋರ್ಚುಗೀಸರ ಕೊಡುಗೆ.

ಇಷ್ಟೆಲ್ಲಾ ದಾಳಿಗಳನ್ನು ಸಹಿಸಿ ಇಂದಿಗೆ ಉಳಿದಿರುವ ಗೋವಾ ಇಷ್ಟು. ಗೋವಾ ಎಂದರೆ ಎಲ್ಲರ ಮನಸ್ಸಿನಲ್ಲಿ ಬರುವುದು ಪೋರ್ಚುಗೀಸರ ಕಟ್ಟಡ ಶೈಲಿ, ಆಹಾರ ಪದ್ಧತಿ ಇತ್ಯಾದಿ ಇತ್ಯಾದಿ.

ಇದು ನಾನು ಕಂಡ ಗೋವಾ.

‍ಲೇಖಕರು Admin

November 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: