ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಡ್ಸೆಯನು ಗಾಂಧಿ ಕ್ಷಮಿಸಬಹುದು! ನಾವಲ್ಲ!

 ಅಣ್ಣಪ್ಪ ಅರಬಗಟ್ಟೆ

ಅಜ್ಜನ ತಲೆಯ ಮೇಲಿನ ಖಾದಿ ಟೋಪಿ
ಹೆಗಲ ಮೇಲೇರಿ ಕೂತ ನನಗೆ ದೋಣಿ
ಬೆರಳಾಡಿಸುತ ಕೇಳುತ್ತಿದ್ದೆ, ‘ಅಜ್ಜ, ಈ ಟೋಪಿಗೆಷ್ಟು ದುಡ್ಡು’
‘ಬೆಲೆ ಕಟ್ಟಲಾಗದು ಮಗು, ಅದು ಗಾಂಧಿ!’

ಪಿಳಿಪಿಳಿ ಕಣ್ಬಿಡುತ್ತ ಕೇಳುತ್ತಿದ್ದೆ ಮಾಸ್ತರರ ಮಾತು
‘ಸಾರ್, ಅಜ್ಜ ನಮ್ಮೂರಿಗೂ ಬರುವರೆ?
ನಾಳೆ ಜನುಮದಿನ ಅಕ್ಟೋಬರ್ ಎರಡು!’
‘ಹೌದು ಮಗು ಎಲ್ಲೆಡೆಗೂ ಬರುವರು ಕಾಯುತಿರು!’
ನಿಂಬೆಹುಳಿ ಪೆಪ್ಪರ್ಮೆಂಟಿಗೆ ಮುಗಿಯಿತು ಜಯಂತಿ
ಶಾಲೆಗೆ ಗೇಟು ಹಾಕಿದರೂ ಕಾಯುತ್ತ ಕುಳಿತೆ
ಆಸ್ಪತ್ರೆಯ ಜಗಲಿಯಲ್ಲಿ, ಬರಲಿಲ್ಲ ಗಾಂಧಿ!

ಚರ್ಚಾಸ್ಪರ್ಧೆಯೊಂದರಲಿ ನನಗೆ ಪ್ರಥಮ ಬಹುಮಾನ
ಬಣ್ಣಬಣ್ಣದ ಹೊದಿಕೆಯನು ಹರಿಯುತಿದ್ದಂತೆ
ಒಳನಗುತ ಬರಿಮೈಯಲಿದ್ದರು ಮುಖಪುಟದಲಿ
ಅಪ್ಪನಿಗೆ ಖುಷಿ, ‘ನೀನು ಅವರಂತೆಯೇ ಆಗುವೆ!
ಅದಕಾಗಿಯೆ ಕೊಟ್ಟಿರುವರು ಈ ಪುಸ್ತಕ’
ನನ್ನೊಳಗೇ ಇಣುಕಿ ಬಿಟ್ಟರು ಗಾಂಧಿ!

ಆಗಾಗ ನಡೆಯುತ್ತಿತ್ತು ಮಿತ್ರರ ನಡುವೆ ಜಗಳ
ದೇಶ ಒಡೆದರು ದುಡ್ಡೂ ಕೊಡಿಸಿದರು
ಹರಕು ಮುರುಕು ಕೇಳಿ ಬೇಸರವೆನಿಸಿತ್ತು
ನನ್ನೊಂದಿಗಿದ್ದರು ಮತ್ತದೇ ಗಾಂಧಿ ಮಾತಾಡಲಿಲ್ಲ!

ನಾನು ಊಹಿಸಿರಲಿಲ್ಲ ನಿರೀಕ್ಷೆಯೂ ಇರಲಿಲ್ಲ
ಗಾಂಧೀ ಈ ಪರಿ ನಾಶವಾಗುವರೆಂದು
ಮದ್ಯದಂಗಡಿಗೆ ಬಾವುಟ ಕಟ್ಟಿ ಟೇಪು ಕತ್ತರಿಸುವಾಗ
ಗಾಂಧಿಯೇ ಮಾಯ!
ಜಯಂತಿಗೆ ರಜೆ ಫಲಕ ನೇತುಹಾಕಿ ಒಳಗೆ ಗೋಣು ಅದುಮಿಟ್ಟು ಕತ್ತರಿಸುವಾಗ
ಗಾಂಧಿ ನೆನಪೇ ಆಗಲಿಲ್ಲ!
ಗ್ರಾಮ ಸ್ವರಾಜ್ಯದ ಅಲೂಮಿನಿಯಮ್ ಪಾತ್ರೆಯನು
ಗುಜರಿಯವನು ಮುಖಮೂತಿ ನೋಡದೆ ಜಜ್ಜಿಡುವಾಗ
ಯಾರದು ಗಾಂಧಿ?
ತಕ್ಕಡಿಯಲಿ ಅಕ್ಷರಗಳು ಕೊಳೆಯುತ್ತಿರುವಾಗ
ಏನದು ಗಾಂಧಿ?

ಸಧ್ಯಕ್ಕೆ ಉಳಿದಿರುವನೊಬ್ಬನೇ ಗಾಂಧಿ
ಅದು ಗೋಡ್ಸೆಯು ಕೊಂದ ಗಾಂಧಿ!
ಗುಂಡಿಕ್ಕಿದವನ ಗಾಂಧಿ ಕ್ಷಮಿಸಿಯಾಗಿದೆ
ಅವನು ಮತ್ತೊಬ್ಬ ಏಸು! ಅನುಯಾಯಿಯಲ್ಲ!
ನನ್ನೆಲ್ಲ ಗಾಂಧಿಯರು ನಾಶವಾದರು
ಉಳಿದಿರುವನೊಬ್ಬನೇ ಒಬ್ಬ
ಅದು ಗೋಡ್ಸೆಯು ಕೊಂದ ಗಾಂಧಿ!
ಗೋಡ್ಸೆಯನು ಗಾಂಧಿ ಕ್ಷಮಿಸಬಹುದು! ನಾವಲ್ಲ!

‍ಲೇಖಕರು avadhi

2 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading