ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರುನಾಥ ಬೋರಗಿ ಕವಿತೆ – ಉಮರಸಾಬನ ಮನೆಯಲ್ಲಿ…

ಗುರುನಾಥ ಬೋರಗಿ

ನೆನಪಿದೆ ನನಗಿನ್ನೂ –
ಅಂಬೆಗಾಲಿಡುತ್ತಿದ್ದ ನನ್ನನು
ಹೋತುಗಡ್ಡದ
ಉಮರಸಾಬನ ಮನೆಯ
ವಿಶಾಲಪಡಸಾಲೆಯೊಳು
ನನ್ನನಾಡಲು ಬಿಟ್ಟ ನನ್ನವ್ವ
ಕಂಡ ಕಂಡವರ ಗದ್ದೆಗಳಿಗೆ
ಕಳೆ ಕಿತ್ತಲು ಹೋಗುತ್ತಿದ್ದುದು !

ಥರ ಥರ ಬಣ್ಣಗಳ
ಗಾಜು, ಪ್ಲಾಸ್ಟಿಕ್ ಬಳೆಗಳ
ಯಮಭಾರವನು
ಕಬ್ಬಿಣ ಟ್ರಂಕಿನೊಳಗೆ ಹೊತ್ತು
ಊರೂರು ತಿರುಗಿ, ಮಾರಿ
ಸಂಜೆ ಹೊತ್ತಿಗೆ ಮನೆ ಸೇರಿ
ಮಣ್ಣಗೋಡೆಗೆ ತಲೆಯಾನಿಸಿ
ನಿಟ್ಟುಸಿರು ಬಿಟ್ಟದ್ದು !

ಊರ ಎಷ್ಟೋ ಜನ –
ಉಮರಸಾಬನ
ಮೊಮ್ಮಗನಾ ನೀನು ?
ಹೀಗೆ ಕೇಳಿದಂಥ
ಉದಾಹರಣೆಗಳು ಇದ್ದವು !

ಹಸಿವಿನಿಂದ ಅತ್ತಾಗ
ತನ್ನೆದೆಗೊರಗಿಸಿಕೊಂಡು
ಹಾಲೂಡಿಸಿ
ಲಾಲಿ ಹಾಡಿದವಳು
ಅದೇ ಮನೆಯ
ಕರುಣಾಮಯಿ ಹೆಣ್ಣು !

ಅಳುವ ಮಗುವಿನ
ಹಸಿವಿಗೆ ಅನ್ನವಾಗುವ
ಎದೆಯ ಹಾಲಿಗೆ
ಯಾವ ಜಾತಿ?
ಯಾವ ಧರ್ಮ?
ಯಾರಲ್ಲಿಯೂ
ಉತ್ತರವಿರಲಿಲ್ಲ ಆಗ;
ಈಗಲೂ !

‍ಲೇಖಕರು avadhi

23 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading