ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರ್ತಿಸಲಾಗಲಿಲ್ಲ ಪಕ್ಕದಲ್ಲಿದ್ದರೂ..

ಅಕ್ಷತಾ ಕೃಷ್ಣಮೂರ್ತಿ

ಮಳೆ ನಗುವ ನಸುಕು
ಬಹಳಷ್ಟು ಸಿಕ್ಕಿವೆ
ನನಗೂ..
ನಿನಗೂ..
ಒಮ್ಮೆಯೂ ಮಾತಾಡಲಿಲ್ಲ
ಸೃಷ್ಟಿಸಿಕೊಂಡಿಲ್ಲ ಬಿಡು
ಅವಕಾಶ
ಸಿಕ್ಕಾಗಲೇ ಬಳಸು ಜಾರಗೊಡಬೇಡ
ಆಗಾಗ ಅಜ್ಜಿ ಹೇಳುತ್ತಿದ್ದದ್ದು
ಕಿವಿ ಮೇಲಿದೆ ಈಗಲೂ
ಜಾರಿಲ್ಲ ಬಿಡು.

ಮಳೆಗೆ ನಲುಗಿ ಬಿದ್ದ
ಸಂಪಿಗೆಗೆ ಅಪ್ಪಿ ಹಿಡಿದ
ಎಲೆಯ ಖಬರಿಲ್ಲ
ಕಾಲಗಳು ಮೂರು
ಘಳಿಗೆಯಲಿ ದಾಟಿದವು
ಗುರ್ತಿಸಲಾಗಲಿಲ್ಲ
ದಾಟಿ ಹೋದವರಾರೆಂದು.

ಅಂವ ಬೇಡ.ಇವನೊಲ್ಲ
ಇಂವ ಬೇಡ.ಅವನೊಲ್ಲ
ಏನೇನೋ ಹಾಡು
ಮಲ್ಲಿಗೆಯ ಮುಗುಳುನಗೆಯೂ
ಮುರುಟಿದಂತೆ
ಅವಳಿಗೆ ಒಬ್ಬನಿದ್ದನಂತೆ
ಗಾಳಿಯಲಿ ತೇಲಿದ ಮಾತು
ನಿಲ್ಲಲಿಲ್ಲ ಯಾರೊಬ್ಬರೂ
ಮರದ ಕೆಳಗೆ.

ಪುರುಸೊತ್ತಿಲ್ಲ.
ಮರದ ರೆಂಬೆಯಿಂದ ಅನೇಕ
ರಾತ್ರಿಗಳು ಜಾರುತ್ತಿವೆ
ನವೀನ ಒಡಪು
ಸಿಕ್ಕ ಚೂರೆ ಚೂರು ಘಳಿಗೆಯಲಿ
ಪರದೆ ಸರಿಸಿ
ಪಿಸುಗುಡುವ ಬೆಟ್ಟಸಾಲಲಿ
ತೆರೆದೆದೆಯ ತೋಯಿಸುತ್ತ
ಕರಗುತ್ತಿರುವ ಒದ್ದೆ ಹಕ್ಕಿ
ಯ ಗರಿ ಮುಟ್ಟಿದವ
ಋತುಗಳ ಒಡ್ಡೋಲಗದಲಿ
ವಿಹರಿಸುತಿರುವ.

ಅರೇ,
ಹುಟ್ಟಿನಿಂದ ಹಿಂದಿಂದೆ ಸುತ್ತಿ
ಹಗಲಿರುಳಾಟಕೆ ಕರೆದು
ಬೆಳಕು ತೋರಿಸಿದ್ದನ್ನಲ್ಲ
ಅವನೇ
ನೀ
ನೆಂಬ ಕನಸು ಕಣ್ಣೆದುರೇ
ಇದ್ದ ನಸುಕು

ಕ್ಷಮಿಸು,
ಗುರ್ತಿಸಲಾಗಲಿಲ್ಲ ಪಕ್ಕದಲ್ಲಿದ್ದರೂ.

 

 

 

 

‍ಲೇಖಕರು sakshi

28 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading