-ನಂದಿನಿ ಹೆದ್ದುರ್ಗ
ಗುಲಾಬಿ ಬಣ್ಣದ ಕಸೂತಿ ಅಂಚಿದ್ದ
ಒಣ ಹಾಕಿದ್ದ ಒಳ ಚಡ್ಡಿಯ ಕುರಿತು
ಕೊಳಕಾಡಿದ
ಈ ಮದ್ಯಾಹ್ನ ಅವನು.
ಚಿತ್ತಾರದ ಲೇಸಿನ
ಒಂದೇ ಒಂದು ದಾರ ಕಿತ್ತಿತ್ತು.
‘ಒಂದು ದಾರ ಕಿತ್ತು ಬಂದಾಕ್ಷಣ
ಬಿಸಾಕುವುದು ಸಲೀಸಲ್ಲ ನಮಗೆ’
ಎಂದವಳು ಅವನನ್ನೇ ನೇರ ನೋಡಿದೆ.
ಮುಂದಿನ ತೊಂದರೆಗೆ
ಅನುವು ಮಾಡಿಕೊಡದವನಂತೆ
ಬಚ್ಚಲು ಹೊಕ್ಕಿ ಕದವಿಕ್ಕಿಕೊಂಡ.
ಅಕಾಲ ಸ್ನಾನದ ಕಾರಣ
ನನಗೆ ಮಾತ್ರ ಗೊತ್ತು.
ಪ್ರಿಯ ಜನರೇ…
ಕಸೂತಿಯೇ ಪೂರ್ತಿ ಕಳಚಿದರೂ
ಎಸೆಯಲಾರದ ಹಠಮಾರಿ ಹೆಂಗಸರು ನಾವು.
ಮಾನ ಮುಚ್ಚುತ್ತದೆ, ಸಾಕು
ಎನಿಸುತ್ತದೆ,
ಅದೂ ಅಲ್ಲದೆ
ಘನವಾದ ಬ್ರ್ಯಾಂಡ್ ನೇಮು…
ಒಳಗೊಂದು ಬಣ್ಣ ,ಹೊರಗಿನ್ನೊಂದು.
ಝಾಡಿಸಿ ಬಡಿದು ಒಗೆದು ಹಿಂಡಿ
ಸುಡುಬಿಸಿಲಿಗೆ ಒಣ ಹಾಕಿದರೆ
ಎಂದಿನಂತೆ ಫಳಫಳ!
ತೊಡುವುದಕ್ಕಡ್ಡಿಯಿಲ್ಲ.
ಪ್ರಿಯ ಜನರೇ
ಮತ್ತೊಮ್ಮೆ ಹೇಳುವೆ ಕೇಳಿ.
ಲೇಸು ಕಿತ್ತಿರುವ
ಚಡ್ಡಿ ಎಸೆಯುವುದೂ
ಸಲೀಸಲ್ಲದ ಹೆಂಗಸರು ನಾವು.
ಮೊದಲ ದಾರ ಕಿತ್ತಾಗಲೇ ಎಸೆದಿದ್ದರೆ…
ಸಾಧ್ಯತೆಗಳೇನಿದ್ದವೋ ಏನೋ…
ಆದುದರಿಂದಲೇ ಪ್ರೇಮ, ಆದುದರಿಂದಲೇ ಕದನ,
ಆದುದರಿಂದಲೇ ಕವನ!!






0 Comments