ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೂಗಲ್ ಮ್ಯಾಪಿನಲಿ ನಮ್ಮೂರು ಹುಡುಕುವುದು ಸುಲಭ..

ಮಹಾಭಾರತ 

ವಿ ಎ ಲಕ್ಷ್ಮಣ್ 

ಗೂಗಲ್ ಮ್ಯಾಪಿನಲಿ ನಮ್ಮೂರು
ಹುಡುಕುವುದು ಸುಲಭ
ತಲುಪುವುದು ಕಷ್ಟ.

ಟಚ್ ಸ್ರ್ಕೀನಿನ ಮೇಲೆ
ಎರಡೂ ಬೆರಳಗಲಿಸಿದಷ್ಟೂ ವಿಸ್ತಾರವಾಗುತ್ತದೆ
ಊರಬೀದಿ, ತೆರೆದ ಬಾವಿ
-ಯ
ಬೆತ್ತಲೆ ಮೀನು ಗಂಡೋ ಹೆಣ್ಣೋ
ಈಗಷ್ಟೇ ತಿಳಿಯಬೇಕು
ತೆಂಗು, ಕಂಗು, ತಾಳೆ, ಬಾಳೆ
ನೇಣಿಗೆ ಬಿದ್ದ ಕೈದಿಗಳಂತೆ ಗೋಣು ಚೆಲ್ಲಿವೆ.
ಆದರೆ
ಇವು ಬರಿಗಣ್ಣಿಗೆ ಕಾಣುವುದಿಲ್ಲ
ಇವನ್ನು ನೋಡುವ ವಿಶೇಷ ಕನ್ನಡಕಗಳು
ಆನ್ ಲೈನಿನಲಿ ಲಭ್ಯವಿವೆ.

ಊರ ನೆತ್ತಿಯ ಮೇಲೆ
ಕಪ್ಪನೆಯ ಮಸಿ ಮೋಡದ ತುಂಡೊಂದು
ಇಂಚಿಂಚಾಗಿ ಚಲಿಸುತಿದೆ
ತನ್ನ ನೆರಳಿನೊಂದಿಗೆ
ಕೆಳಗೆ
ವೀರ್ಯಾಣುವಿಗೆ ಈಗ ತಾನೇ
ಕೈ ಕಾಲು ಬಲಿತವರಂತೆ ನಡೆದಾಡುತಿರುವ
ಕೇವಲ ನರಮಾನವರು.

ಕಳೆದ ಮಳೆಗಾಲದಲಿ
ಮುರಿದ ಸೇತುವೆ ಜೋಡಣೆಯ ಕಾಮಗಾರಿ
ಪ್ರಗತಿಯಲ್ಲಿದೆ
ಹೀಗಾಗಿ ನಮ್ಮೂರು ತಲುಪಲು
ಹಾಯಿದೋಣಿ,ಇಲ್ಲವೆ ಕಾಲುದಾರಿಯೇ ಗತಿ.
ಮರಳು ತುಂಬಿದ ಲಾರಿ ಲೋಡುಗಳು
ಇರುವೆಗಳಂತೆ
ಶಿಸ್ತಿನಿಂದ ಸಾಲಾಗಿ ಚಲಿಸುತಿವೆ.
ನದಿಗೆ ಉಬ್ಬರವಿದ್ದಾಗ ದೋಣಿ ನಡೆಸುವುದಿಲ್ಲ
ಆಗ
ನದಿಯ ಆ ಈಚೆಯ ಜನರು
ಕೈ ಸನ್ನೆ, ಬಾಯ್ಸನ್ನೆ, ಮಾಡುತ್ತ
ಮಾತು ಸೋತ ಮಹಾ ಭಾರತದಲ್ಲಿ
ಪ್ರೇತಾತ್ಮಗಳಂತೆ ಇರುಳಿಡೀ ಕೇವಲ
ಸಂಕೇತಗಳ ಬಳಸಿ
ಆಂಡ್ರಾಯ್ಡ ಫೋನಿನಲಿ ಬಿಜಿ.
ಗುಡಿ ಗೋಪುರಗಳಂತೆ ಕಾಣುವ ಮೊಬೈಲ್
ಟವರುಗಳು.
ಸಾದಾ ಅಂಚೆಗಳು ಇಲ್ಲಿ
ಯಾರಿಗೂ ತಲುಪುವುದಿಲ್ಲ.

ಇದನ್ನೆಲ್ಲಾ ಮೀರಿದ ಖುಷಿಯೂ ಒಂದಿದೆ ;
ಗೂಗಲ್ ಮ್ಯಾಪಿನಲಿ
ನಮ್ಮೂರಿಗೂ ಸಿಂಗಾಪೂರಿಗೂ ಕೇವಲ ನಾಲ್ಕೇ
ಇಂಚಿನ ಗ್ಯಾಪು.

 

‍ಲೇಖಕರು avadhi

21 August, 2019

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading