ಗೆಳೆಯ ಬರಾತೀನಿ ಮನದಾಗಿಡೋ ನೆನಪಾ..

ಅಣ್ಣನ ನೆನಪು – ೪೦

ಆರ್.ವಿ ಮತ್ತು ಅವಧಾನಿ ಎಂಬ ಜೀವ ಸಖರು

ಆರ್.ವಿ. ಭಂಡಾರಿ ಇದ್ದಲ್ಲಿ ಜಿ. ಎಸ್. ಅವಧಾನಿಯವರು, ಅವಧಾನಿಯವರಿದ್ದಲ್ಲಿ ಆರ್. ವಿ. ಭಂಡಾರಿಯವರು ಇರುತ್ತಾರೆ ಎನ್ನುವುದು ಒಂದು ಕಾಲದ ಪ್ರತೀತಿಯೇ ಆಗಿತ್ತು.

ಅಂತಹ ಸ್ನೇಹ ಇವರಿಬ್ಬರದು. ಕೊನೆಯ ದಿನಗಳಲ್ಲಿ ಸಣ್ಣಪುಟ್ಟ ಜಗಳಗಳು ನಡೆದರೂ ಜಗಳ ಮುಗಿದು ೨೪ ಗಂಟೆಯೊಳಗೆ ಪರಸ್ಪರರ ನಡುವೆ ಪೋಸ್ಟ್ ಕಾರ್ಡ್ ವಿನಿಮಯ ಆಗ್ತಿತ್ತು.

ಅಣ್ಣ ಇರೋದು ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ, ಅವಧಾನಿಯವರು ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ. ಇಬ್ಬರ ನಡುವೆ ೧೦-೧೨ ವರ್ಷಗಳ ವಯಸ್ಸಿನ ಅಂತರವೂ ಇತ್ತು. ಈತ ಶೂದ್ರ ಜಾತಿಯವ, ಅವರು ಹುಟ್ಟಿನಿಂದ ಬ್ರಾಹ್ಮಣ ಜಾತಿ. ಅವರು ಖಾಯಂ ಕವಳಧಾರಿಯಗಳು. ಅಣ್ಣ ಆಗಾಗ ಕವಳಧಾರಿ. ಇದ್ಯಾವುದೂ ಅವರಿಬ್ಬರ ಸ್ನೇಹಕ್ಕೆ ಬಾಧಕವಾಗಲಿಲ್ಲ. ಉತ್ತರ ಕನ್ನಡದಲ್ಲಿಯೇ ಆದರ್ಶ ಎನ್ನಬಹುದಾದ ಸ್ನೇಹ ಇದು.

ಈಗಲೂ ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಅವರ ಪರಿಚಯದವರು ಸಿಕ್ಕರೆ ಇಬ್ಬರ ಹೆಸರನ್ನೂ ಕೇಳುತ್ತಾರೆ. ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಘಟನೆಯ ವಿಷಯದಲ್ಲಿ ಜೊತೆಯಾಗಿ ಕೆಲಸ ನಿರ್ವಹಿಸಿದರು. ಆದರೆ ಪ್ರೊ. ಅವಧಾನಿಯವರು ಬಹುಬೇಗ ನಮ್ಮನ್ನಗಲಿದರು ಎನ್ನುವ ನೋವು ನಮ್ಮದು.

ಜಿ.ಎಸ್. ಅವಧಾನಿಯವರು ನಮ್ಮೂರಿನ ಹತ್ತಿರದ ಹೆಬ್ಬರ‍್ನಕೆರೆಯವರು. ಅಣ್ಣ ಓದಿದ ಅರೆ ಅಂಗಡಿ ಎಸ್.ಕೆ.ಪಿ ಶಾಲೆಯಲ್ಲಿಯೇ ಅವರು ಓದಿದ್ದು. ಅತಿ ಸಣ್ಣ ವಯಸ್ಸಿನಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡರು. ಬರವಣಿಗೆ ರೂಢಿಸಿಕೊಂಡರು. ಉತ್ತರ ಕನ್ನಡ ಕಂಡ ಅದ್ಭುತ ಭಾಷಣಕಾರರು ಮತ್ತು ಕನ್ನಡ ಅಧ್ಯಾಪಕರೂ ಕೂಡ.

ಈಗಲೂ ಅವಧಾನಿಯವರ ಪಾಠದ ರಸನೆನಪುಗಳಿಲ್ಲದ ಒಬ್ಬನೇ ಒಬ್ಬ ವಿದ್ಯಾರ್ಥಿ ಸಿಗಲಿಕ್ಕಿಲ್ಲ. ಅಂತಹ ಪ್ರಭಾವಶಾಲಿ ಅಧ್ಯಾಪಕರು ಅವರಾಗಿದ್ದರು. ಹಲವು ಜನ ಶಿಷ್ಯರು-ಒಳ್ಳೆಯ ಶಿಷ್ಯರು-ಒಳ್ಳೆಯ ಲೇಖಕರಾಗಿ-ಓದುಗರಾಗಿ ಈಗಲೂ ಅವರ ಕೊಡುಗೆಗಳಾಗಿ ನಮ್ಮೆದುರು ಇದ್ದಾರೆ. ಹಾಗಾಗಿ ಅವರು ಸಾಂಸ್ಕೃತಿಕ ವಲಯಕ್ಕೆ ನೀಡಿದ ಮಹತ್ವದ ಕೊಡುಗೆ ಎಂದರೆ ಅವರ ಹಲವು ಬರವಣಿಗೆಗಳು ಹೌದು; ಆದರೆ ಅದಕ್ಕಿಂತ ಹೆಚ್ಚಿನದಾಗಿ ಅವರ ಶಿಷ್ಯರು ಎನ್ನಬಹುದು.

ಇಬ್ಬರೂ ಕನಿಷ್ಟ ವಾರಕ್ಕೆ ಎರಡು ಬಾರಿಯಾದರೂ ಭೇಟಿಯಾಗುತ್ತಿದ್ದರು. ಹೊಸ ಬರವಣಿಗೆಯನ್ನು ಕುರಿತು ಚರ್ಚಿಸುತ್ತಿದ್ದರು. ಬಹುಶಃ ಪರಸ್ಪರರ ನಡುವೆ ಯಾವುದೇ ಗೌಪ್ಯತೆ ಇಲ್ಲದಷ್ಟು ಅವರು ಪರಸ್ಪರರನ್ನು ಪ್ರೀತಿಸುತ್ತಿದ್ದರು. ಆದರ್ಶ ಗಂಡ ಹೆಂಡಿರಂತೆ ಮನವನ್ನು ತೆರೆದುಕೊಳ್ಳುತ್ತಿದ್ದರು. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಜಿ.ಎಸ್. ಅವಧಾನಿಯವರು ಬರೆದ ‘ಕಣಗಿಲೆ’ ಎನ್ನುವ ಕಿರು ಕಾದಂಬರಿ. ಇದನ್ನು ನಾವು ಓದಿದಾಗ ಅಣ್ಣ ಹೀಗೆ ನಮ್ಮ ಕಣ್ಣೆದುರು ಹಾದು ಹೋಗದೇ ಇರಲು ಸಾಧ್ಯವೇ ಇಲ್ಲ. ಅಣ್ಣನ ಬದುಕಿನಲ್ಲಿ ಸಂಭವಿಸಿದ ಹಲವು ನೋವಿನ ಘಟನೆಗಳು ಈ ಕಾದಂಬರಿಯಲ್ಲಿದೆ ಎನ್ನುವುದು ಅಣ್ಣನೊಂದಿಗೆ ಬದುಕಿದ ನಮಗಂತೂ ಗೊತ್ತಿದೆ.

ಉತ್ತರ ಕನ್ನಡದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಪ್ರಾರಂಭವಾದಾಗ ಅಣ್ಣ ಮತ್ತು ಅವಧಾನಿಯವರು ಜಿಲ್ಲಾ ಸಂಚಾಲಕರಾಗಿದ್ದರು. ಆಮೇಲೆ ಅಣ್ಣ ರಾಜ್ಯ ಸಂಚಾಲಕನಾಗಿದ್ದಾಗ ಅವಧಾನಿಯವರು ವಲಯ ಸಂಚಾಲಕರಾಗಿದ್ದರು ಅಂತ ಕಾಣ್ತದೆ. ಆದರೆ ಸಂಘಟನೆ ಬೆಳೆಸುವಲ್ಲಿ ಇಬ್ಬರ ಕೊಡುಗೆ ಕೂಡ ಇದೆ. ಇಬ್ಬರೂ ಸೇರಿ ಜಿಲ್ಲೆಯನ್ನು ಅಡ್ಡಾಡಿದ್ದಾರೆ.

ಆಗ ಜಾತಿ ಪದ್ಧತಿ ಬಹಿರಂಗವಾಗಿ ಆಚರಣೆ ಆಗುತ್ತಿರುವ ಕಾಲ. ದೇವರು-ದಿಂಡಿರ ಹೆಸರಿನಲ್ಲಿ ಜನರನ್ನು ನೇರವಾಗಿ ಮೌಢ್ಯ-ಕಂದಾಚಾರದ ಹಿಂಸೆಗೆ ತಳ್ಳುತ್ತಿರುವ ಕಾಲ. ಬ್ರಾಹ್ಮಣ್ಯದ ವಿರುದ್ಧ ಮಾತನಾಡಿದರೆ ಅವರ ಮೇಲೆ ಮುಗಿಬೀಳುವ ಕಾಲ. ಆಗ ಜಿ.ಎಸ್. ಅವಧಾನಿಯವರು ಇದೆಲ್ಲದರ ವಿರುದ್ಧ ನಿಂತರು. ನಿಜ ಅರ್ಥದಲ್ಲಿ ಅಣ್ಣನ ಜೊತೆಯಾದವರು ಅವರು.

ಅಣ್ಣನನ್ನು ಬ್ರಾಹ್ಮಣ ವಿರೋಧಿ ಎಂದು ಧಾಳಿ ಇಡುತ್ತಿರುವಾಗ ಅಣ್ಣನ ಪರವಾಗಿ ನಿಂತು ಅವರು ಹಲವು ವರ್ಷ ಮಾತನಾಡಿದರು; ಬರೆದರು. ಆಶ್ಚರ್ಯವೆಂದರೆ ಜಾತಿ ಪದ್ಧತಿಯ ವಿರುದ್ಧ ಅಣ್ಣ ಮಾತನಾಡಿದರೆ ಮೇಲ್ಜಾತಿಯವರು ಟೀಕಿಸುತ್ತಿದ್ದರು. ಆದರೆ ಪ್ರೊ. ಜಿ.ಎಸ್. ಅವಧಾನಿಯವರು ಬ್ರಾಹ್ಮಣ್ಯವನ್ನು ಟೀಕಿಸಿ ಬರೆದರೆ ಆ ಜಾತಿಯವರು ಸಹಿಸಿಕೊಳ್ಳುತ್ತಿದ್ದರು.

ನಾನೂ ಅವರ ವಿದ್ಯಾರ್ಥಿಯೇ. ಕಾವ್ಯ ಮೀಮಾಂಸೆ ಇರಲಿ, ಭಾಷಾ ಶಾಸ್ತ್ರವಿರಲಿ, ಬೇಂದ್ರೆಯವರ ಕವಿತೆ ಇರಲಿ ಎಲ್ಲಾ ಕಡೆಗೂ ಅವರು ವರ್ತಮಾನದ ಜೊತೆಗೆ ಸಾಹಿತ್ಯವನ್ನು ವಿವರಿಸುವ ಬಗೆಯೇ ಚೇತೋಹಾರಿಯಾದದ್ದು. ಆಗ ಅದು ವಿದ್ಯಾರ್ಥಿಗಳಾದ ನಮಗೆ ಹೆಚ್ಚು ಮನದಟ್ಟಾಗುತ್ತಿತ್ತು.

ಕಾವ್ಯ ಮೀಮಾಂಸೆಯನ್ನು ಬದುಕಿನ ಮೀಮಾಂಸೆಯ ಜೊತೆ ಇಟ್ಟು ನೋಡಬೇಕು. ಸಾಹಿತ್ಯ ಮತ್ತು ಮೀಮಾಂಸೆ ಅರ್ಥವಾಗುವುದೆಂದರೆ ಅದು ಬದುಕು, ಬದುಕಿನ ಮಾರ್ಗ ಅರ್ಥವಾದಂತೆ. ಸಾಹಿತ್ಯದ ಸಾರ್ಥಕ್ಯವಿರುವುದು ಬದುಕು ಕಟ್ಟುವ ಬಗೆಯಲ್ಲಿ ಅನ್ನುತಿದ್ದರು.

ಜಾತಿ ಪದ್ಧತಿಯನ್ನು ಹಟ ಹೊತ್ತು ವಿರೋಧಿಸುತ್ತಿದ್ದರು. ಜಾತಿವಾದಿಗಳಿಗೆ -ಅವರು ಯಾವ ಜಾತಿಯವರಿರಲಿ- ಕಂಬಳಿಯಲ್ಲಿ ಕಲ್ಲು ಹಾಕಿ ಗುದ್ದುವುದು’ ಅಂತಾರಲ್ಲ ಹಾಗೆ ಹೊಡೆಯುತ್ತಿದ್ದರು. ಬಡ ಹುಡುಗರೆಂದರೆ, ದಲಿತ ಹಿಂದುಳಿದ ವಿದ್ಯಾರ್ಥಿಗಳೆಂದರೆ ಅವರಿಗೆ ವಿಶೇಷ ಪ್ರೀತಿ. ಹಣಕಾಸಿನ ಸಹಾಯ ಕೂಡ ಮಾಡುತ್ತಿದ್ದರು. ತುಂಬಾ ಸಂದರ್ಭದಲ್ಲಿ ನಮ್ಮೂರ ವಿದ್ಯಾರ್ಥಿಗಳಿಗೆ ಪುಸ್ತಕ, ಫೀಜು ಕೊಟ್ಟು ಸಹಕರಿಸುವಂತೆ ಅಣ್ಣ ಚೀಟಿ ಕೊಟ್ಟು ಕಳಿಸುತ್ತಿದ್ದ. ಅವರಿಗೂ ಅವಧಾನಿಯವರಿಂದ ವಿಶೇಷ ಆದ್ಯತೆ ಸಿಗುತಿತ್ತು. ವಿದ್ಯಾರ್ಥಿಗಳೊಂದಿಗೆ ಒಂದು ಸ್ನೇಹ ಭಾವ ಅವರದ್ದು. ಕನ್ನಡ ವಿಭಾಗದ ಎಲ್ಲಾ ಪ್ರಾಧ್ಯಾಪಕರನ್ನು ಅವರು ಪ್ರಭಾವಿಸಿದ್ದರು.

ನನ್ನ ಅಕ್ಕ ಮಾಧವಿ, ಅಕ್ಕನ ಮಗಳು ಛಾಯಾ, ನಾನು, ನನ್ನ ಚಿಕ್ಕಮ್ಮನ ಮಗಳಾದ ರೇಣುಕಾ, ರೇಖಾ, ಪಕ್ಕದ ಮನೆಯ ತಂಗಿ ಶಕುಂತಲಾ ಎಲ್ಲರೂ ಅವರ ವಿದ್ಯಾರ್ಥಿಗಳು. ಕೇವಲ ವಿದ್ಯಾರ್ಥಿಗಳೇನಲ್ಲ ಅವಧಾನಿಯವರು ಮತ್ತು ಅಣ್ಣನ ನಡುವಿನ ಅಂಚೆಪೇದೆಯೂ ಆಗಿದ್ದೆವು. ವಾರಕ್ಕೆರಡು ಬಾರಿ ಅವರಿಬ್ಬರ ಭೇಟಿಯ ನಂತರ ಕೂಡ ಇವರಿಬ್ಬರ ನಡುವೆ ಇಷ್ಟೊಂದು ಪತ್ರ ವ್ಯವಹಾರವಿತ್ತು. ಆದರೆ ಇಂದು ಒಂದೂ ಲಭ್ಯವಿಲ್ಲದಿರುವುದು ತೀರಾ ಬೇಸರದ ಸಂಗತಿ. ಹೊನ್ನಾವರದ ಕಾಲೇಜಿನ ಲೈಬ್ರರಿಯ ಹಲವು ಪುಸ್ತಕಗಳು ಅವಧಾನಿಯವರ ಮೂಲಕ ಅಣ್ಣನಿಗೆ ತಲುಪುತ್ತಿತ್ತು. ಹಾಗೆ ತರುವಾಗ ಕೊಡುವಾಗ ನಾವು ಮಧ್ಯವರ್ತಿಗಳು ಓದುತ್ತಿದ್ದೆವು. ಜಗತ್ತಿನಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣದಲ್ಲಿ ಏನೇ ಸಣ್ಣದು ಸಂಭವಿಸಿದರೂ ಇವರಿಬ್ಬರೂ ಚರ್ಚಿಸುತ್ತಿದ್ದರು; ಮತ್ತು ಅಗತ್ಯವಿದ್ದರೆ ವಾಚಕರ ವಾಣಿಗೆ ಬರೆಯುತ್ತಿದ್ದರು.

ಇಬ್ಬರ ಪತ್ರವನ್ನೂ ಓದುವ ಭಾಗ್ಯ ನಮ್ಮದಾಗಿತ್ತು. ಯಾವ ಪತ್ರಕ್ಕೂ ಇಬ್ಬರೂ ಅಂಟು ಹಾಕಿ (ಬಂದ್ ಮಾಡಿ) ಕೊಡುತ್ತಿರಲಿಲ್ಲ. ಉಳಿದವರು ಓದುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಓದುತ್ತಿದ್ದೆ. ಕಾಲೇಜು ದಿನಗಳಲ್ಲಿ ಎಸ್..ಎಫ್. ಐ ಕಟ್ಟುವಾಗ ನನಗಂತೂ ಇವರ ಪತ್ರಗಳು ಉಪಯೋಗವಾಗುತ್ತಿದ್ದವು. ಕೆಲವು ಸಂದರ್ಭಗಳಲ್ಲಿ ಭಾಷಣಕ್ಕೆ ಒಂದಿಷ್ಟು ಪೊಯಿಂಟ್ಸ ಸಿಗುತ್ತಿದ್ದವು. ನಾನು ಸರಿಯಾಗಿ –ಅವರ ನಿರೀಕ್ಷೆಯಂತೆ- ಓದುತ್ತಿಲ್ಲವೆಂದು ಪತ್ರ ಬರೆದಿದ್ದೂ ಇದೆ. ಆದರೆ ಓದಿದ ಮೇಲೆ ನಾನೇನೂ ಆ ಸಾಲನ್ನು ಕಾಟ್ ಹಾಕಿರಲಿಲ್ಲ. ಹಾಗೆ ಕಾಟು ಹಾಕಬೇಕೆಂದಾಗಲಿ ಕಳೆದು ಹಾಕಿ ಬಿಡಬೇಕೆಂದಾಗಲಿ ಅಂದುಕೊಂಡಿರಲಿಲ್ಲ. ಯಾಕೆಂದರೆ ಅವರಿಬ್ಬರೂ ವಾರಕ್ಕೆರಡು ಮೂರು ಬಾರಿ ಭೇಟಿಯಾಗುತ್ತಿರುವ ಗುಟ್ಟು ಬಯಲಾಗಬಹುದೆಂಬ ಹೆದರಿಕೆಯೂ ಇತ್ತೇನೋ?!

ಒಮ್ಮೆ ಅರೆಅಂಗಡಿ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ‘ಕದಳಿ’ ಎನ್ನುವ ಸ್ಮರಣ ಸಂಚಿಕೆ ತಂದಿದ್ದರು. ಅದರಲ್ಲಿ ಅಣ್ಣನ ಒಂದು ಲೇಖನ ಇತ್ತು. ಅದರಲ್ಲಿ ನಮ್ಮೂರು, ಕೇರಿ ಇಟ್ಟುಕೊಂಡು ಅಲ್ಲಿಯ ಜಾತಿ, ಜಾತಿ ರಾಜಕಾರಣ ಮತ್ತು ಜಾತಿ ದಮನದ ಕುರಿತು ಬರೆದಿದ್ದ. ಅದು ಅತಿದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು. ಗ್ರಾಮದಲ್ಲಿ ಎರಡು ಪ್ರತ್ಯೇಕ ಗುಂಪನ್ನೇ ಸೃಷ್ಟಿಸಿತ್ತು. ಅದು ಅಣ್ಣನ ಮೇಲೆ ವೈಯಕ್ತಿಕವಾದ ದಾಳಿಗೂ ಕಾರಣ ಆಯ್ತು. ಅಣ್ಣನೊಂದಿಗೆ ಸ್ನೇಹದ ವಲಯದಲ್ಲಿದ್ದವರಲ್ಲಿ ಕೆಲವರು ದೂರವಾದರು, ಹಿಂಬದಿಯಿಂದ ಟೀಕಿಸಹತ್ತಿದರು. ಒಂದು ಸಭೆ ಸೇರಿ ಅದರಲ್ಲಿ ‘ಆರ್. ವಿ. ಭಂಡಾರಿ ಕ್ಷಮೆ ಕೇಳಬೇಕು’ ಎಂದರು. ಗಲಾಟೆ ಎಬ್ಬಿಸಿದರು.

ಆಗ ಅಣ್ಣನ ಜೊತೆ ಸ್ಪಷ್ಟವಾಗಿ ನಿಂತವರು ಪ್ರೊ. ಜಿ.ಎಸ್. ಅವಧಾನಿಯವರು. ಇವರು ಹುಟ್ಟಿನಿಂದ ಬ್ರಾಹ್ಮಣ ಜಾತಿಯವರಾಗಿದ್ದರೂ ಬ್ರಾಹ್ಮಣ್ಯದ ವಾಸನೆ ಅವರಲ್ಲಿ ಇರಲಿಲ್ಲ. ಕೆಲವರು ಹೊರಮೈಯಲ್ಲಿ ಪ್ರಗತಿಪರರಾಗಿದ್ದರೂ ಒಳಮೈಯಲ್ಲಿ ಅದರ ವಿರುದ್ಧ ಇರುತ್ತಾರೆ. ಅವಧಾನಿಯವರು ಹಾಗಿರಲಿಲ್ಲ. ಸರಿ ಕಾಣದ್ದನ್ನು ಬಹಿರಂಗವಾಗಿ ಎದುರಿಸಲು ಅವರು ಹಿಂಜರಿಯುತ್ತಿರಲಿಲ್ಲ. ಹಾಗಾಗಿ ಅಣ್ಣನ ಬಗ್ಗೆ ದಾಳಿ ನಡೆದಾಗಲೆಲ್ಲ ಅವರು ಅಣ್ಣನ ಜೊತೆಗೆ ನಿಂತರು; ಬರೆದರು.

ಹಲವು ಸಂದರ್ಭದಲ್ಲಿ ಯಾವುದಾದರೂ ಮುಖ್ಯ ಕಾರ್ಯಕ್ರಮ್ಕಕ್ಕೆ ಅಣ್ಣನನ್ನು ಕರೆದರೆ ಆತ ಅವಧಾನಿಯವರನ್ನು ಕರೆಯಬೇಕೆಂದು ಸೂಚಿಸುತ್ತಿದ್ದ. ಕೆಲವು ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಅವಧಾನಿಯವರನ್ನು ಕರೆದರೆ ಅಣ್ಣನನ್ನು ಕರೆಯಲು ಸೂಚಿಸುತ್ತಿದ್ದರು. ಅವರು ಭಾಗವಹಿಸಿದ ಹಲವು ಕರೆಯೋಲೆಗಳನ್ನು ನೋಡಿದೆ. ಇಬ್ಬರ ಹೆಸರುಗಳೂ ಇದ್ದವು. ಆದರೆ ಒಮ್ಮೊಮ್ಮೆ ಅವಧಾನಿಯವರು ಕಾಲೇಜು ಅಧ್ಯಾಪಕರಾಗಿರುವುದರಿಂದ ಅವರಿಗೆ ಅಧ್ಯಕ್ಷತೆ ಅನಾಯಾಸವಾಗಿ ಸಿಕ್ಕಿಬಿಡುತ್ತಿತ್ತು. ಆದರೆ ಅಣ್ಣನಿಗೆ ತಾನು ಅವಧಾನಿಯವರಿಗಿಂತ ವಯಸ್ಸಿನಲ್ಲಿ ದೊಡ್ಡವನೆಂದು, ತನಗಿಂತ ಕಿರಿಯವರು ಅಧ್ಯಕ್ಷತೆ ವಹಿಸುತ್ತಾರೆಂದು ಎಂದು ಮುಜುಗರ ಪಡುತ್ತಿರಲಿಲ್ಲ.

ಒಮ್ಮೆ ನಾನು ಅಣ್ಣನನ್ನು ಕೇಳಿದ್ದಿದೆ: ಯಾಕೆ ನೀನು ಪ್ರಬಂಧ ಮಂಡಕ? ಅವರು ಅಧ್ಯಕ್ಷತೆ? ಎಂದು. ಇದನ್ನು ಅಣ್ಣ ಅವಧಾನಿಯವರಿಗೂ ವಿಠ್ಠಲ ಹೀಗೆ ಕೇಳುತ್ತಿದ್ದ ಎಂದು ಹೇಳಿದ್ದನು. “ತಪ್ಪು ತಿಳಿಯಬೇಡವೋ ಮಾರಾಯಾ, ನಿನ್ನ ಅಪ್ಪ ಪ್ರಬಂಧ ಸರಿಯಾಗಿ ಸಿದ್ಧಪಡಿಸಿ ಬರೆದುಕೊಂಡು ಹೋಗ್ತಾರೆ. ನಾನು ಸ್ವಲ್ಪ ಆಳಸಿ; ಅಧ್ಯಕ್ಷತೆ ವಹಿಸಿದರೆ ೩ ಜನ ಹೇಳಿದ ಹಿನ್ನೆಲೆಯಲ್ಲಿ ಅಲ್ಲಿಯೇ ನಾಲ್ಕು ಮಾತು ಆಡಬಹುದೆಂದು ಅಧ್ಯಕ್ಷತೆ ಕೊಡಿ ಅಂತೇನೆ ಮಾರಾಯಾ. ಮತ್ಯಾಕೂ ಅಲ್ಲ” ಎಂದು; ಇಬ್ಬರೂ ನಕ್ಕಿದ್ದಿದೆ.

ಇದು ಅವಧಾನಿಯವರ ಪ್ರಾಮಾಣಿಕ ಸಂಗತಿಯಾದರೂ ಕರೆಯುವವರು ಮಾತ್ರ ಹಲವು ಬಾರಿ ಅವರಿಬ್ಬರನ್ನು ಪ್ರಾಥಮಿಕ ಶಾಲೆ ಶಿಕ್ಷಕ ಮತ್ತು ಕಾಲೇಜು ಪ್ರಾಧ್ಯಾಪಕರೆಂದು, ಶೂದ್ರ ಮತ್ತು ಬ್ರಾಹ್ಮಣ ಎನ್ನುವ ಅರ್ಥದಲ್ಲಿಯೂ ಕಾಣುತ್ತಿರುವುದು ಪೂರ್ತಿ ಸುಳ್ಳಲ್ಲ.

ಅಣ್ಣ ಎಂ. ಎ ಮುಗಿಸಿದರೂ ಕನ್ನಡ ಶಾಲೆಯ ಮಾಸ್ತರನಾಗಿ ಕಳೆದ ಬಗ್ಗೆ ಈ ಹಿಂದೆ ಹೇಳಿದ್ದೆ. ಎಸ್.ಕೆ.ಪಿ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕನಾಗುವ ಅರ್ಹತೆ ಇದ್ದರೂ ಬ್ರಾಹ್ಮಣ್ಯದ ಆಡಳಿತ ಮಂಡಳಿಯ ಕಾರಣದಿಂದ ಈತ ಶೂದ್ರನೆನ್ನುವ ನೆಲೆಯಲ್ಲಿ ಅವಕಾಶ ನೀಡಲಿಲ್ಲ. ಆಗ ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ ಒಂದು ಕನ್ನಡ ಹುದ್ದೆ ಖಾಲಿ ಇತ್ತು. ಆದರೆ ಅಲ್ಲಿ ಕನ್ನಡ ಬೋಧಿಸುವವರು ೩-೪ ತರಗತಿ ಸಂಸ್ಕೃತ ಮಾಡಬೇಕಿತ್ತು. ಆದರೆ ಅಣ್ಣ ಸಂಸ್ಕೃತ ಎಂ.ಎ ಮಾಡಿಲ್ಲದಿರುವುದರಿಂದ ಇದು ಆತನನ್ನು ತೆಗೆದು ಕೊಳ್ಳಲು ತಡೆ ಆಗಿತ್ತು.

ಆಗ ಅಣ್ಣನ ನೆರವಿಗೆ ಬಂದವರು ಪ್ರೊ. ಅವಧಾನಿಯವರು. ಆರ್. ವಿ. ಅವರನ್ನು ತೆಗೆದುಕೊಳ್ಳುವುದಿದ್ದರೆ ನಾನು ಅವರ ಪಾಲಿನ ಸಂಸ್ಕೃತ ಪಾಠ ಮಾಡುತ್ತೇನೆ ಎಂದು ಬರವಣಿಗೆಯಲ್ಲಿ ಕೊಟ್ಟರು. ಆದರೆ ಅಲ್ಲಿ ಆ ಹುದ್ದೆಗೆ ಶ್ರೀಪಾದ ಶೆಟ್ಟರು ಆಯ್ಕೆಯಾದರು. ಅಣ್ಣನನ್ನು ಅಲ್ಲಿ ಮತ್ತೆ ಪಕ್ಕಕ್ಕೆ ಇಟ್ಟರು ಎನ್ನುವುದು ಬೇರೆ ಮಾತು. ಹೇಗೆ ಅವಧಾನಿಯವರ ಮನಸ್ಸು ಅಣ್ಣನ ಜೊತೆಗಿತ್ತು ಎನ್ನುವುದನ್ನು ಹೇಳುವುದಕ್ಕೆ ಈ ಘಟನೆ ಹೇಳಿದೆ.

ಪ್ರತಿ ಶನಿವಾರ ಅವರು ಹೊನ್ನಾವರದಿಂದ ಹೆಬ್ಬರ‍್ನಕೆರೆಗೆ ಬಸ್‌ನಲ್ಲಿ ಹೋಗುತ್ತಿದ್ದರು. ಅಲ್ಲಿ ಅವರ ತಂದೆ ತಾಯಿ ಇದ್ದರು. ಬಸ್ಸು ನಮ್ಮೂರಿನ ಮೇಲೆಯೇ ಹೋಗಬೇಕು. ಸಾಮಾನ್ಯವಾಗಿ ಒಮ್ಮೆ ನಮ್ಮ ಮನೆಗೆ ಬಂದು ಅಕ್ಕ ಮಾಡಿಟ್ಟ ಸುಟ್ಟ ಗೇರು ಬೀಜ, ಬಂಗಡೆ ಮೀನಿನ ಫ್ರೈ ತಿಂದು ಹೋಗುತ್ತಿದ್ದರು. ಅವರು ಬರುವ ದಿನ ಸಾಮಾನ್ಯವಾಗಿ ಮೀನು ಮಾಡುತ್ತಿದ್ದರು. ಮೀನು ತಿಂದು ಒಂದಿಷ್ಟು ಸುದ್ದಿ ಹೇಳಿ ಹೋಗುತ್ತಿದ್ದರು. ಗೇರು ಹಣ್ಣು ಆಗುವ ಸಂದರ್ಭದಲ್ಲಿ ಕನಿಷ್ಟ ಮೂರರಿಂದ ನಾಲ್ಕು ಬಾರಿ ಭೇಟಿ ಇದ್ದೇ ಇರುತ್ತಿತ್ತು.

ಉತ್ತರ ಕನ್ನಡ ಜಿಲ್ಲೆಯ ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಕೂಡ ಇಬ್ಬರ ಪಾಲ್ಗೊಳ್ಳುವಿಕೆ ಇತ್ತು. ಇಬ್ಬರೂ ಜಿಲ್ಲಾ ಮಟ್ಟದಲ್ಲಿ ತೊಡಗಿಸಿಕೊಂಡರು. ಅವಧಾನಿಯವರು ಬಹುಶಃ ತಾಲೂಕು ಸಂಚಾಲಕರಾಗಿ ಕೆಲಸ ಮಾಡಿದರು. ಪರಿನಿರ್ಮಾಣದ ಸಂದರ್ಭದಲ್ಲಿ ಕಲಾಜಾಥಾದೊಂದಿಗೆ ಹೊನ್ನಾವರ ತಾಲೂಕಿನ ಮೂಲೆಮೂಲೆ ಅಡ್ಡಾಡಿದರು. ಆಗ ತಹಶಿಲ್ದಾರರಾಗಿ ಸುಬ್ರಾಯ ಕಾಮತ್ ಅವರಿದ್ದರು. ಅವರೂ ಅಷ್ಟೇ ಉತ್ಸಾಹಿಗಳು ನಗುನಗುತ್ತಾ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಾವೆಲ್ಲ ಆಗ ಅಣ್ಣ ಮತ್ತು ಅವಧಾನಿಯವರ ಬಾಲವಾಗಿ ಅಡ್ಡಾಡಿದ್ದೇವೆ.

ಅಣ್ಣ ಮತ್ತು ಅವಧಾನಿಯವರು ಪಿಎಚ್.ಡಿ ಮಾಡಲು ಹೊರಟಿದ್ದರು. ಹೊನ್ನಾವರ ಕಾಲೇಜಿನ ಪ್ರಾಚಾರ್ಯರಾದ ಜಾನಪದ ವಿದ್ವಾಂಸರಾದ ಡಾ. ಎನ್.ಆರ್. ನಾಯಕ ಅವರಿಗೆ ಪಿಎಚ್.ಡಿ ಮಾರ್ಗದರ್ಶಕರಾಗಲು ಒಪ್ಪಿಗೆ ಸಿಕ್ಕಿತ್ತು. ಆಗ ಅಣ್ಣ ನಿರಂಜನರ ಮೇಲೆ ಮತ್ತು ಎನ್.ಆರ್. ನಾಯಕರ ವಿದ್ಯಾರ್ಥಿಯೇ ಆದ ಅವಧಾನಿಯವರು ಜಿ.ಎಸ್.ಶಿವರುದ್ರಪ್ಪ ನವರ ಕಾವ್ಯದ ಕುರಿತು ಹೆಸರು ನೋಂದಾಯಿಸಿದರು. ಆದರೆ ಅಣ್ಣ ಬೇಗಬೇಗ ಬರೆದು ಮುಗಿಸಿದ. ಅವಧಾನಿಯವರು ಕೈಬಿಟ್ಟರು, ಮುಗಿಸಲೇ ಇಲ್ಲ. ಆದರೆ ಕೊನೆಗೆ ಅಣ್ಣ ಮಾಡಿದ್ದು ವೇಷ್ಟ್ ಆಯಿತು ಅನ್ನುವುದನ್ನು ಅಣ್ಣನ ಎರಡು ಪಿಎಚ್.ಡಿ ಎನ್ನುವ ಭಾಗದಲ್ಲಿ ವಿವರಿಸಿದ್ದೇನೆ.

ಇಬ್ಬರೂ ಜೊತೆಯಾಗಿ ಕರ್ನಾಟಕ ಸಂಘ, ಚಿಂತನ ಉಕ, ಸಮತಾ ಮುಂತಾದ ಸಂಘಟನೆಯ ಅಡಿಯಲ್ಲಿ ಹಲವು ನಾಟಕ ಮಾಡಿದ್ದಾರೆ. ಒಟ್ಟಾಗಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಪ್ರಭು ಮುಂತಾದವರು ಬಂದು ಇವರಿಗೆ ತರಬೇತಿ ನಡೆಸಿದ್ದಾರೆ. ಅವಧಾನಿಯವರಂತೂ ಅದ್ಭುತ ನಟರು. ಅವರೊಂದಿಗೆ ನಾನು ಸಂಕ್ರಾಂತಿ ನಾಟಕದಲ್ಲಿ ಭಾಗವಹಿಸಿದ್ದೆ. ಆ ನಾಟಕದಲ್ಲಿ ಅವರು ಉಜ್ಜನ ಪಾತ್ರ ಮಾಡುತ್ತಿದ್ದರು.

ಚಿಂತನ ಉತ್ತರ ಕನ್ನಡ ಪ್ರಾರಂಭವಾದಾಗ ಇಬ್ಬರೂ ಅದರ ಮಾರ್ಗದರ್ಶಕರಾಗಿ, ಅದರ ಬೈಲೋ ಬರೆದುಕೊಟ್ಟರು.

ತುಂಬಾ ಕಡಿಮೆ ಬರಹ, ಪ್ರತಿಯೊಂದನ್ನು ಸಂಕ್ಷಿಪ್ತವಾಗಿ ಹೇಳುವುದು ಅವರ ರೂಢಿ, ಸುಂದರ ಕೈಬರಹ, ವಿಡಂಬನಾ ಶೈಲಿಯ ಭಾಷೆ, ಯಾರನ್ನೂ ಮೋಡಿ ಮಾಡಬಹುದಾದ ಭಾಷಣ, ಅದ್ಭುತವಾದ ನಟನೆ ಹೀಗೆ ಅವರ ಬದುಕೇ ವೈವಿಧ್ಯಮಯವಾದುದು. ಆದರೆ ಅಷ್ಟು ಬೇಗ ಅಗಲಿದ್ದು ನಿಜ ಅರ್ಥದಲ್ಲಿ ಸಾಹಿತ್ಯ ವಲಯಕ್ಕೆ, ಸಂಘಟನೆ ವಲಯಕ್ಕೆ ನಷ್ಟವೆ.

ಹೇಳಲು ಮರೆತೆ, ಅವರ ‘ಹೊತ್ತು ಮುಳುಗುವ ಮುನ್ನ’ ಕೃತಿಯನ್ನು ಅಣ್ಣ ಬಂಡಾಯ ಪ್ರಕಾಶನದಿಂದ ಪ್ರಕಟಿಸಿದ್ದ. ಅಣ್ಣನ ‘ಕೊಲೆಗಾರನ ಪತ್ತೆಯಾಗಲಿಲ್ಲ’ ಕೃತಿಗೆ ಅವಧಾನಿಯವರೇ ಮುಖಪುಟ ಮಾಡಿಕೊಟ್ಟರು.
ಅಣ್ಣ ಶಿಕ್ಷಕ ವೃತ್ತಿಯಿಂದ ನಿವೃತ್ತರಾದಾಗ ಶಿರಸಿಯಿಂದ ಹೊರಬರುತ್ತಿದ್ದ ‘ಮುನ್ನಡೆ’ ದೈನಿಕದಲ್ಲಿ ಅಣ್ಣನ ಕುರಿತು ಅವರೊಂದು ಲೇಖನ ಬರೆದಿದ್ದರು.

“ಸರ್ಕಾರಿ ನಿಯಮದ ಪ್ರಕಾರ ಅವರು ನಿವೃತ್ತರು. ಆದರೆ ಶಿಕ್ಷಕನಿಗೆಂದೂ ನಿವೃತ್ತಿ ಎಂಬುದಿಲ್ಲ. ಆತ ಶಾಶ್ವತ ಶಿಕ್ಷಕ. ಆರ್. ವಿ ಕೂಡ ಈ ಮಾತಿಗೆ ಹೊರತಲ್ಲ. ಅವರು ಜನರ ನಡುವೆ ‘ಭಂಡಾರಿ ಮಾಸ್ತರ’ರಾಗಿಯೇ ಇದ್ದಾರೆ; ಇರುತ್ತಾರೆ. ನಮ್ಮ ಅಸಮಾನ ಶ್ರೇಣೀಕೃತ ಸಮಾಜದ ನಡುವೆ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿಬೆಳೆದ ಆರ್.ವಿ ತನ್ನ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಕಣ್ಬೆಳಕಿನಲ್ಲಿ, ಬಂಧುಗಳ ಆಸರೆಯಲ್ಲಿ ತನ್ನನ್ನು ತಾನೇ ರೂಪಿಸಿಕೊಂಡರು. ಬದುಕನ್ನೇ ಒಂದು ತಪವಾಗಿ ಅದರಲ್ಲಿಯೇ ತಾತ್ವಿಕ ಎಚ್ಚರವನ್ನೂ, ಸಾತ್ವಿಕ ಸಂಯಮವನ್ನೂ ಸಾಧಿಸಿಕೊಂಡರು…

ಅವರ ಬಾಲ್ಯದ ಹಾಗೂ ಲೋಕಾನುಭವದ ಕಲಾಕೃತಿಯಾಗಿ ಇನ್ನೂ ಬರಹ ಬರಬೇಕಾಗಿದೆ. ಅದನ್ನು ಈಗಲಾದರೂ ಸಾಕಾರಗೊಳಿಸಬೇಕು ಎಂಬುದೇ ನನ್ನ ಆಶಯ ಕೂಡ. ಬರೆಯದಿರುವುದು ಬದುಕನ್ನು ಭಾಷೆಯಲ್ಲಿ ಬಿಚ್ಚಿಡುವ ಮುಖಾಂತರ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಲಾಭ ಒದಗಿಸುತ್ತಾರೆಂದು ನಂಬಿದ್ದೇನೆ.

ಎರಡು ದಶಕಕ್ಕೂ ಮಿಕ್ಕಿದ ಅವರ ಜತೆಗಿನ ಒಡನಾಟ ವೈಯಕ್ತಿಕವಾಗಿ ನನಗೆ ಪ್ರಯೋಜನ ಕೊಟ್ಟಿದೆ. ನನ್ನ ಬದುಕು ಬರಹಗಳೆರಡನ್ನೂ ಬೆಳೆಸಿದೆ. ಭಿನ್ನಾಭಿಪ್ರಾಯ, ಜಗಳಗಳ ನಡುವೆಯೂ ಜೀವಂತ ಪ್ರೀತಿಯನ್ನು, ಮಾನವೀಯ ಸಂಬಂಧವನ್ನೂ ರಕ್ಷಿಸಿಕೊಂಡಿದ್ದೇವೆ. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಲಾಭ ಇನ್ನೇನು ತಾನೇ ಉಂಟು?….ನಿವೃತ್ತಿ ಪೂರ್ಣವಿರಾಮವಲ್ಲ. ಅಲ್ಪ ವಿರಾಮ. ಮತ್ತೆ ಸೃಷ್ಟಿಗೆ ಪಯಣವಾಗಲಿ ಎಂದು ಕಿರಿಯ ಸ್ನೇಹಿತನಾಗಿ ಹಾರೈಸುತ್ತೇನೆ.”

ಅವರು ತೀರಿಕೊಂಡಾಗ ಅಣ್ಣ ಅತ್ತಿದ್ದು ನೋಡಿದ್ದೇನೆ. ಆಗ ಅವರ ನೆನಪಿನಲ್ಲಿ ಅಣ್ಣ ಒಂದು ಕವಿತೆ ಬರೆದಿದ್ದ.

ಜಿ. ಎಸ್. ಅವಧಾನಿ ನೆನಪಿಗೆ

ತಾನು ಕಂಡಷ್ಟೇ ದಿಟ ಹೇಳಿದೇ ಹಟ
ಇಲ್ಲಿ ಯಾವುದೂ ಸರಿಯಿಲ್ಲ
ಚಡಪಡಿಕೆ ಹಗಲೂ ಇರುಳು
ಕಂಡಕಂಡಲ್ಲಿ ಜಗಳ; ಸ್ನೇಹವೂ ಕೂಡ
ಎಲ್ಲವೂ ಕಾಡುತಿದೆ ಒಳಗೆ
ಹಟಮಾರಿ ಮಗುವೇ ತಾಯೆದೆಯ ತಟ್ಟುವಂತೆ
ಅವರವರ ಜಗಳ ರಪ್ಪನೆ
ಬಡಿದು ಅವರವರ ಮುಖಕೆ
ಸೀದಾ ನಡೆದು ಬಿಟ್ಟೆ
ನೆನಪಷ್ಟೇ  ಇಲ್ಲಿ ಇಟ್ಟೆ

ಇಬ್ಬರೂ ಎಲ್ಲೋ ಹುಟ್ಟಿ ಸ್ನೇಹಿತರಾದರು. ಪರಸ್ಪರ ಚರ್ಚೆ, ಸೈದ್ಧಾಂತಿಕ ವಾಗ್ವಾದದ ಮೂಲಕ ಬೆಳೆದರು. ಒಟ್ಟಾಗಿ ಸಂಘಟನೆ ಕೆಲಸ ಮಾಡಿದರು. ಅಪರೂಪಕ್ಕೆ ಕುಡಿದಾಗ ಜಗಳ ಮಾಡಿಕೊಳ್ಳುತ್ತಿದ್ದರು. ಮತ್ತೆ ಬೆಳಿಗ್ಗೆ ಒಟ್ಟಾಗಿ ಚರ್ಚಿಸುತ್ತಿದ್ದರು. ಹಲವು ವರ್ಷ ಉತ್ತರ ಕನ್ನಡದ ಸಾಂಸ್ಕೃತಿಕ ಸಾಹಿತ್ಯದ ಜಗತ್ತಿನಲ್ಲಿ ಜೊತೆಯಾಗಿ ನಡೆದ ಈ ಎರಡು ಜೀವಗಳು ಈಗ ಇಲ್ಲ. ಸಣ್ಣವರು ಮೊದಲು ಅಗಲಿದರು. ದೊಡ್ಡವರು ಕೊನೆಗೆ ಅಗಲಿದರು. ಅವರ ಸ್ನೇಹವನ್ನು ನೆನಪಿಸುವುದೇ ನಮ್ಮ ಎದುರಿನ ಸತ್ಯ.

‍ಲೇಖಕರು avadhi

March 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Chaya I K

    ಸಾಕ್ಷರತೆಯ ತಿರುಗಾಟದಲ್ಲಿ ನಾಟಕ ಮಾಡುವಾಗ ನಾನೂ ಇದ್ದೆ ಮಾಮ.

    ಪ್ರತಿಕ್ರಿಯೆ
  2. Shivakumar kampli

    ಶಾಶ್ವತ ಶಿಕ್ಷಕರ ಮಾದರಿ ಬದಕಿನ ಸೂಕ್ಷ್ಮ ಅವಲೋಕನ ಸೊಗಸಾಗಿದೆ.ಕಥೆಯೊಳಗೊಂದು ಕಥೆಯಂತೆ ಸಣ್ಣಗೆ ನಿಮ್ಮ ಚಿಗುರಿನ ಕಥನವೂ ಖುಷಿನೀಡುತ್ತದೆ.
    ಮರೆಯಾದ ಕಾಲದ ಮಧುರ ಜನರ ಕರುಳ ಪ್ರೀತಿಯ ಮರೆಯಲಾದೀತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: