ದೋಹೆಗಳ 'ದೊಂದಿ' ಹಿಡಿದು..

ಸುಮ್ಮನೇ ನೆನಪುಗಳು – 38

ನಮ್ಮ ಆಫೀಸಿನಲ್ಲಿ ಇಬ್ಬರು ಅಟೆಂಡರುಗಳಿದ್ದರು : ಮಾದೇವ ಮತ್ತು ಮರಿಯಪ್ಪ. ಅವರಿಬ್ಬರೂ ಸಾಹೇಬರ ಸಿಪಾಯಿಗಳು.

ಮಾದೇವ ಸ್ವಲ್ಪ ಕುಳ್ಳ. ಅವರಮ್ಮ ಅವನನ್ನು ನಗುನಗುತ್ತಲೇ ಹಡೆದಿರಬೇಕು. ಆತ ಕುಲು ಕುಲು ನಗುತ್ತಲೇ ಹುಟ್ಟಿರಬೇಕು. ಯಾವಾಗ ನೋಡಿದರೂ ಆತ ನಗುತ್ತಲೇ ಇರುತ್ತಿದ್ದ. ಇಂಥ ಮಾದೇವ ಎಂಥ ಆಘಾತಕರ ಸುದ್ದಿಯಿದ್ದರೂ ನಗುನಗುತ್ತಲೇ ಹೇಳುತ್ತಿದ್ದ.

ಆ ಇನ್ನೊಬ್ಬ, ಮರಿಯಪ್ಪ, ಒಂಟೆಯ ಹಾಗೆ ಬೆಳೆದವ. ಆತನನ್ನು ನಾವು ‘ಬಿಡುಗಣ್ಣರೊಡೆಯ’ ಎನ್ನುತ್ತಿದ್ದೆವು. ಆತ ಬಾಯಿ ತೆರೆದರೆ, ಕಣ್ಣುಗಳ ಜೊತೆಗೆ ಹಲ್ಲುಗಳೂ ಕೆಂಪಗೆ ಕಂಡು ಭಯವೆನಿಸುತ್ತಿತ್ತು. ನಮ್ಮ ಆಫೀಸಿಗೆ ಮೊದಲ ಬಾರಿಗೆ ಅಪ್ಪ-ಅಮ್ಮನೊಂದಿಗೆ ಬರುವ ಮರಿಗಳು ಮರಿಯಪ್ಪನನ್ನು ನೋಡಿದರೆ ಚಿಟ್ಟನೆ ಚೀರಿ ಚಡ್ಡಿ ಹಸಿಮಾಡಿಕೊಳ್ಳುತ್ತಿದ್ದವು. ಇನ್ನು ಆತ ನಡೆದು ಬಂದರೆ ಥೇಟ್ ಒಂಟೆಯ ಹಾಗೆ, ಕತ್ತು ಹಿಂದೆ ಮುಂದೆ ಸರಿದಾಡುತ್ತಿತ್ತು…

ಹಾಂ… ಮಾದೇವ ಮತ್ತು ಮರಿಯಪ್ಪ ಇಬ್ಬರೂ ಸಾಹೇಬರ ಚೇಂಬರಿನಿಂದ ನಮ್ಮ ಸಂಪಾದಕೀಯ ವಿಭಾಗಕ್ಕೆ ದಿನವಿಡೀ ದಾಂಗುಡಿಯಿಡುತ್ತಲೇ ಇರುತ್ತಿದ್ದರು ; ದಂಗುಬಡಿಸುತ್ತಲೇ ಇರುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯ ತನಕ ಅವರಿಬ್ಬರೂ ಏನಿಲ್ಲೆಂದರೂ ಸರಿ ಸುಮಾರು ಹತ್ತು ಸಾವಿರ ಹೆಜ್ಜೆಗಳನ್ನಾದರೂ ಇಟ್ಟಿರುತ್ತಿದ್ದರೋ ಏನೋ. ಅದಕ್ಕೆ ತುಂಬಾ ಗಟ್ಟಿಯಾಗಿದ್ದರು.

ಅವರಿಬ್ಬರಲ್ಲೂ ಇನ್ನೂ ಒಂದು ‘ಗುಣವಿಶೇಷತೆ’ ಇತ್ತು.

ಮಾದೇವ ಸಾಹೇಬರ ಚೇಂಬರಿನಿಂದ ನಡೆದುಕೊಂಡು ಬಂದು, ಯಾರ ಎದುರು ನಿಲ್ಲುತ್ತಾನೋ, ಅವರಿಗೆ ‘ಏನೋ’ ಕಾದಿದೆ ಎಂಬುದು ಶತಃ ಸಿದ್ಧ.

ಹೀಗಾಗಿ, ಆತ ಬಂದನೆಂದರೆ ಎಲ್ಲರೂ ‘ಎಡಗೈಯಲ್ಲಿ ಜೀವ ಹಿಡಿದು’ಕೊಂಡೇ ಕೂತಿರುತ್ತಿದ್ದರು.

ಕೆಲವೊಮ್ಮೆ ಆತನ ಕೈಯಲ್ಲಿ ಕೆಂಪು ಲಕೋಟೆ (ನಿಜವೆಂದರೆ ಅದು ಬ್ರೌನ್ ಲಕೋಟೆಯೇ) ಇರುತ್ತಿತ್ತು. ಅದು ಕಂಡರೆ ಅಲ್ಲಿಗೆ ಯಾರೋ ಒಬ್ಬನ ಕಥೆ ಮುಗಿಯಿತು ಅಂತಲೇ. ಒಂದಕ್ಕಿಂತ ಹೆಚ್ಚಿಗೆ ಲಕೋಟೆಗಳು ಕಂಡರೆ, ನಾವು ಕೆಲವರು, ‘ಜೊತೆಯಲಿ… ಜೊತೆಜೊತೆಯಲಿ…’ ಅಂತ ಹಾಡಿಕೊಂಡು ಸಮಾಧಾನಪಟ್ಟದ್ದಿದೆ. ‘ಬಲಿಪೀಠ’ವೇರುವಾಗಲೂ ‘ಹಮ್ ಸಾಥ್ ಸಾಥ್ ಹೈಂ’ ಎಂಬ ಸಮಚಿತ್ತ…!

ಆ ಕೆಂಪು ಲಕೋಟೆಯನ್ನು ಮಾದೇವ ಸಂಬಂಧಪಟ್ಟವರೆದುರಿಗೆ ನಗುನಗುತ್ತಲೇ ಇಟ್ಟು, ನಗುನಗುತ್ತಲೇ ನಿಲ್ಲುತ್ತಿದ್ದ.

ಅದು ಮೆಮೊ, ಶೋ ಕಾಜ್ ನೋಟೀಸು, ಸಸ್ಪೆನ್ಶನ್ ಆರ್ಡರು ಇಲ್ಲವೇ ಡಿಸ್ಮಿಸ್ಸಲ್ ಆರ್ಡರ್… ಈ ನಾಲ್ಕರ ಪೈಕಿ ಏನಾದರೂ ಒಂದು ಆಗಿದ್ದಿರಬಹುದು. ಅಂಥದನ್ನು ಕೊಟ್ಟು ಎದುರಿಗೆ ಆತ ನಗುನಗುತ್ತ ನಿಲ್ಲುತ್ತಾನೆಂದರೆ ಯಾರಿಗೆ ತಾನೇ ಕೋಪ ಕುದಿಯುವುದಿಲ್ಲ?

ಆದರೆ, ಕೋಪಿಸಿಕೊಳ್ಳುವ ಹಾಗಿರಲಿಲ್ಲ. ಆ ಆಫೀಸಿನಲ್ಲಿ ಸಾಹೇಬರಿಗೆ ಮಾತ್ರ ಕೋಪಿಸಿಕೊಳ್ಳುವ ‘ಅಧಿಕಾರ’.

ಅದಕ್ಕೇ ಮಾದೇವ ಖಾಲಿ ಕೈಯಲ್ಲಿ ಬಂದನೆಂದರೆ ಸಾಹೇಬರು ತಮ್ಮ ‘ಅಧಿಕಾರ’ವನ್ನು ಯಾರದೋ ಮೇಲೆ ಚಲಾಯಿಸಲು ಸಿದ್ಧರಾಗಿ ಕೂತಿದ್ದಾರೆ ಅಂತ ಅರ್ಥ.

ಆದರೆ, ಮರಿಯಪ್ಪ ಹಾಗಲ್ಲ. ಮೊದಲೇ ಭಯಾನಕ ವ್ಯಕ್ತಿತ್ವ ಆತನದು. ಆತ ಸಾಹೇಬರ ಚೇಂಬರಿನಿಂದ ಹೊರಗೆ ಬಂದು, ಅದರ ಬಾಗಿಲಲ್ಲಿಯೇ ನಿಂತುಕೊಳ್ಳುತ್ತಿದ್ದ. ಮತ್ತು ‘ತಾನೇ ಸಾಹೇಬ’ ಎಂಬಂತೆ ಗೋಡೆಗೊಂದು ಕೈ ಆನಿಸಿ, ಕೃಷ್ಣಪರಮಾತ್ಮನಂತೆ ಕ್ರಾಸುಗಾಲು ಹಾಕಿ ನಿಂತು, ಎಲ್ಲ ಕಡೆಗೂ ಪರೀಕ್ಷಕ ದೃಷ್ಟಿ ಬೀರುತ್ತಿದ್ದ. ಎಡ ಭುಜದಿಂದ ತಿರುಗತೊಡಗುವ ಆತನ ಕತ್ತು ಬಲ ಭುಜದ ತನಕ ಹೊರಳುತ್ತಿದ್ದಾಗ ಅಲ್ಲಿದ್ದ ನಾವೆಲ್ಲಾ ಒಳಗೊಳಗೇ ನರಳುತ್ತಿದ್ದೆವು. ಮತ್ತು ಆತ ಯಾರನ್ನು ಕರೆಯುತ್ತಾನೋ ಎಂದು ‘ಕಾಯು’ತ್ತಿದ್ದೆವು.

ಆತ ನಮ್ಮವರಲ್ಲಿ ಯಾರೋ ಒಬ್ಬರನ್ನು ಕೈಸನ್ನೆಯಿಂದ ಕರೆಯುವ ಪರಿಯೇ ವಿಶಿಷ್ಟಪೂರ್ಣ. ಯಾರನ್ನು ಕರೆಯಬೇಕೋ ಆ ವ್ಯಕ್ತಿಯ ಕಡೆ ಕೈ ಮಾಡಿ ತೋರಿಸಿ, ಆತ ನೋಡಿದ್ದಾನೆ ಎಂಬುದು ಖಾತ್ರಿಯಾದಕೂಡಲೇ, ಆ ಕೈಯನ್ನು ಹಾಗೇ ಮೇಲೆತ್ತುತ್ತ, ತನ್ನ ಬೆನ್ನಹಿಂದುಗಡೆ ಚಾಚಿ, ‘ಬನ್ನಿ’ ಎಂಬಂತೆ ಸನ್ನೆ ಮಾಡುತ್ತಿದ್ದ. ಆತ ಕೈಯನ್ನು ಎತ್ತುತ್ತಿದ್ದನಲ್ಲ ಅದೇ ಹೊತ್ತಿಗೆ ಆತನ ತಲೆಯೂ ನೋಟವೂ ಮೇಲಕ್ಕೆ ಚಲಿಸಿ, ಕೈ ತಲೆ ಮತ್ತು ಕಣ್ಣುಗಳಿಂದ ‘ದೊಡ್ಡವರು ಕರೀತಿದ್ದಾರೆ’ ಎಂಬುದನ್ನು ಸೂಚಿಸುತ್ತಿದ್ದವು. ಆತ ಬಂದು ನಿಂತಾಗಲೇ ಮುಕ್ಕಾಲುಪಾಲು ಸಿದ್ಧರಾಗಿ ಕೂತಿರುತ್ತಿದ್ದ ನಮ್ಮಲ್ಲಿ ಯಾರೋ ಒಬ್ಬ ‘ದೊಡ್ಡವರ ದರ್ಶನ’ಕ್ಕೆ ಹೋಗುತ್ತಿದ್ದ.

-0-0-0-0-0-

ನಾನೀಗ ಹೇಳುತ್ತಿರುವುದು ‘ಸಂಯುಕ್ತ ಕರ್ನಾಟಕ’ ಪತ್ರಿಕಾಲಯದ ಕಥೆ. ಅಲ್ಲಿ ಕೆಲಸಕ್ಕಿದ್ದವರ ಪಾಡಿನ ಕಥೆ. 1986ರಿಂದ ಆ ಪತ್ರಿಕೆಗೆ ‘ಶುಕ್ರ ದೆಸೆ’ ಮತ್ತು ‘ಶನಿ ದೆಸೆ’ಗಳೆರಡೂ ಒಟ್ಟೊಟ್ಟಿಗೇ ಆರಂಭವಾದವು. ಪತ್ರಿಕೆಯ ಒಡೆತನ ಹೊಂದಿದ ಲೋಕ ಶಿಕ್ಷಣ ಟ್ರಸ್ಟಿಗೆ ಕಾರ್ಯದರ್ಶಿಯಾಗಿ ಆಗ ಬಂದವರು ‘ಛಲದಂಕಮಲ್ಲ’ ಎಂದೇ ಹೆಸರಾಗಿದ್ದ ಕೆ. ಶಾಮರಾಯರು. ಅವರು ಪತ್ರಿಕೆಯನ್ನು ಸಾಕಷ್ಟು ಜನಪ್ರಿಯಗೊಳಿಸಿದರು. ಸಾಲದಲ್ಲಿ ಮುಳುಗಿ ಸಾಯುವ ಸ್ಥಿತಿಗೆ ಬಂದಿದ್ದ ಪತ್ರಿಕೆಯನ್ನು ಪಾರು ಮಾಡಿ, ಅಲ್ಲಿ ನಿತ್ಯ ಕನಕವೃಷ್ಟಿ ಆಗುವಂತೆ ಮಾಡಿದರು. ಆದರೆ ಅದೇ ಹೊತ್ತಿಗೆ ಸಂಸ್ಥೆಯನ್ನು ನೌಕರರ ಪಾಲಿನ ನರಕವನ್ನಾಗಿ ಮಾಡಿಟ್ಟರು.

ಆಗ ಶುರುವಾಯಿತು ನೌಕರರ ವರ್ಗಾವರ್ಗಿ. ಒಮ್ಮೆ ವರ್ಗವಾದರೆ ಮುಗಿಯಿತು ಮತ್ತೆ ಆ ನೌಕರ ತನ್ನ ಊರಿಗೆ ಮರಳುವುದು ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಂಸ್ಥೆಯೊಂದಿಗಿನ ಪರಲು ಹರಿದುಕೊಂಡಾಗಲೇ. ಆ ಮಟ್ಟಿಗೆ ಆ ನೌಕರನನ್ನು ಹುರಿದು ಮುಕ್ಕುವುದು ಶಾಮರಾಯರ ಆಡಳಿತ ನೀತಿ. ಆ ಸಂದರ್ಭದಲ್ಲಿ ಪ್ರೆಸ್ ಕ್ಲಬ್ಬಿನಲ್ಲೊಮ್ಮೆ ಸಿಕ್ಕ ವೈಎನ್ಕೆ ‘ನಿಮ್ಮದು ವರ್ಗರಹಿತ ಸಮಾಜ ಕಣ್ರೀ’ ಎಂದು ನಗೆಯಾಡಿದ್ದರು. ನಾನು ‘ಅಲ್ಲ ಸರ್, ನಮ್ಮದು ಬಹುವರ್ಗ ಸಮಾಜ…’ ಎಂದಿದ್ದೆ. ಹೌದು, ಕೆಲವರಿಗಂತೂ ಪದೇ ಪದೇ ವರ್ಗವಾಗುತ್ತಿತ್ತು. ಅಷ್ಟು ಪರಿಯಾಗಿ ಕಾಡಿ ಅವರಾಗಿಯೇ ಬಿಟ್ಟುಹೋಗುವಂತೆ ಮಾಡುವುದು ಶಾಮರಾಯರ ಮತ್ತೊಂದು ಖಯಾಲಿ.

‘ಶನಿ ದೆಸೆ’ಯ ವಿಷಯಕ್ಕೆ ಬರೋಣ. ಬಹುಶಃ ಆಗ ಶನಿ ಕೇವಲ ನಮ್ಮ ಸಂಸ್ಥೆಯ ನೌಕರರ ಮೇಲಷ್ಟೇ ದೃಷ್ಟಿ ಬೀರಿರಬೇಕು. 1987-88ರಲ್ಲಿ ಆತನ ದೃಷ್ಟಿ ನನ್ನ ಮೇಲೆ ಬಿತ್ತು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದೆ. ವನವಾಸದ ದಿನಗಳು ಆರಂಭವಾದವು. ‘ಅತ್ತೆಯ ಮನೆ’ಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ‘ಅನುಭವಸ್ಥರು’ ನಾಲ್ಕೇ ದಿನಗಳಲ್ಲಿ ನನಗೆ ಪಾಠ ಮಾಡಿದ್ದರು.

ಆ ಹೊಸತಿನಲ್ಲೇ ಒಮ್ಮೆ ಮರಿಯಪ್ಪ ಸಾಹೇಬರ ಚೇಂಬರಿನ ಹೊರಗೆ ಬಂದು ನಿಂತ. ಹೆದರಿದ ಗುಬ್ಬಿಯಂತಾಗಿದ್ದ ನನ್ನತ್ತ ಕೈ ತೋರಿಸಿದ. ಅದು ಸ್ವಿಚ್ ಒತ್ತಿದ ಹಾಗೆ. ಎತ್ತಿದ ಕೈಯನ್ನು ಮರಿಯಪ್ಪ ಇಳಿಸುವುದರೊಳಗಾಗಿ ನಾನು ಸಾಹೇಬರ ಚೇಂಬರಿನಲ್ಲಿ ಕಾಲಿರಿಸಿ, ಕೈಕಟ್ಟಿ ನಿಂತಾಗಿತ್ತು.

ಶಾಮರಾಯರು ಯಾವುದೇ ಕೆಲಸ ಮಾಡುವಾಗಲೂ ಮೊದಲು ಸಾಕಷ್ಟು ಮಾಹಿತಿ, ಪುರಾವೆಗಳನ್ನೂ ಸಂಗ್ರಹಿಸಿಯೇ ಮುಂದುವರಿಯುವುದು. ಅದಕ್ಕಾಗಿ ಅವರು ಕೆಲವರನ್ನು ಸಾಕಿಕೊಂಡಿದ್ದರು. ರಾಯರ ಬಾಯಲ್ಲಿ ಏನು ಬರುವುದೋ ಅದರ ಮೇಲೆ ಆಯಾ ವ್ಯಕ್ತಿಯ ಮಾಹಿತಿ ಕೂಡಲೆ ಸಿದ್ಧವಾಗುತ್ತಿತ್ತು. ಹೌದು. ಅವರ ಮನೋಗತವನ್ನು ಅರಿತು ಅದರಂತೆ ನಡೆದುಕೊಳ್ಳುವ ಒಬ್ಬ ‘ಆಪ್ತ’ ವ್ಯವಸ್ಥಾಪಕ ಆಗ ಇದ್ದ. ಅಕಸ್ಮಾತ್ ನೀವು ಎದುರಾದಾಗ ಆ ವ್ಯವಸ್ಥಾಪಕ ನಿಮ್ಮ ಬಳಿ ಬಂದು ಕೈಕುಲುಕಿದನೋ, ಆಗ ಶಾಮರಾಯರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನೀವು ತಿಳಿದುಕೊಳ್ಳಬೇಕು. ಒಂದು ವೇಳೆ ಆತ ನಿಮ್ಮನ್ನು ತಾತ್ಸಾರ ದೃಷ್ಟಿಯಿಂದ ನೋಡಿದನೋ ಆಗ ರಾಯರು ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿಕೊಂಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಮತ್ತು ಯಾರೊಬ್ಬನ ಬಗ್ಗೆ ಹೀಗೆ ರಾಯರು ಮೇಲಿಂದ ಮೇಲೆ ಅಭಿಪ್ರಾಯ ಬದಲಾಯಿಸುವಂತೆ ಮಾಡುತ್ತಿದ್ದವರು ಹುಬ್ಬಳ್ಳಿ ಮತ್ತು ಬೆಂಗಳೂರು ಎರಡೂ ಕಡೆ ಇದ್ದರು. ಅವರು ಆಗಾಗ ಮಾಹಿತಿಗಳನ್ನು ರವಾನಿಸುತ್ತಿದ್ದರು. ಹಾಂ… ಆ ಎಲ್ಲ ಮಾಹಿತಿಗಳನ್ನು, ಪುರಾವೆಗಳನ್ನು ಸಂಗ್ರಹಿಸಿ, ಫೈಲ್ ಮಾಡಿ ರಾಯರ ಎದುರಿಗೆ ಇಡುತ್ತಿದ್ದವನೇ ಈ ವ್ಯವಸ್ಥಾಪಕ.

ಅವತ್ತು ಚೇಂಬರಿನಲ್ಲಿ ಕೈಕಟ್ಟಿ ನಿಂತಿದ್ದೆನಲ್ಲ ಸಾಹೇಬರೆದುರು… ಅವರು ನನ್ನನ್ನು ಕಾಲುಗುರಿನಿಂದ ತಲೆಗೂದಲತನಕ ನುಂಗುವಂತೆ ನೋಡಿ,

”ಹೂಂ… ಹುಬ್ಬಳ್ಯಾಗ ಬರೀ ನಾಟಕಾ ಮಾಡ್ತಾ ತಿರಗ್ತೀಯಂತೇ… ನಿನ್ನ ಭೆಟ್ಟಿಗೆ ಬರೋರೆಲ್ಲಾ ಬರೇ ನಾಟಕದವರಂತೇ… ಅದಕ್ಕೇ ನಿನ್ನನ್ನ ಇಲ್ಲಿಗೆ ಕರೆಸಿದ್ದು. ಅಲ್ಲಿ ನಿನಗೆ ಬರೀ ನಾಟಕದವ್ರು ಸಿಗತಾ ಇದ್ರಲ್ಲಾ… ಇಲ್ಲಿ ಸಿನಿಮಾದವರೂ ಸಿಗ್ತಾರೆ… ಗೊತ್ತಾಯ್ತಾ…?” ಅಂದವರೇ, ಒಂದು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿದರು.

ನಾನು ಸುಮ್ಮನೆ ನಿಂತಿದ್ದೆ.

”ನೋಡು… ಇಷ್ಟು ದಿನಾ ನೀನು ಏನೇನು ಮಾಡಿದ್ದೀ, ಎಲ್ಲೆಲ್ಲಿ ಹೋಗಿದ್ದೀ, ಎಷ್ಟು ನಾಟಕಗಳನ್ನ ಬರದಿದ್ದೀ, ಎಷ್ಟು ಸಲ ಆಕಾಶವಾಣಿಗೆ ಹೋಗಿದ್ದೀ, ನಾಟಕದ ಸಲುವಾಗಿ ಎಷ್ಟು ಸಲ ರಜಾ ಹಾಕಿದ್ದೀ, ಮತ್ತು ಹಾಕದೇನೇ ಹೋಗಿದ್ದೀ ಈ ಎಲ್ಲಾ ಮಾಹಿತಿ ಇಲ್ಲಿದೆ…” ಅಂತ ನನ್ನ ಕಡೆ ಫೈಲನ್ನು ಎತ್ತಿ ತೋರಿಸಿದರು.

ಅಲ್ಲಿ ನನಗೆ ಕಂಡದ್ದು ನಾನು ಏಣಿಗಿ ಬಾಳಪ್ಪನವರ ಜೊತೆ ನಿಂತು ತೆಗೆಸಿಕೊಂಡಿದ್ದ ಒಂದು ಫೋಟೋ ಮತ್ತು ಯಾವುದೋ ನಾಟಕದ ಬ್ರೋಶರ್.

ನಾನು ಏನೂ ಮಾತಾಡಲಿಲ್ಲ.

”ನೋಡು… ನೀ ಅಲ್ಲಿರತೀನಿ ಅಂದ್ರೆ ‘ಅಲ್ಲೇ’ ಇರು… ಇಲ್ಲಿರತೀನಿ ಅಂದ್ರೆ ‘ಇಲ್ಲೇ’ ಇರು…” ಅಂದವರೇ ಒಂದು ಕ್ಷಣ ನನ್ನನ್ನೇ ದಿಟ್ಟಿಸಿ, ”… ‘ಅಲ್ಲಿ’ ಅಂದ್ರೆ ಹುಬ್ಬಳ್ಳಿ ಅಲ್ಲ ಮತ್ತೆ… ಅಲ್ಲಿ ಅಂದ್ರೆ ಆ ನಿನ್ನ ಸುಟ್ಟ ಸುಡಗಾಡು ನಾಟಕಾ-ಗೀಟಕಾ… ತಿಳೀತೇ…?” ಅಂತ ಹೇಳಿ ಫೈಲು ಮುಚ್ಚಿದರು. ಅದು ‘ಇನ್ನು ಹೋಗು’ ಎಂದು ಹೇಳಿದ ಹಾಗೆ ಎಂಬುದು ನನ್ನ ಬುದ್ಧಿಗೆ ಹೊಳೆಯಲೇ ಇಲ್ಲ. ಅಲ್ಲಿಯೇ ನಿಂತುಕೊಂಡಿದ್ದೆ. ಅವರು ಬೆಲ್ ಮಾಡಿದರು. ಮರಿಯಪ್ಪ ಬಂದ. ಮತ್ತಾರನ್ನೋ ಕರೆಯಲು ಹೇಳಿದರು. ನಾನಲ್ಲಿಂದ ಜಾಗ ಖಾಲಿ ಮಾಡಿದೆ.

‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…’ ಎಂಬ ಭೀತಿ ನನ್ನದು.

‘ಇಲ್ಲಾದರೂ ಇರು, ಅಲ್ಲಾದರೂ ಇರು…’ ಎಂಬ ನೀತಿ ಅವರದು.

-೦-೦-೦-೦-೦-

ಶಾಮರಾಯರು ಹಾಗೆಯೆ. ಸಾಹಿತ್ಯ, ಸಂಗೀತ, ನಾಟಕ, ಕಲೆ ಅಂದರೆ ಉರಿದೇಳುತ್ತಿದ್ದ ಔರಂಗಜೇಬ ಅವರು. ಯಾರಾದರೂ ಗಡ್ಡದವರು, ಜುಬ್ಬ- ಪ್ಯಾಂಟಿನವರು, ಬಗಲುಚೀಲದವರು ಕಂಡರೆ ರಾಯರ ಕಣ್ಣು ಕೆಂಪಗಾಗುತ್ತಿದ್ದವು. ಅವರು ಆಫೀಸಿನಲ್ಲಿ ಯಾರನ್ನು ಭೆಟ್ಟಿಯಾದರು, ಯಾಕೆ ಭೆಟ್ಟಿಯಾದರು ಇತ್ಯಾದಿ ಎಲ್ಲ ವರದಿಯನ್ನು ತರಿಸಿಕೊಳ್ಳುತ್ತಿದ್ದರು. ಅದು ಪತ್ರಿಕೆಗೆ ಸಂಬಂಧಿಸಿದ ವಿಷಯವಾಗಿದ್ದರೆ ಸರಿ. ಇಲ್ಲದಿದ್ದರೆ ಶುರುವಾಗುತ್ತಿತ್ತು ಭೈರವನೃತ್ಯ.

ಅಂಥ ಸಂದರ್ಭದಲ್ಲೇ ಒಮ್ಮೆ ಸಿ. ಬಸವಲಿಂಗಯ್ಯ (ರಂಗಾಯಣದ ಮಾಜಿ ನಿರ್ದೇಶಕ) ನನ್ನನ್ನು ಹುಡುಕಿಕೊಂಡು ಕಚೇರಿಗೆ ಬಂದುಬಿಟ್ಟರು. ಮುಗಿಯಿತು ನನ್ನ ಕಥೆ ಎಂದುಕೊಂಡೆ. ಅದು ಬಸವಲಿಂಗಯ್ಯನವರ ಅದೃಷ್ಟವೋ, ನನ್ನ ಸುದೈವವೋ… ‘ಶಾಮರಾಯರು ಆಗಷ್ಟೇ ಮನೆಗೆ ಹೋದರು,’ ಎಂಬ ವಾರ್ತೆ ಖೀರು ಕುಡಿದಷ್ಟು ಖುಷಿ ಕೊಟ್ಟಿತು.

ಆ ತನಕ ನಾನು ಬಸವಲಿಂಗಯ್ಯ ಅವರನ್ನು ಮುಖತಃ ಭೆಟ್ಟಿಯಾಗಿರಲಿಲ್ಲ. ದೂರದಿಂದ ಕಂಡಿದ್ದೆ, ಅವರ ಕೆಲಸಗಳನ್ನು ಕುರಿತು ಓದಿದ್ದೆ. ಅವತ್ತು ಅವರು ಬಂದರಲ್ಲ, ಆಗ ಮಧ್ಯಾಹ್ನದ ಊಟದ ವೇಳೆ. ಹಾಗೆ ಮಾತಾಡುತ್ತ ನಮ್ಮ ಕ್ಯಾಂಟೀನ್ ವರೆಗೂ ಬಂದೆವು. ಸಾಮಾನ್ಯವಾಗಿ ಊಟದ ಹೊತ್ತಿಗೆ ನಾಲ್ಕಾರು ಜನ ‘ಸಮಾನ ದುಃಖಿ’ಗಳು ಕ್ಯಾಂಟೀನಿನಲ್ಲಿ ಸೇರಿ, ಸುಖ-ದುಃಖ ಹಂಚಿಕೊಳ್ಳುತ್ತ ಏನೋ ಒಂದಷ್ಟು ಗಬ ಗಬ ತಿಂದು ಮುಗಿಸುತ್ತಿದ್ದೆವು. ಆದರೆ, ಬಸವಲಿಂಗಯ್ಯ, ”ಹೊರಗೆಲ್ಲಾದ್ರೂ ಹೋಗೋಣ ಬನ್ನಿ… ಏನೋ ಸ್ವಲ್ಪ ಮಾತಾಡೋದಿದೆ…” ಅಂತ ಒತ್ತಾಯಿಸಿದರು.

‘ಸಂಯುಕ್ತ ಕರ್ನಾಟಕ’ದಲ್ಲಿ ಆಗ ನಮ್ಮೆಲ್ಲರ ಪಾಲಿನ ‘ರಕ್ಷಕ’ ಒಬ್ಬರಿದ್ದರು. ಶಾಮರಾಯರ ವಿಶ್ವಾಸದ ವ್ಯಕ್ತಿ, ವೆಂಕಟನಾರಾಯಣ. ಅವರೆದುರು ಹೇಳಿಕೊಂಡೆ. ”ಹೋಗಿಬನ್ನಿ, ನಾನಿದ್ದೀನಿ…” ಅಂತ ಅವರು ‘ಅಭಯ’ ನೀಡಿದಮೇಲೆ, ನಾನು ಆರಾಮಾಗಿ ಬಸವಲಿಂಗಯ್ಯ ಅವರೊಂದಿಗೆ ಹೆಜ್ಜೆ ಹಾಕಿದೆ.

ಬೆಂಗಳೂರಿನ ‘ವುಡ್ ಲ್ಯಾಂಡ್ಸ್’ ಸಮೀಪವೇ ಇನ್ನೊಂದು ಪುಟ್ಟ ಹೋಟಲಿತ್ತು. ರಸ್ತೆಯ ಪಕ್ಕದಲ್ಲೇ ಇದ್ದರೂ ಯಾವುದೇ ಸದ್ದು-ಗದ್ದಲವನ್ನು ಒಳಗೆ ಬಿಟ್ಟುಕೊಳ್ಳದ ಗಾಜಿನ ಗೋಡೆಯ ಹೋಟಲು. ಅಲ್ಲಿ ಕೂತು ಊಟ ಮಾಡುತ್ತಾ ಆರಾಮಾಗಿ ಮಾತಾಡಬಹುದಿತ್ತಾದರೂ ನನ್ನದು ‘ಚಳಿಯೊಳಿರ್ದುಮ್ ಬೆವರ್ದಮ್…’ ಎಂಬ ಸ್ಥಿತಿ.

”ಏನು ಹೇಳುವುದಿದೆಯೋ ಬೇಗ ಹೇಳಿ,” ಅಂತ ನಾನು.

”ನೀವೇ ಹೇಳಿ…” ಅಂತ ಅವರು ಮೆನು ಕಾರ್ಡನ್ನು ನನ್ನೆಡೆ ತಳ್ಳಿದರು.

ನಾನು ಶಾಮರಾಯರ ಭಯದಿಂದ ನರಳುತ್ತಿರುವುದು ಅವರಿಗೇನು ಗೊತ್ತು ಪಾಪ… ‘ಏನು ಹೇಳುವುದಿದೆಯೋ ಬೇಗ ಹೇಳಿ,’ ಎಂದದ್ದನ್ನವರು ಊಟಕ್ಕೆ ಸಂಬಂಧಿಸಿ ಅರ್ಥೈಸಿಕೊಂಡಿದ್ದರು. ಅಂತೂ ಏನೋ ಒಂದು ಆರ್ಡರ್ ಕೊಟ್ಟು, ಅದು ನಮ್ಮೆದುರು ‘ಅವತರಿಸು’ವ ತನಕ ನಾಟಕ ಇತ್ಯಾದಿ ಮಾತಾಡುತ್ತ ಇದ್ದ ಹೊತ್ತಿನಲ್ಲಿಯೇ, ”ಧಾರವಾಡದಲ್ಲಿ ‘ಸಮುದಾಯ’ಕ್ಕೆ ಒಂದು ರಂಗತರಬೇತಿ ಶಿಬಿರ ಮಾಡಿಸ್ತಾ ಇದ್ದೀನಿ…” ಅಂದರು.

”ಒಳ್ಳೆಯದು. ಅಲ್ಲಿ ಬಹಳ ದಿನಗಳಿಂದ ಇಂಥದ್ದು ಆಗಿಲ್ಲ…” ಅಂದೆ. ಅವರು ಅದೇ ಕಾಲಕ್ಕೆ ಹುಬ್ಬಳ್ಳಿಯಲ್ಲೂ ಒಂದು ಶಿಬಿರ ನಡೆಸುತ್ತಿರುವ ಬಗ್ಗೆ ಹೇಳುತ್ತಲೇ, ಬಗಲು ಚೀಲದಿಂದ (‘ತೊಗಲು ಚೀಲ’ ಅಂದರೂ ಅಡ್ಡಿಯಿಲ್ಲ) ಒಂದು ಪುಸ್ತಕವನ್ನು ತಗೆದು ನನ್ನೆಡೆ ಚಾಚಿದರು.

ಇದು ಮತ್ತೆ ನನ್ನನ್ನೇ ‘ಸುತ್ತಿ’ಕೊಳ್ಳುವ ಲಕ್ಷಣ ಕಂಡಿತು. ಮುಂದೆ ಅವರು ಏನು ಹೇಳಬಹುದು ಎಂಬುದನ್ನು ನಾನು ಊಹಿಸಿಬಿಟ್ಟೆ. ನಾನು ಯಾಕಾದರೂ ಇವರೊಂದಿಗೆ ಊಟಕ್ಕೆ ಬಂದೆನೋ ಅನ್ನಿಸಿ, ಸಣ್ಣಗೆ ನಡುಗಿದೆ. ಕಣ್ಣೆದುರಿಗೆ ಶಾಮರಾಯರೇ ನಿಂತಂತಾಯಿತು. ತಲೆಯೆತ್ತಿ ನೋಡಿದೆ. ಬಂದು ನಿಂತಾತ ಹೋಟಲ್ ಸರ್ವರ್. ನಮ್ಮೆದುರು ಪ್ಲೇಟುಗಳನ್ನಿರಿಸಿದ.

ಬಸವಲಿಂಗಯ್ಯ ನನ್ನೆಡೆ ಚಾಚಿದ್ದು ಕೈಪಿಡಿ ಆಕಾರದ ಒಂದು ಹಿಂದಿ ನಾಟಕ. ಭೀಷ್ಮ ಸಾಹನಿ ಬರೆದ ‘ಕಬಿರಾ ಖಡಾ ಬಜಾರ್ ಮೇ…’ ಅದನ್ನೆತ್ತಿಕೊಂಡ ನಾನು ಬಸವಲಿಂಗಯ್ಯನವರತ್ತ ‘ಏನು’ ಎಂಬಂತೆ ನೋಡಿದೆ.

”ಧಾರವಾಡದ ಹುಡುಗರಿಗೆ ನಾನು ಈ ನಾಟಕ ಮಾಡಿಸಬೇಕು. ಅದಕ್ಕೇ, ನೀವು ಇದನ್ನು ನನಗೆ ‘ನಿಮ್ಮ ಕನ್ನಡ’ದಲ್ಲಿ ಅನುವಾದಿಸಿ ಕೊಡಬೇಕು…” ಎಂದರು.

ನನ್ನ ಊರು, ನನ್ನ ಜನ, ನನ್ನ ಕನ್ನಡ… ‘ಆರಂಕುಶಮಿಟ್ಟೊಡಂ…’

ನಾನು ಒಂದು ಕ್ಷಣಕ್ಕೆ ಎಲ್ಲವನ್ನೂ ಮರೆತೆ. ಬೆಂಗಳೂರು, ಸಂಯುಕ್ತ ಕರ್ನಾಟಕ, ಶಾಮರಾಯರು ಎಲ್ಲವನ್ನೂ… ಯಾಕಂದರೆ, ‘ನಿಮ್ಮ ಕನ್ನಡ’ ಅಂತ ಬಸವಲಿಂಗಯ್ಯ ಹೇಳಿದ ರೀತಿ, ಆ ದನಿ ಎರಡೂ ವಿಶೇಷವಾಗಿದ್ದವು.

ನನ್ನ ಕನ್ನಡ, ಧಾರವಾಡ ಕನ್ನಡ, ಶರೀಫಜ್ಜನ ಕನ್ನಡ, ಬೇಂದ್ರೆಯವರ ಕನ್ನಡ…

ಅದೇ ಲಹರಿಯಲ್ಲಿ ಪುಸ್ತಕದೊಳಗೊಮ್ಮೆ ಇಣುಕಿದೆ. ಕುಮಾರ ಗಂಧರ್ವ ನೆನಪಾಗತೊಡಗಿದರು. ಕಬೀರ ದೋಹೆಗಳು… ಭಜನ್ ಗಳು… ಗೀತೆಗಳು…

ಮತ್ತೆ ಬಸವಲಿಂಗಯ್ಯನವರತ್ತ ಕಣ್ಣು ಹೊರಳಿಸಿದೆ.

”ಮುಂದಿನ ವಾರದಿಂದ ಶಿಬಿರ ಶುರು… ಅದಕ್ಕೇ, ಇನ್ನು ಹತ್ತು ದಿನಕ್ಕೆ ನನಗೆ ಇದರ ಅನುವಾದ ಬೇಕು…” ಅಂದರು.

ನಾನು ಏನೊಂದನ್ನೂ ಮಾತಾಡದವನಾಗಿದ್ದೆ.

ನನ್ನ ಸ್ಥಿತಿಯೇ ಹಾಗಿತ್ತಲ್ಲ… ಅಲ್ಲಿಂದಿಲ್ಲಿಗೆ ‘ಎತ್ತಿ ಒಗೆ’ಯಲ್ಪಟ್ಟವನಂತೆ ಬೆಂಗಳೂರಿಗೆ ಬಂದು ಬಿದ್ದಿದ್ದೆ. ಕೈ ನೀಡಿದವರ ಕರುಣೆಯ ಕೂಸಾಗಿದ್ದೆ. ಆಗ, ಮರಿ ಹಾಕಿದ ಬೆಕ್ಕಿನಂತೆ ಮತ್ತೆ ಮತ್ತೆ ಜಾಗ ಬದಲಿಸುತ್ತಿದ್ದ ಅನಿಕೇತನ ನಾನು. ಇಂಥ ಸ್ಥಿತಿಯಲ್ಲಿ ಕಬೀರನ ಬದುಕು-ಬವಣೆ, ಆತನ ಸಮಾಜಮುಖಿ ಚಿಂತನೆ, ತಳ್ಳಲ್ಪಟ್ಟವರಿಗೆ ಕೈಯಾಸರೆಯಾಗಿ ನಿಲ್ಲುವ ಆತನ ವಿಶಾಲ ಮನಸ್ಸು ಇವುಗಳನ್ನೆಲ್ಲ ನನ್ನ ಕನ್ನಡದಲ್ಲಿ ಹಿಡಿದಿಡಬೇಕು ಅಂದರೆ ಹೇಗೆ? ಎಲ್ಲಕ್ಕಿಂತ ದೊಡ್ಡ ಸವಾಲೆಂದರೆ ಆತನ ದೋಹೆಗಳನ್ನು ಕನ್ನಡಕ್ಕೆ ತರುವುದು.

ನನ್ನಿಂದ ಸಾಧ್ಯವಿಲ್ಲ ಅಂತ ಹೇಳಿಬಿಡಲೇ? ಅಂತ ಒಮ್ಮೆ ಅಂದುಕೊಂಡೆ. ಆದರೂ ತಡೆದೆ. ಈ ಅನುವಾದದ ಕಾರಣದಿಂದಲಾದರೂ ನನ್ನ ಸಂಜೆಗಳನ್ನು ನಿಶ್ಚಿಂತ ಸಮಯವನ್ನಾಗಿಸಿಕೊಲ್ಲಬಹುದಲ್ಲ ಅಂತ ಯೋಚಿಸಿದೆ. ಹೌದು, ಅದೇ ಸರಿ. ಇಲ್ಲದಿದ್ದರೆ ಒಂಟಿಯಾಗಿ ಕೂತು ಅತ್ತು ಅತ್ತು ಸತ್ತು ಹೋದೇನು, ಅನ್ನಿಸಿತು.

ಹೌದು, ಮನೆ-ಮಡದಿ-ಮಕ್ಕಳು ಹಾಗೂ ಮಮತೆಯ ಮೂರ್ತಿ ಅವ್ವ ಎಲ್ಲ ಇದ್ದದ್ದು ಹುಬ್ಬಳ್ಳಿಯಲ್ಲಿ. ನಾನಿದ್ದದ್ದು ಈ ಕರುಣೆಯಿಲ್ಲದ ಕಲ್ಯಾಣ ನಗರಿಯಲ್ಲಿ. ಸಂಬಂಧಿಕರ ಮನೆ ಎಷ್ಟೆಂದರೂ ಒಂದೆರಡು ದಿನ ಚಂದ. ಹೀಗಾಗಿ, ವಾರದಲ್ಲಿ ಎರಡು ಕಡೆ ಸ್ಥಳಾಂತರ ಅನಿವಾರ್ಯವಾಗಿತ್ತು. ಆ ಎಲ್ಲ ಮನೆಗಳು ಒಂದು ತಿಂಗಳಲ್ಲಿ ಮುಗಿದವು. ಈ ಊರಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಇರುವಷ್ಟು ಆರ್ಥಿಕವಾಗಿ ಸಬಲನಾಗಿರಲಿಲ್ಲ ನಾನು.

ಅವರಿವರ ಮನೆಯಲ್ಲಿ ದೇಹ ಹಿಡಿ ಮಾಡಿಕೊಂಡು ಬದುಕುತ್ತಿದ್ದ ನಾನು ಕಬೀರನನ್ನು ಅರಿತುಕೊಳ್ಳಲು ಅದು ಹೇಗೆ ತಾನೇ ಸಾಧ್ಯ? ಅದಕ್ಕೆ ಏಕಾಂತ ಬೇಕಲ್ಲ…

ಬಸವಲಿಂಗಯ್ಯ ನನ್ನ ಮುಖವನ್ನೇ ನೋಡುತ್ತಿದ್ದರು.

”ಏನ್ ಯೋಚ್ನೆ ಮಾಡ್ತಾ ಇದ್ದೀರಿ ಸಾರ್…?” ಅಂತ ಅವರು.

”ಹೇಳಿಬಿಡ್ಲಾ…?” ಅಂತ ನಾನು.

”ಹೂಂ… ಹೇಳಿಬಿಡಿ ಸಾರ್… ಏನು ಹೇಳಬೇಕಂತೀರೋ ಅದನ್ನ ಹೇಳಿಬಿಡಿ…”

”ನೀವು ನನಗೆ ಬೆಂಗಳೂರಲ್ಲಿ ಒಂದು ವಸತಿ ವ್ಯವಸ್ಥೆ ಮಾಡಿಕೊಡೋದಾದ್ರೆ, ನಾನು ಈ ಅನುವಾದವನ್ನ ಮಾಡಿಕೊಟ್ಟೇನು…”

”ಅಷ್ಟೇ ತಾನೇ? ಅದೇನೂ ದೊಡ್ ಸಮಸ್ಯೆ ಅಲ್ಲ ಬಿಡಿ ಸರ್… ಮಾಡಿಕೊಡೋಣ… ಸಂಜೆ ಕಲಾಕ್ಷೇತ್ರದಲ್ಲಿ ಸಿಗ್ತೀರಲ್ಲ… ಏನಾದರೂ ಒಂದು ವ್ಯವಸ್ಥೆ ಮಾಡೋಣ ಬನ್ನಿ ಅಲ್ಲಿಗೆ…”

-೦-೦-೦-೦-೦-

ಏನೇ ಹೇಳಿ, ನಮ್ಮ ರಂಗಭೂಮಿಯಲ್ಲಿರುವಂಥ ಬಹುತೇಕ ಜನ ಕರುಣೆಯ ಕಣ್ಣುಳ್ಳವರು, ಮಾನವೀಯ ಅನುಕಂಪ ಇರುವವರು, ನೆರವಿನ ಹಸ್ತ ಚಾಚಲು ಸದಾ ಮುಂದಾಗಿರುವವರು. ಸ್ನೇಹಕ್ಕೆ ಬೆಲೆ ಕೊಡುವವರು. ಹಿರಿಯರ ಬಗ್ಗೆ ಗೌರವ ಇಟ್ಟುಕೊಂಡವರು. ಆ ಗೆಳೆಯರ ಕಾರಣದಿಂದಲೇ ಆ ‘ಅಗ್ನಿದಿವ್ಯ’ದ ದಿನಗಳಲ್ಲಿ, ಇಲ್ಲಿ ಬೆಂಗಳೂರಿನಲ್ಲಿ ತಣ್ಣಗೆ ಇರುವಂತಾದದ್ದು.

ಆ ಸಂಜೆ ಕಲಾಕ್ಷೇತ್ರದಲ್ಲಿ ನನಗಾದದ್ದು ಅಕ್ಷರಶಃ ಮರುಜನ್ಮ. ಕಲಾಕ್ಷೇತ್ರದಲ್ಲಿ ಕಾದು ಕೂತಿದ್ದ ಬಸವಲಿಂಗಯ್ಯ ನಾನು ಹೋದ ತಕ್ಷಣ ಅವರು ಭೇಟಿ ಮಾಡಿಸಿದ್ದು ಯಾರನ್ನು ಗೊತ್ತೇ? ಲೈಟಿನ ಆರ್. ಮುದ್ದಣ್ಣನನ್ನು. ನನಗೆ ವಿಜಾಪುರದ ಹಿರಿಯ ರಂಗಕರ್ಮಿ ಶ್ರೀನಿವಾಸ ತಾವರಗೇರಿಯವರಿಂದ ಅದಾಗಲೇ ಪರಿಚಯವಾಗಿದ್ದ ರಟ್ಟಿಹಳ್ಳಿಯ ಮುದ್ದಣ್ಣನನ್ನು. ಮುದ್ದು ಮುದ್ದು ಹುಡುಗ ಮುದ್ದಣ್ಣ. ಯಾರಿಗಾದರೂ ಪ್ರಿಯವಾಗಬಲ್ಲ ಬೆಳಕಿನ ಹುಡುಗ ಮುದ್ದಣ್ಣ.

muddanna-phots-6

”ಬರ್ರಿ ಸಾರ್ ಅದಕ್ಕೇನಂತೆ? ನಮ್ ರೂಮಲ್ಲೇ ಇರೋರಂತೆ… ನಿಮ್ ಮುಂದಿನ ಹುಡುಗ್ರು ಸಾರ್ ನಾವು…” ಅಂತ ಆತ್ಮೀಯತೆಯಿಂದ ಹೇಳಿದ.

ಅಂತೂ ಬೆಂಗಳೂರಲ್ಲಿ ನನಗೊಂದು ‘ಕೇರಾಫ್ ವಿಳಾಸ’ವನ್ನು ಕೊಟ್ಟ ಆ ಹುಡುಗನನ್ನು ಈ ಜೀವಮಾನದಲ್ಲೇ ನಾನು ಮರೆಯಲು ಸಾಧ್ಯವಿಲ್ಲ.

ಯಾಕಂದರೆ, ಅಂದಿನಿಂದ ಮುಂದೆ ಸುಮಾರು ಒಂದೂವರೆ ವರ್ಷದ ತನಕ, ನಾನು ಬೆಂಗಳೂರಿನಿಂದ ಹುಬ್ಬಳ್ಳಿಗೆ ವಾಪಸ್ ಹೋಗುವ ವರೆಗೆ, ನನ್ನನ್ನು ತನ್ನ ರೂಮಿನಲ್ಲೇ ಇರಗೊಟ್ಟು, ಹಿರಿಯಣ್ಣನಂತೆ ಗೌರವದಿಂದ ನೋಡಿಕೊಂಡಾತ.

ಬೆಂಗಳೂರು ಬಸವನಗುಡಿಯ ಬಾಂದುನವರ ಬೀದಿಯಲ್ಲಿ ಒಂದು ಹಳೆಯ ಮಹಲಿನ ಹಿಂಭಾಗದ ಮನೆ. ಮೂರು ಕೋಣೆಗಳದ್ದು. ಮುಂಬಾಗಿಲು ತೆರೆದರೆ ಸಣ್ಣದೊಂದು ಪ್ರತ್ಯೇಕ ಸ್ಟೋರ್ ರೂಮು ತರಹದ ಜಾಗ. ಅದನ್ನು ಮುದ್ದಣ್ಣ ನನ್ನ ಬರಹಕ್ಕೆ ಅಣಿಗೊಳಿಸಿಕೊಟ್ಟ. ತನ್ನ ಸ್ಪಾಟ್ ಲೈಟುಗಳ ಬಾಕ್ಸುಗಳನ್ನೇ ಟೇಬಲ್ಲನ್ನಾಗಿಸಿದ. ಕರಿಯ ಕರ್ಟನ್ನುಗಳೇ ಅದಕ್ಕೆ ಟೇಬಲ್ ಕ್ಲಾತು. ತನ್ನ ಡಬ್ಬದಿಂದ ಸಣ್ಣದೊಂದು ಟೇಬಲ್ ಲ್ಯಾಂಪು ತೆಗೆದು ರಿಪೇರಿ ಮಾಡಿಟ್ಟ. ನಾಲ್ಕು ಕಪ್ ಟೀ ಹಿಡಿಯುವಂಥ ಹೊಸದೊಂದು ಫ್ಲಾಸ್ಕ್ ತಂದ. ಪಕ್ಕದ ಬೀದಿಯ ಕ್ಯಾಂಟೀನಿನಿಂದ ಅದರ ತುಂಬ ಬಿಸಿಬಿಸಿ ಚಹಾ ತುಂಬಿಸಿ, ಜತೆಗೊಂದಿಷ್ಟು ಕುರುಕಲು ತಿಂಡಿ ತಂದಿಟ್ಟು ತನ್ನ ಪಾಡಿಗೆ ತಾನು ಬೇರೆ ಕೆಲಸಕ್ಕೆ ನಿಲ್ಲುತ್ತಿದ್ದ. ಆತ ಆ ಫ್ಲಾಸ್ಕಿನಲ್ಲಿ ತುಂಬಿಸಿಡುತ್ತಿದ್ದುದು ಚಹವಲ್ಲ… ಅಮೃತ. ಒಳ್ಳೆಯ ಮನಸ್ಸಿನಿಂದ ನೀರನ್ನೇ ಕೊಟ್ಟರೂ ಅದು ಸುಧೆಯೇ ಆಗಿ ಪರಿಣಮಿಸುತ್ತದೆ ಎಂದು ನನ್ನ ಅನುಭವಕ್ಕೆ ಬಂದದ್ದು ಆಗಲೇ.

ಕೆಲಸ ಮುಗಿಸಿ ಸಂಜೆ ರೂಮು ಸೇರಿಕೊಂಡರೆ ಮುಗಿಯಿತು. ನನ್ನ ಟೇಬಲ್ಲಿನ ಮೇಲೆ ಒಂದು ತಿಂಡಿಯ ಪೊಟ್ಟಣ ಕಾದಿರುತ್ತಿತ್ತು. ಅಷ್ಟರಲ್ಲೇ ನನ್ನ ಫ್ಲಾಸ್ಕನ್ನು ತೊಳೆದು, ಅದರ ತುಂಬಾ ‘ಅಮೃತ’ವನ್ನು ತುಂಬಿರಿಸಿ ಹೋಗಿರುತ್ತಿದ್ದ ಮುದ್ದಣ್ಣ. ತಾನೆಲ್ಲಿದ್ದೇನೆ, ಎಷ್ಟೊತ್ತಿಗೆ ಬರುತ್ತೇನೆ, ಊಟ ಜೊತೆಯಲ್ಲಿಯೋ ಅಲ್ಲವೋ ಎಂಬೆಲ್ಲ ಸೂಚನೆಯನ್ನು ಅಲ್ಲಿಯೇ ಇದ್ದ ಬೋರ್ಡ್ ಮೇಲೆ ಬರೆದಿಟ್ಟಿರುತ್ತಿದ್ದ. ಆತನ ಸಮಯಪ್ರಜ್ಞೆ ಮತ್ತು ಶಿಸ್ತು ಮೆಚ್ಚುವಂಥದ್ದು.

ಒಂದು ಮುಕ್ಕು ತಿಂಡಿ ಬಾಯಿಗೆ ಹಾಕಿಕೊಳ್ಳುತ್ತಾ, ನಡುನಡುವೆ ‘ಫ್ಲಾಸ್ಕಾಮೃತ’ವನೀಂಟುತ್ತ ಬರೆಯಲು ಕೂತರೆ ಮುಗಿಯಿತು : ನನ್ನ ಧಾರವಾಡದ ಮಣ್ಣಿನ ಮಗನಾಗಿ ಮಾತಾಡುತ್ತ ಸಾಗುತ್ತಿದ್ದ ಕಬೀರ… ಅಲ್ಲಲ್ಲಿ ಎಡವಿದರೆ ಕೈಹಿಡಿದು ಎತ್ತಿ ನಿಲ್ಲಿಸಿ ಸಮಾಧಾನಪಡಿಸುತ್ತಿದ್ದ ಕಬೀರ… ಏನೂ ತಿಳಿಯದ ಸ್ಥಿತಿ ಬಂದೊದಗಿದರೆ ಬೆನ್ನು ನೇವರಿಸಿ ನಕ್ಕು ‘ಬಾ’ ಎಂದು ಮುಂದೆ ಸಾಗುತ್ತಿದ್ದ ಕಬೀರ… ಕತ್ತಲಾದರೆ ‘ದೋಹೆ’ಗಳ ದೊಂದಿ ಹಿಡಿದುಕೊಂಡು ದಾರಿ ತೋರಿಸುತ್ತ ನನ್ನನ್ನು ಮುನ್ನಡೆಸುತ್ತಿದ್ದ ಕಬೀರ.

ನಾನು ಬರೆಯುವದರಲ್ಲಿ ಮಗ್ನನಾಗಿದ್ದರೆ ಮುದ್ದಣ್ಣನದು ಬೆಕ್ಕಿನ ಹೆಜ್ಜೆ. ನೀರು ನುಂಗಿದ ಸದ್ದು ಕೂಡ ಕೇಳದಂತೆ ಜಾಗೃತೆವಹಿಸುತ್ತಿದ್ದ. ಆಗೀಗ ನನಗರಿವಾಗದಂತೆ ಬೆನ್ನ ಹಿಂದೆ ಬಂದು ನಿಂತು ನೋಡಿ, ಅನುವಾದ ಕಾರ್ಯ ಎಲ್ಲಿಯ ತನಕ ಬಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದ.

ಸಮುದಾಯದ ಮೂಲಕ ಬೆಳಕಿಗೆ ಬಂದವ ಮುದ್ದಣ್ಣ. ಎಳೆವಯದಲ್ಲೇ ಲೈಟುಗಳೆಡೆ ಆಕರ್ಷಿತನಾದ. ಕಷ್ಟಪಟ್ಟು ದುಡಿದ. ದುಡಿದದ್ದನ್ನು ಸೇರಿಸಿಟ್ಟು ಸ್ಪಾಟ್ ಲೈಟುಗಳನ್ನೂ ಖರೀಸಿದ. ನಾಟಕದ ಯಾವುದೇ ಅಂಗವಿದ್ದರೂ ಅದರಲ್ಲಿ ಅಪರಿಮಿತ ಆಸಕ್ತಿ ಈ ಹುಡುಗನಿಗೆ. ನಾನು ನಾಟಕವನ್ನು ಅನುವಾದಿಸುತ್ತಿರುವ ವಿಚಾರ ಅದಾಗಲೇ ಕಲಾಕ್ಷೇತ್ರದ ಅಂಗಣದಲ್ಲಿ ರಿಂಗಣಿಸುತ್ತಿತ್ತು. ಅದರ ಹಿಂದೆ ಖಂಡಿತ ಮುಗ್ಧ ಮುದ್ದಣ್ಣನ ಅಭಿಮಾನ ಕೆಲಸ ಮಾಡಿತ್ತು.

-೦-೦-೦-೦-೦-

ಅಂತೂ ಬಸವಲಿಂಗಯ್ಯ ಕೊಟ್ಟ ಗಡವಿನೊಳಗೆ ಅನುವಾದದ ಕೆಲಸ ಪೂರ್ತಿಯಾಗಿತ್ತು. ಮತ್ತೆ ಮತ್ತೆ ಓದಿ, ತಿದ್ದಿ ಅದಕ್ಕೊಂದು ಅಂತಿಮ ಸ್ವರೂಪ ಕೊಡುವ ಕೆಲಸವೂ ಬೇಗನೆ ಮುಗಿಯಿತು. ಬಾಕಿ ಇದ್ದದ್ದೆಂದರೆ ಮೂಲದಲ್ಲಿದ್ದ ಬಹುತೇಕ ಹಾಡುಗಳ ಅನುವಾದ ಮಾತ್ರ. ಈ ಹಾಡುಗಳೆಂದರೇ ಹೀಗೆ. ಬಲು ಕಾಡುತ್ತವೆ. ಬರೆಸಿಕೊಳ್ಳುವಾಗಲೂ ಕಾಡುತ್ತವೆ, ಬರೆಸಿಕೊಂಡಾದ ಮೇಲೂ ಕಾಡುತ್ತವೆ. ಸ್ಕೂಲಿಗೆ ಹೋಗಲು ತಯಾರಾಗುವ ಮಕ್ಕಳ ಹಾಗೆ. ಒಮ್ಮೊಮ್ಮೆ ಅವು ತಂತಾವೇ ಬರೆಸಿಕೊಂಡುಬಿಡುತ್ತಿದ್ದವು. ಇನ್ನು ಕೆಲವೊಮ್ಮೆ ಊಹೂಂ ಹೊಳೆಯದೆ ಸತಾಯಿಸುತ್ತಿದ್ದವು. ಸತಾಯಿಸುವ ಮಕ್ಕಳನ್ನು ಅವುಗಳ ಪಾಡಿಗೆ ಬಿಟ್ಟು ಉಳಿದ ಕೆಲಸಗಳನ್ನು ಮುಗಿಸುವ ತಾಯಿಯ ಹಾಗೆ ನಾನು ‘ಹಾಡು ಬಂದಾಗ ಬರಲಿ,’ ಅಂತ ಮುಂದೆ ಸಾಗುತ್ತಿದ್ದೆ. ಇಂಥ ಹಾಡುಗಳಿರುವ ನಾಟಕವೊಂದನ್ನು ಅನುವಾದ ಮಾಡುವಾಗ ಹಾಡು ಕಾಡಿದರೆ ಅದನ್ನು ಅದರ ಪಾಡಿಗೆ ಬಿಟ್ಟು ಮುಂದುವರಿಯಬಹುದು. ಆದರೆ ಮೂಲ ನಾಟಕ ಬರೆಯುವಾಗ ಹೀಗೆ ಮಾಡಲು ಸಾಧ್ಯವಾಗದು. ಮೂಲ ನಾಟಕ ಬರೆಯವ ಸಂದರ್ಭದಲ್ಲಿ ಎಷ್ಟೋ ಸಲ ಹಾಡು ಬೇಕಾದ ಜಾಗದಲ್ಲೇ ನಾನು ಬಹಳ ದಿನ ಠಿಕಾಣಿ ಹೂಡಿದ್ದಿದೆ, ಅದು ಹೊಳೆಯುವ ತನಕ ಕಾದದ್ದಿದೆ.

ಕಬೀರನ ದೋಹೆಗಳನ್ನು ಅನುವಾದಿಸುವುದಂತೂ ತುಂಬಾ ಕ್ಲಿಷ್ಟಸಾಧ್ಯ. ಆತನ ಉದ್ದಿಶ್ಯಗಳು, ಆತನ ಪ್ರತಿಮೆಗಳು, ಆತನ ಮಾತಿನ ಅರ್ಥ-ಗೂಡಾರ್ಥಗಳು ಎಲ್ಲ ಕನ್ನಡಕ್ಕೆ ಬರಬೇಕು. ಮತ್ತು ಇದು ಅನುವಾದ ಎನ್ನಿಸದಷ್ಟು ಸಹಜವಾಗಿ, ಸಾಧ್ಯವಾದಷ್ಟು ಸರಳವಾಗಿರಬೇಕು. ಆಯಾ ಹಾಡು/ದೋಹೆ ನಮ್ಮ ಮಣ್ಣಿನ ವಾಸನೆಯಿಂದ ಕೂಡಿರಬೇಕು. ಇವೆಲ್ಲ ನಾಟಕದಲ್ಲಿ ಬಳಸಲ್ಪಟ್ಟವುಗಳಾದ್ದರಿಂದ, ಅನುವಾದಿಸುವಾಗ ಲಯಕ್ಕೂ ಪ್ರಾಸಕ್ಕೂ ಅರ್ಥಕ್ಕೂ ಸಮಾನ ಗಮನ ನೀಡಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಆಯಾ ಆಯಾ ದೋಹೆ/ಹಾಡನ್ನು ಅನುವಾದಿಸುವ ಪ್ರಯತ್ನ ಮಾಡಿದೆ. ಸಾಕಷ್ಟು ಸಲ ತಿದ್ದಿದೆ. ಒಟ್ಟಿನಲ್ಲಿ ಓದಿದಾಗ ಮತ್ತು ಕೇಳಿದಾಗ ಹಾಡು ಮನಸ್ಸಿನಲ್ಲಿ ಥಟ್ಟನೆ ಕೂತುಕೊಳ್ಳಬೇಕು ಹಾಗೂ ನಮ್ಮನ್ನು ಯೋಚನೆಗೆ ಹಚ್ಚಬೇಕು ಎಂಬುದು ನನ್ನ ಉದ್ದೇಶ. ಹೀಗಾಗಿ, ಕೆಲವೆಡೆ ಸ್ವಲ್ಪ ‘ಸ್ವಾತಂತ್ರ್ಯ’ವನ್ನು ಬಳಸಿಕೊಳ್ಳುವುದು ಅನಿವಾರ್ಯವಾಯಿತು.

ಆ ಕಡೆ ಧಾರವಾಡದಲ್ಲಿ ಬಸವಲಿಂಗಯ್ಯ ಹಸ್ತಪ್ರತಿಗಾಗಿ ಹಸಿದುಕೂತಿದ್ದರು. ಈ ವಿಷಯವಾಗಿ ಆಫೀಸಿಗೆ ಫೋನ್ ಮಾಡುವುದಾಗಲೀ, ಟೆಲೆಗ್ರಾಂ ಕಳಿಸುವುದಾಗಲೀ ಮಾಡಬೇಡಿ ಎಂದವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೆ. ಹಸ್ತಪ್ರತಿಯನ್ನು ಅಂತಿಮಗೊಳಿಸುವ ಕೆಲಸ ಮುಗಿದ ರಾತ್ರಿ ನಾನೇ ಅವರಿಗೆ STD ಮಾಡಿದೆ.

”ತುಂಬಾ ಸಮಾಧಾನ ಕೊಟ್ಟಿದೆ ಅನುವಾದ. ನಾನಿದಕ್ಕೆ ‘ಸಂತ್ಯಾಗ ನಿಂತಾನ ಕಬೀರ…’ ಅಂತ ಹೆಸರಿಟ್ಟಿದ್ದೀನಿ,” ಅಂದೆ.

”ಓಹ್… ವಂಡರ್ ಫುಲ್… ಹಾಂಗಿದ್ರೆ ನೀವೇ ಇಲ್ಲಿಗೆ ಬಂದು ಒಂದು ರೀಡಿಂಗ್ ಕೊಟ್ಟುಬಿಡಿ…” ಅಂತ ಬಸವಲಿಂಗಯ್ಯ.

”ಈ ಸುದ್ದಿ ಶಾಮರಾಯರಿಗೇನಾದರೂ ಗೊತ್ತಾಗಿಬಿಟ್ಟರೆ ನಾನು ಕ್ಯಾಲೆಂಡರು ಕೈಪಿಡಿ ಮಾರುತ್ತ ‘ಸಂತ್ಯಾಗ’ ನಿಲ್ಲಬೇಕಾಗುತ್ತದೆ… ನೀವು ನನ್ನನ್ನು ಬೀದಿ ಪಾಲು ಮಾಡುವುದು ದಿಟ,” ಅಂದೆ ನಾನು.

”ಇಲ್ಲಾ ಸಾರ್… ನಿಮ್ಮ ಕೂದಲೂ ಕೊಂಕದ ಹಾಗೆ ನೋಡಿಕೊಳ್ತೀವಿ,” ಅಂದ ಬಸವಲಿಂಗಯ್ಯ ನಾಟಕ ವಾಚನದ ದಿನವನ್ನು ನಿಗದಿಗೊಳಿಸಿಬಿಟ್ಟರು.

ಒಂದು ಶನಿವಾರ ತಡರಾತ್ರಿ ನಾನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಬೇಕು. ಭಾನುವಾರ ಮಧ್ಯಾಹ್ನದವರೆಗೆ ಕುಟುಂಬದೊಡನೆ ಇರಬೇಕು. ಸಂಜೆ 14.30ರಿಂದ ಎರಡು ಗಂಟೆಗಳ ಕಾಲ ಅಲ್ಲಿದ್ದ ಮೂವತ್ತೈದಕ್ಕೂ ಹೆಚ್ಚು ಕಲಾವಿದರೆದುರು ‘ನಾಟಕ ವಾಚನ’ ಆಗಬೇಕು. ನಂತರ ಒಂದು ಗಂಟೆ ಚರ್ಚೆ ಇತ್ಯಾದಿ. ರಾತ್ರಿ ನಾನು ಧಾರವಾಡದಿಂದ ಬೆಂಗಳೂರಿಗೆ ಬಸ್ಸು ಹತ್ತಬೇಕು.

-೦-೦-೦-೦-೦-

2007-12-08-1052-06_edited

ಅವತ್ತು ನಾಟಕ ವಾಚನಕ್ಕೆ ಹಾಜರಿದ್ದ ಅಷ್ಟೂ ಜನ ಎರಡು ಗಂಟೆಗಳ ಕಾಲ ಅದೆಷ್ಟು ತನ್ಮಯರಾಗಿ ಆಲಿಸಿದರೆಂದರೆ, ನಾಟಕದ ಪಾತ್ರಗಳ ಎಲ್ಲ ಭಾವನೆಗಳೂ ಸಂವೇದನೆಗಳೂ ಅವರ ನಿಟ್ಟುಸಿರು, ಚಡಪಡಿಕೆ, ‘ಚ್ಚು ಚ್ಚು ಚ್ಚು’ಗಳ ರೂಪದಲ್ಲಿ ನನಗೆ ತಲಪಿದವು. ಹಾಡುಗಳು ಇನ್ನೂ ಪೂರ್ತಿಯಾಗಿರಲಿಲ್ಲವಾದ ಕಾರಣ ಅಲ್ಲಲ್ಲಿ ಬರುವ ದೋಹೆಗಳಂಥವನ್ನು ಮಾತ್ರ ಓದಿದೆ. ಪೂರ್ತಿಗೊಳಿಸಿದ್ದ ಒಂದು ಹಾಡನ್ನು ಮಾತ್ರ ಅವರೆದುರು ಪ್ರಸ್ತುತಪಡಿಸಿದೆ.

ಈ ಮನಸಿನ ಒಳಗಿದೆ ಹೂವಿನ ತೋಟ,

ಅದರೊಳು ಇರುವನು ಸೃಷ್ಟಿಕರ್ತ…

ಈ ಮನಸಿನ ಒಳಗಿವೆ ಯೋಳು ಸಮುದ್ರ,

ಹೊಳೆವಾ ನವಲಕ್ಷ ನಕ್ಷತ್ರ…

ಈ ಮನಸಿನ ಒಳಗಿವೆ ಮುತ್ತೂ ರತ್ನಾ,

ಒಳಗಿಳಿ ಹುಡುಕು ಕೂಡದಿರಂಜಿ…

ಈ ಮನಸಿನ ಒಳಗಿವೆ ಮಿಂಚು ಮಳೆಯು,

ಪುಟಿವಾ ಎತ್ತರದಾ ಕಾರಂಜಿ…

ಕೇಳಿ ಸಾಧುಗಳೆ ಅಂತಾನ ಕಬೀರ,

ಇದರೊಳಗಿರುವನು ನಮ್ಮೊಡೆಯ…

(‘ಇಸ್ ಮನ ಕೆ ಅಂದರ ಬಾಗ ಬಗೀಚೆ…’ ಎಂಬುದು ಹಿಂದಿಯ ಮೂಲದ ಮೊದಲ ಸಾಲು.)

ಬಸವಲಿಂಗಯ್ಯ ನಾನು ಬರೆದುಕೊಟ್ಟ ಎಲ್ಲ ಹಾಡುಗಳಿಗೆ ತಕ್ಕುದಾದ ಸೂಫಿ ಸಂಗೀತ ಛಾಯೆಯ ಸ್ವರಸಂಯೋಜನೆ ಮಾಡಿದರು. ಧಾರವಾಡ ಸಮುದಾಯದ ಕಲಾವಿದರು ಅಚ್ಚುಕಟ್ಟಾದ ಹತ್ತು ಪ್ರಯೋಗಗಳನ್ನು ನೀಡಿದರು.

ಮುಂದೆ ಹದಿಮೂರು ವರ್ಷಗಳ ನಂತರ ಸಾಣೆಹಳ್ಳಿಯ ‘ಶಿವಸಂಚಾರ’ದ 2001ರ ತಿರುಗಾಟಕ್ಕೆ ಬಸವಲಿಂಗಯ್ಯ ಮತ್ತೆ ಈ ನಾಟಕವನ್ನು ಕೈಗೆತ್ತಿಕೊಂಡರು. ಆ ಕಲಾವಿದರು ‘ಸಂತ್ಯಾಗ ನಿಂತಾನ ಕಬೀರ’ವನ್ನು ರಾಜ್ಯದ ಒಳ ಹೊರಗಿನ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಯೋಗಿಸಿದರು.

-೦-೦-೦-೦-೦-

ಇತ್ತೀಚೆಗೆ ಧಾರವಾಡಕ್ಕೆ ಹೋದಾಗ ಯಾಕೋ ಬೇಂದ್ರೆಯವರ ಶ್ರೀಮಾತಾದ ಒಂದು ಫೋಟೋ ತೆಗೆದುಕೊಂಡು ಬಂದರಾಯಿತೆಂದು ಹೋದೆ. ಅಲ್ಲಿ ಕಂಡವರು ಕವಿ ಪುತ್ರ ಡಾ. ವಾಮನ ಬೇಂದ್ರೆ. ನನ್ನ ಬಗ್ಗೆ ಗೊತ್ತಿರುವ ಅವರು ಪ್ರೀತಿಯಿಂದ ಒಳಗೆ ಕರೆದುಕೊಂಡು ಹೋಗಿ, ಒಂದು ಗಂಟೆ ಕಾಲ ‘ಬೇಂದ್ರೆ ದರ್ಶನ’ ಮಾಡಿಸಿದರು. ಆ ನಂತರ ಇತ್ತೀಚಿಗೆ ಏನು ಬರೆದಿರಿ? ಅಂತ ಕೇಳಿದ್ದಕ್ಕೆ, ”ಹೊಸದೇನೂ ಬರದಿಲ್ಲ. ಹಿಂದೆ ಬರೆದವುಗಳನ್ನೇ ಪುಸ್ತಕ ರೂಪದಲ್ಲಿ ಹೊರತಂದಿದ್ದೇನೆ,” ಎಂದು, ‘ಸಂತ್ಯಾಗ ನಿಂತಾನ ಕಬೀರ…’ ನಾಟಕದ ಕುರಿತು ಹೇಳಿದೆ.

 

ಬರುವಾಗ ಅವರು ನನಗೊಂದು ಪುಸ್ತಕ ಕೊಟ್ಟರು.

ಯಾವುದು ಗೊತ್ತೇ?

ದಾ. ದ. ರಾ. ಬೇಂದ್ರೆಯವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿಕೊಟ್ಟ ‘ಕಬೀರ ವಚನಾವಲಿ.’

kabira_cover

 

‍ಲೇಖಕರು Admin

September 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. Pushparaj Chowta

    ಸಂತ್ಯಾಗ ಕ್ಯಾಲೆಂಡರ್ ಹಿಡಿದುಕೊಂಡು ನಿಲ್ಲಬಹುದಾದ ಸಂದರ್ಭ ಬರಬಹುದು ಎನ್ನುವ ಭಯದ ನಡುವೆಯೂ ‘ಸಂತ್ಯಾಗ’ ಕಬೀರರನು ಕಡೆದು ನಿಲ್ಲಿಸಿದಿರಿ.
    ಬರೆಯುವ ಛಲ, ಹಂಬಲದಾಗ ನಾಟಕವನ್ನ ಸಂತ್ಯಾಗ ನಿಲ್ಲಿಸಲಿಲ್ಲ, ಸಂತಸದಾಗ ಮಂದಿಗೆ ತಲುಪಿಸಿದಿರಿ.

    ಪ್ರತಿಕ್ರಿಯೆ
  2. laxminarasimha

    ಅದ್ಭುತ ಗೋವಾ ಅವರೆ. ಈ ಬರವಣಿಗೆಯ ಪಯಣ ಹೀಗೇ ಮುಂದುವರೆಯಲಿ, ನಮ್ಮ ಹಿಂದಿನ, ಇಂದಿನ, ಸಾಂಸ್ಕೃತಿಕ ಲೋಕ ಹೀಗೇ ಅನಾವರಣಗಳ್ಳುತ್ತಾ ಹೋಗಲಿ- ಲಕ್ಷ್ಮೀನರಸಿಂಹ

    ಪ್ರತಿಕ್ರಿಯೆ
  3. Nataraju S M

    ನಿಮ್ಮ ಬರಹಗಳನ್ನು ಪುಸ್ತಕ ರೂಪದಲ್ಲಿಯೇ ಓದಬೇಕು ಎಂದು ಹಠ ಹಿಡಿದಿದ್ದವನು ಇತ್ತೀಚೆಗೆ ನಿಮ್ಮ ಬರಹಗಳನ್ನು ಓದಲು ತೊಡಗಿರುವೆ. ನಿಮ್ಮ ಜೀವನಾನುಭವ ನಮ್ಮಂತಹ ಕಿರಿಯರ ಬದುಕಿಗೂ ಬರಹಕ್ಕೂ ಸ್ಫೂರ್ತಿ..

    ಪ್ರತಿಕ್ರಿಯೆ
  4. umesh desai

    ಗುರುಗಳ ಕಣ್ಣ ತುಂಬಿ ಬಂದ್ವು..
    ಹಿಂದಕೊಮ್ಮೆ ಭಾಷಣದಾಗ ಅಟಲ್ ಒಂದು ಮಾತು ಹೇಳಿದ್ರು..
    “ಕಮಲ್ ಕೀಚಡ್ ಮೆ ಪೈದಾ ಹೋತಾಹೈ…” ನಿಮ್ಮ ಕೆ.ಶಾಮರಾಯರ ‘ಒಡನಾಟ’ ಆ ಮಾತು ನೆನಪಿಸ್ತು..
    ಉಫ್ ನೀವು ಉದಾಹರಣೆಯಾಗಿ ಕೊಟ್ಟ ದೋಹಾನ ಎಷ್ಟು ಛಂದದ..
    ಕಬೀರನ್ನ ಸಂತ್ಯಾಗ ಅಲ್ಲ ಮನದಾಗ ತಂದು ನಿಲ್ಲಸೀರಿ..!!

    ಪ್ರತಿಕ್ರಿಯೆ
  5. Mohan V Kollegal

    ಅದೆಷ್ಟು ವ್ಯಕ್ತಿತ್ವಗಳನ್ನು, ವೈರುಧ್ಯಗಳನ್ನು ಚಿತ್ರಿಸಿಕೊಟ್ಟಿದ್ದೀರಿ ಗುರುಗಳೇ… ಒಂದೇ ಸಮನೆ ಓದಿಕೊಂಡೆ. ಲೇಖನ ಓದಿಸಿಕೊಳ್ಳುವಂತೆ ಮಾಡುವ ತಂತ್ರಗಾರಿಕೆಯನ್ನು ನಿಮ್ಮಿಂದ ನಮ್ಮಂತಹ ಪುಟಾಣಿಗಳು ಕಲಿಯಬೇಕು. ಓದಿ ತುಂಬಾ ಖುಷಿಯಾಯಿತು. ಬಸವಲಿಂಗಯ್ಯ ಮತ್ತು ಮುದ್ದಣ್ಣನಂತಹ ವ್ಯಕ್ತಿಗಳು ಗೆಳೆಯರನ್ನು ಎಂದೆಂದಿಗೂ ಕಾಪಾಡಿಕೊಳ್ಳುತ್ತಾರೆ. 🙂

    ಪ್ರತಿಕ್ರಿಯೆ
  6. balu

    nimma nenapu mareyalikke asadhya.thanks to saraswati .avalallidda yella vidye nimage kottibittiddaale.
    nimma snehitaragi naavu dhanyaru.

    ಪ್ರತಿಕ್ರಿಯೆ
  7. CHANDRASHEKHAR VASTRAD

    ಶಾಮರಾಯರ ಬಗ್ಗೆ ರಾಘವೇಂದ್ರರು ಹೇಳಿದ್ದರೆನ್ನಲಾಗುವ ಜೋಕ್ ನೆನಪಾಯ್ತು: ಮಲಗಿದಾಗ ಯಾರೋ ಬಾಗಿಲು ಬಡಿದಂತಾಯ್ತು. ಕಣ್ತೆರೆದು ಬಾಗಿಲು ತೆಗೆದರೆ ಎದುರಿಗೆ ಒಬ್ಬ ಭಯಾನಕ ವೈಕ್ತಿ. ಯಾರು ನೀನು ಎಂದು ಆತನನ್ನು ಕೇಳಿದರೆ ‘ನಾನು ಯಮರಾಯ’ ಎಂದು ಗುಡುಗಿದ. ನಿಟ್ಟುಸಿರು ಬಿಟ್ಟ ಈತ ಹೇಳಿದ, ಯಮರಾಯನ ಬಾರೊ ಮಾರಾಯಾ ಒಳಗ ಬಾ, ನಾ ಶಾಮರಾಯ ಅಂತ ತಿಳಿದು ಹೆದರಿದ್ದೆ. ಅಂದನಂತ….. ಕಬೀರನನ್ನು ಕನ್ನಡದವನನ್ನಾಗಿ ಮಾಡಿದ್ರಲ್ಲ ಅದಕ್ಕಾಗಿ ಕನ್ನಡ ನಿಮಗೆ ಋಣಿ.

    ಪ್ರತಿಕ್ರಿಯೆ
  8. renuka manjunath

    ಅದ್ಭುತವಾಗಿ ಬರೆದಿದ್ದೀರಿ ಸರ್!

    ಪ್ರತಿಕ್ರಿಯೆ
  9. Dhananjaya Kulkarni

    ವಸ್ತ್ರದ್ ಸರ್, ಅದೇ ಯಮರಾಯನಿಗೆ ರಾಘವೇಂದ್ರ ಅವರು ಕೇಳಿದರಂತೆ:

    ಇಲ್ಲಿಗೆ ಯಾಕ ಬಂದೀ?
    ಯಮರಾಯ: ನಿನ್ನ ಜೀವ ತಗೋಳ್ಳಿಕ್ಕೆ.
    ರಾಘವೇಂದ್ರ : ಹೌದಾ…ಸಂಯುಕ್ತ ಕರ್ನಾಟಕದ ನೌಕರ್ರಿ ಏನೂ ತಗೊಳೋದಿಲ್ಲಲ್ಲಾ?

    ಪ್ರತಿಕ್ರಿಯೆ
  10. sumathi shenoy

    Dear sir, fine mixture of humour and harsh reality, which is your signature style and what makes you noble…

    ಪ್ರತಿಕ್ರಿಯೆ
  11. Anitha Naresh manchi

    ಅಬ್ಬಾ… ಕೆಲಸ ಕಳೆದುಕೊಳ್ಳುವ ಭಯದ ನಡುವೆಯೂ ಅಕ್ಷರ ಪ್ರೀತಿಯ ಕಾಯಕ… ವಂದನೆಗಳು ನಿಮಗೆ..

    ಪ್ರತಿಕ್ರಿಯೆ
  12. hipparagi Siddaram

    ಅಬ್ಬಾ….ಒಂದೆಡೆ ಕಭೀರ ಅನುವಾದಿಸಿಕೊಳ್ಳಲು ಕಾಡುತ್ತಿದ್ದರೆ…ಮತ್ತೊಂದೆಡೆ ರಾಯರು…..ಓದುವಾಗ ಮೈ ಬಿಗಿ ಹಿಡಿದು ಓದಿಕೊಂಡೆ ಸರ್…..ಎಂತಹ ಅಗ್ನಿಕುಂಡದಲ್ಲಿ ಕುಳಿತು ಅನುವಾದಿಸಿಕೊಳ್ಳುವಿಕೆ….ರೋಮಾಂಚನ ಸರ್…ನಮಗೀಗ ರೋಮಾಂಚನ ಅನಿಸುತ್ತಿದೆ….ಆಗಿನ ಸಂದರ್ಭದಲ್ಲಿ ನಿಮ್ಮ ಸ್ಥಿತಿಯೇನೆಂದು ಯೋಚಿಸಿದರೆ….ನಿಜಕ್ಕೂ…

    ಪ್ರತಿಕ್ರಿಯೆ
  13. Ishwara Bhat K

    ನೆನಪಿನ ನಾವೆಯಲ್ಲಿ ಅದೆಷ್ಟು ಹಿಡಕೊಂಡಿದ್ದೀರಿ.. ಅಬ್ಬಾ.. ಸೊಗಸಾಗಿದೆ ಬರಹ. ಗ್ರೇಟ್ ಬಿಡ್ರೀ ನೀವು..

    ಪ್ರತಿಕ್ರಿಯೆ
  14. ಮಂಜುಳಾ ಬಬಲಾದಿ

    ನಿಮಗ ಫ್ಲಾಸ್ಕಾಮೃತ, ನಮಗ ನಿಮ್ಮ ಅನುಭವಾಮೃತ… ಎಂಥೆಂಥ ಸಮಯದಾಗ, ಏನೆಲ್ಲ ಮಾಡಬಹುದು! ಅದರಿಂದ ನಮ್ಮೊಳಗs ಎಂಥ ಬದಲಾವಣೆಗಳಾಗಬಹುದು… ಹಂ.. ಓದುವ ಖುಶಿ ಜೊತಿಗೆ, ವಿಚಾರಕ್ಕ ಹಚ್ಚೋ ನಿಮ್ಮ ಅನುಭವಗಳು… 🙂

    ಪ್ರತಿಕ್ರಿಯೆ
  15. G Venkatesha

    yaavaagalu klishta paristitiyalle Uttamavaadaddanna kodalu saadya. Nimma kashtagala naDuve nimma shrujane Sheelate vijrumbiside. Abhinandanegalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: