ಗೋಪಾಲ ತ್ರಾಸಿ ಓದಿದ ‘ಹೆಣ್ಣಾಲದ ಮರ’  

ಗೋಪಾಲ ತ್ರಾಸಿ

—-

ಇದು ಕವಿ ಸುಮತಿ ಕೃಷ್ಣಮೂರ್ತಿಯವರ ಚೊಚ್ಚಲ ಕವನ ಸಂಕಲನ.

“ಬೊಗಸೆಯಷ್ಟು ಬಾನು ಮಾತ್ರ ನನಗೆ ಬೇಕಿದೆ/ಅಲ್ಲಿ ನಾನು ಕನಸ ಬೀಜ ಬಿತ್ತಬೇಕಿದೆ” ಎಂದು ಕನಸುಗಾರ್ತಿ ಕವಿ ಈ ಸಂಕಲನದಲ್ಲಿ  ಅದಮ್ಯ ಜೀವನಪ್ರೀತಿಯನ್ನು ಬಿಂಬಿಸುವ ಅನೇಕ ಕವಿತೆಗಳನ್ನು ನೀಡಿದ್ದಾರೆ. ಸಂಕಲನದ ಶೀರ್ಷಿಕೆಯೇ ಆಕರ್ಷಕ ಹಾಗು ಅರ್ಥಗರ್ಭಿತವಾದುದು.  ಶೀರ್ಷಿಕೆಯ ಕವಿತೆಯಲ್ಲಿ ಅಮ್ಮನನ್ನು ಚಿತ್ರಿಸುವಾಗ ಅಪ್ಪನ ದೌರ್ಬಲ್ಯ ಅನಾವರಣಗೊಂಡರೂ, ಇಡೀ ಕವಿತೆಯ ಅಂತ:ಸತ್ವ ಇರೋದು ಅಮ್ಮನ ಘನ ವ್ಯಕ್ತಿತ್ವವನ್ನು ಅನಾವರಣಗೊಳಿಸುವಲ್ಲಿ.

“ಆಸರೆಯಾಗಬೇಕಿದ್ದ ಅಪ್ಪ/ ಬೇಲಿಯಾಗಿ ಸಹ ನಿಲ್ಲಲಿಲ್ಲ / ತುಳಸಿಯಂತಿದ್ದ ಅಮ್ಮ/ ಬೃಹತ್ ಆಲವಾದಳು !

ರೆಕ್ಕೆಯಾಗಬೇಕಿದ್ದ ಅಪ್ಪ/ ಪುಕ್ಕ ಉದುರಿಸಿ ಕೈಕಟ್ಟಿ ನಿಂತ / ಅಮ್ಮ ಆಸ್ಥೆಯಿಂದ/ ಒಂದೊಂದೇ ಗರಿ ಜೋಡಿಸಿದಳು..”

ಇಲ್ಲಿನ ಅಮ್ಮ ಬದುಕಿನಲ್ಲಿ ತನಗೆದುರಾದ ಸವಾಲು ಸನ್ನಿವೇಶಗಳಿಗೆ ಹತಾಶಳಾಗದೆ, ತನ್ನನ್ನು ಸಂಭಾಳಿಸಿಕೊಳ್ಳುತ್ತಲೇ ತನ್ನ ನಂಬಿರುವ ಪುಟಾಣಿ ಜೀವಗಳಿಗೆ ಜೀವಚೇತನಳಾಗುತ್ತಾಳೆ.  ಅವುಗಳ ಕನಸುಗಳನ್ನು ಅಂಗೈಯಲ್ಲಿಟ್ಟು ಜತನದಿಂದ ಕಾಪಾಡುತ್ತಾಳೆ ಸಹ!  ವಾಡಿಕೆಯಂತೆ ಆಲದ ಮರ ಎಂದರೆ ಬೃಹತ್ ಆಗಿರುವಂತಹದ್ದು, ವಿಶಾಲವಾದುದು, ಸದೃಢವಾಗಿರುವಂತಹದ್ದು. ರೆಂಬೆ ಕೊಂಬೆ ಚಾಚಿಕೊಂಡು, ಬಿಳಲುಗಳನ್ನು ಗಟ್ಟಿಯಾಗಿ ಊರಿಕೊಂಡು,  ತನ್ನಾಶ್ರಯಕ್ಕೆ ಬರುವ ಎಲ್ಲವನ್ನೂ ಸಲಹುವಂತಹದ್ದು.. ಆದರೆ ಇದೇ ಆಲ ತನ್ನ ನೆರಳಲ್ಲಿ ಇತರ ಗಿಡಮರಗಳನ್ನು ಬೆಳೆಯಗೊಡುವುದಿಲ್ಲ !  ಆದರೆ ಇಲ್ಲಿ ಚಿತ್ರಿತಗೊಂಡ  ಆಲ ತಾನೂ ಬೆಳೆದು ತನ್ನವರನ್ನೂ ಬೆಳೆಸುವ ‘ಹೆಣ್ಣಾಲ’ ಎಂಬ  ರೂಪಕದ ಅರ್ಥವಂತಿಕೆಯನ್ನು ವಿಸ್ತರಿಸುವಂತಹದ್ದಾಗಿದೆ.

ವಸ್ತು ಹಳತಾದರೂ ವೈವಿಧ್ಯಮಯವಾಗಿ ನವೀನ ಭಾವ ವಿನ್ಯಾಸಗಳಲ್ಲಿ ಕಟ್ಟಿಕೊಟ್ಟ ಅನೇಕ ಕವಿತೆಗಳು ಈ ಸಂಕಲದಲ್ಲಿವೆ. ಈ ಕವಿ ಪ್ರಕೃತಿಯನ್ನು ಅದೆಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆಂದರೆ, ‘ ಸಾಕ್ಷಿ ‘ ಎಂಬ ಕವಿತೆಯಲ್ಲಿ;

“ ರಾತ್ರಿಯಿಡೀ ತೊಯ್ದು ನಡುಗುತ್ತಿರುವ ಭೂಮಿಗೆ / ಹಿತ ಶಾಖವ ಕೊಟ್ಟು ಮುದ್ದು ಮಾಡೋ ಪ್ರೇಮಿಗೆ/ ದೃಷ್ಟಿಯಾಗಬಾರದೆಂದು ಬಾನು ಬಯಸಿದೆ / ಕೆಂಪು ತಟ್ಟೆಯಲ್ಲಿ ಆರತಿಯನು ಬೆಳಗಿದೆ “

ಹೀಗೆ ಮುಂಜಾನೆಯನ್ನು ಸುಂದರವಾಗಿ ಬಣ್ಣಿಸುವ ಕವಿ,  ‘ರವಿತೇಜ’ ಕವಿತೆಯಲ್ಲಿ;

“ಅಂಧಕಾರದಲ್ಲಿ ಬೆದರಿ ಅವನಿ ಕೂಗಲು / ಅಷ್ಟ ದಿಕ್ಕು ಬೆಳಗಿ ಬಂದೆ ಕಾಪಾಡಲು”                                  

ಎಂದು ಸೂರ್ಯೋದಯವನ್ನು ಕವಿ ಭಿನ್ನಭಿನ್ನವಾಗಿ ಕಾಣುವ ಮತ್ತು ಕಾಣಿಸುವ ಪರಿ ಮುದ ನೀಡುತ್ತದೆ.   ಕಥೆಯಲ್ಲ ವ್ಯಥೆ ಎಂಬ ಕವಿತೆಯಲ್ಲಿ;   

ಎದೆಯಲ್ಲಿ ಅವಿತಿಟ್ಟ/ ನೂರಾರು ಗುಟ್ಟುಗಳು ಬಟ್ಟ ಬಯಲಲಿ ಈಗ ರಟ್ಟಾಗಿದೆ      

ಪಟ್ಟಾಂಗ ಕೇಳಲು / ಸುತ್ತ ಹತ್ತೂರಿನಿಂದ /ಎತ್ತು ಬಂಡಿಗಳಲ್ಲಿ ಜನರು ಬಂದಾಗಿದೆ

ಏನೋ ಒಂದು ಸೊಗಸಾದ ಪ್ರಸಂಗವನ್ನು ಅರುಹುತ್ತಿದ್ದಾರೋ ಎನ್ನುವಂತೆ ಆರಂಭವಾಗುವ ಕವಿತೆ ಕೊನೆಯಲ್ಲಿ; 

ಹಾಡಲ್ಲ ಕಥೆಯಲ್ಲ / ಬರಿಯ ಪಿಸು ಮಾತಲ್ಲ/ ಹೊಸದೊಂದೇ ಕಾವ್ಯವೇ ಕಣ್ ಮುಂದಿದೆ/ ಕಲ್ಲಾದರೇನಂತೆ ಕರುಣೆಯನು ದ್ರವಿಸುವುದು ಕನ್ನಡ ನೆಲದ ಹೆಮ್ಮೆಯ ಶಿಲ್ಪವು..      

ಎಂದು ಹಂಪಿಯನ್ನು ಸ್ಮರಿಸುವ ಸೊಬಗಿಗೆ ತಲೆದೂಗಲೇ ಬೇಕು. ಸಂಕಲನದ ಕವಿತೆಗಳ ಒಟ್ಟು ಆಶಯ ಜೀವನ್ಮುಖಿಯಾಗಿದ್ದು ಬದುಕಿನಲ್ಲಿ  ಧನಾತ್ಮಕ ಅಂಶಗಳಿಗೆ ತೆರೆದುಕೊಂಡು – ತೆರೆಯಿಸಿಕೊಳ್ಳುವಂತಾಹದ್ದು.       

ಒಂದಷ್ಟು ನೆನಪುಗಳ ಕಾಗದದ ದೋಣಿ/ಅಶ್ರುಗಳ ನದಿಯಲ್ಲಿ ತೇಲಿ ಬಿಟ್ಟೆ/ ಇನ್ನಷ್ಟು ನೆನಪುಗಳ ತಿಜೋರಿಯಲ್ಲಿ / ಭದ್ರಮಾಡಿ ಆಸ್ಥೆಯಿಂದ ಅಡಗಿಸಿಟ್ಟೆ

ಎಂಬಂತಹ ಸಮಜಾಯಿಸಿ ಮತ್ತು ಅಗತ್ಯ ಹೊಂದಾಣಿಕೆ ಸಾಧ್ಯವಾದಾಗಲೇ;

ನಿನ್ನೆಗಳ ಹಳೆ ಪದಕೆ ವಿದಾಯ ಹೇಳುತ್ತ/ನಾಳೆಗಳ ಹಾಡಿಗೆ ಹೊಸರಾಗ ಬೆಸೆಯುತ್ತ/ ಇಂದು ಈ ಕ್ಷಣ ಸಂಪೂರ್ಣ ಬದುಕಿ ಬಿಡುವ                                ಎಂದು ಕವಿಗೆ ಜೀವನೋತ್ಸಾಹ ಬಿಂಬಿಸಲು ಸಾಧ್ಯವಾಗುತ್ತದೆ.

ಕವಿತೆ ಹಾಗೆಲ್ಲ ಸುಮ್ಮನೆ, ಕಂಡಕಂಡಲ್ಲಿ ದಕ್ಕುವಂತಹದ್ದಲ್ಲ. ಅದು ಪ್ರೇಮ ಸಮಾನಾದುದು. ಈ ಪ್ರೇಮಧ್ಯಾನದಂತಹ ಕಾವ್ಯ ಕಸುಬಿನಲ್ಲಿ ಕವಿ;

ನೋವುಗಳ ಸೋಪಾನ ಏರಬೇಕು / ನೆನಪುಗಳ ಜೋಪಾನ ಮಾಡಬೇಕು/ಗಾಯಗಳ ಸವರುತ್ತ ಒಮ್ಮೊಮ್ಮೆ ಬಿಕ್ಕಬೇಕು’                                    ಮತ್ತು ಕವಿ ಸದಾ ನೆನಪಿಡಬೇಕಾದುದು;

ಜಾತಿ ಧರ್ಮಗಳನ್ನು ಮೀರಬೇಕು/ ಲಿಂಗ ತನ್ನದಾವುದೆಂದು ಮರೆಯಬೇಕು/     ಹೆಸರಿನ ಗೊಜಲಿಗೆ ಬೀಳದಂತೆ/ ಅನಾಮಿಕನಾಗಿಯೇ ಉಳಿದು ಬಿಡಬೇಕು “

ಕವಿತೆಯ ಸಂದರ್ಭದಲ್ಲಿ ಸಾರ್ವಕಾಲಿಕ ಸತ್ಯವಾದ ಮಾತಿದು. ಇದು  ಸುಮತಿ ಕೃಷ್ಣಮೂರ್ತಿಯವರು ದಕ್ಕಿಸಿಕೊಂಡ ಕಾವ್ಯದರಿವು ಮತ್ತು ಎಚ್ಚರವೂ ಹೌದು. ಈ ಸಂಕಲನದಲ್ಲಿ ತಮ್ಮರಿವಿಗೆ ದಕ್ಕಿದ್ದೆಲ್ಲವನ್ನೂ ಕವನವನ್ನಾಗಿಸಲು ಪ್ರಯತ್ನಿಸಿರುವರು.   ಆಧುನಿಕ ಕಾಲಮಾನದ ಮಹಾ ಆವಿಷ್ಕಾರ ಮೊಬೈಲ್ ಕುರಿತಾದ ‘ ನಿಸ್ತಂತು’ ಎಂಬ ಕವಿತೆಯಲ್ಲಿ;

ಸೂತಕದ ಮನೆಯಂತೆ/ನಗು ಮರೆತ ಮೊಗಗಳಲ್ಲಿ/ಮೌನವೊಂದನ್ನು ಬಿಟ್ಟು ಬೇರೆ ಭಾಷ್ಯವಿಲ್ಲ ! ಅಂತ ವಿಷಾದಿಸುವರು.

ಸಂಕಲನದಲ್ಲಿನ ಬಹಳಷ್ಟು ಕವಿತೆಗಳು ಪದಲಾಲಿತ್ಯ ಮತ್ತು ಗೇಯ ಗುಣಗಳಿಂದಾಗಿ ಹಾಡಲು ಯೋಗ್ಯವಾದವುಗಳು. ಉದಾ: ಜಾನಪದ ಶೈಲಿಯ ರಚನೆ ‘ ಮಾದೇವ ಮಾದೇವ’ ;  ಮಕ್ಕಳೂ ದೊಡ್ಡವರೂ ಓದಿ, ಹಾಡಿ ಆನಂದಿಸಬಲ್ಲ ‘ ಪುಟ್ಟ ರಾಬಿ’ ;  ‘ಕಲಹ’ ಎಂಬ ಕವಿತೆಯಲ್ಲಿ;

ದೊಡ್ಕಣ್ ಬಿಟ್ಕೊಂಡು ಯಾವಾಗ್ಲೂನೂ/ಮೂತಿ ಊದಿಸ್ ಬ್ಯಾಡ/ ಮನುಶಾರ್ ಕಂಡ್ರೆ ಕರುಣೆ ತೋರ್ಸು/ಹತ್ರ ಬರೋದ್ ಬ್ಯಾಡ

ಒಂಚೂರ್ ಹಲ್ಲು ಬಿಟ್ಟು ಕಿಸಿದ್ರೆ/ಸೂಪರ್ ಹೀರೋ ನೀನು/ಅದು ಬಿಟ್ಟ್ ಕೆಂಪಗೆ ಸುಡ್ತಾ ಇದ್ರೆ/ ಮಾತಾಡ್ಸಲ್ಲ ನಾನು !

ಎಂದು ಉರಿವ ಸೂರ್ಯನ ಜೊತೆ ಆಪ್ತವಾಗಿ ಜಗಳ ಆಡೋ ಸುಂದರ ಶಬ್ದ ಚಿತ್ರಣ ಇದೆ. ಈ ಕವಿತೆಯ ಪದ, ಲಯ ಪ್ರಸಿದ್ಧ ‘ರತ್ನನ್ ಪದಗಳನ್ನು’ ನೆನಪಿಸುವಂತಹದ್ದು.  ಇದೇ ರೀತಿಯ ನಾಟಕೀಯ ಗುಣವುಳ್ಳ ಇನ್ನೊಂದು ಕವಿತೆ, ‘ಅಯ್ಯೋ ಪಾಪ!’ ಒಂಟಿ ಹೆಣ್ಣಿನ ಬಗ್ಗೆ ಇನ್ನಿಲ್ಲದಂತೆ ಕನಿಕರ, ಅನಗತ್ಯವಾದ ಸಹಾನೂಭೂತಿ ತೋರುವವರ ಕುರಿತಾದ ಈ ರಚನೆ ತನ್ನೊಳಗಿನ ವ್ಯಂಗ್ಯ ಮತ್ತು ವಿಡಂಬನಾ ಗುಣದಿಂದ ಗಮನ ಸೆಳೆಯುತ್ತದೆ.

ಗೋಕುಲ ಎಂಬ ಕವಿತೆಯಲ್ಲಿ ಕೃಷ್ಣನನ್ನುದೇಶಿಸಿ, ‘ಕೃಷ್ಣಾ ನಿನ್ನಕುಟಿಲ ರಾಜನೀತಿಗಳಿಂದ/ಬಿಡುವಾದರೊಮ್ಮೆ ಗೋಕುಲಕ್ಕೆ ಹೋಗಿ ಬಾ’

ಎಂದು ಭಿನ್ನವಿಸಿಕೊಂಬಂತೆ ಬರೆದ ಭಿನ್ನ ರೀತಿಯ ರಚನೆ ಇದೆ.  ‘ದರ್ಶನ’ ಎಂಬ ಕವಿತೆಯಲ್ಲಿ  ದಾಸವೇಣ್ಯರು ಕಂಡುಕೊಂಡ ದಾರ್ಶನಿಕ ಸತ್ಯವನ್ನು ಕವಿ ಪುನರೂಕ್ತಿಸುವುದು ಹೀಗೆ,

ಗೀತೆಯ ಶ್ಲೋಕ ಬಾಯಿ ಪಾಠ ಮಾಡಿದ್ದೆ/ಮಡಿ ನೇಮ ನಿಯಮ ಪಾಲಿಸಿದ್ದೆ

ವಿವಿಧ ಕ್ಷೇತ್ರಗಳಿಂದ ರಾಶಿ ವಿಗ್ರಹ ತಂದು/ಹುಳಿಯ ನೀರಲಿ ಉಜ್ಜಿ ಶುಭ್ರ ಮಾಡಿದ್ದೆ                       

ಏನು ಮಾಡಿದರೇನು ನನ್ನೊಳಗಿನ ನಿನ್ನ/ ಇರುವಿಕೆಯ ಅಕ್ಷರಶ: ಮರೆತೇ ಬಿಟ್ಟಿದ್ದೆ !

ಇದು ಅಧ್ಯಾತ್ಮ ಕುರಿತಾಗಿ ಕವಿಯ ವೈಚಾರಿಕತೆ ಮತ್ತು ಆಧುನಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.  ಕವಿಗೆ ಹುಣ್ಣಿಮೆ ಕಾಣುವ ಪರಿ ನೋಡಿ,

ಆ ರಾತ್ರಿ ಇರುಳ ಜಡೆ/ಬೆಳಕ ಮುಡಿದಿತ್ತು

ಚಂದ್ರಮನ ತುಟಿ ಮೇಲೆ/ ನಗೆಯು ಅರಳಿತ್ತು

ಇನ್ನೊಂದು ಕವಿತೆಯಲ್ಲಿ ಮಳೆಯ ದ್ರಶ್ಯವನ್ನು ಚಿತ್ರಿಸುವುದು ಈ ರೀತಿ;

“ಮೇಲಿಂದ ಮುಗಿಲು/ ಝಲ್ಲೆಂದು ನಗಲು ಮುತ್ತು ಸುರಿದಿತ್ತು ನೋಡಾ/ ಮುಂಗಾರಿನಲ್ಲಿ”

ಪ್ರೇಮ , ಅನುರಾಗ, ಮಿಲನ, ವಿರಹದಂತಹ ಮಧುರ ಭಾವನೆಗಳಿಂದ ಅಥವಾ ಭಾವಪೀಡೆಗಳಿಂದ ಬಳಲದ ಕವಿ ಇರಲು ಶಕ್ಯವೇ ?  

ರಾಧೇ, ಹೆರಳಲ್ಲಿ ಮಾರುದ್ದ ಅರಳು ಮಲ್ಲಿಗೆ ಮಾಲೆ/ಮುಡಿಸುವ ನೆಪದಲ್ಲಿ ನಿನ್ನ ತಾಕಿ ಬಿಡಲೆ ?

ಬೆನ್ನಲ್ಲಿ ಅವಿತಿರುವ ಪುಟ್ಟ ಮಚ್ಚೆಯೊಂದಕೆ/ಸಿಹಿಯಾದ ಮುತ್ತೊಂದ ಪಟ್ ಅಂತ ಕೊಡಲೆ ?

ಈ ತುಂಟತನ, ರಸಿಕತೆ  ಪುಳಕಗೊಳಿಸುವಂತಹದ್ದು. ಇನಿಯಾ ಎಂಬ ಕವಿತೆಯಲ್ಲಿ;

ಅಂದೆಂದೋ ಮುಡಿಸಿದ್ದ/ದುಂಡು ಮಲ್ಲಿಗೆ ಮಾಲೆ/ಇಂದು ನಿನ್ನ ನೆನಪಾದೊಡನೆ ಘಮಗುಟ್ಟುವುದೇಕೋ..

ಎಂಬ ಮಧುರವಾದ ಅನುರಾಗಭಾವ ಮೀಟುವ ಕವಿ ಮುಂದೆ ‘ ಪ್ರೇಮ’ ಎಂಬ ಕವಿತೆಯಲ್ಲಿ;  

“ ನೀನು ಮೇಲೆ ಬಾಗಿರುವ ಕಾರ್ಮುಗಿಲು/ನಾನು ಉದ್ದಕೂ ತಬ್ಬಿರುವ ಗಿರಿಸಾಲು….”

“ನೀನು ಸಿಂಗರದ ಮಧುಮಂಚ/ನಾನು ಸುರಲೋಕದ ಪುಷ್ಪ

ಒಲವ ಪೂಜೆಗೆ ಸಜ್ಜು/ಇನ್ನೇಕೆ ಕಾಯುವೆ ವರ ಪಡೆಯಲು….”

ಹೀಗೆ ಪ್ರೇಮ ಗಂಧದ ಘಮಕೆ ಮನ ತಣಿಯಬೇಕೆಂದು ಬಯಸುತ್ತ, ಪ್ರೇಮದ ಔನತ್ಯವಿರುವುದೇ ಪ್ರಣಯ ಸಾಂಗತ್ಯದ ಸಾರ್ಥಕತೆಯಲ್ಲಿ ಎಂಬಂತಹ ಮೈಮನವರಳಿಸುವ  ಭಾವೋನ್ಮಾದವಿದೆ.

ಕವಿ ಕೇವಲ ಕಲ್ಪನೆಯ ತೆಕ್ಕೆಗೆ ಜೋತು ಬೀಳುವುದಲ್ಲ. ನಿಜ ಬದುಕಿನ  ಅನೇಕ ಸವಾಲುಗಳನ್ನು ಸಹ ನಿಕಷಕ್ಕೆ ಒಡ್ಡಿಕೊಳ್ಳಬೇಕು ಎನ್ನುವುದಕ್ಕೆ ಪೂರಕವಾಗಿ ಕೆಲವು ಚುಟುಕು, ಕಿರುಗವನಗಳನ್ನು ಉದ್ದರಿಸಬಹುದು.

“ನೀನೆಂಬ ಕಗ್ಗತ್ತಲ ತೆರೆ/ಸರಿದಾದ ಮೇಲಷ್ಟೆ

ನಾನೆಂಬ ಅನಂತಾಕಾಶ ತೆರೆದುಕೊಂಡದ್ದು”(ಮುಸುಕು);

ಕಟು ವಾಸ್ತವವನ್ನು ಸಶಕ್ತವಾಗಿ ಚಿತ್ರಿಸುವ (ದ್ರೋಹ);

ಹೊನ್ನಿನ ಚೂರಿ/ ಆಗಲೇ ಬೆನ್ನ ಸವರಿಯಾಗಿತ್ತು

ನಂಬಿಕೆಯ ಕವಚ ತೊಟ್ಟಿದ್ದ ನನಗೆ/ಅರಿವಾಗುವುದರಲ್ಲಿ ಹೊತ್ತು ಮೀರಿತ್ತು !

ಹೀಗೆ ಕವಿ ಬಳಸುವ ನಾನಾ ರೂಪಕ, ಉಪಮೆಗಳಲ್ಲಿನ ತಾಜಾತನ ಆಹ್ಲಾದಕರವಾಗಿ  ಮುದ ನೀಡುತ್ತವೆ.  ಈ ಕೃತಿಗೆ ಸುಮತಿಯವರ ಮಗ ವಿಷ್ಣು ಮುಖಪುಟ ವಿನ್ಯಾಸ ಮಾಡಿದ್ದು, ಕವಿಯ ಆರಾಧ್ಯರಾದ ಮಾನ್ಯ ಎಚ್.ಎಸ್. ವೆಂಕಟೇಶಮೂರ್ತಿಯವರ ಮುನ್ನುಡಿ, ಸತ್ಯೇಶ್ ಬೆಳ್ಳೂರ್ ಅವರ ಸೊಗಸಾದ ಬೆನ್ನುಡಿ ಇದೆ. ಮೊದಲ ಸಂಕಲನದಲ್ಲೇ ಕವಿಯ ಪ್ರೌಢಿಮೆಗೆ ಸಾಕ್ಷಿಯಾಗಿ ಅನೇಕ  ಉತ್ತಮ ಕವಿತೆಗಳನ್ನು ರಚಿಸಿರುವ ಸುಮತಿ ಕೃಷ್ಣಮೂರ್ತಿಯವರ ಕವಿತೆಗಳ ದೊಡ್ಡ ತೊಡಕು ಅಲ್ಲಲ್ಲಿ ನುಸುಳಿಕೊಂಬ ಅನಗತ್ಯ ವಾಚಾಳಿತನ. ಚಿತ್ರಗಳಿಗೆ ಕವಿತೆ ಕಟ್ಟುವ ಆರಂಭದ ಸ್ಪೂರ್ತಿ ಮೀರಿ ಕವಿತೆಯೇ ಚಿತ್ರಕ ಶಕ್ತಿಯನ್ನು ಉದ್ಧೀಪನಗೊಳಿಸುವಂತಾದಾಗ ಕವಿ ಬೆಳೆಯಲು ಶಕ್ಯ. ಕಾವ್ಯ ಪರಂಪರೆಯ ಓದು  ಮತ್ತು ಸಮಕಾಲೀನ ಸ್ಪಂದನೆ ಇವರ ಮುಂದಿನ ಕಾವ್ಯದಾರಿಯನ್ನು ಸುಗಮಗೊಳಿಸುವುದೆಂಬ ಭರವಸೆ ಇದೆ.  ಶುಭ ಹಾರೈಕೆಗಳು.

(ಇತ್ತೀಚೆಗೆ ಬೆಂಗಳೂರಿನಲ್ಲಿ ಕೃತಿ ಬಿಡುಗಡೆಯಂದು, ಕೃತಿ ಪರಿಚಯ ಮಾಡಿದ ಟಿಪ್ಪಣಿಯಿಂದ)

‍ಲೇಖಕರು avadhi

November 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಿ ಎಂ ನದಾಫ್

    Comment *ಮಧುರ ಭಾವಗಳನ್ನು ಮೆಲು ನುಡಿಯಲ್ಲಿ ಪೋಣಿಸಿದ ಕವಿತೆ ಗಳ ಓದು ಮುದ ನೀಡುವಂತೆ ಪರಿಚಯ ಮಾಡಿದ ಗೋಪಾಲ್ ತ್ರಾಸಿ ಅವರಿಗೆ ಅಭಿನಂದನೆಗಳು.
    ಡಿ. ಎಂ. ನದಾಫ್; ಅಫಜಲಪುರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: