ಗೋಪಾಲ ತ್ರಾಸಿ ಓದಿದ ‘ಅಂಗಳದಂಚಿನ ಕನವರಿಕೆಗಳು’

ಗೋಪಾಲ ತ್ರಾಸಿ

——

ಇದು ಲೇಖಕಿ ಸ್ಮಿತಾ ಅಮೃತರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ. ಇವು  ನಾಡಿನ ಹತ್ತು ಹಲವು ಮುಖ್ಯ ಪತ್ರಿಕೆಗಳಲ್ಲಿ, ಅಂತರ್ಜಾಲ ಇ-ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳು. ಇಲ್ಲಿನ ಬರಹಗಳು ಅಂಗಳವನ್ನು ದಾಟಲಾಗದ ಮಹಿಳಾ ಲೋಕದ  ಕನವರಿಕೆ ಅಥವ ಸ್ವಗತ ಅಥವ ಪಿಸುಧನಿಯಂತಿರುವ ಭಾವ ಲಹರಿಗಳು. ಆ ಮಟ್ಟಿಗೆ ಅನ್ವರ್ಥ ಶೀರ್ಷಿಕೆ.

ಕೃತಿಯುದ್ದಕ್ಕೂ ಲೇಖಕಿಯ ನೆನಪುಗಳದ್ದೇ ಮೆರವಣಿಗೆ. ಇಲ್ಲಿನ ಹೆಚ್ಚಿನ ಸಂವೇದನಾಶೀಲ ಬರಹಗಳಲ್ಲಿ ಸಂಪಾಜೆಯೆಂಬ ಕೊಡಗಿನ ಈ ಬದಿಯ ತಪ್ಪಲಿನ ನಿಸರ್ಗದ ಅಸೀಮ ಸೌಂದರ್ಯದ ಹಸಿಹಸಿ ಘಮಲಿದೆ.

ಮುನ್ನುಡಿಯಲ್ಲಿ ನಾಡಿನ ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕ ಪುರುಷೋತ್ತಮ ಬಿಳಿಮಲೆಯವರು, “ ಕಾವ್ಯಾತ್ಮಕ ಭಾಷೆ, ನವಿರಾದ ಭಾವಗಳು, ಕಳೆದುಕೊಂಡದ್ದನ್ನು ತಾಳ್ಮೆಯಿಂದ ಮರು ರೂಪಿಸುವ ಕುಶಲತೆ ಮತ್ತು ಬದುಕಿನ ಬಗೆಗಣ ಧನಾತ್ಮಕವಾದ ನೋಟ – ಈ ಕಾರಣಗಳಿಗಾಗಿ ಈ ಪುಸ್ತಕ ಮುಖ್ಯವಾಗಿದೆ “ ಎಂದು ಹೇಳುತ್ತಾರೆ.

ಮೊದಲ ಪ್ರಬಂಧ ‘ ಬದಲಾದ ಪಾತ್ರಗಳಲ್ಲಿ ಅದಲು ಬದಲಾದ ಭಾವಗಳ ಜಾಥ’ದಲ್ಲಿ ಲೇಖಕಿ ಬಾಲ್ಯದಿನಗಳ ಕೆಲವು ಮರೆಯಲಾರದ ಪ್ರಸಂಗಗಳನ್ನು  ಮೆಲುಕು ಹಾಕುತ್ತಾರೆ. ಆಗ ಗಂಭೀರ,ಘನವಾಗಿ ಕಂಡ ಆ ಘಟನೆಗಳು ಈಗ ಮೋಜಿನಂತೆ ಭಾಸವಾಗುವುದನ್ನು ಸೊಗಸಾಗಿ ನಿರೂಪಿಸಿದ್ದಾರೆ.  ಇಡೀ ಕೃತಿಗೆ ಅಗತ್ಯ ಪ್ರವೇಶಿಕೆಯನ್ನು ಒದಗಿಸಿಕೊಡುವಂತಹ ಪ್ರಬಂಧವದು.  ಚಿಕ್ಕಮ್ಮ ಪೇಟೆಗೆ ಹೋಗಿ ಬರುವಾಗ ಕೆಂಪು ಮಸಾಲೆ ಕಡ್ಲೆಯನ್ನು ಮಧ್ಯಾಹ್ನ ಊಟದ ಹೊತ್ತಲ್ಲಿ ಶಾಲೆಯ ಗೇಟಿನ ಬಳಿ ಕೊಟ್ಟು ಹೋದದ್ದನ್ನು ಜಗಳಗಂಟಿ ಗೆಳತಿ ಹೆದರಿಸಿ ಬೆದರಿಸಿ ಒಂದೂ ಕಡ್ಲೆಯನ್ನು ಬಿಡದೆ ಅವಳೇ ಸ್ವಾಹ ಮಾಡಿದ್ದು;   

ಚಿಕ್ಕಮ್ಮನೊಂದಿಗೆ ಪೇಟೆಗೆ ಹೋಗಿ ಬರುವಾಗ  ಏನೋ ಮಾತಾಗಿ ಎದುರುತ್ತರ ಕೊಟ್ಟಿದ್ದಕ್ಕೆ ಚಿಕ್ಕಮ್ಮ ಎರಡು ಬಾರಿಸಿದ್ದೂ; ಮುಂದೆ ನದಿ ದಾಟಲು ಕಟ್ಟಿದ್ದ ಪಾಲೆ(ಹಲಗೆ ತುಂಡು) ದಾಟುವಾಗ ಆಯತಪ್ಪಿ ಬಿದ್ದದ್ದು,  ಚಿಕ್ಕಮ್ಮ ಎತ್ತಿ ಸಂತೈಸುವ ಬದಲಿಗೆ ಮತ್ತೆ ದಡದಡನೆ ಬಾರಿಸಿದ್ದೂ;  

ಇಸುಬು ಕಾಕನ ಅಂಗಡಿಯಿಂದ ಚಾಕಲೇಟ್, ಐಸ್ ಕ್ಯಾಂಡಿ ತಿನ್ನಲು ಹೂಮಾಲೆ ಕಟ್ಟಿ ಕದ್ದುಮುಚ್ಚಿ ರಸ್ತೆಯಲ್ಲಿ ಹೋಗಿ ಬರುವ ವಾಹನದವರಿಗೆ ಮಾರುವಾಗೊಮ್ಮೆ ಮಾವ ನೋಡಿದ್ದು; ಕನ್ನಡ ಶಾಲೆಯಿಂದ ತೀರಾ ಧಿಮಾಕಿನಿಂದ ಇಂಗ್ಲಿಷ್ ಮೀಡಿಯಮ್ ತರಗತಿಗೆ ಹೊಕ್ಕು ಬೆಪ್ಪು ತಕ್ಕಡಿಯಂತಾದದ್ದು;  ಸಹಪಾಠಿ ಹುಡುಗನಿಗೆ ಕನ್ನಡ ಪರೀಕ್ಷೆಯಲ್ಲಿ ಹೆದರಿಹೆದರಿ ಸಹಾಯ ಮಾಡಿದ್ದು; ಆದರೆ ವಿಜ್ಞಾನ ಪರೀಕ್ಷೆಯಲ್ಲಿ ಕಣ್ಣಿನ ಚಿತ್ರ ಬಿಡಿಸಲು ತೋಚದೆ ಅದೇ ಸಹಪಾಠಿಗೆ, “ ನೀ ಬಿಡಿಸಿದ ಕಣ್ಣಿನ ಚಿತ್ರ ಒಮ್ಮೆ ತೋರಿಸುವೆಯಾ? ಕೇಳಿಕೊಂಡಾಗ ಆತ, “ ಬೇಕಾದರೆ ನನ್ನ ಕಣ್ಣನ್ನೇ ನೋಡಿ ಬಿಡಿಸು” ಅಂತ ದಬಾಯಿಸಿ ಬಿಡಬೇಕೇ? ಎಲಾ ! ಎಂಥಾ ಮೋಸ! ಆಗ ಚಿಲ್ಲನೆ ಚಿಮ್ಮಿದ ಅಪಮಾನದ ಕಣ್ಣೀರು…”  ಹೀಗೆ ಕಥೆ ಹೇಳುವಂತೆ ಆಪ್ತವಾಗಿ, ಅಷ್ಟೇ ಲವಲವಿಕೆಯಿಂದ ಆ ದಿನಗಳ ಚಿತ್ರಣವನ್ನು ಕಟ್ಟಿಕೊಡುತ್ತಾರೆ.

ಲೇಖಕಿ ಕೊಡಗಿನ ಮೇಕೇರಿಯ ಅಜ್ಜಿ ಮನೆಯ ಗದ್ದೆಬಯಲು, ಹೊಳೆ, ಕಾಫಿ ತೋಟ, ಹರಿಯುವ ತೊರೆ, ನದಿ, ತವರೂರು ಬಂಟಮಲೆಯ ದಟ್ಟ ಹಸಿರು ಕಾನನ, ಕಾಡುಪ್ರಾಣಿಗಳು, ನಾನಾ ಪಕ್ಷಿ ಜೀವಜಂತುಗಳು;  ಸೇರಿದ ಮನೆ ಸಂಪಾಜೆಯಲ್ಲಿ ಉಂಡ ಬಿಸಿಲು, ಕಂಡ ಮಳೆ,ಅನುಭವಿಸಿದ ಚಳಿ…ಹೀಗೆ ಸ್ಮೃತಿಪಟಲದಲ್ಲಿ ನೆಲೆಗೊಂಡಿದ್ದ ಬೆಚ್ಚಗಿನ ಭಾವನೆಗಳನ್ನು ಎಳೆಎಳೆಯಾಗಿ ಸುಲಲಿತ ಪದಗಳಲ್ಲಿ ಹಂಚಿಕೊಂಡಿದ್ದಾರೆ.

‘ಬಂಟಮಲೆಯೆಂಬ ಬದುಕ ತಾಣ’ ಪ್ರಬಂಧದಲ್ಲಿ, ಲೇಖಕಿ ಬಂಟಮಲೆಯ ಆಕರ್ಷಣೆಯನ್ನು ಚಿತ್ರಿಸುವ ಬಗೆ ನೋಡಿ; “…..ಇಲ್ಲಿಂದ ಚಿಮ್ಮಿ ಹರಿಯುವ ಪುಟ್ಟ ಪುಟ್ಟ ತೊರೆಗಳಲ್ಲಿ ಸಂಗೀತದ ನಾದವಿದೆ. ಸುಯ್ಯುವ ಗಾಳಿಯಲ್ಲಿ ಸಾಹಿತ್ಯದ ಗಂಧವಿದೆ. ಹಕ್ಕಿಗಳ ಕಂಠದಲ್ಲಿ ಬದುಕಿನ ಮಾಧುರ್ಯವಿದೆ. ದಟ್ಟ ಕಾನನದ ಎಡೆಯಿಂದ ನುಸುಳಿ ಬರುವ ಸೂರ್ಯನ ಕಿರಣಗಳಲ್ಲೂ ಸಮಸ್ತ ಬ್ರಹ್ಮಾಂಡವನ್ನು ಬೆಳಗಿಸುವ ಅಗಾಧ ಪ್ರಭೆಯಿದೆ…..”

ಇಲ್ಲಿನ ಪ್ರಬಂಧಗಳಲ್ಲಿ ಲೇಖಕಿ ಹೋಮ್ ಮೇಕರ್ ಜೊತೆಗೆ ಕೃಷಿಕ ಮಹಿಳೆಯಾಗಿ ಅಡುಗೆಮನೆ,  ಅಂಗಳ, ಹಿತ್ತಲು ಇಷ್ಟೇ ಸೀಮಿತ ಲೋಕದೊಳಗಿದ್ದೂ ಧನಾತ್ಮಕವಾಗಿ ಬದುಕಿಗೆ ಹೇಗೆ ತೆರೆದುಕೊಳ್ಳಬಹುದೆಂದು ಸರಳವಾಗಿ ಅಭಿವ್ಯಕ್ತಪಡಿಸಿದ್ದಾರೆ.  ‘ಮನೆಯ ಜೀವಂತಿಕೆ ನಿಂತಿರುವುದೇ ಹಿತ್ತಲಿನಲ್ಲಿ’ ಪ್ರಬಂಧದಲ್ಲಿ  ಹಿತ್ತಲಿನ ಕುರಿತಾದ ಚಿತ್ರಣ ಗಮನಿಸಿ;

“ ಸಂಜೆಯ ಹೊತ್ತು, ಒಣ ಹಾಕಿದ ಬಟ್ಟೆಗಳೆಲ್ಲಾ ಗರಿಗರಿಯಾಗಿ ಬಿಸಿಲು ಪರಿಮಳ ಹೊತ್ತು ಒಳಮನೆ ಸೇರುತ್ತಿವೆ. ಹಕ್ಕಿಗಳೆಲ್ಲಾ ಗೂಡಿನತ್ತ ಧಾವಿಸುತ್ತಿವೆ. ಮನೆಯಂಗಳದ ಎದುರಿನ ದಿಗಂತದಲ್ಲಿ ಹುಟ್ಟಿದ ಸೂರ್ಯ ಹಿತ್ತಲಿನ ಕಡೆಗೊಮ್ಮೆ ಬಂದು ಕಣ್ಣು ಹಾಯಿಸಿ ಸಮುದ್ರದಂಚಿಗೆ ತೆರಳುತ್ತಿದ್ದಾನೆ.  ಹಿತ್ತಲು ಯಾಕೋ ಮೌನವಾದಂತಿದೆ…”

ಸ್ಮೀತಾ ಅಮೃತರಾಜ್ ಅವರು ಸಮಕಾಲೀನ ಕನ್ನಡ ಕವಿಗಳಲ್ಲಿ ಮುಂಚೂಣಿಯಲ್ಲಿರುವ ಹೆಸರು. ತಂಗಾಳಿಯ ಸುಯ್ಲನ್ನು;  ಮಳೆಹನಿಯ ನಾದವನ್ನು, ನದಿಯ ತಣ್ಣನೆಯ ಹರಿವನ್ನು, ಹಕ್ಕಿಪಿಕ್ಕಿಗಳ ಸಂಭ್ರಮದ ಜೊತೆಗೆ ಭಯಭೀತ ನೋಟವನ್ನು ತನ್ನೊಳಗೇ ಆವೀರ್ಭವಿಸಿಕೊಂಡು ಖುಷಿಪಡುವ, ಚಡಪಡಿಸುವ  ಅಪ್ಪಟ ಕಾವ್ಯಜೀವಿ. ಹಾಗಾಗಿ ಇಲ್ಲಿನ ಅನೇಕ ಬರಹಗಳು ಗದ್ಯಕಾವ್ಯವೇ ಹೌದು. ಕೆಲವು ಪ್ರಬಂಧಗಳನ್ನು ಓದುವಾಗ ಅಲ್ಲಿನ ಕೆಲವು ಘಟನೆ ಸನ್ನಿವೇಶಗಳಿಗೆ ಪೂರಕವಾಗಿ ಅವರದ್ದೇ ಕವಿತೆಯ ಈ ಕೆಳಗಿನ ಸಾಲುಗಳು ತೇಲಿಬಂದವು;

ಈ ಬೆಳ್ಳಾನೆ ಬೆಳಗಿನಲ್ಲಿ/ಮುಂಬಾಗಿಲ ಅಂಗಳದಲ್ಲಿ

ಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾ/ಭೂಮಿಯನ್ನೇ ತೂಗುತ್ತಿದೆಯಲ್ಲಾ

ಎಲಾ ! ಪುಟಾಣಿ ಚುರುಕು ಹಕ್ಕಿ/ಯಾರಿಟ್ಟರೋ ಹೆಸರು/ಭೂಮಿ ತೂಗುವ ಹಕ್ಕಿ !

(ಭೂಮಿ ತೂಗುವ ಹಕ್ಕಿ…….)

ಹಿತ್ತಲು ಅಡುಗೆ ಕೋಣೆ ಅಂಗಳ/ಮೂರಕ್ಕಷ್ಟೆ ಸುತ್ತು ಹಾಕಿ ಸುಸ್ತು ಹೊಡೆದು

ಗೇಟಿನಾಚೆಗೊಮ್ಮೆ ನಿರುಕಿಸುವೆನೆಂದಾಕ್ಷಣ/ಅವಸರದ ಸೂರ್ಯ ನೆತ್ತಿ ಹತ್ತಿ ಇಳಿದು ಹೋಗುತ್ತಿದ್ದಾನೆ

ಅವನಿಗೆ ಕಡಲಿಗಿಳಿಯುವ ತುರ್ತು

(ಅದಕೆ ದಕ್ಕಿದ ಭಾಗ್ಯ……)

ಆ ಸೋನೆ ಮಳೆ ಹನಿಯುವ/ಹೊತ್ತಿಗೆ ಬೆಸೆದುಕೊಂಡ ಬಂಧವಿದು

ಹನಿಯೆಂದರೆ/ ಶುದ್ಧ ಜಲವಷ್ಟೆ.

ಅದರ ಪ್ರೀತಿಯೂ ಅದರಂತೆ/ಅದಕ್ಕೆ ಪರ್ಯಾಯ ಪದವಿಲ್ಲವೆನ್ನುವಷ್ಟು ಪರಿಶುದ್ಧ.

(ಸೋನೆ ಹನಿ ಹನಿದ ಹೊತ್ತು…..)

ಹನಿ ಹನಿಯುವ ಸದ್ದು/ಇನಿತು ಸೋಕಿದರೂ ಸಾಕು

ಒಳಮನೆಯ ಹೊರೆ ಕೆಲಸಗಳ/ನಡುವಿನಿಂದ ಹೊರಗೋಡಿ ಬಂದು

ಕಿವಿಯಾನಿಸಿ ಹಗುರವಾಗುತ್ತಾಳೆ ಆಕೆ…

ಮಳೆ ಬರುವ ಕಾಲಕ್ಕೆ/ಎಲ್ಲ ಹುಡುಗಿಯರು ಹೀಗೇನಾ..?

(ಮಳೆ ಬರುವ ಕಾಲಕ್ಕೆ……)

ಈ ರೀತಿ  ಹಕ್ಕಿ, ಅಂಗಳ, ಹಿತ್ತಲು, ಮಳೆಹನಿ, ಅಡುಗೆ ಕೋಣೆ, ಪದೇಪದೇ ಧ್ಯಾನಿಸುವ ರೂಪಕಗಳಾಗಿ ಪ್ರಬಂಧವೇ ಪದ್ಯವಾಗುವ, ಪದ್ಯವೇ ಪ್ರಬಂಧದ ಧ್ವನಿಯಾಗುವ ಸ್ಮಿತಾರ ಲೇಖನಿಯ ಸೊಗಸದು.  ನಿಸ್ಸಂದೇಹವಾಗಿ ವಿಚಾರಗಳ ತಿಕ್ಕಾಟವಿಲ್ಲದ,  ಸುತ್ತಮುತ್ತಲ ದ್ವಂದ್ವ, ವೈರುಧ್ಯಗಳಿಗೆ ತಣ್ಣನೆಯ ನಿರ್ಲಕ್ಷ್ಯ ತೋರುತ್ತ, ಇದ್ದುದ್ದರಲ್ಲೇ ಖುಷಿಯನ್ನು ಆರಿಸಿ ಆಸ್ವಾದಿಸುವ  ಜೀವನಪ್ರೀತಿಯನ್ನು ಬಿಂಬಿಸುವ ಬರಹಗಳಿವು.  ಇಷ್ಟು ಹೇಳಿದ ಮೇಲೂ ಈ ಪ್ರಬಂಧಗಳ ಪದ ಲಾಲಿತ್ಯವನ್ನು, ಓದಿನ ಖುಷಿಯನ್ನು ಓದಿಯೇ ಅನುಭವಿಸುವಂತಾಹದ್ದು.  

‍ಲೇಖಕರು avadhi

October 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: