ಗೋಪಾಲ ವಾಜಪೇಯಿ, ಲಿಯರ್, ನಂದ..

ಅವಧಿಯ ಅಂಕಣಕಾರರಾದ  ಗೋಪಾಲ ವಾಜಪೇಯಿ ಅವರ ಹೊಸ ನಾಟಕ  ಸಧ್ಯದಲ್ಲೇ ಬಿಡುಗಡೆಯಾಗಲಿದೆ ( ಭಾನುವಾರ, ಜನವರಿ ೨೦, ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ)

ಗೋಪಾಲ ವಾಜಪೇಯಿ ಅವರ ಬರಹದ ಸೊಗಡನ್ನು ಅವಧಿಯಲ್ಲಿ ಸವಿದವರಿಗೆ ‘ಇದು ಸುದ್ದಿ, ಇದು ಸುದ್ದಿ…’

ಬಳ್ಳಾರಿಯ ಸುಯೋಧನಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಆ ಕೃತಿಗೆ ಶೇಕ್ಸ್ಪಿಯರ್ ಬಗ್ಗೆ ಆತನ ನಾಟಕಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಸುಧಾ ಚಿದಾನಂದಗೌಡ ಅವರು ಬರೆದ ಮಹತ್ವದ ಬರಹ ಇಲ್ಲಿದೆ.

ಅವಧಿ ಓದುಗರಿಗೆ ಇದು ಹಬ್ಬದ ಮುಂಚಿನ ಹೋಳಿಗೆ..

++

ಆ ಲಿಯರ್……ಈ ನಂದ…

ಸುಧಾ ಚಿದಾನಂದಗೌಡ.

 
ಶೇಕ್ಸ್ಪಿಯರ್ ಕನ್ನಡಕ್ಕೆ (ರೂಪಾಂತರ ಮತ್ತು ಭಾಷಾಂತರ-ಎರಡೂ ಮಾರ್ಗಗಳಲ್ಲಿ) ಹಲವುನೂರು ಬಾರಿ ಬಂದಿದ್ದಾನೆ.
ಕೆಲಕೃತಿಗಳು ಕನ್ನಡಕವಿ, ಲೇಖಕರಿಗೆ ತುಂಬ ಪ್ರಿಯವಾಗಿ ಕಂಡಿದ್ದರೆ ಮತ್ತೆ ಕೆಲವು ಯಾವುದೋ ಕಾರಣದಿಂದ ಅಷ್ಟು ಆಕರ್ಷಕವಾಗಿ ಕಾಣದೆಯೋ, ಜನಪ್ರಿಯವಲ್ಲ ಎಂಬುದಕ್ಕಾಗಿಯೋ ಅಥವಾ ತುಂಬ ದೀರ್ಘ ಎಂಬ ಕಾರಣದಿಂದಲೋ ಕನ್ನಡಕ್ಕೆ ಒಗ್ಗಿಲ್ಲ. ಆದರೆ ಲೋಕಪ್ರಸಿದ್ಧವಾದ ಆಂಟನಿ ಮತ್ತು ಕ್ಲಿಯೋಪಾತ್ರಾ ಕನ್ನಡದಲ್ಲಿ ರೂಪಾಂತರಕ್ಕೆ ಒಳಗಾಗಿಯೇ ಇಲ್ಲ. (ಭಾಷಾಂತರಗೊಳಿಸಿರುವವರು ಕೆ. ಮಲ್ಲರಾಜ್ ಅರಸ್ ಹಾಗೂ ಜಿ.ಎನ್ ರಂಗನಾಥರಾವ್) ಆದರೆ ಸಂಕೀರ್ಣ ಕೃತಿ ಹ್ಯಾಮ್ಲೆಟ್ ಹನ್ನರಡು ಬಾರಿ ಕನ್ನಡಕ್ಕೆ ಬಂದಿದೆ! ಮ್ಯಾಕ್ಬೆತ್ ಮತ್ತು ಒಥೆಲೋ ಎಂಟುಬಾರಿ ಕನ್ನಡೀಕರಣಗೊಂಡಿವೆ. ದಿ ಟೆಂಪೆಸ್ಟ್ ಕನ್ನಡ ಸಾಹಿತ್ಯದ ದಿಗ್ಗಜರನ್ನು ಬಹುವಾಗಿ ಆಕಷರ್ಿಸಿದೆ. ಚಂಡಮಾರುತವಾಗಿ ಮೂತರ್ಿರಾವ್ ಮತ್ತು ಮಾಸ್ತಿಯವರು ಭಾಷಾಂತರಿಸಿದರೆ ಬಿರುಗಾಳಿಯಾಗಿ ಕುವೆಂಪು ರೂಪಾಂತರಿಸಿದ್ದಾರೆ.
ಪ್ರಸ್ತುತ ಕೃತಿ ಕಿಂಗ್ಲಿಯರ್ ಇದೇ ಸಾಲಿಗೆ ಸೇರುವಂಥದ್ದು. ಇದುವರೆಗೆ ಮೂರು ಬಾರಿ ಕನ್ನಡಕ್ಕೆ ಬಂದಿದೆ. ಮೊಟ್ಟಮೊದಲ ಬಂದದ್ದು ರೂಪಾಂತರವಾಗಿ. ಎಂ.ಎಸ್. ಪುಟ್ಟಣ್ಣನವರು ಲಿಯರ್ನನ್ನು ಹೇಮಚಂದ್ರವಿಲಾಸವನ್ನಾಗಿಸಿ 1899ರಲ್ಲಿ ಪ್ರಕಟಿಸಿದ್ದಾರೆ. ನಂತರ ಮಾಸ್ತಿ ವೆಂಕಟೇಶ್ ಐಯಂಗಾರ್ರವರು ಲಿಯರ್ ಮಹಾರಾಜ ಹೆಸರಿನಲ್ಲಿ ಭಾಷಾಂತರಿಸಿ 1959ರಲ್ಲಿ ಜೀವನ ಕಾರ್ಯಾಲಯದಿಂದ ಪ್ರಕಟಿಸಿದರು. ಹೆಚ್.ಎಸ್.ಶಿವಪ್ರಕಾಶ್ರವರ ಕಿಂಗ್ ಲಿಯರ್ ಮತ್ತೊಂದು ಭಾಷಾಂತರ. ಇದು ಇತ್ತೀಚೆಗಿನದು-ಅಂದರೆ 1998ರಲ್ಲಿ ಪ್ರಕಟವಾಗಿದೆ. ಮತ್ತೀಗ ಗೋಪಾಲ್ ವಾಜಪೇಯಿಯವರು ರಚಿಸಿದ ರೂಪಾಂತರ ನಂದಭೂಪತಿ ಓದುಗರೆದುರಿಗಿದೆ.
ಶೇಕ್ಸ್ಪಿಯರ್ ಕಿಂಗ್ ಲಿಯರ್ ರಚಿಸಿದ್ದು ಕ್ರಿ.ಶ. 1905-06ರ ಅವಧಿಯಲ್ಲಿ. ಮೊದಲು ಪ್ರಕಟಣೆಗೊಂಡಿದ್ದು ಕ್ರಿ.ಶ. 1608ರಲ್ಲಿ. ಶೇಕ್ಸ್ಪಿಯರನಿಗೂ ಹಿಂದೆ ಅನಾಮಿಕ ಲೇಖಕನೊಬ್ಬ ಇದೇ ಹೆಸರಿನ ನಾಟಕವನ್ನು ರಚಿಸಿದ್ದಕ್ಕೆ ದಾಖಲೆಗಳಿವೆ. ಆ ಅನಾಮಿಕ ನಾಟಕಕಾರ, ಸ್ಪೆನ್ಸರ್ನ ಫೇರಿ ಕ್ವೀನ್, ಸಿಡ್ನಿಯ ಅಕರ್ೆಡಿಯಾ ಇವುಗಳನ್ನು ಆಧರಿಸಿ ಶೇಕ್ಸ್ಪಿಯರ್ ಕಿಂಗ್ ಲಿಯರ್ ರುದ್ರ ನಾಟಕವನ್ನು ಸೃಜಿಸಿದ್ದಾನೆ. ಶೇಕ್ಸ್ಪಿಯರ್ನ ನಾಲ್ಕು ಮಹಾರುದ್ರನಾಟಕಗಳಲ್ಲಿ ಕಿಂಗ್ ಲಿಯರ್ ಪ್ರಚಂಡ ಕೃತಿಯೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. (ಉಳಿದ ಮೂರು ನಾಟಕಗಳೆಂದರೆ ಮ್ಯಾಕ್ಬೆತ್, ಹ್ಯಾಮ್ಲೆಟ್, ಒಥೆಲೋ) ಈ ನಾಟಕಕ್ಕಿರುವ ಟೀಕೆಗಳೆಂದರೆ ನಾಟಕದಲ್ಲಿ ಐಕ್ಯತೆಯಿಲ್ಲ, ಚೆದುರಿದಂತಿದೆ, ಉದ್ದೇಶ ಅಸ್ಪಷ್ಟವಾಗಿದೆ, ಅಚ್ಚುಪ್ರತಿ ರಂಗಕ್ಕೆ ತಾಳೆಯಾಗುವುದಿಲ್ಲ ಇತ್ಯಾದಿ. ಅವೆಲ್ಲ ಮೀರಿ ವಿವೇಚನಾರಹಿತ ತಂದೆ, ಕೃತಘ್ನ ಮಕ್ಕಳ ಕಿಂಗ್ ಲಿಯರ್ ಪ್ರಪಂಚದಾದ್ಯಂತ ಸಹೃದಯರ ಎದೆ ತಟ್ಟುವ ಕೃತಿಯಾಗಿ ಮೆರೆಯುತ್ತಿದೆ.
ಅನುವಾದವು, ಹಾಗೆ ನೋಡಿದರೆ ಕನ್ನಡಕ್ಕೆ ಹೊಸದೇನಲ್ಲ. ಆದರೆ ಪ್ರಸಿದ್ಧಕೃತಿಗಳು ಮೊದಲು ಬಂದದ್ದು ರೂಪಾಂತರವಾಗಿಯೇ. ರೂಪಾಂತರವೇ ಹೆಚ್ಚು ಪರಿಚಿತ. ಲೇಖಕ ಮಾತೃಭಾಷೆಯಲ್ಲಿ ಬರೆದುಕೊಂಡು ಹೋಗುವಾಗ ಭಾಷೆ ಹಾಗು ವಸ್ತು ನಿರರ್ಗಳವಾಗಿ ಎಲ್ಲೂ ನಿಲ್ಲದ ಓಘವೊಂದು ಪ್ರಾಪ್ತವಾಗಿರುತ್ತದೆ. ಆದರೆ ಅದೇ ಪಾಶ್ಚಾತ್ಯಕೃತಿಯಾಗಿದ್ದರೆ ಭಾಷಾಂತರವು ಪ್ರಶ್ನೆಗಳನ್ನೆದುರಿಸಬೇಕಾಗುತ್ತದೆ. ಮ್ಯಾಕ್ಬೆತ್ನಾಟಕದಲ್ಲಿ ಡಿವಿಜಿಯವರು ಲೇಡಿ ಮ್ಯಾಕ್ಬೆತ್ಳು ಡಂಕನ್ ಮಹಾರಾಜನನ್ನು ಕೈಹಿಡಿದು ತಮ್ಮ ಮಹಲಿನೊಳಕ್ಕೆ ಕರೆದೊಯ್ಯುವ ಸಂದರ್ಭವನ್ನು ಹೇಗಿದೆಯೊ ಹಾಗೆ ಭಾಷಾಂತರಿಸಿದಾಗ
ಭಾರತೀಯ ರಾಜಕುಲದ ಯಾವ ಮಹಿಳೆಯೂ ಹೀಗೆ ಪರಪುರುಷನನ್ನು ಸ್ಪéಷರ್ಿಸುವುದಿಲ್ಲ, ಅದೆಷ್ಟೇ ಹಿರಿಯನಾಗಿದ್ದರೂ ಎಂಬ ಕೂಗೆದ್ದಿತ್ತು. ಡಿವಿಜಿ ತಮ್ಮ ಬರವಣಿಗೆ, ನಿಲುವುಗಳನ್ನೇನೂ ಬದಲಾಯಿಸಲಿಲ್ಲ. ಆದರೆ ಪ್ರಶ್ನೆ ಎದುರಾಗಿದ್ದಂತೂ ನಿಜ.
ಆದರೆ ರೂಪಾಂತರಕ್ಕೆ ಈ ಜಂಜಾಟವಿಲ್ಲ.
ಬದಲಾವಣೆ ಸಹಜರೀತಿಯಲ್ಲಿ, ಆಟೋಮ್ಯಾಟಿಕ್ಕಾಗಿ ನಡೆದುಹೋಗುತ್ತದೆಯಾದ್ದರಿಂದ ರೂಪಾಂತರಗಳು ಅಷ್ಟರಮಟ್ಟಿಗೆ ಸುರಕ್ಷಿತಮಾರ್ಗವೇ ಹೌದು. ಭಾಷೆ, ವೇಶಭೂಷಣ, ಹೆಸರು, ಪ್ರದೇಶ, ಸಂದರ್ಭಗಳು, ಹೀಗೆ ಸಕಲವು ನೆಲಮೂಲದ್ದೇ ಆಗುವುದರಿಂದ ಮೂಲದ ಹಂಗಿನಿಂದ ಭೌತಿಕವಾಗಿ ಕಳಚಿಕೊಂಡುಬಿಡುವ ಹಂಬಲಿಕೆಯಲ್ಲೆ ಇವು ಇರುವಂತೆ ಕಾಣುತ್ತವೆ. ಅದು ಸರಿಯಾದದ್ದೂ ಹೌದು. ಮೂಲನಿಷ್ಠಕೃತಿಯಾಗಿಯೂ, ಸ್ವತಂತ್ರವಾಗಿಯೂ ಉಳಿದುಕೊಳ್ಳಬಹುದಾದ ಮಾರ್ಗ ಇದು. ಮೂಲಕಥಾವಸ್ತುವೊಂದು ಕೇಂದ್ರದಲ್ಲಿರುವುದರಿಂದ ಸಹಜವಾಗಿ ಪಾತ್ರಗಳ ಪರಿಭ್ರಮಣೆ ವಸ್ತುವಿನ ಸುತ್ತಲೂ ಇದ್ದೆತೀರುತ್ತದೆಂಬ ಒಂದಂಶದಿಂದ ಮೂಲಕೃತಿಗೆ ನಿಷ್ಠೆಯನ್ನೂ ರೂಪಾಂತರಗಳು ಸಾಧಿಸಿಕೊಳ್ಳುತ್ತವೆ. ಆದರೆ ಭೌತಿಕವಾಗಿ ಅಲ್ಲ. ಇದನ್ನು ಕುವೆಂಪು ರಕ್ತಾಕ್ಷಿ ಮೂಲಕ ಸಾಧಿಸಿತೋರಿಸಿದ್ದಾರೆ. ಇನ್ನೊಂದೆಡೆ ಈಡಿಪಸ್ನನ್ನು ಭಾಷಾಂತರಿಸಿದ ಪಿ. ಲಂಕೇಶ್ ಆ ಮಿತಿಯಲ್ಲಿಯೂ ಒಂದೊಂದು ಪದವನ್ನಾದರೂ ಬದಲಾಯಿಸಿದರು. ಉದಾ: ಆಲಿವ್ ಮರ ಎಂಬಲ್ಲಿ ಜೀವವೃಕ್ಷ ಎಂಬ ಪದಬಳಕೆ. ಅದು ಆ ಸಂದರ್ಭದ ವಾತಾವರಣವನ್ನೆ ಬದಲಾಯಿಸಬಲ್ಲುದು. ಆಲಿವ್ ಮರಕ್ಕೆ ವಿಶಾಲಾರ್ಥದಲ್ಲಿ ಜೀವವೃಕ್ಷ ಎಂಬ ಅರ್ಥವು ಅಲ್ಲಿ ಸಾಂದಭರ್ಿಕವಾಗಿ ಬರುತ್ತದೆ. ಮೂಲಕೃತಿಯಲ್ಲಿ ಇಂಥ ಸೂಕ್ಷ್ಮವಾದ ಹೊಳಹುಗಳಿಗಾಗಿ ಹುಡುಕಾಟವನ್ನು ರೂಪಾಂತರಕಾರರು ಕನ್ನಡದಲ್ಲಿ ಧೀಮಂತವಾಗಿ ನಡೆಸಿದ್ದಾರೆ. ಇಂಥದೊಂದು ಜಿಜ್ಞಾಸೆ ವಾಜಪೇಯಿಯವರ ರೂಪಾಂತರಗಳ ಅಧ್ಯಯನ ನಡೆಸುವಾಗಲು ಕಂಡುಬಂದಿರುವುದು ಆಶ್ಚರ್ಯವೇನೂ ಇಲ್ಲ. ಭಾಷಾಭೈರಿಗೆ ಇಲ್ಲಿ ಕೊರೆಯುವುದಿಲ್ಲ. ಬದಲಿಗೆ ಸೂಕ್ಷ್ಮಗಳನ್ನೊಳಗೊಂಡು ಸಹೃದಯತೆಯಿಂದ ಓದುಗರನ್ನು ಆವರಿಸಿಕೊಳ್ಳುತ್ತದೆ.
ಕಿಂಗ್ಲಿಯರ್ ನಾಟಕದ ಕೇಂದ್ರಬಿಂದು ತಂದೆಯ ಸಂಕಟ, ಮೂರ್ಖತನ, ಸಣ್ಣತನ, ಸ್ವಾಭಿಮಾನವೆನ್ನುವುದೆ ಆದರೂ ಇದು ಹೊರ ಆವರಣ ಮಾತ್ರ. ನೈಜದಲ್ಲಿ ಇದು ಸ್ತ್ರೀವಾದಕ್ಕೆ ಸವಾಲೆಸೆಯುವ ಕಥಾವಸ್ತುವನ್ನು ಒಳಗೊಂಡಿದೆ. ಸ್ತ್ರೀಪುರುಷರಲ್ಲಿನ ಆಶೆ, ಮೋಹ, ಭಾವಾವೇಶ, ಆಶೆಬುರುಕತನ, ನೈತಿಕ ಅಧ:ಪತನ, ಪಶ್ಚಾತ್ತಾಪಕ್ಕೆಡೆಯಿಲ್ಲದಂತೆ ಮುಗಿದುಹೋಗುವ ಬದುಕು, ಈ ಚಿತ್ರಗಳನ್ನು ಕಟ್ಟಿಕೊಡುವಾಗ ಶೇಕ್ಸ್ಪಿಯರ್ ಲಿಂಗಭೇದವಿಲ್ಲದೆ ತಾನು ಸೃಜಿಸಿರುವ ಸ್ತ್ರೀ-ಪುರುಷ ಪಾತ್ರಗಳನ್ನು ಸಮಾನವಾಗಿ ಕಾಣುತ್ತಾನೆ. ಈ ನಾಟಕ ಬರೆಯುವ ಹೊತ್ತಿಗೆ ಶೇಕ್ಸ್ಪಿಯರ್ ಮನಸು ಮಾಗಿರಲಿಕ್ಕೂ ಸಾಕು. ಮೂವರು ಮಕ್ಕಳ ತಂದೆಯಾದ ಶೇಕ್ಸಪಿಯರ್ ತಂದೆಮಕ್ಕಳ, ತಾಯಿಮಕ್ಕಳ ಬಾಂದವ್ಯವನ್ನು ಮಾನವೀಯತೆಯ ಮಿತಿಯಲ್ಲಿಟ್ಟು, ಅಳೆದು ತೂಗಿದವನು. ತಾಯ್ತನ, ತಂದೆತನಗಳೂ ಮಿತಿಯೊಳಗೇ ಇರುವ ಸಂಬಂಧ ಎಂದು ತೋರಿಸಿ, ಒಂದುಕ್ಷಣ ಓದುಗರು ಬೆಚ್ಚುವಂತೆ ಮಾಡಿದವನು. ಗಟ್ರರ್ೂಡೆ, ಕ್ಲಿಯೊಪಾತ್ರಾ ಕೂಡಾ ತಾಯಂದಿರೆ. ಆದರೆ ಅದರ ಜೊತೆಗೆ ಅವರು ವ್ಯಕ್ತಿಗಳೂ ಹೌದಲ್ಲ, ಅದರ ಬಗ್ಗೆ ಶೇಕ್ಸ್ಪಿಯರ್ಗೆ ಕಾಳಜಿ ಎಂದರೂ ತಪ್ಪಿಲ್ಲ. ಮಹಿಳೆಯು ತಾಯಿಯಾದೊಡನೆ ಅವಳಲ್ಲಿನ ಸ್ತ್ರೀತ್ವ ಕಳೆದುಹೋಗಿಬಿಡುವುದಿಲ್ಲ. ಅದಕ್ಕೆ ತಕ್ಕಂತೆ ಅವರಿಂದ ಘಟಿಸುವ ತಪ್ಪುಗಳಿಗೆ ಶೇಕ್ಸ್ಪಿಯರ್ನಲ್ಲಿ ಕ್ಷಮೆಯಿದೆ. ಆದರೆ ಲಿಯರ್ದೊರೆಯ ಹಿರಿಯ ಇಬ್ಬರು ಹೆಣ್ಣುಮಕ್ಕಳು ಮಾಡುವ ಅಪರಾಧಕ್ಕೆ ಕ್ಷಮೆ ಇಲ್ಲ-ಓದುಗರ ದೃಷ್ಟಿಯಲ್ಲಿ. ಇರಬಾರದು ಸಹಾ. ಅವರಿಬ್ಬರಲ್ಲಿರುವುದು ಮಾನವೀಯತೆಯ ಕೊರತೆ. ಅಪ್ರಾಮಾಣಿಕತೆ, ದುರಾಸೆ, ತಂದೆಯೆಡೆಗೆ ಕೃತಜ್ಞಹೀನತೆ ಇದೆಲ್ಲದರ ಜೊತೆಗೆ ಅನೈತಿಕತೆಯು ಬೆರೆತಾಗ ಅವರಿಬ್ಬರ ಪಾಪದ ಕೊಡ ತುಂಬಿದಂತೆಯೇ.
ಇಂಥ ಕಡೆಗಳಲ್ಲಿ ಆ ಕಥೆ ಯಾವ ಸಂಸ್ಕೃತಿಯದು ಎಂಬ ಪ್ರಶ್ನೆ ಬರುವುದಿಲ್ಲ. ಎಲ್ಲಾ ನಾಗರಿಕತೆಗಳಲ್ಲೂ ಎಲ್ಲೋ ಒಂದೆಡೆ ಅನೈತಿಕತೆಗೆ ಮನಸೋತವರು, ಅದನ್ನೆ ಸರಿಯೆಂದು ಭಾವಿಸುವವರು, ಅದರಿಂದ ಸಂಬಂಧಗಳು ಹದೆಗೆಡುವುದನ್ನು ಅರಿಯದವರು ಇದ್ದೇ ತೀರುತ್ತಾರೆ, ಎಲ್ಲಾ ದೇಶಗಳಲ್ಲೂ, ಎಲ್ಲಾ ಕಾಲದಲ್ಲೂ, ಎಲ್ಲಾ ಸಮಾಜಗಳಲ್ಲೂ ಇದು ಶಕ್ಯ. ಗಂಡುಹೆಣ್ಣು ಭೇದ ಇಲ್ಲಿ ಬರುವುದಿಲ್ಲ. ತಪ್ಪು ಯಾರು ಮಾಡಿದರೂ ಅದು ಅನೈತಿಕತೆಯೇ-ಗಂಡಾಗಲೀ, ಹೆಣ್ಣಾಗಲೀ. ಆದರೆ ತಪ್ಪೆಂದು ತೀಪರ್ು ಕೊಡುವಾಗಲೂ ಮನುಷ್ಯತ್ವದ ನೆಲೆಯನ್ನು ಶೇಕ್ಸ್ಪಿಯರ್ ನೆಲೆಗಟ್ಟನ್ನಾಗಿಸಿಕೊಳ್ಳುವುದು ಗಮನಾರ್ಹ. ಅದು ಸರಿಯಾದದ್ದೂ ಹೌದು. ಹೇತುವನ್ನು ನಾಟಕಕಾರ ಇಲ್ಲಿ ಮುಖ್ಯವಾಗಿಸಿಕೊಳ್ಳುತ್ತಾನೆ. ಪಶ್ಚಾತ್ತಾಪದಿಂದ ಸಾವು ಬಯಸುವ ಈಡಿಪಸ್ ಎಲ್ಲೂ ಓದುಗರಿಗೆ ಖಳನಾಯಕನಂತೆ ಕಾಣದಿರುವುದು ಈ ಹೇತುವಿನ ಕಾರಣಕ್ಕೇನೇ. ಸರಿತಪ್ಪುಗಳನ್ನು ತೂಗಿನೋಡುವಾಗ ತಪ್ಪು ನಡೆದಿದ್ದು ಏಕೆ, ಯಾವ ಕಾರಣಕ್ಕೆ, ಯಾವ ಉದ್ದೇಶದಿಂದ ಎಂದೆಲ್ಲ ಹಲವು ನಿಟ್ಟಿನಿಂದ ತೂಗಿನೋಡುವ ವಿವೇಕವಂತ ನ್ಯಾಯಾಧೀಶನಂತೆ ಶೇಕ್ಸ್ಪಿಯರ್ ಗೋಚರಿಸುತ್ತಾನೆ. ಕಥೆಯ ಈ ಮೂಲನೆಲೆಗಟ್ಟನ್ನು ಗ್ರಹಿಸುವುದರಲ್ಲಿಯೆ ಗೋಪಾಲ್ ವಾಜಪೇಯಿ ಸಫಲರಾಗಿರುವುದು ಈ ರೂಪಾಂತರ ನಮ್ಮದೆ ದೇಶಭಾಷೆಯ ಸ್ವತಂತ್ರ, ಸೃಜನಶೀಲಕೃತಿಯಂತೆ ಭಾಸವಾಗುವಂತೆ ಮಾಡಿದೆಯೆನ್ನಲಡ್ಡಿಯಿಲ್ಲ.
ಪಾಪವನ್ನು ದ್ವೇಷಿಸು, ಪಾಪಿಯನ್ನು ಕ್ಷಮಿಸು
ಎಂಬುದು ಬಹುತೇಕ ಶೇಕ್ಸ್ಪಿಯರ್ ಕೃತಿಗಳ ಒಳತಿರುಳು. ಹೀಗೆ
ದಯೆಯೇ ಧರ್ಮದ ಮೂಲ
ಎಂಬುದನ್ನು ಒಪ್ಪುವ ಸಂಸ್ಕಾರವಂತ ಹೃದಯಗಳೂ ಶೀಲಾವತಿ ಮತ್ತು ಲೀಲಾವತಿಯರನ್ನು ಕ್ಷಮಿಸಲು ಇರುವ ಅಡ್ಡಿಯೆಂದರೆ ಅವರಿಬ್ಬರ ಕೃತಘ್ನತೆಯಿಂದ ನಂದ ಅನುಭವಿಸುವ ಇಳಿಗಾಲದ ನರಕಯಾತನೆ. ಮುಪ್ಪಿನ ಮುಸ್ಸಂಜೆಯಲ್ಲಿ ತಂದೆತಾಯಿಗಳನ್ನು ಸಲಹಲಾರದ ಎಲ್ಲ ಮಕ್ಕಳಿಗೂ ಹುಚಮಲ್ಲ ಹೇಳುವ ಮಾತುಗಳು ಅನ್ವಯಿಸುತ್ತವೆ.
ಹುಚಮಲ್ಲ:- ಸತ್ರೂ ಚಿಂತಿಲ್ಲ ಪ್ರಬೂ… ಸಾಯೂದ ಬೇಶನಸ್ತೈತಿ. ಇದೇನ ಮಾಡಾಕ ಹೊಂಟೀರಿ ನೀವು? ಹೊಗಳಿಕೀಗೆ ಬಾಯಿ ಬಿಟ್ರಿ….. ಹದಾ ಆಡಿದ ಹುಡಿಗಿ ಮ್ಯಾಲ ಸಿಟ್ಟಿಗೆದ್ರಿ…. ಇದು ವಾಜಿಮ್ಯಾ? ಇಚಾರಾ ಮಾಡ್ರಿ. ಸತ್ಯವತಿ ಆಡಿದ್ದೇನ ಸುಳ್ಳ ? ನಾ ನಿಮಗೆದರಾಡಿದ್ರ, ಯಾಡ್ಡ ಬಗದಿದ್ರ ನನ ತೆಲಿ ಕಡಸ್ರಿ. ಆದ್ರ, ಈ ಮಗಳು ಹೇಳಿದ್ದನ್ನ ಸಮಾದಾನದ್ಲೆ ತಿಳದ ನೋಡ್ರಿ, ಅಳದ ನೋಡ್ರಿ..
ಅಳೆದೂ, ತಿಳಿದೂ ನೋಡಬೇಕಾದ ದೊರೆ ಕಣ್ಣೆದುರಿಗೇ ತಪ್ಪು ಮಾಡುವುದನ್ನು ಕಂಡೂ ಸುಮ್ಮನಿರದೆ, ಧೈರ್ಯವಾಗಿ ತಿಳಿಹೇಳುವ
ಹುಚಮಲ್ಲ ಕೆಂಟ್ನಿಗೆ ಸರಿಸಾಟಿಯಾಗಿ ನಿಲ್ಲುವುದು ಹೀಗೆ ತಿಳಿಹೇಳುವ ಅಂತ:ಸತ್ವದಿಂದಾಗಿಯೇ. ಕೆಂಟ್ ಹೇಳುವುದು
ಗಮನಿಸಬೇಕಾದ್ದು-
kent:-               thy youngest daughter does not love thee least: Nor are those empty hearted, whose low sound reverbs no hollowness,… see better Lear , and let me still remain the true blank of thine eye,..I’ll tell thee, thou dost evil…
ನೀನು ಮಾಡುತ್ತಿರುವುದು ಈವಿಲ್ ಎಂದು ಹೇಳುವಾಗ ಯಾವ ಪ್ರಾಣಭೀತಿಯೂ ಕೆಂಟ್ನಲ್ಲಿ ಕಂಡುಬರುವುದಿಲ್ಲ. ಅವನನ್ನು
ಅರ್ಥ ಮಾಡಿಕೊಳ್ಳದೆ ಹೋಗುವುದರಿಂದಲೇ ಲಿಯರ್ನ ದುರಂತ ಶುರು ಎನ್ನಬಹುದು.
ಗೊನೆರಿಲ್, ರೀಗನ್ ಮತ್ತು ಕಾಡರ್ೇಲಿಯಾರನ್ನು ಗೋಪಾಲ್ ವಾಜಪೇಯಿಯವರು ಭೌತಿಕವಾಗಿಯಷ್ಟೇ ಕನ್ನಡಕ್ಕೆ ತಂದಿಲ್ಲ. ಅವರಿಗೆ ರಕ್ತಮಾಂಸದ ಜೊತೆಗೆ ಆತ್ಮವನ್ನು ತುಂಬಿ ಮರುಸೃಜಿಸಿದ್ದಾರೆಂದೇ ಭಾಷೆ, ಸಂಸ್ಕೃತಿಯನ್ನು ಮೀರಿ ವ್ಯಕ್ತಿಗಳಷ್ಟೇ ಇಲ್ಲಿ ಮುಖ್ಯವಾಗಿ, ಮಾನವಕೇಂದ್ರಿತ ಶೇಕ್ಸ್ಪಿಯರ್ ದೃಷ್ಟಿಕೋನ ನಿರಾಯಾಸವಾಗಿ ಕನ್ನಡಕ್ಕೆ ದಕ್ಕಿದೆ. ಅದಕ್ಕೆ ಒದಗಿರುವ ಜಾನಪದ ಶೈಲಿಯ ಸ್ಪರ್ಷ ಇದನ್ನು ಪುಸ್ತಕರೂಪದಲ್ಲಿಯೂ ಓದುವಂತೆ ಪ್ರೇರೇಪಿಸುತ್ತದೆ. ವೇದಿಕೆಯ ಮೇಲಂತು ಸೈ ಎನಿಸಿಕೊಂಡಿದ್ದಾಗಿದೆ. ಶೀಲಾವತಿ, ಲೀಲಾವತಿ, ಸತ್ಯವತಿಯರು ಶೇಕ್ಸಪಿಯರ್ನ ಹಂಗುತೊರೆದು ಕನ್ನಡತಿಯರಾಗಿರುವುದು ಸಹಾ ಸಂಸ್ಕೃತಿಯ ಸ್ಥಿತ್ಯಂತರವನ್ನು ಗೆದ್ದಿರುವ ಭಾಷೆ ಹಾಗೂ ನೆಲಕ್ಕೆ ಒಗ್ಗುವ ಮನುಷ್ಯಗುಣಗಳಿಂದಾಗಿಯೇ. ಪಾತ್ರಗಳ ಮೂಲಕ ಸುತ್ತಮುತ್ತಲಿನ ಪ್ರಪಂಚ ನೋಡುವ ಹೊಸದೃಷ್ಟಿಯ ಸಾಧ್ಯತೆಯನ್ನು ಓದುಗರೆದುರಿಗೆ ಹರಡುತ್ತಾರೆ ಕೃತಿಕಾರರು. ಇದಕ್ಕಾಗಿ ಅವರನ್ನು ಅಭಿನಂದಿಸಲೇಬೇಕು.

‍ಲೇಖಕರು G

January 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Sunil Rao

    an absolute article.
    even i too have read some of above mentioned books of Shakespeare plays. few were intimate and few critics cum translations on Othello, Cleopatra, hamlet and mac Beth were really good and challenging.
    i still remember the critics on Othello i read was really irritating and felt uncomfortable reading to it.
    but am happy for much awaited book of gopala wajapayee uncle

    ಪ್ರತಿಕ್ರಿಯೆ
  2. Swarna

    ಒಳನೋಟ ಚೆನ್ನಾಗಿದೆ ಪುಸ್ತಕ್ಕಾಗಿ ಕಾಯ್ತೇವೆ

    ಪ್ರತಿಕ್ರಿಯೆ
  3. ರಮೇಶ್ ಹಿರೇಜಂಬೂರು

    ತುಂಬಾ ಆಳ ಹಾಗೂ ಸ್ಪುಟವಾದ ಬರಹ. ಷೇಕ್ಸ್ ಪಿಯರ್ ಕೃತಿಗಳನ್ನು ಕನ್ನಡಕ್ಕೆ ತಂದವರಲ್ಲಿ ಹಾಗೂ ಅವರ ನಾಟಕಗಳನ್ನು ರಂಗ ರೂಪಕ್ಕೆ ತಂದ ಪ್ರಮುಖರಲ್ಲಿ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಮತ್ತು ಸಿ.ಆರ್.ಸಿಂಹ ಕೂಡ ಹೌದು ಅವರ ಹೆಸರುಗಳನ್ನೂ ಪ್ರಸ್ತಾಪ ಮಾಡಬಹುದಿತ್ತೇನೋ ಎನ್ನುವ ಭಾವ ನನ್ನ ಕಾದಿದ್ದು ನಿಜ. ಎ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ಹಾಗೂ ಒಥೆಲೊ ನಿಸಾರ್ ಅಹಮದ್ ಭಾಶಾನುವಾದದ ನಾಟಕಗಳು. ಜತೆಗೆ ಅತಿ ಹೆಚ್ಚು ಪ್ರದರ್ಶನಗೊಂಡ ನಾಟಕಗಳು ಕೂಡ ಎನ್ನಬಹುದೇನೋ… ಪುಸ್ತಕಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ…
    -ರಮೇಶ್ ಹಿರೇಜಂಬೂರು

    ಪ್ರತಿಕ್ರಿಯೆ
  4. ಸುಧಾ ಚಿದಾನಂದಗೌಡ

    ನಿಮ್ಮ ಮಾತು ನಿಜ ರಮೇಶ್ ಹಿರೇಜಂಬೂರು. ಆದರೆ ಇಲ್ಲಿ ನಾ ಬರೆಯಹೊರಟಿದ್ದು ಕಿಂಗ್ ಲಿಯರ್ ಕುರಿತು ಮಾತ್ರ.
    ವಿಷಯಾಂತರ, ಅಪ್ರಸ್ತುತ ಆಗಬಾರದು ಎಂಬುದಕ್ಕಾಗಿ ಬೇರಾವ ಅನುವಾದಕರ ಹೆಸರನ್ನೂ ಪ್ರಸ್ತಾಪಿಸಹೋಗಿಲ್ಲ.
    ಕನ್ನಡದಲ್ಲಿ ಶೇಕ್ಸ್ ಪಿಯರ್ ಭಾಷಾಂತರಕಾರರ ಪಟ್ಟಿ ದೀರ್ಘವಿದೆ.ಅದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

    ಪ್ರತಿಕ್ರಿಯೆ
  5. Arvind

    “Nanda bhupati” savi nenapugalu beku saviyalu beku I acted in Kent ‘s character Hats off to Gopal, Jaythith joshi and BV Karanth who scored music in 3 to 4 days by specially flewing from Bhopal It was fantastic production which gave Abhinaya Bharati different experiences in all facets of theatre

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: