ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೆಜ್ಜೆಸದ್ದಿನ ನಡುವೆ..

ಸಂಕೀರ್ಣ ಜಾಲದ ಚಾಟಿಗೆ ಕಟ್ಟಿದ ಸೂಕ್ಷ್ಮ ಮಿಡಿತದ ಗೆಜ್ಜೆಸದ್ದು

ಫಣಿಕುಮಾರ್.ಟಿ.ಎಸ್

 

ಚಾಟಿಗೆ ಕಟ್ಟಿದ ಗೆಜ್ಜೆ – ಕವನ ಸಂಕಲನ
ಲೇ: ಮಂಜುನಾಥ ಎಸ್.
ಪ್ರಕಟಣೆ: ಸಂಸ್ಕೃತಿ ಪ್ರಕಾಶನ, ಬಳ್ಳಾರಿ
ಬೆಲೆ ರೂ: 50/-

ಕುಲುಮೆಯ ಕಾವಿನೊಳಗೂ
ದ್ರವಿಸುವ ದರವು ನೀನು
ನನ್ನೆದೆಯ ಸಂಘರ್ಷದ ಗುನುಗೇ

ಎಸ್.ಮಂಜುನಾಥ್‍ರ ಚಾಟಿಗೆ ಕಟ್ಟಿದ ಗೆಜ್ಜೆ – ಕವನ ಸಂಕಲನದ ‘ಹೊಸ ನೀರಿನ ದಾಹ ‘ ಎನ್ನುವ ಕವಿತೆಯೊಂದರ ಪದಗಳು ಇವು.

ವ್ಯವಸ್ಥೆ ಚಾಟಿಯ ಮೊನೆಗೆ ಸಿಕ್ಕಿಸಿದ ಗೆಜ್ಜೆನಾದಕ್ಕೆ ಹೊರಗಿನ ಪ್ರಪಂಚ ಉನ್ಮತ್ತವಾಗಿ ಕುಣಿಯುವಾಗ ಅವನು ಮೈಗೆ ಚಾಟಿ ಬೀಸಿಕೊಂಡು ನಲುಗುವ ಅನಿವಾರ್ಯತೆಯಲ್ಲಿದ್ದಾನೆ ಎಂದು ಹೇಳುತ್ತಾ ಓದುಗನ ಮುಂದೆ ಕೂರುವ ಕವಿಯದ್ದು ಈ ರೀತಿಯಲ್ಲಿ ಜಗದ ಕಣ್ಣು ತೆರೆಯುವ ಕಾಯಕ.

ಸಮತೆಗಾಗಿನ ಹೋರಾಟದ ಅನುಲೋಮ-ವಿಲೋಮಗಳು ಸಾಮಾನ್ಯವಾಗಿ ದ್ವೇಷ-ಅಸೂಯೆಗಳಾಗಿಯೇ ಅಭಿವ್ಯಕ್ತವಾಗುವಾಗ ಅಂತಹ ಪ್ರಲೋಭನೆಗಳ ಹತ್ತಿರ ಸುಳಿಯದೇ, ಕುಲುಮೆಯ ಹವೆಯನ್ನು ಹದವಾಗಿ ಮನಸ್ಸಿನ ಮುದುರುಗಳಲ್ಲಿ ಹರಡುವ ಬೆಚ್ಚಗಿನ ಪ್ರಯತ್ನ ಅವರ ಈ ಕವನ ಸಂಕಲನದಲ್ಲಿ ಪ್ರಧಾನವಾಗಿ ಗ್ರಾಹ್ಯವಾಗುತ್ತದೆ.

ತುಳಕಿಸಬೇಡಿರಿ ಕಣ್ಣೀರನ್ನು
ನದಿ,ಝರಿಗಳು ಕೊಚ್ಚಿ ಹೋದಾವು
ಕಡಲುಕ್ಕಿ ಬಂದೀತು
ರಾಗದಲೆಗಳ ಹೊತ್ತು

ಮೇಲೆ ಹೇಳಿದ ಅಂಶಕ್ಕೆ ಪೂರಕವಾಗಿ ‘ಜಲಂತ’ ಎಂಬ ಕವಿತೆಯ ಈ ಸಾಲುಗಳು, ಆಕ್ರೋಶ ಅಪ್ಯಾಯತೆಗಳನ್ನು ಶೋಧಿಸಿ ಆಪ್ತತೆಯ ರುಚಿಯನ್ನು ನಮ್ಮೊಳಗಿಳಿಸುವಲ್ಲಿ ಯಶಸ್ವಿಯಾಗುತ್ತವೆ.

ಬಣ್ಣದ ಚಿಟ್ಟೆಗಳನ್ನು ಹೆತ್ತ
ಕಂಬಳಿ ಹುಳುಗಳು ನಾವು
ನಮ್ಮ ನಡಿಗೆ ಬಿರುಸಿಗೆ
ನೆಲವೆಂದೂ ದಣಿಯದು
ಇನ್ನಾದರೂ ಕೇಳಿರಿ
ತಮಟೆಯ ನಿಜದನಿಯ

ಇಲ್ಲಿ ಕವಿಯ ಗುರಿ ಸ್ಪಷ್ಟವಿದೆ. ಅದಕ್ಕೆ ಅವರು ಆರಿಸಿಕೊಂಡಿರುವ ಹಾದಿ ಪ್ರತಿಭಾಜನ್ಯವಾಗಿ ಸಿಕ್ಕಿರಬಹುದಾದ ವಿಭಿನ್ನವಾದ ಹಾದಿ. ಅದು ಉತ್ಕಟ ಭಾವಗರ್ಭದಲ್ಲಿ ಹುಟ್ಟಿರುವ ಸೌಮ್ಯ ಆಕ್ರೋಶ. ಬದುಕಿನ ವೈರುಧ್ಯಗಳಲ್ಲಿ ಇದೂ ಒಂದು. ಹೊಂದಾಣಿಕೆಯಿಂದ ಆರಂಭವಾದ ಹೋರಾಟದ ದಾರಿಗೆ ಸಹಜವಾಗಿ ಅಸಹಜವೆನಿಸುವ ಆಕ್ರೋಶ ಜೊತೆಯಾಗುತ್ತದೆ. ಆದರೆ ಹೋರಾಟದ ಅಂತ್ಯದಲ್ಲಿ ಅರಳುವ ಹೊಂದಾಣಿಕೆಗೆ ವಿಶೇಷವಾದ ಪರಿಪಕ್ವತೆ ಹಾಗೂ ಘನತೆಗಳು ದಕ್ಕುತ್ತವೆ. ಈ ನಿಟ್ಟಿನಲ್ಲಿ ಈ ಕವನ ಸಂಕಲನ ಪ್ರಾಮುಖ್ಯತೆಯನ್ನು ಪಡೆಯಬೇಕಾಗುತ್ತದೆ.

ತಮ್ಮದಲ್ಲದ ತಪ್ಪಿಗೆ ಸಮಾಜದಲ್ಲಿ ಶತಮಾನಗಳ ಕಾಲ ತುಳಿತಕ್ಕೊಳಗಾದ ವರ್ಗಗಳಿಗೆ ಅಂತ:ಶಕ್ತಿಯನ್ನು ತುಂಬಲು ‘ಖಡ್ಗವಾದ ಕಾವ್ಯ’ ಕನ್ನಡ ಸಾಹಿತ್ಯವಲಯದಲ್ಲಿ ಅಪಾರ ವೈಚಾರಿಕತೆಯುಳ್ಳ ದೇವನೂರು, ಸಿದ್ದಲಿಂಗಯ್ಯರಂತಹ ಮೇರು ಚಿಂತಕರನ್ನು ಕಂಡಿತು.

ಅವರ ಚಿಂತನೆಗಳು ಶಾಶ್ವತವಾದದ್ದೇ ಅವರುಗಳು ಪ್ರತಿಪಾದಿಸಿದ ಸೌಮ್ಯ ಪ್ರಖರತೆಯ ಕಾರಣ ಎನ್ನುವುದು ಮುಖ್ಯ. ಸಾಮಾಜಿಕ ಕಂದಾಚಾರ, ಕಟ್ಟುಪಾಡುಗಳ ನಡುವೆ ಹರಿವ ಸೂಕ್ಷ್ಮ ಸಂವೇದನೆ ಅವರುಗಳ ಸಾಹಿತ್ಯಕ್ಕೆ ವಿಶಿಷ್ಟವೆನಿಸುವ ನಿಖರತೆಯನ್ನು ಗಳಿಸಿಕೊಟ್ಟಿತು. ಸಿದ್ದಲಿಂಗಯ್ಯನವರು ಜಾತಿಪದ್ಧತಿಯನ್ನು ನಾವು ವಿರೋಧ ಮಾಡಬೇಕಿರುವುದು ಮೇಲ್ಜಾತಿಯವರ ಮೇಲಿನ ಸಿಟ್ಟಿನಿಂದಲ್ಲ. ಕೆಳಜಾತಿಯವರ ಮೇಲಿನ ಸಹಾನುಭೂತಿಯಿಂದಲೂ ಅಲ್ಲ. ಬದಲಾಗಿ ಒಟ್ಟು ಮಾನವೀಯತೆಯನ್ನು, ಒಟ್ಟು ದೇಶವನ್ನು ರಕ್ಷಣೆ ಮಾಡಬೇಕೆನ್ನುವ ಕಾರಣದಿಂದ ಜಾತಿ ಪದ್ಧತಿಯನ್ನು ನಾವು ವಿರೋಧಿಸಬೇಕು ಎಂದು ಗಾಂಧಿಯವರನ್ನು ಉದಾಹರಿಸಿ ಒಂದು ಕಡೆ ಹೇಳಿದರು.

ಬುದ್ಧನಿರುವ ನಾಡಿನಲ್ಲಿ
ಎಲ್ಲವನ್ನೂ ದೋಚಿಕೊಂಡಿದ್ದಾರೆ
ಜಾತಿಯನ್ನು ಮಾತ್ರ ಇರುವಂತೆಯೇ ಬಿಟ್ಟು
‘ಉಯ್ಯಾಲೆಯಾಡುತ್ತಿರುವ ಕತ್ತಲು’

–ಎನ್ನುವ ಕವನದ ಮೇಲಿನ ಸಾಲುಗಳು ಕವಿಯ ಮನುಕುಲದೆಡೆಗಿನ ಆದಮ್ಯ ಕಾಳಜಿಯ ಇನ್ನೊಂದು ಮಗ್ಗುಲನ್ನು ತೆರೆದಿಡುತ್ತದೆ. ಲೋಹಿಯಾ ‘ಜಾತಿಪದ್ಧತಿ ಎನ್ನುವುದು ಕೆಳಜಾತಿಯನ್ನು ವೃಥಾ ಕೀಳರಿಮೆಯಿಂದ ನಾಶ ಮಾಡುವ ಹಾಗೆ ಮೇಲ್ಜಾತಿಯವರನ್ನು ಅಹಂಕಾರ ನಾಶ ಮಾಡಿದೆ’ ಎಂದಿದ್ದರು. ಸಮಾಜದಲ್ಲಿ ಶ್ರೇಣಿಗಳು ಒತ್ತಡವನ್ನಷ್ಟೇ ಸೃಷ್ಟಿಸುವಾಗ ಬುದ್ಧನ ಜಾತಿರಾಹಿತ್ಯವೊಂದೇ ನಮ್ಮನ್ನು ಕಾಪಾಡಬಲ್ಲದೆಂಬುದಕ್ಕೆ ಈ ಸಾಲುಗಳು ಪ್ರಮುಖ ರೂಪಕವಾಗಿ ಕಾಣುತ್ತದೆ.

ಸುದೀರ್ಘವಾದ ಶವಯಾತ್ರೆಯಲ್ಲಿ
ನನ್ನ ಕಾಲುಗಳೂ ಸಾಗುತಿವೆ
ಯಾರೊಟ್ಟಿಗಿನ ಸಂಘರ್ಷವಿದು
ಬದುಕಿನೊಂದಿಗೋ ಬವಣೆಯೊಂದಿಗೋ
ಒಲವಿನೊಂದಿಗೋ ನಿಲುವಿನೊಂದಿಗೋ

‘ಯಾನ’ ಎಂಬ ಕವಿತೆಯ ಈ ಸಾಲು ವಿವರಣೆಯ ಅಗತ್ಯವೇ ಇಲ್ಲವೆನ್ನುವಷ್ಟು ಅರ್ಥಪೂರ್ಣವಾಗಿದೆ. ಈ ಕವನ ಸಂಕಲನದ ಬಹುಪಾಲು ಕಾವ್ಯಗಳು ಇಂತಹ ಅಸೀಮ ಮೃದುತ್ವವನ್ನು ದಕ್ಕಿಸಿಕೊಂಡಿರುವುದರಿಂದಲೇ ಸಮಾಜವನ್ನು ಎಚ್ಚರಿಸುವ ಅವರ ಪರಿ ಓಲೈಸಿ ರಮಿಸುವ, ಪ್ರೀತಿಯಿಂದ ಒಪ್ಪಿಸುವ ವೈಶಿಷ್ಟ್ಯತೆಯನ್ನು ಪಡೆಯುತ್ತದೆ.

ವಿಪ್ಲವವೆನ್ನುವ ಸಂಕೀರ್ಣ ಜಾಲದ ಅರಿವಿನೆಡೆಗಿನ ಸೂಕ್ಷ್ಮ ತುಡಿತ, ನಿರೂಪಣೆಗೆ ಜೊತೆಯಾಗಿಸಿಕೊಂಡ ಅಪಾರ ಸಂವೇದನೆ, ಸೌಮ್ಯತೆಗಳನ್ನು ಮಂಜುನಾಥ್‍ರವರ ಕವಿತೆಗಳಲ್ಲಿ ಕಾಣಬಹುದು. ಬದುಕು-ಹೋರಾಟಗಳ ನಡುವಿನ ಅವರ ಅನುಸಂಧಾನ ಅವರ ಕಾವ್ಯಕ್ಕೆ ಒಂದು ವಿಶಿಷ್ಟ ಮಾದರಿಯನ್ನು ಕಟ್ಟುವ ಸಾಮಥ್ರ್ಯ ನೀಡಿದೆ.

19ನೇ ಶತಮಾನದ ಕೌತುಕ ಮ್ಯಾಕ್ಸಿಮ್ ಗಾರ್ಕಿ ತನ್ನ ಸಾರ್ವಕಾಲಿಕ ಶ್ರೇಷ್ಠಕೃತಿ ‘ಮದರ್’ನಲ್ಲಿ “We need to illumine ourselves with the light of reason, so that the people in the dark may see us” ಎಂದಿದ್ದ. ಈ ಪರಿಯ ತಾರ್ಕಿಕ ಹೊಳಪಿನ ಸಹಜ ಸಾಮಥ್ರ್ಯವನ್ನು ಹೊಂದಿರುವ ಮಂಜುನಾಥ್ ತಮ್ಮ ಕಾವ್ಯಚಿಂತನೆಯಲ್ಲಿ ಬದುಕಿನ ಎಲ್ಲ ಆಯಾಮಗಳನ್ನು ಒಳಗೊಳ್ಳುವ ಸಮಗ್ರತೆಯೆಡೆಗೆ ತುಡಿದಲ್ಲಿ ಪ್ರಖರವಾಗಿ ಪ್ರಕಾಶಿಸಬಹುದಾದ ಅವಕಾಶವನ್ನು ಸಹಜವಾಗಿ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಅವರ ಕವನ ಸಂಕಲನ ಪ್ರಮುಖವಾಗುತ್ತದೆ.

‍ಲೇಖಕರು admin

3 March, 2017

1 Comment

  1. Mmshaik

    All d best….shubhavaagali sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading