'ಅಮೃತ' ಗೀತ..

ಖ್ಯಾತ ವಿದ್ವಾಂಸರಾದ, ಯಕ್ಷಗಾನಕ್ಕೆ ಸಾಮಾಜಿಕ ಕಾಳಜಿಯನ್ನು ಬೆಸುಗೆ ಹಾಕಿದ ಪ್ರೊ ಅಮೃತ ಸೋಮೇಶ್ವರ ಅವರಿಗೆ ನಿನ್ನೆ ಪ್ರತಿಷ್ಠಿತ ರಾಷ್ಟಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನಿತ್ತು ಅವರ ನಿವಾಸದಲ್ಲೆ  ಗೌರವಿಸಲಾಯ್ತು.
ಈ ಸಂದರ್ಭದಲ್ಲಿ ಮುಂಬೈನಲ್ಲಿ ನೆಲಸಿರುವ ಖ್ಯಾತ ಲೇಖಕಿ ಶ್ಯಾಮಲಾ ಮಾಧವ ಅವರು ತಮ್ಮ ತವರಿನ ಹಿರಿಯರನ್ನು ಆತ್ಮೀಯವಾಗಿ ನೆನಪಿಸಿಕೊಂಡಿದ್ದಾರೆ..

ಶ್ಯಾಮಲಾ ಮಾಧವ 
ಕರುನಾಡಿಗೆ ಭೂಷಣಪ್ರಾಯರಾಗಿ, ಕಲೆ, ಸಂಸ್ಕೃತಿಯ ದಾರಿದೀಪವಾಗಿ, ಜಾನಪದ ಸಿರಿಯಾಗಿ ಬೆಳಗುತ್ತಿರುವವರು, ನಾಡ ಹಿರಿಜೀವ ಅಮೃತ ಸೋಮೇಶ್ವರರು. ಮೆಲುಮಾತಿನ, ನಲ್ವಾತಿನ, ಸಹೃದಯಿ ! ಜಾನಪದ, ಯಕ್ಷಗಾನ, ಕಥೆ, ಕವನ, ವಿನೋದ ಬರಹ, ವಿಮರ್ಶೆ, ಸಂಶೋಧನೆ, ವೈಚಾರಿಕ ಲೇಖನಗಳಿಂದ ನಮ್ಮ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಸಿರಿವಂತರಾಗಿಸಿದ ಅಮೃತ ಚೇತನ ! ಅಪೂರ್ವ ಕಲಾನಿಧಿ ! ವಿದ್ವಜ್ಜನಪ್ರಿಯರಾದ ಸುಜ್ಞಾನಿ !
ಸೋಮೇಶ್ವರದ ಅಡ್ಕ ಪ್ರದೇಶದ ಮನೆಯಲ್ಲಿ ೧೯೩೧ ಸಪ್ಟೆಂಬರ್ ೨೭ರಂದು, ಅಮೃತರ ಜನನ. ತಂದೆ ಚಿರಿಯಂಡ; ತಾಯಿ ಅಮಣಿ . ಮುಂಬಯಿಯಲ್ಲಿ ಜರ್ಮನ್ ಕಂಪೆನಿಯೊಂದರಲ್ಲಿ ಜರ್ಮನ್ ಅಧಿಕಾರಿಯ ವಾಹನ ಚಾಲಕರಾಗಿದ್ದ ತಂದೆಯವರ ಜೊತೆಗೆ, ಪ್ರಾರ್ಥನಾ ಸಮಾಜ ವಠಾರದಲ್ಲಿ ಶೈಶವದ ನಾಲ್ಕು ವರ್ಷಗಳನ್ನು ಕಳೆದು , ಐದು ವರ್ಷವಾದಾಗ ಊರಿಗೆ ಮರಳಿತು, ಆ ಸಂಸಾರ ; ಅಕ್ಕ ಕಮಲಾ ಹಾಗೂ ತಮ್ಮ ಅಮೃತ , ಮನೆಯ ಸನಿಹದ ಸ್ಟೆಲ್ಲಾ ಮೇರೀಸ್ ಶಾಲೆ ಸೇರಿಕೊಂಡರು. ಆನಂದಾಶ್ರಮ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನೂ ಮುಗಿಸಿದ ಅಮೃತರು, ಮಂಗಳೂರ ಸೈಂಟ್ ಅಲೋಶಿಯಸ್ ಕಾಲೇಜ್‌ನಲ್ಲಿ, ಬಿ. ಎ. ಮುಗಿಸಿ ಪದವಿ ಪಡೆದರು. ಕನ್ನಡದಲ್ಲಿ ಸರ್ವಪ್ರಥಮರಾಗಿ ಸುವರ್ಣ ಪದಕ ಗಳಿಸಿದರು.
ಪದವಿ ತರಗತಿಯಲ್ಲಿದ್ದಾಗಲೇ ಅವರ “ಎಲೆಗಿಳಿ “ಕಥಾಸಂಕಲನ ಪ್ರಕಟವಾಯ್ತು. ಅಲ್ಲಿ ಗುರುಗಳಾಗಿದ್ದ ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರು, ಬಿವಿ ಕೆದಿಲಾಯರು, ಸೇಡಿಯಾಪು ಕೃಷ್ಣ ಭಟ್ಟರು ಅವರ ಮೇಲೆ ಬೀರಿದ ಪ್ರಭಾವ ಬಹಳ. ಉದ್ಯೋಗಾರ್ಥಿಯಾಗಿ ಅಲ್ಲೆ ಟ್ಯೂಟರ್ ಆಗಿ ನಿಯುಕ್ತರಾದ ಅಮೃತರು ಏಳು ವರ್ಷಗಳನ್ನು ಅದೇ ವೃತ್ತಿಯಲ್ಲಿ ಅಲ್ಲಿ ಕಳೆದರು. ಕಾಲೇಜಿನ ಗ್ರಂಥ ಭಂಡಾರದ ಪ್ರಯೋಜನವನ್ನೂ ಚೆನ್ನಾಗಿಯೇ ಪಡೆದು ಕೊಂಡರು . ೧೯೫೬ರಲ್ಲಿ ಅವರ ಪ್ರಥಮ ಕವನ ಸಂಕಲನ “ವನಮಾಲೆ ” ಪ್ರಕಟವಾಯ್ತು ೧೯೬೧ ರಲ್ಲಿ ಅವರ “ತುಳು ಪಾಡ್ದನದ ಕಥೆಗಳು” ಹಸ್ತಪ್ರತಿಗೆ ನವಸಾಕ್ಷರರಿಗೆ ಸಾಹಿತ್ಯ ಮಾಲಿಕೆಯಡಿ ಕೇಂದ್ರ ವಿದ್ಯಾಖಾತೆಯ ಬಹುಮಾನ ಲಭಿಸಿತು
೧೯೬೧ ರ ನವೆಂಬರ್‌ನಲ್ಲಿ ನರ್ಮದಾ ಅವರು ಅಮೃತರ ಬಾಳ ಸಂಗಾತಿಯಾಗಿ ಬಂದರು. ಮುಗ್ಧ ನಗುಮುಖದ, ಹಿತಮಿತ ಮೆಲುಮಾತಿನ ಚೆಲುವೆ ನರ್ಮದಕ್ಕ, ಪತಿಗೆ ಅನುರೂಪ ಸತಿ. ವಧುವಾಗಿ ಪತಿಗೃಹಕ್ಕೆ ಕಾಲಿರಿಸಿದಾಗ, ನಿಧಿಯಾಗಿ ಮಾವನವರು ತೋರಿದ್ದು ಮನೆಯ ಪುಸ್ತಕ ಭಂಡಾರದ ಸಿರಿಯನ್ನು! ಪುತ್ತೂರಲ್ಲಿ ಕಾಲೇಜ್ ಅಧ್ಯಾಪಕನಾಗಿದ್ದ ತನಗೆ, ವಾರಾಂತ್ಯದ ಒಂದಿನ ಮಾತ್ರ ಮಂಗಳೂರಲ್ಲಿ ಶಿಕ್ಷಕಿಯಾಗಿದ್ದ ಪತ್ನಿ ದರ್ಶನವಾಗುತ್ತಿದ್ದರಿಂದ ಆ ದಿನಗಳ ತಮ್ಮ ದಾಂಪತ್ಯವನ್ನ ಸತೀಸಪ್ತಮಿ ಎಂದು ತಮಾಷೆಯಾಗಿ ಅಮೃತರು ಕರೆದು ಕೊಂಡಿದ್ದಾರೆ.
ಕಾಲೇಜುಗಳಲ್ಲಿ ಟ್ಯೂಟರ್ ಪದವಿಯೇ ರದ್ದುಗೊಳಿಸಲ್ಪಟ್ಟಾಗ, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜ್‌ನಲ್ಲಿ ಉಪನ್ಯಾಸಕ ಹುದ್ದೆ ಅವರಿಗೆ ಪ್ರಾಪ್ತವಾಯ್ತು. ಅಲ್ಲಿದ್ದ ಎರಡು ವರ್ಷಗಳ ಅವಧಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಸ್ನಾತಕೋತ್ತರ ಪರೀಕ್ಷೆಗಾಗಿ ತಯಾರಿ ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂದೆ ವಿವೇಕಾನಂದ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯವರೆಗೆ ಸೇವೆ ಸಲ್ಲಿಸಿದರು.
ತಮ್ಮ ಆಸಕ್ತಿಯ ವಿಷಯವಾದ ಯಕ್ಷಗಾನದ ವಿಚಾರದಲ್ಲಿ ಚಿಂತನೆ, ಪ್ರಯೋಗ, ಪ್ರದರ್ಶನ ಮಾಡಲು ವಿಫುಲ ಅವಕಾಶ ಅವರಿಗಲ್ಲಿ ಪ್ರಾಪ್ತವಾಯ್ತು. ಇಲ್ಲಿದ್ದಾಗ ಕಾಲೇಜ್ ವಾರ್ಷಿಕೋತ್ಸವಕ್ಕಾಗಿ ತುಳು ನಾಟಕಗಳನ್ನೂ ಬರೆದ ಅಮೃತರು, ಡಾ. ತಾಳ್ತಜೆ ವಸಂತ ಕುಮಾರರೊಡನೆ, ಪ್ರಾಂಶುಪಾಲರ ಪ್ರೋತ್ಸಾಹದಿಂದ ಇಲ್ಲಿ ಕನ್ನಡ ಸಂಘವನ್ನೂ ಆರಂಭಿಸಿದರು.
ವಿದ್ಯಾರ್ಥಿಗಳ ಕಥಾಸಂಕಲನ, ಕವನ ಸಂಕಲನಗಳನ್ನು ಪ್ರಕಟಿಸಿದ ಕನ್ನಡ ಸಂಘದಿಂದ ಅಮೃತರ ಲೇಖನ ಸಂಕಲನ “ಅವಿಲು” ಕೂಡ ಬೆಳಕು ಕಂಡಿತು. ಸಂಘದಿಂದ ನಡೆದ ಪಂಜೆ ಶತಮಾನೋತ್ಸವ, ಗೋವಿಂದ ಪೈ ಶತಮಾನ ಸಂಸ್ಮರಣೆ, ಸೇಡಿಯಾಪು, ಬಡೆಕ್ಕಿಲ, ಪರಮೇಶ್ವರ ಭಟ್ಟರಂತಹರಿಗೆ ಸಂದ ಸನ್ಮಾನ ಸಮಾರಂಭಗಳನ್ನು ಅಮೃತರು ಸ್ಮರಿಸಿ ಕೊಂಡಿದ್ದಾರೆ. ತಮ್ಮ ಬರವಣಿಗೆಯ ಬಹುಪಾಲು ಇದೇ ಅವಧಿಯಲ್ಲಿ ಹೊರ ಬಂದಿತೆಂದೂ ಅವರಂದಿದ್ದಾರೆ
ನಿವೃತ್ತಿಯ ಬಳಿಕ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವ , ಮಂಗಳೂರು ವಿಶ್ವವಿದ್ಯಾಲಯದ ಅಕಡೆಮಿಕ್ ಕೌನ್ಸಿಲ್‌ನ ಸದಸ್ಯತ್ವ ಅವರನ್ನು ಅರಸಿ ಬಂದವು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿ ಬರುವಂತೆ ಕರೆಯೂ ಬಂದಿತು ಕೆಲ ಕಾಲ ತುಳು ಅಕಾಡೆಮಿಯ ಸದಸ್ಯನಾಗಿಯೂ ಅವರು ಯೋಗದಾನವಿತ್ತಿದ್ದಾರೆ. ಜೀವನಾನುಭವ, ಶ್ರೀಸಾಮಾನ್ಯರ ಸಹವಾಸ ಸೌಖ್ಯ, ಅಸಾಮಾನ್ಯರ ಸಹವಾಸದಲ್ಲಿ ಅಲಭ್ಯ, ಎಂಬ ಅಭಿಪ್ರಾಯವನ್ನು ಅವರಿಂದ ಹೊರಡಿಸಿದೆ.
ಪತಿಗನುಕೂಲೆಯಾದ ಸತಿಯೊಡನೆಯ ತಮ್ಮ ಅನ್ಯೋನ್ಯ ದಾಂಪತ್ಯದ ಸರಳ ಸುಂದರ ಚಿತ್ರವನ್ನು ಈ ಎಏಪ್ರಿಲ್ ತಿಂಗಳ ಮಯೂರ ಪತ್ರಿಕೆಯ ಸಖೀಗೀತದಲ್ಲಿ ಅಮೃತರು ಬಿಡಿಸಿಟ್ಟಿದ್ದಾರೆ. ಕ್ಷೀಣಿಸುತ್ತಿರುವ ದೇಹ ಪ್ರಕೃತಿಯ ಈ ಇಳಿವಯದಲ್ಲೂ ಸಮಾಜದಲ್ಲಾಗುವ ಅನ್ಯಾಯದ ವಿರುಧ್ಧ ದನಿಯೆತ್ತದೆ ಇರಲಾಗದ ತಮ್ಮನ್ನು, ಕಾಳಜಿಯಿಂದ ತಡೆಯಲೆತ್ನಿಸುವ ಪತ್ನಿಯ ಮೃದು ಸ್ವಭಾವದ ಬಗ್ಗೆ, ತಮ್ಮ ಅಸೌಖ್ಯದಲ್ಲಿ ಆಕೆ ಅಮ್ಮನಂತೆ ವಾತ್ಸಲ್ಯದಿಂದ ನೋಡಿಕೊಂಡ ಬಗ್ಗೆ, ಸಂಕೋಚ ಪ್ರವೃತ್ತಿಯ ತಾವು ಎಂದೂ ಮುಕ್ತವಾಗಿ ಆಕೆಯ ಬಗ್ಗೆ ಶ್ಲಾಘಿಸದೆ ಹೋದ ಬಗ್ಗೆ ಕಳಕಳಿಯಿಂದ ಇಲ್ಲಿ ನಲ್ವಾತುಗಳನ್ನು ಆಡಿದ್ದಾರೆ. ಹೌದು; ಇಚ್ಛೆಯನರಿತು ನಡೆವ ಸತಿಯಾಗಿ ಅಮೃತರ ಬಾಳು ಬೆಳಗಿದವರು, ನರ್ಮದಕ್ಕ.

????????????????????????????????????


ತನ್ನ ದೊಡ್ಡಮ್ಮಂದಿರಿಬ್ಬರು ಮಲೆಯಾಳ, ತುಳು ಜನಪದ ಹಾಡುಗಳ ಕಣಜವಾಗಿದ್ದರೆಂದೂ, ಎಳವೆಯಲ್ಲಿ ಅವರ ಬಾಯಿಂದ ಎಷ್ಟೋ ಪಾಟು, ಪಾಡ್ದನ, ಕತೆಗಳನ್ನು ಕೇಳಿ ಹಿಗ್ಗಿದ್ದುಂಟೆಂದೂ ಅಮೃತರು ಸ್ಮರಿಸಿ ಕೊಂಡಿದ್ದಾರೆ. ಅದೇ ರುಚಿ, ಬೆಳೆಯುತ್ತಾ ಬಂದಂತೆ ಅವರ ಹೆಜ್ಜೆಗಳನ್ನು ರೂಪಿಸಿದೆ.
ಒಂದನೇ ತರಗತಿಗೇ ವಿದ್ಯಾಭ್ಯಾಸ ಕೈ ಬಿಟ್ಟು ಮುಂಬಯಿ ಸೇರಿದ ಅವರ ತಂದೆಯವರು, ಸ್ವಂತ ಆಸಕ್ತಿ, ಪರಿಶ್ರಮದಿಂದ ಹತ್ತು, ಹನ್ನೆರಡು ಭಾಷೆಗಳನ್ನು ಕಲಿತಿದ್ದರಂತೆ. ಇಟಾಲಿಯನ್, ಫ್ರೆಂಚ್, ರಶ್ಯನ್ ಭಾಷೆಗಳ ಪ್ರಾಥಮಿಕ ಪರಿಚಯವನ್ನೂ ಮಾಡಿಕೊಂಡಿದ್ದ ಅವರ ಇಂಗ್ಲಿಷ್ ಜ್ಞಾನ ತನಗಿಂತ ಎಷ್ಟೊ ಉತ್ತಮವಿತ್ತೆಂದು ಅಮೃತರು ಹೇಳಿಕೊಂಡಿದ್ದಾರೆ. ಜ್ಯೋತಿಷ್ಯ , ಹಸ್ತ ಸಾಮುದ್ರಿಕ, ಹೋಮಿಯೋಪತಿ ಚಿಕಿತ್ಸಾ ವಿಧಾನವನ್ನೂ ಅಭ್ಯಸಿಸಿ, ತನ್ನ ಅಪರ ವಯಸ್ಸಿನಲ್ಲಿ ಅಮ್ಮೆಂಬಳರ ಸಂಸ್ಕೃತ ತರಗತಿಗೆ ಸೇರಿ ಪರೀಕ್ಷೆ ಕಟ್ಟಿದ ತನ್ನ ತಂದೆಯ ಸರಳತೆ, ಪ್ರಾಮಾಣಿಕತೆ ಹಾಗೂ ಪರೋಪಕಾರ ಬುಧ್ಧಿಯನ್ನೂ ಅವರು ಸ್ಮರಿಸಿ ಕೊಂಡಿದ್ದಾರೆ.
ಪತ್ರಗಳೆಂದರೆ ವ್ಯಕ್ತಿತ್ವದ ಅಕ್ಷರ ಬಿಂಬಗಳೆಂದು ನುಡಿದಿರುವ ಅಮೃತರ ಪತ್ರ ಸಂವಾದದ ಆಸ್ತಿ ಬಹು ಹಿರಿದಾದುದು. ಸಾವಿರಾರು ಪತ್ರಗಳಿರುವ ಅವರ ಸಂಗ್ರಹದಲ್ಲಿ, ರಾಷ್ಟಕವಿ ಗೋವಿಂದ ಪೈ, ಡಾ ಕಾರಂತ, ಸೇಡಿಯಾಪು, ವಿ.ಸೀ, ನಿರಂಜನ, ದೇಜಗೌ, ಕು.ಶಿ. ಹರಿದಾಸ ಭಟ್ಟ, ಜಿ. ವೆಂಕಟಸುಬ್ಬಯ್ಯ, ಡಾ. ಹಾಮಾನಾ ಮುಂತಾದವರ ಅಮೂಲ್ಯ ಪತ್ರಗಳಿವೆ.
ಸುವಿಚಾರಗಳಿಂದ ಕೂಡಿದ ನಿರ್ವ್ಯಾಜ್ಯ ಪ್ರೀತಿಯ ಪತ್ರಗಳು ಜೀವಕ್ಕೆ ಶಕ್ತಿವರ್ಧಕ ಪೇಯಗಳಿದ್ದಂತೆ ಎಂಬ ಅಮೂಲ್ಯ ಮಾತನ್ನು ಅವರಾಡಿದ್ದಾರೆ. ಇಂದು ಗಣಕ ಯಂತ್ರಕ್ಕೆ ಜೋತು ಬಿದ್ದಿರುವ ನಾವು, ಈ ಅಮೂಲ್ಯ ಪತ್ರಸಂಪತ್ತಿನಿಂದ ದೂರವಾದ ನೋವು ನನ್ನದಾಗಿದೆ.
ಕನ್ನಡ, ತುಳು, ಮಲೆಯಾಳ ತ್ರಿಭಾಷಾ ಸಂಪದವನ್ನು ತನ್ನದಾಗಿಸಿಕೊಂಡ ಅಮೃತರು ,

ಮೂವರವ್ವೆಯರ ಮಡಿಲಲ್ಲಿ ಹಸುಮಗುವಾಗಿ
ಹಾಲುಂಡು ಬೆಳೆಯುತಿಹ ಕಂದ ನಾನು
ಮೂವರವರೊಂದಾಗಿ ಸಲ್ಲಪಿಸುತಿರುವಂಥ
ಸಲ್ಲಲಿತ ಸಂಗಮದಿ ಮೀನು ನಾನು

ಎಂದು ಬರೆದು ಹಾಡಿದ್ದಾರೆ.
ಅಮೃತ ರಚನೆಗಳು ವೈವಿಧ್ಯಮಯವಾಗಿ ಸಂಖ್ಯಾ ಬಾಹುಳ್ಯದಲ್ಲೂ ಅಪಾರವಾಗಿವೆ. ನಾಲ್ಕು ಕಥಾ ಸಂಗ್ರಹಗಳು, ನಾಲ್ಕು ಕವನ ಸಂಗ್ರಹಗಳು, ಕಾದಂಬರಿ, ರೇಡಿಯೋ ರೂಪಕ, ನಾಟಕ, ನೃತ್ಯರೂಪಕಗಳು, ವ್ಯಕ್ತಿಚಿತ್ರ, ಸಂಪಾದಿತ ಕೃತಿಗಳು, ಯಕ್ಷಗಾನ ಕೃತಿ ಸಂಪುಟದಲ್ಲಿ ಅಡಕವಾಗಿರುವ ಹಲವು ಪ್ರಸಂಗಗಳು, ಹಾಗೂ ಇತರ ಬಿಡಿ ಪ್ರಸಂಗಗಳು, ತುಳು ಪಾಡ್ದನದ ಕಥೆಗಳು, ತುಳು ಜಾನಪದ ಸಂಬಂಧಿತ ಅಧ್ಯಯನ, ಸಂಶೋಧನೆಯ ಕೃತಿಗಳು, ವಿವಿಧ ಗ್ರಂಥಾಂತರ್ಗತ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಾಹಿತ್ಯ ಸಂಬಂಧ ಲೇಖನಗಳು, ಯಕ್ಷಗಾನ ವಿಚಾರ ವಿಮರ್ಶೆ ಕೃತಿಗಳು, ಹಾಗೂ ಲೇಖನಗಳು, ತುಳು ಕವನ ಸಂಗ್ರಹಗಳು, ಅನುವಾದಿತ ಕಾವ್ಯ ,ತುಳು ನಾಟಕಗಳು, ಅನುವಾದಿತ ತುಳು ನಾಟಕಗಳು, ಹಾಗೂ ರೇಡಿಯೋ ರೂಪಕಗಳು, ತುಳು ನೃತ್ಯರೂಪಕಗಳು, ತುಳು, ಕನ್ನಡ ಧ್ವನಿ ಸುರುಳಿಗಳು – ಹೀಗೆ ಅಮೃತ ಸಾಹಿತ್ಯ ವಿಫುಲವಾಗಿ ಬೆಳೆದಿದೆ.
ನಾಡು, ನುಡಿಗಾಗಿ, ಕಲೆ, ಸಂಸ್ಕೃತಿಗಾಗಿ ಅಮೃತರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಹಾಗೂ ಅವರ ಕೃತಿಗಳಿಗಾಗಿ ಅವರಿಗೆ ಸಂದಿರುವ ಪ್ರಶಸ್ತಿ, ಗೌರವಗಳು ಹಲವು. ಅವರ ತುಳು ಪಾಡ್ದನ ಕಥೆಗಳಿಗೆ ಕೇಂದ್ರ ವಿದ್ಯಾ ಇಲಾಖೆಯಿಂದ, ಯಕ್ಷಗಾನ ಕೃತಿ ಸಂಪುಟಕ್ಕೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ, ‘ ತುಳುನಾಡ ಕಲ್ಕುಡೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ, ‘ಭಗವತೀ ಆರಾಧನೆ’ಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಮತ್ತು ‘ಅಪಾರ್ಥಿನೀ’ ಕೃತಿಗೆ ಆರ್ಯಭಟ ಪ್ರಶಸ್ತಿ ಸಂಸ್ಥೆಯಿಂದ ಪುಸ್ತಕ ಪುರಸ್ಕಾರ ಸಂದಿದೆ.
೧೯೮೫ರಿಂದ ಆರಂಭಿಸಿ, ೨೦೧೩ರ ವರೆಗಿನ ೨೯ ವರ್ಷಗಳಲ್ಲಿ ಒಟ್ಟು ೩೨ ಪ್ರಶಸ್ತಿಗಳು ಅವರನ್ನಲಂಕರಿಸಿವೆ. ಕೆಲವನ್ನಷ್ಟೆ ಇಲ್ಲಿ ಹೆಸರಿಸುವುದಾದರೆ, ಮಣಿಪಾಲ ಅಕಾಡೆಮಿಯ ಫೆಲೋಶಿಪ್, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ, ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ, ತುಳು ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ, ಆಕಾಶವಾಣಿ, ಆಳ್ವಾಸ್ ನುಡಿಸಿರಿ, ಕರ್ನಾಟಕ ಶ್ರೀ, ಸಂಸ್ಕಾರ ಭಾರತಿ ಪ್ರಶಸ್ತಿ, ಕು.ಶಿ.ಹರಿದಾಸ ಭಟ್ಟ , ಮುಳಿಯ ತಿಮ್ಮಪ್ಪಯ್ಯ, ಕುಕ್ಕಿಲ, ಕರ್ಕಿ, ನಿರಂಜನ, ವಿಶು ಕುಮಾರ್ ಪ್ರಶಸ್ತಿ, ಡಾ. ಕಾರಂತ ಗೌರವ ಪುರಸ್ಕಾರ, ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಎಮಿನೆಂಟ್ ಅಲೋಶಿಯನ್ ಹಾಗೂ ಇನ್ನೂ ಹಲವು ಸ್ರಶಸ್ತಿಗಳಿಂದ ಅವರು ಶೋಭಿತರಾಗಿದ್ದಾರೆ.
ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಸಮ್ಮೇಳನ, ಮುಂಬಯಿ ಯಕ್ಷಗಾನ ಸಮ್ಮೇಳನ, ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭ, ಹಾಗೂ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರ ಪಾಲಿಗೆ ಸಂದಿವೆ.
ಬಾಹರಿನ್ ಕನ್ನಡ ಸಂಘ, ದುಬೈ ತುಳು ಕೂಟ ಸೇರಿದಂತೆ ಹಲವಾರು ಸಂಘ, ಸಂಸ್ಥೆಗಳು ಅವರನ್ನು ಸನ್ಮಾನಿಸಿ ಕೃತಾರ್ಥವಾಗಿವೆ. ಎಲ್ಲಕ್ಕೂ ಮಕುಟವಿಟ್ಟಂತೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ಅವರ ಮುಡಿಗೇರಿದೆ.
ಅವರ ಅಸೌಖ್ಯ ಹಾಗೂ ಆಸ್ಪತ್ರೆವಾಸದ ದಿನಗಳಲ್ಲಿ, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳ ಸಮ್ಮುಖದಲ್ಲೆ ಆಸ್ಪತ್ರೆಯಲ್ಲೆ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನಿಸಲಾಯ್ತು. ನಿಶ್ಶಕ್ತತೆಯ ಕಾರಣ ಮನೆಯಿಂದ ಹೊರಹೋಗಲಾಗದ ಅಮೃತರನ್ನು ಚೇತರಿಸಲು ತೀರ ಇತ್ತೀಚೆಗೆ ಅವರ ಸಾಹಿತ್ಯವಲಯದ ಮಿತ್ರರ ಉಪಸ್ಥಿತಿಯಲ್ಲಿ ಮನೆಯಲ್ಲೆ ಸಾಹಿತ್ಯ ಸ್ನೇಹಕೂಟವೊಂದನ್ನು ನಡೆಸಲಾಯ್ತು.
ಇದೀಗ ಇಂದು ಮಾರ್ಚ್ ೨೩ರಂದು ರಾಷ್ಟಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನಿತ್ತು ಅವರ ನಿವಾಸದಲ್ಲೆ ಅವರನ್ನು ಗೌರವಿಸಲಾಯ್ತು. ಗೋವಿಂದ ಪೈ ಸಂಶೋಧನ ಕೇಂದ್ರದೊಡಗೂಡಿ ಮಾಹೆ ವಿಶ್ವ ವಿದ್ಯಾಲಯ ಅತ್ಯಂತ ಸುಂದರವಾಗಿ ನಡೆಸಿಕೊಟ್ಟ ಕಾರ್ಯಕ್ರಮವದು.
ಅಮೃತ ಲೇಖನಿಗೆ ವಿಶ್ರಾಂತಿ ಎಂಬುದಿಲ್ಲ. ಅವರ ಕೈಯಿಂದ ತಮ್ಮ ಕೃತಿಗೆ ಮುನ್ನುಡಿ ಬಯಸಿ ಬರೆಸಿ ಕೊಳ್ಳುವ ಅಭಿಮಾನಿಗಳಿಗೆ ಕೊನೆಯಿಲ್ಲ. ಸರ್ವಜ್ಞ ವಚನಗಳನ್ನುತುಳುವಿಗೆ ಅನುವಾದಿಸಿ ಪ್ರಕಟಿಸಲಿಚ್ಛಿಸಿರುವ ಅಮೃತರು, ಈಗಾಗಲೇ ೨೪೦ ಸರ್ವಜ್ಞ ವಚನಗಳನ್ನು ತುಳುವಿನಲ್ಲಿ ಪಡಿಮೂಡಿಸಿದ್ದಾರೆ.
ಅವರ ಯಕ್ಷಗಾನ ಪ್ರಸಂಗ “ಎಳುವೆರ್ ದೆಯ್ಯಾರ್” ಕೃತಿಯನ್ನು, “ಸಪ್ತ ಮಾತೃಕೆಯರು” ಎಂದು ಕನ್ನಡದಲ್ಲಿ ರೂಪುಗೊಳಿಸುತ್ತಿದ್ದಾರೆ. ಜಪಾನೀ ವಿದ್ವಾಂಸರೊಬ್ಬರ ಮೂಲ ಕೃತಿಯು, “ಛಾಯಾವತರಣ” ಎಂಬ ಶೀರ್ಷಿಕೆಯಡಿ ಸಿಧ್ಧಗೊಳ್ಳುತ್ತಿದೆ. ತುಳು ಅಕಾಡೆಮಿಗಾಗಿ “ತೌಳವ ರಾಣಿ ಅಬ್ಬಕ್ಕೆ” ಎಂಬ ನಾಟಕವನ್ನೂ ರಚಿಸುತ್ತಿದ್ದಾರೆ.
ನಿವೃತ್ತಿಯ ನಂತರ, ಸ್ವಂತ ನೆಲೆವೀಡಾಗಿ ಸೋಮೇಶ್ವರದ ಅಡ್ಕದಲ್ಲಿ “ಒಲುಮೆ” ಎಂಬ ನಲ್ಮೆಯ ಗೂಡೊಂದನ್ನು ಕಟ್ಟಿ ಕೊಂಡ ಅಮೃತರ ಕಲಾಸಕ್ತಿಗೆ ಕುರುಹಾಗಿತ್ತು, ಆ ಮನೆ. ಈಗ ದೇಶದ ಚತುಷ್ಪಥ ಯೋಜನೆಯಡಿ ಈ ಮನೆ ಕಣ್ಮರೆಯಾದ ಬಳಿಕ, ಕಡಲತಡಿಯ ಬಾಡಿಗೆಮನೆಯಲ್ಲಿ ಕೆಲಕಾಲ ಕಳೆದ ಅಮೃತ ಸಂಸಾರ, ಈಗ ಸೋಮೇಶ್ವರದ ಶಕ್ತಿನಗರದಲ್ಲಿ ಪುನಃ ತಮ್ಮ ಕಲಾತ್ಮಕ, ಸೊಗಸಾದ “ಒಲುಮೆ”ಯ ಗೂಡನ್ನು ಕಟ್ಟಿಕೊಂಡು ವಾಸವಾಗಿದ್ದಾರೆ.
ನಮ್ಮ ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಮೂಢನಂಬಿಕೆಗಳು, ಅವಿಚಾರ, ಅವಿವೇಕಗಳು, ಬಹಿಷ್ಕಾರದಂಥ ಅನಾಚಾರಗಳು ಅವರನ್ನು ಬಹುವಾಗಿ ನೋಯಿಸಿ ಕುಗ್ಗಿಸಿವೆ. ಸಮಾಜ ವಲಯವನ್ನು ಮೀರಿ ವ್ಯಕ್ತಿ ಬೆಳೆಯ ಬೇಕೆನ್ನುವ ಅಮೃತರು, ಜಾತಿ ವಿಜಾತಿ ಎಂಬ ಭೇದಭಾವ ನಶಿಸಿ, ಎಲ್ಲರೊಂದಾಗುವ ಸೌಹಾರ್ದಯುತ ಸಮಾಜಕ್ಕಾಗಿ ಆಶಿಸುತ್ತಿದ್ದಾರೆ. ಅವರ ಆಶಯ ನಿಜವಾಗುವ ಸುದಿನಗಳು ಬರಲಿ.

‍ಲೇಖಕರು avadhi

March 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: